Monday, March 9, 2009

ಶಕುಂತಳಾ ತಂದ ಹೊಸ ಹುರುಪು


ಚೆಗೆ ಬಿಡುಗಡೆಯಾದ ಶಕುಂತಳಾ ಪುಸ್ತಕಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಾ "ಅಶೋಕ ಹೆಗಡೆ, ವಿವೇಕ, ನಾಗರಾಜ್ ವಸ್ತಾರೆ, ಹೀಗೆ ಎಲ್ಲರೂ ಸಾಹಿತ್ಯೇತರ ವಲಯದಲ್ಲಿ ಕೆಲಸ ಮಾಡುತ್ತಾ, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವುದು ಅದ್ಭುತವಲ್ಲವೇ?" ಎಂದು ಒಬ್ಬರು ಹೇಳಿದರು. "ಇರಬಹುದು, ಸೋ ವಾಟ್?" ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. " ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. ಆದರೆ ಆಲೋಚಿಸಿ ನೋಡಿದರೆ ಎರಡೂ ಮುಖ್ಯ ಮಾತುಗಳು ಅನ್ನಿಸುತ್ತದೆ. ಭಿನ್ನ ವೃತ್ತಿಯಲ್ಲಿದ್ದವರು ಭಿನ್ನ ರೀತಿಯ ಅನುಭವವನ್ನು ಕನ್ನಡದ ಬರವಣಿಗೆಗೆ ಅಳವಡಿಸುತ್ತಾರೆ ಅನ್ನುವುದು ಒಂದು ವಾದ. ಆದರೆ ಆ ಭಿನ್ನತೆ ಹೇಗೆ ಸಾಹಿತ್ಯವನ್ನು ಪೋಷಿಸುತ್ತದೆ, ಬೆಳೆಸುತ್ತದೆ ಅನ್ನುವುದನ್ನು ನಾವು ನೋಡಬೇಕಾಗಿದೆ. ಭಿನ್ನವಾದ್ದೆಲ್ಲವೂ ಉತ್ತಮವಾಗಿರಬೇಕಿಲ್ಲ ಅನ್ನುವ ದೃಷ್ಟಿಯಿಂದ ವಸ್ತಾರೆಯವರ "ಸೋ ವಾಟ್?" ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಹೊಸ ಬರವಣಿಗೆಯನ್ನು ನಾವು ಅದರ ಭಿನ್ನತೆಯ ಕಾರಣಕ್ಕಾಗಿಯೇ ಅದು ಮುಖ್ಯ ಅಂತ ಪರಿಗಣಿಸಬೇಕಾಗಿಲ್ಲ ಅನ್ನುವ ಮಾತನ್ನು ಒಪ್ಪಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗುರುಪ್ರಸಾದ್ ಕಾಗಿನೆಲೆಯವರ ಕಥಾಸಂಕಲನ ಶಕುಂತಳಾ ಬಗ್ಗೆ ಕೆಲವು ಮಾತುಗಳನ್ನು ಬರೆಯಹೊರಟಿದ್ದೇನೆ. 

ಗುರು ಮೊದಲಿಗೆ ನಮ್ಮ ಗಮನವನ್ನು ಸೆಳೆಯುವುದು ಅವರ ಭಿನ್ನತೆಯಿಂದ. ಅವರನ್ನು "ನಗರಪ್ರಜ್ಙೆ"ಯ ಲೇಖಕ ಎಂದು ಕನ್ನಡದ ಸಂಪ್ರದಾಯವಾದಿ ವಿಮರ್ಶಕರಂತೆ ಒಂದು ಗೂಡಿನಲ್ಲಿ ಕೂಡಿಸಬಹುದು. ಅದೇ ಗೂಡಿನಲ್ಲಿ ಒಂದಂಶದವರಗೆ ಜಯಂತನ ಮುಂಬಯಿ ಕಥೆಗಳನ್ನೂ, ಚಿತ್ತಾಲರ ಶಿಕಾರಿಯಂತಹ ಬರಹವನ್ನೂ, ವಿವೇಕನ ಹುಲಿಸವಾರಿಯಂಥಹ ಕಥೆಗಳನ್ನೂ ಪೇರಿಸಿ ಅಲುಗಾಡಲೂ ಸಾಧ್ಯವಾಗದ ಬ್ರಾಯ್‌ಲರ್ ಫಾರ್ಮಿನ ಕೋಳಿಗಳಂತೆ ನಗರಪ್ರಜ್ಞಾವಾದಿ ವಿಮರ್ಶಕರು ಒಂದೆಡೆ ಪೇರಿಸಿ ಕೂಡಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಗುರುಪ್ರಸಾದರ ಭಿನ್ನತೆಯನ್ನು ಮತ್ತು ಅದರ ಪ್ರಾಮುಖ್ಯವನ್ನೂ ಗುರುತಿಸದೇ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಾಗೆ ನೋಡಿದರೆ ಗುರುವನ್ನು ಒಂದು ಪರಂಪರೆಯೊಳಗೆ ಅಡಕಗೊಳಿಸುವುದು ಕಷ್ಟದ ಮಾತು. ಇದಕ್ಕೆ ಕಾರಣಗಳು ಹೀಗಿರಬಹುದು:
 

  1. ಬರಹಗಾರರಿಗೆ ಸಾಮಾನ್ಯವಾಗಿ ಇರಬಹುದಾದ ಸಾಹಿತ್ಯಲೋಲುಪತೆಯನ್ನು ಗುರು ತೋರುವುದಿಲ್ಲ. ಅವರ ಪಾತ್ರಗಳಿಗೂ ಸಾಹಿತ್ಯದ ಡಿಸಿಪ್ಲಿನ್‌ಗೂ ಸಂಬಂಧ ಬಹುತೇಕ ಇಲ್ಲವಾದ್ದರಿಂದ ಬರಹದ ಪರಂಪರೆಯನ್ನು ಆವಾಹಿಸುವ ಪ್ರಮೇಯ ಅವರಿಗೆ ಬಹುಮಟ್ಟಿಗೆ ಬರುವುದಿಲ್ಲ.
  2. ತಮ್ಮ ಓದುಗರಿಗೆ ತಮ್ಮ ಬರವಣಿಗೆಯ ಸಂದರ್ಭವನ್ನು ವಿವರಿಸಬೇಕೆನ್ನುವ ತುರ್ತು ಅವರಿಗಿದ್ದಂತಿಲ್ಲ. ಹೀಗಾಗಿ ಅವರು ಅಮೆರಿಕದ ಸಮಾಜಕ್ಕೆ ಸೀಮಿತವಾದ ಸಂದರ್ಭದಲ್ಲಿ ಬರೆಯುವಾಗಲೂ ಅದನ್ನು ವಿವರಿಸಬೇಕೆನ್ನುವ ಭಾರವನ್ನು ಹೊರುವುದಿಲ್ಲ. ತಮ್ಮ ಓದುಗನನ್ನು ಬುದ್ಧಿವಂತನೆಂದು ಪರಿಗಣಿಸುವುದರಿಂದ - ಸಂದರ್ಭ ಕನ್ನಡ ಭಾಷೆ ನುಡಿಗೆ ಸಂಬಂಧಪಟ್ಟಿದ್ದಲ್ಲವಾದರೂ ಸಹಾಜವಾಗಿ ಕಾಣಿಸುತ್ತದೆ.
  3. ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ [ಶಕುಂತಲಾ ಕಥೆಯನ್ನು ಬಿಟ್ಟು] ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್‌ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ.
  4. ಮೇಲೆ ಹೇಳಿದ್ದೇ ಅವರ ದುರ್ಬಲವೂ ಆಗಬಹುದು. ನಾನು ಅವರಿಗೆ ಸಾಹಿತ್ಯ ಲೋಲುಪತೆ ಇಲ್ಲ ಅಂತ ಹೇಳಿದ್ದೆ, ಆದರೆ ಅವರು ವೈದ್ಯಕೀಯ ಜಗತ್ತಿನ ಸಂದರ್ಭಕ್ಕೆ ಬಂದಾಗ ಆ ಜ್ಞಾನದ ಲೋಲುಪತೆಗೆ ಶರಣಾಗಿಬಿಡುತ್ತಾರೆ. ಹೀಗಾಗಿ ಅವರ ಪಾತ್ರಗಳು ವೈದ್ಯಕೀಯ ಟರ್ಮಿನಾಲಜಿಯನ್ನು, ಆ ಲೋಕದ ವಿವರಗಳನ್ನು ಕಥನದ ಸಂದರ್ಭಕ್ಕೆ ಅವಶ್ಯವಿರುವುದಕ್ಕಿಂತ ತುಸು ಹೆಚ್ಚಿನಂಶದಲ್ಲೇ ಪ್ರಯೋಗಿಸುತ್ತಾರನ್ನಬಹುದು.
ಹೀಗೆ ಹಲವು ಕಾರಣಗಳಿಗಾಗಿ ಗುರು ಮುಖ್ಯರಾಗುತ್ತಾರೆ. ನಿಜಕ್ಕೂ ಅವರನ್ನು ಒಂದು ಪರಂಪರೆಯಲ್ಲಿ ಅಡಕಗೊಳಿಸಬೇಕಾದರೆ ಅದು ರಾಮಾನುಜಮ್ ಅವರ ಪರಂಪರೆ ಅಂತಲೇ ಹೇಳಬಹುದು. ರಾಮಾನುಜಮ್ ಅವರ ಕವಿತೆಗಳಲ್ಲಿ ಹೇಗೆ ಕನ್ನಡ ಸಂದರ್ಭವನ್ನು ವಿಶ್ವದ ವಿದ್ಯಮಾನಗಳ ಸಂದರ್ಭಕ್ಕೆ ಸಮಾನಾಂತರವಾಗಿ ತೆಗೆದೊಯ್ಯುತ್ತಿದ್ದರೋ [ಕುಂಟೊಬಿಲ್ಲೆ ಕವಿತೆ ನೋಡಿ] ಹಾಗೆ ಗುರು ಸೀಮಿತವಾಗಿ ಕನ್ನಡ ಮತ್ತು ತಮ್ಮ ಕಾಯಕದ ಕರ್ಮಭೂಮಿಯಾದ ಅಮೆರಿಕವನ್ನು ಬೆಸೆದು ಬಿಡುತ್ತಾರೆ. ಇದನ್ನು ಅವರು ಕೃತಕವಾಗಿ ಮಾಡುವುದಿಲ್ಲವಾದ್ದರಿಂದ ಅವರ ಪ್ರಯೋಗಗಳು ನನಗೆ ಮುಖ್ಯವೆನ್ನಿಸುತ್ತದೆ. ಈ ರೀತಿಯ ಪ್ರಯೋಗಗಳನ್ನು ಮುಖ್ಯವಾಗಿ ಝುಂಪಾ ಲಹಿರಿ ಇಂಗ್ಲೀಷಿನಲ್ಲಿ ಮಾಡಿದ್ದಾರೆ. ಆದರೆ ಕನ್ನಡದ ಸಂದರ್ಭಕ್ಕೆ ಬಹುಶಃ ಈ ಥರದ ಪ್ರಯೋಗ ಹೊಸದಿರಬಹುದು.

ಶಕುಂತಲಾ ಸಂಗ್ರಹದಲ್ಲಿ ಎರಡು ಎಳೆಗಳ ಕಥೆಗಳು ನನಗೆ ಕಂಡವು. ಮೊದಲೆನೆಯದು ರೊಆಲ್ಡ್ ಡಾಲ್ ಪರಂಪರೆಯ ಕಥೆಗಳು. ಇವುಗಳಲ್ಲಿ ಕಥೆಯ ಅಂತ್ಯದಲ್ಲಿ ಅನಿರೀಕ್ಷಿತ ತಿರುವುಗಳಿರುತ್ತವೆ - ಮತ್ತು ಒಂದು ಥರದ ಡಾರ್ಕ್ ಹ್ಯೂಮರ್ ಇರುತ್ತದೆ. ಅವರ ಅಲಬಾಮಾದ ಅಪಾನವಾಯು, ಬೀಜ, ಡ್ಯಾಡಿ, ದೆಜಾವೂ, ಸುಮ್ಮನೆ, ಹಾಗೂ ಸ್ವಲ್ಪ ಮಟ್ಟಿಗೆ ಮೊದಲ ತೇದಿ ಕಥೆಗಳು ಈ ಸರಣಿಗೆ ಸಂದಿದವು. ಅವರ ಮಿಕ್ಕ ಕಥೆಗಳು ಸತ್ಯಕ್ಕೂ ಮಿಥ್ಯೆಗೂ ನಡುವಿನ ಲೋಕದಲ್ಲಿ ತೇಲಾಡುತ್ತಾ ಹೊಸ ಅರ್ಥವಂತಿಕೆಯನ್ನು ಉಂಟುಮಾಡಲು ಪ್ರಯತ್ನಿಸುವ ಪ್ರಯೋಗಗಳಾಗಿವೆ - ಈ ಸರಣಿಯಲ್ಲಿ ಗಾಳಿಪಟ, ಸಿರಿಸಂಜೆ ಮತ್ತು ವಿಲ್ಲಾ ವೈದ್ಯ ಕಥೆಗಳನ್ನು ಸೇರಿಸಬಹುದು. 

ಶಕುಂತಲಾ ಕಥೆ ನನಗೇಕೋ ಬಹಳ ಕೃತಕ ಮತ್ತು ತಿಣುಕಿಬರೆದಂತಹ ಕಥೆ ಅನ್ನಿಸಿತು. ಅದಕ್ಕೆ ವಿಜಯ ಕರ್ನಾಟಕದ ಕಥಾಸ್ಪರ್ಧೆಯಲ್ಲಿ ಬಹುಮಾನ ಬಂತು ಅಂತ ವಸುಧೇಂದ್ರ ಹೇಳಿದಾಗ ಬಹುಶಃ ಈ ಕಥೆ ಬರೆಯುವಾಗ ಗುರುಪ್ರಸಾದರಿಗೆ ತಮ್ಮ ಓದುಗರು ಯಾರಿರಬಹುದೆಂಬ ಕಾಳಜಿಯುಂಟಾಗಿ ಅವರಿಗಾಗಿ [ಅಂದರೆ ಕಥಾಸ್ಪರ್ಧೆಯ ತೀರ್ಪುಗಾರರ ಗಮನವನ್ನ ಸೆಳೆಯಲು] ಹೀಗೆ ಬರೆದರೋ ಅನ್ನಿಸುತ್ತದೆ. ಇದೊಂದೇ ಕಥೆಯಲ್ಲಿ ಸಂಭಾಷಣೆಯ ಶೈಲಿ ಮಿಕ್ಕ ಕಥೆಗಳಿಗಿಂತ ಭಿನ್ನವಾಗಿದೆ. ಹಾಗೂ ಇದೊಂದೇ ಕಥೆ ಭಾರತ ಪರಿಸರದಲ್ಲೇ ಬರೆಯಬೇಕೆಂಬ ತುರ್ತನ್ನು ತೋರಿಸುತ್ತಿದೆ. ಮಿಕ್ಕವು ತಮ್ಮ ಸಂದರ್ಭಗಳಿಗನುಸಾರವಾಗಿ ಭಾರತ-ಅಮೆರಿಕದ ನಡುವೆ ತೆರೆದುಕೊಳ್ಳುತ್ತವೆ. ಮಿಕ್ಕ ಕಥೆಗಳು ಭಿನ್ನವಾಗಿದ್ದಿದ್ದರೆ ನಾನು ಶಕುಂತಲಾ ಕಥೆಯನ್ನು ಹೇಗೆ ನೋಡುತ್ತಿದ್ದೆನೋ ಅಥವಾ ಅದನ್ನು ಮೆಚ್ಚುತ್ತಿದ್ದೆನೋ ನನಗೆ ತಿಳಿಯದು.
 

ಈ ಸಂಕಲನದಲ್ಲಿರುವ ರೊಆಲ್ಡ್ ಡಾಲ್ ಪರಂಪರೆಯ ಕಥೆಗಳು ಅಂತ ನಾನು ಹೆಸರಿಸಿದವು ನಿಜಕ್ಕೂ ಅದ್ಭುತವಾದ ಕಥನ ಕಲೆಯನ್ನು ಒಳಗೊಂಡಿವೆ. ಕಥೆಯಂತ್ಯದಲ್ಲಿ ಬರುವ ತಿರುವು ಅನಿರೀಕ್ಷಿತವಾದರೂ ಎಲ್ಲೂ ಅಸಹಜ ಅನ್ನಿಸುವುದಿಲ್ಲ. ಈ ಎಲ್ಲ ಕಥೆಗಳಲ್ಲೂ ಇರುವ ವಿಷಾದಭರಿತ ಕುಹಕ ತುಂಬಾ ಪ್ರಭಾವಶಾಲಿಯಾಗಿದೆ. ಗುರುಪ್ರಸಾದ್ ಬರೆಯುವಾಗ ಮಡಿವಂತಿಕೆಯನ್ನು ತೋರಿಸುವುದಿಲ್ಲವಾದ್ದರಿಂದ ಅಲಬಾಮಾದ ಅಪಾನವಾಯು ವಿನಂತಹ ಕಥೆಯನ್ನು ಬಹಳ ಸಹಜವಾಗಿ ಬರೆದುಬಿಡುತ್ತಾರೆ. ಅವರ ಈ ಕಥೆಯಲ್ಲೂ ಮತ್ತು ಸುಮ್ಮನೆ, ದೆಜಾವೂ ಕಥೆಗಳಲ್ಲೂ ಅಮೆರಿಕಕ್ಕೇ ಖಾಸಗಿಯಾದ ಮಾತುಮಾತಿಗೆ ಕೋರ್ಟಿಗೆ ಹೋಗುವ "ಲಿಟಿಗೆಂಟ್ ಸೊಸೈಟಿ"ಯ ಹಿನ್ನೆಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಲಿಟಿಗೆಂಟ್ ಸೊಸೈಟಿಗೆ ಆಹಾರವನ್ನೊದಗಿಸುತ್ತಿರುವ ಮೀಡಿಯಾದ ಬಗ್ಗೆಯೂ ಕಥೆ ತನ್ನದೇ ರೀತಿಯಲ್ಲಿ ಟಿಪ್ಪಣಿಮಾಡುತ್ತದೆ. ಹತ್ತು ಹಲವು ವರ್ಷಗಳ ಹಿಂದೆ ಎರಡೂ ವಿಚಾರಗಳು ಕನ್ನಡಕ್ಕೆ ಪರಕೀಯ ಅನ್ನಿಸುತ್ತಿತ್ತೇನೋ. ಆದರೆ ಇಂದು ಮೀಡಿಯಾದ ಚರ್ಯೆಗಳನ್ನು ನಾವು ಸಹಜವಾಗಿ ನಮ್ಮದೇ ಅನ್ನುವ ಹಾಗೆ ಸ್ವೀಕರಿಸಬಹುದು. ಆದರೆ ಲಿಟಿಗೇಷನ್ ನಮಗೆ ಇನ್ನೊ ಅಷ್ಟು ಸಹಜವಾಗಿಲ್ಲ [ಬಹುಶಃ ನಮ್ಮ ಕೋರ್ಟುಗಳು ತ್ವರಿತಗತಿಯಲ್ಲಿ ತೀರ್ಮಾನ ಕೊಡದಿರುವುದೇ ಇದಕ್ಕೆ ಕಾರಣವಿರಬಹುದು, ಹಾಗೂ ಇದರಿಂದಾಗಿಯೇ ನಮ್ಮ ಜಗಳಗಂಟತನ ಹದ್ದುಬಸ್ತಿನಲ್ಲಿರಬಹುದು!!]. ಈ ಕಥೆಗಳು ಕನ್ನಡದ ಸಂದರ್ಭದಲ್ಲಿ ಸಹಜವೆನ್ನಿಸುವ ಕಥೆಗಳಲ್ಲ. ಆದರೆ ಬಹಳ ಸಹಜವಾಗಿ ಓದಿಸಿಕೊಂಡು ಹೋಗುತ್ತವೆ. ಅಂದರೆ ಈ ಕಥೆಗಳನ್ನ ಓದಿ ಅದರ ಅಂತರಂಗವನ್ನು ಮೆಚ್ಚಲಾದರೆ ನಾವು ಈಗಾಗಲೇ ಎಷ್ಟು ಗ್ಲೋಬಲಲೈಸ್ ಆಗಿದ್ದೇವೆ ಅನ್ನುವ ಸೂಕ್ಷ್ಮ ಮಾಪಕ ಇದಿರಬಹುದೇ? ಅಮೆರಿಕವನ್ನು ಬಿಟ್ಟು ಬಂದು ಭಾರತದಲ್ಲೇ ಆಸ್ಪತ್ರೆಯನ್ನು ಆರಂಭಿಸುವ ಮುಕುಂದನ ನಿರ್ಧಾರಕ್ಕೆ ಕಾರಣ ಎಷ್ಟು ಅರ್ಥರಹಿತ ಆದರೆ ಎಷ್ಟು ಗಹನವದದ್ದು ಅನ್ನುವುದನ್ನ ಒಟ್ಟಿಗೆ ನಮಗೆ ದರ್ಶನಮಾಡಿಸುವುದರಲ್ಲಿ ಗುರುಪ್ರಸಾದ್ ಸಫಲರಾಗುತ್ತಾರೆ.

ಅವರ ಸುಮ್ಮನೆ ಕಥೆ ಈ ಸಂಕಲನದ ಒಂದು ಉತ್ತಮ ಕಥೆ. ವಲಸೆ ಹೋದವರ ಭಾವನೆಗಳನ್ನು ಗ್ರಹಿಸಲು ಗುರುಪ್ರಸಾದ್ ಅದರಲ್ಲಿ ಪ್ರಯತ್ನ ಮಾಡುತ್ತಾರೆ. "ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ" ಅನ್ನುವ ಭಾವನೆಯನ್ನು ಹೇಳದೆಯೇ ಅವರು ನಮಗೆ ಸೂಚಿಸುತ್ತಿರುವಂತೆ ಭಾಸವಾಗುತ್ತದೆ. ಒಂದು ಮನೆಯನ್ನು ವಲಸೆಯಾದ ನಾಡಿನಲ್ಲಿ ಕಟ್ಟಿ, ಆ ಕಟ್ಟುವ ಪ್ರಕ್ರಿಯೆಯಲ್ಲಿ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂಬ [ಪೂಜೆಗೊಂದು ರೂಮು, ಕಂಬ ಹಾಗೂ ಅದು ಕಟ್ಟಲು ಸಾಧ್ಯವಾಗದಿದ್ದರೆ ಸಾವಿರದೈನೂರು ಡಾಲರ್ ಕಡಿಮೆ ಬೆಲೆಗೆ ಆ ಮನೆಯನ್ನು ಕೊಳ್ಳುತ್ತೇವೆಂಬ ಚೌಕಾಶಿ] ಅರ್ಥರಹಿತ ತಹತಹ ಮತ್ತು ಅಲ್ಲಿನ ಲಾವಾದೇವಿಗಳಿಗೆ ಬೇಕಾದ ಹುಂಬತನ - ಎಲ್ಲವೂ ಈ ಕಥೆಯಲ್ಲಿ ಸಹಜವಾಗಿ ಮೂಡಿಬಂದಿವೆ. ಕಥೆಯ ಶೀರ್ಷಿಕೆಯೂ ಆ ಹುಂಬತನದ ಪ್ರತೀಕವನ್ನಿಸುತ್ತದೆ. ಒಂದು ಸ್ಥರದಲ್ಲಿ "ಇಲ್ಲಿರುವುದು ಸುಮ್ಮನೆ" ಅನ್ನುವ ಅರ್ಥ ಬಂದರೆ, ಮತ್ತೊಂದು ಸ್ಥರದಲ್ಲಿ ರಿಯಾಲ್ಟರ್ ಮತ್ತು ಬಿಲ್ಡರ್‌ಗಳ ಜೊತೆಗಿನ ವಾದವಿವಾದಗಳೂ ಮಾತುಕತೆಗಳೂ "ಸುಮ್ಮನೆ" ಅನ್ನಿಸುತ್ತದೆ. ಹೀಗೆ ಅರ್ಥರಹಿತವಾದ ವಿಷಯಗಳನ್ನು ಗಹನಮಾಡುತ್ತಾ ನಂಬುತ್ತಾ ಹೋಗುವ ಕಥೆಯ ಹಿನ್ನೆಲೆಯ ವಿಷಾದವನ್ನು ನಾವು ಗಮನಿಸದಿರಲು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ರೊಆಲ್ಡ್ ಡಾಲ್ ರೀತಿಯಲ್ಲಿ ಈ ಕಥೆಯಲ್ಲೂ ಒಂದು ಅನಿರೀಕ್ಷಿತ ಅಂತ್ಯದ ಸಾಧ್ಯತೆ ನಮಗೆ ಕಾಣಿಸುತ್ತದೆ. ಆದರೆ ಗುರುವಿನ ಭಿನ್ನತೆ ಏನೆಂದರೆ ಆ ಅನಿರೀಕ್ಷಿತ ಅಂತ್ಯದ ಸಾಧ್ಯತೆಗಳನ್ನು ಅವರು ಸ್ಪಷ್ಟೀಕರಿಸದೆಯೇ ಓದುಗನ ಊಹೆಗೆ ಅದನ್ನು ಬಿಟ್ಟುಬಿಡುವ ಪ್ರಕ್ರಿಯೆ.


ಇದೇ ರೀತಿಯ ಅಂತ್ಯವಿರುವ ಕಥೆ ಬೀಜ. ಈ ಕಥೆ ಭಾರತೀಯ ಸಂಜಾತರ ಸಂಸಾರದಲ್ಲಿ
 ನಡೆದರೂ ಅದರ ಸಹಜತೆ ಬರುವುದು ಅಮೆರಿಕದಲ್ಲಿ ಅದು ಘಟಿಸುವುದರಿಂದ. ಇಲ್ಲಿನ ಸಂದರ್ಭದಲ್ಲಿ ಈ ಕಥೆಯ ಪಾತ್ರಗಳ ಪ್ರತಿಕ್ರಿಯೆಗಳು ತೀರಾ ಅಸಹಜ ಅನ್ನಿಸಬಹುದಿತ್ತೇನೋ. ತನ್ನ ಬೀಜವನ್ನು ಕ್ಯಾನ್ಸರಿನಿಂದಾಗಿ ಕಳೆದುಕೊಳ್ಳಬೇಕಾದ ಹದಿನಾರು ವರ್ಷದ
"ಟೆಸ್ಟಿಕಲ್ಲಿನ ಕ್ಯಾನ್ಸರು ತುಂಬಾ ಒಳ್ಳೆಯ ಕ್ಯಾನ್ಸರಂತೆ. ಪರೀಗೆ ಕ್ಯಾನ್ಸರಲ್ಲೂ ಒಳ್ಳೇದಿರುತ್ತೆ ಅಂತ ಗೊತ್ತಿರಲಿಲ್ಲ. ಫಣೀಶ ಹೇಳಿದ್ದ: 'ಅಕಸ್ಮಾತ್ ದೇವರು ಏನಾರ ಪ್ರತ್ಯಕ್ಷ ಆಗಿ ನಿನಗೆ ಯಾವುದಾದರೂ ಒಂದು ಕ್ಯಾನ್ಸರು ಬರಲೇಬೇಕು, ಲಂಗು, ಲಿವರು, ಕಿಡ್ನಿ, ಬ್ರೈನು, ಬ್ರೆಸ್ಟು ಯಾವುದು ಬೇಕು ಕೇಳ್ಕೋ ಅಂತ ಕೇಳಿದರೆ, ಗಂಡಸರಿಗೆ ಬೆಸ್ಟ್ ಅಂದರೆ ಟೆಸ್ಟಿಕಲ್ಲಿನ ಕ್ಯಾನ್ಸರ್ ಕೊಡಪ್ಪಾ ಅಂತ ಕೇಳ್ಕೋಬೇಕು, ಗೊತ್ತಾ. ಬರೀ ಕೀಮೋ ತೆಗೋಬೇಕಾದರೆ ಮಾತ್ರ ತೊಂದರೆ. ಆಮೇಲೆ, ನೂರಕ್ಕೆ ಆಲ್ಮೋಸ್ಟ್ ನೂರುಭಾಗ ವಾಸಿ ಆಗುತ್ತೆ."
ಈ ಕಥೆಯ ಅಂತ್ಯದ ತಿರುವು ಬರುವುದು ಅರವಿಂದನಿಗೆ ಬರುವ ಫೋನ್ ಕಾಲ್ ನಿಂದಾಗಿ. ಆದರೆ ಆ ಕಾಲ್ ಯಾರಿಂದ ಅನ್ನುವ ವಿವರವನ್ನು ಗುರು ಓದುಗರ ಊಹೆಗೆ ಬಿಟ್ಟುಬಿಡುತ್ತಾರೆ. 

ಮೊದಲ ತೇದಿ ಕಥೆ ಒಂದು ಥರದಲ್ಲಿ ನಿರರ್ಥಕತೆಯನ್ನು ಸೆಲೆಬ್ರೇಟ್ ಮಾಡುವ ಕಥೆ. ಇದರಲ್ಲಿ ಕೆಲಸ ಕಳೆದುಕೊಂಡ ಕಥಾನಾಯಕನಿಗೆ ಸಮಯದ ಅಭಾವ ಇದ್ದಕ್ಕಿದ್ದಂತೆ ಇಲ್ಲವಾಗಿ ಯಾಕೆ? ಏನು? ಅನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುವ ಅವಕಾಶ ಉಂಟಾಗುತ್ತದೆ. ಈ ಅವಕಾಶವನ್ನುಪಯೋಗಿಸಿ ಆತ ಒಂದು ಡೇಟ್‌ನ್ನೂ ಕೆಲಸವನ್ನೂ ಸಮಾನಾಂತರವಾಗಿ ಹುಡುಕುತ್ತಾನೆ. ತಮಾಷೆಯೆಂದರೆ ಆತ ಕೆಲಸಕ್ಕಿಂತ ಹೆಚ್ಚಾಗಿ ತಯಾರಿ ನಡೆಸುವುದು ಇಂಟರ್‌ನೆಟ್‌ನಲ್ಲಿ ಭೇಟಿಯಾಗಿ ಮೌಖಿಕವಾಗಿ ಭೇಟಿಯಾಗಬೇಕಾದ - ಒಂದೆರಡುದಿನಗಳಲ್ಲಿ ಸಂಬಂಧವೇ ಕಳಚಿಹೋಗಬಹುದೆನ್ನುವ ಡೇಟ್‌ನ್ನ ಹೇಗೆ ಮಾತಾಡಿಸಬೇಕು ಅನ್ನುವ ಬಗ್ಗೆ! ಕಡೆಗೆ ಅವನು ಸಫಲನಾಗುವುದಕ್ಕೂ ಅವನ ತಯಾರಿಗೂ ಸಂಬಂಧವೇ ಇಲ್ಲವೆನ್ನುವಂತೆ ಕಥೆ ಅಂತ್ಯವಾಗುತ್ತದೆ. ಕಥೆ ಮುಗಿಸಿದಾಗ ಈ ನಿರರ್ಥಕತೆಯ ವಿಷಾದ ನಮ್ಮ ಮನಸ್ಸಿನಲ್ಲಿಯೇ ಉಳಿದು ಬಿಡುತ್ತದೆ. ಈ ಕಥೆಯನ್ನು ಓದಲು ಪ್ರಾರಂಭಿಸಿದಾಗ ನನಗೆ ಇದರಲ್ಲಿ ಅನೇಕ ಸಾಧ್ಯತೆಗಳಿರಬಹುದು ಅನ್ನುವ ನಿರೀಕ್ಷೆಯಿತ್ತು. ಆದರೆ ಇದರ ಅಂತ್ಯ ನಾನು ಅಂದುಕೊಂಡಷ್ಟು ಸಮಾಧಾನ ತರಲಿಲ್ಲ. ಫರ್ಹಾನ್ ಅಖ್ತರ್‌ನ ಡಾನ್ ಸಿನೇಮಾದ ಬದಲಾಯಿಸಿದ ಕಥೆ ಹೆಚ್ಚು ಕ್ರೆಡಿಬಲ್ ಆದರೂ ಚಂದ್ರ ಬಾನೊಟ್‌ನ ಡಾನ್‌ಗೆ ಇದ್ದ "ಚಾರ್ಮ್" ಇರಲಿಲ್ಲ ಅನ್ನಿಸಿದ ಹಾಗೆ, ಒಟ್ಟಾರೆ ಗುರುಪ್ರಸಾದ್ ಹೇಳುತ್ತಿರುವುದು ಅವರ ಶೈಲಿಗೆ, ಕಥನ ಕಲೆಗೆ, ಸಹಜ ಅನ್ನಿಸಿದರೂ ಅದರಲ್ಲಿ ಇನ್ನೇನೋ ಇರಬೇಕಾಗಿತ್ತು ಅನ್ನುವ ಅಸಮಾಧಾನ ಈ ಕಥೆಯಲ್ಲಿ ಕಾಣಿಸುತ್ತದೆ.
 

ದೆಜಾವೂ ನನಗೆ ಹೊಟ್ಟೆಯುರಿ ತರಿಸಿದ ಕಥೆ. ಈ ಕಥೆಯನ್ನು ನಾನು ಬರೆಯಬೇಕಿತ್ತು ಅಂತ ನನಗನ್ನಿಸಿತು. ಆದರೆ ಗುರು ಬರೆದಷ್ಟು ಸಮರ್ಥವಾಗಿ ನಾನು ಈ ಥೀಮನ್ನು ಹಿಡಿದು ಕಥೆ ಬರೆಯುತ್ತಿದ್ದೆ ಅನ್ನುವ ನಂಬಿಕೆ ನನಗಿಲ್ಲ. ಒಂದು ಥರದಲ್ಲಿ ಈ ಕಥೆ ಮೊದಲ ತೇದಿಗೆ ವಿರುದ್ಧವಾದ ಕಥೆ. ಅದರಲ್ಲಿ ಜೀವನ ನಿರರ್ಥಕವಾಗಿ ಕಂಡರೆ ಈ ಕಥೆಯಲ್ಲಿ ಸಾವಿನಲ್ಲೂ ಶವ ಸಿಂಗಾರದಲ್ಲೂ ಒಂದು ಅರ್ಥ ಕಾಣಿಸುತ್ತದೆ. ಕಾಫ್ಕಾನ ಕ್ಯಾಸಲ್ ಕಾದಂಬರಿಯಲ್ಲಿ ಬರುವಂತೆ ಕಥಾನಾಯಕನ ಸುತ್ತಲೂ ಒಂದು ಅನಾಮಿಕ ಕೈ ಪಿತೂರಿ ಹೂಡುತ್ತಿರುವಂತೆ ಕಾಣಿಸಿದರೂ.. ಯಾವ ಕ್ಷಣದಲ್ಲೂ ಕಥಾನಾಯಕ ವಿಚಲಿತನಾಗುವಂತೆ ಕಾಣುವುದಿಲ್ಲ. ಅವನ ಸ್ಥಿತಪ್ರಜ್ಞಾವಸ್ಥೆಯಿಂದ ಆತ ಹೊರಬರುವುದೇ ಇಲ್ಲ. ಮಾಡುವ ಕೆಲಸದಲ್ಲಿ ತನಗೇ ಅದಮ್ಯ ಸಂತೋಷವನ್ನು ಸಂಪಾದಿಸುವುದಷ್ಟೇ ಅವನ ಉದ್ದೇಶವನ್ನಿಸುತ್ತದೆ. ಪ್ರತಿಬಾರಿಯೂ ಅವನ ಕೆಲಸದ ಕುಶಲತೆಯನ್ನು ಯಾರಾದರೂ ಗುರುತಿಸಿದರೆಂದರೆ ಅದು ಅವನಿಗೆ ದುರಂತವಾಗಿ ತಯಾರಾಗುತ್ತದೆ! ಅದು ಆಸ್ಪತ್ರೆಯಲ್ಲಿನ ಮೊದಲ ಕೆಲಸವಾಗಿರಬಹುದು ಅಥವಾ ಎಂಬಾಮಿಂಗ್ ಮಾಡುತ್ತಿದ್ದ ಫ್ಯೂನರಲ್ ಹೋಮಿನದ್ದಗಿರಬಹುದು. ಕಥೆಯಂತ್ಯಕ್ಕೆ ಅವನು ಹೊಟ್ಟೇಪಾಡಿಗಾಗಿ ಜಗತ್ತು ಅವನಲ್ಲಿದೆ ಅಂತ ಗುರುತಿಸಿದೆಯೆನ್ನಲಾದ ಕುಶಲತೆಯನ್ನು ಕಾರ್ಯನಿರತ ಮಾಡಲು ಹೋದಾಗಲೇ ಅವನು ವಿಫಲನಾಗುತ್ತಾನೆ. ಈ ಕಥೆಯಲ್ಲಿ ಅಡಕವಾದ ವಿಷಾದದ ಛಾಯೆ ಗುರುಪ್ರಸಾದರ ಎಲ್ಲ ಕಥೆಗಳಲ್ಲೂ ನಮಗೆ ಕಾಣಸಿಗುತ್ತದೆ.
 

ಡ್ಯಾಡಿ ಕಥೆಯಲ್ಲಿ ಜೀವನದಲ್ಲಿನ ಮೆಕನಿಸ್ಟಿಕ್ ಮುಖ ನಮಗೆ ಗೋಚರವಾಗುತ್ತದೆ. ಎಲ್ಲ ಕೆಲಸಗಳೂ ಸಂಬಂಧಗಳೂ ಪೂರ್ವಿಭಾವಿಯಾಗಿ ನಿರ್ಧರಿಸಿ ನಡೆಸುತ್ತಿರುವಂತೆ ತೋರಿದರೂ ಅಲ್ಲಲ್ಲಿ ಬರುವ ಅನಿಯೋಜಿತ ವಿಷಯ, ಘಟನೆಗಳನ್ನು ಸಂಭಾಳಿಸುವುದು ಹೇಗೆ ಅನ್ನುವ ಯೋಚನೆಯಲ್ಲೇ ಕಥಾನಾಯಕ ಮತ್ತು ನಾಯಕಿ ತಮ್ಮ ಜೀವನವನ್ನು ಕಳೆಯುತ್ತಿರುವಂತೆ ಅನ್ನಿಸುತ್ತದೆ. ಆ ಮೆಕನಿಸ್ಟಿಕ್ ಬದುಕಿನ ಪರಾಕಾಷ್ಠೆಯೇ ತಾಯಿ ತನ್ನ ಎದೆಯ ಹಾಲನ್ನು ಪಂಪಿನ ಮೂಲಕ "ಕರೆದು" ಬಾಟಲಿಗೆ ತುಂಬಿ ಸಮಯಕ್ಕನುಸಾರವಾಗಿ ಮಗುವಿಗೆ ಕುಡಿಸುವಂತೆ ಏರ್ಪಾಡು ಮಾಡುವ ಪ್ರಕ್ರಿಯೆ. ಕಡೆಗೂ ಈ ಸಂಬಂಧವನ್ನು ನಡೆಸುತ್ತಿರುವುದು ಯಂತ್ರಗಳಲ್ಲ - ಮನುಷ್ಯರು ಅಂತ ನಿರೂಪಿಸುವುದಕ್ಕೇ ಗುರು ನಮ್ಮನ್ನು ದಂಗಾಗಿಸುವಂತಹ ಅಂತ್ಯವನ್ನು ಕಥೆಗೆ ತರುತ್ತಾರೆ. ಈ ಅಂತ್ಯ ಅವರ ಇತರ ಕಥೆಗಳಲ್ಲಿದ್ದಂತೆ ಕೆಲವು ಸೂಕ್ಷ್ಮ ಸಾಧ್ಯತೆಗಳನ್ನು ಅಲ್ಲಗಳೆದು ಸ್ವಲ್ಪ ಒರಟಾಗಿಯೇ ಅಂತ್ಯಗೊಳ್ಳುತ್ತದೆ. ಹೀಗಾಗಿ ಈ ಕಥೆ ನನಗೆ ಹೆಚ್ಚು ರೊಆಲ್ಡ್ ಡಾಲ್ ಮತ್ತು ಕಡಿಮೆ ಗುರುಪ್ರಸಾದರದು ಅನ್ನಿಸಿತು. ಆದರೆ ಸಂಬಂಧಗಳ ಯಾಂತ್ರಿಕತೆ, ಭಾವಹೀನತೆ ಮತ್ತು ಅದರೊಳಗಿನ ಯೋಜನಾಬದ್ಧತೆ ನೋಡಿದಾಗ ನನಗೇಕೋ ವುಡಿ ಅಲೆನ್‌ನ 'ಸ್ಲೀಪರ್' ಸಿನೇಮಾ ನೆನಪಾಯಿತು.ಸ್ಲೀಪರ್ ಭವಿಷ್ಯದಲ್ಲಿ ನಡೆಯುವ ಒಂದು ಸಿನೇಮಾ. ಭೂಮಿಯಲ್ಲಿ ಒಂದು ಅಣುಯುದ್ಧ ನಡೆದು ಹಳೆಯ ಲೋಕವೆಲ್ಲಾ ನಾಶವಾದನಂತರ ಹುಟ್ಟಿಕೊಳ್ಳುವ ತಾಂತ್ರಿಕತೆಯ ಆಧಾರದ ಮೇಲೆ ಜಗತ್ತು ನಡೆಯುತ್ತಿರುವಾಗ ಹಿಂದಿನ ಲೋಕದಿಂದ ಅಕಸ್ಮಾತ್ ಬಚಾವಾದ ನಾಯಕ ವುಡಿ ಈ ಲೋಕವನ್ನು ಹೇಗೆ ನೋಡುತ್ತಾನೆ ಅನ್ನುವುದನ್ನು ಈ ಚಿತ್ರ ಅದ್ಭುತವಾಗಿ ಗ್ರಹಿಸುತ್ತದೆ. ಈ ಸಿನೇಮಾದಲ್ಲಿ ಊಟವೂ ಮೈಥುನವೂ ಪ್ರೀ-ಪ್ರೋಗ್ರಾಮ್ಡ್. ಎಲ್ಲವೂ ಕೆಲಸದ ಷೆಡ್ಯೂಲಿಗೆ ತಕ್ಕಂತೆ ನಡೆಯುತ್ತದೆ. ಗುರುಪ್ರಸಾದರ ಕಥೆಯಲ್ಲಿ ಆ ಸಾಧ್ಯತೆಯನ್ನು ಅಣುಸಮರವಿಲ್ಲದೆಯೇ ನಾವು ವರ್ತಮಾನದಲ್ಲೇ ಕಾಣಬಹುದು. 

ಗಾಳಿಪಟ ಸತ್ಯ-ಕನಸು-ಮಿಥ್ಯೆಗಳ ನಡುವೆ ತೇಲಾಡುವ ಕಥೆ. ಒಂದೊಮ್ಮೆ ಅದು ಅಮೆರಿಕದಲ್ಲಿ ನಡೆಯುತ್ತಿದೆ ಅನ್ನಿಸಿದರೂ [ಆಸ್ಪತ್ರೆಯಲ್ಲಿ ಅಪಾಯಿಂಟ್‌ಮೆಂಟಿಗಾಗಿ ಕ್ರೆಡಿಟ್ ಕಾರ್ಡಿನ ನಂಬರ್ ಕೇಳುವ ಪ್ರಸಂಗ] ಅದು ಎಲ್ಲಿ ನಡೆಯುತ್ತಿದೆ ಅನ್ನುವುದೇ ಗೊತ್ತಾಗುವುದಿಲ್ಲ. ಅಲ್ಲಿ ಜೆ.ಸಿ.ರಸ್ತೆಯೂ ಏರ್‍ಪೋರ್ಟೂ ಬಂದುಬಿಡುತ್ತದೆ. ಹೀಗಿರುವ ಸೆಟ್ಟಿಂಗಿನಲ್ಲಿ ಲೇಖಕನಿಗೆ ದೊರಕಬಹುದಾದ ಸ್ವಾತಂತ್ರವನ್ನು ಗುರುಪ್ರಸಾದ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಈ ಕಥೆಗೆ ನಾವು ಪರಂಪರೆಯನ್ನು ಹುಡುಕಹೊರಟರೆ ಮತ್ತೆ ರಾಮಾನುಜಮ್‌ಅವರ "ಮತ್ತೊಬ್ಬನ ಆತ್ಮಚರಿತ್ರೆ" ಮತ್ತು "ಬುದ್ಧಿವಂತರಿಗೆ ಕನಸು ಬಿದ್ದರೆ" ಯತ್ತ ಮುಖಮಾಡಬೇಕಾಗುತ್ತದೆ.
 

ಸಿರಿಸಂಜೆ ಕಥೆಯಲ್ಲಿ ಮಿಕ್ಕೆಲ್ಲ ಕಥೆಗಳಲ್ಲಿ ಮಾಯವಾಗಿದ್ದ ಸಾಹಿತ್ಯ ಲೋಲುಪತೆ ತಲೆಹಾಕಿಬಿಡುತ್ತದೆ. ಜ್ಯಾಕಿ ಮತ್ತು ನೀನಾರ ನಡುವೆ ಜೇನ್ ಆಸ್ಟನ್, ಅಮೃತಾ ಪ್ರೀತಂ, ಸಾಹಿರ್, ಇಮ್ರೋಜ್, ದಾಸ್ತೊಯೆವ್‍ಸ್ಕಿ ಮತ್ತು ಯೇಟ್ಸ್ ಈ ಕಥೆಯಲ್ಲಿ ಏಕಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವುದು ತಿಳಿಯುವುದಿಲ್ಲ. ನೇರವಾದ, ಸರಳವಾದ, ಅದೇ ಕಾಲಕ್ಕೆ ಗಹನವಾದ ಈ ಕಥೆಯನ್ನು ಗುರುಪ್ರಸಾದ್ ಸಾಹಿತ್ಯಲೊಲುಪತೆಗೆ ಬಲಿಯಾಗಿ ಅದರ ಪ್ರಭಾವವನ್ನು ಕಡಿಮೆ ಮಾಡಿ ಸಾಧ್ಯತೆಗಳನ್ನು ಸೀಮಿತಗೊಳಿಸಿಬಿಟ್ಟಿದ್ದಾರೆ ಅನ್ನಿಸುತ್ತದೆ.


ವಿಲ್ಲಾ ವೈದ್ಯ ಕಥೆಯಲ್ಲಿ ಗುರು ಬಹುಶಃ ಬಹಳ ಗಹನವಾದದ್ದನ್ನು ಹೇಳುತ್ತಿದ್ದಾರೆ ಅನ್ನಿಸಿತಾದರೂ ಅದರ ಎಲ್ಲ ಆಯಾಮಗಳನ್ನೂ ಬಗೆಯಲು ನನಗೆ ಸಾಧ್ಯವಾಗಿಲ್ಲ. ಈ ಸಂಕಲನದಲ್ಲಿ ಓದಲು ಸ್ವಲ್ಪ ಜಟಿಲ ಅನ್ನಿಸುವಂತಹ ಕಥೆ ಇದೇ ಏನೋ. ಈ ಕಥೆ ಅವರ ಇತರ ಕಥೆಗಳಿಗಿಂತ ಭಿನ್ನವಾಗಿದೆ ಹಾಗೂ ಒಂದೇ ಓದಿಗೆ ಒಗ್ಗಿಸಿಕೊಳ್ಳದ ಕಥೆಯಾಗಿದೆ. ಇದರಲ್ಲಿ ನನಗೆ ಯಾವ ಹುಳುಕೂ ಕಾಣದಿದ್ದಾಗ್ಯೂ ಅದರ ಅರ್ಥಗಳ ಪದರಗಳು ಪ್ರಕಟವಾಗುತ್ತಿಲ್ಲ. ಬಹುಶಃ ಎಲ್ಲ ಕಥೆಗಳಿಗೂ ಸಮಾನವಾಗಿ ಪ್ರತಿಕ್ರಿಯಿಸಬೇಕೆಂಬ ತುರ್ತಿನಲ್ಲಿ ನಾನು ಈ ಕಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಆದರೆ ಈ ಮೊದಲ ಓದಿಗೆ ಕಥೆ ನನಗೆ ದಕ್ಕಿಲ್ಲವಾದ್ದರಿಂದ ಅದನ್ನು ಇಲ್ಲಿಗೇ ಬಿಡುತ್ತೇನೆ. ಮುಂದೆ ಎಂದಾದರೂ ಏನಾದರೂ ತೋಚಿದರೆ ಆ ಬಗ್ಗೆ ಬರೆದೇನು. 

ಒಟ್ಟಾರೆ ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ.
 


ಎಂ.ಎಸ್.ಶ್ರೀರಾಮ್.

Labels: 

No comments:

Post a Comment