Monday, March 9, 2009

ಹೈದರಾಬಾದ್: ಏಕೀಕರಣ?

ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.

ಆದರೆ ಹೈದರಾಬಾದ್ ಹಿಸ್ಟಾರಿಕಲ್ ಸೊಸೈಟಿಯಂಥಹ ಸಂಸ್ಥೆಗಳು ಪ್ರತಿಪಾದಿಸುವ ಒಂದು ಭಿನ್ನ ಹಾಗೂ ಮಹತ್ವದ ವಿಚಾರಧಾರೆಯಿದೆ. 
ಹಳೆಯ ಹೈದರಾಬಾದ್ ರಾಜ್ಯವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಿದ್ದು ಬುದ್ಧಿವಂತಿಕೆಯ ಕ್ರಿಯಯಲ್ಲವೆಂದೂ, ಹೈದರಾಬಾದಿನಲ್ಲಿ ಕೋಮು ಸೌಹಾರ್ದ ಸಂಬಂಧಿತ ಸಮಸ್ಯೆಗಳು ಉದ್ಭವವಾಗುವುದಕ್ಕೆ, ಆಂಧ್ರಪ್ರದೇಶದಲ್ಲಿ ತೆಲಂಗಾಣಾ, [ಹಾಗೂ ಮಹಾರಾಷ್ಟ್ರದಲ್ಲಿ ಮರಾಠವಾಡಾ, ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ] ಹಿಂದುಳಿಯಲು ಹೈದರಾಬಾದಿನ ವಿಂಗಡಣೆಯೇ ಕಾರಣವೆಂದು ಕೆಲವರು ವಾದಿಸುತ್ತಾರೆ. ಈ ಬಗ್ಗೆ ಒಮರ್ ಖಲೀದಿ ಬರೆದ "ಹೈದರಾಬಾದ್: ಆಫ್ಟರ್ ದ ಫಾಲ್" ಅನ್ನುವ ಪುಸ್ತಕ ಮಹತ್ವದ್ದಾಗಿದೆ.

ಲೂಸಿನ್ ಬೆನಿಚೌ ಬರೆದ "ಫ್ರಮ್ ಆಟೋಕ್ರಸಿ ಟು ಇಂಟಿಗ್ರೇಷನ್" ಅನ್ನುವ ಪುಸ್ತಕವನ್ನು ನಾನು ನೋಡಿದಾಗ ಅದರಲ್ಲೂ ಈ ಬಗೆಗಿನ ಚರ್ಚೆ ಇರಬಹುದೆಂದು ನಾನು ಸಹಜವಾಗಿಯೇ ನಿರೀಕ್ಷಿಸಿದ್ದೆ. ಆ ಪುಸ್ತಕ ೧೯೩೮-೪೮ರ ದಶಕದ ರಾಜಕೀಯ ಬೆಳವಣಿಗೆಯ ಬಗ್ಗೆ ಇತ್ತೆಂದು ತಿಳಿಸಿದ್ದರಿಂದ ಈ ನಿರೀಕ್ಷೆ ಇಟ್ಟುಕೊಳ್ಳುವುದು ಅನುಚಿತವಾಗಿರಲಿಲ್ಲವೇನೋ. ಆ ಕಾಲದಲ್ಲೇ ಏಕೀಕರಣದ ಎಲ್ಲ ಕ್ರಮಗಳೂ, ಹೈದರಾಬಾದಿನ ಭಾಷಾವಾರು ವಿಂಗಡನೆಗೆ ತಯಾರಿ, ಎರಡೂ ಆಗಿತ್ತು. ಹೈದರಾಬಾದು ಭಾರತದಲ್ಲಿ ಏಕೀಕರಣವಾಗುತ್ತಿದ್ದಂತೆಯೇ ಆ ಪ್ರಾಂತವೂ ಮುಬ್ಭಾಗವಾಗಿ ಒಡೆದಿತ್ತು! ಪುಸ್ತಕದ ಹಿಂದಿನ ಬ್ಲರ್ಬಿನಲ್ಲಿ "ಈ ಪುಸ್ತಕ ಏಕೀಕರಣದ ಜನಪ್ರಿಯತೆ ಮತ್ತು ಕ್ರಮವನ್ನು ಪರೀಕ್ಷಿಸುತ್ತದೆ. ಹಾಗೂ ಏಕೀಕರಣಕ್ಕೆ ಇದ್ದದ್ದು ಇದೊಂದೇ ಮಾರ್ಗವೇ ಅಥವಾ ಅದಕ್ಕೆ ಭಿನ್ನ ಮಾರ್ಗಗಳಿದ್ದುವೇ ಅನ್ನುವ ಪ್ರಶ್ನೆಯನ್ನೂ ಎತ್ತುತ್ತದೆ..." ಎಂದು ಬರೆದಿತ್ತು. ಲೇಖಕರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿದ್ದರಾದರೂ, ಬೇರೇನು ಸಾಧ್ಯತೆಗಳಿದ್ದುವು ಅನ್ನುವುದರ ಬಗ್ಗೆ ಗಟ್ಟಿಯಾದ ವಾದ ಇಲ್ಲ. 

ಭಾರತದ ಸ್ವಾತಂತ್ರಕ್ಕೆ ಮುಂಚಿನ ದಶಕದಲ್ಲಿ ಹೈದರಾಬಾದಿನಲ್ಲಿ ಸಾಕಷ್ಟು ರಾಜಕೀಯ ಕಾರ್ಯಾಚರಣೆಗಳಾದುವಾದರೂ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಾದ ಸ್ವಾತಂತ್ರ ಹೋರಾಟದಲ್ಲಿ ಹೈದರಾಬಾದಿನ ಪಾತ್ರದಲ್ಲಿ ಒಗ್ಗಟ್ಟು ಮತ್ತು ಇತರ ಜಾಗಗಳಷ್ಟು ಉತ್ಸಾಹ ಕಂಡುಬಂದಿರಲಿಲ್ಲ. ಹೈದರಾಬಾದಿನ ಜನತೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಹಾಗೂ ಕಾಂಗ್ರೆಸ್‍ಗೆ ಹೈದರಾಬಾದಿನಲ್ಲಿ ಮಹತ್ವದ ಸ್ಥಾನವೇನೂ ಇರಲಿಲ್ಲ. ಹೈದರಾಬಾದಿನಲ್ಲಿ ಸತ್ಯಾಗ್ರಹದಂತಹ ಹೆಚ್ಚಿನ ಚಟುವಟಿಕೆಗಳು ಕಾಣಿಸಲಿಲ್ಲ. ಅಲ್ಲಿದ್ದ ಅತ್ಯಂತ ಮಹತ್ವದ ಕಾಂಗ್ರೆಸ್ ನಾಯಕರು ಸ್ವಾಮಿ ರಾಮಾನಂದ ತೀರ್ಥರಾಗಿದ್ದರು. 

ಇದಕ್ಕೆ ಇರಬಹುದಾದ ಕಾರಣಗಳು ಗಹನವಾದವು. ಆ ಪ್ರಾಂತ ಇನ್ನೂ ನಿಜಾಮನ ಆಳ್ವಿಕೆಯಡಿಯಲ್ಲಿತ್ತು. ಮುಸಲ್ಮಾನರು ಆ ರಾಜ್ಯದಲ್ಲಿ ಅಲ್ಪ ಸಂಖ್ಯಾತರಾಗಿದ್ದರೂ ಅವರುಗಳಲ್ಲಿದ್ದ ಮೇಲ್ಮಧ್ಯಮ ವರ್ಗದವರೂ ಬುದ್ಧಿಜೀವಿಗಳೂ ಸರಕಾರದಲ್ಲಿ ಮಹತ್ವದ ಹುದ್ದೆಗಳನ್ನಲಂಕರಿಸಿದ್ದರು. ಸಂಸ್ಥಾನದ ಭಾಷ್ ಫಾರ್ಸಿಯಾಗಿತ್ತಾದರೂ, ಹೆಚ್ಚಿನ ಲಾವಾದೇವಿಗಳು ಉರ್ದುಭಾಷೆಯಲ್ಲಿ ನಡೆಯುತ್ತಿತ್ತು. ಸಾಲದ್ದಕ್ಕೆ ರಾಜವಂಶಕ್ಕೆ ಸೇರಿದ ಪೈಗಾಗಳಲ್ಲದೇ ಅನೇಕ ಹಿಂದೂ ಜಮೀಂದಾರರು ಸಹ ನಿಜಾಮನ ಅನುಯಾಯಿಗಳಾಗಿದ್ದರು. ನಿಜಾಮನ ಆಳ್ವಿಕೆಯ ಬಗ್ಗೆ ಅವರಿಗೆ ಸಮಾಧಾನವಿತ್ತೋ ಇಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲವಾದರೂ, ನಿಜಾಮನಡಿಯಲ್ಲಿ ಅವರಿಗೆ ಅನೇಕ ಸವಲತ್ತುಗಳಿದ್ದುವು ಅನ್ನುವುದರಲ್ಲಿ ಅನುಮಾನವಿಲ್ಲ. ಏಕಾಧಿಪತ್ಯದ ಜಾಗದಲ್ಲಿ ಪ್ರಾಜಾತಂತ್ರ ವ್ಯವಸ್ಥೆ ಬಂದದ್ದೇ ಆದಲ್ಲಿ ಅನೇಕರ ಸವಲತ್ತುಗಳು ಇಲ್ಲವಾಗುತ್ತಿದ್ದವು ಅನ್ನುವುದರಲ್ಲಿ ಅನುಮಾನವಿಲ್ಲ. ಹಿಂದೂ ಬುದ್ಧಿಜೀವಿಗಳು, ಜಮೀಂದಾರರು, ಮುಸ್ಲಿಂ ರಾಜವಂಶದವರು ಒಂದು ಕಡೆಯಿದ್ದರೆ, ರಾಮಾನಂದ ತೀರ್ಥರಂಥಹ ರಾಷ್ಟ್ರವಾದಿಗಳು ಜನರನ್ನು ಸ್ವಾತಂತ್ರ ಸಂಗ್ರಾಮದತ್ತ ಸಂಘಟಿಸುವ ಪ್ರಯತ್ನಮಾಡುತ್ತಿದ್ದರು. ಈ ಸ್ವಾತಂತ್ರವನ್ನು ಅವರು ಬ್ರಿಟಿಷರಿಂದ ಮಾತ್ರ ಬಯಸದೇ ನಿಜಾಮನಿಂದಲೂ ಸ್ವಾತಂತ್ರವನ್ನು ಬಯಸುತ್ತಿದ್ದರು. ಅದೇ ಸಮಯಕ್ಕೆ ಇನ್ನೆರಡು ದೊಡ್ಡ ಗುಂಪುಗಳು ಕಾರ್ಯನಿರತವಾಗಿದ್ದುವು: [ಮಕ್ದೂಮ್ ಮೊಯಿನುದ್ದೀನರಂತಹ ಜನರಿದ್ದರೂ ಹೆಚ್ಚಾಗಿ ಹಿಂದೂಗಳಿಂದ ಕೂಡಿದ್ದ] ನಿಜಾಮನ ಮತ್ತು ಜಮೀಂದಾರರ ಹಿಂಸಾತ್ಮಕ ಆಳ್ವಿಕೆಯಿಂದ ಮುಕ್ತಿ ಕೋರುತ್ತಿದ್ದ ಕಮ್ಯೂನಿಸ್ಟರು. ಇವರುಗಳು ಕಾಂಗ್ರೆಸ್‌ನ ಅಹಿಂಸಾತ್ಮಕ ಸತ್ಯಾಗ್ರಹದ ಕಾರ್ಯವೈಖರಿಯ ವಿರೋಧಿಗಳಾಗಿದ್ದರು. ಜೊತೆಗೆ ಹಳೆಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಿಜಾಮನಿಗೆ ನಿಷ್ಠಾವಂತರಾಗಿದ್ದ ರಜಾಕರರೂ ಇದ್ದರು. ರಜಾಕರರು ನಿಜಾಮನಿಗೆ ನಿಷ್ಠೆ ತೋರಿಸಿದರೂ ಅವರುಗಳೆಲ್ಲಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ ಅನ್ನುವ ಸಂಸ್ಥೆಯ ಅನುಯಾಯಿಗಳಾಗಿದ್ದರು. ಈ ಸಂಸ್ಥೆ ಇಸ್ಲಾಮೀ ಅಸ್ಮಿತತೆಯನ್ನು ಪೋಷಿಸುವುದನ್ನೇ ತನ್ನ ಮೂಲ ಸಿದ್ಧಾಂತವನ್ನಾಗಿ ಇಟ್ಟುಕೊಂಡಿತ್ತು. 

ಚಾರಿತ್ರಿಕ ಸಂಶೋಧನೆಯನ್ನು ಹುದುಗಿದ್ದ ಮಾಹಿತಿಯನ್ನು ಹೊರಕ್ಕೆ ತೆಗೆಯುವ ಕೆಲಸವನ್ನು ಬೆನೆಚೌ ಮಾಡಿದರೂ, ಆ ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಆತ ಸೋತಿದ್ದಾರೆ. ಒಂದರ ನಂತರ ಒಂದರತೆ ಘಟನಾವಳಿಗಳನ್ನು ಬೆನಿಚೌ ವಿವರಿಸುತ್ತಾ ಹೋಗುತ್ತಾರೆಯೇ ಹೊರಗಿನವರಾಗಿ ಬೆನಿಚೌ ಎಲ್ಲವನ್ನೂ ದಾಖಲಿಸುತ್ತಾ ಹೊರತು ಅದಕ್ಕೆ ಹೆಚ್ಚಿನ ಒಳನೋಟಗಳನ್ನು ಅವರು ನೀಡುವುದಿಲ್ಲ. ಹೀಗಾಗಿ ಬ್ಲರ್ಬಿನಲ್ಲಿ ಬರೆದಿರುವಂತೆ ಹಳೆಯ ಹೈದರಾಬಾದ್ ರಾಜ್ಯ ಒಂದೇ ಘಟಕವಾಗಿ ಮುಬ್ಭಾಗವಾಗದೇ ಮುಂದುವರೆಯುವ ಆಶಯ ಜನರಿಗಿತ್ತೇ ಅನ್ನುವುದು ತಿಳಿಯುವುದಿಲ್ಲ. ಆದರೆ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ರಾಷ್ಟ್ರದ ಮುಖ್ಯ ಪಕ್ಷವಾದ ರಾಷ್ಟ್ರೀಯ ಮನೋಧರ್ಮವಿದ್ದ ಕಾಂಗ್ರೆಸ್ ಪಕ್ಷ ಜನರನ್ನು ಒಗ್ಗೂಡಿಸುವ ಬಗ್ಗೆ ಒಂದು ನಿರ್ದಿಷ್ಟ ಮಾರ್ಗವನ್ನು ಹೊಂದಿರಲಿಲ್ಲ ಅನ್ನುವುದು ಮಾತ್ರ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕಾಂಗ್ರೆಸ್ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡುತ್ತಿದ್ದರೆ, ಇಲ್ಲಿ ಆಡಳಿತದ ಮುಖ ನಿಜಾಮನದ್ದಾಗಿತ್ತು. ಹೀಗಾಗಿ ವಿದೇಶೀ ತಾಕತ್ತಿನ ವಿರುದ್ಧದ ಸಮರದ ಅನೇಕ ವ್ಯೂಹಗಳು ಹೈದರಾಬಾದಿನ ಪರಿಸ್ಥಿತಿಗೆ ಸಮರ್ಪಕವಗಿ ಇರಲೇ ಇಲ್ಲ. ಹೀಗಾದರೂ ಕೆಲವು ಭಿನ್ನ ಸಮಸ್ಯೆಗಳು ಇದ್ದೇ ಇದ್ದುವು. ಕಾಂಗ್ರೆಸ್‍ ಹೆಚ್ಚಾಗಿ ಪ್ರತಿನಿಧಿಸಿದ್ದು ಮೂರೂ ಪ್ರಾಂತಗಳ ಭಾಷಾವಾರು ಅಸ್ತಿತ್ವವಿದ್ದ ಹಿಂದೂಗಳನ್ನು. ಆದರೆ ಅವರುಗಳಲ್ಲಿನ ಯುವಕರ ಭಾಗ ಸತ್ಯಾಗ್ರಹದಂತಹ ಪ್ಯಾಸಿವ್ ಚಳುವಳಿಯಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಡಕುಂಟಾಗಿ ಮಹಾರಾಷ್ಟ್ರ ಪರಿಷತ್ ಮತ್ತು ಆಂಧ್ರಮಹಾಸಭಾದಲ್ಲಿ ಹಂಚಿಹೋಯಿತು. ಮುಂದೆ ರಾವಿ ನಾರಾಯಣ ರೆಡ್ಡಿಯಂಥಹವರು ಆಂಧ್ರಮಹಾಸಭಾದಿಂದಲೂ ದೂರವಾಗಿ ಕಮ್ಯುನಿಸ್ಟರತ್ತ ವಾಲಿದರು.
 

ಈ ಕಡೆ ಮಹಾರಾಷ್ಟ್ರ ಪರಿಷದ್ ನಲ್ಲೂ ಭಿನ್ನತೆ ಮನೆಮಾಡಿತ್ತು. ಒಂದೆಡೆ ಕಾಂಗ್ರೆಸ್‌ನ ಕೆಲವರು ಮರಾಠವಾಡಾಕ್ಕೆ ಭಿನ್ನ ಪ್ರಾಂತ ಬೇಕೆಂಬ ಬೇಡಿಕೆಯಿತ್ತರೆ ಇನ್ನೊಂದು ಭಾಗ ಸ್ವಾತಂತ್ರಾನಂತರ ನಿಜಾಮನ ಆಳ್ವಿಕೆಯ ಭಾಗದಲ್ಲಿದ ಮರಾಠವಾಡಾವನ್ನು ವಿಶಾಲ ಏಕೀಕೃತ ಮಹಾರಾಷ್ಟ್ರದ ಭಾಗವನ್ನಗಿಸಬೇಕೆಂದು ಕೇಳುತ್ತಿದ್ದರು. ನಿಜಾಮನ ಆಳ್ವಿಕೆಯ ಭಾಗದಲ್ಲೂ [ಕಾಂಗ್ರೆಸ್ ಪಕ್ಷದ ಉದಾರ ಮುಖಗಳಾದ] ಕೆ.ಎಸ್.ವೈದ್ಯ ಮತ್ತು ನರಸಿಂಗ ರಾವ್ ಸ್ವಾತಂತ್ರಾನಂತರವೂ ಹೈದರಾಬಾದ್ ಪ್ರಾಂತ ನಿಜಾಮನಾಳ್ವಿಕೆಯಡಿಯಲ್ಲಿ ಹೇಗಿತ್ತೋ ಅದೇ ಭೌಗೋಳಿಕ ಪರಿಮಿತಿಗಳಲ್ಲಿ ಮುಂದುವರೆಯಬೇಕೆಂದು ಹೇಳುತ್ತಿದ್ದರು. ಹೀಗಾಗಿ [ನಿಜಾಮನಿರಲೀ ಇಲ್ಲದಿರಲೀ] ಹೈದರಾಬಾದ್ ಪ್ರಾಂತ ಹಾಗೇ ಇರಬೇಕೆಂಬ ಬೇಡಿಗೆ ಎಲ್ಲ ಜನರ ಒಗ್ಗಟ್ಟಿನ ಒಕ್ಕೊರಲಿನ ಬೇಡಿಕೆಯಾಗಿತ್ತೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. 


ಪುಸ್ತಕದಲ್ಲಿ ಬೆನಿಚೌ ಈ ಬಗ್ಗೆ ಪ್ರಸ್ತಪ ಮಾಡುತ್ತಾರೆ. [ಕ್ರಿಪ್ಸ್ ಪ್ರಸ್ತಾವವನ್ನು ಚರ್ಚಿಸುತ್ತಾ] "ಎರಡನೇ ಮಹಾಯುದ್ಧಕ್ಕಿಂತಲೂ ಮಹತ್ವದ ಸ್ಥಾನವನ್ನು ರಾಜ್ಯದ ಭೌಗೋಳಿಕ ಭವಿಷ್ಯ ಪಡೆಯಿತೆನ್ನಬೇಕು. ಇದರಿಂದ ಕೋಮು ಮತ್ತು ರಾಜಕೀಯ ಭಿನ್ನತೆಗಳು ಕಾಣಿಸತೊಡಗಿದವು. ಮಧ್ಯದ ದಾರಿಯಲ್ಲಿ ನಿತ್ತ ಹಿಂದೂಗಳು ಮೌನವಾಗಿದ್ದರು, ಆದರೆ ಉಗ್ರವಾದ ನಿಲುವು ತೆಗೆದುಕೊಂಡವರೆಲ್ಲಾ ಹೈದರಾಬಾದು ಜನಸತ್ತಾತ್ಮಕ ಭಾರತದ ಭಾಗವಾಗಿ ಸೇರಬೇಕು ಎಂದು ವಾದಿಸಿದರು. ಇತ್ತೆಹಾದ್ ಮುಸಲ್ಮಾನರು ಅದೊಂದು ಸ್ವತಂತ್ರ ರಾಜ್ಯವಾಗಿರಬೇಕೆಂಬ ನಿಲುವನ್ನು ತೆಗೆದುಕೊಂಡರು.
 

ಸ್ವಾತಂತ್ರಾನಂತರ [ಪೋಲೀಸ್ ಕಾರ್ಯಾಚರಣೆಗೆ ಮುನ್ನ] ಈ ಬಗ್ಗೆ ಗೊಂದಲ ಮುಂದುವರೆಯುತ್ತಿರುವುದು ಇನ್ನೂ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಯಾವೊಂದು ಗುರಿಯನ್ನೂ ಹಂಚಿಕೊಳ್ಳದಿದ್ದರೂ, ತೆಲಂಗಾಣಾ ಪ್ರಾಂತದಲ್ಲಿ ಕಮ್ಯುನಿಸ್ಟರು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಸಮರ್ಥನೆ ನೀಡಿದರು. "ಮದರಾಸು ಸರಕಾರ ಕಾಂಗ್ರೆಸ್ ವಿರೋಧಿಯಾಗಿದ್ದ ಕಮ್ಯುನಿಸ್ಟರಿಗೆ ಸಹಾಯ-ಸಹಕಾರ ನೀಡಿದ್ದು ಈ ವಿರೋಧಾಭಾಸದ ಬಗ್ಗೆ ಕಣ್ಣುಹಾಯಿಸದೇ ಇದ್ದದ್ದು ತರ್ಕಬದ್ಧ ಅನ್ನಿಸುವುದಿಲ್ಲ" ಎಂದು ಬೆನೆಚೌ ಹೇಳುತ್ತಾರೆ. ಆದರೆ ಮನದಟ್ಟಾಗುವಂತಹ ವಿವರಣೆ ಎಂದರೆ ಹೈದರಾಬಾದ್ ಕಾಂಗ್ರೆಸ್ ಛಿದ್ರವಾಗಿ ಬಲಹೀನವಾಗಿತ್ತು ಅನ್ನುವುದು ದೆಹಲಿಗೆ ಗೊತ್ತಿತ್ತು ಅನ್ನುವ ವಿಚಾರ. ತೆಲಂಗಾಣಾ ಪ್ರಾಂತದಲ್ಲಿ ನಿಜಾಮನ ಆಳ್ವಿಕೆಯನ್ನು ದುರ್ಬಲಪಡಿಸಲು ಇದ್ದ ಒಂದೇ ಮಾರ್ಗ ಕಮ್ಯುನಿಸ್ಟರನ್ನು ಬೆಂಬಲಿಸುವುದರಲ್ಲಿತ್ತು.

ಬೆನಿಚೌ ತಮ್ಮ ವಾದದಲ್ಲಿ ಅವಸರದಿಂದ ಕೈಗೊಂಡ ಪೋಲೀಸ್ ಕಾರ್ಯಾಚರಣೆಗೆ ಬದಲಾಗಿ ಭಾರತದೊಂದಿಗೆ ಹೈದರಾಬಾದಿನ ಏಕೀಕರಣ ಆಗಲು ಇದ್ದ ಅನೇಕ ಸಾಧ್ಯತೆಗಳನ್ನು ಚರ್ಚಿಸುತ್ತಾರಾದರೂ ಇವು ನಿಜಕ್ಕೂ ಕಾರ್ಯಗತಗೊಳಿಸುವಂಥವೇ ಅನ್ನುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮೇಲಾಗಿ ಏಕೀಕರಣ ಹೇಗಾಗಬೇಕು ಅನ್ನುವುದರ ಬಗ್ಗೆ ಒಂದು ಥರದ ಏಕಾಭಿಪ್ರಾಯವಿತ್ತೋ ಇಲ್ಲವೋ ಅನ್ನುವುದೂ ತಿಳಿಯುವುದಿಲ್ಲ. ಬೆನೆಚೌ ಅವರ ವಾದಸರಣಿಯಲ್ಲಿ ಹೈದರಾಬಾದನ್ನು ಗೋವಾದ ಹಾಗೆ ಅದರ ಪಾಡಿಗೆ ಬಿಟ್ಟುಬಿಟ್ಟಿದ್ದರೆ ಭೌಗೋಳಿಕ ಕಾರಣಗಳಿಂದ, ಬೇರೆ ದಾರಿಯಿಲ್ಲದೇ ಸಹಜವಾಗಿಯೇ ಏಕೀಕರಣ ಆಗಿಬಿಡುತ್ತಿತ್ತು ಅನ್ನುವುದಾಗಿದೆ. ಪಾಕಿಸ್ತಾನ ಹೈದರಾಬಾದನ್ನು ತನ್ನ ಪ್ರಾಂತದಲ್ಲಿ ಸೇರಿಸಿಕೊಳ್ಳುವುದು ಅಸಾಧ್ಯದ ಮಾತೇ ಆದ್ದರಿಂದ ಯಾರೂ ಇದನ್ನು ಸಮರ್ಥಿಸದಿದ್ದರೂ, ಏಕೀಕರಣದ ಅನಿವಾರ್ಯತೆಯ ಬಗ್ಗೆ, ಎಲ್ಲ ದಿಕ್ಕಿನಿಂದಲೂ ಭಾರತದ ನೆಲ ಸುತ್ತುವರಿದಿರುವ ಏಕೈಕ ಕಾರಣದಿಂದ ಸಹಜವಾಗಿಯೇ ಹೈದರಾಬಾದ್ ಭಾರತದ ಭಾಗವಾಗುತ್ತಿತ್ತು ಅನ್ನುವುದು ಅವರ ವಾದ.

ಕಡೆಯ ಹಂತದಲ್ಲಿ ನಿಜಾಮ ತನ್ನ ಪ್ರಜೆಗಳನ್ನು ತನ್ನ ಕಡೆ ಇರಿಸಿಕೊಳ್ಳುವುದರಲ್ಲಿ ವಿಫಲನಾಗಿರಬಹುದು ಎನ್ನುವ ಸೂಚನೆಯನ್ನು ಬೆನಿಚೌ ನೀಡುತ್ತಾರೆ. ನಿಜಾಮನ ಮೇಲೆ ಆಗಿನ ರಾಜಕೀಯ ಪರಿಸ್ಥಿತಿಯಲ್ಲಿ ಗೌಣವಾಗಿದ್ದ ಮಜ್ಲಿಸ್ ಹೆಚ್ಚಿನ ಹಿಡಿತವನ್ನು ಪಡೆದಿತ್ತೆನ್ನಿಸುತ್ತದೆ. ಹೀಗಾಗಿ ನಿಜಾಮ ಜನರ ನಾಡಿಯನ್ನಿ ಹಿಡಿಯುವುದರಲ್ಲಿ ವಿಫಲನಾದನೇನೋ. ಹಾಗೆ ನೋಡಿದರೆ "ಪ್ರಿಯ ರಾಜ" ಎಂದು ಕರೆಯಲ್ಪಡುತ್ತಿದ್ದ ಆರನೆಯ ನಿಜಾಮನಾದ ಮಹಬೂಬ್ ಅಲಿ ಖಾನ್‌ಗೆ ಸರೀ ವಿರುದ್ಧವಾದ ವ್ಯಕ್ತಿತ್ವ ಏಳನೆಯ ನಿಜಾಮನಾದ ಉಸ್ಮಾನ್ ಅಲಿ ಖಾನ್‍ನದಾಗಿತ್ತು. ಮಹಬೂಬ್‌ಗೆ ಸಮಾಜದ ಎಲ್ಲ ಸ್ಥರಗಳ ಜನರ ಸಂಪರ್ಕವಿತ್ತು. ಹಿಂದೂಗಳನ್ನು, ಮುಸಲ್ಮಾನರನ್ನೂ ಏಕರೀತಿಯಿಂದ ನೋಡುತ್ತಿದ್ದ ಮಹಬೂಬ್‌ನ ವ್ಯಕ್ತಿತ್ವ ಬಹಳವೇ ಭಿನ್ನವಾಗಿತ್ತು. ಹಿಂದೂ ಹಾಗೂ ಮುಸಲ್ಮಾನರಲ್ಲಿನ ಮಧ್ಯಮಾರ್ಗಿಗಳು ಹೆಚ್ಚಾಗಿ ಅಲ್ಲಿನ ಮುಲ್ಕಿ ಭಾವನೆಯಾದ "ಕೋಮಿನ ಪ್ರಮೇಯವಿಲ್ಲದೇ ಹೈದರಾಬಾದಿಗಳಿಗಾಗಿ ಹೈದರಾಬಾದು" ಅನ್ನುವ ಭಾವನೆಯಿತ್ತೆನ್ನುವುದು ಆಗಿನ ಬರಹಗಳು ಸೂಚಿಸುತ್ತವೆ. ಆದರೆ ಮಜ್ಲಿಸ್ ಮತ್ತು ರಜಾಕಾರರ ಕೂಗಾಟದ ನಡುವೆ ಈ ವಾದಕ್ಕೆ ಹೆಚ್ಚಿನ ಧ್ಯಾನ ಸಿಗಲಿಲ್ಲ. ಬಹುಷಃ ಏಕೀಕೃತ ಹೈದರಾಬಾದಿನ ರಾಜಕೀಯ ಅವಸಾನ ಅಲ್ಲಿಂದಲೇ ಪ್ರಾರಂಭವಾಯಿತೇನೋ. 

ಹೈದರಾಬಾದಿನ ಮುಬ್ಭಾಗದ ಬಗ್ಗೆ ದುಃಖ ಪಟ್ಟವರು ಒಬ್ಬಿಬ್ಬರಲ್ಲ. ಆಂಧ್ರದ ಜೊತೆ ಕೂಡಿದ ಹೈದರಾಬಾದಿನ ರಾಜ್ಯದ ಅಸ್ತಿತ್ವ ಕಿರಿದಾಯಿತು. ಹಿಂದಿನ ಹೈದರಾಬಾದಿನ ಗುರುತುಗಳೆಲ್ಲಾ ಅಗ್ರಸ್ಥಾನದಿಂದ ಇಳಿದು ಹೈದರಾಬಾದು ಹರಿದು ಹಂಚಿಹೋದ ರಾಜ್ಯಗಳ ಅಂಚಿನಲ್ಲಿ ಕೂತವು. ತೆಲಂಗಾಣಾ ಹೋರಾಟದ ಮೂಲಗಳನ್ನು ನಾವು ಈ ಮುಬ್ಭಾಗದಲ್ಲಿ ಕಾಣಬಹುದು ಅನ್ನಿಸುತ್ತದೆ. ಹೈದರಾಬಾದ್ ನಗರದಲ್ಲಂತೂ ರಾಜ್ಯದ ಅಧಿಕೃತ ಭಾಷೆಯಾದ ತೆಲುಗನ್ನು ಚೆನ್ನಾಗಿ ಉಪಯೋಗಿಸಬಲ್ಲ ಕಡಲ ಆಂಧ್ರಪ್ರದೇಶದ ಜನರದೇ ಮೇಲುಗೈ ಆಯಿತು. ಅವರುಗಳು ಆಡಳಿತ ಯಂತ್ರಾಂವನ್ನು ತಮ್ಮ ಕೈವಶ ಮಾಡಿಕೊಂಡರು. ಉರ್ದುವುನಲ್ಲಿ ಕಲಿತ ಹಳೇ ಹೈದರಾಬಾದು ಸಂಸ್ಥಾನದ ಜನರಿಗೆ ಅದೇ ಒಂದು ತೊಡಕಿನ ವಿಷಯವಾಗಿ, ಅವರುಗಳಲ್ಲಿ ನಿರುದ್ಯೋಗ ಬೆಳೆಯಿತು. ೧೯೫೨ರಲ್ಲಿ ಬರೆದೆ ಈ ಮಾತುಗಳು ನಿಜಕ್ಕೂ ದೂರದೃಷ್ಟಿಯುತವಾಗಿತ್ತು ಎಂದು ನಾವು ಒಪ್ಪಲೇ ಬೇಕಾಗುತ್ತದೆ.

  • ಸುಮಾರು ಎಲ್ಲ ವಿಭಾಗಗಳಿಂದ ಉರ್ದು ಬಲ್ಲ ಜನರನ್ನು [ಸ್ವಯಂಪ್ರೇರಿತ ಹಾಗೂ ಬಲವಂತವಾಗಿ] ನಿವೃತ್ತಿಗೊಳಿಸಿ, ಅಮಾನತ್ತು, ಬರಖಾಸ್ತು ಮಾಡಿ ಆ ಜಾಗಕ್ಕೆ ಕಾರ್ಯತತ್ಪರತೆಯ ಕಾರಣ, ಹಾಗೂ ಹೊಸ ಅಧಿಕಾರಿಗಳಿಗೆ ಸಹಾಯಕವಾಗಿರಲೆಂಬ ಕಾರಣವನ್ನು ಕೊಟ್ಟು ತೆಲುಗು ಅಥವಾ ಇಂಗ್ಲೀಷ್ ಬಲ್ಲವರನ್ನು ನಿಯಮಿಸುವ ಪ್ರಯತ್ನಗಳು ಜೋರಾಗಿ ನಡೆದಿವೆ.

  • ಇನ್ನುಮುಂದೆ [ಭಾರತ ಸರಕಾರಕ್ಕೆ ಸೇರಿಹೋದ] ಈ ವಿಭಾಗಗಳ ಬಾಗಿಲುಗಳು ಮಣ್ಣಿನ ಮಕ್ಕಳಿಗೆ ಎಂದೆಂದಿಗೂ ಮುಚ್ಚಲಾಗಿದೆ ಎನ್ನುವುದು ವೇದ್ಯವೇ ಆಗುತ್ತಿದೆ. ಅವರು ಈಗಾಗಲೇ ಈ ವಿಷಯವಾಗಿ ಅಶಕ್ತ ನೆಲೆಯಲ್ಲಿರುವುದೂ ಎಲ್ಲರಿಗೂ ತಿಳಿದ ವಿಷಯ.

  • ಏಕೀಕರಣದ ಇನ್ನೊಂದು ಅದ್ಭುತ ಫಲವೆಂದರೆ ಇಲ್ಲಿಯವರೆಗೂ ತರಿಗೆಗಳ ಮೂಲಕ ತನ್ನ ಕಾಲಮೇಲೆ ತಾನೇ ನಿಂತಿದ್ದ ಹೈದರಾಬಾದ್ ಸಂಸ್ಥಾನ ಈಗ ತನ್ನ ದಿನನಿತ್ಯದ ಅಸ್ತಿತ್ವಕ್ಕಲ್ಲದೇ ರಾಷ್ಟ್ರನಿರ್ಮಾಣಕ್ಕಾಗಿಯೂ ಕೇಂದ್ರ ಸರಕಾರ ನೀಡುವ ದೇಣಿಗೆಯ ಮೇಲೆ ಆಧಾರಿತವಾಗಿ ಮುಂದುವರೆಯಬೇಕಾಗುತ್ತದೆ.

  • ಈ ಸಂಕಟದ ದನಿ ಸ್ಪಷ್ಟವಾಗಿ ನಮಗೆಲ್ಲರಿಗೂ ಕಾಣಿಸುತ್ತಿದೆ. ಭಾರತಕ್ಕೆ ಹೈದರಾಬಾದ್ ಸಂಸ್ಥಾನ ಸೇರುವ ಮುನ್ನ ಅವರಿಗೆ ತಮ್ಮದೇ ರಾಜನಿದ್ದ, ತಮ್ಮದೇ ಸಂವಿಧಾನವಿತ್ತು [ಆ ಸಂವಿಧಾನದಲ್ಲಿ ಅನೇಕ ಹುಳುಕುಗಳಿದ್ದಾಗ್ಯೂ ಅದು ತಮ್ಮದೇ ಆಗಿತ್ತು], ತಮ್ಮದೇ ರೀತಿಯಾದಂತಹ ಪ್ರಜಾಪ್ರಾತಿನಿಧ್ಯ ಮತ್ತು ಆಳ್ವಿಕೆಯಿತ್ತು. ಈ ಎಲ್ಲವನ್ನೂ ಆಗಷ್ಟೇ ಕಣ್ತೆರೆದು ಕಲಿಕೆಯ ಹಂತದಲ್ಲಿದ್ದ ಭಾರತದ ಸಂವಿಧಾನಕ್ಕೆ ಏಕೀಕರಣಗೊಳಿಸಲಾಯಿತು. ಈ ಏಕೀಕರಣವೂ ಸಂಸ್ಕೃತಿಯ ಐಕ್ಯವನ್ನು ಪರಿಗಣಿಸದೇ, ಭಾಷೆಯ ಆಧಾರದ ಮೇಲೆ, ಭಿನ್ನ ಸಂಸ್ಕೃತಿಗಳನ್ನು ಬಲವಂತವಾಗಿ ಐಕ್ಯ ಗೊಳಿಸಲಾಯಿತು.
ಬೆನಿಚೌ ಈಗಾಗಲೇ ವಿದಿತವಾದ ವಾದಗಳನ್ನು ಮೀರಿ ಹೊಸದೇನನ್ನೂ ಪುಸ್ತಕದಲ್ಲಿ ಹೇಳುವುದುಲ್ಲ. ಹೊಸ ವಿಶ್ಲೇಷಣೆಯನ್ನೂ ಒದಗಿಸುವುದಿಲ್ಲ. ಆದರೆ ಚರಿತ್ರೆಯ ಪುಟಗಳನ್ನು ಪುನಃ ತಿರುವಿಹಾಕಲು ಈ ಪುಸ್ತಕ ಎಡೆಮಾಡಿಕೊಡುತ್ತದೆ. ಅದೂ ಮುಖ್ಯವೇ.

Labels: 

No comments:

Post a Comment