
ಅವರ ಓದು, ಆಸಕ್ತಿಗಳ ಫಲವಾಗಿ ದಿವಾಕರ್ ಎಲ್ಲರನ್ನೂ ವಿಶ್ವಸಾಹಿತ್ಯದ ಮಾನದಂಡದಿಂದ ಅಳೆಯುವುದರಿಂದ, ಅವರ ಮೆಚ್ಚುಗೆ ಪಡೆಯುವುದು ಸುಲಭದ ಮಾತಲ್ಲ. ಹಾಗೆ ನೋಡಿದರೆ ಬಹುಶಃ ಅವರು ಈವರೆಗೂ ನನ್ನ ಯಾವುದೇ ಬರಹವನ್ನು ಮನಸ್ಪೂರ್ತಿಯಾಗಿ ಮೆಚ್ಚಿದ ನೆನಪು ನನಗಿಲ್ಲ. ಆದರೆ ನನಗೆ ಅದರಿಂದ ಎಂದೂ ದುಃಖವಾಗಿಲ್ಲ, ಬದಲಿಗೆ ಹೊಸದೇನಾದರೂ ಬರೆದಾಗಲೆಲ್ಲ ವಿವೇಕ, ತಿರುಮಲೇಶ, ಜಯಂತನ ಜೊತೆಗೆ ಅವರಿಗೂ ಒಂದು ಪ್ರತಿ ಕಳಿಸಿ, ಈ ಬಾರಿ ಯಾವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಬಹುದು ಎಂಬ ಕುತೂಹಲದಲ್ಲಿ ಕಾಯುತ್ತೇನೆ. ಗಮ್ಮತ್ತಿನ ವಿಷಯವೆಂದರೆ,ದಿವಾಕರ್ ಯಾವುದೇ ಲೇಖಕನ ಸಂಪೂರ್ಣ ಬರಹಗಳನ್ನು ಚಿಂದಿ ಚಿಂದಿ ಮಾಡುತ್ತಲೇ ನಾವುಗಳು ಯಾರೂ ಓದದ ಕವಿತೆಯ ನಾಲ್ಕು ಸಾಲುಗಳನ್ನು ಹರಿಯಬಿಟ್ಟು - "ನೋಡಿ ಆ ಮಾರಾಯನೂ ಒಮ್ಮೊಮ್ಮೆ ಎಷ್ಟು ಅದ್ಭುತವಾಗಿ ಬರೀತಾನೆ" ಅಂತ ಮೆಚ್ಚಿಕೊಂಡಾಡುತ್ತಾರೆ. ಹೀಗೆ ವೈಯಕ್ತಿಕವಾಗಿ ಸಹಿಸಲಾರದ ವ್ಯಕ್ತಿಯ ಬರವಣಿಗೆಗೆ ಕೇವಲ ಸಾಹಿತ್ಯಿಕ ಮಾನದಂಡ ಹಾಕಿ ತಮ್ಮ ಪೂರ್ವಾಗ್ರಹವನ್ನು ಹಿಂದಕ್ಕಟ್ಟಬಲ್ಲ ಶಕ್ತಿ ದಿವಾಕರ್ ಗೆ ಇದೆ. ಹೀಗಾಗಿ ಅವರು ನಾವೆಲ್ಲ ತಳ್ಳಿಹಾಕಿಬಿಡುವ ಪತ್ತೇದಾರಿ ಕೃತಿಗಳಲ್ಲೂ ಮೆರಿಟ್ ಕಾಣಬಲ್ಲ ಸಾಹಿತ್ಯಪ್ರೇಮಿ.
ದಿವಾಕರ್ ಬಗ್ಗೆ ನಮಗೆ ಕೀಳರಿಮೆ ಬರುವುದಕ್ಕೆ ಅವರ ಓದಿನ ವಿಸ್ತಾರವೇ ಕಾರಣ. ನಾನೇ ಅಂಗಡಿಗೆ ಹೋಗಿ, ಪುಸ್ತಕಗಳನ್ನು ಕೊಂಡು, ಓದಿ - ನಾನೇ ಕಂಡುಕೊಂಡ ಲೇಖಕರ ಬರವಣಿಗೆಯ ರೀತಿಯನ್ನು ಉತ್ಸಾಹದಿಂದ ತಿರುಮಲೇಶ, ವಿವೇಕರೊಂದಿಗೆ ಹಂಚಿಕೊಂಡಾಗ, ಅವರು ಆ ಬಗ್ಗೆ ಉತ್ಸಾಹದಿಂದ ಪ್ರತಿಕ್ರಿಯಿಸಿ ತಾವೂ ಆ ಲೇಖಕನನ್ನು ಓದುವ ಆಸಕ್ತಿ ತೋರುವ ಪ್ರಮೇಯವಿರುತ್ತದೆ. ಆದರೆ, ದಿವಾಕರ್ ಜೊತೆ ಈ ಬೇಳೆ ಬೇಯುವುದಿಲ್ಲ. ಅವರು ಆ ಪುಸ್ತಕವನ್ನು ಆಗಲೇ ಓದಿರುತ್ತಾರಲ್ಲದೇ,ಅದೇ ಲೇಖಕನ ಇತರ ಪುಸ್ತಕಗಳ ಪಟ್ಟಿಯನ್ನೂ ಹರಿಯಬಿಟ್ಟು ಅವುಗಳ ಗುಣದೋಷಗಳ ಬಗ್ಗೆ, ಆ ಲೇಖಕನ ಶೈಲಿಯಲ್ಲಿ ಬರೆಯುವ ಇತರ ನಾಲ್ಕು ಲೇಖಕರ ಬಗ್ಗೆ, ಆ ಲೇಖಕನ ದೇಶದ ನಾಲ್ಕಾರು ಲೇಖಕರ ಬಗ್ಗೆ ಮಾತಾಡಿ ನಿಮ್ಮನ್ನು ದಂಗುಬಡಿಸಬಲ್ಲರು. ದಿವಾಕರರ ಹಾಗೆ ವಿಸ್ತಾರವಾದ ಆಸಕ್ತಿಗಳಿದ್ದವರು ವೈಎನ್ಕೆ ಮಾತ್ರ ಅನ್ನಿಸುತ್ತದೆ. ಆದರೆ ದಿವಾಕರರ ಆಸಕ್ತಿ ವೈಎನ್ಕೆ ಅಷ್ಟೇ ವಿಸ್ತಾರವಾಗಿದ್ದರೂ ಅವರ ಆಸಕ್ತಿಯ ಆಳ ಇನ್ನೂ ಗಹನವಾದದ್ದು. ಹೀಗಾಗಿ ದಿವಾಕರರ ಜೊತೆ ಅರ್ಧಘಂಟೆ ಮಾತಾಡಿದರೆ ಒಂದೈದಾರು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಆದರೆ ದಿವಾಕರ್ ಮಾತಾಡಲು ಒಪ್ಪಬೇಕಷ್ಟೇ.ಬಹಳಷ್ಟುಬಾರಿ ಅವರು ಮೂಡಿನಲ್ಲಿಲ್ಲದಿದ್ದರೆ ಮೌನವಾಗಿಬಿಟ್ಟಾರು, ಅಥವಾ ಸಿಟ್ಟಾದರೂ ಆಗಿಬಿಟ್ಟಾರು. ಸಾಮಾನ್ಯವಾಗಿ ನಾನು ಭೇಟಿಯಾದಾಗಲೆಲ್ಲಾ ತುಂಬ ಪ್ರೀತಿಯಿಂದ ವಾತ್ಸಲ್ಯದಿಂದ ಮಾತನಾಡಿಸುತ್ತಾರಾದ್ದರಿಂದ ನಾನು ಅವರ ಗೆಳೆತನದಿಂದ ಬಹಳವೇ ಗಳಿಸಿದ್ದೇನೆ. ನನ್ನ ಸಾಹಿತ್ಯಾಸಕ್ತಿಗಳನ್ನು ರೂಪಿಸುವುದರಲ್ಲಿ ದಿವಾಕರರದು ದೊಡ್ಡಪಾತ್ರವಿದೆ. ಮೊನ್ನೆ ಬೆಂಗಳೂರಿನಲ್ಲಿ ಭೇಟಿಯಾದಾಗ ದಿವಾಕರ್ ತಮ್ಮ ಪುಸ್ತಕ "ನಾಪತ್ತೆಯಾದ ಗ್ರಾಮಾಫೋನು ಮತ್ತು ಇತರ ಪ್ರಬಂಧಗಳು" ಪುಸ್ತಕವನ್ನು (ಅಕ್ಷರ ಪ್ರಕಾಶನ, ಹೆಗ್ಗೋಡು) ನನಗೆ ಕೊಟ್ಟಾಗ ನಾನು ಸಂತೋಷದಿಂದ ಸ್ವೀಕರಿಸಿದೆನಾದರೂ, ಈ ಪುಸ್ತಕ ಎಷ್ಟು ಜಟಿಲವಾಗಿರಬಹುದೋ ಎಂದು ಸ್ವಲ್ಪ ಹಿಂಜರಿದದ್ದೂ ಹೌದು. ವಿಶ್ವಸಾಹಿತ್ಯವನ್ನ ಅರಗಿಸಿಕೊಂಡಿರುವ ದಿವಾಕರ್ ನಮ್ಮ ಮೇಲೆ ಹೇರುವ ಮಾನದಂಡಗಳಂತೆ ತಮ್ಮ ಮೇಲೂ ಅವರು ಮಹತ್ವಾಕಾಂಕ್ಷೆಯ ಬರವಣಿಗೆಯ ಹೊರೆಯನ್ನು ಹೊತ್ತು ನಿಂತುಬಿಡುತ್ತಾರೆ.ಹೀಗಾಗಿ ಅವರ ಸ್ವಂತ ಬರವಣಿಗೆಗೆ ಒಮ್ಮೊಮ್ಮೆ ಹೊಸ ಪ್ರಯೋಗದ ಹೊರೆ ತುಸು ಹೆಚ್ಚೇ ಏನೋ ಅನ್ನಿಸುವುದುಂಟು. ಈ ಹಿನ್ನೆಲೆಯಲ್ಲಿ ನಾನು ಅವರ ಪುಸ್ತಕವನ್ನು ಓದ ಹತ್ತಿದೆ.
ಅಹಮದಾಬಾದಿನಲ್ಲಿ ಪತ್ರಿಕೆಗಳಿಂದ ದೂರವಿರುವುದರಿಂದ ನಾನು ಭಾನುವಾರದ ಪುರವಣಿಗಳಲ್ಲಿ ಬಂದ ಈ ಲೇಖನಗಳನ್ನು ಓದಿಯೇ ಇರಲಿಲ್ಲ. ಈಗೀಗ ಜಯಂತನ ಕಥೆಗಳು, ದಿವಾಕರರ ಬರವಣಿಗೆಯನ್ನು ಇಡಿಯಾಗಿ ಓದಿದಾಗ ನನಗೆ ಆಗುತ್ತಿರುವ ಅನುಭವ ಪುರವಣಿಗಳಲ್ಲಿ, ಪತ್ರಿಕೆಗಳಲ್ಲಿ ಓದಿದ ಅನುಭವಕ್ಕಿಂತ ಭಿನ್ನ ಹಾಗೂ ಉತ್ತಮ ಅನ್ನಿಸುತ್ತಿದೆ. ಭಾನುವಾರದ ಪುರವಣಿ ಚಹಾದ ಜೋಡಿ ಚೂಡಾದಂತೆ. ಅದೇ ಒಂದು ಅನುಭವ, ಆದರೆ ಉತ್ತಮ ಡಾರ್ಜಿಲಿಂಗ್ ಚಹಾವನ್ನು ಚೂಡಾದ ಜೊತೆ ಸವಿಯುವುದಕ್ಕೆ ಸಾಧ್ಯವಿಲ್ಲ. ಅದೊಂದು ಭಿನ್ನ ಅನುಭವ. ಬರಹಗಾರರನ್ನು ಇಡಿಯಾಗಿ ಓದಿದಾಗ ಆಗುವ ಅನುಭವ ನನ್ನ ದೃಷ್ಟಿಯಲ್ಲಿ ಉತ್ತಮವಾದದ್ದು. ಹಾಗೆಂದು ಪತ್ರಿಕೆಗಳಿಗೆ, ಪತ್ರಿಕೆಗಳಲ್ಲಿ ಇಂಥ ಬರವಣಿಗೆಗಳಿಗೆ ಸ್ಥಾನವಿಲ್ಲವೆಂದೇನೂ ಅಲ್ಲ.. ಆದರೆ ಆ ಓದಿನ ಉದ್ದೇಶ ಮತ್ತು ಅದಕ್ಕೆ ದೊರೆಯುವ ಸ್ಪಂದನ ಬೇರೆ ರೀತಿಯಾದದ್ದು.
ನಾಪತ್ತೆಯಾದ ಗಾಮಾಫೋನು ಪುಸ್ತಕ ದಿವಾಕರರ ಇತರ ಬರವಣಿಗೆಗಿಂತ ಭಿನ್ನವಾಗಿದೆ. ಇಲ್ಲಿನ ಪ್ರಬಂಧಗಳು ಎಲ್ಲ ಬಂಧನಗಳನ್ನು ಮುರಿದು ಒಂದು ವಿಸ್ತಾರವಾದ ಕ್ಯಾನ್ವಸ್ ಮೇಲೆ ನಿಲ್ಲುತ್ತದೆ. ದಿವಾಕರರ ಆಸಕ್ತಿಗಳ ವಿಸ್ತಾರ ಈ ಪುಸ್ತಕದಲ್ಲಿ ನಮಗೆ ಸ್ಪಷ್ಟವಾಗಿ ಕಾಣಸಿಗುತ್ತದೆ. ಪುಸ್ತಕ ಓದುತ್ತಿದ್ದಂತೆ ನನಗೆ ತುಂಬಾ ಪ್ರಿಯವಾದ ಲೇಖನಗಳ ಹಾಳೆಗಳನ್ನು ನಾನು ಮತ್ತೆ ಓದುವ ಸಲುವಾಗಿ ಮಡಚಿಡುತ್ತಾ ಹೋದೆ, ಆದರೆ ಹಾಗೆ ಮಾಡಿದ್ದು ತಪ್ಪಾಯಿತೇನೋ--- ಕಾರಣ ಪುಸ್ತಕವಿಡೀ ಪ್ರತಿ ಹಾಳೆಯೂ ಮಡಿಕೆಗೊಳಗಾಗಿ ಕಡೆಗೆ ವಿಚಿತ್ರವಾಗಿ ಕಾಣುತ್ತಿತ್ತು. ಒಂದು ಥರದಲ್ಲಿ ಬಿ.ಜಿ.ಎಲ್.ಸ್ವಾಮಿಯವರ "ಸಾಕ್ಷಾತ್ಕಾರದ ಹಾದಿಯಲ್ಲಿ"ಪುಸ್ತಕದಲ್ಲಿನ ಲೇಖನಗಳಿಗಿರುವ ವಿಸ್ತಾರ ಇಲ್ಲಿನ ಪುಟ್ಟ ಪುಟ್ಟ ಲೇಖನಗಳಿಗಿವೆ ಅನ್ನಿಸುತ್ತದೆ.
ಚೆನೈಗೂ ಹಳದಿಗೂ ಇರುವ ಅವಿನಾಭವ ಸಂಬಂಧವನ್ನು ಗ್ರಹಿಸಲು ಅವರು ಉಪಯೋಗಿಸುವ ಪರಿಕರಗಳ ವಿಸ್ತಾರ ಅದ್ಭುತವಾದದ್ದು. ಕಮೂನ ಔಟ್ಸೈಡರ್ ನಿಂದ ಹಿಡಿದು, ವ್ಯಾನ್ ಗಾಫ್ ನ ಸನ್ ಫ್ಲವರ್ ವರೆಗೂ ಹಳದಿಯ ಮಹತ್ವವನ್ನು ಹುಡುಕಿ ಹೋಗುವ ದಿವಾಕರರ ಜೊತೆಯ ಪಯಣವೇ ಅದ್ಭುತವಾದದ್ದು. ಹಳದಿಯ ಬಗ್ಗೆ ಮಾತನಾಡುತ್ತಾ ಯಾಕೆ ದಿವಾಕರ್ ಕಾಮರೂಪಿಯವರ ಹಳದಿ ಮೀನುವಿನ ಬಗ್ಗೆ ಚಕಾರವೆತ್ತಲಿಲ್ಲ ಎಂಬುದು ಕುತೂಹಲದ ವಿಷಯ. ಹಳದಿ ತಮಿಳುನಾಡಿನ ಬಣ್ಣ ನಿಜ, ಆದರೆ ಎನ್.ಟಿ.ಆರ್ ತೆಲುಗು ದೇಶಂ ಪಕ್ಷವನ್ನ ಪ್ರಾರಂಭ ಮಾಡಿದಾಗ, ತಮಗೆ ಕಾಷಾಯವಸ್ತ್ರ ಇಟ್ಟುಕೊಂಡರೂ ಪಾರ್ಟಿಗೆ ಹಳದಿ ಬಣ್ಣವನ್ನು ಯಾಕೆ ಲೇಪಿಸಿದರು? ಅವರು ಬಹಳ ಕಾಲ ಮದರಾಸಿನಲ್ಲಿ ಇದ್ದ ಪರಿಣಾಮವಾಗಿ ಇದು ಆಗಿರಬಹುದೇ? ಚನ್ನೈ ಟ್ಯಾಕ್ಸಿಗಳು ಕಪ್ಪುತಳ ಹಳದಿ ಟಾಪಿನವಾಗಿದ್ದವು - ಪೂರ್ಣ ಹಳದಿಯ ಅಗ್ಗಳಿಕೆ ಇದ್ದದ್ದು ಕಲಕತ್ತಾದ ಟ್ಯಾಕ್ಸಿಗಳಿಗೆ ಮಾತ್ರ. ಆದರೆ,ಈಗೀಗ ಹೊಸದಾಗಿ ಬಂದಿರುವ ಕಾಲ್ ಟ್ಯಾಕ್ಸಿಗಳಿಗೆ ಮತ್ತೆ ಹಳದಿಯ ಲೇಪ.... ಚೆನೈನ ಈ ರೀತಿಯ ನಿರಂತರ ಕಾಮಾಲೆ ಕಣ್ಣನ್ನು ದಿವಾಕರ್ ಸರಳವಾಗಿ ಸೆರೆ ಹಿಡಿಯುತ್ತಾರೆ.
ಅಲ್ಲಿಂದ ಮುಂದಕ್ಕೆ ಮದರಾಸೆಂಬ ಮಾಂತ್ರಿಕ ವಾಸ್ತವಕ್ಕೆ ಬಂದು ಅಲ್ಲಿನ ರಸ್ತೆಗಳನ್ನು ಹೆಸರಿಸುವ ಪರಿಯನ್ನು ವಿವರಿಸುತ್ತಾರೆ -ಇದ್ದಕ್ಕಿದ್ದಂತೆ ರಸ್ತೆಗಳಲ್ಲಿರುವ ಜಾತಿ ವಾಚಕಗಳನ್ನೆಲ್ಲಾ ತೆಗೆದು ಹಾಕಬೇಕೆಂದು ಅಲ್ಲಿನ ಸರಕಾರ ನಿರ್ಧರಿಸಿದಾಗ ಆಗಿದ್ದೇನು?ತಂಬುಚೆಟ್ಟಿ ರಸ್ತೆ ತಂಬು ರಸ್ತೆಯಾಯಿತು. ಕೆ.ಸಿ.ರೆಡ್ಡಿ ರಸ್ತೆ, ಬರೇ ಕೆ.ಸಿ. ರಸ್ತೆಯಾಯಿತು. ಮಹಾತ್ಮಾ ಗಾಂಧಿಯವರನ್ನು ಉತ್ತಮರ್ ಗಾಂಧಿ ಮಾಡಿ ತಮಿಳುಮಯ ಮಾಡಿದರೂ ಗಾಂಧಿಯೆಂಬ ಹೆಸರೇ ಜಾತಿವಾಚಕವಲ್ಲವೇ? ಅದನ್ನು ಮುಂದೆ ಬರೇ"ಉತ್ತಮರ್" ರಸ್ತೆಯನ್ನಾಗಿ ನಾಮಕರಣ ಮಾಡಬಹುದೋ? ದಿವಾಕರ್ ಈ ಬಗ್ಗೆ ಏನೂ ಹೇಳಿಲ್ಲ. ಇದನ್ನು ಓದುತ್ತಿದ್ದಾಗ ನನಗೆ ನಮ್ಮ ಶೂದ್ರ ಶ್ರೀನಿವಾಸ ನೆನೆಪಾದ. ಶೂದ್ರ ಒಮ್ಮೆ ಮಾಸ್ತಿಯವರನ್ನು ನೋಡಲು ಹೋದಾಗ "ಸರ್, ನಾನು ಶೂದ್ರ" ಅಂತ ಪರಿಚಯ ಮಾಡಿಕೊಂಡರಂತೆ. ಅದಕ್ಕೆ ಮಾಸ್ತಿ "ನಿನ್ನದು ಯಾವ ಜಾತಿಯಪ್ಪಾ?” ಅಂತ ಕೇಳಿದರಂತೆ. ಅವಾಕ್ಕಾದ ಶೂದ್ರ"ಸರ್, ನಾನು ರೆಡ್ಡಿ" ಅಂದನಂತೆ.. ಅದಕ್ಕೆ ಮಾಸ್ತಿಯವರು "ನೋಡಪ್ಪಾ ನಾವು ಜಾತಿ, ಮತ ಎಲ್ಲಾ ಮರೆಯಬೇಕೂಂತ ಇರೋವಾಗ ಹೀಗೆ ಹೆಸರಿಗೆ ಶೂದ್ರ, ಬ್ರಾಹ್ಮಣ ಅಂತೆಲ್ಲಾ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ, ನಾನು ಇನ್ನು ಮುಂದೆ ನಿನ್ನನ್ನ ಶ್ರೀನಿವಾಸ ರೆಡ್ಡಿ ಅಂತಲೇ ಕರೆಯುತ್ತೇನೆ" ಅಂದರಂತೆ... ಅಕಸ್ಮಾತ್ ಶೂದ್ರನ ಹೆಸರಿನಲ್ಲಿ ಚೆನ್ನೈನ ಜನ ಒಂದು ರಸ್ತೆ ಮಾಡಿದರೆ ಏನು ಹೆಸರಿಟ್ಟಾರು? “ಶ್ರೀನಿವಾಸ ರಸ್ತೆ" ಎಂದೇ? ಅಂದಹಾಗೆ ಶ್ರೀನಿವಾಸ ಮಾಸ್ತಿಯವರ ಕಾವ್ಯನಾಮವಲ್ಲವೇ??
ಮೂರು ಕತೆಗಳು ಎಂಬ ಪ್ರಬಂಧದಲ್ಲಿ ಒಂದೇ ಥೀಮನ್ನು ಹಿಡಿದು ಬರೆದ ಭಿನ್ನ ಕಥೆಗಳ ಬಗ್ಗೆ ದಿವಾಕರ್ ಚರ್ಚಿಸುತ್ತಾರೆ. ಈ ಪ್ರಬಂಧದ ಥೀಮು ಪಾದರಕ್ಷೆಗಳು. ದಿವಾಕರ್ ಜೊತೆಯ ಒಡನಾಟದಲ್ಲಿ ಅವರು ಈ ರೀತಿಯ ಅನೇಕ ಸಾಮಾನ್ಯ ಥೀಮುಗಳನ್ನು ಹಿಡಿದು ಹೋಗಿದ್ದು ನೆನಪಿದೆ. ನಾವುಗಳು ಮಾಯಾದರ್ಪಣ ಎಂಬ ಹೆಸರಿನ ಒಂದು ಸಾಹಿತ್ಯಿಕ ಪತ್ರಿಕೆ ಮಾಡಬೇಕೆಂದು ಹದಿನೈದು ವರ್ಷಗಳ ಹಿಂದೆ ಪ್ಲಾನ್ ಮಾಡಿದ್ದಾಗ ದಿವಾಕರ್ ಮೂಗಿನ ಬಗೆಗಿನ ಮತ್ತೆ ಕಳ್ಳತನದ ಬಗೆಗಿನ ಕಥೆಗಳ ಶ್ರೇಣಿಯಬಗ್ಗೆ ಮಾತಾಡಿದ್ದು ನೆನಪಾಗುತ್ತದ. ಆದರೂ ಪಾದರಕ್ಷೆಗಳ ವಿಷಯಕ್ಕೆ ಬಂದಾಗ ನನ್ನ ಬೇರೊಂದೇ ಅನುಭವವನ್ನು ಹಂಚಿಕೊಳ್ಳಬೇಕು..ನನ್ನ ಮದುವೆಯಾದ ಕೆಲ ದಿನಗಳ ನಂತರ ನಾನು, ನನ್ನ ಹೆಂಡತಿ ಆಗ ದುಬಾಯಿಯಲ್ಲಿದ್ದ ನನ್ನ ಅಕ್ಕನ ಮನೆಗೆ ಹೋಗಿದ್ದೆವು.ಅಲ್ಲಿಂದ ವಾಪಸ್ಸಾಗುವಾಗ ಯಾರೋ ಬೂಟಿನಾಕಾರದ ಪೆನ್ ಸ್ಟಾಂಡನ್ನ ನನಗೆ ಕೊಟ್ಟರು. ಅದಾದ ಕೆಲ ದಿನಗಳ ನಂತರ ನಾನು ರೋಮಿಗೆ ಹೋದಾಗ ಹೆಂಗಸರ ಹೈಹೀಲ್ಡ್ ಚಪ್ಪಲಿಯಾಕಾರದ ಕ್ಲಿಪ್ಪು - ಅದರಲ್ಲಿ ಅಡಕವಾಗಿದ್ದ ಪೆನ್ ಸ್ಟಾಂಡು ನನ್ನನ್ನು ಆಕರ್ಷಿಸಿತು.. ಅದನ್ನು ಕೊಂಡೆ. ನನ್ನ ಈ ಪಾದರಕ್ಷೆಗಳ ಸೆಟ್ಟನ್ನು ನೋಡಿದ ಗೆಳೆಯ ಇಂಗ್ಲೆಂಡಿಗೆ ಹೊಗಿದ್ದಾಗ ಚಪ್ಪಲಿ ನೇತಾಡುತ್ತಿದ್ದ ಒಂದು ಕೀ ಚೈನನ್ನ ತಂದು ಕೊಟ್ಟ, ಮತ್ತೆ ಶಿಷ್ಯೆಯೊಬ್ಬಳು ಬೂಟಿನಾಕಾರದ ಆಶ್ ಟ್ರೇ ತಂದುಕೊಟ್ಟಳು. ಹಾಲೆಂಡಿಗೆ ಹೋದಾಗ ಅಲ್ಲಿಗೇ ಸ್ಪೆಷಲ್ ಆದ ಮರದಲ್ಲಿ ಕೆತ್ತಿದ ಪಾದರಕ್ಷೆಯ ಮಾಡಲ್, ಹಾಗೂ ಡೆಲ್ಫ್ಟ್ ನ ಪಿಂಗಾಣಿ ಮಾಡೆಲ್ ದೊರಯಿತು. ನನ್ನ ಹೆಂಡತಿ ಗೌರಿಗೆ ನಾನು ಪುಟ್ಟ ಬೂಟುಗಳ ಕಿವಿಯೋಲೆ, ಸರದ ಪೆಂಡೆಂಟು ತಂದುಕೊಟ್ಟೆ. ಯಾರೋ ಬೂಟಿದ್ದ ಬಾಟಲ್ ಓಪನರ್ ತಂದುಕೊಟ್ಟರು.. ಹೀಗೆ ನನಗೆ ಅರಿವಿಲ್ಲದಂತೆಯೇ ನನ್ನ ಪಾದರಕ್ಷೆಯ ಸಂಗ್ರಹ ಬೆಳೆಯುತ್ತಾ ಹೋಯಿತು. ಗಮ್ಮತ್ತಿನ ಮಾತೆಂದರೆ, ಒಂದೆರಡು ಪುಟ್ಟ ವಸ್ತುಗಳನ್ನು ಬಿಟ್ಟರೆ ನನ್ನ ಸಂಗ್ರಹವಿಡೀ ಒಂಟಿ ಪಾದವನ್ನಷ್ಟೇ ರಕ್ಷಿಸಬಲ್ಲವು!! ಹೀಗೆ ಪಾದರಕ್ಷೆಗಳನ್ನು ಸಂಗ್ರಹಿಸುವವನ ಬಗ್ಗೆ ಒಂದು ಕಥೆಯನ್ನು ನೇಯಲು ಸಾಧ್ಯವೇ.. ಯೋಚಿಸಿ ನೋಡಿದರೆ ಇಂಥದೊಂದು ಕಥೆಗೆ ದಿವಾಕರ್ ಗಿಂತ ಸಮರ್ಥರು ಯಾರೂ ಕಾಣುವುದಿಲ್ಲ. ಇಂಥದೊಂದು ಪ್ರಯಾಸಕ್ಕೆ ಹೆಸರೇನಿಡಬಹುದು? -- ಮೂರ್ಖತೆಗಳು??
ಮಸಿ ಕಾಣಿಕೆ ಎಂಬ ಪ್ರಬಂಧದಲ್ಲಿ ದಿವಾಕರ್ ನಮ್ಮೆಲ್ಲರ ಬಾಲ್ಯವನ್ನು ವಾಪಸ್ಸು ತಂದು ನಿಲ್ಲಿಸುತ್ತಾರೆ. ಪೆನ್ನಿನಲ್ಲಿ ಬರೆಯುವ ಸಂಭ್ರಮ, ಐದನೆಯ ತರಗತಿಗೆ ಬಂದಾಗ ಪೆನ್ಸಿಲಿನಿಂದ ಬಡ್ತಿ ಪಡೆದ ಸಂಭ್ರಮ ಎಲ್ಲವೂ ತಟ್ಟನೆ ನೆನಪಿಗೆ ಬರುತ್ತದೆ. ಪೆನ್ನಿನಲ್ಲಿ ಬರೆಯುವ ಸಂಭ್ರಮವೇ ಬೇರೆ.. ಚಿತ್ತಿಲ್ಲದೆಯೆ ಬರೆಯುವ ಚಿತ್ತಾಲರು ಅನೇಕ ಮಾಧ್ಯಮಗಳನ್ನು ಪ್ರಯತ್ನಿಸಿದ್ದಾರೆ. ಒಮ್ಮೆ ಪುರುಷೋತ್ತಮ ಕಾದಂಬರಿ ಬರೆದು ಮುಗಿಸಿದ ನಂತರ ಕೆಲವು ದಿನ ಚಿತ್ತಾಲರು ತಮ್ಮ ಬರವಣಿಗೆಯನ್ನು ಒಂದು ನಿರ್ದಿಷ್ಟ ಮಾದರಿಯ ಪೆನ್ಸಿಲಿನಲ್ಲಿ ಮಾಡುತ್ತಿದ್ದರು. ಆದರೆ ಕಡೆಗೂ ಪೆನ್ನಿಗೇ ವಾಪಸ್ಸಾದರು. ಈಚೆಗೆ ದಿವಾಕರರ ಊರಾದ ಚೆನ್ನೈನಲ್ಲಿ ಪಾರ್ಕ್ ಶೆರಾಟನ್ ಹೊಟೇಲಿಗೆ ಒಂದು ಮೀಟಿಂಗಿಗಾಗಿ ಹೋಗಿದ್ದೆ. ಅಲ್ಲಿ ಮಾ ಬ್ಲಾಂ (Mont Blanc) ಅಂಗಡಿ ಕಾಣಿಸಿತು.ಕುತೂಹಲಕ್ಕಾಗಿ ಒಳಹೊಕ್ಕು ಅಲ್ಲಿನ ಬೆಲೆಗಳನ್ನು ನೋಡಿದರೆ - ಅತಿ ಸಸ್ತಾ ಪೆನ್ನಿಗೆ ಹತ್ತು ಸಾವಿರ ರೂಪಾಯಿ!! ಆ ಪೆನ್ನಿನಿಂದ ಸೈನ್ ಹಾಕುವ ಚೆಕ್ಕಿನ ಕಿಮ್ಮತ್ತು ಎಷ್ಟಿರಬಹುದು?? ಮಸಿಯ ವಿಷಯಕ್ಕೆ ಬಂದರೆ ಪಡೋಸನ್ ಚಿತ್ರದಲ್ಲಿ ಸಾಯಿರಾಬಾನು ಪರೀಕ್ಷೆ ಬರೆದು ಮುಗಿಸಿದಾಗ ಚೆಲ್ಲುವ ಮಸಿಕುಡಿಕೆ ನೆನಪಾಗುವುದಿಲ್ಲವೇ? ನಮ್ಮ ಹಂಸಲೇಖಾ ಕೂಡಾ ಸ್ವಾನ್ ಪೆನ್ನಿನ ಮಾಯೆಯಲ್ಲಿ ತಾನೇ ತಮ್ಮ ಹೆಸರನ್ನು ಪಡೆದದ್ದು?
ಪ್ರಸಿದ್ಧಿ ಎಂಬ ವ್ಯಾಧಿಯಲ್ಲಿ ರಾಜೇಶ್ ಖನ್ನಾರನ್ನು ಗುರುತು ಹಿಡಿಯದಿದ್ದಾಗ ಅವರಿಗಾದ ಮುಜುಗರದ ಬಗ್ಗೆ ದಿವಾಕರ್ ಬರೆಯುತ್ತಾರೆ. ಹೌದು, ಖ್ಯಾತರಿಗೆ ತಮ್ಮನ್ನು ಜನ ಗುರುತಿಸಿದರೂ, ಗುರುತಿಸದಿದ್ದರೂ ಕಷ್ಟವೇ. ನನ್ನ ಗೆಳೆಯನೊಬ್ಬ ಲಾಸ್ ಏಂಜಲಿಸ್ ನಲ್ಲಿ ವಿಮಾನ ಹತ್ತಿ ಪಕ್ಕದಲ್ಲಿದ್ದ ಸಹಯಾತ್ರಿಯನ್ನು ನೋಡಿ "ನಾವು ಮೊದಲೇ ಭೇಟಿಯಾಗಿದ್ದೇವೆ ಅನ್ನಿಸುತ್ತದೆ, ನೀವು ಜಯನಗರದಲ್ಲಿ ಇರುತ್ತೀರಾ?” ಅಂತ ಕೇಳಿದನಂತೆ.. ಆತ ಹೆಚ್ಚು ಮಾತಾಡುವ ಆಸಕ್ತಿ ತೋರದೇ "ಇಲ್ಲ"... ಎಂದನಂತೆ. ಆದರೆ ಗೆಳೆಯ ಬಿಡದೆಯೇ "ನೀವು ಬೆಂಗಳೂರಿನವರಂತೂ ಆಗಿರಲೇಬೇಕು..” ಅಂದನಂತೆ, ಹೀಗೇ ಮಾತು ಮುಂದುವರೆಯುತ್ತಿರಲು ಆಚೆಬದಿಯ ಸೀಟಿನವನು ಗೆಳೆಯನನ್ನು ಕರೆದು.. “ಅದು ಚಿತ್ರನಟ ದೇವ್ ಆನಂದ್. ಸುಮ್ಮನೆ ಅವರಿಗೆ ತೊಂದರೆ ಕೊಡಬೇಡಿ"ಅಂದರಂತೆ. ಆದರೆ ಖ್ಯಾತರನ್ನು ಗುರುತಿಸಿದರೆ ಏನಾಗಬಹುದು.. ನನಗೆ ಇಂಥಹ ಒಂದು ಗಮ್ಮಿತ್ತಿನ ಅನುಭವವಾಯಿತು.ಏರೊಪ್ಲೇನಿನಲ್ಲಿ ನನ್ನ ಬದಿಯ ಸೀಟಿನಲ್ಲಿ ಚಿತ್ರನಟ ನಿರ್ದೇಶಕ ಅಮೊಲ್ ಪಾಲೇಕರ್... ಸರಿ, ಮಾತುಕತೆ ಪ್ರಾರಂಭಿಸಿದೆ -ಕಾಮೆಡಿ ಚಿತ್ರಗಳನ್ನು ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಯಿಂದ ಹಿಡಿದು ಪಹೇಲಿಯ ಆಸ್ಕರ್ ಯಾನದಬಗ್ಗೆ ಎರಡೇ ನಿಮಿಷದಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೇಳಿದೆ ಅನ್ನಿಸುತ್ತದೆ. ಆತ ನನ್ನ ಕಡೆ ನೋಡಿ "ನಿಮಗೆ ಅಭ್ಯಂತರವಿಲ್ಲದಿದ್ದರೆ ನಾನು ಆ ಬದಿಯ ಸೀಟಿನಲ್ಲಿ ಕೂರುತ್ತೇನೆ, ನಿದ್ದೆ ಬರುತ್ತಾ ಇದೆ" ಅಂತ ಹೇಳಿ ಕಣ್ಣು ಮುಚ್ಚಿದ ಆತ ಮುಂಬಯಿಯಲ್ಲಿ ಫ್ಲೈಟ್ ಲ್ಯಾಂಡಾದಾಗಲೇ ಕಣ್ಣು ತೆರೆದದ್ದು.. ಆತನಿಗೆ ನಿಜಕ್ಕೂ ನಿದ್ದೆ ಬಂದಿತ್ತೇ ಅಥವಾ ಮಾತಾಡಲು ಇಷ್ಟವಿರಲಿಲ್ಲವೇ ಎಂಬುದು ನನಗೆ ತಿಳಿಯಲೇ ಇಲ್ಲ!!
ಬಂದೂಕಿನ ಲೋಕದಲ್ಲಿ ದಿವಾಕರ್ ಅಡ್ಡಾಡಿ ಅದರ ಪೂರ್ವಾಪರಗಳನ್ನು, ಸಾಹಿತ್ಯದಲ್ಲಿ ಅದರ ಸ್ಥಾನವನ್ನು ಚರ್ಚಿಸುತ್ತಾರೆ.ಬಂದೂಕು ಹಿಂಸೆಯ ಪ್ರತೀಕವಲ್ಲದೇ ಸಂಸ್ಕಾರದ ಗೌರವದ ಪ್ರತೀಕವೂ ಆಗಿರುವ ವಿಪರ್ಯಾಸವನ್ನು ದಿವಾಕರ್ ಆತ್ಮೀಯವಾಗಿ ಚಿತ್ರಿಸುತ್ತಾರೆ. ಬಂದೂಕೆಂದಾಗ ಪುಸ್ತಕದಲ್ಲಿ ಇನ್ನೆಲ್ಲೋ ಚರ್ಚಿಸಿರುವ ಅ.ರಾ.ಸೇ ನೆನಪಿಗೆ ಬರುತ್ತಾರೆ. ಅರೇ.. ಅ.ರಾ.ಸೇ ಗೂ ಬಂದೂಕಿಗೂ ಎಲ್ಲಿಯ ಬಾದರಾಯಣ ಸಂಬಂಧ? ಹಿಂದೊಮ್ಮೆ ಆರ್.ಕೆ.ಲಕ್ಷ್ಮಣ್ ಅವರ ಒಂದು ಬರಹವನ್ನು ಅನುವಾದಿಸುವ ಅವಕಾಶ ಬಂತು. ಆಗ "Trigger Happy” ಎಂಬ ಶಿರೋನಾಮೆಯನ್ನು ಕನ್ನಡಿಸುವುದು ಹೇಗೆಂದು ಅರ್ಥವಾಗದೆ ಚಡಪಡಿಸುತ್ತಿದ್ದಾಗ ಅ.ರಾ.ಸೇ ನನಗೆ ಸುಲಭವಾದ ಪರಿಷ್ಕಾರ ನೀಡಿದ್ದರು.. ಅದರ ಅನುವಾದ "ಕದನ ಕುತೂಹಲ" ಆಯಿತು!ಬಂದೂಕು ಬರೇ ಗೌರವದ ಪ್ರತೀಕವೋ ಅಥವಾ ಅದಕ್ಕೆ ಇನ್ನೇನಾದರೂ ಅರ್ಥವಿದೆಯೇ? ನಮ್ಮ ಕ್ಯಾಂಪಸ್ಸಿನಲ್ಲಿ ಇರುವ ಸ್ಟೇಟ್ ಬ್ಯಾಂಕಿನ ಶಾಖೆಯಲ್ಲಿ ಹೆಗಲಿಗೆ ಬಂದೂಕನ್ನು ಏರಿಸಿ ಒಬ್ಬ ಠೊಣಪ ನಿಂತಿರುತ್ತಾನೆ. ಅವನ ಕೆಲಸ ಹಣ ಪಡೆದು ನೋಟುಗಳನ್ನು ಲೆಕ್ಕ ಹಾಕಬೇಕೆಂದು ಬಯಸುವವರಿಗೆ ಅಲ್ಲಿ ಪ್ರತಿಷ್ಠಾಪಿಸಿರುವ ಕೌಂಟಿಂಗ್ ಮಶೀನನ್ನು ಚಲಾಯಿಸುವುದು. ಉದ್ದಕ್ಕೆ ವರ್ಷಾನುಗಟ್ಟಲೆಯಿಂದ ಹಿಡಿದ ಬಂದೂಕನ್ನು ಪರಿಸ್ಥಿತಿಗನುಸಾರವಾಗಿ ಅಡ್ಡಕ್ಕೆ ಹಿಡಿಯಬೇಕಾಗಿ ಬಂದರೆ ಅವನ ಕೈಲಾಗಲಿಕ್ಕಿಲ್ಲ. (ಆತ ಆ ಬಂದೂಕನ್ನು ಪ್ರಯೋಗಿಸಬೇಕಾದರೆ ಮ್ಯಾನೇಜರರಿಂದ ಲಿಖಿತ ಅನುಮತಿ ಪಡೆಯಬೇಕಂತೆ!!). ಬ್ಯಾಂಕ್ ಗ್ರಾಹಕರೊಬ್ಬರು ಪ್ರೊಫೆಸರ್ ಬಂದೂಕವಾಲಾ... ಆದರೆ ಬಂದೂಕನ್ನು ಹಿಡಿದವನ ಹೆಸರು ಸೋಲಂಕಿ...
ವಾಸನೆ, ಫೋಟೋ, ನೆನಪುಗಳ ಬಗ್ಗೆ ಮಾತನಾಡುತ್ತಾ ದಿವಾಕರ್ ನಮ್ಮನ್ನು ಆಸ್ಪತ್ರೆಯ ಫಿನಾಯಿಲ್, ಜಟಕಾದ ಕುದುರೆಯ ವಾಸನೆಯ ಮೂಲಕವಾಗಿ ನಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತಾರೆ. ಪುಟ್ಟವನಾಗಿದ್ದಾಗ ಮೈಸೂರಿನ ದೊಡ್ಡ ಬಸ್ ಸ್ಟಾಂಡಿನಿಂದ ಚಿಕ್ಕ ಮಾರ್ಕೆಟ್ ಗೆ ನಾಕಾಣೆ ಕೊಟ್ಟು ಮುಂಭಾರ, ಹಿಂಭಾರ ಅನ್ನಿಸಿಕೊಳ್ಳುತ್ತಾ ಷಾಪಸಂದಿನಲ್ಲಿ ಓಡಾಡಿದ ದಿನಗಳು ನೆನಪಾದವು.ಉತ್ತಮ ಬರವಣಿಗೆಯ ದ್ಯೋತಕ ಇದೇ ಇರಬೇಕು.. ಲೇಖಕನ ಅನುಭವದ ಮೂಲಕ ನಾವುಗಳು ನಮ್ಮದೇ ಅನುಭವದಲೋಕಕ್ಕೆ ಪ್ರಯಾಣ ಬೆಳೆಸಿ ಬಿಡುತ್ತೇವೆ. ನೆನಪುಗಳಿಗೆ ಕಣ್ ಕಟ್ಟು ಹಾಕಿಡುವ ನಮ್ಮ ಪ್ರವೃತ್ತಿಯನ್ನು ತಮ್ಮದೇ ಶೈಲಿಯಲ್ಲಿ ಆರ್.ಕೆ.ಲಕ್ಷ್ಮಣ್ ತಮ್ಮ ಕಥೆ "ಚಿನ್ನದ ಕಟ್ಟು"ವಿನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಒಬ್ಬ ಹಿರಿಯರ ಚಿತ್ರವೊಂದನ್ನು ಕಟ್ಟು ಹಾಕಿಸಲು ಅಂಗಡಿಗೆ ತರುತ್ತಾನೆ. ಕಟ್ಟು ಹಾಕುವ ತರಾತುರಿಯಲ್ಲಿ ಚಿತ್ರದ ಮೇಲೆ ಗೋಂದು ಚೆಲ್ಲಿ ಹೋಗುತ್ತದೆ.. ಅಂಗಡಿಯವನು ಅಂಥದೇ ಒಂದು ಹಳೆಯಕಾಲದ ಚಿತ್ರವನ್ನು ಪೆಟ್ಟಿಗೆಯಿಂದ ತೆಗೆದು ಅದಕ್ಕೆ ಕಟ್ಟುಹಾಕಿ ತಯಾರಾಗಿಡುತ್ತಾನೆ. ಗ್ರಾಹಕ ಬಂದಾಗ ಅವನು ಕಟ್ಟು ಸರಿಯಾಗಿಲ್ಲ ಎಂದು ವರಾತ ತೆಗೆಯುತ್ತಾನೆಯೇ ಹೊರತು, ಚಿತ್ರದ ಬಗ್ಗೆ ಚಕಾರವನ್ನ ಎತ್ತುವುದಿಲ್ಲ.
ನೊಬೆಲ್ ಪ್ರಶಸ್ತಿಯ ಬಗ್ಗೆ ದಿವಾಕರ್ ಗಿಂತ ಸಮರ್ಥವಾಗಿ ಬರೆಯಬಲ್ಲವರು ಕನ್ನಡದಲ್ಲಿ ಇಲ್ಲವೇ ಇಲ್ಲವೇನೋ. ಮೂರು ಪುಟಗಳಲ್ಲಿ ಅವರು ಎಷ್ಟೊಂದು ಸಣ್ಣ ಪುಟ್ಟ ವಿಷಯಗಳನ್ನು ಸಂಗ್ರಹಿಸಿಕೊಟ್ಟುಬಿಡುತ್ತಾರೆ.. ನೊಬೆಲ್ ಪ್ರಶಸ್ತಿ ಪಡೆದ ಕಮೂ"ಪ್ರಶಸ್ತಿಯ ಹಣದಿಂದ ಒಂದು ಮನೆ ಕೊಂಡುಕೊಂಡನಂತೆ (ನೊಬೆಲ್ ವಿಜೇತನೆಂದು ಫ್ರೆಂಚ್ ಸರಕಾರ ಅವನಿಗೆ ಬಿಟ್ಟಿಯಾಗಿ ಮನೆ ಕೊಡಲಿಲ್ಲ; ಅದಕ್ಕಾಗಿ ಅವನು ಅರ್ಜಿಯನ್ನೂ ಹಾಕಿಕೊಳ್ಳಲಿಲ್ಲ)”.. ನೊಬೆಲ್ ಪ್ರಶಸ್ತಿಯ ಚರ್ಚೆಯಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರೂ ಹೇಗೆ ಹಾಸು ಹೊಕ್ಕಾಗಿ ಬಂದುಬಿಟ್ಟಿದಾರೆಂಬುದನ್ನು ಗಮನಿಸಿ.
ವಸಾಹತು ಅನುಭವದ ಬಗ್ಗೆ ಬಂದ ಸಾಹಿತ್ಯವನ್ನು ಬರೆಯುತ್ತ ದಿವಾಕರ್ ಹಲವು ಲೇಖಕರ ಬಗ್ಗೆ ಮಾತಾಡುತ್ತಾರೆ. ಉದಾಹರಣೆಗೆ ರಾಜಾರಾಯರ ಕಾಂತಾಪುರ. ಹಾಗೆ ನೋಡಿದರೆ ರಾಜಾರಾಯರ ಕಾಂತಾಪುರ ಇಂಗ್ಲೀಷಿನಲ್ಲಿ ಬರೆಯಲಾದ ಕನ್ನಡ ಕಾದಂಬರಿ.ಮಿಡ್ನೈಟ್ಸ್ ಚಿಲ್ಡ್ರೆನ್ ನಲ್ಲಿ ರಶ್ದಿ ಮಾಡಿದ ಭಾರತೀಯತೆಯನ್ನು ಇಂಗ್ಲೀಷಿನಲ್ಲಿ ಗ್ರಹಿಸಿಡುವ ಭಾಷೆಯ ಪ್ರಯೋಗವನ್ನು ರಾಜಾರಾಯರು ಬಹಳಷ್ಟು ಮುಂಚೆಯೇ ಮಾಡಿದ್ದರೆನ್ನಿಸುತ್ತದೆ. ಆದರೆ ಅಡಿಗರು ರಾಜಾರಾಯರ ಬಗ್ಗೆ ಹೇಳಿದರೆನ್ನಲಾದ"ವಸಾಹತುಶಾಹಿ ಹಾಗೂ ಸ್ವಾತಂತ್ರ ಸಂಘರ್ಷ ಎರಡನ್ನೂ ಹಿಡಿದಿಟ್ಟಿರುವ ಅದ್ಭುತ ಕೃತಿ" ಎಂಬ ಸತ್ಯವನ್ನು ಗ್ರಹಿಸಿದವರು ಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್. ಅವರು ಜವಹರಲಾಲ್ ನೆಹರೂ ಅವರ "Discovery of India” ಚಿತ್ರೀಕರಿಸಿದಾಗ "And then Gandhi came” ಎಂಬ ಅಧ್ಯಾಯವನ್ನು ಅರ್ಥೈಸಿದ್ದು ಕಾಂತಾಪುರವನ್ನು ಚಿತ್ರಿಸುವುದರ ಮೂಲಕ. ದಿವಾಕರ್ ರಾಜಾರಾಯರನ್ನು ಮುಟ್ಟಿ ಮುಂದಕ್ಕೆ ಇತರ ಅನುಭವಗಳನ್ನು ಅರಸಿ ಹೋಗುತ್ತಾರೆ.. ಆದರೆ ಪುಸ್ತಕವನ್ನು ಓದುತ್ತಿದ್ದಂತೆ ನನಗೆ ಇನ್ನೂ ಸ್ವಲ್ಪ ಹೊತ್ತು ರಾಜಾರಾಯರ ಜೊತೆಯಲ್ಲಿಯೇ ಕಳೆಯಬೇಕು ಅನ್ನಿಸಿತು.
ಕಾಕಲೋಕದಲ್ಲಿ ಕಾಗೆಗಳ ಅದ್ಭುತ ಜಗತ್ತನ್ನು ದಿವಾಕರ್ ನಮಗಾಗಿ ತೆರೆದಿಡುತ್ತಾರೆ. ಆರ್.ಕೆ.ಲಕ್ಷ್ಮಣ್ ಕಾಗೆಗಳ ಚಿತ್ರಗಳನ್ನು ಬಿಡಿಸಿರುವ ವಿಷಯವೂ ಇದರಲ್ಲಿ ಬರುತ್ತದೆ. ಕಾಗೆಯ ಬುದ್ಧಿವಂತಿಕೆ ನಮ್ಮ ಕಥಾನಕಗಳಲ್ಲಿ ಎಷ್ಟು ಭರಪೂರ ಇದೆ. ಲಕ್ಷ್ಮಣ್ ಕೂಡಾ ದಿವಾಕರರ ಹಾಗೆ ಕಾಗೆಗಳ ಬಗೆಗೆ ಮೆಚ್ಚುಗೆಯಿಂದ ಬರೆದಿದ್ದಾರೆ. ಈಚೆಗೆ ಚಾಮರಾಜಪೇಟೆಯ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕುಂಟ ಕಾಗೆಯನ್ನು ನಾನು ಕಂಡೆ. ಒಂದೇ ಕಾಲಿನಲ್ಲಿ ಅದು ತನ್ನ ಜೀವನವನ್ನು ನಿಭಾಯಿಸುತ್ತಿತ್ತು. ಕಾಲು ಒಂದೇ ಆದರೆ ನಡೆದಾಡಲಷ್ಟೇ ಅಲ್ಲ, ಹಾರಾಡಲೂ ತೊಂದರೆಯಾಗುವುದೆಂದು ನನಗೆ ತಿಳಿದದ್ದು ಆವಾಗಲೇ. ಹಾರಾಡುವುದಕ್ಕೆ ಬೇಕಾದ ಪ್ರಾರಂಭಿಕ ಓಟದ ಮೊಮೆಂಟಂಗೆ ಒಂಟಿ ಕಾಲು ಅಡ್ಡಾಗುತ್ತಿತ್ತು. ಆದರೂ ಕಾಗೆಕಂಗಳಲ್ಲಿದ್ದ ಹೊಳಪು ಮತ್ತು ತುಂಟತನ ಹಾಗೆಯೇ ಇತ್ತು. ಹಿಂದೆ ಸ್ಪ್ರೈಟ್ ಪೇಯದ ಜಾಹೀರಾತಿನಲ್ಲಿ ತೋರಿಸಿದ್ದ ಶೌಕೀನ್ ಕಾಗೆಯ ನೆನಪು ಬಂದಾಗ ನಮ್ಮ ಊಹಾಲೋಕಕ್ಕೂ ಕಾಗೆಗಳು ಸಪ್ಲೈ ಮಾಡಿರುವ ಐಡಿಯಾಗಳ ಬಗ್ಗೆ ಒಂದು ಕ್ಷಣ ಯೋಚಿಸುವಂತಾಯಿತು.
ಮೌನದ ಬಗ್ಗೆ ದಿವಾಕರ್ ಬರೆಯುವಾಗ ನನ್ನ ಮನಸ್ಸಿನಲ್ಲಿ ಅವರು ಹೆನ್ರಿಶ್ ಬ್ಯಾಲ್ ಬಗ್ಗೆ ಬರೆಯಬಹುದೆಂದು ನಾನು ಆಶಿಸಿದ್ದೆ.ಇದಕ್ಕೆ ಕಾರಣ ಬ್ಯಾಲ್ ಕಥೆಯನ್ನು ನನ್ನ ಗಮನಕ್ಕೆ ತಂದವರೇ ದಿವಾಕರ್. ಆದರೂ ಮೌನದ ಅನೇಕ ಪದರ ಪದರಗಳನ್ನು ಚರ್ಚಿಸುತ್ತಾ ಹೋಗುವ ದಿವಾಕರ್ ಬ್ಯಾಲ್ ನನ್ನು ಮರೆತದ್ದು ನನಗೆ ಆಶ್ಚರ್ಯ ಉಂಟುಮಾಡಿದೆ. Murke's collected silencesಎಂಬ ಕಥೆಯ ಕಥಾನಾಯಕ ರೇಡಿಯೋ ಸ್ಟೇಷನ್ನಿನಲ್ಲಿ ಕೆಲಸಮಾಡುವವನು. ರೇಡಿಯೋಗಾಗಿ ಸಂದರ್ಶನಗಳನ್ನು ಮಾಡುವಾಗ ಇರುವ "pause”ಗಳನ್ನು ಸಂದರ್ಶನದ ಅವಧಿಗನುಗುಣವಾಗಿ ಕತ್ತರಿಸುತ್ತಿದ್ದುದು ವಾಡಿಕೆಯಂತೆ. ಕಥಾನಾಯಕ ಹೀಗೆ ಕತ್ತರಿಸಿದ ಟೇಪಿನ ತುಕಡಾಗಳನ್ನೆಲ್ಲ ತೇಪೆ ಹಾಕಿ ತನ್ನ ಟೇಪ್ ಪ್ಲೇಯರಿನಲ್ಲಿ ಕೇಳುತ್ತಾನೆ. ಅದೇ ಬಹುಶಃ ಮೌನದ ಸದ್ದಿರಬಹುದು! ನಾನು ಇದನ್ನು ತಾಜಾ ಮಾಡಿಕೊಳ್ಳಲು ಆ ಕಥೆಯಿದ್ದ ಐರೊಪ್ಯ ಕಥೆಯ ಸಂಕಲನವನ್ನು ತೆರೆದು ಮತ್ತೆ ಓದಿದೆ. ಆ ಪುಸ್ತಕ ನಾನು ಕೊಂಡದ್ದಲ್ಲ... ನನ್ನ ಮದುವೆಯ ಸಂದರ್ಭದಲ್ಲಿ ಎಚ್.ಎಸ್.ಆರ್ ಮತ್ತು ಶ್ರೀನಿವಾಸ ರಾಜು ನನಗೆ ಕೊಟ್ಟ ಪುಸ್ತಕವದು!!
ಭಾಷಾವಿನಾಶದ ಬಗೆಗಿನ ಮತ್ತೊಂದು ಲೇಖನ ನನಗೆ ತುಂಬಾ ಹಿಡಿಸಿತು. ಅನುವಾದ, ಭಾಷೆಯ ಉಪಯೋಗ, ಅದರ ಬದುಕು ಸಾವುಗಳ ಬಗೆಗೆ ಚರ್ಚಿಸುವ ಈ ಲೇಖನ Bangalore – Bengaluru ಆಗುತ್ತಿರುವ ಸಂದರ್ಭದಲ್ಲಿ ಬಹಳ ಮುಖ್ಯವಾದದ್ದು. ಈ ಬಗ್ಗೆ ಚರ್ಚಿಸಲು ನನಗೆ ಬಹಳವಿದೆ, ಆದರೆ ಅದಕ್ಕೆ ಮತ್ತೊಂದು ಬ್ಲಾಗೇ ವಾಸಿ ಎನ್ನಿಸುತ್ತದೆ.
ಹೌದು, ಇಷ್ಟೂ ಹೊತ್ತು ನಾನು ಬರೆದದ್ದು ದಿವಾಕರರ ಪುಸ್ತಕದ ಬಗ್ಗೆ ಅಲ್ಲವೇ ಅಲ್ಲ ಎಂಬ ಅರಿವು ನನಗಿದೆ. ಅವರ ಲೇಖನಗಳ ಶೈಲಿಯಲ್ಲಿಯೇ ನಾನು ಅವರ ಬರವಣಿಗೆಗೆ ಪ್ರತಿಸ್ಪಂದಿಸಿದ್ದೇನೆ. ಪುಸ್ತಕ ಮೆಚ್ಚುಗೆಯಾಯಿತು ಎಂದು ಹೇಳಲು ಇದಕ್ಕಿಂತ ಉತ್ತಮ ವಿಧಾನ ನನಗೆ ತೋರಲಿಲ್ಲ.
No comments:
Post a Comment