Sunday, March 8, 2009

ಚೆ ಜೊತೆ ಪ್ರವಾಸ: ಮೋಟರ್ ಸೈಕಲ್ ಡೈರೀಸ್ - ಭಾಗ ೨


ಇತ್ತೀಚೆಗೆ ನಾನು ಚೆ ನ ಪುಸ್ತಕ ಮೊಟಾರ್ ಸೈಕಲ್ ಡೈರೀಸ್ ಬಗ್ಗೆ ಬರೆದಿದ್ದೆ. ಇದನ್ನು ಬರೆದದ್ದು ಚೆ ನ ಪುಸ್ತಕ ಹಾಗೂ ಅದೇ ಹೆಸರಿನ ಸಿನೆಮಾ ನೋಡಿದ ನಂತರ. ಆ ಲೇಖನವನ್ನು ಬರೆದ ನಂತರ ಅದಕ್ಕೆ ಸಮಾನಾಂತರವಾಗಿ ಬಂದ ಇನ್ನೊಂದು ಪುಸ್ತಕವನ್ನು ಓದುವ ಅವಕಾಶ ನನಗೆ ಸಿಕ್ಕಿತು. ಈ ಪುಸ್ತಕವನ್ನು ಬರೆದದ್ದು ಚೆ ನ ಜೊತೆಗೆ ಯಾತ್ರೆಯನ್ನು ಕೈಗೊಂಡ ಆಲ್ಬರ್ಟೋ ಗ್ರನಾಡೊ. ತುಸು ಬಾಲಿಶವೆನ್ನಿಸುವ ಚೆ ನ ಪುಸ್ತಕಕ್ಕಿಂತ ಈ ಪುಸ್ತಕ ಹೆಚ್ಚಿನ ಆಸಕ್ತಿಹುಟ್ಟಿಸುತ್ತದೆ. ಮೊಟಾರ್ ಸೈಕಲ್ ಡೈರೀಸ್ ಸಿನೇಮಾ ಮಾಡಿದವರು ಆಲ್ಬರ್ಟೋನ ಮಾರ್ಗದರ್ಶನ ಪಡೆದಿದ್ದರು. ಚೆ ನ ಪುಸ್ತಕ ೧೯೬೭ರಲ್ಲಿ ಪ್ರಕಟಗೊಂಡಿತ್ತು. ಆದರೆ ಆಲ್ಬರ್ಟೋನ ಪುಸ್ತಕ ಬೆಳಕು ಕಂಡದ್ದು ೧೯೭೮ರಲ್ಲಿ! ಇದನ್ನು ಕಂಡರೆ ೧೯೫೧-೫೨ರಲ್ಲಿ ಕೈಗೊಂಡ ಯಾತ್ರೆಯ ಬಗೆಗಿನ ಪುಸ್ತಕ ಸುಮಾರಷ್ಟುದಿನ ಡಬ್ಬದಲ್ಲೇ ಉಳಿದು ಇಷ್ಟು ದಿನಗಳ ನಂತರ ಹೊರಬಂದಿದೆಯೆಂದಾಯಿತು. ಅನುವಾದಕನ ಟಿಪ್ಪಣಿಯ ಪ್ರಕಾರ ಆಲ್ಬರ್ಟೋ ನಿಧಾನವಾಗಿ ಪುಸ್ತಕವನ್ನು ಹೊರತಂದಿದ್ದರಿಂದ ಅವನಿಗೆ ಅದನ್ನು ಮತ್ತೊಮ್ಮೆ ಪರಿಷ್ಕರಿಸುವ, ಆ ಘಟನೆಗಳನ್ನು ಸ್ವಲ್ಪ ದೂರದಿಂದ ವಿಶ್ಲೇಶಿಸಿ ನೋಡುವ ಅವಕಾಶ ದೊರೆಯಿತು. ಅದು ಸರಿ. ಆದರೆ ಸ್ಪಾನಿಷ್ ನಲ್ಲಿ ಬರೆದ ಈ ಪುಸ್ತಕದ ಇಂಗ್ಲೀಷ್ ಅನುವಾದ ಪ್ರಕಟವಾದದ್ದು ೨೦೦೩ನೇ ಇಸವಿಯಲ್ಲಿ. ಬಹುಶಃ ಸಿನೇಮಾ ತಯಾರಾದ್ದರಿಂದ ಆ ಲೇಖರನ್ನು ಚರಿತ್ರೆಯಿಂದ ಹೆಕ್ಕಿ ತರಲಾಯಿತೇನೋ. ಅದೇ ರೀತಿಯಲ್ಲಿ ಆ ಪುಸ್ತಕಕ್ಕೂ ಒಂದು ಗತಿ ಕಂಡಂತಾಯಿತು. ಚೆ ನ ಪುಸ್ತಕದಲ್ಲಿ ಹಾಗೂ ಸಿನೇಮಾದಲ್ಲಿ ಸಿಗುವ ಒಳನೋಟಗಳಿಗಿಂತ ಭಿನ್ನವಾದ ದೃಷ್ಟಿ ಈ ಪುಸ್ತಕದಲ್ಲಿ ನಮಗೆ ದೊರೆಯುತ್ತದೆ. ಸಿನೇಮಾದಲ್ಲಿ ಚೆ ನನ್ನ ಗಂಭೀರ ವ್ಯಕ್ತಿಯಾಗಿಯೂ ಆಲ್ಬರ್ಟೋನನ್ನ ಖುಶಿಯಿಂದಿರುವ ಸ್ವಲ್ಪಮಟ್ಟಿಗೆ ಗುರಿಹೀನ ವ್ಯಕ್ತಿಯನ್ನಾಗಿ ಚಿತ್ರಿಸಿಲಾಗಿದೆ. ಬಹುಶಃ ಇದಕ್ಕೆ ಕಾರಣ ಚೆ ನ ಆಗಿನ ಮನಸ್ಥಿತಿಯನ್ನು ಚಿತ್ರಿಸುವುದಕ್ಕಿಂತ, ಭವಿಷ್ಯದಲ್ಲಿ ಚೆ ನ ಜೀವನ ಪಡೆದ ತಿರುವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರಿತ್ರೆಯನ್ನು ಮರುಸೃಷ್ಟಿಸಿದ್ದರಿಂದ ಹೀಗಾಗಿರಬಹುದೇನೋ. ಆಲ್ಬರ್ಟೋ ಚೆ ಗಿಂತ ಆರು ವರ್ಷ ಹಿರಿಯ, ತನ್ನ ವಿದ್ಯಾಭ್ಯಾಸವನ್ನು ಅವನು ಮುಗಿಸಿದ್ದ, ತನ್ನ ಕೆಲಸದ ಬಗ್ಗೆ ಅವನಿಗೆ ಅಸಮಾಧಾನವೂ ಇತ್ತು ವಸ್ತುಸ್ಥಿತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ತುಡಿತವೂ ಇತ್ತು. ಅಂದಿನ ಕಾಲಘಟ್ಟಕ್ಕೆ ಆಲ್ಬರ್ಟೋ ತನ್ನ ಹೃದಯಕ್ಕಿಂತ ಹೆಚ್ಚು ಮೆದುಳಿನಿಂದ ಆಲೋಚಿಸುವವನಾಗಿದ್ದನೆನ್ನಿಸುತ್ತದೆ. ಬಹುಶಃ ಚೆ ನ ಹೃದಯದಲ್ಲಿ ಆಲ್ಬರ್ಟೋನಿಗಿಂತ ಹೆಚ್ಚು ಕಿಚ್ಚಿದ್ದು ಯಾವುದೇ ವಸ್ತುಸ್ಥಿತಿಗೆ ತಕ್ಷಣ ಚೆ ಗಿಂತ ಹೆಚ್ಚು ಸಹಜವಾಗಿ ಬಿಸಿರಕ್ತದಿಂದ ಪ್ರತಿಕ್ರಿಯಿಸುವ ಶಕ್ತಿಯಿತ್ತೆಂದು ಎರಡೂ ಪುಸ್ತಕಗಳನ್ನು ಓದಿದಾಗ ಅನ್ನಿಸುತ್ತದೆ. ಈ ಸಾಲುಗಳು ಆಲ್ಬರ್ಟೋನ ಪುಸ್ತಕದ ಮೊದಲಭಾಗದಿಂದ ಆಯ್ದವು:

"ನನಗೆ ಈಗಿನ ವಸ್ತುಸ್ಥಿತಿಯ ಬಗ್ಗೆ ಅಷ್ಟೇನೂ ಖುಶಿಯಿಲ್ಲ. ನನ್ನ ಬಟ್ಟೆ ಕಟ್ಟಿ ಅಮೆರಿಕಾವನ್ನು [ದಕ್ಷಿಣ ಅಮೇರಿಕಾ] ನೋಡಿ ಅರಿಯಬೇಕೆಂದು ನನ್ನಂತರಂಗ ಹೇಳುತ್ತಿದೆ. ಚನಾರ್ ನಲ್ಲಿ ಕಳೆದ ಕಾಲ, ಕುಷ್ಠರೋಗಿಗಳೀಗೆ ಏನಾದರೂ ಸಹಾಯ ಮಾಡಬೇಕೆಂಬ ಕನಸು ಹೊಸ ದಿಗಂತಗಳನ್ನು ಹುಡುಕುವ ನನ್ನ ಆಸೆಯನ್ನು ಅದುಮಿಟ್ಟಿತ್ತು. ಆದರೆ ಈಗ ನನಗೆ ಇಷ್ಟವಾಗಿದ್ದ, ಜನ ನನ್ನನ್ನು ಇಷ್ಟಪಡುತ್ತಿದ್ದ, ಜಾಗದಿಂದ, ಎಲ್ಲವನ್ನೂ ತಣ್ಣಗೆ ಹಣದಲ್ಲಿ ಅಳಿಯುವ - ರೋಗಿಗೆ ತಪಾಸಣೆ ಬೇಕೇ ಅನ್ನುವುದಕ್ಕಿಂತ ಮುಂಚೆ ಅವನು ತನ್ನ ತಪಾಸಣೆಗೆ ಆಗಬಹುದಾದ ಖರ್ಚನ್ನು ತೆತ್ತಬಲ್ಲನೇ ಎಂಬ ಪ್ರಶ್ನೆಯನ್ನು ಕೇಳುವ - ಆಸ್ಪತ್ರೆಗೆ ವರ್ಗ ಆಗಿರುವುದರಿಂದ ನನಗೀಗ ಹೊಸ ದಿಗಂತದ ಹುಡುಕುವಿಗೆ ಬೇಕೇಬೇಕಾಗಿದೆ."

ಆದರೆ ಈ ಕಾಲಕ್ಕೆ ಚೆ ತನ್ನ ಓದನ್ನು ಇನ್ನೂ ಮುಗಿಸಿಲ್ಲ. ತನ್ನ ಮೆಡಿಕಲ್ ಸ್ಕೂಲಿನ ಅಂತಿಮ ವರ್ಷದಲ್ಲಿದ್ದಾನೆ. ಆದರೆ ಅವನು ಈ ಯಾತ್ರೆಗೆ ಸಿದ್ಧನಾಗಿದ್ದಾನೆ. ಅದಕ್ಕೆ ಅವನ ಧೈರ್ಯ ಮತ್ತು ಸಾಹಸದ ಮನೋಭಾವವೇ ಕಾರಣವಿರಬಹುದು. ಆಲ್ಬರ್ಟೋಗೆ ಇದು ಒಂದು ರೀತಿಯ ಆತ್ಮಶೋಧವಾದರೆ ಚೆ ಗೆ ಇದು ಒಂದು ರೋಮಾಂಚಕ ಯಾತ್ರೆಯಾಗಿದ್ದೀತು. ಆಲ್ಬರ್ಟೋ ರಸ್ತೆಯ ಈ ಯಾನವನ್ನು ಸೂಚಿಸಿದಾಗ ಚೆ ನ ಪ್ರತಿಕ್ರಿಯೆಯನ್ನು ಈ ರೀತಿ ವಿವರಿಸಲಾಗಿದೆ:

"ನಾನು ನನ್ನ ಆಲೋಚನೆಯ ಬಗ್ಗೆ ಹೇಳಿದಾಗ ಅವನ ವೈದ್ಯಕೀಯ ವೃತ್ತಿಯ ಭವಿಷ್ಯದ ಬಗ್ಗೆ ನಾನು ವ್ಯಕ್ತಪಡಿಸಿದ ಕಾಳಜಿಯನ್ನು ತೋರಿದಾಗ ಅವನು ಆ ಉಜ್ವಲವಾಗಿರಬಹುದಾದ ಆದರೆ ಪರಿಮಿತಿಗಳೊಳಗಿದ್ದ ವೈದ್ಯಕೀಯ ವ್ಯಾಪಾರ ಹೇಗಾಗಬಹುದೆಂಬುದರ ಬಗ್ಗೆ ಯಾವ ಕಾಳಜಿಯೂ ಇಲ್ಲವೆಂದ. ಹಾಗೆಂದವನೇ ರಣಕಹಳೆ ಊದಿ ಯುದ್ಧಕ್ಕೆ ತಯಾರಾಗುವವನ ರೀತಿಯಲ್ಲಿ ಖುಷಿಯಿಂದ ಕುಣಿದಾಡಿದ. ಆಗಲೇ ನಮ್ಮಿಬ್ಬರ ನಡುವೆ ಈ ಯಾತ್ರೆಗೆ ಒಪ್ಪಂದವಾಗಿಬಿಟ್ಟಿತ್ತು."

ಚೆ ಗೆ ಈ ಯಾತ್ರೆ ಕುತೂಹಲಕ್ಕಾಗಿತ್ತು. 
ಆದರೆ ಆಲ್ಬರ್ಟೋನಿಗೆ ಇದರಲ್ಲಿ ಬಹುಶಃ ಹೆಚ್ಚಿನ ಅರ್ಥನ್ವೇಷಣೆ ಮಾಡುವ ಆಸಕ್ತಿಯಿತ್ತೇನೋ. ಉದಾಹರಣೆಗೆ ಯಾತ್ರೆಯ ಮೊದಲ ಭಾಗದಲ್ಲೇ ಅವರಿಬ್ಬರೂ ಆಲ್ಬರ್ಟೋನ ವಿಶ್ವವಿದ್ಯಾಲಯದ ಕಾಲದ ಸಹಪಾಠಿ, ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದ, ಪ್ರಜಾತಂತ್ರಿಕ ಹೋರಾಟದಲ್ಲಿ ಪಾಲ್ಗೊಂಡಿದ್ದ ಗೆಳೆಯ ತಮರ್ಗೋ ಎಂಬವನ ಜೊತೆ ಉಳಿಯುತ್ತಾರೆ. ಅವನನ್ನು ಆಲ್ಬರ್ಟೊ ವಿವರಿಸುವುದು ಹೀಗೆ:

"ಅವನೀಗ ತನ್ನ ಸುತ್ತಿರುವ ಅನಿಷ್ಟ ಸಮಾಜದಲ್ಲಿ ಸೇರಿಹೋಗಿದ್ದಾನೆ... ತಪಾಸಣೆಗಳಿಗೆ ಅವಶ್ಯವಾಗಿದ್ದಕ್ಕಿಂತ ಹೆಚ್ಚು ಹಣವನ್ನು ರೋಗಿಗಳಿಂದ ಪಡೆಯುತ್ತಾನೆ... ಹಾಗೂ ತನ್ನ ಆತ್ಮಸಾಕ್ಷಿಗೆ ವಿರೋಧವಾಗಿ ಜೀವಿಸುವುದರಲ್ಲಿ ಒಂದು ವಿಕೃತಾನಂದವನ್ನು ಪಡೆಯಲು ಪ್ರಾರಂಭಿಸಿದ್ದಾನೆ..
"

ಹಾಗಂದಮಾತ್ರಕ್ಕೆ ಆಲ್ಬರ್ಟೋಗೆ ಸಿನೇಮಾದಲ್ಲಿ 
ತೋರಿಸಿದ ಹಾಸ್ಯ ಪ್ರಜ್ಞೆ ಇರಲಿಲ್ಲವೆಂದೇನೂ ಅಲ್ಲ. ಉದಾಹರಣೆಗೆ ಈ ಅದ್ಭುತ ವಾಕ್ಯವನ್ನು ನೋಡಿ:

"ಅವನು ಗಂಡಸಾದರೂ ಅವನ ಧ್ವನಿ, ಕೂದಲು, ಎದೆ, ನಡೆನುಡಿ - ಎಲ್ಲವೂ ಹೆಣ್ಣಿನದ್ದಾಗಿತ್ತು. ಬಹುಶಃ ಅವನಲ್ಲಿ ಗಣಿತದ ಪಠ್ಯಪುಸ್ತಕಕ್ಕಿಂತ ಹೆಚ್ಚು 'ಎಕ್ಸ್' ಕ್ರೊಮೊಸೋಮುಗಳಿದ್ದವೆನ್ನಿಸುತ್ತದೆ."

ಆಲ್ಬರ್ಟೋ ಗೆರಿಲ್ಲಾ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲವಾದರೂ, ತನ್ನ ಶಾಲಾದಿನಗಳಲ್ಲಿ ತೋರಿಸಿದ್ದಷ್ಟು ಉತ್ಸಾಹದಿಂದ ಆಂದೋಲನಗಳಲ್ಲಿ ಪಾಲ್ಗೊಂಡಂತೆ ಕಾಣದಿದ್ದರೂ ಅವನ ಹೃದಯ ಎಲ್ಲಿತ್ತೆಂಬುದು ಈ ಪುಸ್ತಕದಿಂದ ಸ್ಪಷ್ಟವಾಗುತ್ತದೆ. 
ಈ ಯಾನದ ನಂತರ ಆಲ್ಬರ್ಟೋ ಹೆಚ್ಚಾಗೆ ವಿಜ್ಞಾನದ ಸೇವೆಯಲ್ಲಿ ಅದೂ ಹೆಚ್ಚಿನಂಶ ಕ್ಯೂಬಾದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೂ, ತನ್ನ ಆಸಕ್ತಿಗಳು ಎತ್ತಕಡೆಗೆ ವಾಲಿದ್ದವು ಅನ್ನುವುದರ ಬಗ್ಗೆ ಅನುಮಾನಕ್ಕೆ ಆಸ್ಪದವೇ ಇಲ್ಲ. ಉದಾಹರಣೆಗೆ ಮೊಲಿನಾ ಲುಕೊ ಬಗ್ಗೆ ಬರೆಯುತ್ತಾ ಆಲ್ಬರ್ಟೋ ಈ ಮಾತುಗಳನ್ನು ಹೇಳುತ್ತಾನೆ:

"ಆತ ಆರ್ಜೆಟೀನಾಕ್ಕೆ ಹೋಗಿ ದುಡ್ಡು ಮಾಡಿಕೊಳ್ಳಬೇಕು ಅನ್ನುತ್ತಾನೆ. ಆದರೆ ಅವನಿಗಿರುವ ಚಿನ್ನದ ಹೃದಯ ಅವನನ್ನು ಶ್ರೀಮಂತನಾಗಲು ಬಿಡುವುದಿಲ್ಲ ಅಂತ ಅವನಿಗೆ ಗೊತ್ತಿಲ್ಲ, ಎಷ್ಟಾದರೂ ವೈಯಕ್ತಿಕ ಶ್ರೀಮಂತಿಗೆ ಮನುಷ್ಯ ಮನುಷ್ಯನನ್ನು ಶೋಷಿಸುವುದರಿಂದ ಉಂಟಾಗುತ್ತದೆ ಅನ್ನುವುದನ್ನು ಅವನು ಮನಗಾಣಬೇಕಾಗಿದೆ." 

ಚುಕ್ಕಿಕಮಾತಾ ಗಣಿಗಳಿಗೆ ಅವರು ನೀಡಿದ ಭೇಟಿಯನ್ನು ಮೊಟಾರ್ ಸೈಕಲ್ ಡೈರೀಸ್ ನಲ್ಲಿ ವಿವರಿಸಿರುವುದಕ್ಕಿಂತ ಉತ್ತಮವಾಗಿ ಈ ಪುಸ್ತಕದಲ್ಲಿ ಅದನ್ನು ಗ್ರಹಿಸಲಾಗಿದೆ. ಗಣಿಕಾರ್ಮಿಕರು ಕೆಲಸ ಮಾಡುತ್ತಿದ್ದ ಪರಿಸ್ಥಿತಿ, 
ಗಣಿಗಳಲ್ಲಿ ಕೆಲಸ ಮಾಡುವುದರಿಂದ ಅವರ ಆರೋಗ್ಯದ ಮೇಲಾಗುವ ಪ್ರಭಾವ, ಮತ್ತು ಅದೇ ಸಮಯಕ್ಕೆ ಗಣಿಯ ಧಣಿಗಳ ಗಾಲ್ಫ್ಹ್ ಆಡುವ, ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರೆದಿರುವ ಉತ್ತಮ ಕಟ್ಟಡಗಳಲ್ಲಿ ಮನೆಮಾಡಿಕೊಂಡಿರುವ ಐಷಾರಮಿ ಜೀವನದ ಬಗ್ಗೆಯೂ ಆತ ಬರೆಯುತ್ತಾನೆ. ಆಲ್ಬರ್ಟೋ ಕುಷ್ಠರೋಗಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲೆಂದೇ ಈ ಯಾನವನ್ನ ಕೈಗೊಂಡರೂ, ಎರ್ನೆಸ್ಟೋನ ಜೊತೆಯಲ್ಲಿ ಅವನು ಕಂಡುಕೊಳ್ಳುವ ಜೀವನ ಸತ್ಯಗಳೇ ರೋಗಕ್ಕೆ ಮೀರಿ ಜನಜೀವನದ ಬಗ್ಗೆಯಾಗಿತ್ತು. ಹೀಗಾಗಿಯೇ ಪುಸ್ತಕದಲ್ಲಿ ನಮಗೆ ಈ ವಾಕ್ಯವನ್ನು ಕಂಡಾಗ ಆಶ್ಚರ್ಯವಾಗುವುದಿಲ್ಲ: "ನೂರು ಪುಸ್ತಕಗಳಿಗಿಂತೆ ಹಿರಿದಾದ ಸತ್ಯವನ್ನು ದರ್ಶಿಸುವ ಜೀವನದಿಂದ ನಮ್ಮ ಕಲಿಕೆ ಹೆಚ್ಚು." ಎರ್ನೆಸ್ಟೋನ 'ಇದು ಹೀಗೆ ನಡೆಯಿತು' ಅನ್ನುವ ಬರಹಕ್ಕಿಂತ ಆಲ್ಬರ್ಟೋನ ಬರಹ ಹೆಚ್ಚು ಒಳನೋಟಗಳನ್ನೂ, ಹೆಚ್ಚಿನ ಚಿಂತನೆಯನೂ ಒಳಗೊಂಡಿದೆ. ಸಿನೇಮಾದಲ್ಲಿ ಬರುವ ಚೆ ನಿಗೆ ಅವನ ಗೆಳತಿ ರಾತ್ರೆಯ ಉಡುಪು ತರಲೆಂದು ಕೊಡುವ ಹದಿನೈದು ಡಾಲರುಗಳ ಪ್ರಸ್ತಾಪ ಈ ಪುಸ್ತಕದಲ್ಲೂ ಇಲ್ಲ. ಇದು ಬಹುಶಃ ಚೆ ನ ವ್ಯಕ್ತಿತ್ವವನ್ನು ಚಿತ್ರಿಸಲು ಹಾಕಿದ ಊಹೆಯ ಘಟನೆಯಿದ್ದೀತು. ಅದೇ ರೀತಿಯಲ್ಲಿ ಬುಫಿಯೊ ಎಂಬ ಮೀನಿನ ಸಂಭೋಗದ ಕಥೆಯನ್ನು ಹೇಳಿ ಆಲ್ಬರ್ಟೋನನ್ನು ಬುಟ್ಟಿಗೆ ಹಾಕಿಕೊಳ್ಳಬಯಸುವ ಸೂಳೆಯ ಕಥೆಯೂ ಕಾಣುವುದಿಲ್ಲ. ಆದರೆ ಆಲ್ಬರ್ಟೋ ಆ ಘಟನೆ ನಡಿದಿದ್ದಿರಬಹುದಾದ ಸಾಧ್ಯತೆಯ ಹೊಳಹನ್ನು ಕೊಡುತ್ತಾನೆ: "ಆ ಕಪ್ಪು ಸುಂದರಿ ತನ್ನ ಕಣ್ರೆಪ್ಪೆ ಅಲುಗಾಡಿಸುವ, ಆಗಾಗ ಬಟ್ಟೆ ಬದಲಾಯಿಸುವ ಮೂಲಕ ಅಲ್ಲಿರುವವರಲ್ಲಿ ಒಂದು ಕೋಲಾಹಲವನ್ನೇ ಉಂಟುಮಾಡಿದ್ದಾಳೆ. ಈ ನಿಯಮಕ್ಕೆ ನಾನೂ ಮತ್ತು ಫ್ಯೂಸರ್ [ಎರ್ನೆಸ್ಟೋ] ಕೂಡಾ ಬದ್ಧರಾಗಿದ್ದೇವೆ. ಅದರಲ್ಲೂ ಹೆಚ್ಚಾಗಿ ನನಗೇ ಈ ಕಪ್ಪು ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿಯಿದ್ದಂತಿದೆ..." 

ಇಬ್ಬರೂ ಅದೇ ಯಾತ್ರೆಯನ್ನ ಕೈಗೊಂಡರು. 
ಅವರಲ್ಲೊಬ್ಬ ಒಣ ಬರವಣಿಗೆಯಿಂದ ವಸ್ತುನಿಷ್ಠವಾಗಿ ನಡೆದದ್ದನ್ನು ನಡೆದಂತೆ ವರದಿ ಮಾಡಿ ಕೆಲ ದಿನಗಳಲ್ಲೇ ಅಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಕ್ರಾಂತಿಯ ಕೆಲಸಕ್ಕಿಳಿದ. ಮತ್ತೊಬ್ಬ ಒಳನೋಟಗಳಿಂದ ಕೂಡಿದ ಆತ್ಮಶೋಧನೆಯ ವಿವರವಾದ ಟಿಪ್ಪಣಿಗಳನ್ನು ಬರೆದು ವೈದ್ಯಕೀಯ ರಂಗದಲ್ಲಿ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿದ, ಸಂಸ್ಥೆಗಳನ್ನು ಕಟ್ಟಿದ. ಆದರೆ ಒಬ್ಬನ ಕ್ರಾಂತಿಯಿಲ್ಲದೇ ಇನ್ನೊಬ್ಬನ ಸಂಸ್ಥೆಗಳು ಕ್ಯೂಬಾದಲ್ಲಿ ಹುಟ್ಟುತ್ತಿರಲಿಲ್ಲವೇನೋ. ಈ ಯಾತ್ರೆ ಇಬ್ಬರ ಜೀವನದಲ್ಲೂ ಶಾಶ್ವತವಾದ ಆದರೆ ಭಿನ್ನವಾದಂತಹ ಬದಲಾವಣೆಗಳನ್ನು ತಂದೊಡ್ಡಿತು. ಈ ವ್ಯತ್ಯಾಸವನ್ನು ಆಲ್ಬರ್ಟೋ ಪುಸ್ತಕದಲ್ಲಿ ಒಂದೆಡೆ ನಮ್ಮ ಗಮನಕ್ಕೆ ತರುತ್ತಾನೆ. ಮಚೂ ಪಿಚೂನಲ್ಲಿರುವಾಗ ಸಿಮೋನ್ ಬೊಲಿವಾರ್ ನ ಪತ್ರಗಳ ಪುಸ್ತಕವನ್ನು ಓದು ಆಲ್ಬರ್ಟೋ ಈ ಮಾತುಗಳನ್ನು ಎರ್ನೆಸ್ಟೋನಿಗೆ ಹೇಳುತ್ತಾನೆ:

"ನಾನೇನು ಮಾಡುತ್ತೇನೆ ಗೊತ್ತಾ? ಮರಿಯಾ ಮಾಗ್ದಲೀನಾಳನ್ನು ಮದುವೆಯಾಗುತ್ತೇನೆ. ಆಕೆ ಮನ್ಕೊ ಚಾಪೆಕ್ [ದ್ವಿತೀಯ]ನ ವಾರಸುದಾರಳಾದ್ದರಿಂದ ಕೂಡಲೇ ನಾನು ಮನ್ಕೊ ಚಾಪೆಕ್ [ತೃತೀಯ] ಆಗಿಬಿಡುತ್ತೇನೆ. ನಂತರ ನಾನು ಇಲ್ಲಿನ ಆದಿವಾಸಿಗಳಿಗಾಗಿ ಕೆಲಸ ಮಾಡುವ ರಾಜಕೀಯ ಪಕ್ಷವನ್ನು ಕಟ್ಟಿ, ಅವರನ್ನು ತಮ್ಮ ವೋಟುಗಳನ್ನು ಹಾಕಲು ದಂಡೆಗೆ ಕರೆದುಕೊಂಡು ಹೋಗುತ್ತೇನೆ. ಅದೇ ಟುಪಾಕ್ ಅಮಾರು ಕ್ರಾಂತಿಯ ಮೊದಲ ಹೆಜ್ಜೆಯಾಗುತ್ತದೆ, ಆದಿವಾಸಿಗಳ ಕ್ರಾಂತಿ..."

ಎರ್ನೆಸ್ಟೋ ಇವನತ್ತ ತಿರುಗೆ ಕೇಳುತ್ತಾನೆ:

"ಒಂದೂ ಗುಂಡು ಹಾರಿಸದೇ ಕ್ರಾಂತಿ? ನಿನಗೆ ಹುಚ್ಚು ಹಿಡಿದಿರಬೇಕು.."

ಈ ಸಂಭಾಷಣೆ ನಡೆದಾಗ ಆಲ್ಬರ್ಟೋನಿಗೆ ಒಂದು ದಶಕದ ಕೆಳಗೆ - ವಿದ್ಯಾರ್ಥಿ ದಿನಗಳಲ್ಲಿ ಎರ್ನೆಸ್ಟೋ ಹೇಳಿದ ಮಾತು ನೆನಪಾಗುತ್ತದೆ. ಆಗ ಯಾವುದೋ ವಿದ್ಯಾರ್ಥಿ ಆಂದೋಲನದಲ್ಲಿ ಭಾಗವಹಿಸಿದ್ದಕ್ಕೆ ಆಲ್ಬರ್ಟೋನನ್ನ ಬಂಧಿಸಿ ಜೈಲಿನಲ್ಲಿಟ್ಟಿರುತ್ತಾರೆ. ಅವನನ್ನು ನೋಡಲು ಎರ್ನೆಸ್ಟೋ ಅಲ್ಲಿಗೆ ಹೋದಾಗ ಆಲ್ಬರ್ಟೋ ಹೈಸ್ಕೂಲು ವಿದ್ಯಾರ್ಥಿಗಳನ್ನು ಸಂಘಟಿಸಿ ತಮ್ಮ ಬಿಡುಗಡೆಗಾಗಿ ಕರೆ ಕೊಡುತ್ತಾ ಒಂದು ಶಾಂತಿಪೂರ್ವಕ ಧರಣಿಯನ್ನು ಆಯೋಜಿಸುವ ಸಲಹೆ ನೀಡುತ್ತಾನೆ. ಆಗ ಎರ್ನೆಸ್ಟೋ ಹೇಳುವ ಮಾತುಗಳು:


"ಯಾವ ಆಯುಧವೂ ಇಲ್ಲದೇ ಶಾಂತಿಯುತ ಧರಣಿ ಮಾಡಿ ಅವರಿಂದ ಒದೆ ತಿನ್ನುವುದಕ್ಕಾ? ನಾನು ಖಾಲಿ ಕೈಯಲ್ಲಿ ಹೋಗುವವನಲ್ಲ"

ಅಂತರ್ಮುಖಿ ಚೆ ಗುವೆರಾನಿಗೂ, ಮಾತಾಡುವ ಆಲ್ಬರ್ಟೋನಿಗೂ ಸಹಜವಾಗಿಯೇ ತುಂಬಾ ವ್ಯತ್ಯಾಸಗಳಿವೆ. ಆಸ್ಥಮಾದಿಂದ ಪೀಡಿತನಾಗಿರುವ ಶಕ್ತಿ ಕುಂದಿದ ಎರ್ನೆಸ್ಟೋನನ್ನ ಅವನ ದೈಹಿಕ ಸ್ಥಿತಿ ಸಶಸ್ತ್ರ ಕ್ರಾಂತಿ ಕೈಗೊಳ್ಳುವುದರಿಂದ ತಡೆಯಲಿಲ್ಲ. ಕ್ಯೂಬಾದ ಕ್ರಾಂತಿಯ ನಂತರ ಎರ್ನೆಸ್ಟೋ ಅಲ್ಲಿನ ಸೆಂಟ್ರಲ್ ಬ್ಯಾಂಕಿನ ಗವರ್ನರ್ ಆದ. ಮಂತ್ರಿಯಾದ. ಬೇಕಿದ್ದರೆ ಬಹುಶಃ ಅದೇ-ಅಂಥದೇ ಹುದ್ದೆಗಳಲ್ಲಿ ಮುಂದುವರೆಯಬಹುದಿತ್ತೇನೋ, ಆದರೆ ಅವನು ಮತ್ತೆ ಶಸ್ತ್ರಧಾರಿಯಾಗಿ ಅಧಿಕಾರವನ್ನು ಬಿಟ್ಟು ಹೋರಾಟಕ್ಕಿಳಿದ. ಬೊಲೀವಿಯಾದಲ್ಲಿ ಹೋರಾಡುತ್ತಲೇ ಅಸುನೀಗಿದ. ಆಲ್ಬರ್ಟೋ ತನ್ನ ಕೆಲಸದ ಮೂಲಕ ಕ್ಯೂಬಾಕ್ಕೆ ತನ್ನ ಕೊಡುಗೆಯನ್ನು - ಒಟ್ಟಾರೆ ಇರುವ ಸಮತಾಭಾವವನ್ನು ಬಿಟ್ಟುಕೊಡದೇ - ಮುಂದುವರೆಸಿದ. ಪುಸ್ತಕದ ಇಂಗ್ಲೀಷ್ ಆವೃತ್ತಿಗೆ [ಚಲನ ಚಿತ್ರದ ಸಂದರ್ಭವನ್ನು ಹಿನ್ನೆಲೆಯಲ್ಲಿಟ್ಟುಕೊಂಡು]
 ಆಲ್ಬರ್ಟೋ ಬರೆದ ಮಾತುಗಳು ಇಂತಿವೆ:

"ಎಲ್ಲಕ್ಕಿಂತ ಭಿನ್ನ ವಿಷಯವೆಂದರೆ ಈ ಅರಿಕೆಯನ್ನು ಬರೆಯಲುಅತಿ ಮುಖ್ಯ ಕಾರಣ ಈ ಸಿನೆಮಾದ ಬಗೆಗಿನ ವಿಚಾರಗಳು - ಈ ಸಿನೆಮಾದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡಲಾಯಿತು. ಪ್ರತಿ ವಿಭಾಗದಲ್ಲೂ ನಟರು, ತಂತ್ರಜ್ಞರು, ಸಲಹಾಕಾರರೂ ಸ್ಥಳೀಯರೇ ಆಗಿದ್ದರು. ಹೀಗಾಗಿ ಅಲ್ಲಲ್ಲಿನ ಸರಕಾರಗಳ ಹೊಸ ಉದಾರೀಕರಣದ ಸಂದರ್ಭದಲ್ಲಿ ಉಂಟಾಗಿರುವ ಮಹಾ ನಿರುದ್ಯೋಗದ ವಾತಾವರಣದಲ್ಲಿ ಕೆಲವಾದರೂ ನೌಕರಿಗಳನ್ನು ನಮಗೆ ಈ ಮೂಲಕ ಸೃಷ್ಟಿಸಲು ಸಾಧ್ಯವಾಯಿತು. 

ಇದಕ್ಕೂ ಹೆಚ್ಚಿನ ಸಮಾಧಾನ ಕೊಟ್ಟ ವಿಷಯವೆಂದರೆ - ಸಾಂತಾ ಮಾರಿಯಾದಲ್ಲಿ ಕಟ್ಟಿದ ಎಲ್ಲ ಸವಲತ್ತುಗಳೂ ಚಿತ್ರೀಕರಣದ ನಂತರವೂ ಅಲ್ಲೇ ಸ್ಥಾಯಿಯಾಗಿವೆ - ಸಭಾಗೃಹಗಳು, ಕಟ್ಟಿಗೆಯಲ್ಲಿ ಕಟ್ಟಿದ ಕಾಲುದಾರಿ, ವಿದ್ಯುತ್ ಸರಬರಾಜು, ನಲ್ಲಿಯಲ್ಲಿ ಹರಿಯುವ ನೀರು, ಹಳ್ಳಿಗೆ ವಿದ್ಯುತ್ ಪೂರೈಸುವ ಗ್ರಿಡ್, ಸಿನೆಮಾಕ್ಕೆಂದು ಕಟ್ಟಿದ್ದೆಲ್ಲ ಅಲ್ಲಿನ ಜನರಿಗೆ ಅನುಕೂಲವಾಗುವಂತೆ ಅಲ್ಲೇ ಉಳಿದಿದ್ದಾವೆ. ಇದರಿಂದ ಅವರ ಜೀವನದ ಗುಣಮಟ್ಟ ಸ್ವಲ್ಪಮಟ್ಟಿಗಾದರೂ ಉತ್ತಮವಾಗುವುದೆನ್ನುವುದರಲ್ಲಿ ಅನುಮಾನವಿಲ್ಲ.
 

ಎಲ್ಲರೂ ತಮ್ಮ ನಂಬಿಕೆಗಳಿಗೆ, ನಿಲುವುಗಳಿಗೆ ಬದ್ಧರಾಗಿರಬೇಕೆಂಬುದನ್ನು ಇದು ಮತ್ತೊಮ್ಮೆ ಸಾಬೀತುಗೊಳಿಸುತ್ತದೆ."

ಈ ಪುಸ್ತಕ ಎರ್ನೆಸ್ಟೋ ಚೆ ಗುವೆರಾನಿಗೆ ಅರ್ಪಿತವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

No comments:

Post a Comment