Sunday, March 8, 2009

ಮೋಟರ್‍ಸೈಕಲ್ ಡೈರೀಸ್: ಪುಸ್ತಕ ಮತ್ತು ಚಲನಚಿತ್ರ

[ಈ ಲೇಖನವನ್ನು ನಾನು ಈಚೆಗೆ ನನ್ನ ಇಂಗ್ಲೀಷ್ ಬ್ಲಾಗಿಗಾಗಿ ಬರೆದಿದ್ದೆ. ಆದರೆ ರಾಶೊಮನ್ ಬಗ್ಗೆ ಬರೆದ ಬ್ಲಾಗಿಗೆ ಕೆಲ ಮಿತ್ರರು ಸ್ಪಂದಿಸಿದ್ದರಿಂದ ಇದಕ್ಕೂ, ಹಾಗೂ ಮಿಕ್ಕ ನನ್ನ ಕೆಲ ಇಂಗ್ಲೀಷ್ ಬರಹಗಳಿಗೂ ಇಲ್ಲಿ ಸ್ಥಳವಿರಬಹುದೆಂದು ಭಾವಿಸಿ ಇದನ್ನು ಅನುವಾದಿಸಿ ಹಾಕಿದ್ದೇನೆ.]




ಎರ್ನೆಸ್ಟೋ 'ಚೆ' ಗುವೇರಾ ಇಪ್ಪತ್ತನೆಯ ಶತಮಾನದ ಅತ್ಯಂತ ಕುತೂಹಲಕಾರೀ ವ್ಯಕ್ತಿತ್ವಗಳಲ್ಲಿ ಒಬ್ಬನಾಗಿದ್ದಾನೆ. ಅವನ ಬಗ್ಗೆ ಎಷ್ಟೊಂದು ಕಥೆ, ದಂತಕಥೆಗಳಿವೆ ಎಂಬುದು ಲೆಕ್ಕಕ್ಕೆ ಸಿಗಲಾರದು. ಒಂದು ಕಡೆ ಕ್ರಾಂತಿಕಾರಿಗಳಿಗೆ ಸ್ಫೂರ್ತಿನೀಡುವ ಪ್ರತೀಕವಾಗಿದ್ದರೆ, ಮತ್ತೊಂದೆಡೆ ಗಂಡಸರ ಮತ್ತು ಅದಕ್ಕಿಂತ ಮುಖ್ಯವಾಗಿ ಹುಡಿಗಿಯರ ಅರಿವೆಯಮೇಲೆ ಅವನ ಚಿತ್ರಗಳನ್ನು ಹಚ್ಚಿ ವಿಶಿಷ್ಟ ಟೀ-ಶರ್ಟುಗಳ್ಳನ್ನು ತಯಾರಿಸಿ ಅವನನ್ನು ಶೋಕಿಯ ಪ್ರತೀಕವನ್ನಾಗಿಯೂ ನಮ್ಮ ಡಿಸೈನರ್‍ಗಳು ಮಾಡಿಬಿಟ್ಟಿದ್ದಾರೆ. ಅವನು ಸುಂದರ ಪುರುಷನಾಗಿದ್ದ. ಅಲ್ಲದೇ ಅವನು ತೊಡುತ್ತಿದ್ದ ಪುಟ್ಟ ನಕ್ಷತ್ರವಿದ್ದ ಟೋಪಿಯೂ ಅವನನ್ನು ಸಂಕೇತಿಸುವ ಒಂದು ಚಿನ್ಹೆಯಾಗಿ ಸ್ಥಾಯಿಯಾಗಿ ಉಳಿದುಬಿಟ್ಟಿದೆ. 'ಚೆ' ನ ಪರಿಚಯ ನನಗಾಗಿದ್ದು ತಿರುಮಲೇಶರ ನೀಳ್ಗವಿತೆ ಬೊಲೀವಿಯಾದಲ್ಲಿ ಚೆ ಓದಿದಾಗ. [ಪಾಪಿಯೂ ಸಂಕಲನ, ಅಕ್ಷರ ಪ್ರಕಾಶನ]

ಚಿ ನ ಮೊಟರ್‍ಸೈಕಲ್ ಡೈರೀಸ್ ಪುಸ್ತಕವನ್ನು ನಾನು ೧೯೯೯ರಲ್ಲಿಯೇ ಖರೀದಿಸಿದ್ದೆ. ಸಾಮಾನ್ಯವಾಗಿ ಪುಸ್ತಕ ಓದಿದ ಮೇಲೆ ಅದರ ಮೇಲೆ ತಾರೀಖು ಹಾಕುವ ನಾನು ಯಾಕೋ ಈ ಪುಸ್ತಕದ ಮೇಲೆ ಕೊಂಡಾಗಲೇ ಹೆಸರು, ತಾರೀಖನ್ನು ಬರೆದಿದ್ದನಾದರೂ, ಅದನ್ನು ಓದಿಯೇ ಇರಲಿಲ್ಲ. ಆದರೆ ಕೆಲವು ತಿಂಗಳುಗಳ ಹಿಂದೆ ಈ ಬಗ್ಗೆ ಒಂದು ಚಲನ ಚಿತ್ರ ಬಂದಿದೆ ಎಂದು ತಿಳಿದಾಗ ಈ ಪುಸ್ತಕವನ್ನು ಮೊದಲಬಾರಿಗೆ ಓದಿದೆ. ಇತ್ತೀಚೆಗೆ ಚೆ ನ ಮತ್ತೆರಡು ಪುಸ್ತಕ - ಆಫ್ರಿಕನ್ ಡ್ರೀಮ್ಸ್ ಮತ್ತು ಬ್ಯಾಕ್ ಆನ್ ದ ರೋಡ್ ಕೊಂಡಾಗ ಇದನ್ನ ಮತ್ತೊಮ್ಮೆ ಗಂಭೀರವಾಗಿ ಓದಿದೆ. ಇದನ್ನ ಚಲನ ಚಿತ್ರವಾಗಿ ಹೇಗೆ ಮಾಡಿದ್ದಾರೊ ಅನ್ನುವಬಗ್ಗೆ ನನಗೆ ಕುತೂಹಲವಿತ್ತು. ಕಥೆ ಕಾದಂಬರಿಗಳನ್ನು ಚಿತ್ರಮಾಡುವುದನ್ನ ನಾವು ನೋಡಿದ್ದೇವಾದ್ದರಿಂದ ಆ ರೂಪಾಂತರ ಅಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲ. ಆದರೆ ಸ್ವಲ್ಪ ಭಾಗ ದಿನಚರಿಯ ರೀತಿಯಲ್ಲಿ, ಸ್ವಲ್ಪಭಾಗ ಪತ್ರಗಳ ರೂಪದಲ್ಲಿ ಬರೆದಿದ್ದ ಈ ಪುಸ್ತಕವನ್ನು ಹೇಗೆ ಚಲನಚಿತ್ರವನ್ನಾಗಿಸಿರಬಹುದು? ಹಾಗೂ ಈ ಯಾತ್ರೆಯನ್ನು ಕೈಗೊಂಡಾಗಿನ ಕಾಲಘಟ್ಟವನ್ನು ಪುನರ್ನಿಮಿಸುವುದು ಬೇರೆಯ ಅನುಭವವೇ ಆಗಿದ್ದಿರಬಹುದು. ಹೀಗಾಗಿ ಈ ಪುಸ್ತಕದ ಬಗ್ಗೆ ಬರೆಯುವ ಮೊದಲು ಆ ಚಿತ್ರವನ್ನೂ ನೋಡಬೇಕೆಂದು ನಿರ್ಧರಿಸಿದ್ದೆ. ಅದೃಷ್ಟವಶಾತ್ ಈಚೆಗೆ ನನಗೆ ಈ ಚಿತ್ರದ ಡಿವಿಡಿ ಸಿಕ್ಕಿತು.

ನನ್ನಬಳಿಯಿರುವ ಪುಸ್ತಕದ ಮುಖಪುಟದಲ್ಲಿ "Easy rider meets Das Kapital" [ದಾಸ್ ಕ್ಯಾಪಿಟಲ್ ಕಂಡುಕೊಂಡಅಬ್ಬೇಪಾರಿ[?] ಚಾಲಕ] ಎಂಬ ಟೈಂಸ್ ಪತ್ರಿಕೆಯ ವಿಮರ್ಶೆಯ ಸಾಲನ್ನು ಹಾಕಿದ್ದಾರೆ. ಹಿಂಬದಯಿ ರಕ್ಷಾಕವಚದಲ್ಲಿ "ನಿಜ; ಮಾರ್ಕ್ಸ್ ವಾದಿಗಳು ಸುಮ್ಮನೆ ಮಜವಾಗಿರಬೇಕೆಂದಿದ್ದಾರೆ" ಎಂಬ ಗಾರ್ಡಿಯನ್ ಪತ್ರಿಕೆಯ ಸಾಲುಗಳನ್ನೂ ಹಾಕಿದ್ದಾರೆ. ಒಂದು ಉತ್ತಮ ಪುಸ್ತಕವನ್ನು ವಿವರಿಸುವ ರೀತಿಯಂತೂ ಇದಲ್ಲ ಅಂತ ನನಗನ್ನಿಸಿತು. ಚೆನ ವಿಚಾರಧಾರೆ, ನಂಬಿಕೆಗಳ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಇದು ಮಾತ್ರ ಪುಸ್ತಕಕ್ಕೆ ಸ್ಪಂದಿಸುವ ಗಂಭೀರ ಮಾರ್ಗವಲ್ಲ. ಹೀಗೆ ಬರೆಯುವುದರಿಂದ ಪುಸ್ತಕಕ್ಕಿರುವ ಸಾಹಿತ್ಯಿಕ ಗಾಂಭೀರ್ಯತೆಯನ್ನು ತುಚ್ಛವಾಗಿ ಕಂಡಂತಾಗುತ್ತದೆ. ಈ ಪುಸ್ತಕಕ್ಕೂ ಕ್ಯೂಬಾ, ಕಾಂಗೊ, ಬೊಲೀವಿಯಾದ ಕ್ರಾಂತಿಯಲ್ಲಿನ ಚೆ ನ ಪಾತ್ರಕ್ಕೂ ಸಂಬಂಧವೇ ಇಲ್ಲ.. ಹೇಗೇ ಇರಲಿ, ಇದು ಬಹುಶಃ ಈ ಒಂದು ಆವೃತ್ತಿಯನ್ನು ತಂದ ಈ ಒಬ್ಬ ಪ್ರಕಾಶಕನ ಕೆಲಸಮಾತ್ರವಿರಬಹುದು, ಹಾಗೂ ಚೆನ ಬಗೆಗೆ ಇರುವ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿಯೂ ಇರಬಹುದು. ಯಾಕೆಂದರೆ ಇತರ ಆವೃತ್ತಿಗಳಲ್ಲಿ ಇಂತಹ ಮಾತುಗಳನ್ನು ನಾನು ನೋಡಿಲ್ಲ.

ಚೆ ನ ಇಡೀ ಪುಸ್ತಕ 'ಸತ್ಯವನ್ನು ಕಂಡುಕೊಂಡ ಆ ಕ್ಷಣ'ದ ಬಗ್ಗೆ ಅಂತ ನನ್ನ ನಂಬಿಕೆ. ಆ ಯಾತ್ರೆಯಿಂದ ತನ್ನ [ವಿಸ್ತೃತ] ನಾಡನ್ನೂ, ಆ ನಾಡಿನ ಚರಿತ್ರೆ, ಅರ್ಥವ್ಯವಸ್ಥೆಯನ್ನೂ ಅವನು ಕಂಡುಕೊಂಡನಲ್ಲದೇ, ಅದು ತನ್ನ ಮುಂದಿನ ಜೀವನದ ರೂಪುಗೊಂಡರೀತಿಗೆ ಸ್ಫೂರ್ತಿದಾಯಕವಾಗಿಯೂ ಇತ್ತು ಅನ್ನಿಸುತ್ತದೆ. ಖಂಡಿತವಾಗಿಯೂ ಈ ಯಾತ್ರೆ ವಿಚಾರಧಾರೆಗೆ ಸಂಬಂಧಪಟ್ಟಿದ್ದೂ ಅಲ್ಲ, ಮಜವಾಗಿ-ಖುಷಿಗಾಗಿ ಕೈಗೊಂಡಂತೆಯೂ ಅನ್ನಿಸುವುದಿಲ್ಲ. ಹೌದು, ಯಾತ್ರೆಯಲ್ಲಿ ಚೆ ತನ್ನ ಗೆಳೆಯ ಆಲ್ಬರ್ಟೊ ಗ್ರನಾಡೋನ ಜೊತೆ ಕೆಲವು ಗಮ್ಮತ್ತಿನ, ತಮಾಷೆಯ ಕ್ಷಣಗಳನ್ನು ಕಳೆಯುತ್ತಾನೆ. ಆದರೆ ಅವು ಸಾಂದರ್ಭಿಕ ಮಾತ್ರ. ಪುಸ್ತಕ ಆಯಾ ಕ್ಷಣದ ಸತ್ಯಗಳನ್ನು ದಾಖಲಿಸುತ್ತಾ ಹೋಗುತ್ತದೆ. ಹಿಂದಿರುಗಿ ನೋಡಿದಾಗ ಈ ಯಾತ್ರೆ ಚೆ ನ ಜೀವನದ ಮೇಲೆ ಬೀರಿರಬಹುದಾದ ಗಾಢ ಪರಿಣಾಮ, ಅವನ ರಾಜಕೀಯ ನಂಬಿಕೆಗಳು ರೂಪುಗೊಳ್ಳುವುದರತ್ತ ಪೂರಕವಾಗಿರುವ ಅನೇಕ ಕುರುಹುಗಳನ್ನು ನಾವು ನೋಡಬಹುದು. ಆಗಾಗ ಮೊಟಾರ್ ಸೈಕಲ್ ಕೆಡುವ, ಕೆಟ್ಟ ರಸ್ತೆಗಳ ಮೇಲೆ ಬೈಕ್ ಓಡಿಸುವ ಅಥವಾ ನೆತ್ತಿಯ ಮೇಲೆ ಸೂರಿಲ್ಲದೇ ಮಲಗುವ - ಟೆಂಟ್ ಹಾಕುವ ರೋಮಾಂಚನದ ಕ್ಷಣಗಳು ಈ ಪುಸ್ತಕದಲ್ಲಿ ಇವೆಯಾದರೂ, ಅವರು ಭೇಟಿಯಾಗುವ ಜನ, ಭೇಟಿಯಾದಾಗಿನ ಪರಿಸ್ಥಿತಿ ಮತ್ತು ಆ ಜನರ ಜೀವನಶೈಲಿ ಅವರುಗಳು ಇವರಿಗೆ ಸ್ಪಂದಿಸುವ ರೀತಿ - ಈ ವಿಷಯದ ಬಗ್ಗೆಯೇ ಮೂಲತಃ ಆ ಯಾತ್ರೆಯ ಪ್ರಾಮುಖ್ಯತೆಯಿದೆ ಎನ್ನುವುದು ನನ್ನ ನಂಬಿಕೆ.

ಪುಸ್ತಕದ ಮೊದಲ ಪುಟಗಳಲ್ಲಿ ಚೆ ಹೇಳುವ ಕೆಲ ಮಾತುಗಳು ಅವನ ಮನಸ್ಸಿನಲ್ಲಿನ ವಿಚಾರಕ್ಕೆ ಕನ್ನಡಿ ಹಿಡಿದಂರಿರಬಹುದು:

ಅಬ್ಬೇಪಾರಿ[?] ಚಾಲಕ] ಎಂಬ ಟೈಂಸ್ ಪತ್ರಿಕೆಯ ವಿಮರ್ಶೆಯ ಸಾಲನ್ನು ಹಾಕಿದ್ದಾರೆ. ಹಿಂಬದಯಿ ರಕ್ಷಾಕವಚದಲ್ಲಿ "ನಿಜ; ಮಾರ್ಕ್ಸ್ ವಾದಿಗಳು ಸುಮ್ಮನೆ ಮಜವಾಗಿರಬೇಕೆಂದಿದ್ದಾರೆ" ಎಂಬ ಗಾರ್ಡಿಯನ್ ಪತ್ರಿಕೆಯ ಸಾಲುಗಳನ್ನೂ ಹಾಕಿದ್ದಾರೆ. ಒಂದು ಉತ್ತಮ ಪುಸ್ತಕವನ್ನು ವಿವರಿಸುವ ರೀತಿಯಂತೂ ಇದಲ್ಲ ಅಂತ ನನಗನ್ನಿಸಿತು. ಚೆನ ವಿಚಾರಧಾರೆ, ನಂಬಿಕೆಗಳ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಇದು ಮಾತ್ರ ಪುಸ್ತಕಕ್ಕೆ ಸ್ಪಂದಿಸುವ ಗಂಭೀರ ಮಾರ್ಗವಲ್ಲ. ಹೀಗೆ ಬರೆಯುವುದರಿಂದ ಪುಸ್ತಕಕ್ಕಿರುವ ಸಾಹಿತ್ಯಿಕ ಗಾಂಭೀರ್ಯತೆಯನ್ನು ತುಚ್ಛವಾಗಿ ಕಂಡಂತಾಗುತ್ತದೆ. ಈ ಪುಸ್ತಕಕ್ಕೂ ಕ್ಯೂಬಾ, ಕಾಂಗೊ, ಬೊಲೀವಿಯಾದ ಕ್ರಾಂತಿಯಲ್ಲಿನ ಚೆ ನ ಪಾತ್ರಕ್ಕೂ ಸಂಬಂಧವೇ ಇಲ್ಲ.. ಹೇಗೇ ಇರಲಿ, ಇದು ಬಹುಶಃ ಈ ಒಂದು ಆವೃತ್ತಿಯನ್ನು ತಂದ ಈ ಒಬ್ಬ ಪ್ರಕಾಶಕನ ಕೆಲಸಮಾತ್ರವಿರಬಹುದು, ಹಾಗೂ ಚೆನ ಬಗೆಗೆ ಇರುವ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿಯೂ ಇರಬಹುದು. ಯಾಕೆಂದರೆ ಇತರ ಆವೃತ್ತಿಗಳಲ್ಲಿ ಇಂತಹ ಮಾತುಗಳನ್ನು ನಾನು ನೋಡಿಲ್ಲ.

  • "ಇದು ಧೈರ್ಯದಿಂದ ಕೈಗೊಂಡ ಯಾತ್ರೆಯ ರೋಮಾಂಚಕ ಕಥೆಯಲ್ಲ. ಅಥವಾ ಯಾತ್ರೆಯ ಭಾವನಾರಹಿತ ಸಿನಿಕ ವಿವರಣೆಯೂ ಅಲ್ಲ; ಕನಿಷ್ಠ ಆ ಉದ್ದೇಶದಿಂದ ಬರೆದದ್ದಂತೂ ಅಲ್ಲ. ಪರ್ಯಾಯವಾಗಿ ಓಡಿದ ಒಂದೇ ರೀತಿಯ ಕನಸುಗಳು, ಆಶಯಗಳನ್ನು ಹೊತ್ತ ಎರಡು ಜೀವನಗಳ ಒಂದು ತುಣುಕಷ್ಟೇ. ಒಂಭತ್ತು ತಿಂಗಳುಗಳಲ್ಲಿ ಮನುಷ್ಯನ ಮನಸ್ಸಿನಲ್ಲಿ ಗಾಢ ತಾತ್ವಿಕ ವಿಚಾರಗಳಿಂದ, ಹೊಟ್ಟೆಯ ಜೊತೆಗಿನ ಅತ್ಯದ್ಭುತ ಲಯದಲ್ಲಿ ಒಂದು ಲೋಟ ಸೂಪಿಗಾಗಿ ತಹತಹಿಸುವ ವರೆಗಿನ ಅನೇಕ ವಿಚಾರಗಳು ಬಂದು ಹೋಗುತ್ತವೆ..."
  • "ಛಾಯಾಚಿತ್ರಗಳನ್ನು ಸೆರೆಹಿಡಿಯುವ ತಂತ್ರವನ್ನು ವಿವರಿಸುವ ಒಂದು ಪುಸ್ತಕ ಹುಣ್ಣಿಮೆಯ ರಾತ್ರೆ ಹೊಳುಯುತ್ತಿರುವ ಪೂರ್ಣಚಂದ್ರನ ರಾತ್ರೆಯನ್ನು ಸೆರೆಹಿಡಿದು ಪಕ್ಕದ ಮಾತುಗಳಲ್ಲಿ ಸೂರ್ಯಪ್ರಕಾಶದ ಕತ್ತಲೆಯನ್ನು ಆವಿಶ್ಕಾರಗೊಳಿಸಬಹುದು. ಆದರೆ ಆ ಓದುಗನಿಗೆ ನನ್ನ ಕಣ್ಣಪಾಪೆಯ ಮೇಲೆ ಯಾವ ಸೂಕ್ಷ್ಮ ದ್ರವ್ಯ ಹೊರಳಿದೆ ಎನ್ನುವುದು ತಿಳಿಯುವುದಿಲ್ಲ."


ಪುಸ್ತಕದ ಮೂಲ ಬರವಣಿಗೆ ತಾನು ನೊಡಿದ, ಅನುಭವಿಸಿದ ವಿಚಾರಗಳ ಬಗ್ಗೆಯಾದರೂ, ಪುಸ್ತಕದಲ್ಲಿ ಅಡಗಿದ ವಿಚಾರವೆಂದರೆ ಈ ಅನುಭವಗಳು ಚೆ ನ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತಾ ಹೋದವು ಅನ್ನುವ ಕುತೂಹಲಕಾರಿ ಆಯಾಮ. ಅವನು ಮೊಟರ್‍ಬೈಕಿನಲ್ಲಿ "ಒಂದು ವರ್ಷದ ಯಾತ್ರೆ" ಕೈಗೊಳ್ಳಲು ನಿರ್ಧರಿಸಿದಾಗ ಚೆ ನ ತಂದೆ ಕೇಳುತ್ತಾನೆ: "ನಿನ್ನ ಪ್ರೇಯಸಿಯ ಕಥೆಯೇನು?" ಅದಕ್ಕೆ ಚೆ ನ ಉತ್ತರ ಸ್ಪಷ್ಟ - ಅವಳು ತನ್ನನ್ನು ಪ್ರೀತಿಸುವುದೇ ಆದರೆ ತನಗಾಗಿ ಕಾಯುತ್ತಾಳೆ. ಯಾತ್ರೆಯನ್ನು ಈ ಥರದ ಏಕಾಗ್ರತೆಯಿಂದ ಚೆ ಕೈಗೊಳ್ಳುತ್ತಾನೆ. ಬಹುಶಃ ಆ ಪ್ರೇಯಸಿಯನ್ನು ಅವನು ಮತ್ತೆ ಭೇಟಿಮಾಡಲೇ ಇಲ್ಲವೋ ಏನೋ. ಆ ಯಾತ್ರೆಯಿಡೀ ಹೋಗಹೋಗುತ್ತಿದ್ದಂತೆ ಬೇಕಾದ ಪರಿಕರಗಳನ್ನು ಆಹಾರವನ್ನು ಸಂಪಾದಿಸುವ, ಹೆಚ್ಚಿನಂಶ ಮುಂದಿನ ಊಟಕ್ಕೆ ಹಣವಿಲ್ಲದಿರುವ, ಏಷ್ಟೋಬಾರಿ ಆಸಕ್ತಿಕರ ಸುಳ್ಳುಗಳನ್ನು ಹುಟ್ಟಿಸಿ ಆಹಾರ, ಮಲಗಲು ಒಂದಿಷ್ಟು ಜಾಗ, ಹಾಗೂ ಒಮ್ಮೊಮ್ಮೆ ಮಾತ್ರ ಅದಕ್ಕಿಂತ ಹೆಚ್ಚಿನ ಸುಖವನ್ನು ಸಂಪಾದಿಸುವುದೇ ಆಗಿರುತ್ತದೆ.

ಸಾಮಾನ್ಯವಾಗಿ ಇಂಥ ಮೂಲವನ್ನಿಟ್ಟುಕೊಂಡು ಮಾಡಿದ ಚಲನಚಿತ್ರಗಳ ಬಗ್ಗೆ ನಮಗೆ ಅನುಮಾನಗಳಿರುವುದು ಸಹಜ. ಆದರೆ ಚಲನಚಿತ್ರ ಚೆ ನ ಯಾತ್ರೆಯನ್ನು ಸರಿಯಾಗಿ ಗ್ರಹಿಸಿರುವುದು ಮಾತ್ರವಲ್ಲದೇ ಕೆಲವು ವಿವರಗಳನ್ನು ರಂಜಕವಾಗಿ ಮೂಲಕ್ಕೆ ಧಕ್ಕೆ ಬರದಂತೆ ಇಂಪ್ರೊವೈಸ್ ಮಾಡುತ್ತದೆ. ಪುಸ್ತಕದಲ್ಲೆ ಚೆ ಹೇಳುತ್ತಾನೆ "ನಮ್ಮ ಯಾತ್ರೆ ನಡೆದದ್ದೇ ಹಾಗೆ, ಮೂಲತಃ ನಾವು ಒಂದು ಯೋಜನೆಯನ್ನು ಹಾಕಿಕೊಂಡಿದ್ದರೂ ಅದನ್ನು ಪರಿಷ್ಕರಿಸುತ್ತಾ ಹೋಗುವುದೇ ನಮ್ಮ ಉದ್ದೇಶ ಅಂತ ತೀರ್ಮಾನಿಸಿದ್ದೆವು. ನಮ್ಮ ಮೂಲ ಆಶಯ ಯಾತ್ರೆಯ ಇಂಪ್ರೊವೈಸೇಶನ್.." ಸ್ಪಾನಿಷ್‍ನಲ್ಲಿ [ಇಂಗ್ಲೀಷ್ ಸಬ್ ಟೈಟಲ್‍ನೊಂದಿಗೆ] ತಯಾರಿಸಿರುವ ಈ ಚಿತ್ರ ಯಾತ್ರೆಯ ಮೂಲ ಉದ್ದೇಶಕ್ಕೆ ಬೆಸೆದು ಬೆಳೆದಿದೆ.

ಇಂಪ್ರೊವೈಸೇಷನ್ ಎಂದಾಗ ಊಟ, ತೀರ್ಥ ಬೇಕಾದಾಗ ಅವರು ಅಳವಡಿಸಿಕೊಳ್ಳುವ ಹಾಗೂ ಕೆಲವು ಬಾರಿ ಮರುಕಳಿಸುವ ಒಂದು ತಂತ್ರ ನನಗೆ ಆಸಕ್ತಿಕರವಾಗಿ ಕಂಡಿತು. ಅದು ಈ ಕೆಳಕಂಡಂತಿದೆ:
"ನಮ್ಮಿಬ್ಬರಲ್ಲಿ ಒಬ್ಬರು ತಕ್ಷಣ ಜೋರಾದ ಧ್ವನಿಯಲ್ಲಿ ನಾವು ಆರ್ಜೆಂಟೀನಾದವರೆಂದು ತಿಳಿಯುವಂತೆ 'ಚೆ' ಪದ ಮತ್ತು ನಮ್ಮ ನಾಡಿನ ನುಡಿಗಟ್ಟಿಗೆ ಸೀಮಿತವಾದ ಪದಪ್ರಯೋಗಗಳನ್ನು ಮಾಡಿ ಯಾರದಾದರೂ ಗಮನವನ್ನು ನಮ್ಮತ್ತ ಸೆಳೆಯುವುದು. ಪಾಪ ಆ ಬಡಪಾಯಿ ಬಲಿಪಶು ನಾವು ಎಲ್ಲಿಂದ ಬಂದಿದ್ದೇವೆ ಅನ್ನುವ ಪ್ರಶ್ನೆ ಕೇಳಿದ್ದೇ ತಡ ಅವನೊಂ[ಳೊಂ]ದಿಗೆ ಮಾತುಕತೆಗಿಳಿಯುವುದು.

ನಮ್ಮ ದುಃಖದ ಕಥೆಯನ್ನು ಅದೇನೂ ಅಷ್ಟು ಮುಖ್ಯವಲ್ಲ ಎಂಬಂತೆ ದಿಗಂತದತ್ತ ದಿಟ್ಟಿಸುತ್ತಾ ಪ್ರಾರಂಭಿಸುವುದು.

ಆ ಕ್ಷಣಕ್ಕೆ ನಾನು ಮಧ್ಯೆ ಬಾಯಿಹಾಕಿ ಅಂದಿನ ತಾರೀಕನ್ನ ಕೇಳಬೇಕು. ಯಾರಾದರೂ ತಾರೀಕು ಹೇಳಿದ ತಕ್ಷಣ ಆಲ್ಬರ್ಟೋ "ಎಷ್ಟು ಕಾಕತಾಳೀಯ, ಸರಿಯಾಗಿ ಒಂದು ವರ್ಷದ ಹಿಂದೆ..." ಅಂತ ನಿಟ್ಟುಸಿರು ಬಿಡುವುದು. ಆಗ ನಮ್ಮ ಬಲಿಪಶು ಒಂದು ವರ್ಷದ ಹಿಂದೇನಾಯಿತು ಅನ್ನುತ್ತಾನೆ. ಅದಕ್ಕೆ ನಾವು ಸರಿಯಾಗಿ ಒಂದು ವರ್ಷದ ಕೆಳಗೆ ನಾವು ಈ ಯಾತ್ರೆ ಆರಂಭಿಸಿದ್ದಾಗೆ ಹೇಳುವುದು.

ನನಗಿಂತ ನಾಚಿಗೆ ತಪ್ಪಿದಂತಿದ್ದ ಆಲ್ಬರ್ಟೋ ಇನ್ನೂ ಒಂದು ನಿಟ್ಟುಸಿರಿಟ್ಟು "ಎಂಥ ದುರಂತ.. ನಮ್ಮ ಈಗಿನ ಪರಿಸ್ಥಿತಿಯಲ್ಲಿ ನಾವು ಈ ಮೊದಲ ವಾರ್ಷಿಕೊತ್ಸವವನ್ನ ಆಚರಿಸಲು ಸಾಧ್ಯವಿಲ್ಲವೇ.."[ಅಂತ ನನ್ನತ್ತ ಬಗ್ಗಿ ತಗ್ಗಿದ ದನಿಯಲ್ಲಿ ಹೇಳುವುದು] ಈಗ ಬಲಿಪಶು ತಕ್ಷಣ ನಮ್ಮ ಈ ಪುಟ್ಟ ಆಚರಣೆಗೆ ಹಣಕೊಡಲು ತಯಾರಾಗುತ್ತಾನೆ. ನಾವು ಇಷ್ಟವಿಲ್ಲದವರಂತೆ ಬೇಡಬೇಡವೆನ್ನುತ್ತೇವೆ. ಅವನ ಋಣ ತೀರಿಸಲು ನಮಗೆ ಮುಂದೆಯೂ ಸಾಧ್ಯವಿಲ್ಲವೇನೋ ಅನ್ನುತ್ತೇವೆ. ಈ ಎಲ್ಲ ನಾಟದ ನಂತರ ಇಷ್ಟವಿಲ್ಲದವರಂತೆಯೇ ವಾರ್ಷಿಕೊತ್ಸವವನ್ನು ಆಚರಿಸಲು ಒಪ್ಪುತ್ತೇವೆ.

ಗುಂಡಿನ ಮೊದಲ ಗ್ಲಾಸಿನ ನಂತರ ನಾನು ಎರಡನೆಯ ಗ್ಲಾಸು ಬೇಡವೆಂದು ಹಠ ಹಿಡಿಯುತ್ತೇನೆ. ಆಲ್ಬರ್ಟೋ ನನ್ನನ್ನ ಲೇವಡಿ ಮಾಡುತ್ತಾನೆ. ನಮ್ಮ ಬಲಿಪಶುವಿಗೆ ನಾನು ಯಾಕೆ ಕುಡಿಯುತ್ತಿಲ್ಲ ಎಂಬ ಅನುಮಾನ, ಕುತೂಹಲ.. ಆದರೆ ನಾನು ಹೇಳಲು ಹಿಂಜರಿಯುತ್ತೇನೆ. ಕಡೆಗೆ ಬಲಿಪಶು ನಾನು ಹೇಳಲೇಬೇಕೆಂದು ಒತ್ತಾಯ ಮಾಡಿದಾಗ ನಾನು ನಾಚಿ ಹೇಳುತ್ತೇನೆ... ಆರ್ಜೆಂಟೀನಾದಲ್ಲಿ ನಾನು ಕುಡಿಯುವಾಗ ತಿನ್ನುವುದೂ ಒಂದು ಪರಿಪಾಠ....

ಚೆ ಈ ಯಾತ್ರೆಯಲ್ಲಿ ಭೇಟಿಯಾಗುವ ಜನ ಅವನ ಮೇಲೆ ತೀವ್ರಪ್ರಭಾವ ಬೀರಿರಬಹುದು. ಅವನು ಮಾತನಾಡಿಸುವ ಗಣಿಕಾರ್ಮಿಕರು, ತಮ್ಮ ಜೀವನವನ್ನು ಆತ್ಮವಿಶ್ವಾಸದಿಂದ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವ ರೈತರು ಇವರಲ್ಲ ಚೆನ ವಿಚಾರಧಾರೆ ರೂಪುಗೊಳ್ಳುವತ್ತ ಒಂದು ದಟ್ಟ ಪ್ರಭಾವ ಬೀರಿರಬಹುದು. ಒಂದು ಕಡೆ ಚೆ ಮತ್ತವನ ಗೆಳೆಯ ತಮ್ಮ ಐದಂಶಗಳ ಕಾರ್ಯಕ್ರಮವನ್ನು ಹಾಕಿ ಊಟ ತಿಂಡಿ ಸಂಪಾದಿಸುತ್ತಿರುವಾಗಲೇ ಈ ರೀತಿಯಾದ ಕಾರ್ಯಕ್ರಮವನ್ನೂ ಸಹ ಕೈಗೊಳ್ಳಲಾಗದ ಬಡಪಾಯಿ ಜನರನ್ನು ಅವರು ಭೇಟಿ ಮಾಡುತ್ತಿರುತ್ತಾರೆ. ಪ್ರತಿನಿತ್ಯ ಗಣಿಕಾರ್ಮಿಕರು ಒಂದು ಜಾಗದಲ್ಲಿ ದನಗಳ ಜಾತ್ರೆಯಂತೆ ಸೇರುತ್ತಾರೆ. ಅಲ್ಲಿಗೆ ಬರುವ ಮುಕದ್ದಂಗಳು ಅವರನ್ನು ಪರೀಕ್ಷಿಸಿ ಟ್ರಕ್ ತುಂಬುವವರೆಗೂ ದನಗಳನ್ನು ತುಂಬುವಂತೆ ಕಾರ್ಮಿಕರನ್ನು ತುಂಬಿಸುತ್ತಾರೆ. ಯಾರು ಟ್ರಕ್ ಹತ್ತಬೇಕು ಇಲ್ಲ ಅನ್ನುವುದಕ್ಕೆ ಯಾವ ನಿಯಮವೂ ಇಲ್ಲ. ಮುಕದ್ದಂಗೆ ಹುಕ್ಕಿ ಬಂದರೆ ಅವರ ಅವಕಾಶ ಬಂದೀತು ಇಲ್ಲವಾದರೆ ಇಲ್ಲ. ಅವರನ್ನು ಕರೆಯಲು ಬಹುಶಃ ಅವನು ಪಾಲಿಸುವ ಏಕೈಕ ಅಲಿಖಿತ ನಿಯಮವೆಂದರೆ ಆ ದಿನ ಇರಬಹುದಾದ ಕೆಲಸಕ್ಕೆ ಅವರು ತಕ್ಕುದಾಗೆ ಆರೋಗ್ಯವಾಗಿದ್ದಾರೆಯೇ, ಆರೋಗ್ಯವಾಗಿ ಕಾಣುತ್ತಾರೆಯೇ ಎನ್ನುವುದು ಮಾತ್ರ.

ನಾನು ಸಿನೆಮಾದಲ್ಲಿರುವ ಪರಿಷ್ಕರಣೆಗಳ ವಿಷಯ ಹೇಳಿದ್ದೆ. ಅದರಲ್ಲಿ ಒಂದು ಚೆನ ಪ್ರೇಯಸಿ ಮಿಯಾಮಿಯಿಂದ ಒಂದು ನೈಟ್‍ಗೌನ್ ಕೊಂಡು ತರುವ ಸಲುವಾಗಿ ಅವನಿಗೆ ಕೊಟ್ಟ ಹದಿನೈದು ಡಾಲರುಗಳ ಬಗ್ಗೆ ಒಂದು ಉಪಕಥೆಯನ್ನು ಸಿನೆಮಾದಲ್ಲಿ ಕಾಣುತ್ತೇವೆ. ಈ ಪ್ರಸ್ತಾಪ ಪುಸ್ತಕದಲ್ಲಿ ಇಲ್ಲ. [ಇದರ ಬಗ್ಗೆ ಸಿನೇಮಾ ಮಾಡಿದಾಗ ಜೀವಂತವಾಗಿದ್ದ ಆಲ್ಬರ್ಟೋ ಹೇಳಿದನೋ ಅಥವಾ ಚಿತ್ರದ ನಿರ್ದೇಶಕರೇ ಇದನ್ನು ಹುಟ್ಟು ಹಾಕಿದರೋ ನನಗೆ ತಿಳಿಯದಾದರೂ, ಇದು ಒಂದು ಆಸಕ್ತಿಕರ ಇಂಪ್ರೊವೈಸೇಶನ್ ಅನ್ನುವುದರಲ್ಲಿ ಅನುಮಾನವಿಲ್ಲ]. ಚಿತ್ರದುದ್ದಕ್ಕೂ ಆಲ್ಬರ್ಟೋ ಈ ಹಣವನ್ನು ಚೆ ನ ಕೈಯ್ಯಲ್ಲಿ ಖರ್ಚು ಮಾಡಿಸಲು ಪ್ರಯತ್ನಿಸುತ್ತಾನಾದರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ.

ಪುಸ್ತಕದಲ್ಲಿ ಅಲ್ಲಿನ ಜನ ಬುಫಿಯೋ [bufeo] ಎಂದು ಕರೆಯುವು ವಿಚಿತ್ರ ಆಕಾರದ ಮೀನ ಪ್ರಸ್ತಾಪವಿದೆ. "ಇದು ನದಿಯಲ್ಲಿರುವ ಡಲ್ಪಿನ್ ನಂತಹ ಮೀನು. ಆದರೆ ಅದರ ವೈಚಿತ್ರ್ಯಗಳಲ್ಲಿ ಒಂದೆಂದರೆ ಅದಕ್ಕೆ ಹೆಂಗಸರಿಗಿರುವಂತೆಯೇ ಯೋನಿಯಿರುವುದು. ಹೀಗಾಗಿ ಅಲ್ಲಿನ ಬುಡಕಟ್ಟು ಜನಾಂಗದ ಗಂಡಸರು ಆ ಮೀನನ್ನು ಹೆಣ್ಣಿಗೆಬದಲಾಗಿ ಸಂಭೋಗಕ್ಕೆ ಉಪಯೋಗಿಸುವುದುಂಟಂತೆ. ಆದರೆ ಇದರಲ್ಲಿ ಒಂದೇ ಗಮ್ಮತ್ತಿನ ವಿಷಯ - ಸಂಭೋಗಕ್ರಿಯೆಯ ತಕ್ಷಣ ಆ ಪ್ರಾಣಿಯ ಪ್ರಾಣಹರಣ ಮಾಡಬೇಕು. ಇಲ್ಲವಾದರೆ ಅದರ ಯೋನಿಯ ಭಾಗ ಕಿರಿದಾಗಿ ಶಿಶ್ನವನ್ನು ಪಟ್ಟಾಗಿ ಹಿಡಿಯುವುದರಿಂದ ಅದನ್ನ ಹಿಂದಕ್ಕೆ ಎಳೆದುಕೊಳ್ಳುವುದು ಅಸಾಧ್ಯವಾಗುತ್ತದೆ." ಸಿನೇಮಾದಲ್ಲಿ ಈ ಕಥೆಯನ್ನು ಹೇಳುವುದು ಚೆ ಅಲ್ಲ. ಬದಲಿಗೆ ಆಲ್ಬರ್ಟೋನನ್ನ ಆಕರ್ಷಿಸಲು ಯತ್ನಿಸುತ್ತಿರುವ ಸೂಳೆ ಈ ಮಾತನ್ನಾಡುತ್ತಾಳೆ. ಆಲ್ಬರ್ಟೋ ಅವಳ ಕಥೆ ಕೇಳಿ ಅವಳತ್ತ ಆಕರ್ಷಿತನಾಗುತ್ತಾನೆ. ಆದರೆ ಅವನ ಬಳಿ ಹಣವಿಲ್ಲ. ಚೆ ನ ಪ್ರೇಯಸಿ ಕೊಟ್ಟ ಆ ಹದಿನೈದು ಡಾಲರುಗಳು ಬೇಕೇ ಬೇಕೆಂದು ಆಲ್ಬರ್ಟೋ ಹಠ ಹಿಡಿಯುತ್ತಾನೆ.

ಆಗ ನಮಗೆ ಸಿನೆಮಾದಲ್ಲಿ ತಿಳಿಯುವು ನಿಜವೆಂದರೆ ಚೆ ನ ಬಳಿಯೂ ಆ ಹಣವಿಲ್ಲ.. ಅದನ್ನ ಅವನು ಗಣಿಕಾರ್ಮಿಕ ದಂಪತಿಗಳಿಗೆ ಕೊಟ್ಟುಬಿಟ್ಟಿದ್ದಾನೆ. ಬಹುಶಃ ಚೆ ತನ್ನ ಪ್ರೇಯಸಿಯ ಚರಿತ್ರೆಯನ್ನು ಬಿಟ್ಟು ಶೋಷಿತರೊಡನೆ ಕೆಲಸ ಮಾಡಲು ನಿರ್ಧರಿಸುವ ಅವನ ಜೀವನದ ಭವಿಷ್ಯದ ನಿರ್ಣಾಯಕ ಘಟ್ಟವನ್ನು ಅವನು ಇಲ್ಲಿ ತಲುಪಿದ ಎನ್ನುವುದನ್ನು ನಿರ್ದೇಶಕರು ಸೂಚಿಸುವಂತಿದೆ.

ಸಿನೆಮಾದಲ್ಲಿನ ಮತ್ತೊಂದು ಮನಮುಟ್ಟುವ ಘಟನೆ ಚಿತ್ರದ ಅಂತ್ಯದಲ್ಲಿದೆ. ಅವರೆಲ್ಲಾ ಸ್ಯಾನ್ ಪಾಬ್ಲೋದ ಕುಷ್ಟರೋಗಿಗಳ ಕಾಲೊನಿಯಲ್ಲಿದ್ದಾರೆ. ಅಲ್ಲಿ ರೋಗಿಗಳಿಗೇ ಒಂದು ಬೇರೆ ಭಾಗ, ಮತ್ತು ಅವರನ್ನು ನೋಡಿಕೊಳ್ಳುವ ಅಧಿಕಾರಿಗಳ ವಸತಿಗಳು ಭಿನ್ನ. ಮಧ್ಯ ಒಂದು ನದಿ. ಈ ಬದಿಯಲ್ಲಿ ಚೆ ನ ಹುಟ್ಟುಹಬ್ಬದ ಆಚರಣೆಯಾಗುತ್ತದೆ. ಮಾರನೆಯ ದಿನ ಮುಂಜಾನೆ ಅವನು ಆರ್ಜೆಟೀನಾಕ್ಕೆ ವಾಪಸ್ಸಾಗಬೇಕು. ಆಗ ಅವನು ನದಿಯನ್ನು ಈಜುತ್ತಾ ದಾಟಿ ಕುಷ್ಟರೋಗಿಗಳಿಂದ ವಿದಾಯ ಕೋರುತ್ತಾನೆ. ಮುಂದೆ ಚೆ ಏನಾದ ಅನ್ನುವುದನ್ನು ನೋಡಿದರೆ ಇದೂ ಒಂದು ನಿರ್ಣಾಯಕ ಹಾಗೂ ಮಹತ್ವದ ಭಿತ್ತಿಯ ದೃಶ್ಯ ಇದಾಗಿದೆ. ಒಂದು ಥರದಲ್ಲಿ ಚೆ [ಮಧ್ಯತರಗತಿಯ ವಾಸ್ತವ್ಯದ] ಈ ಬದಿಯಿಂದ ಪೀಡಿತರ ಆ ಬದಿಗೆ ಸೇರಿದ ಚಿತ್ರ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಈ ದೃಶ್ಯವನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ.

ಪುಸ್ತಕವನ್ನೂ, ಅದರ ಚಿತ್ರೀಕರಣವನ್ನೂ ಸಾಮಾನ್ಯವಾಗಿ ಮೆಚ್ಚುವುದು ಕಷ್ಟದ ಮಾತಾಗುತ್ತದೆ. ನಮ್ಮ ಊಹೆಗೆ ತಕ್ಕಂತೆ ಪುಸ್ತಕವನ್ನು ಚಿತ್ರೀಕರಿಸಲಿಲ್ಲವೆಂದೇ ಯಾವಾಗಲೂ ನನ್ನಂತಹ ಪುಸ್ತಕಪ್ರಿಯರಿಗೆ ಅಸಮಾಧಾನವಿರುತ್ತದೆ. ಆದರೆ ಈ ಚಿತ್ರದ ವಿಷಯದಲ್ಲಿ ನನಗೆ ಪುಸ್ತಕದ ಬಗೆಗಿನ ಸೆಲ್ಯುಲಾಯ್ಡ್ ನ ಅರ್ಥೈಸುವಿಕೆ ಬಹಳ ಪ್ರಿಯವಾಯಿತು. ಈ ರೀತಿಯಾಗಿ, ಬರೆದ ಮಾತುಗಳಿಗೆ ತದ್ವತ್ತು ದೃಶ್ಯಗಳನ್ನು ಜೋಡಿಸದೇ ಅದನ್ನು ಅದ್ಭುತವಾಗಿ ಅರ್ಥೈಸಿದ್ದಾರೆ ಅನ್ನಿಸಿದ್ದೆ ಶ್ಯಾಂ ಬೆನೆಗಲ್‍ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಆಧಾರದ ಮೇಲೆ ಚಿತ್ರೀಕರಿಸಿದ್ದ "ಭಾರತ್: ಏಕ್ ಖೋಜ್" ಎಂಬ ದೂರದರ್ಶನ ಸರಣಿ.

ನಾನು ೧೯೯೯ರಲ್ಲಿ ಕೊಂಡ ಪುಸ್ತಕದಲ್ಲಿ ಚೆ ನ ಸಂಕ್ಷಿಪ್ತ ಜೀವನಚರಿತ್ರೆ ೧೯೬೭ರಲ್ಲಿ ಮುಗಿಯುತ್ತದೆ: 'ಬೊಲೀವಿಯಾದ ಸೈನ್ಯದೊಂದಿಗೆ ಅನೇಕ ತಿಂಗಳುಗಳ ಜಟಾಪಟಿಯ ನಂತರ ವ್ಯಾಲೆಗ್ರಾಂದೆ ನಗರದಲ್ಲಿ ಗುವೆರಾನನ್ನು ಬಂಧಿಸಿ ರಾಷ್ಟ್ರಪತಿ ಬಾರೆನ್ತೋಸ್ ಆದೇಶದ ಮೇರೆಗೆ ಪ್ರಾಣಹರಣ ಮಾಡಲಾಯಿತು. ಆದರೆ ಇತ್ತೀಚಿನ ಆವೃತ್ತಿಯಲ್ಲಿ ಇನ್ನಷ್ಟು ವಿವರಗಳನ್ನು ಕಾಣಬಹುದು.

ಚೆ ನ ಜೀವನದ ಅಡಿಟಿಪ್ಪಣಿ ಈ ಕೆಳಗಿನಂತಿದೆ:

೧೯೯೫: ಜುಲೈ ತಿಂಗಳಲ್ಲಿ ಬೊಲೀವಿಯಾದ ಜನರಲ್ ಗುವೆರಾನ ಸಮಾಧಿಯ ಸ್ಥಳವನ್ನು ಜಾಹೀರು ಮಾಡುತ್ತಾನೆ.
೧೯೯೭: ಜುಲೈ ತಿಂಗಳಲ್ಲಿ ವಾಲೆಗ್ರಾಂದೆಯ ಸಾಮೂಹಿಕ ಸಮಾಧಿಗಳಿಂದ ಗುವೆರಾನ ಕಳೇಬರವನ್ನು ತೆಗೆದು ಕ್ಯೂಬಾಗೆ ನೀಡಲಾಗುತ್ತದೆ. ಕ್ಯೂಬಾದಾದ್ಯಂತ ಅವನ ಸಾವಿನ ೩೦ನೆಯ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಅವನ ದೇಹವನ್ನು ಸಾಂತಾಕ್ಲಾರಾದಲ್ಲಿ, ೧೯೫೮ರ ಅಂತ್ಯಕ್ಕೆ ಬಾತಿಸ್ತಾನ ಅಧಿಕಾರಿಗಳ ವಿರುದ್ದ ವಿಜಯವಂತನಾದ ಪುಣ್ಯಸ್ಥಳದಲ್ಲಿ ವಿಶೇಷವಾಗಿ ನಿರ್ಮಿಸಿದ ಮಹಲಿನಲ್ಲಿ ಮತ್ತೆ ಸಮಾಧಿಮಾಡಲಾಗುತ್ತದೆ. ೧೦೦,೦೦೦ಕ್ಕೂ ಮೀರಿ ಕ್ಯೂಬನ್ನರು ಆ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

"ಅವನನ್ನು ಕೊಲ್ಲುವುದರಿಂದ ಹೋರಾಟಗಾರನಾಗಿ ತನ್ನ ಅಸ್ತಿತ್ವವನ್ನು ಅವನು ಕಳೆದುಕೊಳ್ಳುತ್ತಾನೆಂದು ಅವರು ಏಕೆ ಭಾವಿಸಿದರು? ಇಂದು ಎಲ್ಲೆಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗಿದೆಯೋ, ಅಲ್ಲೆಲ್ಲಾ ಅವನ ಅಸ್ತಿತ್ವ ಇದ್ದೇ ಇದೆ" ಎಂದು ಕ್ಯಸ್ತ್ರೋ ಅವನ ಮರುಸಮಾಧಿಯ ಸಂದರ್ಭದಲ್ಲಿ ಹೇಳುತ್ತಾನೆ.

೨೦೦೦: ಇಪತ್ತನೆಯ ಶತಮಾನದ ನೂರು ಅತಿ ಪ್ರಭಾವೀ ವ್ಯಕ್ತಿಗಳಲ್ಲಿ ಚೆ ಯನ್ನೂ ಟೈಂ ಪತ್ರಿಕೆ ಹೆಸರಿಸುತ್ತದೆ. "ಕಮ್ಯುನಿಸಂ ತನ್ನಲ್ಲಿನ ಬೆಂಕಿಯನ್ನು ತುಸು ಕಳೆದುಕೊಂಡಿದ್ದರೂ, ಕ್ರಾಂತಿಯ ಪ್ರತೀಕವಾಗಿ, ಸ್ಫೂರ್ತಿಯಾಗಿ ಚೆ ಇನೂ ಉಳಿದಿದ್ದಾನೆ" ಎಂದು ಆ ಪತ್ರಿಕೆ ಹೇಳುತ್ತದೆ.

ನನ್ನ ಮಟ್ಟಿಗೆ ಇದು ಚೆ ಜೊತೆಗಿನ ಅಭೂತಪೂರ್ವ ಯಾತ್ರೆಯಾಗಿದೆ.

ಇದರ ಇಂಗ್ಲೀಷ್ ಅವೃತ್ತಿಯನ್ನು ಇಲ್ಲಿ ಕಾಣಬಹುದು.

No comments:

Post a Comment