Monday, March 9, 2009

ಇಕೊಳ್ಳಿ ಉಂಬರ್ಟೋ!

[ಗಾಂಧಿಬಜಾರ್ ಪತ್ರಿಕೆಯಲ್ಲಿ ಪ್ರಕಟವಾದ ಈಚಿನ ಲೇಖನ]



ನಾನು ಓದಿರುವ ಲೇಖಕರಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅದ್ಭುತ ಲೇಖಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಂಬರ್ಟೋ ಇಕೊ. ಆತ ಪತ್ರಿಕೆಗಳಲ್ಲಿ ಬರೆಯುವ ಲೇಖನಗಳು ಸಮಕಾಲೀನ ಆಗುಹೋಗುಗಳಿಗೆ ಬುದ್ಧಿಜೀವಿಯೊಬ್ಬನ ಸರಳ ಹಾಸ್ಯಭರಿತ ಭಾಷೆಯ ಪ್ರತಿಕ್ರಿಯೆಯಾದರೆ, ಭಾಷಾಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಗಹನ ಲೇಖನಗಳು ಆ ಕ್ಷೇತ್ರದಲ್ಲಿ ಎದ್ದು ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ deconstruction [ನಿರಚನೆ]ಯ ಬಗ್ಗೆ ಬರೆದಿದ್ದ ಪಾಂಡಿತ್ಯ ಪೂರ್ಣ ಲೇಖನವನ್ನು ನಾನು ಓದಿದ್ದ ನೆನಪು. ಕಳೆದ ವರ್ಷ ಇಕೊ ಭಾರತದಲ್ಲಿ ಹಲವುದಿನಗಳು ಇದ್ದು ಹೋದರು. ಕಾದಂಬರಿಕಾರರಾಗಿ ಇಕೋ ತಮ್ಮ ಬರವಣಿಗೆಯಲ್ಲಿ ಇತರ ಅನೇಕರು ತರಲು ಸಾಧ್ಯವಾಗದ ಅನೇಕ ಆಯಾಮಗಳನ್ನು ತರಲು ಪ್ರಯತ್ನಿಸುತ್ತಾರೆ. ಹಾಗೆ ಇತರೆ ಆಯಾಮಗಳನ್ನು ತರುವಾಗ ಅದನ್ನು ಕೇವಲ ಉತ್ಪ್ರೇಕ್ಶೆ ಅಥವಾ ಅತಿರಂಜಕತೆಗಾಗಿ ತರದಿರುವ ಎಚ್ಚರವನ್ನು ಅವರು ವಹಿಸುತ್ತಲೇ ತಾವು ಬರೆದದ್ದನ್ನು ಆಸಕ್ತಿಕರವಾಗಿ ಇರುವಂತೆ ಮಾಡುತ್ತಾರೆ. ಅದಕ್ಕೇ ನೇಮ್ ಆಫ್ ದ ರೋಸ್ ಕಾದಂಬರಿಯಲ್ಲಿ [ಮತ್ತು ಅದನ್ನು ಬರೆದ ಪ್ರಕ್ರಿಯೆಯ ಬಗ್ಗೆ ಬರೆದ ರಿಫ್ಲೆಕ್ಷನ್ಸ್ ಆನ್ ದ ನೇಮ್ ಆಫ್ ದ ರೋಸ್] ಅವರ ಬರವಣಿಗೆ ಡಾವಿಂಚಿ ಕೋಡ್‌ನಂತಹ ಕಾದಂಬರಿಗಿಂತ ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನಾವು ಕಾಣಬಹುದು. ಎರಡೂ ಕಾದಂಬರಿಗಳು ಚರಿತ್ರೆಯ ಕೆಲ ಘಟನೆಗಳ ಸಂಶೋಧನೆಯ ಆಧಾರದ ಮೇಲೆ ಬರೆದವುಗಳಾದದ್ದರಿಂದ ನಾವು ಈ ವ್ಯತ್ಯಾಸವನ್ನು ಸುಲಭವಾಗಿ ನೋಡಬಹುದು. ಇದಲ್ಲದೇ ಇಕೋ ಅವರ ಕಾದಂಬರಿಗಳನ್ನು ಸುಮ್ಮನೆ ತಿರುವಿಹಾಕುತ್ತಲೂ ಇರಬಹುದು. ಅವರ ಬರವಣೆಗೆಯ ಬಿಡಿಭಾಗಗಳೇ ಮನಸ್ಸಿಗೆ ಸಾಕಷ್ಟು ಗ್ರಾಸವನ್ನು ಒದಗಿಸುತ್ತವೆ.

ಇಕೋರ ಇತ್ತೀಚಿನ ಪುಸ್ತಕ ’ದ ಮಿಸ್ಟೀರಿಯಸ್ ಫ್ಲೇಮ್ ಆಫ್ ಕ್ವೀನ್ ಲೋನಾ’ ಕಾದಂಬರಿಯನ್ನು ನಾನು ಸುಮಾರು ದಿನಗಳಿಂದ ನನ್ನ ಜೊತೆ ಒಯ್ದು ಓದುತ್ತಿದ್ದೆ. ಅದರ ಅನೇಕ ಭಾಗಗಳನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. ಇದ್ದಕ್ಕಿದ್ದಂತೆ ತನ್ನ ನೆನಪಿನ ಶಕ್ತಿಯನ್ನು ಕೆಲಭಾಗವನ್ನು ಕಳೆದುಕೊಳ್ಳುವ ನಾಯಕನನ್ನು ಊಹಿಸಿಕೊಳ್ಳಿ. ಅವನಿಗೆ ತಾನು ಓದಿದ ಪುಸ್ತಕಗಳು, ಚಾರಿತ್ರಿಕ ಘಟನೆಗಳು ನೆನಪಿನಲ್ಲಿವೆ. ಆದರೆ ತಾನು ಯಾರು ಅನ್ನುವುದನ್ನು ಅವನು ಮರೆತುಬಿಟ್ಟಿದ್ದಾನೆ. ಈಗ ಹಳೆಯ ಪುಸ್ತಕಗಳು, ತಾನು ಓದಿದ್ದ ಮಕ್ಕಳ ಸಾಹಿತ್ಯ, ಹಾಡುಗಳು, ಚಿತ್ರಗಳ ಸಹಾಯದೊಂದಿಗೆ ತನ್ನ ಬಾಲ್ಯ ಮತ್ತು ಯೌವನವನ್ನು ಅವನು ಪುನರ್ನಿರ್ಮಾಣ ಮಾಡಿಕೊಳ್ಳಬೇಕಾಗಿದೆ. ಈ ಕಾಲದಲ್ಲಿ ಒಂದು ವಿಶ್ವಯುದ್ಧವೂ ನಡೆದಿದೆ. ಮಾನವ ಜನಾಂಗದ ಚರಿತ್ರೆಯಲ್ಲಿ ಇದೇನೂ ಸಾಮಾನ್ಯವಾದ ಕಾಲವಲ್ಲ. ವರ್ತಮಾನದಲ್ಲಿ ಚರಿತ್ರೆಯನ್ನು ಬದುಕಬೇಕಾದ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ವರ್ತಮಾನಕ್ಕೊ ಪುನರವಲೋಕನಕ್ಕೂ ಅವರು ಕಟ್ಟುವ ಈ ಸೇತುವೆ ಚರಿತ್ರೆಯನ್ನು ಭಿನ್ನವಾಗಿ ನೋಡಲು ನಮ್ಮನ್ನು ಪ್ರೇರೇಪಿಸುತ್ತದೆ. ಈ ಪುಸ್ತಕದ ಕಥಾವಸ್ತುವೇ ಎಷ್ಟು ಭಿನ್ನವಾಗಿದೆ ಅಂದರೆ, ಇದನ್ನು ಇಕೋ ಅಲ್ಲದೇ ಬೇರಾರೂ ಊಹಿಸಿರಲು ಸಾಧ್ಯವೇ ಇದ್ದಿಲ್ಲ ಅನ್ನಿಸುತ್ತದೆ. ಅಕಸ್ಮಾತ್ ಊಹಿಸಿದ್ದರೂ, ಇಷ್ಟು ಪಾಂಡಿತ್ಯಪೂರ್ಣವಾಗಿ, ಸರಳ ಮತ್ತು ಹಾಸ್ಯಭರಿತ ನವುರಾದ ನಿರೂಪಣೆಯೊಂದಿಗೆ ಅದನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಪುಸ್ತಕ ಯಾಂಬೊ ತನ್ನ ಅಸ್ತಿತ್ವವನ್ನು ನೆನಪುಗಳ ಮೂಲಕ ಪುನರ್ನಿರ್ಮಿಸುಯ ಯತ್ನಗಳೊಂದಿಗೆ ಪ್ರಾರಂಭವಾಗುತ್ತದೆ. ಯಾಂಬೋ ಮತ್ತು ಅವನ ಹೆಂಡತಿಯ ನಡುವೆ ನಡೆಯುವ ಸಂಭಾಷಣೆ ಇಂತಿದೆ:

"ನಾನು ತುಂಬಾ ಓದುತ್ತಿದ್ದೆನಾ?"
"ಎಷ್ಟು ಓದಿದರೂ ನಿನಗೆ ಸುಸ್ತೇ ಆಗುತ್ತಿರಲಿಲ್ಲ. ನಿನ್ನದು ಕಬ್ಬಿಣದಂತಹ ನೆನಪು. ಅನೇಕ ಕವಿತೆಗಳು ನಿನ್ನ ಬಾಯಲ್ಲಿ ಅಪ್ರಯತ್ನವಾಗಿ ಹರಿದುಬರುತ್ತಿದ್ದವು" [ಎಸ್.ದಿವಾಕರ್ ಜೊತೆ ಆತ್ಮೀಯವಾಗಿ ಮಾತನಾಡಿದವರಿಗೆ ಈ ವ್ಯಕ್ತಿ ಎಂಥವನೆಂದು ಊಹಿಸುವುದು ಸುಲಭವಾಗುತ್ತದೆ]
"ನಾನು ಬರೆಯುತ್ತಿದ್ದೆನೇ?"
"ಸ್ವಂತ ಬರವಣಿಗೆ ಹೆಚ್ಚೇನೂ ಇಲ್ಲ. ನಾನು ಷಂಡ ಜೀನಿಯಸ್ ಅಂತ ನೀನು ಹೇಳುತ್ತಿದ್ದೆ; ಈ ಪ್ರಪಂಚದಲ್ಲಿ ನೀನು ಓದುಗನಾಗುತ್ತೀಯ ಅಥವಾ ಬರಹಗಾರ ಅಂತ ನೀನು ಹೇಳುತ್ತಿದ್ದೆ; ಬರಹಗಾರರು ಬರೆಯುವುದು ತಮ್ಮ ಸಮಕಾಲೀನರ ಮೇಲಿನ ಅಸಡ್ಡೆಯಿಂದ, ಅಥವಾ ಯಾವಾಗಲಾದರೂ ತಮಗೆ ಒಳ್ಳೆಯ ಸಾಹಿತ್ಯ ಓದಬೇಕೆನ್ನಿಸಿದಾಗ ಉತ್ತಮವಾದದ್ದು ಸಿಗಲಿ ಎಂಬ ತೀವ್ರ ಬಯಕೆಯಿಂದ!"

ಯಾಂಬೋನ ಜೀವನವನ್ನು ಪುನಃ ಕಟ್ಟಿಕೊಳ್ಳಲು ಎಷ್ಟು ಪ್ರಯತ್ನಮಾಡುತ್ತಾನೆಂಬ ವಿವರಗಳೇ ಎಷ್ಟು ಅದ್ಭುತವಾಗಿವೆ! ತನಗೇನು ಇಷ್ಟ ಏನು ಇಷ್ಟವಿಲ್ಲ ಅನ್ನುವುದರ ಬಗ್ಗೆ ಇತರರಿಗೆ ತಿಳಿದಿದೆ. ಹಿಂದೆ ತಾನು ಹೋಗುತ್ತಿದ್ದ ಹೋಟೇಲಿಗೆ ಹೋದಾಗ ಅಲ್ಲಿನವರಿಗೆ ಇವನಿಗೆ ಏನು ಇಷ್ಟವೆಂಬುದು ತನಗಿಂತ ಅವರಿಗೇ ಹೆಚ್ಚು ಗೊತ್ತು. ಅದಕ್ಕೇ ಯಾಂಬೊ ಅನ್ನುತ್ತಾನೆ "ಸ್ಟ್ರಾಕಿಟೆಲ್ಲಾ ನನ್ನ ಅತ್ಯಂತ ಪ್ರಿಯ ಖಾದ್ಯವಾಗಿತ್ತು ಅಂತ ಅವರಂದರೆ, ಯಾಕೆ ಅನ್ನುವುದು ನನಗೀಗ ಗೊತ್ತಾಗುತ್ತಿದೆ. ಅದು ನಿಜಕ್ಕೂ ಅತ್ಯುತ್ತಮವಾಗಿತ್ತು. ಅರವತ್ತರ ವಯಸ್ಸಿನಲ್ಲಿ ಸ್ಟ್ರಾಕಿಟೆಲ್ಲಾವನ್ನು ಕಂಡುಹಿಡಿಯುವುದು ಹಿತವಾದ ಅನುಭವ. ಆಲ್ಝೈಮರ್ಸ್ ರೋಗದ ಬಗ್ಗೆ ಗಿಯಾನ್ನಿ ಹೇಳಿದ ಜೋಕ್ ಯಾವುದು? ಈ ರೋಗದ ವಿಶೇಷವೆಂದರೆ, ನಿಮಗೆ ಯಾವಾಗಲೂ ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ."

ನೆನಪುಹೀನನಾದಗ ಅನುಭವಿಸಬೇಕಾದ ಬಿಕ್ಕಟ್ಟುಗಳನ್ನು ಊಹಿಸಿಕೊಳ್ಳಿ. ಮೊದಲಿನ ತನ್ನ ಸಹಾಯಕಳನ್ನು ಕಂಡಾಗ ಹೇಗೆ ಪ್ರತಿಕ್ರಿಯಿಸಬೇಕು? ಅವಳ ಜೊತೆ ತನ್ನ ಸಂಬಂಧ ಹೇಗಿತ್ತು? ಅವಳೊಂದಿಗೆ ಲೈಂಗಿಕ ಸಂಬಂಧವೇನಾದರೂ ಇದ್ದಿರಲು ಸಾಧ್ಯವೇ? ಹಳೆಯ ಅಪರೂಪದ ಪುಸ್ತಕದ ಅಂಗಡಿ ನಡೆಸುತ್ತಿದ್ದ ತನ್ನ ವೃತ್ತಿಯಲ್ಲಿ ಅವಳಿಗೆ ತಾನು ತರಬೇತಿ ನೀಡಿದ್ದನಂತೆ. ಈಗ ಅವಳಿನಿಂದಲೇ ತಾನು ಮರುತರಬೇತಿಯನ್ನು ಪಡೆಯಬೇಕಾಗಿದೆ. ಅಪರೂಪದ ಒಂದು ಪುಸ್ತಕ ಸಿಕ್ಕರೆ ಯಾರ ಅಭಿಪ್ರಾಯದ ಆಧಾರವಾಗಿ ಅದಕ್ಕೆ ಬೆಲೆ ಕಟ್ಟುವುದು? ಈ ವಿಷಯದ ಪರಿಣಿತ ಅನ್ನಿಸಿಕೊಂಡವನು ಈಗ ಏನೂ ತಿಳಿಯದವನಾಗಿದ್ದಾನೆ. ಅಥವಾ ಪುಸ್ತಕಗಳ ನೆನಪಿರುವಂತೆ ಅವನ ನೆನಪುಗಳ ಈ ಭಾಗ ಜೀವಂತವಾಗಿದೆಯೇ? ಉದಾಹರಣೆಗೆ ಅವನ ಸಹಾಯಕಿ ಮಾರಾಟಕ್ಕಿರುವ ಪುಸ್ತಕಗಳ ಕೆಟಲಾಗಿನಲ್ಲಿ ಶೇಕ್ಸ್‌ಪಿಯರನ ಅಪರೂಪದ ಪುಸ್ತಕವೊಂದಕ್ಕೆ ಅತೀ ಕಡಿಮೆ ದರವನ್ನು ನಮೂದಿಸುತ್ತಾಳೆ. ಹಾಗೆ ಅವಳು ಮಾಡುವುದು ಯಾಂಬೋ ತನ್ನ ಹಳೆಯ ಚುರುಕನ್ನು ಉಳಿಸಿಕೊಂಡಿದ್ದನೆಯೇ ಎಂದು ಪರೀಕ್ಷಿಸಲು [ಪು.೨೬೧]. ಆದರೆ ಹಾಗೆ ಮಾಡುವುದು ಅವನನ್ನು ನಿಜಕ್ಕೊ ಪರೀಕ್ಷಿಸಲೇ ಅಥವಾ ತನ್ನದೇ ಮಿತಿಗಳು ಎಲ್ಲಿವೆ, ಅದನ್ನು ದಾಟಬಹುದೇ ಅನ್ನುವುದನ್ನು ತಿಳಿದುಕೊಳ್ಳಲೇ? ಹೀಗೆ ಹೊರಬರುವ ವಿವರಗಳು ನಿಜಕ್ಕೂ ಕಾದಂಬರಿಯ ಓದಿಗೆ ಬೇರೊಂದೇ ಅನುಭವವನ್ನು ತಂದೊಡ್ಡಿಬಿಡುತ್ತದೆ.

ತನ್ನ ಖಾಸಗೀ ಹಿನ್ನೆಲೆಯನ್ನು ತಿಳಿದುಕೊಳ್ಳಲು, ಅದನ್ನು ಪುನರ್ನಿರ್ಮಿಸಲು ಯಾಂಬೊ ತನ್ನ ಪರಿವಾರ ಹಳೆಯ ಹವೇಲಿಯಿರುವ ಸೊಲಾರಾಕ್ಕೆ ಬರುತ್ತಾನೆ. ಅಲ್ಲಿ ಬಾಲ್ಯದ ಅನೇಕ ಪುಸ್ತಕಗಳು, ಕಾಮಿಕ್‌ಗಳೂ, ಪತ್ರಿಕೆಗಳೂ ಇವೆ. ಕೆಲವು ತನ್ನ ಬಾಲ್ಯ ಕಾಲಕ್ಕೆ ಸೇರಿದವು, ಮತ್ತು ಕೆಲವು ತುಂಬಾ ಹಿಂದಿನವು. ಯಾಂಬೋಗೆ ಇವು ಯಾವುದೂ ಸಮಕಾಲೀನವೂ ಅಲ್ಲ ಅಥವಾ ಸ್ವತಃ ಅನುಭವಿಸಿದ್ದೂ ಅಲ್ಲ. ಎಲ್ಲವೂ ನೆನಪಿನ ಭಾಗಗಳು, ಇಲ್ಲವೇ ನೆನಪನ್ನು ತಾಜಾಗೊಳಿಸುವ ಪ್ರಯತ್ನಗಳು. ಈ ಕಾದಂಬರಿ ಬಹುಶಃ ಕಾದಂಬರಿಯ ಚೌಕಟ್ಟನ್ನು ಮೀರಿನಿಂತ ಪುಸ್ತಕವಾಗಿದೆ. ಈ ಪುಸ್ತಕದ ಎಲ್ಲ ಆಯಾಮಗಳನ್ನೂ ಅರ್ಥ ಮಾಡಿಕೊಳ್ಳಲು ಓದುಗನಿಗೆ ಅಪಾರ ತಯಾರಿ ಬೇಕು. ಉದಾಹರಣೆಗೆ ಹಳೆಯ ಪುಸ್ತಕಗಳ ಮಾರಾಟಗಾರರಿಗಿರುವ ಪ್ರಕಟಣಾ ಕಾಲಘಟ್ಟಗಳ ಮಹತ್ವ ಸಾಮಾನ್ಯರಿಗೆ ತಿಳಿಯುವುದಿಲ್ಲ. ಹೀಗಾಗಿ ಶೇಕ್ಸ್‌ಪಿಯರನ ಮೊದಲ್ ಫೋಲಿಯೊ ಅಂದರೆ ಅದರ ಬೆಲೆ ಎಷ್ಟಿರಬಹುದು, ಅದರ ಮಹತ್ವವೇನು ಅನ್ನುವ ಅಂದಾಜೂ ನಮ್ಮಂತಹ ಸಾಮಾನ್ಯರಿಗಿರುವುದಿಲ್ಲ. ಈ ವಿಷಯಕ್ಕೆ ಬಂದಾಗ ಬೆಂಗಳೂರು ಸೆಲೆಕ್ಟ್ ಬುಕ್ ಷಾಪ್‌ನ ಕೆ.ಕೆ.ಎಸ್.ಮೂರ್ತಿ ಈ ಪುಸ್ತಕವನ್ನು ನನಗಿಂತ ಹೆಚ್ಚಾಗಿ ಮೆಚ್ಚುವ ಸಾಧ್ಯತೆಯಿದೆ. ಹೀಗಿದ್ದಾಗ್ಯೂ ಈ ಕಾದಂಬರಿ - ಕೆಲವು ಆಯಾಮಗಳು ಓದುಗನಿಗೆ ದಕ್ಕದಿದ್ದಾಗ್ಯೂ - ಓದುಗನ ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ ಹೋಗುತ್ತದೆ.

ಸೊಲಾರಾದ ಅಟ್ಟದ ಮೇಲೆ ಒಂದು ವಾರಕ್ಕೂ ಹೆಚ್ಚಿನ ಕಾಲವನ್ನು ಬಾಲ್ಯದಲ್ಲಿ ನೋಡಿದ್ದ ಪುಸ್ತಕಗಳನ್ನು ಓದುತ್ತಾ ಯಾಂಬೊ ಕಳೆಯುತ್ತಾನೆ. ತನ್ನ ವ್ಯಕ್ತಿತ್ವವನ್ನು ಪುನಃ ನಿರ್ಮಾಣಮಾಡಿಕೊಳ್ಳುತ್ತಲೆಯೇ ಪುಸ್ತಕಗಳು, ಅವುಗಳ ಪ್ರಕಟಣೆಯ ಚರಿತ್ರೆ, ಆಗ ಆ ಪುಸ್ತಕಗಳನ್ನು ಅರ್ಥೈಸಬಹುದಾಗಿದ್ದ ರೀತಿ - ಈ ಎಲ್ಲವನ್ನೂ ಸಮಕಾಲೀನ ದೃಷ್ಟಿಯ ತಳಪಾಯದಮೇಲೆ ಯಾಂಬೊ [ಮತ್ತು ಯಾಂಬೊ ಮೂಲಕ ಇಕೋ] ವಿಶ್ಲೇಷಿಸುತ್ತಾನೆ. ಹಳೆಯ ಪುಸ್ತಕಗಳ ವ್ಯಾಪಾರಿಯಾದ್ದರಿಂದ ಪುಸ್ತಕಗಳ ಪ್ರಕಟಣಾ ದಿನಾಂಕಗಳು, ಅವುಗಳ ಮುದ್ರಣಾ ಚರಿತ್ರೆ, ಮುಖಪುಟ, ಪುಸ್ತಕದ ಭೌತಿಕ ಆಕಾರ, ಎಲ್ಲವೂ ಯಾಂಬೊಗೆ ಮುಖ್ಯವಾಗುತ್ತದೆ. ಆಗಿನ ಪುಸ್ತಕಗಳ, ಪತ್ರಗಳ ಮತ್ತು ಕಾಮಿಕ್‌ಗಳ ಅನೇಕ [ಬಹುಶಃ ತಮ್ಮ ಸ್ವಂತ ಸಂಗ್ರಹದಲ್ಲಿರುವ] ಚಿತ್ರಗಳನ್ನು ಇಕೋ ಕಾದಂಬರಿಯಲ್ಲಿ ನೀಡುತ್ತಾರೆ. ಹೀಗಾಗಿ ಇಕೊ ಹೇಳುತ್ತಿರುವ ಕಾಲಘಟ್ಟದ ಚರಿತ್ರೆಯ "ದೃಷ್ಟಿ ಮತ್ತು ಅನುಭವ" ಓದುಗನಿಗೆ ತುಸುಮಟ್ಟಿಗೆ ಆಗುತ್ತದೆ.

ತನ್ನ ನೆನಪನ್ನು ಪುನರ್ನಿರ್ಮಿಸಲು ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ಅವನು ಆಗಿನ ಕಾಲದ ಅಟ್ಲಾಸುಗಳನ್ನು ಪರೀಕ್ಷಿಸಿ ನೋಡುತ್ತಾನೆ. ಅಟ್ಲಾಸಿನ ಮೂಲಕ ಹೇಗೆ ಭೂಗೋಳವೇ ಬದಲಾಗುತ್ತಿದೆ ಅನ್ನುವುದನ್ನು ಕಂಡು ಓದುಗ ಅವಾಕ್ಕಾಗಬೇಕು. ಉದಾಹರಣೆಗೆ ಈ ಸಾಲುಗಳನ್ನು ನೋಡಿ [ಪು.೧೧೨]

"ನಾನು ಅಟ್ಲಾಸುಗಳನ್ನು ತಿರುವಿ ಹಾಕಿದೆ. ಕೆಲವು ನಿಜಕ್ಕೂ ಹಳೆಯವು, ಮೊದಲ ವಿಶ್ವಯುದ್ಧಕ್ಕೂ ಹಿಂದಿನವು. ಆಗ ಜರ್ಮನಿಯ ಭಾಗದಲ್ಲಿ ನೀಲಿ ಮಿಶ್ರಿತ ಬೂದು ಬಣ್ಣದಲ್ಲಿ ತೋರಿಸಿದ್ದ ಆಫ್ರಿಕಾದ ಕಾಲೊನಿಗಳೂ ಇದ್ದುವು. ನನ್ನ ಜೀವನದಲ್ಲಿ ಅನೇಕ ಅಟ್ಲಾಸುಗಳನ್ನು ನಾನು ಕಂಡಿದ್ದಿರಬೇಕು. ನಾನು ಆರ್ಟೀಲಿಯಸ್ಸನ್ನು ಒಮ್ಮೆ ಮಾರಿದ್ದೆನಲ್ಲವೇ? ಇಂಥ ಕೆಲವು ಹೆಸರುಗಳು ನನಗೆ ಪರಿಚಿತ ಅನ್ನಿಸಿತು. ಇಲ್ಲಿರುವ ಭೂಪಟಗಳಿಂದ ಪ್ರಾರಂಭಿಸಿದರೆ, ನನಗೆ ಮಿಕ್ಕ ಹೆಸರುಗಳೂ ನೆನಪಾಗಬಹುದು. ನನ್ನ ಬಾಲ್ಯ ಕಾಲಕ್ಕೂ - ಜರ್ಮನಿಯ ಆಡಳಿತದಲ್ಲಿದ್ದ ಪಶ್ಚಿಮ ಆಫ್ರಿಕಾಕ್ಕೂ, ಡಚ್ ವೆಸ್ಟ್ ಇಂಡೀಸ್‌ಗೂ ಎಲ್ಲಕ್ಕಿಂತ ಮುಖ್ಯವಾಗಿ ಜಾಂಜಿಬಾರ್‌ಗೂ ಇದ್ದ ಕೊಂಡಿ ಯಾವುದು? ಸೊಲಾರಾದಲ್ಲಿ ಪ್ರತಿ ಪದವೂ ಮತ್ತೊಂದು ಪದದತ್ತ ನನ್ನನ್ನು ಒಯ್ಯುತ್ತಿತ್ತು ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಹೀಗೆ ಮುಂದುವರೆಯುತ್ತಾ ನಾನು ಈ ಪದಗಳ ಕೊಂಡಿಯ ಉತ್ತುಂಗವನ್ನು ತಲುಪಲು ಸಾಧ್ಯವಿತ್ತೇ? ಆ ಉತ್ತುಂಗದಿ‌ಅಲ್ಲಿರಬಹುದಾದ ಪದ ಯಾವುದು? ಅದು ’ನಾನು’ ಎಂಬ ಪದವೇ?"

ಈ ರೀತಿ ಆಲೋಚಿಸುತ್ತಿರುವಾಗ ಮತ್ತೊಂದು ಅಂಚಿನಲ್ಲಿ [ನಿಜಕ್ಕೂ ಮತ್ತೊಂದು ತುದಿಯಲ್ಲಿ!] ಯಾಂಬೊ ತನ್ನ ಭೂತವನ್ನು ಖಾಸಗೀ ಮತ್ತು ವೈಯಕ್ತಿಕ ಅನುಭವಗಳ ಮೂಲಕ ಪುನರ್ನಿರ್ಮಿಸಲು ಪ್ರಯತ್ನಿಸುತ್ತಾನೆ [ಪುಟ೮೬]:

"...ನಾನು ನನ್ನ ಮಲವನ್ನು ಮೊದಲಬಾರಿಗೆ ನೋಡಿದೆ. ಅದನ್ನು ಇತರರು ’ಮಲ’ ಎಂದು ಕರೆಯುತ್ತಾರೆ ಅಂತ ಭಾವಿಸುತ್ತಿರುವುದರಿಂದ ನಾನೂ ಅದನ್ನು ಮಲವೆನ್ನುತ್ತಿದ್ದೇನೆ. ಮಲ ನಮಗಿರುವ ಅತ್ಯಂತ ಖಾಸಗೀ ಮತ್ತು ವೈಯಕ್ತಿಕವಾದ ವಿಷಯ. ಮಿಕ್ಕ ವಿಚಾರಗಳ ಬಗ್ಗೆ ಯಾರಿಗೂ ಸುಲಭವಾಗಿ ತಿಳಿಯುವ ಶಕ್ಯತೆಯಿದೆ - ನಿಮ್ಮ ಮುಖಭಾವ, ನೋಟ, ಮಾಟ, ನಿಮ್ಮ ನಗ್ನ ದೇಹವೂ - ಕಡಲತೀರದಲ್ಲಿ, ಆಸ್ಪತ್ರೆಯಲ್ಲಿ ಅಥವಾ ಸಂಭೋಗ ಸಮಯದಲ್ಲಿ. ನಿಮ್ಮ ಮನಸ್ಸಿನ ವಿಚಾರಗಳೂ ಜನರಿಗೆ ತಿಳಿಯುತ್ತವೆ - ಬಹುತೇಕ ನೀವೇ ಅದನ್ನು ವ್ಯಕ್ತಪಡಿಸುತ್ತೀರಿ ಇಲ್ಲವೇ ನಿಮ್ಮ ನೋಟದಿಂದ ಅಥವಾ ನಿಮಗಾಗುತ್ತಿರುವ ಮುಜುಗರದಿಂದ ಯಾರಾದರೂ ಅದನ್ನು ಊಹಿಸಬಹುದು... ಆದರೆ ಮಲದ ವಿಚಾರ ಹಾಗಲ್ಲ... ಹೀಗಾಗಿ ನಾನು ಈಗ ವಿಸರ್ಜಿಸಿದ ಮಲಕ್ಕೂ ನನ್ನ ಬದುಕಿನಲ್ಲಿ ಹಿಂದೆ ವಿಸರ್ಜಿಸಿದ್ದ ಮಲಕ್ಕೂ ಹೆಚ್ಚು ಭಿನ್ನತೆಯಿಲ್ಲವಾದ್ದರಿಂದ ನಾನು ಈ ಕ್ಷಣದಲ್ಲಿ ನನ್ನ ಜೀವನದ ಮರೆತ ಭೂತದೊಂದಿಗೆ ಬೆರೆತುಬಿಟ್ಟಿದ್ದೆ. ಹೀಗೆ ನನ್ನ ಅಸಂಖ್ಯ ಹಳೆಯ ಅನುಭವಗಳು - ದ್ರಾಕ್ಷಾತೋಟದಲ್ಲಿ ಹುಡುಗನಾಗಿದ್ದಾಗ ನಡೆಸಿದ ಧಂಧೆಯಿಂದಾರಂಭಿಸಿ ಇಂದಿನವರೆಗೂ - ಸಮ್ಮಿಲನಗೊಂಡುಬಿಟ್ಟಿದ್ದುವು."

ಇದಲ್ಲದೇ ಪುಸ್ತಕದಲ್ಲಿ ಇನ್ನೂ ಅನೇಕ ಒಳ್ಳೆಯ ಘಳಿಗೆಗಳಿವೆ. ನಿಮ್ಮ ನೆನಪನ್ನು ಮತ್ತೆ ಕಟ್ಟಲು ನೀವು ಓದಿದ್ದ ಫ್ಲಾಬರ್ಟ್, ಹೊಮರ್‌ನಂತಹ ದೊಡ್ಡ ಲೇಖರಿಂದ ಬಾಲ್ಯಕ್ಕೆ ಹೋಗೆ ಸ್ಟೀವನ್‌ಸನ್ ತಲುಪಿದಾಗ ಏನಾಗುತ್ತದೆ? ಎಷ್ಟಾದರೂ, ಯಾಂಬೊ ತನ್ನ ಬಾಲ್ಯದ ನೆನಪುಗಳನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾನೆ. ಆದರೆ ಅವುಗಳನ್ನು ನಿಜಕ್ಕೂ ಮತ್ತೆ ಕಟ್ಟಬೇಕೇ? ಅವನು ಕೆಲ ಕಥೆಗಳನ್ನು ಮಕ್ಕಳಿಗೆ ಹೇಳಿದಾಗ ಅವನ ಪತ್ನಿ ಪೌಲಾಳಿಗೆ ಸ್ವಲ್ಪ ಯೋಚನೆ ಹತ್ತಿಕೊಳ್ಳುತ್ತದೆ: "ನೀನು ಮಕ್ಕಳನ್ನು ಖುಶಿ ಪಡಿಸಲು ಇವನ್ನೆಲ್ಲ ಹೇಳುತ್ತಿದ್ದರೆ ಅಡ್ಡಿಯಿಲ್ಲ. ಇಲ್ಲವಾದರೆ ನೀನು ಓದುತ್ತಿರುವ ಪುಸ್ತಕಗಳೊಡನೆ ನೀನು ಗಹನವಾಗಿ ನಿನ್ನನ್ನು ಗುರುತಿಸಿಕೊಳ್ಳುತ್ತಿದ್ದೀಯ. ಹಾಗೆ ಮಾಡಿದರೆ ನೀನು ನಿನ್ನ ನೆನಪುಗಳನ್ನಲ್ಲದೇ ಇತರರ ನೆನಪುಗಳನ್ನು ಎರವಲು ಪಡೆಯುತ್ತಿದ್ದೀಯ - ಇದು ಚಿಂತೆಯ ವಿಷಯ" [ಪುಟ ೧೬೩].

ಯಾಂಬೊನ ಹುಚ್ಚುತನದಲ್ಲೂ ಒಂದು ಪದ್ಧತಿಯಿದೆ. ತನ್ನ ಬಾಲ್ಯವನ್ನು ಅವನು ಒಂದು ಪದ್ಧತಿಯ ಪ್ರಕಾರ ಮತ್ತೆ ಕಟ್ಟುತ್ತಿದ್ದಾನೆ. ಹೀಗಾಗಿ ನಮಗೆ ಅವನು ಬಾಲ್ಯವನ್ನು ಕಾಲಾನುಕ್ರಮದ ಪ್ರಕಾರ ಕಟ್ಟಿ ವರ್ತಮಾನದಲ್ಲಿ ಆ ಘಟನೆಗಳನ್ನು ಅರ್ಥೈಸುತ್ತಿರುವ ಅನುಭವವಾಗುತ್ತದೆ. ಕಾಲಾನುಕ್ರಮದಲ್ಲಿ ನಮಗೆ ನಡೆದ ಘಟನೆಗಳು ತಿಳಿಯುತ್ತವೆ, ಆ ಘಟನೆಗಳ ಅಂದಿನ ಮಹತ್ವದ ದರ್ಶನವಾಗುತ್ತದೆ, ಮತ್ತು ಅದೇ ಘಟನೆಗಳ ಇಂದಿನ ಪುನಃ ಅರ್ಥೈಸುವಿಕೆಯೂ ಆಗುತ್ತದೆ. ಯಾಂಬೊ ಹೇಳುತ್ತಾನೆ: "ನಾನು ಈ ಕಟ್ಟುವಿಕೆಯಲ್ಲಿ ಚರಿತ್ರಕಾರರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಯಾವುದಾದರೂ ವಿಚಾರ ಎದುರಿಗೆ ಬಂದಾಗ ಅದರ ಸತ್ಯಾಸತ್ಯತೆಯನ್ನು ಎಲ್ಲ ಆಯಾಮಗಳಿಂದಲೂ ಪರೀಕ್ಷಿಸುವುದು. ಅದು ಹೇಗೆಂದರೆ - ನಾನು ನನ್ನ ನಾಲ್ಕನೆಯ ತರಗತಿಯ ಪುಸ್ತಕಗಳನ್ನು ಓದುತ್ತಿದ್ದರೆ, ಅದೇ ಕಾಲಕ್ಕೆ ಅಂದಿನ ವಾರ್ತಾ ಪತ್ರಿಕೆಗಳನ್ನೂ ಓದುತ್ತೇನೆ, ಅಂದಿನ ಸಮಯದ ಪತ್ರಿಕೆಗಳನ್ನೂ ತಿರುವಿಹಾಕುತ್ತೇನೆ, ಮತ್ತು ಸಾಧ್ಯವಾದರೆ ಆ ಕಾಲದ ಸಂಗೀತವನ್ನೂ ಕೇಳುತ್ತೇನೆ [ಪು.೧೭೯]. ಹೀಗಾಗಿ ಅವನ ಓದಿನಲ್ಲಿ ಫ್ಯಾಸಿಸ್ಟ್ ಪರವಾದ ಲೇಖನಗಳು ಕಂಡುಬರುವುದು ಆಶ್ಚರ್ಯದ ವಿಚಾರವಾಗಬಾರದು. ಆದರೆ ಈಗ ಅದನ್ನು ಓದುತ್ತಿರುವುದರಿಂದ, ಆ ಬರಹಗಳ ಚಾರಿತ್ರಿಕ ಮಹತ್ವ ನಮಗೆ ವರ್ತಮಾನದಲ್ಲಿ ತಿಳಿದಿರುವುದರಿಂದ ಹಳೆಯ ಸಾಲುಗಳ ನಡುವೆಯೂ ಯಾಂಬೊ ಹೊಸ ಅರ್ಥಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಹೀಗೆ ಯಾಂಬೊನ ಮೂಲಕ ಇಕೋ ಚರಿತ್ರೆಯನ್ನು ಹೊಸ ಓದಿಗೆ ಒಳಪಡಿಸುತ್ತಿದ್ದಾರೆ. ಹಾಗೆ ಮಾಡಲು ಅವರಿಗೆ ಸಮಂಜಸವಾದ ಕಾರಣವೂ ದೊರೆತಿದೆಯಲ್ಲದೇ, ತಮ್ಮ ಓದುಗರನ್ನೂ ಈ ಯಾತ್ರೆಯಲ್ಲಿ ಸಹಜ ಸಹಪಯಣಿಗರಂತೆ ಅವರು ಕರೆದೊಯ್ಯುತ್ತಿದ್ದಾರೆ.





ಹೀಗೆ ಚರಿತ್ರೆಯನ್ನು ಖಂಡ ಖಂಡವಾಗಿ ತುಂಡರಿಸಿ ಸಮೀಪದಿಂದ ನೋಡಿದಾಗ ಯುದ್ಧದಲ್ಲಿ ಏನಾಗುತ್ತಿದೆ ಅನ್ನುವ ವಿಚಾರವಷ್ಟೇ ಕಾಣಿಸುವುದಿಲ್ಲ. ಬದಲಿಗೆ ಸಾಂಸ್ಕೃತಿಕ ನೆಲೆಯಲ್ಲೂ ಏನಾಗುತ್ತಿದೆ ಅನ್ನುವುದು ಕಾಣುತ್ತದೆ. ಉದಾಹರಣೆಗೆ ಕುಂದೆರಾ ತನ್ನ "ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟಿಂಗ್"ನಲ್ಲಿ ಒಂದು ವಿಚಾರವನ್ನು ಬರೆಯುತ್ತಾನೆ:
"ಹಿಸಾಟರಿಯಾಗ್ರಫಿ ಬರೆಯುವುದು ಮಸುಷ್ಯನ ಚರಿತ್ರೆಯನ್ನಲ್ಲ, ಸಮಾಜದ ಚರಿತ್ರೆಯನ್ನು. ೧೯೬೮ರಲ್ಲಿ ರಷ್ಯಾ ಚಕೋಸ್ಲವಾಕಿಯಾವನ್ನು ಆಕ್ರಮಿಸಿಕೊಂಡನಂತರದ ಕೆಲ ವರ್ಷಗಳಲ್ಲಿ ಜನರನ್ನು ನಿರಂತರ ಭಯದಲ್ಲಿಟ್ಟು ರಾಜ್ಯಭಾರ ನಡೆಸುವುದಕ್ಕೆ ನಾಂದಿಯೆಂಬಂತೆ -- ಒಂದು ಯೋಜಿತ ಕಾರ್ಯಕ್ರಮದಡಿ, ಅಲ್ಲಿನ ಎಲ್ಲ ನಾಯಿಗಳನ್ನೂ ಸಾಮೂಹಿಕವಾಗಿ ಮುಗಸಿಬಿಡುವ ಕಾರ್ಯಕ್ರಮ ನಡೆಯಿತು. ಇದು ಚರಿತ್ರಕಾರರಿಗೆ ಮುಖ್ಯವಲ್ಲದ - ಅವರು ಸಂಪೂರ್ಣವಾಗಿ ಮರೆತ ಘಟನೆ. ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗೂ ಮುಖ್ಯವಲ್ಲದ ಘಟನೆ. ಆದರೆ ಮಾನವಶಾಸ್ತ್ರದಲ್ಲಿ ಇದು ಅತ್ಯಂತ ಮುಖ್ಯವಾಗಬಲ್ಲ ಸಂಗತಿ."
ಇಂಥದೇ ಒಂದು ವಿಚಾರ ನಮಗೆ ಯಾಂಬೊ ಆಗಿನ ಕಾಲದ ಕಾಮಿಕ್‌ಗಳನ್ನು ಓದುತ್ತಿರುವಾಗ ಕಾಣುತ್ತದೆ. ಯಾಂಬೊ ಪ್ರಕಾರ ಡಿಸೆಂಬರ್ ೧೯೪೧ರಾದಿಯಾಗಿ ಪತ್ರಿಕೆಗಳಲ್ಲಿ ಬರುತ್ತಿದ ಕಾಮಿಕ್ ಸ್ಟ್ರಿಪ್‌ಗಳಲ್ಲಿ ಒಂದು ಮೂಲಭೂತ ಬದಲಾವಣೆ ಕಂಡುಬರಲು ಪ್ರಾರಂಭವಾಯಿತು: "ಎಸ್.ಎಸ್. ಸೈನ್ಯದ ಅಥವಾ ಕಪ್ಪಂಗಿ ಸೈನ್ಯದ ಒಂದು ತುಕಡಿಯನ್ನು ಕಳುಹಿಸಿ ನ್ಯೂಯಾರ್ಕ್ ನಗರವನ್ನು ಆಕ್ರಮಿಸಿಕೊಳ್ಳುವುದು ಕಷ್ಟವಾದರಿಂದ ಅನೇಕ ವರ್ಷಗಳಿಂದ ನಾವು ಅವರ ಮೇಲೆ ಭಿನ್ನ ರೀತಿಯ ಕಾಮಿಕ್ ಪುಸ್ತಕ ಯುದ್ಧವನ್ನು ಸಾರಿದ್ದೆವು. ಮೊದಲಿಗೆ ಮಾತುಗಳಿದ್ದ ಬುಗ್ಗೆಗಳನ್ನು ಕಾಮಿಕ್‌ಗಳಿಂತ ತೆಗೆದುಹಾಕಿ ಆ ಜಾಗದಲ್ಲಿ ಚಿತ್ರದ ಕೆಳಗೆ ವಿವರಗಳನ್ನು ಕೊಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೆವು. ನಂತರ, ನಾನು ಅನೇಕ ಕಡೆ ಗಮನಿಸಿದಂತೆ ಈ ಪುಸ್ತಕಗಳಲ್ಲಿ ಅಮೆರಿಕನ್ ಪಾತ್ರಗಳು ಕಾಣೆಯಾಗುತ್ತಾ ಬಂದವು. ಆ ಜಾಗವನ್ನು ಇಟಲಿಯ ನಕಲಿ ಪಾತ್ರಗಳು ಆಕ್ರಮಿಸಿಕೊಳ್ಳತೊಡಗಿದವು. ಮತ್ತು ಕಟ್ಟಕಡೆಗೆ [ನನ್ನ ಅಭಿಪ್ರಾಯದಲ್ಲಿ ಅತ್ಯಂತ ದೊಡ್ಡ ಅಡ್ಡಗಾಲನ್ನು ನಾವುದಾಟಿದಂತೆ] ಆ ಖ್ಯಾತ ಇಲಿಯ [ಮಿಕಿ ಮೌಸ್] ಹತ್ಯೆಯಾಯಿತು. ಅದೇ ಕಥೆಗಳು ಏನೂ ಆಗಿಲ್ಲವೆಂಬಂತೆ ಮುಂದುವರೆದವಾದರೂ, ಯಾರ ಗಮನಕ್ಕೂ ಬರದಂತೆಯೇ ಆ ಕಥೆಗಳ ನಾಯಕ ಟೊಪೊಲಯನ್ ನಿಂದ ತೊಫೊಲಯನ್‍ಗೆ, ಇಲಿಯಿಂದ ಮನುಷ್ಯನಾಕೃತಿಗ ಬದಲಾಗಿಬಿಟ್ಟಿದ್ದ! ಆದರೆ ಆ ಮನುಷ್ಯನಿಗೆ ಡಿಸ್ನಿಯ ಪ್ರಾಣಿರೂಪದ ಮನುಷ್ಯರಂತಹ ಪಾತ್ರಗಳಿಗಿದ್ದಂತೆ ಇನ್ನೂ ನಾಲ್ಕೇ ಬೆರೆಳುಗಳಿದ್ದುವು. ಅವನ ಮಿಕ್ಕ ಮಿತ್ರರೆಲ್ಲರೂ ಪ್ರಾಣಿಗಳಿಂದ ಮನುಷ್ಯರಾದರೂ, ಹಳೆಯ ಹೆಸರುಗಳನ್ನೇ ಇಟ್ಟುಕೊಂಡು ಮುಂದುವರೆದರು"[ಪು.೨೩೪]

ಕಾಮಿಕ್‌ಗಳಿಂದ ಇಕೊ ಮತ್ತೆ ಭೂಗೋಳಕ್ಕೆ ಬರುತ್ತಾರೆ. ಒಂದು ಕಡೆ ಅಟ್ಲಾಸುಗಳನ್ನು ನೋಡಿದರೆ, ಮುಂದೆ ಅಂಚೆ ಚೀಟಿಗಳ ಬಗ್ಗೆಗಮನ ಹರಿಸುತ್ತಾರೆ. ಅಂಚೆ ಚೀಟಿಗಳ ಮೂಲಕ ಚರಿತ್ರೆಯನ್ನು ಹೇಗೆ ಬೇರೊಂದೇ ರೀತಿಯಲ್ಲಿ ಅರ್ಥೈಸಬಹುದೆಂದು ಆಗಿನ ಘಟನೆಗಳಿಗೆ ಹೊಸ ಅರ್ಥಗಳನ್ನು ಹೇಗೆ ಹುಡುಕಬಹುದೆಂದು- ಚರಿತ್ರೆಯನ್ನು ಹೇಗೆ ಪುನಃ ಕಟ್ಟಬಹುದೆಂದು ಇಕೊ ನಮಗೆ ನಿದರ್ಶನ ನೀಡುತ್ತಾರೆ. ಯಾಂಬೊ ತನ್ನ ನೆನಪನ್ನು ಕಳೆದುಕೊಂಡದ್ದೇ ಈ ಎಲ್ಲ ಪೆಟ್ಟಿಗೆಗಳನ್ನು ನಮ್ಮ ಮುಂದೆ ತೆರೆದಿಡಲೋ ಎನ್ನುವ ಭಾವನೆ ಒಮ್ಮೊಮ್ಮೆ ಇದನ್ನು ಓದಿದಾಗ ಅನ್ನಿಸುತ್ತದೆ.

ಚರಿತ್ರೆಯ ಮರುಪರಿಶೀಲನೆಯ ಅತಿರೇಕ ಅಂತ ನಾವು ಈ ಕಾದಂಬರಿಯನ್ನು ಖಂಡಿತವಾಗಿಯೂ ಭಾವಿಸಬಾರದು. ಇದರಲ್ಲಿ ದಟ್ಟ ವಿಷಾದಭರಿತ ಹಾಸ್ಯವೂ ಇದೆ. ಈ ಎಲ್ಲವೂ ಯಾಂಬೊನ ಜೀವನದಲ್ಲಿ ನಿಜಕ್ಕೂ ನಡೆಯುತ್ತಿದೆಯೇ ಇಲ್ಲವೇ? ಈ ಅನುಮಾನ ಇದ್ದಕ್ಕಿದ್ದಂತೆ ಪುಸ್ತಕದಲ್ಲಿ ತೂರಿಬಿಡುತ್ತದೆ [ಪು.೩೦೭]. ಇದು ಯಾಂಬೊನ ಸಾವಿನ ನಂತರ ಆಗುತ್ತಿರಬಹುದೇ.. ಈ ಸಾಲುಗಳನ್ನು ನೋಡಿ: "ನಾನು ನಿಜಕ್ಕೂ ಸತ್ತಿರಬೇಕು. ಸಾವಿನ ನಂತರದ ಬದುಕು ಹೀಗೆ ಶಾಂತವಾಗಿ, ಏನೂ ಏರುಪೇರುಗಳಿಲ್ಲದೆಯೇ ನನ್ನ ಹಳೆಯ ಬದುಕಿನ ಪುನರಾವರ್ತನೆಯಾಗುತ್ತದೆಯೇ? ಹಳೆಯ ಬದುಕು ದುರ್ಧರವಾಗಿದ್ದರೆ ಅದು ಅದೃಷ್ಟದ ಕರ್ಮ [ಅದೇ ನರಕ], ಇಲ್ಲವಾದರೆ ಸ್ವರ್ಗ? ಅರೇ ಏನೀಮಾತುಗಳು. ಅಕಸ್ಮಾತ್ ನೀನು ಗೂನು ಬೆನ್ನಿನವನಾಗಿ, ಯಾ ಕುರುಡನಾಗಿ, ಯಾ ಕಿವುಡ-ಮೂಗನಾಗಿ ಜೀವಿಸಿದ್ದರೆ, ಅಥವಾ ನಿನ್ನ ಜೀವನಕಾಲದಲ್ಲಿ ನಿನ್ನ ಸಂಸಾರದಲ್ಲಿದ್ದವರೆಲ್ಲಾ ತಂದೆ, ಹೆಂಡತಿ, ಎಲ್ಲರೂ ನೊಣ ಸತ್ತಂತೆ ಏಕಕಾಲಕ್ಕೆ ಉದುರಿಹೋಗಿದ್ದರೆ, ... ಅದರರ್ಥ ಸಾವಿನ ನಂತರದ ಅನುಭವದಲ್ಲೂ ಭೂಮಿಯಲ್ಲಿ ಜೀವಿಸಿದ ದುಃಖಮಯೀ ಬದುಕಿನ ಪುನರಾವರ್ತನೆಯೇ ಆಗಬೇಕೆಂಬ ಜರೂರಿ ಇದೆಯೇನು?"

ಪುಸ್ತಕ ಮುಗಿಯುತ್ತ ಬಂದಂತೆ ಇಕೊ ನಮ್ಮ ಮುಂದೆ ಅನೇಕ ಪ್ರಶ್ನೆಗಳನ್ನು ತೆರೆದಿಡುತ್ತಾರೆ. ಈ ಮೊದಲೇ ಹೇಳಿದಂತೆ ಇದು ನಿಜಕ್ಕೂ ನಡೆಯುತ್ತಿದೆಯೋ ಅಥವಾ ಎಲ್ಲವೂ ಕನಸೋ, ಯಾಂಬೋಗೆ ನಿಜಾಕ್ಕೂ ಮರೆವೆಯ ರೋಗ ತಟ್ಟಿತ್ತೋ ಅಥವಾ ಎಲ್ಲ ನಮ್ಮ ಭ್ರಮೆಯೋ ಎಂಬ ಅನುಮಾನಗಳು ಬಂದರೆ ಹೇಗೆ? ಉದಾಹರಣೆಗೆ [ಪು.೪೨೩] ಯಾಂಬೊ ಹೈ ಸ್ಕೂಲಿನಲ್ಲಿದ್ದಾಗ ಅವನಿಗೆ ಒಂದು ಗಟ್ಟಿಯಾದ ಧ್ವನಿ ಕೇಳಿಸುತ್ತದೆ - "ನೀನು ಕಂಡದ್ದನ್ನು ಖಂಡಿತವಾಗಿಯೂ ಬರೆದಿಡುವುದರಲ್ಲಿ ಉತ್ಸಾಹ ತೋರು, ಯಾಕೆಂದರೆ ಯಾರೂ ಅದನ್ನು ಓದುವುದಿಲ್ಲ. ಯಾಕೆ ಓದುವುದಿಲ್ಲವೆಂದರೆ ನೀನು ಅದನ್ನು ಬರೆಯತ್ತಿದ್ದೀಯ ಎಂಬ ಭ್ರಮೆ ಮಾತ್ರವೇ ನಿನಗಿದೆ!" ಹಾಗಾದರೆ ಯಾಂಬೊ ನೆನಪು ಮಾಡಿಕೊಳ್ಳುತ್ತಿರುವುದು ಏನನ್ನು? "ನನ್ನ ನಿದ್ದೆಯ ಭಾಗವಾಗಿ ನಾನು ನೆನಪು ಮಾಡಿಕೊಂಡದ್ದೆಲ್ಲಾ ನಿಜವೆಂದು ಯಾರಿಗೆ ಹೇಳಲಿಕ್ಕೆ ಸಾಧ್ಯ? ಬಹುಶಃ ನನ್ನ ತಂದೆ, ತಾಯಂದಿರಿಗೆ ಬೇರೆಯದೆ ಚಹರೆ ಇತ್ತೇನೋ. ಡಾಕ್ಟರ್ ಒಸಿಮೊ ಇರಲೇ ಇಲ್ಲವೇನೋ.... ಇನ್ನೂ ದುರಂತವೆಂದರೆ ನಾನು ಆಸ್ಪತ್ರೆಯಲ್ಲಿ ಎದ್ದು ಕೂತಂತೆ, ನೆನಪು ಕಳಕೊಂಡಂತೆ, ಪೌಲಾ ಎಂಬವಳು ನನ್ನ ಹೆಂಡತಿ ಎಂಬಂತೆ, ನನಗೆ ಇಬ್ಬರು ಮಕ್ಕಳು ಮೂರು ಜನ ಮೊಮ್ಮೊಕ್ಕಳು ಇರುವಂತೆ ಕನಸು ಕಂಡೆನೇನೋ. ನನಗೆ ನಿಜಕ್ಕೂ ನೆನಪು ಹೋಗಿಲ್ಲ.. ಅಲ್ಲಿ ಆಸ್ಪತ್ರೆಯಲ್ಲಿ ಇಂಥ ಸ್ಥಿತಿಯಲ್ಲಿರುವವನು ಇನ್ಯಾರೋ. ಇಲ್ಲಿರುವ ಆಕಾರಗಳೆಲ್ಲಾ ಕೇವಲ ಭ್ರಮೆಯಷ್ಟೇ..." ನಿಜವೇ ಕನಸೇ? ರಾಮಾನುಜಮ್ ಕವಿತೆಯ ಹಾಗೆ ಅನ್ನಿಸುತ್ತದೆಯೇ?

ಈ ಪುಸ್ತಕ ಕಥನ ಕಲೆಯ ಅನೇಕ ಆಯಾಮಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಕಥೆ ಕಟ್ಟುವ ಕಾಯಕದಲ್ಲಿ ಆಸಕ್ತಿಯಿರುವವರಿಗೆ ಇದು ಅನನ್ಯ ಸಾಧ್ಯತೆಗಳನ್ನು ತೋರಿಸಿಕೊಡುತ್ತದೆ. ಬರವಣಿಗೆಯಲ್ಲಿ ಚರಿತ್ರೆ, ಭೂಗೋಳ, ಅನುಭವ, ನೆನಪು, ಭ್ರಮೆ, ಕನಸು ಎಲ್ಲವನ್ನೂ ಹಾಸುಹೊಕ್ಕಾಗೆ ನೇಯ್ದಿಡುವುದರಿಂದ ಕಥನದ ಅರ್ಥೈಸುವಿಕೆಗೆ ಅನಂತ ಸಾಧ್ಯತೆಗಳನ್ನು ಈ ಕಾದಂಬರಿ ಬಿಟ್ಟುಕೊಡುತ್ತದೆ. ಇದನ್ನು ಓದುತ್ತಿದ್ದಂತೆ ನನಗೆ "ಆತ್ಮಚರಿತ್ರೆ" ಅನ್ನುವ ಸಾಹಿತ್ಯ ಪ್ರಕಾರದಲ್ಲಿರಬಹುದಾದ ಅರ್ಥಹೀನತೆಯೂ ಕಂಡುಬಂತು. ಯಾಕೆಂದರೆ ಆತ್ಮಕಥೆಯೂ ಒಂದು ಕಥೆಯೇ ಆದ್ದರಿಂದ ಅದು ಎಷ್ಟು ಭಿನ್ನವಾದ ಪ್ರಕಾರ? ಪ್ರತಿ ಆತ್ಮಕಥೆಯೂ ಕಳೆದ ಜೀವನದ ಕನಸುಗಳು, ಅನುಭವಗಳು, ಅದರ ಅರ್ಥೈಸುವಿಕೆಯಿಂದ ಒಡಗೂಡಿದ ಸತ್ಯ ಸುಳ್ಳುಗಳ ಸಮಾಗಮವೇ ಆಗಿರುತ್ತದೆ. ಇದರಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ಬಿಡಿಸಿ ಹೇಳುವುದೂ ಕಷ್ಟವೇನೋ. ಇದರಿಂದಾಗಿ ಅಕ್ಷರಮಾಲೆಯ ಉಪಯೋಗದಿಂದ ಆಗಬಹುದಾದ ಅನಂತ ಸಾಧ್ಯತೆಗಳನ್ನು ಒಮ್ಮೊಮ್ಮೆ ಅದರ ಅರ್ಥಹೀನತೆಯನ್ನೂ ನಾವು ಅರಿಯಲು ಸಾಧ್ಯವಾಗುತ್ತದೆ. ಈ ಪುಸ್ತಕದ ಅನೇಕ ಭಾಗಗಳನ್ನು ನಾನು ಮತ್ತೆ ಮತ್ತೆ ಓದಲು ಬಯಸಿದ್ದೇನೆ, ಹಾಗೂ ಅದು ನನಗೆ ಅತ್ಯಂತ ಪ್ರಿಯವಾದ ಅನುಭವವನ್ನೂ ನೀಡಿದೆ. ಇಲ್ಲಿನ ಕಥನ ಕಲೆಯಿಂದಾಗಿ ನನ್ನ ಪ್ರಿಯ ಲೇಖಕನ ಪಟ್ಟವನ್ನು ಪಡೆದಿದ್ದ ಕುಂದೆರಾನ ಸ್ಥಾನವನ್ನು ಈಗೆ ಇಕೋಗೆ ಅರ್ಪಿಸುತ್ತಿದ್ದೇನೆ! ಮತ್ತು ಕಡೆಯ ಟಿಪ್ಪಣಿಯಾಗಿ ನಾನೊಂದು ಮಾತನ್ನು ಹೇಳಲೇಬೇಕು - ನಾಲ್ಕಾರು ಪುಟಗಳ ಅಡಿಟಿಪ್ಪಣಿ ಮತ್ತು ಗ್ರಂಥ‌ಋಣ ಇರುವ ಅಪರೂಪದ ಕಾದಂಬರಿ ಇದು - ನಿಜ ಜೀವನದ ಅಚ್ಚಿನ ಲೋಕದ ಜೊತೆ ಈ ಭ್ರಾಮಕ ಕಾದಂಬರಿಯ ದಟ್ಟ ಕೊಂಡಿ ಇದೇಯೇ..

ಪುಸ್ತಕದಲ್ಲಿ ನನಗೆ ಇಷ್ಟವಾದ ಕೆಲವು ಭಾಗಗಳು:

"ಇದನ್ನು ಊಹಿಸಿನೋಡು: ಯಾರೋ ಮೊಸಸ್‍ನ ಮುಂದೆ ಪ್ರತ್ಯಕ್ಷವಾಗುತ್ತಾನೆ - ಅಥವಾ ಆತ ಪ್ರತ್ಯಕ್ಷವಾಗುವುದೂ ಇಲ್ಲ..ಎಲ್ಲಿಂದಲೋ ಅವನ ಅಶರೀರವಾಣಿ ಬರುತ್ತದೆ. ಇದರ ಆಧಾರದ ಮೇಲೆ ಮೊಸಸ್ ದೇವರು ನೀಡಿದ ಆದೇಶವೆಂದು ಜನರಿಗೆ ಈ ಹತ್ತೂ ನಿರ್ದೇಶಗಳನ್ನು ಪಾಲಿಸಲು ಹೇಳುತ್ತಾನೆ. ಆದರೆ ಈ ನಿರ್ದೇಶವನ್ನು ದೇವರೇ ಕೊಟ್ಟದ್ದು ಅನ್ನುವುದನ್ನು ಹೇಳಿದ್ದುಯಾರು? ಆ ಧ್ವನಿ "ನಾನೇ ನಿನ್ನ ಯಜಮಾನ, ದೇವರು". ಆ ಧ್ವನಿ ದೇವರದ್ದಲ್ಲದಿದ್ದಲ್ಲಿ? ನಾನು ನಿಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಮಫ್ತಿಯಲ್ಲಿರುವ ಪೋಲೀಸ್ ಪೇದೆ, ಈ ರಸ್ತೆಯಲ್ಲಿ ಬರುವುದು ಅಪರಾಧ, ದಂಡ ಕಟ್ಟು ಅಂದರೆ, ನಾನು ಪೇದೆ ಎಂದು ನಿರೂಪಿಸುವ ಮಾರ್ಗವಿದೆಯಾ? [ಪು.೩೪೩]


"ಅದು ದೇವರೇ ಆಗಿದ್ದರು ಅನ್ನುವ ನಂಬಿಕೆ ನನಗಿದೆ. ಆದರೆ ದೇವರು ನಮ್ಮ ಮೇಲೆ ಒಂದು ತಂತ್ರವನ್ನು ಬಳಸಿದ ಅಷ್ಟೇ. ಅವನು ಯಾವಾಗಲೂ ಹಾಗೆಯೇ ಮಾಡುತ್ತಿರುತ್ತಾನೆ. ನಿಮಗೆ ಬೈಬಲ್‌ನಲ್ಲಿ ನಂಬಿಕೆ ಯಾಕೆ? ಅದು ದೇವರ ಸ್ಫೂರ್ತಿಯಿಂದ ಬಂದದ್ದು ಅನ್ನುವ ಕಾರಣಕ್ಕಾಗಿ. ಆದರೆ ದೇವರ ಸ್ಫೂರ್ತಿಯಿಂದ ಬರೆದದ್ದು ಅಂತ ಎಲ್ಲಿ ನಮೂದಿಸಲಾಗಿದೆ? ಬೈಬಲ್‌ನಲ್ಲಿ.. ನಿಮಗೆ ಈ ಸಮಸ್ಯೆ ಕಾಣಿಸುತ್ತಿದೆಯೇ? [ಪು.೩೪೩]

"ಇದು ಸರಳವಾದ ಮಾತು, ಈ ಮೊದಲು ಯಾರಿಗೂ ತೋಚಿಲ್ಲ ಅಷ್ಟೇ. ದೇವರು ದುಷ್ಟ. ಪೂಜಾರಿಗಳು ದೇವರು ಒಳ್ಳೆಯವನೆಂದು ಹೇಳುವುದು ಯಾತಕ್ಕೆ? ಯಾಕೆಂದರೆ ಅವನು ನಮ್ಮನ್ನು ಸೃಷ್ಟಿಮಾಡಿದ ಕಾರಣಕ್ಕಾಗಿ. ಆದರೆ ಅದೇ ಕಾರಣಕ್ಕಾಗಿ ಅವನನ್ನು ದುಷ್ಟ ಎಂದು ಕರೆಯಬೇಕಾಗುತ್ತದೆ. ಬಹುಶಃ ಆತ ಅಮರನಿರಬೇಕು... ಕೋಟ್ಯಾಂತರ ವರ್ಷಗಳ ಕೆಳಗೆ ಅವನು ದುಷ್ಟನಾಗಿದ್ದಿರಲಿಲ್ಲವೇನೋ. ಕಾಲಾಂತರದಲ್ಲಿ ದುಷ್ಟನಾದನೇನೋ. ಬೇಸಿಗೆಯಲ್ಲಿ ಬೇಸರಗೊಂಡ ಪುಟ್ಟ ಮಕ್ಕಳು ಕೀಟಗಳ ರೆಕ್ಕೆಗಳನ್ನು ಹರಿದು ಆನಂದ ಪಟ್ಟು ಸಮಯ ಕಳೆಯುವ ರೀತಿಯಲ್ಲಿ ದೇವರೂ ಬೇಸರದಿಂದ ದುಷ್ಟನಾದನೇನೋ. ದೇವರನ್ನು ದುಷ್ಟ ಎಂದ ಆಲೋಚಿಸ ತೊಡಗಿದಾಕ್ಷಣಕ್ಕೇ ನಮಗೆ ದುಷ್ಟತನದ ಬಗ್ಗೆ ಎಷ್ಟು ಒಳ್ಳೆಯ ಸ್ಪಷ್ಟ ಅರ್ಥ ಗೋಚರಿಸಲಾರಂಭವಾಗುತ್ತದೆ ಅನ್ನುವುದನ್ನು ಗಮನಿಸಿ.
ಈ ಲೇಖನದ ಇಂಗ್ಲೀಷ್ ಆವೃತ್ತಿ ಇಲ್ಲಿದೆ

Labels: 

3 comments:

  1. Sriram, I asked for it and got it!
    Hazaar thanks.

    ReplyDelete
  2. ಅನನ್ಯ ಲೇಖನ.ಆಲೋಚನಾ ವಿಧಾನ ಬದಲಾಯಿಸುವ ಶಕ್ತಿ ಖಂಡಿತ.ಖುಷೀ ಸಹ ಆಯಿತು.ಅಭಿನಂದನೆ

    ReplyDelete
  3. ಅನನ್ಯ ಲೇಖನ.ಆಲೋಚನಾ ವಿಧಾನ ಬದಲಾಯಿಸುವ ಶಕ್ತಿ ಖಂಡಿತ.ಖುಷೀ ಸಹ ಆಯಿತು.ಅಭಿನಂದನೆ

    ReplyDelete