ಎರಡೂ ಕೃತಿಗಳು ಜನಪ್ರಿಯವಾಗಲು ಸಾಕಷ್ಟು ಕಾರಣಗಳಿವೆ. ಎರಡೂ ಕೃತಿಗಳು ಬಡತನವನ್ನು ವಿಭಿನ್ನ ರೀತಿಯಲ್ಲಿ ಸಹಿಸುವ, ಕಷ್ಟಗಳನ್ನು ಗೆಲ್ಲುವ, ಮುಗ್ಗಟ್ಟಿನಲ್ಲಿ ಮುನ್ನುಗ್ಗುವ ಕನಸಿನ ಕಥೆಗಳು. ನಮ್ಮೆಲ್ಲರಲ್ಲೂ ಇರುವ "ಅಂಡರ್ ಡಾಗ್, ಗೆಲ್ಲಬೇಕು" ಅನ್ನುವ ಸುಪ್ತ ಕನಸನ್ನು ಸಾಕಾರಗೊಳಿಸುವ ಕೃತಿಗಳಿವು. ಹೀಗಾಗಿ ಅನೇಕ ಜನರಿಗೆ ಈ ಕಥೆಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಸಾಲದ್ದಕ್ಕೆ ಎರಡರಲ್ಲೂ ರೋಚಕತೆ ಇದೆ. ಸ್ಲಂಡಾಗ್‌ನಲ್ಲಿ ಜಮಾಲ್ ಕ್ವಿಜ್ ಗೆಲ್ಲುವ ರೀತಿಯಲ್ಲಿ ಹಂತ ಹಂತದಲ್ಲಿ ಪ್ರಶ್ನೆಗಳಿಗೆ ಉತ್ತರ ಬಿಡಿಸುತ್ತಾ ಅವನ ಕಥೆ ತೆರೆದುಕೊಂಡರೆ, ವೈಟ್ ಟೈಗರ್‌ನಲ್ಲಿ ಅದು ಅಶೋಕ ಶರ್ಮನ [ಉರುಫ್ ಬಲರಾಮ ಹಲವಾಯಿಯ] ಆತ್ಮಕಥೆಯನ್ನು ಅವನೇ ಮಂಡಿಸುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಎರಡೂ ಕೃತಿಗಳು ಒಂದು ಮುಖ್ಯವಾದ ಕಥೆಯನ್ನು ಹೇಳುತ್ತಿವೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಆಸ್ಕರ್ ಮತ್ತು ಬುಕರ್ ಪ್ರಶಸ್ತಿಗಳ ಓರೆಗಲ್ಲಿಗೆ ಹಚ್ಚಿದಾಗ ಅವು ಈ ರೀತಿಯ ಮನ್ನಣೆಯನ್ನು ಪಡೆಯಲು ಅರ್ಹವಾಗಿವೆಯೇ ಅನ್ನುವ ಪ್ರಶ್ನೆಗೆ ನಿರ್ವಿವಾದ ಉತ್ತರವಿಲ್ಲ. ಈ ಕೃತಿಗಳಿಗೆ ಯಾಕೆ ಪ್ರಶಸ್ತಿ ಬಂತು ಎಂದು ಹಲವು ಧ್ವನಿಗಳು ಕೂಗಿದಾಗ ನಾವು ಎಚ್ಚೆತ್ತು ಆ ಧ್ವನಿಗಳನ್ನು ಪರಿಶೀಲಿಸಬೇಕಾಗುತ್ತದೆ. ಉದಾಹರಣೆಗೆ, ಬುಕರ್ ಪ್ರಶಸ್ತಿ ಬರದಿದ್ದ ಅಮಿತಾವ್ ಘೋಷ್ ಗೆ ಈ ಬಾರಿ ಪ್ರಶಸ್ತಿ ಬಂದಿದ್ದರೆ ಮೇಲೇರುತ್ತಿದ್ದ ಹುಬ್ಬುಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಹಾಗೂ ಆ ಬಗ್ಗೆ ಕಾದಂಬರಿಗೆ ಏಕೆ ಪ್ರಶಸ್ತಿ ಬಂತು ಅನ್ನುವುದಕ್ಕಿಂತ ಕಾದಂಬರಿಯ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿತ್ತು. ಹೀಗೆ ಪುಸ್ತಕವನ್ನು ಚರ್ಚಿಸಬೇಕಾದ್ದು ಸಂದರ್ಭವನ್ನು ಚರ್ಚಿಸುವುದಕ್ಕಿಂತ ಮುಖ್ಯ ಅಂತ ನನಗನ್ನಿಸುತ್ತದೆ. ಸ್ಲಂಡಾಗ್ ಮತ್ತು ವೈಟ್ ಟೈಗರ್ ಬಗ್ಗೆ ತಕರಾರು ಏನಿರಬಹುದು? ಯಾಕೆ ಅದು ಇಷ್ಟವಾಗಿಲ್ಲ ಎಂದು ಹಲವು ಜನರು ಹೇಳುತ್ತಿದ್ದಾರೆ ಅನ್ನುವುದನ್ನ ಗಮನಿಸಿದರೆ ನಮಗೆ ಸಮರ್ಪಕ ಉತ್ತರಗಳು ದೊರೆಯುವುದಿಲ್ಲ. ನಮಗೆ ಸಾಧಾರಣವಾಗಿ ದೊರೆಯುವ ಉತ್ತರಗಳು ಒಂದು ರೀತಿಯ ಹೊಟ್ಟೆಕಿಚ್ಚಿನಿಂದ ಕೂಡಿದ ಉತ್ತರಗಳೆನ್ನಿಸುವುದರಿಂದ ಅದನ್ನು ಸರಳವಾಗಿ ತಳ್ಳಿಯೂ ಹಾಕಬಹುದು. ಎರಡೂ ಬಡತನವನ್ನು ವೈಭವೀಕರಿಸಿ ಪಾಶ್ಚಾತ್ಯ ನೋಡುಗರಿಗೆ ಪಾವರ್ಟಿ ಪಾರ್ನ್ ಅಥವಾ ಟ್ರಾಮಾ ಟೂರಿಸಂ ಒದಗಿಸುತ್ತದೆಂದು ಅನೇಕರು ಆಪಾದನೆ ಹೊರಸಿದ್ದಾರೆ. ಈ ಆಪಾದನೆ ಹೊರಸುತ್ತಿದ್ದಂತೆ ಮೀರಾ ನಾಯರ್ [ಸಲಾಂ ಬಾಂಬೆ] ಬಗೆಗೂ, ಸತ್ಯಜಿತ್ ರಾಯ್ [ಪಥೇರ್ ಪಾಂಚಾಲಿ] ಬಗೆಗೂ ಬೆರಳೆತ್ತುವುದು ಸಹಜವಾಗುತ್ತದೆ. ಎರಡನೆಯ ವಾದಸರಣಿ ಈ ಎರಡು ಕೃತಿಗಳಿಗಿಂತ ಉತ್ತಮ ಕೃತಿಗಳು ರೇಸಿನಲ್ಲಿದ್ದಾಗ್ಯೂ ಇವಕ್ಕೆ ಬಹುಮಾನ ಬಂದಿದೆ ಅನ್ನುವ ಅಸಮಾಧಾನ. ಹಾಗೂ ಭಾರತೀಯರಿಗೆ/ಕನ್ನಡದವರಿಗೆ [ಅದೂ ಅನೇಕ ವರ್ಷಗಳ ನಂತರ] ಬಹುಮಾನ ಬಂದಿರುವಾಗ ತಕರಾರಿನ ಅಪಸ್ವರ ಎತ್ತಬಾರದೆನ್ನುವ ಸಜ್ಜನಿಕೆಯ ಭಯವೂ ಇರಬಹುದು. ನಾನು ನನ್ನ ವೈಯಕ್ತಿಕ ವಾದವನ್ನು ಎರಡನೇ ಸ್ಥರದಲ್ಲಿರಿಸಬಯಸುತ್ತೇನೆ. ಈ ವರೆಗಿನ ಆಸ್ಕರ್ ಮತ್ತು ಬುಕರ್ ಪ್ರಶಸ್ತಿ ಪಡೆದ ಸಿನೆಮಾ/ಪುಸ್ತಕಗಳ ಒಟ್ಟಾರೆ ಯಾದಿಯನ್ನು ನೋಡಿದಾಗ ಈ ಎರಡೂ ಕೃತಿಗಳು ಆ ಮಾನದಂಡಕ್ಕೆ ಗೌರವವನ್ನು ಒದಗಿಸುತ್ತವೆಯೇ ಇಲ್ಲವೇ ಅನ್ನುವುದನ್ನು ನಾವು ಪರಿಶೀಲಿಸಬೇಕಾಗುತ್ತದೆ. ![]() ೧.ಸೃಜನಶೀಲತೆಯ ಚೌಕಟ್ಟನ್ನು ವಿಸ್ತರಿಸುವ ಕೆಲಸ ಈ ಕೃತಿ/ಲೇಖಕ ಮಾಡುತ್ತಿದ್ದಾರೆಯೇ? ೨.ಇದರಿಂದಾಗಿ ಹೊಸ ದೃಷ್ಟಿಕೋನ - ಅರ್ಥಗಳು ಹೊಮ್ಮ ಬಹುದೇ? ಈ ಎರಡೂ ನಿಟ್ಟಿನಲ್ಲಿ ಅಡಿಗ ಹಾಗೂ ಡ್ಯಾನಿ ಗೆಲ್ಲುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಅಡಿಗ ತಮ್ಮ ಕಾದಂಬರಿಯನ್ನು ಹೇಳುವ ರೀತಿಯಲ್ಲಿ - ಏಕತಾನದ ಒಂದು ಸುದೀರ್ಘ ಪತ್ರದ ಮೂಲಕ ಕಥೆ ಹೆಣೆಯುವುದರಲ್ಲಿ ತುಸು ಸೃಜನಶೀಲತೆ ತೋರಿಸುತ್ತಾರೆ. ಆದರೆ ಅವರ ದೃಷ್ಟಿಕೋನ ಬಲರಾಮ್ ಹಲ್ವಾಯಿ ಮತ್ತು ಸ್ವತಃ ಅರವಿಂದ ಅಡಿಗರ ನಡುವೆ ಹಂಚಿಹೋಗುತ್ತದೆ. ಹೀಗಾಗಿ ಬಲರಾಮ್ ಹಲ್ವಾಯಿ ತನ್ನ ಹಳ್ಳಿಗೇ ವಾಪಸ್ಸಾದಾಗ ಆ ಹಳ್ಳಿಯನ್ನು ಹೊರಗಿನವನ ದೃಕ್ಪಥದಿಂದ [ಅರವಿಂದ ಅಡಿಗರ ರೀತಿಯಲ್ಲಿ] ನೋಡುತ್ತಾನೆ - ಎನ್.ಆರ್.ಐಗಳು ಭಾರತಕ್ಕೆ ಬಂದು ಮಿನರಲ್ ನೀರು ಕುಡಿಯುತ್ತಾ ಇಲ್ಲಿನ ಶುಭ್ರತೆಯ ಬಗ್ಗೆ ಟೀಕೆ ಮಾಡುವಂತೆ, ಆತ ಇದ್ದಕ್ಕಿದ್ದಂತೆ ಹೊರಗಿನವನಾಗುತ್ತಾನೆ. ಒಂದು ರೀತಿಯಲ್ಲಿ ಅವನು ತನ್ನ ಬಡ ಸಮಾಜದ ಸೀಮೋಲ್ಲಂಘನೆ ಮಾಡಬಯಸುತ್ತಾ, ಆ ಸೀಮೋಲ್ಲಂಘನೆ ಮಾಡುವ ಮುನ್ನವೇ ಆ ಬದಿಯ ವ್ಯಕ್ತಿಯಾಗಿ ಪ್ರಪಂಚದ ಒಂದು ಭಾಗವನ್ನು ನೋಡುವುದರಿಂದ ಕಥೆಯ ಅಥೆಂಟಿಸಿಟಿ ಕಡಿಮೆಯಾಗುತ್ತದೆ. ಒಬ್ಬ ದೇವನೂರು ಮಹಾದೇವ ಬರೆವ ಬಡತನಕ್ಕೂ ಅಡಿಗ ಬರೆವ ಬಡತನಕ್ಕೂ ಇರುವ ವ್ಯತ್ಯಾಸ ಇದೇ. ದೇವನೂರು, ಕುಂ.ವೀ. ರೀತಿಯ ಬರಹಗಾರರು ಬಡತನದ ಬದುಕನ್ನು ಚಿತ್ರಿಸುವಾಗ ಅದರಲ್ಲೂ ಒಂದು ಸಂಭ್ರಮವಿದೆ. ಬಡತನದ ಬದುಕು ಗೊಣಗುವ ಬದುಕೇ ಆಗಿರಬೇಕೆಂದೇನೂ ಇಲ್ಲ, ಅದರಲ್ಲೂ ಖುಶಿಪಡುವ, ಸಂಭ್ರಮ ಪಡುವ ಕ್ಷಣಗಳನ್ನು ಅವರುಗಳು ಚಿತ್ರಿಸುತ್ತಾರೆ. ಉಲ್ಲಂಘನೆಯ ಮಾತಾಡಿದಾಗಲೂ ಒಂದು ನಿಟ್ಟಿನ ಅಶಾವಾದದ ಜೀವಸಂಭ್ರಮವಿರುತ್ತದೆ. ಆದರೆ ಅಡಿಗರ ಬಲರಾಮ ಗೆದ್ದಾಗಲೂ ಅವನ ಮನಸ್ಸಿನಲ್ಲಿ, ಪರಿಸ್ಥಿತಿಯಲ್ಲಿ ಹತಾಶೆಯಿದೆ. ಹಾಗೂ, ಆ ಗೆಲುವು ಸಮುದಾಯದ ಗೆಲುವಾಗದೇ ವಯಕ್ತಿಕ ಗೆಲುವಾಗಿರುವುದರಿಂದ ಕಥೆ ಒಟ್ಟಾರೆ ಸಾಮಾಜಿಕ ಚೌಕಟ್ಟಿನಲ್ಲಿ ಯಾವ ಒಂದು ಪ್ರಭಾವವನ್ನೂ ಬೀರದೇ ಸ್ವಾರ್ಥದ ನೆಲೆಯಲ್ಲಿ ನಿಲ್ಲುವುದರಿಂದ ಮೊರಾಲಿಟಿ ಇಲ್ಲದ ಹತಾಶೆ ಎದ್ದು ಕಾಣುತ್ತದೆ. ಎಲ್ಲವೂ ದೊಡ್ಡ ಕ್ಯಾನ್ವಾಸಿನಲ್ಲಿ ಸಾಮಾಜಿಕ ಚೌಕಟ್ಟನ್ನು ಬದಲಿಸಬೇಕೆಂದೇನೂ ಇಲ್ಲ, ಆದರೆ ಆ ಆಶಯ ಹೊತ್ತು ನಡೆವಂತೆ ಕಾಣುವ ಈ ಕಾದಂಬರಿ ಆ ಘಟ್ಟದಲ್ಲಿ ಸೋಲುತ್ತದೆ. ಸ್ಲಂಡಾಗ್ ಕಥೆಯ ದುರಂತವೂ ಇಲ್ಲೇ ಇದೆ. ನಿರೂಪಣೆಯಲ್ಲಿ ಭೂತ-ವರ್ತಮಾನದ ಮಿಶ್ರಣವನ್ನು ತಂದು ಒಂದೊಂದು ಪ್ರಶ್ನೆಗೂ ಒಂದೊಂದು ಕಥೆಯನ್ನು ಹೇಳುವ ಐಡಿಯಾ ಅದ್ಭುತವಾದದ್ದಾದರೂ, ಅದನ್ನು ಜೋಡಿಸಿಟ್ಟಿರುವ ಚೌಕಟ್ಟು ಎಡವಟ್ಟಾಗಿದೆ. ಅಂಡರ್ ಡಾಗ್ ಕೊಳೆಗೇರಿಯಲ್ಲಿದ್ದರೂ ಬುದ್ಧಿವಂತನಾಗಬಲ್ಲ, ಅಂಥವನಿಗೂ ಜಗತ್ತಿನ ಜ್ಞಾನ ಅನುಭವದ ಮೂಲಕ ಪ್ರಾಪ್ತವಾಗುತ್ತದೆ ಅನ್ನುವುದನ್ನು ಕಥೆ ಹೇಳಲು ಪ್ರಯತ್ನಿಸುತ್ತದೆ. ಹೀಗಾಗಿಯೇ ಆ ಕಥಾಹಂದರವನ್ನು ಹೊಗಳಿರುವವರು ಇದನ್ನು ಆಶಾವಾದದ ಪ್ರತೀಕವೆಂದು ವಿವರಿಸಲು ಪ್ರಯತ್ನಿಸಿದ್ದಾರೆ. ಆದರೆ ಕಥೆ ನಿಂತಿರುವ ತೆಳು ಎಳೆಯನ್ನು ಗಮನಿಸಿ. ಸ್ಲಂಡಾಗ್‍ನ ನಾಯಕ ಜಮಾಲ್ ಹುಡುಕುತ್ತಿರುವುದು, ತಹತಹಿಸುತ್ತಿರುವುದು - ಸೀಮೋಲ್ಲಂಘನವನ್ನಲ್ಲ. ಅವನಿಗೆ ದುಡ್ಡೂ ಮುಖ್ಯವಲ್ಲ. ಆದ್ದರಿಂದಲೇ ಅವನು ಜೂಜುಗಾರನ ರೀತಿಯಲ್ಲಿ ಕೆಲವು ಪ್ರಶ್ನೆಗಳನ್ನು ಎದುರಿಸಲು ತಯಾರು. ಅವನಿಗೆ ಬೇಕಾದ್ದು ತಾನು ಪ್ರೀತಿಸುತ್ತಿದ್ದ ಹುಡುಗಿಯ ಕುರುಹು [ಆ ಹುಡುಗಿಯ ಬಗ್ಗೆ ಯಾಕೆ ಅವನಿಗೆ ಅಷ್ಟೊಂದು ಪ್ರೀತಿ, ಅದೇ ಆದರ ತನ್ನ ಸೋದರ ಸಲೀಂ ಬಗ್ಗೆ ಯಾಕೆ ಇಲ್ಲ ಅನ್ನುವುದಕ್ಕೆ ನಮಗೆ ಗಟ್ಟಿ ಕಾರಣ ಸಿಗುವುದಿಲ್ಲ]. ಅವಳು ಈ ಕಾರ್ಯಕ್ರಮವನ್ನು ನೋಡುತ್ತಾಳೆನ್ನುವುದೇ ಅವನಿಗೆ ಪ್ರೇರಣೆ. ಹಾಗೆ ನೋಡಿದರೆ ಚಿತ್ರದಲ್ಲಿ ನಿಜಕ್ಕೂ ಸೀಮೋಲ್ಲಂಘನ ಮಾಡಬೇಕೆಂದಿರುವವನು ಜಮಾಲ್ ಮಲ್ಲಿಕನ ಅಣ್ಣ ಸಲೀಂ. ಸಲೀಂನದ್ದು ನಿಜಕ್ಕೂ ಅಥೆಂಟಿಕ್ ಆಗಿ ಕಾಣುವ ಪಾತ್ರವೆನ್ನಿಸುತ್ತದೆ. ![]() ಆದರೆ ಕಾರಣಾಂತರದಿಂದ ಈ ಎರಡೂ ಕೃತಿಗಳಿಗೂ ಮನ್ನಣೆ ದೊರೆತಿದೆ. ಭಾರತಕ್ಕೇ ಈ ಬಹುಮಾನಗಳು ಬರಬೇಕೆಂದಿದ್ದು ಸರಿಯಾದ ಕಾರಣಕ್ಕೇ ನಾವೆಲ್ಲಾ ಖುಷಿ ಪಡಬೇಕೆಂದಿದ್ದರೆ, ಅದು ಅಮಿತಾವ್ ಘೋಷ್ ಗೆ ಬುಕರ್ ಮತ್ತು ಆಮೀರ್ ಖಾನನ ತಾರೇ ಜಮೀನ್ ಪರ್‍ಗೆ ಒಂದು ರೀತಿಯ ಆಸ್ಕರ್ ಬಂದಿದ್ದರೆ, ಈಗ ನಾವು ಹೆಮ್ಮೆ ಪಡುತ್ತಿರುವ ಕೃತಿಗಳಿಗಿಂತ ಹೆಚ್ಚಾಗಿ ಹೆಮ್ಮೆ ಪಡುತ್ತಿದ್ದೆವೇನೋ. ನಾವು ನಮ್ಮ ದೇಶದ ಜನಕ್ಕೆ ಬಂದ ಪ್ರಶಸ್ತಿಗಳನ್ನು ಸ್ವೀಕರಿಸಿ ಖುಷಿಪಡುತ್ತಲೇ - ಸಂಭ್ರಮದ ನಡುವೆ ತುಸು ಆತ್ಮಾವಲೋಕನವನ್ನೂ ಮಾಡಿಕೊಳ್ಳುವುದು ಅವಶ್ಯಕವೆನ್ನಿಸುತ್ತದೆ. ಇದು ಬಡತನವನ್ನು ಚಿತ್ರೀಕರಿಸಿದ ರೀತಿಯ ಪ್ರಶ್ನೆಯಲ್ಲ. ಆದರೆ ಬಡತನದ ಬಗ್ಗೆ ತೆಗೆದುಕೊಂಡಿರುವ ನೈತಿಕ ನಿಲುವಿನ ಹಾಗೂ ಅದಕ್ಕೆ ಕೊಟ್ಟಿರುವ ಕಲಾತ್ಮಕ ಕವಚದ ಸೃಜನಶೀಲತೆಯ ಪ್ರಶ್ನೆಯಾಗಿದೆ. ಹಾಗೂ ಅದನ್ನು ನಿರೂಪಿಸುವ ಇಡಿಯಂನ ಆಯ್ಕೆಯ ಸೃಜನಶೀಲತೆಯ ಪ್ರಶ್ನೆಯಾಗಿದೆ. | ||||
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
7 years ago
No comments:
Post a Comment