Sunday, March 8, 2009

ಮಾತು ಮಾತು ಮಥಿಸಿ, ಹೊಸೆದು ಕವಿತೆ ಹೊಸದು..



[ಈ ಲೇಖನವನ್ನು ನಾನು ಬ್ಲಾಗಿಗಾಗಿ ಬರೆಯುವವನೇ ಇದ್ದೆ. ಅಷ್ಟರಲ್ಲಿ ಡುಂಡಿ ತನ್ನ ಮೂರನೆಯ ಮಾತು ಕ[ವಿ]ತೆ ಸಂಗ್ರಹಕ್ಕೆ ಹಿನ್ನುಡಿಯನ್ನ ಬರೆದುಕೊಡಲು ಕೇಳಿದ. ಮೂಲತಃ ನಾನು ಮೇಲ್ಕಂಡ ಎಲ್ಲ ಮಾತುಗಳನ್ನೂ ಬರೆದಿದ್ದೆನಾದರೂ, ಪುಸ್ತಕಕ್ಕಾಗಿ ಮೇಲಿನ ಬರಹವನ್ನು ತುಂಡರಿಸಿ ಮೂರನೆಯ ಸಂಕಲನವಾದ 'ಪರವಾಗಿಲ್ಲ' ಕ್ಕೆ ಮಾತ್ರ ಸೀಮಿತವಾಗುವಂತೆ ಬರೆದು ಕಳಿಸಿದೆ]

ದೊಡ್ಡ ದೊಡ್ಡ ಘನ ವಿಚಾರಗಳ ಬಗ್ಗೆ ಪುಟ್ಟ ಪುಟ್ಟ ಹನಿಗವಿತೆಗಳನ್ನು ಬರೆದು ನಮ್ಮೆಲ್ಲರನ್ನು ಹಗುರಾಗಿಸುತ್ತಿದ್ದ ಡುಂಡಿ ಈಗಿತ್ತಲಿಂದಾಗಿ ಸಣ್ಣ ಸಣ್ಣ ವಿಷಯಗಳ ಬಗ್ಗೆ ದೊಡ್ದ ದೊಡ್ದ ಪ್ರಬಂಧಗಳನ್ನು ಯಾವುದೇ ಬಂಧವಿಲ್ಲದೆ ಮಾತನಾಡುವಷ್ಟೇ ಸಹಜವಾಗಿ ಬರೆಯುತ್ತಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. ಡುಂಡಿರಾಜನದ್ದು ನಿಜಕ್ಕೂ ರೌಂಡೆಡ್ ಗ್ರೌಂಡೆಡ್ ವ್ಯಕ್ತಿತ್ವ. ರೌಂಡೆಡ್ ಅಂದರೆ ಅವನು ತನ್ನ ಹೆಸರಿಗೆ ತಕ್ಕಂತೆ ಗಣಪತಿಯ ಹಾಗಿದ್ದಾನೆಂದೇನೂ ಅಲ್ಲ. ಆದರೆ ಅವನ ಕುತೂಹಲ, ಕಾಯಕ, ಓದು, ಬರಹದಲ್ಲಿ ಅವನಿಗಿರುವ ಆಸಕ್ತಿಯೇ ಅವನನ್ನು ರೌಂಡೆಡ್ ಮಾಡಿಸುತ್ತದೆ. ಹಾಗೆಯೇ ಗ್ರೌಂಡೆಡ್ ಅಂದರೆ ನಮ್ಮ ಅಲಾಯನ್ಸ್ ಏರ್‍ನ ವಿಮಾನಗಳಂತೆ ಚಲಿಸದೇ ನಿಂತ ಇಮಾರತುಗಳಲ್ಲ. ತೇಲಾಡದೇ ಹಾರಾಡದೇ ತನ್ನ ಸುತ್ತಲೂ ಒಂದು ಪ್ರಭಾವಳಿಯನ್ನು ಸುತ್ತಿಕೊಳ್ಳದೇ ಎಲ್ಲರಿಗೂ ದಕ್ಕುವಂತೆ ಬರೆಯುವ ಕಲೆಗಾರ ಅಂತ. ಹೇಗೆ ರೌಂಡೆಡ್‍ಗೂ ಗ್ರೌಂಡೆಡ್‍ಗೂ ವಿಭಿನ್ನ ಅರ್ಥಗಳಿವೆಯಂಬಂತೆ ನಾವು ಆ ಪದಗಳನ್ನು ಬಳಸ ಬಹುದೋ ಹಾಗೆಯೇ ಡುಂಡಿಯೂ ಪದಗಳೊಂದಿಗೆ ಆಟವಾಡುತ್ತಾನೆ. ಕವಿತೆಗಳಲ್ಲಿ ಅದು ಚುರುಕಾಗಿ ಚುಟುಕಾಗಿ ಕಾಣಿಸಿಕೊಂಡರೆ ಪ್ರಬಂಧಗಳಲ್ಲಿ ಅದು ವಿಸ್ತಾರವಾಗಿ ಕಾಣಿಸುತ್ತದೆ. ಅದಕ್ಕೇ ತನ್ನನ್ನು ಒಂದು ಪ್ರಕಾರಕ್ಕೆ ಬಂಧಿಸಿಕೊಳ್ಳದೇ, ಚಿಕ್ಕ ಚಿಕ್ಕ ಕವಿತೆಗಳ ಜೊತೆಯಲ್ಲೇ ದೊಡ್ಡ ದೊಡ್ಡ ದಡ್ಡವಲ್ಲದ ನಾಟಕಗಳನ್ನೂ ಗಡ್ದವಿಲ್ಲದ ಡುಂಡಿ ಬರೆದಿದ್ದಾನೆ.

ಅವನ ಕವಿತೆಗಳಲ್ಲಿ, ಮಾತುಕ[ವಿ]ತೆಯಲ್ಲಿ, ಎಲ್ಲೆಲ್ಲೂ ಕಾಣುವುದು ಪದಗಳೊಂದಿಗಿನ ಪಂದ್ಯ. ಹೀಗಾಗಿ ಡುಂಡಿ ಯಾವಗಲೂ ಹೊಸರೀತಿಯಲ್ಲಿ ನೋಡುವ ಬರೆಯುವ ಸಾಮರ್ಥ್ಯವನ್ನ ಸಹಜವಾಗಿಯೇ ಸಂಪಾದಿಸಿಕೊಂಡು ಸಾರ್ಥಕನಾಗಿದ್ದಾನೆ. ಕವಿಗಳಿಗೆ ಮತ್ತು ಪದಗಾರುಡಿಗರಿಗೆ ಇರುವ ಬಲ ಅವರ ನಿರೂಪಣಾವಿಧಾನಕ್ಕೆ ಸಂಬಂಧಿಸಿದ್ದು. ಒಂದು ಮಧುಶಾಲೆಯ- ಅಲ್ಲಿಗೆ ಹೋಗುವ ಆ ಪರಿಸರವನ್ನು ಆಸ್ವಾದಿಸುವ ಬಗ್ಗೆ ಎಷ್ಟು ಭಿನ್ನರೀತಿಯಲ್ಲಿ ಯಾರಿಗೂ ಬೇಸರವಿಲ್ಲದಂತೆ ಪುನರುಕ್ತಿ ಮಾಡುತ್ತಾ ಹೋಗಬಹುದೆಂಬುದಕ್ಕೆ ಹರಿವಂಶ್ ರಾಯ್ ಬಚ್ಚನ್‌ರ ಮಹಾಕಾವ್ಯವೇ ಸಾಕ್ಷಿಯಲ್ಲವೇ?

ಕನ್ನಡದಲ್ಲಿ ಬೇಂದ್ರೆಯಾದಿಯಾಗಿ ಅನೇಕ ಪದಗಾರುಡಿಗರಿದ್ದಾರೆ. ಆದರೆ ಆ ಬಲವನ್ನು ಹಾಸ್ಯವ್ಯಂಗ್ಯಕ್ಕೆ ಅದ್ಭುತವಾಗಿ ಅಳವಡಿಸಿಕೊಂಡವರು ಬಹುಶಃ ಬಿಳಿಗಿರಿ, ವೈಎನ್‍ಕೆ ಮತ್ತು ಡುಂಡಿರಾಜ ಮಾತ್ರ. ಕೈಲಾಸಂ ಕೂಡಾ ಪದಗಳಜೊತೆ ಆಟವಾಡುತ್ತಿದ್ದರಾದರೂ ಅವರ ಹಾಸ್ಯ ಹೆಚ್ಚು ಆಗಿನ ಸಮಾಜದ ಕಟ್ಟಳೆಗಳ ಆಧಾರದ ಮೇಲೆ ಮತ್ತು ಮಧ್ಯತರಗತಿಯವರು ಬಳಸುತ್ತಿದ್ದ ಇಂಗ್ಲೀಷಿನ ಆಧಾರದ ಮೇಲೆ ಅತಿಭಾರ ಹೇರಿ ನಿಂತುಬಿಟ್ಟಿತ್ತು. ವೈಎನ್‍ಕೆಗೆ ಕೂಡಾ ಅವರ ಪನ್‍ಗೆ ಅದನ್ನು ಬರೆಯುವ ಪೆನ್‍ಗೆ ಇಂಗ್ಲೀಷ್ ಭಾಷೆಯ ಸಹಾಯ ಬೇಕಿತ್ತು. ಆದರೆ ಡುಂಡಿ ಕನ್ನಡದ ನುಡಿಗಟ್ಟಿನಲ್ಲೇ ಈ ಚಮತ್ಕಾರಗಳನ್ನು ಅದ್ಭುತವಾಗಿ ಮಾಡಬಲ್ಲ. ಮಾತು ಕ[ವಿ]ತೆ ಅನ್ನುವ ಅಂಕಣದಲ್ಲಿ ಇದರ ಬಗ್ಗೆ ಅವನು ಸಾಕಷ್ಟು ಪುರಾವೆಯನ್ನು ಒದಗಿಸಿದ್ದಾನೆ. ಎರಡು ಮಾತು ಕ[ವಿ]ತೆಯ ಸಂಕಲನವನ್ನು ಈಗಾಗಲೇ ಹೊರತಂದಿರುವ ಡುಂಡಿಯ ಲಲಿತ ಪ್ರಬಂಧಗಳ ಮೂರನೆಯ ಸಂಕಲನ ತ್ವರಿತಗತಿಯಲ್ಲಿ ಬರುತ್ತಿದೆ. ಪರವಾಗಿಲ್ಲ. ಬರಲಿ.

ಪರವಾಗಿಲ್ಲ ಎಂದು ಡುಂಡಿ ಹೇಳಿದರೂ ಅವನು ಸ್ವಲ್ಪಮಟ್ಟಿಗೆ ಸುಳ್ಳು ಹೇಳುತ್ತಿದ್ದಾನೆಂದೇ ನನ್ನ ಅನ್ನಿಸಿಕೆ. ಪರವಾಗಿಲ್ಲ ಅನ್ನುವ ಪದವನ್ನು ಬಗೆಯುತ್ತ [ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ ಅನ್ನುವ ಅರ್ಥದಲ್ಲಿ ಬಗೆ ಪದವನ್ನು ನಾನು ಇಲ್ಲಿ ಉಪಯೋಗಿಸುತ್ತಿಲ್ಲ] ಅದರ ಅರ್ಥ "ಸಾಧಾರಣ" [ಚಲೇಗಾ] ಅಥವಾ ನೊಂದು ಮುನಿಸಿ "ಬೇಡ" ಅನ್ನುವುದಕ್ಕೆ ಆ ಮಾತನ್ನು ಬಳಸಬಹುದು ಅಂತ ಅವ ವಿವರಿಸುತ್ತಾನೆ. ಆದರೆ ಪರವಾಗಿಲ್ಲ ಅನ್ನುವುದನ್ನು ಇನ್ನೂ ಬಗೆದರೆ ಪರವಾಗಿ-ಇಲ್ಲ [ವಿರೋಧವಾಗಿ ಇದ್ದೇವೆ] ಅಂತಲೂ ಆಗಬಹುದಲ್ಲವೇ ಅಂತ ಸವರ್ಣ ದೀರ್ಘರು ಕೇಳಬಹುದು. ಆ ಅರ್ಥದಲ್ಲೂ 'ಪರವಾಗಿಲ್ಲ', 'ಮಾತು ಕ[ವಿ]ತೆ', 'ಮತ್ತಷ್ಟು ಮಾತು ಕ[ವಿ]ತೆ' ಪುಸ್ತಕಗಳ ಪರವಾಗಿ ನಾವಿದ್ದೇವೆಯೇ ಹೊರತು ಪರವಾಗಿ-ಇಲ್ಲ ಅನ್ನುವುದಕ್ಕೆ ಡುಂಡಿಗೆ ಪರವಾನಗಿ ಇಲ್ಲ.

ಈ ಪುಸ್ತಕಗಳಲ್ಲಿನ ಹೆಚ್ಚಿನ ಪ್ರಬಂಧಗಳು ಅಂಕಣ ಬರಹಗಳಾಗಿರುವುದರಿಂದ ಆ ಪ್ರಕಾರಕ್ಕಿರುವ ಆಕರ್ಷಣೆ ಮತ್ತು ಮಿತಿಗಳನ್ನು ಇಲ್ಲಿ ಚರ್ಚಿಸುವುದು ಜರೂರಿಯಾಗುತ್ತದೆ. ಸುಮಾರಷ್ಟು ಕಡೆ ವೈಎನ್‍ಕೆಗೂ ಡುಂಡಿಗೂ ಕೆಲ ಸಮಾನ ಲಕ್ಷಣಗಳಿರುವುದರಿಂದ ವೈಎನ್‍ಕೆಯವರನ್ನು ಅವರು ದಿವಂಗತರಾಗಿದ್ದರೂ ಇಲ್ಲಿಗೆ ಎಳೆದು ತಂದು ಡುಂಡಿಯ ಪಕ್ಕದಲ್ಲಿ ನಿಲ್ಲಿಸಬೇಕೆನ್ನುವ ತವಕ ಆಗುವುದು ಸಹಜವೇ ಏನೋ. ಇಬ್ಬರೂ ಪದಗಳೊಂದಿಗೆ ಆಡುತ್ತಿದ್ದರು, ಹನಿಗಳನ್ನು ಬರೆದರು ಮತ್ತು ಅಂಕಣಕ್ಕಿಳಿದರು. ವೈಎನ್‍ಕೆ ತಮ್ಮ ಅಂಕಣವನ್ನು ಕೊನೆಯವರೆಗೂ ಮುಂದುವರೆಸಿದರಾದರೂ ಕವಿ-ತೆಗಳನ್ನು ಒಂದು ಹಂತದಲ್ಲಿ ನಿಲ್ಲಿಸಿಬಿಟ್ಟರು. ಡುಂಡಿ ಎರಡನ್ನೂ ಒಂದಕ್ಕೊಂದು ಪೂರಕವಾಗುವಂತೆ ಮುಂದುವರೆಸುತ್ತಿದ್ದಾನೆ. ಆದರೆ ನನ್ನ ಅನುಮಾನದ ಪ್ರಕಾರ ಭವಿಷ್ಯದಲ್ಲಿ ಸರಿಯಾಗುವುದಾದರೆ ಡುಂಡಿ ಕವಿತೆಬರೆಯುವುದನ್ನು ಮುಂದುವರೆಸಿ ಎಂದೋ ಒಂದು ದಿನ ಅಂಕಣದ ಶಿಸ್ತನ್ನು ಒಡೆಯುತ್ತಾನೆ-ಒದೆಯುತ್ತಾನೆ ಅನ್ನಿಸುತ್ತದೆ.

ಸೃಜನಶೀಲ ಬರವಣಿಗೆಯಲ್ಲಿ ತೊಡಗುವವರಿಗೆ ಅಂಕಣದ ಮಿತಿಯಲ್ಲಿ ಬರೆಯುವುದು ತುಸು ಕಷ್ಟವಾಗುತ್ತದೆ. ಅಂಕಣಬರಹಕ್ಕೆ ಅನೇಕ ಮಿತಿಗಳಿವೆ. ಆ ಮಿತಿಗಳಲ್ಲಿ ಸೃಜನಶೀಲ [ಕಥೆ, ಕಾದಂಬರಿ, ಕವಿತೆ ಇತ್ಯಾದಿ ಬರೆಯುವ] ಒಲವಿರುವವರನ್ನು ಹಿಡಿದಿಡುವುದು ಕಷ್ಟದ ಮಾತು. ಪ್ರತಿವಾರ ನಿಯಮಿತವಾಗಿ ಪದಮಿತವಾಗಿ ಬರೆಯಬೇಕಾದ ಅಂಕಣಗಳನ್ನು ನವನವೀನವಾಗಿಡಲು ಸುಲಭಮಾರ್ಗವೆಂದರೆ ಪ್ರಚಲಿತ ವಿಷಯಗಳ ಬಗೆಗೆ ಆಸಕ್ತಿಕರವಾಗಿ ಬರೆಯುವುದು. ಹೀಗಾಗಿ ಅಂಕಣ ಬರಹಗಳು ಪತ್ರಕರ್ತರಿಗೆ ಸುಲಭವಾಗಿ ಒಗ್ಗುವ ಮಾಧ್ಯಮ. ಯಾರೇನೇ ಅಂದರೂ ವೈಎನ್‍ಕೆ ಮೂಲತಃ ಪತ್ರಕರ್ತರಾಗಿದ್ದರಿಂದ ಅವರಿಗೆ ಕಾವ್ಯಕ್ಕಿಂತ ಹೆಚ್ಚಾಗಿ ಅವರ ವಂಡರ್ ಲೇಖನಗಳೇ ಒಗ್ಗಿ ಬಂದಿದ್ದವು. ಒಂದು ರೀತಿಯಲ್ಲಿ ವೈಎನ್‍ಕೆ ಬರಹಕ್ಕೊ ಖುಶ್‍ವಂತ್ ಸಿಂಗ್ ಬರಹಕ್ಕೂ ಪರ್ಯಾಯಗಳನ್ನು ನಾವು ಕಂಡುಹಿಡಿಯಬಹುದು. ಸಾಮಾನ್ಯವಾಗಿ ಆ ಬರಹಗಳಲ್ಲಿ ಎರಡು ವಿಷಯಗಳ ಚರ್ಚೆ ಮತ್ತು ಕಡೆಯಲ್ಲಿ ಒಂದು ಕೊನೆಸಿಡಿ ಇರುತ್ತಿತ್ತು. ಖುಶ್‍ವಂತ್ ಕೊನೆಸಿಡಿಗೆ ಇತರರು ಕಳಿಸಿದ ಜೋಕುಗಳನ್ನು ಹಾಕುತ್ತಾರೆ. ವೈಎನ್‍ಕೆ ಸುಮ್ಮನೆ ಸಿಡಿಗಳನ್ನು ಬರೆಯುತ್ತಿದ್ದರು. ಅದೇ ಫಾರ್ಮಾಟನ್ನು ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಬಳಸುತ್ತಾರೆ. ಆದರೆ ಭಟ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಕೊನೆ ಸಿಡಿಯನ್ನು 'ಸಾಲದ ಜೋಕು'ಗಳಿಗೆ ಅಂಕಿತಗೊಳಿಸಿಬಿಟ್ಟಿದ್ದಾರೆ. ಜೋಕುಗಳು ಎಂದಿಗೂ ಸಾಲದು ಅನ್ನುವವರಿಗೆ ಇದನ್ನು ಎರವಲಾಗಿ ಅವರು ನೀಡುತ್ತಿದ್ದಾರೆ. ಡುಂಡಿಯೂ ಸ್ವಲ್ಪ ಮಟ್ಟಿಗೆ ಆ ಫಾರ್ಮಾಟನ್ನು ಸಾಲವಾಗಿ ಪಡೆದು ತನ್ನ ಅಂಕಣದಲ್ಲಿ 'ಮುಗಿಸುವ ಮುನ್ನ' ಅನ್ನುವ ಸಣ್ಣ ಭಾಗವನ್ನು ಇರಿಸಿಕೊಂಡಿದ್ದಾನೆ. ಪತ್ರಕರ್ತರಾಗಿರದೆಯೇ ಕನ್ನಡದಲ್ಲಿ ಅತ್ಯಂತ ಶಿಸ್ತಿನಿಂದ ಅಂಕಣಗಳನ್ನು ಸಫಲವಾಗಿ ಬರೆದುಕೊಂಡು ಹೋದವರು ಹಾ.ಮಾ.ನಾಯಕರು. ಆದರೆ ಅವರು ಸೃಜನಶೀನ ಬರವಣಿಗೆಯನ್ನ ಕೈಗೊಳ್ಳಲಿಲ್ಲ ಎನ್ನುವುದನ್ನು ಗಮನಿಸಬೇಕು. ಹಾ.ಮಾ.ನಾಯಕರು ತಮ್ಮ ಕಾಲದಲ್ಲಿ ಅನೇಕ ನಿಯತಕಾಲಿಕಗಳಿಗೆ ಸಮಾನಾಂತರವಾಗಿ ಆಸಕ್ತಿಯುಂಟು ಮಾಡುವ ಬರಹಗಳನ್ನು ಕೊಟ್ಟರು.

ಈಚಿನ ಕಾಲದಲ್ಲಿ ಸೃಜನಶೀಲ ಲೇಖರರೆನ್ನಿಸಿಕೊಂಡವರಲ್ಲಿ ಅಂಕಣಗಳನ್ನು ಸಫಲವಾಗಿ ಬರೆದವರು ದಿವಾಕರ್ ಮತ್ತು ಜಯಂತ ಕಾಯ್ಕಿಣಿ. ಎಂದೂ ತೋರದ ಶಿಸ್ತನ್ನು ದಿವಾಕರ್ ತಮ್ಮ ಉದಯವಾಣಿ ಅಂಕಣದಲ್ಲಿ ತೋರಿದರು. ಆ ಲೇಖನಗಳೆಲ್ಲ "ನಾಪತ್ತೆಯಾದ ಗ್ರಾಮಫೋನು" ಸಂಕಲನದಲ್ಲಿ ಒಂದುಗೂಡಿ ಬಂದಿವೆ. ಜಯಂತ ತನ್ನ "ಬೊಗಸೆಯಲ್ಲಿ ಮಳೆ" ಅಂಕಣವನ್ನು ಜಯಶಾಲಿಯಾಗಿ ಕೆಲಕಾಲ ನಡೆಸಿ ತುಸು ಸುಸ್ತಾದವನಂತೆ ನಿಲ್ಲಿಸಿಬಿಟ್ಟ. ಡುಂಡಿಯ ಅಂಕಣವನ್ನು ಚರ್ಚಿಸುವ ಮೊದಲು ಈ ಇಬ್ಬರ ಬರವಣಿಗೆಯ ಲಕ್ಷಣಗಳನ್ನು ಸ್ವಲ್ಪ ಪರಿಶೀಲಿಸುವುದು ಅವಶ್ಯವೇನೋ.

ದಿವಾಕರ್ ಬರಹದಲ್ಲಿ ಕಾಣುವುದು ಅವರ ಆಸಕ್ತಿಯ ವಿಸ್ತಾರ. ಹೀಗಾಗಿ ಅವರು ಸಮಕಾಲೀನ ವಿಷಯಗಳ ಬಗ್ಗೆ ಬರೆಯದೇಹೋದರೂ ಅವರಿಗೆ ತಮ್ಮ ಓದಿನ/ನೆನಪಿನ ಭಂಡಾರದ ಆಧಾರದ ಮೇಲೆಯೇ ಅನೇಕ ಪ್ರಬಂಧಗಳನ್ನು ಬರೆಯಲು ಸಾಧ್ಯವಾಯಿತು. ಆದರೆ ಅವರ ಆಸಕ್ತಿಗಳ ವಿಸ್ತಾರವೇ ಅವರನ್ನು ಅಂಕಣಬರಹ ಮುಂದುವರೆಸುವುದನ್ನು ತಡೆಯಿತು ಅನ್ನಿಸುತ್ತದೆ. ಹೀಗಾಗಿ ಕೆಲಕಾಲದ ನಂತರ ದಿವಾಕರ್ ತಮ್ಮ ಪ್ರೀತಿಯ ಕೆಲಸಗಳಾದ ಕಥೆ ಬರೆಯುವ, ವಿಶ್ವ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದತ್ತ ಹೆಚ್ಚಿನ ಒಲವು ತೋರಿದರು.

ಜಯಂತನ ಬರವಣಿಗೆಯಲ್ಲಿ ನಮಗೆ ಅಷ್ಟು ಹೆಚ್ಚಾಗಿ ಸಮಕಾಲೀನ ವಿಷಯಗಳ ಪ್ರಸ್ತಾಪ ಸಿಗುವುದಿಲ್ಲ. ಆದರೆ ಅವನ ಬರವಣಿಗೆ ಪುಟ್ಟ ಪುಟ್ಟ ವಿವರಗಳನ್ನು ದೃಶ್ಯದಂತೆ ಸೆರೆಹಿಡಿದಿಡುವ ಶಬ್ದಮಾಲೆಯಾಗಿ ನಮಗೆ ದಕ್ಕಿತು. ಗಮ್ಮತ್ತಿನ ಮಾತೆಂದರೆ ಜಯಂತ ಅಂಕಣಕ್ಕಿಳಿದಾಗಿನಿಂದ ಅವನು ಬರೆಯುತ್ತಿದ್ದ ಕವಿತೆಗಳ ಸಂಖ್ಯೆ ಕುಂಠಿತವಾಯಿತು. ಕವಿತೆಗೆ ಉಪಯೋಗಿಸುತ್ತಿದ್ದ ಕಚ್ಚಾಮಾಲನ್ನು ಜಯಂತ ಈ ಬರಹದಲ್ಲಿ ಉಪಯೋಗಿಸಿಬಿಟ್ಟ ಅಂತ ಅನ್ನಿಸುತ್ತದೆ. ಅವನ ಅಂಕಣ ಬರಹಗಳು ಅವನ ಕವಿತೆಗಳ ಹಾಗೆಯೇ ದೃಶ್ಯಾವಳಿಯಾಗಿ ಇರುತ್ತಿದ್ದವು.

ಡುಂಡಿಯ ಮನೋಧರ್ಮ ಮೇಲೆ ಚರ್ಚಿಸಿದ ಎಲ್ಲ ಮಹಾಶಯರಿಗಿಂತ ಭಿನ್ನವಾಗಿದೆ. ಡುಂಡಿ ಮೊದಲಿನಿಂದಲೂ ಸೃಜನಶೀಲತೆಯ ಗಾಂಭೀರ್ಯವನ್ನು ಮೈಗೂಡಿಸಿಕೊಂಡವನಾದರೂ ಜನಪ್ರಿಯತೆಯ ನಶೆಗೆ ತನ್ನನ್ನು ಒಗ್ಗಿಸಿಕೊಂಡವನು. ಹಾಗೂ ತುಂಟತನದ ವ್ಯಕ್ತಿತ್ವದವನು. ಅದು ತಪ್ಪು ಅನ್ನುವ ಭಾವದಲ್ಲಿ ನಾನು ಹೇಳುತ್ತಿಲ್ಲ, ಆದರೆ ಅವನ ಬರವಣಿಗೆಯನ್ನು ಬಹುಶಃ ಈ ರೀತಿ ರೂಪಗೊಳ್ಳಲು ಅವನು ಅನುಮತಿಸಿದ. ಹೀಗಾಗಿ, ಒಳ್ಳೆಯ ನಾಟಕಗಳನ್ನೂ ಅದ್ಭುತ ಇಡಿಗವನಗಳನ್ನೂ ಬರೆದ ಡುಂಡಿಗೆ ನಿಂತ ಹಣೆಪಟ್ಟಿ ತುಂಟ ಹನಿಗವಿಯದ್ದು. ಲಕ್ಷ್ಮಣರಾವ್, ವಿ.ಜಿ.ಭಟ್ಟರಾದಿಯಾಗಿ ಅನೇಕರು ಮಿನಿಗಳನ್ನು ಬರೆದರೂ, ಸಂಖ್ಯೆಯ ದೃಷ್ಟಿಯಿಂದ ಡುಂಡಿ ಎಲ್ಲರನ್ನೂ ಮೀರಿಸಿಬಿಡುತ್ತಾನೆ. ಟೆಂಡೂಲ್ಕರನ ಬ್ಯಾಟಿಂಗಿನ ಅಂಕಿಅಂಶಗಳು ಅವನ ಬೌಲಿಂಗ್ ಮತ್ತು ಹಿಡಿದ ಕ್ಯಾಚುಗಳ ಅಂಕಿಅಂಶಗಳನ್ನು ಹಿಂದೆ ತಡೆದು ನಿಲ್ಲಿಸುವಹಾಗೆ ಡುಂಡಿಯ ಹನಿಗವನಗಳು ಅವನ ಇತರ ಸಾಹಿತ್ಯವನ್ನು ಓದುಗರ/ವಿಮರ್ಶಕರ ದೃಷ್ಟಿಯಿಂದ ದೂರಕ್ಕೆ ಸರಸಿ ನಿಲ್ಲಿಸಿಬಿಡುತ್ತದೆ. ಹೀಗಾಗಿ, ನಮ್ಮ ಮನಃಪಟಲದಲ್ಲಿ ಅವನು ಹನಿಗವಿಯಾಗಿ ನಿಂತು ಬಿಟ್ಟಿದ್ದಾನೆ. ಎಲ್ಲೋ ಒಂದು ಕಡೆ ಹನಿಗವಿಯ ಪಟ್ಟವನ್ನು ಅವನು ಖುಷಿಯಿಂದ ಸ್ವೀಕರಿಸಿ ಅದನ್ನು ಅಲ್ಲಗಳೆಯಲು ಪ್ರಯತ್ನಿಸದೆಯೇ ಅದನ್ನು ಆನಂದಿಸತೊಡಗಿದ ಅಂತ ನನಗನ್ನಿಸುತ್ತದೆ. ಅವನ ಅಂಕಣ ಬರಹಗಳನ್ನು ಈ ಹಿನ್ನೆಲೆಯಿಂದ ನೋಡಬೇಕು.

ಬಹುಶಃ ಡುಂಡಿ ಅಂಕಣಬರೆಯಲು ಒಪ್ಪಿದ್ದೇ ಈ ಹಣೆಪಟ್ಟಿಯನ್ನು ತುಸು ಕಡಿಮೆಗೊಳಿಸಲೆಂದೇ ಇರಬಹುದು. ಜೊತೆಗೆ ಒಂದು ಜನಪ್ರಿಯ ಪತ್ರಿಕೆಯ ಆಹ್ವಾನದ ನಶೆಯನ್ನು ಸುಲಭವಾಗಿ ನಿರಾಕರಿಸಲು ಸಾಧ್ಯವಿಲ್ಲ. ಪ್ರತಿವಾರ ಲಕ್ಷಾಂತರ ಓದುಗರಿಗೆ ತಲುಪುವ ಈ ಪ್ರಕ್ರಿಯೆಯಿಂದಾಗಿ ಮೊದಲೇ ಜನಪ್ರಿಯನಾಗಿದ್ದ ಡುಂಡಿ ಮತ್ತಷ್ಟು ಜನಪ್ರಿಯನಾಗಲು ಸಹಾಯ ಮಾಡಿತು. ತಮಾಷೆಯೆಂದರೆ, ಇದರಿಂದ ಅವನಿಗೆ ಅಂಕಣಕಾರನೆಂಬ ಹಣೆಪಟ್ಟಿ ಬರಲೇ ಇಲ್ಲ. ಬದಲಿಗೆ ಅವನು ಹನಿಗವಿ ಅನ್ನುವ ಮಾತು ದೃಢೀಕರಣಗೊಳ್ಳುತ್ತಾ ಹೋಯಿತು. ಇದಕ್ಕೆ ಅವನು ಅಂಕಣದಲ್ಲಿ ಬಳಸಿದ ತನ್ನ ಕವಿತೆಗಳೆಷ್ಟು ಕಾರಣವೋ, ತನ್ನ ಹೆಸರ ಕೆಳಗೆ ಸಂಪಾದಕರು ಲೇಪಿಸಿದ 'ಖ್ಯಾತ ಹನಿಗವಿ' ಅನ್ನುವ ಪಟ್ಟಿಯೂ ಅಷ್ಟೇ ಕಾರಣವಿರಬಹುದು. ಜನಪ್ರಿಯತೆಯ ಪ್ಯಾರಡೈಮ್‍ನಲ್ಲಿ ಬರೆಯಲಾರಂಭಿಸಿದ ಡುಂಡಿ ಅದಕ್ಕೆ ತನ್ನನ್ನು
ಒಪ್ಪಿಸಿಕೋಳ್ಳುತ್ತಾ ಹೋಗಿರುವುದು ನಮಗೆ ಈ ಎಲ್ಲಪ್ರಬಂಧಗಳನ್ನು ಒಟ್ಟಿಗೆ ಓದಿದಾಗ ಮನವರಿಕೆಯಾಗುತ್ತದೆ.

ಈ ಪುಸ್ತಕಗಳಲ್ಲಿನ ಪ್ರಬಂಧಗಳೆಲ್ಲವೂ ಲಲಿತ ಪ್ರಬಂಧಗಳೇ.. ತೆಳ್ಳಗೆ ಡುಂಡಿಯಹಾಗೆಯೇ ಇವೆ. ವಿಷಯ ವಿಸ್ತಾರದಲ್ಲಿ ಇವುಗಳಲ್ಲಿ ನಾಲ್ಕು ಭಿನ್ನ ಸೆಲೆಗಳಿರುವುದನ್ನು ನಾವು ಕಾಣಬಹುದು.

ಮೊದಲನೆಯ ಸೆಲೆ ಅನುಭವಾತ್ಮಕವಾದದ್ದು. ತಮ್ಮ ದಿನನಿತ್ಯದ ಆಗುಹೋಗುಗಳೊಂದಿಗೆ ಪದಚಮತ್ಕಾರವನ್ನು ಲೇಪಿಸಿ ಬರೆದವುಗಳು. ಉದಾಹರಣೆಗೆ ಅವನ 'ಸದ್ಯ' ಅನ್ನುವ ಲೇಖನ ಆ ಪದವನ್ನು ನಾವು ಉಪಯೋಗಿಸುವ ನಾನಾ ಸಂದರ್ಭಗಳ ಅರ್ಥವಂತಿಕೆಯನ್ನು ಮೆಚ್ಚುತ್ತಾ ಅದನ್ನು ಉಪಯೋಗಿಸುವ ಅರ್ಥಹೀನತೆಯನ್ನೂ ಲೇವಡಿ ಮಾಡುತ್ತಾ ಮುಂದುವರೆಯುತ್ತದೆ. ಅದೇ ರೀತಿಯಲ್ಲಿ 'ಪಿ.ಯೂ. ಕಾಯಿಲೆ', 'ಸಿಟಿ ಬಸ್ಸಲ್ಲಿ ಸೀಟು ಹಿಡಿಯುವುದು', 'ಹಲ್ಲೆ, ಹಲ್ಲೆ..', 'ಪ್ರೀತಿಯ ಬಳ್ಳಿ', 'ಹೊಲಬನರಿಯದ ಮಾತು..', ಈ ಎಲ್ಲವೂ ಅನುಭವದ ಸೆಲೆಗೆ ಸಂದಿದವು. ಇಲ್ಲಿ ಡುಂಡಿ ತನ್ನ ಅನುಭವವನ್ನು ತನ್ನದೇ ಭಿನ್ನ ರೀತಿಯಲ್ಲಿ, ಹಲವು ಬಾರಿ ತನ್ನನ್ನೇ ಲೇವಡಿ ಮಾಡಿಕೊಳ್ಳುತ್ತಾ ಬೆಚ್ಚಗೆ ಬರೆಯುತ್ತಾನೆ.

ಎರಡನೆಯ ಸೆಲೆ ಬಾಲ್ಯ ಮತ್ತು ನೆನಪುಗಳಿಗೆ ಸಂಬಂಧಪಟ್ಟದ್ದು. ಈ ಸೆಲೆಯನ್ನರಸಿಹೋದಾಗ ಡುಂಡಿ ತನ್ನ ಹಳ್ಳಿಗೆ ಹೋಗುತ್ತಾನೆ, ಬಾಲ್ಯವನ್ನು ನೆನೆಯುತ್ತಾನೆ. ಹಿಂದೆ ಓದಿದ ಪುಸ್ತಕಗಳನ್ನು ಪಾಠ್ಯವನ್ನು ನೆನಪು ಮಾಡಿಕೊಳ್ಳುತ್ತಾನೆ. ಹಳ್ಳಿಯ ಶಾಲೆಗಳ ಸ್ಥಿತಿಗತಿಗಳನ್ನು ಚರ್ಚಿಸುತ್ತಾನೆ. ಕೃಷಿಯ ಬಗ್ಗೆ ಮಾತನಾಡುತ್ತಾನೆ. ಹಳ್ಳಿಯ ಜೀವನದ ಬಗ್ಗೆ ತುಸು ದೂರದಿಂದ ನೋಡುತ್ತಾನೆ. ಈ ಸೆಲೆಯಲ್ಲಿ 'ನೆನಪೆಂಬ ಆನೆಯನ್ನೇರಿ...', 'ಮಳೆಗಾಲದ ವಿರಾಮದಲ್ಲಿ ರಾಮಾಯಣದ ರಸಗವಳ', 'ಯಾರಕಿವಿಯಲ್ಲೂ ಒಂಟಿ ಕಾಣದೇ...', 'ಕಾವ್ಯದ ಗುಂಗಿನಲ್ಲಿ..' ಈ ಪ್ರಬಂಧಗಳು ಎದ್ದು ನಿಲ್ಲುತ್ತವೆ. ಇಲ್ಲಿ ಡುಂಡಿ ತಾನು ಹೇಳಬೇಕಾದ ವಿಚಾರಗಳಿಗೆ ಹಳೆಯ ನೆನಪುಗಳ ಲೇಪ ಹಾಕಿ ತುಸು ಹಾಸ್ಯ ಬೆರೆಸಿ ಬನಾರಸಿ ಪಾನ್‍ನಂತೆ ನಮಗೆ ಅಗಿಯಲು ಗ್ರಾಸ ಒದಗಿಸಿಕೊಡುತ್ತಾನೆ.

ಈ ಎರಡೂ ಸೆಲೆಗಳಲ್ಲಿ ಬರೆದಾಗ ಡುಂಡಿ ಆತ್ಮೀಯನಾಗಿ, ಅದ್ಭುತ ಗದ್ಯ ಲೇಖನಾಗಿ, ಗದ್ಯದಲ್ಲಿ ಯಾರಿಗೂ ಅರಿವಾಗದಂತೆಯೇ ತನ್ನ-ಇತರರ ಪದ್ಯಗಳನ್ನು ನೇಯುವ ಕೆಲೆಗಾರನಾಗಿ ಕಾಣುತ್ತಾನೆ. ಈ ಸೆಲೆಯ ಬರವಣಿಗೆಗಳು ಪತ್ರಿಕೆಯಲ್ಲಿ ಓದಿದಾಗ ಎಷ್ಟು ಪ್ರಭಾವಶಾಲಿ ಮತ್ತು ಆಕರ್ಷಕವಾಗಿರುತ್ತದೋ ಇಡಿಯಾಗಿ ಒಟ್ಟಿಗೇ ಓದಿದಾಗಲೂ ಅಷ್ಟೇ ಆಕರ್ಷಕವಾಗಿ ಪ್ರಭಾವಶಾಲಿಯಾಗಿರುತ್ತವೆ.

ಮೂರನೆಯ ಸೆಲೆ ಬೋಧನಾತ್ಮಕವಾದದ್ದು. ಇವುಗಳನ್ನೂ ಡುಂಡಿ ತನ್ನ ಅನುಭವಗಳ ಆಧಾರದ ಮೇಲೆ ಬರೆಯುತ್ತಾನಾದರೂ ಈ ಅನುಭವಗಳು ತುಸುಮಟ್ಟಿಗೆ ಕಹಿಯಾದ ಅನುಭವಗಳಾಗಿರುತ್ತವೆ. ಹೀಗಾಗಿ ಈ ಇಂಥ ಅನುಭವಗಳನ್ನು ಹೇಗೆ ಉತ್ತಮಗೊಳಿಸಬಹುದಿತ್ತು ಅನ್ನುವ ತವಕ ಈ ಸೆಲೆಯ ಬರವಣಿಗೆಯಲ್ಲಿ ಕಂಡುಬರುತ್ತದೆ. ಈ ಸೆಲೆಯಲ್ಲಿ ಡುಂಡಿ ತನ್ನ ದ್ವಂದ್ವಗಳನ್ನು ಹಂಚಿಕೊಳ್ಳುತ್ತಾನೆ. ಹನಿಗವಿ ಅನ್ನುವ ಪಟ್ಟಿಯನ್ನು ಆಸ್ವಾದಿಸುತ್ತಲೇ ಅದನ್ನು ಕಾವ್ಯವೆಂದು ಗುರುತಿಸಬೇಕೆಂಬ ಅದನ್ನು ಬರೆಯುವವರೂ ಗಂಭೀರ ಸಾಹಿತಿಗಳು ಅದನ್ನು ತುಚ್ಛವಾಗಿ ಕಾಣಬಾರದು ಎಂದು ಸಮರ್ಥಿಸಿಕೊಳ್ಳುತ್ತಲೇ ತಾನೂ ಸಹ 'ಹನಿಗವಿ'ಯಷ್ಟೇ ಅಲ್ಲದೇ ಅದಕ್ಕೂ ಮಿಂಚಿ ಸಾಹಿತ್ಯಾಸಕ್ತಿ ಉಳ್ಳವನು ಅನ್ನುವ ಮಾತನ್ನು ನಮಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾನೆ. ಕವಿಗಳನ್ನು-ಸಾಹಿತಿಗಳನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಜನರ ಒಟ್ಟಾರೆ ವರ್ತನೆಯಬಗ್ಗೆ ಟೀಕೆ ಮಾಡುತ್ತಾನೆ. ಒಂದು ಕರೆಯ ಮೇರೆಗೆ ಹೋದವರಿಗೆ ಪ್ರಯಾಣದ ಖರ್ಚೂ ಅಥವಾ ಗೌರವದ ಸಂಭಾವನೆಯನ್ನೂ ಕೊಡದ ನಿಯೋಜಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾನೆ. ಹಾಗೂ ಕಾರ್ಯಕ್ರಮಗಳನ್ನು ಹೇಗೆ ನಿಯೋಜಿಸಬೇಕೆಂಬ ಬಗ್ಗೆ ಸಲಹೆಗಳನ್ನು ನೀಡುತ್ತಾನೆ. ಈ ಸೆಲೆಯಲ್ಲಿ 'ಹೊಗಳಿಕೆ ತೆಗಳಿಗೆ ಗಳಿಕೆ', 'ಕರತಾಡನದ ಬದಲಿಗೆ ಕೆರತಾಡನ', 'ಮಾತು ಮಾತು ಮಥಿಸಿದರೆ..', 'ಬೆಳಿಗ್ಗೆ ಏಳುವುದಕ್ಕೆ ಅಲಾರಂ..', 'ನೀತಿಗೆಟ್ಟರೂ ಚಿಂತೆಯಿಲ್ಲ..', 'ಎಲೆಮರೆಯ ಕಾಯಾಗಿ...' ಈ ರೀತಿಯ ಬರಹಗಳು ಬರುತ್ತವೆ. ಇಲ್ಲಿ ಡುಂಡಿ ತನ್ನ ಸಹಜ ಶೈಲಿಯನ್ನು ಕಳೆದುಕೊಂಡುಬಿಡುತ್ತಾನೇನೋ ಅಂತ ಒಮ್ಮೊಮ್ಮೆ ಆತಂಕ ಉಂಟಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅವನಿಗೆ ಯಾವುದೋ ಅಸಮಾಧಾನವಿದೆ, ಅದನ್ನು ಅವನು ಓದುಗರೊಂದಿಗೆ ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಅನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಾದರೂ, ಆ ಅಸಮಾಧಾನ ತೀವ್ರ ವಿಷಾದದಿಂದ ಕೂಡಿದ್ದಲ್ಲ ಅಂತಲೂ ಅನ್ನಿಸುತ್ತದೆ. ಅನುಭವ ತೀವ್ರ ವಿಷಾದದಿಂದ ಕೂಡಿದ್ದೇ ಆಗಿದ್ದರೆ, ಅದರಿಂದ ಭಿನ್ನ ರೀತಿಯ ಡಾರ್ಕ್ ಹ್ಯೂಮರ್ ಬರುತ್ತಿತ್ತು. ಈ ಥರದ ಡಾರ್ಕ್ ಹ್ಯೂಮರ್‍ನ ಉತ್ತಮ ಉದಾಹರಣೆಯೆಂದರೆ ಲೈಫ್ ಇಸ್ ಬ್ಯೂಟಿಫುಲ್ ಅನ್ನುವ ಇಟಾಲಿಯನ್ ಸಿನೇಮಾ. ಆದರೆ ಡುಂಡಿಗೆ ಅಷ್ಟು ತೀವ್ರ ವಿಷಾದವೂ ಇಲ್ಲ. ಅದೇ ಸಮಯಕ್ಕೆ ಅವನಿಗೆ ಈ ಅಸಮಾಧಾನವನ್ನು ಲಘುವಾಗಿ ಎತ್ತಿ ಲೇವಡಿ ಮಾಡಿ ಬಿಸಾಡುವ ಮನಸ್ಸೂ ಇಲ್ಲ. ಅಂಕಣದ ತುರ್ತಿಲ್ಲದಿದ್ದರೆ ಬಹುಶಃ ಡುಂಡಿ ಈ ವಿಷಯದ ಬಗ್ಗೆ ಬರೆಯುತ್ತಲೇ ಇರಲಿಲ್ಲ - ಅಥವಾ ಅದನ್ನೊಂದು ಚುಟುಕವನ್ನಾಗಿಸಿ ಕೈತೊಳೆದುಕೊಂಡು ಬಿಡಿತ್ತಿದ್ದ ಅನ್ನಿಸುತ್ತದೆ. ಆದರೆ ಅಂಕಣ ಬರವಣಿಗೆಯ ತುರ್ತಿನಿಂದಾಗಿ ಅದಕ್ಕೂ ಗದ್ಯರೂಪ ಕೊಡುವ ಅನಿವಾರ್ಯತೆಗೆ ಅವನು ಒಳಗಾಗಿ ಒಮ್ಮೊಮ್ಮೆ ಇಂಥ ಪ್ರಬಂಧವನ್ನು ಬರೆದು ಬಿಡುತ್ತಾನೆ.

ನಾಲ್ಕನೆಯದು ಜನಪ್ರಿಯತೆಯ ದಾಕ್ಷಿಣ್ಯದ ಸೆರೆಗೊಳಗಾದವು. ಈ ಥರಹದ ಬರವಣಿಗೆಗಳು ಪ್ರಾರಂಭವಾಗುವುದೇ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಯಿಂದ. ಈ ಶೈಲಿಯ ಬರಹಗಳ ಬಗ್ಗೆ ಡುಂಡಿ ತುಸು ಜಾಗರೂಕನಾಗಿರಬೇಕು ಅನ್ನಿಸುತ್ತದೆ. ದೊಡ್ಡ ಕವಿತೆ ನಾಟಕಗಳಿಂದ ಮಿನಿ ಕವಿತೆಗಳತ್ತ ವಾಲಿದಂತೆಯೇ ಈ ಶೈಲಿಯ ಲೇಖನಗಳತ್ತ ವಾಲುವ ಅಪಾಯ ನಮಗೆ ಸಾಕಷ್ಟು ಈ ಬರವಣಿಗೆಯಲ್ಲಿ ಕಾಣಿಸುತ್ತದೆ. ಈ ಟೆಂಡೆಂನ್ಸಿಯ ಲಕ್ಷಣಗಳನ್ನು ಮುನ್ನಾಭಾಯಿ ಲಕ್ಷಣಗಳೆಂದು ಕರೆಯೋಣ. ಹಲ್ಲಿನ ನೋವಿನ ಬಗ್ಗೆ ಬರೆದ ಯಶಸ್ವಿ ಪ್ರಬಂಧಕ್ಕೆ ಬಂದ ಕರೆಗಳ ಫಲವಾಗಿ ಮುಂದಿನ ಅಂಕಣವನ್ನು ಕಿವಿಗೆ ಸಮರ್ಪಿಸುವುದು.. ಅರೆರೆ ನಾನು ಪಂಚೇಂದ್ರಿಯಗಳ ಬಗೆಗೂ ಬರೆಯಬಹುದಲ್ಲಾ ಅನ್ನುವ ಆಮಿಷಕ್ಕೆ ಒಳಗಾಗುವುದು, ಮತ್ತು ಮೊಬೈಲಿನ ಮೇಲೆ ಕರೆ ನೀಡಿ ಮೆಚ್ಚಿಕೊಂಡವರ ಫರ್ಮಾಯಿಶ್ ಪೂರೈಸಲು ಪ್ರಯತ್ನಿಸುವುದು ಮುನ್ನಾಭಾಯಿ ಲಕ್ಷಣಗಳು. ಒಮ್ಮೊಮ್ಮೆ ಮುನ್ನಭಾಯಿಯಿಂದ ಲಗೇ ರಹೋಗೆ ಪಯಣಿಸಿದಂತೆ ಇವು ಜಯಶಾಲಿಯಾಗಬಹುದಾದರೂ ಈ ಮಾರ್ಗದಲ್ಲಿ ಅಪಾಯವೇ ಹೆಚ್ಚು. ಡುಂಡಿ ಈ ಮಾರ್ಗದಲ್ಲಿ ಹಲವು ಬಾರಿ ಪಯಣಿಸುತ್ತಿದ್ದಾನೆ ಅನ್ನಿಸುತ್ತಿರುವುದರಿಂದ ಈ ಮಾತನ್ನು ಹೇಳುವ ತುರ್ತು ಕಾಣಿಸುತ್ತಿದೆ.

ಸೃಜನಶೀಲ ಬರಹಗಾರರು ಜನರ ಬೇಡಿಕೆಯನ್ನ ಮನಸ್ಸಿನಲ್ಲಿಟ್ಟು ಬರೆಯುತ್ತಾ ಹೋದಾಗ ತಮ್ಮ ಸಹಜ ಬಲವನ್ನು ಕಳೆದುಕೊಂಡುಬಿಡುತ್ತಾರೆ. ತಮ್ಮ ಬರವಣಿಗೆಗೆ ಒಂದು ಓದುಗವಲಯವನ್ನು ನಿರ್ಮಿಸುವುದೇ ಸೃಜನಶೀಲತೆಯ ಮುಖ್ಯ ಲಕ್ಷಣ. ಡುಂಡಿ ಆ ಕೆಲಸವನ್ನು ತನ್ನ ಮಿನಿ-ಚುಟುಕುಗಳ ಮೂಲಕ ಮಾಡಿದ್ದಾನೆ. ಅದೇ ದೃಕ್ಪಥವನ್ನಿಟ್ಟುಕೊಂಡರೆ ಅಂಕಣದ ಬಂಧನದಿಂದ ಮುಕ್ತನಾಗಿ ಬರೆಯುವ ಸಾಹಸವನ್ನು ಅವನು ಮಾಡಬಲ್ಲ. ಅಂಕಣ ಬರೆಯುವುದು ತಪ್ಪಲ್ಲ. ಆದರೆ ಎಲ್ಲ ಸೃಜನಾತ್ಮಕ ಚೈತನ್ಯವೂ ಅಂಕಣ ಬರಹ ಹೀರಿಬಿಟ್ಟರೆ ಅದರಿಂದ ನಷ್ಟವಾಗುವುದು ಸಹಜ. ಅಂಕಣಕಾರನನ್ನು ಪಡೆಯುವ ಹುಮ್ಮಸ್ಸಿನಲ್ಲಿ ಕವಿಯನ್ನು ಕಳೆದುಕೊಳ್ಳುವ ಅಪಾಯಕ್ಕೆ ನಾವು ಒಳಗಾಗಬಾರದು ಅನ್ನುವುದು ನನ್ನ ಕಳಕಳಿಯ ಕೋರಿಕೆ. ಬದ್ಧತೆ ಅನ್ನುವುದು ಬಂಧನ ಅಂತ ಹಿಂದೊಮ್ಮೆ ಕವಿ ಕೆವಿ ತಿರುಮಲೇಶರು ಹೇಳಿದ್ದರು. ಹೇಳಬೇಕಾದ ವಿಷಯಕ್ಕೆ ತಕ್ಕ ಫಾರ್ಮಾಟನ್ನು ಆರಿಸಿಕೊಳ್ಳುವ ಸೃಜನಶೀಲ ಹಕ್ಕನ್ನು ಫಾರ್ಮಾಟಿಗೆ ತಕ್ಕಂತೆ ಬರೆಯುವ ಬಂಧನಕ್ಕೆ ಬಲಿಕೊಡುವುದರಿಂದ ನಷ್ಟವೇ ಹೆಚ್ಚು. ಒಮ್ಮೊಮ್ಮೊ ಪ್ರೇಯಸಿಯ ತೋಳಿನ ಬಂಧನಕ್ಕೆ ನಾವುಗಳೇ ಆಸಕ್ತಿಯಿಂದ ನಮ್ಮನ್ನು ಒಡ್ಡಿಕೊಳ್ಳುವಂತೆ ಈ ರೀತಿಯ ಫಾರ್ಮಾಟಿನ ಜೊತೆ ಫ್ಲರ್ಟ್ ಮಾಡಿದರೂ ಅದರಿಂದ ಮುಕ್ತರಾಗುವ, ಸ್ವಾತಂತ್ರ ವೀರರಾಗುವ ಖುಷಿಯನ್ನೂ ನಾವು ಕಾಯ್ದುಕೊಳ್ಳಬೇಕಾಗಬಹುದು. ಹೀಗಾಗಿ ಇಷ್ಟೊಂದು ಪ್ರಬಂಧಗಳನ್ನು ಬರದಿರುವ ಡುಂಡಿ ಸ್ವಲ್ಪ ಬ್ರೇಕ್ ಪಡೆದರೆ ನಷ್ಟವೇನೂ ಆಗುವುದಿಲ್ಲವೇನೋ. ಮೂಲತಃ ಸೃಜನಾತ್ಮಕ, ಕಲಾತ್ಮಕ ಲೇಖಕನಾಗಿರುವ ಡುಂಡಿ ಮತ್ತೇನಾದರೂ ಹೊಸ ಚೇಷ್ಟೆಯನ್ನು ಮಾಡಿ ನಮ್ಮನ್ನೆಲ್ಲಾ ರಂಜಿಸಲಿ ಅನ್ನುವು ಹಾರೈಕೆಯಿಂದ ಈ ಮಾತನ್ನು ಹೇಳುತ್ತಿದ್ದೇನೆ.

ಕಾವೇರುತ್ತಿರುವ ಕಾವೇರಿಯ ವಿವಾದದ ನಡುವೆ ಓದಲು ಸಿಕ್ಕ ಈ ತಿಳಿಗಾಳು ಇಂದಿಗೂ, ಎಂದಿಗೂ ಎಂದೆಂದಿಗೂ [ಕಾವೇರಿ ವಿವಾದ ಇತ್ಯರ್ಥವಾಗುವವರೆಗೂ] ಸ್ವಾಗತವೇ. ಡುಂಡಿ, ದಂಡಿಯಾಗಿ ಬರಿ.



[ಈ ಲೇಖನದ ಅದರ ಜೊತೆಗೇ ಹಿಂದೆ ಡುಂಡಿಯ ಮೊದಲ ಹನಿಗವಿತೆಗಳ ಸಂಕಲನಕ್ಕೆ ಬರೆದಿದ್ದ ವಿಮರ್ಶೆಯೊಂದನ್ನು ಇಲ್ಲಿ ಹಾಕುತ್ತಿದ್ದೇನೆ. ೧೯೮೬ರಲ್ಲಿ ಡುಂಡಿರಾಜನ ಆಗ ಲಭ್ಯವಿದ್ದ 'ಪಾಡ್ಯ ಬಿದಿಗೆ ತದಿಗೆ' ಹನಿಗವನಗಳ ಸಂಕಲನಕ್ಕೆ ನಾನು ಹೈದರಾಬಾದಿನಿಂದ ಹೊರಬರುತ್ತಿದ್ದ ಪರಿಚಯ ಪತ್ರಿಕೆಗೆಂದು ಈ ವಿಮರ್ಶೆ ಬರೆದಿದ್ದೆ. ಅವನ ಸಮಗ್ರ ಹನಿಗವನಗಳ ಗುಚ್ಛ 'ಹನಿಖಜಾನೆ' ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. ಆಗಿನ ವಿಮರ್ಶೆಗೆ ನಾನು ಬಳಸಿದ ಭಾಷೆ ನನಗೆ ಆಶ್ಚರ್ಯ ತರಿಸುತ್ತಿದೆ. ಈಗ ಇದನ್ನು ನಾನು ಬರೆಯುತ್ತಿದ್ದರೆ ಬೇರೊಂದೇ ಶೈಲಿಯಲ್ಲಿ ಬರೆಯುತ್ತಿದ್ದೆ.]

ಡುಂಡಿಯ ಡಿಂಡಿಮ

ಬರೆದದ್ದು ಹತ್ತಾದರೆ
ಬರೆಯಲಾಗದ್ದು ಸಾವಿರ
ಹೆಕ್ಕಿದ್ದು ಮುತ್ತಾದರೆ
ಉಳಿದದ್ದು ಸಾಗರ

ಎಂದೆಲ್ಲಾ ಹನಿಗವನಗಳನ್ನು ಬರೆವ ಡುಂಡಿರಾಜರು ತಮ್ಮ ಪಾಡ್ಯ ಬಿದಿಗೆ ತದಿಗೆ ಪುಸ್ತಕದಲ್ಲಿ ಮುತ್ತುಗಳನ್ನಲ್ಲದೇ ಏಡಿ, ಮೀನು ಕಪ್ಪೆಚಿಪ್ಪುಗಳನ್ನೂ ಹಕ್ಕಿದ್ದಾರೆ. ಬಹುಶಃ ಇದರೊಂದಿಗೆ ಅದೂ ಬರುವುದು ಅನಿವಾರ್ಯವೇನೋ.

ಈ ಅನಿವಾರ್ಯತೆಯನ್ನು ಗುರುತಿಸಿ ಪುಸ್ತಕವನ್ನು ಹೊರತಂದಿರುವವರು 'ಅನಿವಾರ್ಯ ಪ್ರಕಾಶನ'ದವರು. ಇಂಥ ಹನಿಗವನಗಳನ್ನು ಪುಟಕ್ಕೆರಡರಂತೆ ಬಗೆದು ಬೀಸಿದ್ದಾರೆ - ಡುಂಡಿ. ಅನೇಕ ವಿಧದ ವೆರೈಟಿ ಹನಿಗಳಿವೆ - ಮನಕ್ಕೆ ನಾಟುವಂಥವು, ಆಳವಾಗಿ ಆಲೋಚನೆಗೀಡುಮಾಡಬಲ್ಲವು ಇತ್ಯಾದಿ. ಇಂಥ ಹನಿಗಳು ಬಿಸಿಲ್ಗಾಲದ ನಂತರದ ಮೊದಲ ಮಳೆಯಂತೆ ಮುದವನ್ನೂ ನೀಡುತ್ತವೆ. ಅವು ಅವಶ್ಯವೂ ಸಹ.

ಇಂತದೆಲ್ಲಾ ತುಂತುರುಗಳನ್ನು ಆಗಾಗ ಪತ್ರಿಕೆಗಳಲ್ಲಿ ಉದುರಿಸುತ್ತಿದ್ದ ಡುಂಡಿರಾಜ್ ಈಗ ಅದನ್ನು ಕಲೆ ಹಾಕಿ ಒಂದು ಭಾರೀ ಮಳೆಯನ್ನೇ ಸುರಿಸಿದ್ದಾರೆ.

ಮಿನಿ ಕವನಕ್ಕಿರುವ ಪರಿಮಿತಿಯಲ್ಲಿ ಆ ಪ್ರಕಾರವನ್ನು ಎಷ್ಟು ಗಂಭೀರ ವಿಷಯಗಳನ್ನು ಹೇಳಲು ದುಡಿಸಿಕೊಳ್ಳಬಹುದು?

ಅಯ್ಯಯ್ಯೋ
ಅನಾಹುತವಾಗಿದೆ
ಹರೆಯದ
ಹೆಣ್ಣುಗಳ ಏದೆ
ಧಗ ಧಗ
ಉರಿಯುತ್ತಿದೆ
ಆದರೆ
ಅಗ್ನಿಶಾಮಕ ದಳ
'ದಕ್ಷಿಣೆ' ಕೇಳುತ್ತಿದೆಯಲ್ಲಾ

ವಿಡಂಬನೆಗೆ ಅರ್ಥ ಬೇಕೇ? ಅದಕ್ಕೂ ಡುಂಡಿರಾಜರ ಬಳಿ ಹನಿಗವನದ ಉತ್ತರವಿದೆ-

ಮಹಾತ್ಮಾ
ನೀನು ಹೇಳಿದಂತೆಯೇ
ಮಾಡುತ್ತೇವೆ

ಕೆಟ್ಟದ್ದನ್ನು ಕೇಳುವುದಿಲ್ಲ
ನೋಡುವುದಿಲ್ಲ
ಆಡುವುದಿಲ್ಲ
ಮಾಡುತ್ತೇವೆ.

ಹೀಗೆ ಡುಂಡಿರಾಜರ ಪುಸ್ತಕ ಹಿಡಿದವರು ನಗುವುದು ಅನಿವಾರ್ಯ. ನಗದಿದ್ದರೆ ಒಂದು ಲಕ್ಷ ಎಂದು ಪದ್ಯ ಕಟ್ಟಬಹುದು. ಹಾಗಾದರೆ ಡುಂಡಿರಾಜ್ ಅಷ್ಟೊಂದು ಗ್ರೇಟೇ? ಪುಸ್ತಕ ಹಿಡಿದಾಕ್ಷಣಕ್ಕೇ ನಗುತ್ತೇವೆಯೇ? ಗುಂಪಿನಲ್ಲಿ ಕುಳಿತಿದ್ದರೆ ಒಮ್ಮೊಮ್ಮೆ ತಕ್ಷಣ ನಗಲಾರಿರಿ

ತುಂಬಿದ ಕೊಡಗಳ ಹಾಗೆ
ಕುಂಭ ಕುಚಗಳೂ ಕೂಡಾ
ತುಳುಕುವುದಿಲ್ಲ
[ಬ್ರಾ ಕಟ್ಟದಿದ್ದರೆ]
ಕುಲುಕುತ್ತವೆ.

ಇವು ನಕ್ಕರೂ ಒಂದು ರೀತಿಯ ಪ್ರೈವೇಟ್ ಜೋಕವನಗಳು. ಖಾಸಗೀ ನಗು ಬೇಕಿದಕ್ಕೆ.

ಇನ್ನೇನೇನು ಇದೆ ಸರ್ ಆ ಪುಸ್ತಕದಲ್ಲಿ? ಗೊತ್ತು ನಿಮ್ಮ ಪ್ರಶ್ನೆ... ಚರಿತ್ರೆಯ ಬಗೆಗೂ ಡುಂಡಿರಾಜರದ್ದು ಒಂದು ದೃಷ್ಟಿಕೋನವಿದೆ --

ಮಹಾರಾಜರ ಮೈ
ಸೂರಿನಲ್ಲಿ
ಮಹಿಳೆಯರು
ಸುಖವಾಗಿದ್ದರು.

ಹಾಗಾದರೆ ನಿಮ್ಮ ಪ್ರಕಾರ ಡುಂಡಿರಾಜ್ ಕೆಟ್ಟ ಕವಿತೆಗಳನ್ನು ಬರೆಯೊಲ್ಲಾಂತ ಆಯಿತು ಎಂದೆಲ್ಲಾ ನೀವು ನನ್ನ ಮೇಲೆ ಆಪಾದನೆ ಹೊರಿಸ್ತೀರಿ ಅಂತ ಗೊತ್ತು. ನಾನ್ಯಾಕೆ ಹೇಳಬೇಕು ಇದು ಚೆನ್ನಾಗಿದೆ, ಇದು ಇಲ್ಲಾಂತ ನೀವೇ ಓದಿಕೊಳ್ಳಿ.

ಎದೆ ಪರ್ವತದ
ತುದಿ ಮುಟ್ಟಿದಾಗ
ನಾನೇ ತೇನ್‍ಸಿಂಗ್
ಹಿಲೇರಿ
ಏನಂತೀರಿ?

ಇಂಥ ಅನುಭವವೇದ್ಯ ಕವನಗಳ ಬಗೆಗೆ ಕಟ್ಟಾ ಬ್ರಹ್ಮಚಾರಿಯಾದ ನಾನು ಹೇಳುವುದಾದರೂ ಏನು?

ಗೊತ್ತು ಕಟ್ಟಾಕನ್ನಡಾಭಿಮಾನಿಗಳಾದ ನೀವು ಈ ಪುಸ್ತಕದ ಬಗ್ಗೆ ಇನ್ನೂ ಪ್ರಶ್ನೆ ಕೇಳಬೇಕೆಂದಿದ್ದೀರಿ ಅಲ್ಲವೇ? ಇರಲಿ... ಈ ಪ್ರಶ್ನೆಗಳಿಗೆಲ್ಲಾ ಡುಂಡಿರಾಜರೇ ಉತ್ತರ ಹೇಳಲಿ.. ಏನಂತೀರಿ? ನಾ ಹೇಳಬೇಕಾಗಿ ಉಳಿದಿರುವುದು ಒಂದೇ ವಿಷಯ. ಡುಂಡಿರಾಜರು ತಮ್ಮ ಅನುಭವವನ್ನಲ್ಲದೇ ನನ್ನದನ್ನೂ ದಾಖಲಿಸಿದ್ದಾರೆ:

ನನ್ನ ಪ್ರೇಮಗೀತೆ
ಓದಿ ವಿಷಾದಿಸಿದ್ದಕ್ಕೆ
ಕೃತಜ್ಞತೆ
ಅದನ್ನು ಈ ವರೆಗೆ
ಹತ್ತಾರು ಹುಡುಗಿಯರಿಗೆ
ಕಳಿಸಿದ್ದೆನಾದರೂ
ಉತ್ತರಿಸುವ ಸೌಜನ್ಯ
ತೋರಿದವರೆಂದರೆ
ನೀವೊಬ್ಬರೇ
ಪ್ರಿಯ
ಸಂಪಾದಕರೆ

ಹೀಗೆ ನಿಮ್ಮ ಅನುಭವವೂ ಇರಬಹುದು. ಅವನ್ನೆಲ್ಲಾ ರಜತ ಪರದೆಯ ಮೇಲೆ ಓದಿ ಆನಂದಿಸಿ. ಮತ್ತು ನಿಮ್ಮ ಪ್ರತಿಕ್ರಿಯೆ ಅವರಿಗೆ ಕಳಿಸಿ. ಅಥವಾ ಆ..ಕಳಿಸಿ.

No comments:

Post a Comment