Sunday, March 8, 2009

ಚಿತ್ತಾಲರ ಬೇನ್ಯಾ: ಕೆಲವು ಟಿಪ್ಪಣಿಗಳು


[ಮಹಾರಾಣಿ ಲಕ್ಷ್ಮೀ‌ಅಮ್ಮಣ್ಣಿ ಕಾಲೇಜಿನಲ್ಲಿ ನಡೆದ ಯಶವಂತ ಚಿತ್ತಾಲರ ಸಾಹಿತ್ಯದ ಪುನರವಲೋಕನದ ಸಂದರ್ಭದಲ್ಲಿ ಮಾತನಾಡುವ ಸಿದ್ಧತೆಯಲ್ಲಿ ಈ ಟಿಪ್ಪಣಿಗಳನ್ನು ಮಾಡಿಕೊಂಡಿದ್ದೆ. ಅಲ್ಲಿನ ಸಂವಾದದಲ್ಲಿ ಭಾಗವಹಿಸಿದ ಯು.ಆರ್.ಅನಂತಮೂರ್ತಿ, ಕಿ.ರಂ.ನಾಗರಾಜ, ಮಹಾಬಲಮೂರ್ತಿ ಕೊಡ್ಲೆಕೆರೆ ಮತ್ತು ಎಸ್.ಆರ್.ವಿಜಯಶಂಕರ್ ಅವರ ಟಿಪ್ಪಣಿಗಳು ಈ ಕೆಳಗಿನ ಮಾತುಗಳನ್ನು ನಾನು ಇನ್ನೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಹಾಯಕವಾದುವು. ಈ ಮಹನೀಯರಿಗೆ ನಾನು ಕೃತಜ್ಞನಾಗಿದ್ದೇನೆ] 


ಪ್ರವೇಶ:
 


ಮಹಾರಾಣಿಲಕ್ಷ್ಮೀ ಅಮ್ಮಣ್ಣಿ ಕಾಲೇಜಿಗಾಗಿ ನನಗೆ ಬಂದ ಕರೆಯ ಸಂದರ್ಭ ಚಿತ್ತಾಲರ ಕಥೆಯಿಂದ ಆಯ್ದ ಭಾಗದಂತೆ ಇರುವುದರಿಂದ ಆ ಕಾಕತಾಳೀಯವನ್ನು ಮೊದಲು ಇಲ್ಲಿ ಹೇಳಲೇಬೇಕು ಅನ್ನಿಸುತ್ತದೆ. ಮೊದಲಿಗೆ ಒಂದು ಸಂಜೆ ನಾನು ಮನೆಗೆ ಬಂದಾಗ ಅಮೆರಿಕೆಯಿಂದ ಬಂದಿದ್ದ ನನ್ನ ಭಾವ "ನಿನ್ನನ್ನು ಹುಡುಕಿ ಯಾರೋ ಬಂದಿದ್ದರು. ಯಾವುದೋ ಕಾಲೇಜಿನವರಂತೆ. ಹೆಚ್ಚು ವಿವರಗಳು ಗೊತ್ತಿಲ್ಲ, ಅವರ ಯಾವುದೋ ಸಮಾರಂಭಕ್ಕೆ ನೀನು ಹೋಗಬೇಕಂತೆ" ಎಂದಷ್ಟೇ ಹೇಳಿ ನನ್ನನ್ನು ಕುತೂಹಲದಲ್ಲಿ ಮುಳುಗಿಸಿದರು. ಯಾರು, ಯಾವ ಕಾಲೇಜು, ಸಂದರ್ಭವೇನು ತಿಳಿಯದು. ಅವರಿಗೆ ನನ್ನ ತಂದೆಯ ವಿಸಿಟಿಂಗ್ ಕಾರ್ಡು ಕೊಟ್ಟು ಅದರಲ್ಲಿ ಮನೆಯ ಟೆಲಿಫೋನ್ ನಂಬರನ್ನು ಸೂಚಿಸಿ ಕಳಿಸಿದರಂತೆ. ಎರಡು ದಿನಗಳ ಮೇಲೆ ನನಗೆ ಆ ಕಾಲೇಜಿನ ಪ್ರಾಧ್ಯಾಪಕರಾದ ರಘುನಾಥರಿಂದ ಕರೆ ಬಂದಿತು. ಅವರು ಸಂದರ್ಭ ವಿವರಿಸಿ ನನ್ನನ್ನು ಚಿತ್ತಾಲರ ಯಾವುದೇ ಕೃತಿಯ ಬಗ್ಗೆ ಮಾತನಾಡಲು ಕೇಳಿದರು. ನಾನು ಒಪ್ಪಿ ಚಿತ್ತಾಲರ ಶಿಕಾರಿಯನ್ನು ಹುಡುಕತೊಡಗಿದೆ. ಶಿಕಾರಿ ಆಯ್ದುಕೊಂಡದ್ದಕ್ಕೆ ಮೂಲ ಕಾರಣ ಅದು ಕಾರ್ಪೊರೇಟ್ ಜಗತ್ತಿನ ಸಂದರ್ಭದಲ್ಲಿ ಬರೆದದ್ದು. ಬರೆದ ಸಂದರ್ಭಕ್ಕೂ ಈಗಿಗೂ ಆ ಜಗತ್ತು ಬದಲಾಗಿದೆಯಾದ್ದರಿಂದ ಮತ್ತು ಆ ಜಗತ್ತಿನೊಂದಿಗೆ ನನ್ನ ಒಡನಾಟವೂ ಇರುವುದರಿಂದ ಅದನ್ನು ಪುನಃ ಮಥಿಸಿ ನೋಡುವ ಸಾಧ್ಯತೆಯಿದೆಯೆಂದು ನಾನು ಎಣಿಸಿದೆ. ಆದರೆ ದುರಾದೃಷ್ಟವಶಾತ್ ಶಿಕಾರಿಯ ಪ್ರತಿ ಅಹಮದಾಬಾದಿನಲ್ಲಿದ್ದು ಬೆಂಗಳೂರಿನಲ್ಲಿದ್ದ ನನಗೆ ತುಸು ಗೊಂದಲವಾಯಿತು. ಅಂಕಿತ ಪುಸ್ತಕಕ್ಕೆ ಅದನ್ನು ಹುಡುಕುತ್ತಾ ಹೋದೆ. ಆದರೆ ಶಿಕಾರಿಯು ಸದ್ಯಕ್ಕೆ ಲಭ್ಯವಿಲ್ಲವೆಂದೂ ಮರುಮುದ್ರಣದಲ್ಲಿದೆಯೆಂದೂ ಕಂಬತ್ತಳ್ಳಿ ಹೇಳಿದರು. ಹೀಗಾಗಿ ಆ ಪುಸ್ತಕಕ್ಕಾಗಿ ವಿವೇಕನ ಮೊರೆಹೋಗಿ ಅವನ ಪ್ರತಿಯನ್ನು ತಂದು ಟಿಪ್ಪಣಿಗಳನ್ನು ಮಾಡಲು ಪ್ರಾರಂಭಿಸಿದೆ. ಕೆಲದಿನಗಳ ನಂತರ ಸಮಾರಂಭದ ಆಹ್ವಾನ ಪತ್ರಿಕೆ ಬಂದಿತು. ಅದರ ಪ್ರಕಾರ ನಾನು ಮಾತಾಡಬೇಕಿದ್ದ ಗೋಷ್ಠಿಯಲ್ಲೇ ಪ್ರಮೋದ ಮುತಾಲಿಕ್ ಶಿಕಾರಿಯ ಬಗ್ಗೆ ಮಾತಾಡುತ್ತಾರೆಂದೂ, ನಾನು ಕಥೆಗಳ ಬಗ್ಗೆ ಮಾತಾಡುತ್ತೇನೆಂದೂ ಸೂಚಿಸಲಾಗಿತ್ತು. ನನಗರಿವಿಲ್ಲದಂತೆಯೇ ಯಾವುದೋ ಶಕ್ತಿಗಳು ನನ್ನ ಹಿಂದೆ ಪಿತೂರಿ ನಡೆಸುತ್ತಿರುವಂತೆ ನನಗೆ ಅನ್ನಿಸಿತು. ಸರಿಯೆಂದು ನನ್ನ ಪ್ರಿಯ ಕಥಾಸಂಕಲನವಾದ ಸಿದ್ದಾರ್ಥ ಹುಡುಕಹೊರಟೆ. ಅದೂ ಸಿಕ್ಕಲಿಲ್ಲ. ಕಡೆಗೆ ಬೆಂಗಳೂರಿನ ಮನೆಯಲ್ಲಿದ್ದ ಬೇನ್ಯಾ ಮತ್ತು ಪಯಣ ಎರಡು ಸಂಕಲನಗಳನ್ನಿಟ್ಟುಕೊಂಡು ನನ್ನ ಕೆಲಸ ಪ್ರಾರಂಭಿಸಿದೆ. ಸಮಾರಂಭಕ್ಕೆ ಹೋದಾಗ ನನಗೆ ತಿಳಿದದ್ದೇನೆಂದರೆ ಯಾರೂ ಶಿಕಾರಿಯ ಬಗ್ಗೆ ಮಾತಾಡುತ್ತಿಲ್ಲ ಅನ್ನುವ ಮಾತು! ಮುತಾಲಿಕ್ ಪುರುಷೋತ್ತಮದ ಬಗ್ಗೆ ಮಾತಾಡುತ್ತೇನೆ ಅಂದಿದ್ದರಂತೆ, ಆದರೆ ಆ ಬಗ್ಗೆ ಮುದ್ರಣದ ಸಮಯದಲ್ಲಿ ಇನ್ನಾರಿಗೋ ಖಾತ್ರಿ ಇಲ್ಲದ್ದರಿಂದ ಅದು ಶಿಕಾರಿ ಎಂದು ಅಚ್ಚಾಯಿತಂತೆ!! ಈ ಎಲ್ಲ ಘಟನೆಗಳೂ ಚಿತ್ತಾಲರ ಕಥೆಯಿಂದಲೇ ಉದ್ಭವಿಸಿ ಬಂದಹಾಗಿದೆ, ಅವರ ಕಥೆಗಳನ್ನು ಪ್ರವೇಶಿಸಲು ಇದೇ ಸರಿಯಾದ ಮಾರ್ಗ ಅಂತ ನನಗೆ ಅನ್ನಿಸದಿರಲಿಲ್ಲ. ಶಿಕಾರಿಯ ಬಗೆಗಿನ ಟಿಪ್ಪಣಿಗಳು ಮುಂದೆಂದಾದರೂ ಬರಲಿವೆ!!

ಟಿಪ್ಪಣಿಗಳು:

ಈ ಟಿಪ್ಪಣಿಗಳನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ ನಾನು ಓದಿರುವ ಚಿತ್ತಾಲರ ಸಮಗ್ರ ಕಥೆಗಳು, ಅವರ ಅನೇಕ ಕಾದಂಬರಿಗಳೂ ಹಿನ್ನೆಲೆಯಲ್ಲಿ ಇವೆಯಾದರೂ ತಕ್ಷಣಕ್ಕೆ ನಾನು ಮತ್ತೆ ಓದಿದ ಎರಡು ಪುಸ್ತಕಗಳ ಸಂದರ್ಭದಲ್ಲಿ ಈ
 ಟಿಪ್ಪಣಿಗಳನ್ನು ಹಾಕುತ್ತಿದ್ದೇನೆ. ಹೀಗಾಗಿ ಈ ಟಿಪ್ಪಣಿಗಳು ಚಿತ್ತಾಲರ ಒಟ್ಟಾರೆ ಸಾಹಿತ್ಯದ ಓದಿಗೆ ಅನ್ವಯವಾಗದಿರಬಹುದು. ಪ್ರಸ್ತುತ ನಾನು ಚರ್ಚಿಸುವುದು ಚಿತ್ತಾಲರ ಬೇನ್ಯಾ ಸಂಕಲನವನ್ನಾದರೂ, ಅವರ ಹಿಂದಿನ ಕಥೆಗಳಿಗೆ ಪ್ರಾತಿನಿಧಿಕವಾಗಿ "ಪಯಣ" ಅನ್ನುವ ಅವರ ಆಯ್ದ ಕಥೆಗಳ ಸಂಕಲನವನ್ನು ಹಿನ್ನೆಲೆಯಲ್ಲಿರಿಸಿಕೊಂಡಿದ್ದೇನೆ.

"ಶ್ರೀನಿವಾಸರಿಂದಲೇ [ಮಾಸ್ತಿ] ಸ್ಫೂರ್ತಿಪಡೆದು ಕಥೆಗಳನ್ನು ಬರೆಯಲು ಪ್ರಾರಂಭಿಸಿದ ಚಿತ್ತಲರು ಈಗಾಗಲೇ ಸಣ್ಣಕತೆಗೆ, ಕನ್ನಡ ಗದ್ಯಕ್ಕೆ ಹೊಸ ಆಯಾಮಗಳನ್ನು ತಂದು ಕೊಟ್ಟಿದ್ದಾರೆ.." ಎಂದು ಆಮೂರರು ಹೇಳುತ್ತಾರೆ. ಈ ದೃಷ್ಟಿಯಿಂದ ಮಾಸ್ತಿಯವರಿಗೂ ಚಿತ್ತಾಲರಿಗೂ ಮೊದಲಿನ ಕಥೆಗಳಲ್ಲಿದ್ದ ಸಮಾನತೆಗಳನ್ನೂ ಭಿನ್ನತೆಗಳನ್ನೂ ಸ್ವಲ್ಪ ಮಟ್ಟಿಗೆ ಗುರುತಿಸಿ ಅಲ್ಲಿಂದ ಮುಂದಕ್ಕೆ ನಾನು ಬೇನ್ಯಾ ಸಂಕಲನವನ್ನು ಚರ್ಚಿಸುವ ಪ್ರಯತ್ನ ಮಾಡುತ್ತೇನೆ.


ಮಾಸ್ತಿಯವರಿಗೂ, ಚಿತ್ತಾಲರಿಗೂ ಎರಡು ಮೂಲಭೂತ ಸಮಾನಾಂತರಗಳನ್ನು ನಾವು ಮೊದಲ ಘಟ್ಟದಲ್ಲಿ ನೋಡಬಹುದು. ಒಂದು ನಿರೂಪಣಾ ವಿಧಾನಕ್ಕೆ ಸಂಬಂಧಿಸಿದ್ದು ಮತ್ತು ಎರಡು ಕಥಾವಸ್ತುವಿನ ಆಯ್ಕೆಗೆ ಸಂಬಂಧಿಸಿದ್ದು.

ನಿರೂಪಣಾವಿಧಾನದಲ್ಲಿ ಅವರ ಬರವಣಿಗೆ ಮಾಸ್ತಿಯವರ ಶೈಲಿಯನ್ನು ತಂತ್ರದ ಮಟ್ಟಿಗೆ ಮಾತ್ರ ಹೋಲುತ್ತದೆ ಅಂತ ನನ್ನ ಅನ್ನಿಸಿಕೆ. ಮಾಸ್ತಿಯವರ ನಿರೂಪಣಾ ತಂತ್ರದಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಅವರು ಓದುಗನೊಂದಿಗೆ ನಿರಂತರ ಸಂಭಾಷಣೆಯಲ್ಲಿರುವ ಪ್ರಕ್ರಿಯೆ. ಓದುಗನೊಂದಿಗೆ ಹೀಗೆ ಸಂಭಾಷಣೆಯಲ್ಲಿರುವುದರಿಂದ ನಿರೂಪಣೆ ಜಟಿಲವಾಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಎಲ್ಲ ಕಥೆಗಳೂ ಬಹುತೇಕ ನೇರವಾದ ನಿರೂಪಣೆಯನ್ನು ಹೊಂದಿರುತ್ತವೆ. ಈ ಶೈಲಿಯನ್ನು ಆಯ್ದುಕೊಂಡಮೇಲೆ ಕಥೆಗಾರನ ಸವಾಲೆಂದರೆ ವಸ್ತು ವೈವಿಧ್ಯದಿಂದಲೇ ಓದುಗನ ಗಮನವನ್ನು ಸೆರೆಹಿಡಿಯುವುದು. ಮಾಸ್ತಿಯವರ "ಓದುಗನೊಂದಿಗೆ ಮಾತಾಡುವ" ಈ ತಂತ್ರ ನಮಗೆ ಬಹುತೇಕ ಚಿತ್ತಾಲರ ಕಥೆಯಲ್ಲಿ ಬರುತ್ತದಾದರೂ ಒಂದು ಮೂಲಭೂತ ಅಂಶದಲ್ಲಿ ನಮಗೆ ವ್ಯತ್ಯಾಸ ಕಾಣುತ್ತದೆ. ಮಾಸ್ತಿಯವರ ನಿರೂಪಣಾತಂತ್ರದಲ್ಲಿ ನಿರೂಪಕ ಕಥೆಯನ್ನು "ಕೇಳುಗನಿಗೆ" ಹೇಳುತ್ತಾನೆ - ಒಂದು ರೀತಿಯಲ್ಲಿ ಆ ಭಾಷೆಯ ಪ್ರಯೋಗದಲ್ಲಿ ಮಾತಾಡುವ ಧಾಟಿಯಿದೆ. ಚಿತ್ತಾಲರ ಕಥೆಯಲ್ಲಿ ನಿರೂಪಕ "ಓದುಗನಿಗೆ" ಕಥೆಯನ್ನು ಬರೆಯುತ್ತಾನೆ. ಆದ್ದರಿಂದ ಚಿತ್ತಾಲರ ನಿರೂಪಣೆಯಲ್ಲಿ ಓದುಗ ಒಳಗೊಂಡಿದ್ದರೂ ಒಂದು ರೀತಿಯಲ್ಲಿ ಕಥೆಯಿಂದ ಭಿನ್ನವಾಗಿ ನಿರೂಪಣೆಗೂ ಕೇಳುವಿಕೆಗೂ ಕಾಲಾಂತರವಿರಬಹುದಾದ ಸಾಧ್ಯತೆಗಳೊಂದಿಗೆ ಚಿತ್ತಾಲರ ಕಥೆಗಳು ಸಾಗುತ್ತವೆ. ಮಾಸ್ತಿಯವರ ಕಥೆಗಳಲ್ಲಿ ಓದುಗ ಮೂಲಭೂತ "ಕೇಳುಗ" ಅನ್ನು ವ ಪ್ಯಾರಡೈಮ್‌ನಲ್ಲಿರುವುದರಿಂದ ಓದುಗ ಪ್ರಶ್ನೆ ಕೇಳಿದ ಹೊರತು, ತನಗೆ ಯಾವುದೋ ವಿಷಯ ಅರ್ಥವಾಗಲಿಲ್ಲ ಅಂದ ಹೊರತು, ಯಾವುದನ್ನೂ ವಿವರಿಸಲು ಆಸ್ಪದವಿರುವುದಿಲ್ಲ. ಆದರೆ ಚಿತ್ತಾಲರ ನಿರೂಪಣೆಯಲ್ಲಿ ಓದುಗ ಓದುಗನೇ ಆಗಿರುವುದರಿಂದ, ಅವನಿಗೆ ಈ ವಿಷಯ ಅರ್ಥವಾಗಿಲ್ಲವೆಂದು ಲೇಖಕ ಎಣಿಸಿ ಅದನ್ನು ವಿಸ್ತಾರವಾಗಿ ವಿವರಿಸುವುದಕ್ಕೆ ಆಸ್ಪದವಿದೆ. ಚಿತ್ತಾಲರ ಶಿಕಾರಿ, ಬೇನ್ಯಾ ಪುಸ್ತಕಗಳು ಬಂದ ಘಟ್ಟದಲ್ಲಿ ಮತ್ತೊಂದು ವಿಷಯವನ್ನು ನಾವು ಕಾಣಬಹುದು. ಅವರ ಹಿಂದಿನ ಬರವಣಿಗಯಲ್ಲೂ ಬರಹಗಾರನಿಗೆ ಒಂದು ಅಸ್ತಿತ್ವವಿರುತ್ತಿತ್ತಾದರೂ ಈ ಘಟ್ಟದ ಬರವಣಿಗೆಯಲ್ಲಿ, ನಿರೂಪಕ ಬಹುತೇಕ ಪಾತ್ರಧಾರಿಯೂ ವೃತ್ತಿ/ಪ್ರವೃತ್ತಿಯಲ್ಲಿ ಲೇಖಕನೂ ಅಗಿರುವ ಸಾಧ್ಯತೆಗಳು ನಮಗೆ ಕಾಣಿಸುತ್ತದೆ. ಹೀಗೆ ಕಥೆಗಳಿಗೆ ಒಂದು ರೀತಿಯ ಆತ್ಮಕಥಾನಕದ ಬಣ್ಣದ ಲೇಪನವಾಗಿರುವುದರಿಂದ ಅವು ಹೆಚ್ಚು ಕ್ರೆಡಿಬಲ್ ಆಗಿ ಕಾಣಿಸುತ್ತವೆ.

ವಿಷಯದ ಆಯ್ಕೆಯ ವಸ್ತುವೈವಿಧ್ಯತೆಯಲ್ಲಿ ಚಿತ್ತಾಲರ ಮೊದಲಿನ ಕಥೆಗಳಾದ ಕಳ್ಳ ಗಿರಿಯಣ್ಣ, ಸಂದರ್ಶನದಂತಹ ಕಥೆಗಳು ಒಂದು ಥರದಲ್ಲಿ ಮಾಸ್ತಿ ಪರಂಪರೆಯಲ್ಲಿ ಮೊದಲಾದರೂ, ಬೇನ್ಯಾಕ್ಕೆ ಬರುವ ವೇಳೆಗೆ ಬಹಳವೇ
 ಭಿನ್ನವಾಗಿಬಿಡುತ್ತವೆ. ಕಳ್ಳ ಗಿರಿಯಣ್ಣನಾಗಲೀ ಸಂದರ್ಶನ ಕಥೆಯ ಪಾತ್ರಧಾರಿಗಳಾಗಲೀ ಒಂದು ಮೂಲಭೂತ ಒಳ್ಳೆಯತನವನ್ನು ಪ್ರಮಾಣಿಕತೆಯನ್ನೂ ತೋರಿಸುತ್ತಾರೆ. ಆದರೆ ಬೇನ್ಯಾ ಸಂಕಲನದ ಕಥೆಗಳತ್ತ ಬರುವ ವೇಳೆಗೆ ನಮಗೆ ಹನೇಹಳ್ಳಿಯ ಮುಗ್ಧತೆಯಿಂದ ಬಿಡುಗಡೆ ಹೊಂದಿ ಮುಂಬಯಿನ ಮತಲಬಗಿರಿಗೆ ಸ್ಪಂದಿಸುತ್ತಿರುವ ಚಿತ್ತಾಲರು ಕಾಣುತ್ತಾರೆ. ಹನೇಹಳ್ಳಿಯ ಪಾತ್ರಗಳೇ ಮುಂಬಯಿಗೆ ಬರುವವೇಳೆಗೆ ಹುನ್ನಾರಗಳನ್ನು ಹೂಡುತ್ತಿರುವಂತೆ ಕಾಣುತ್ತಾರೆ. ಕಳ್ಳ ಗಿರಿಯಣ್ಣ ಕಥೆಯಲ್ಲಿ ಗಿರಿಯಣ್ಣನ ಮೂಲಭೂತ ಒಳ್ಳೆಯತನಕ್ಕೂ, ದೈವಭೀತಿಗೂ ತಟ್ಟುವಂತಹ ಮಾತಗಳನ್ನು ಯಾರಾದರೂ ಆಡಬಹುದಾದರೂ, ಶಿಕಾರಿ-ಬೇನ್ಯಾಗಳು ಬರುವ ವೇಳೆಗೆ ಪಿತೂರಿಗಳು ಅನುಮಾನಗಳು ಅಪನಂಬಿಕೆಗಳ ಮೂಲಕ ಮಾನವನ ಮನಸ್ಸನ್ನು ಮಥಿಸಲು ಚಿತ್ತಾಲರು ಪ್ರಯತ್ನ ಮಾಡುತ್ತಾರೆ ಅನ್ನಿಸುತ್ತದೆ.

ಬೇನ್ಯಾ ಸಂಕಲನದ ಮೊದಲ ಕಥೆಯಾದ "ನೀವೇ ಬರೆಯಬೇಕಾಗಿದ್ದ ಕಥೆ" 
ಅನೇಕ ಪದರಗಳನ್ನು ಒಳಗೊಂಡು ಕಥೆಯೊಳಗೆ ಕಥೆಗಳನ್ನೊಳಗೊಂಡು ಅನೇಕ ಸಾಧ್ಯತೆಗಳನ್ನು ತೆರೆದಿಡುವ ಕಥೆ. ಇಲ್ಲಿ ಕಥೆ ಎಲ್ಲರಿಗೂ ತಿಳಿದಿರುವಂತಹ ಸಂಗತಿಯಿಂದ ಪ್ರಾರಂಭವಾಗಿ ಖಾಸಗಿಯಾಗಿ ಮಾತ್ರ ತಿಳಿದಿರುವ ವಿವರಗಳಿಗೆ ಯಾವ ಪ್ರಯಾಸವೂ ಇಲ್ಲದೇ ಹೊಕ್ಕುಬಿಡುತ್ತದೆ. ಇಲ್ಲಿಯ ಜಿಜ್ಞಾಸೆ ವಿಷಯವನ್ನು ಹೇಗೆ ಚರ್ಚಿಸಬೇಕು, ಅದಕ್ಕೆ ಯಾವ ಫಾರ್ಮಾಟು ಸರಿ ಅನ್ನುವುದಷ್ಟೇ ಅಲ್ಲದೇ ಅಷ್ಟೇ ಮುಖ್ಯವಾಗಿ ಆ ವಿಷಯದ ಜಟಿಲತೆಯೂ ಆಗಿದೆ. ಅದನ್ನು ಹೇಗೆ ವಿವರಿಸಬೇಕೆಂದು ತಿಳಿಯದು ಅನ್ನುವ ದ್ವಂದ್ವವನ್ನು ಪ್ರಕಟಿಸುತ್ತಲೇ ನಿರೂಪಕ ಘಟನಾವಳಿಯ ಪದರಗಳನ್ನು ಬಿಚ್ಚುತ್ತಾ ಹೋಗುತ್ತಾನೆ. ಕಥೆಯ ಅಂತ್ಯಕ್ಕೆ ಈ ಜಿಜ್ಞಾಸೆಯ ಎಲ್ಲ ಪದರಗಳೂ ನಿಮ್ಮ ಮುಂದೆ ಇರಿಸಿ, ಇದನ್ನು ನೀವೇ ಬರೆಯಬೇಕು ಅನ್ನುತ್ತಲೇ ನಿಮ್ಮ ಬರವಣಿಗೆಯ ಅವಶ್ಯಕತೆಯನ್ನು ಲೇಖಕರು ಇಲ್ಲವಾಗಿಸುತ್ತಾರೆ. ಒಂದು ವಿಧದಲ್ಲಿ ಇದು ನೀವೇ ಬರೆಯಬೇಕಿದ್ದ ಕಥೆ ಅನ್ನುತ್ತಾ ಈ ಇಂಥ ಘಟನಾವಳಿಗಳಿಗೆ ಈಗಿತ್ತಲಾಗಿ ನಾವು ಸ್ಪಂದಿಸುತ್ತಿಲ್ಲವೇ? ಇದನ್ನೂ ಒಂದು ವಾರ್ತಾಪತ್ರಿಕೆಯ ವರದಿಯಂತೆ ಓದಿ ತಲೆಯಾಡಿಸಿ ಸುಮ್ಮನಾಗುತ್ತಿದ್ದೇವೆಯೇ? ಅನ್ನುವ ಪ್ರಶ್ನೆಗಳನ್ನು ಚಿತ್ತಾಲರು ನಮ್ಮ ಮನದಲ್ಲಿ ನೆಟ್ಟುಬಿಡುತ್ತಾರೆ.

ಬೇನ್ಯಾ ಬಂಡಾಯದ ಸಂದರ್ಭದಲ್ಲಿ ಬರೆದದ್ದು ಅಂತ ಚಿತ್ತಾಲರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳುತ್ತಾರೆ. ಈ ಮಾತು ಹೇಳುವ ಅವಶ್ಯಕತೆ ಏನಿತ್ತು ಅನ್ನುವುದು ನನ್ನನ್ನು ಅನೇಕ ಬಾರಿ ಕಾಡಿದೆ. ಬಹುಶಃ "ನಗರಪ್ರಜ್ಞೆ-ನವ್ಯ" ಅನ್ನುವ ಹಣೆಪಟ್ಟಿಯಡಿಯಲ್ಲಿ ಚಿತ್ತಾಲರ ಸಾಹಿತ್ಯವನ್ನು ಬಂಧಿಸಿಡುವ ವಿಮರ್ಶಕವೃಂದಕ್ಕೆ ಚಿತ್ತಾಲರು ತಮ್ಮ ಕಥೆಗಳನ್ನು ಬೇರೊಂದು ರೀತಿಯಲ್ಲಿ ಅರ್ಥೈಸುವ ಸವಾಲನ್ನೊಡ್ಡಲು ಈ ಮಾತನ್ನು ಬರೆದರೋ ಹೇಗೆ ಅಂತ ನನ್ನ ಅನುಮಾನ. ಒಬ್ಬ ಪುಟ್ಟ ಹುಡುಗ - ಅವನು ಭಿಕ್ಷೆ ಬೇಡಿ ಬದುಕಬೇಕಿರುವ ದಯನೀಯ ಪರಿಸ್ಥಿತಿ, ಮತ್ತು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಉಂಟಾದದ್ದು ಹೇಗೆ ಅನ್ನುವುದನ್ನು ಯೋಚಿಸದೆಯೇ ನಗರವನ್ನು "ಸುಂದರವಾಗಿಸಬೇಕು" ಅನ್ನುವ ಕನಸಿನ ತುಡಿತ - ಈ ಎಲ್ಲವುಗಳ ನಡುವೆ ಕಥೆ ನಡೆಯುತ್ತದೆ. ಚಿತ್ತಾಲರ ಕಥನ ತಂತ್ರದ ಅದ್ಭುತವಿರುವುದೇ ಅವರ ವಸ್ತುವಿನ ಆಯ್ಕೆಯಲ್ಲಿ. 
ಅವರು ಈ ಕಥೆಗೆ ತೆಗೆದುಕೊಂಡಿರುವ ವಸ್ತು ಗಹನವಾದದ್ದು. ಒಂದು ಸ್ಥರದಲ್ಲಿ ನೋಡಿದರೆ ನಗರಯೋಜನೆಯ, ನಗರದಲ್ಲಿನ ಜಾಗಗಳಿಗೆ ಯಾವ ರೀತಿಯ ಉಪಯೋಗವಿರಬೇಕು, ಯಾರ ಹಕ್ಕು ಇರಬೇಕು ಅನ್ನುವ ಪ್ರಶ್ನೆಗಳನ್ನೆತ್ತುವ ವಿಸ್ತಾರವಾದ ಕ್ಯಾನ್ವಾಸು. ಆದರೆ ಆ ವಿಸ್ತಾರವನ್ನು ಅವರು ಕ್ರಮಿಸುವುದು ಸಣ್ಣ ಸಣ್ಣ ವಿವರಗಳ ಮೂಲಕ. ಈ ಎಲ್ಲ ದೊಡ್ಡ ಕನಸುಗಳ ನಡುವೆ ನರಳುತ್ತಿರುವ ಜನರ ಪುಟ್ಟ ಪುಟ್ಟ ಕನಸುಗಳೂ ಇವೆ. ಆದರೆ ಅವುಗಳಲ್ಲಿ ಕೆಲವು ಬೇನ್ಯಾನಿಗೆ ಎಷ್ಟು ದೂರವೆಂದರೆ, ಅವನು ಆ ಹಗಲುಗನಸುಗಳನ್ನು ಕಾಣುತ್ತಲೇ ತನಗೆ ಈ ಕನಸುಗಳನ್ನು ಕಾಣುವ ಸ್ವಾತಂತ್ರವಿದೆಯೇ ಅಥವಾ ಬೇರಾರದೋ ಕನಸಿನೊಳಗೆ ಹೊಕ್ಕುಬಿಟ್ಟಿದ್ದೇನೆಯೇ ಅನ್ನುವ ಭಯಭೀತಿಯ ವಿಪರ್ಯಾಸದಲ್ಲಿ ಸಿಲುಕುವುದು ನಮಗೆ ತಕ್ಷಣಕ್ಕೆ ಹೊಡೆಯುತ್ತದೆ. ಅದೇ ಸಮಯಕ್ಕೆ ಬೇನ್ಯಾ ತನಗೆ ಬೇಕೆಂದಾಗ ತನ್ನ ಮುಖದ ಭಾವನೆಯನ್ನು ಬದಲಿಸಿಕೊಂಡು ದಯನೀಯ ಚಹರೆಯನ್ನು ತರಿಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವ ಮತಲಬಿತನದ ಬಗೆಗೂ ಅವರು ಬರೆಯುವುದನ್ನು ಮರೆಯುವುದಿಲ್ಲ. ಹೀಗೆ ಈ ಎಲ್ಲ ಪದರಗಳನ್ನೂ ನಮ್ಮ ಮುಂದೆ ತೆರೆದಿಟ್ಟು - ಈಗ ನವ್ಯ-ನಗರಪ್ರಜ್ಞಯನ್ನು ದಾಟಿ ಈ ಕಥೆಯನ್ನು ಅರ್ಥೈಸಿ ಅನ್ನುವ ಸವಾಲನ್ನು ಚಿತ್ತಾಲರು ಒಡ್ಡುತ್ತಿರುವಂತಿದೆ. ಕಥೆ ಹೇಳುತ್ತಲೇ - ಕಥೆ ಹೇಳುವ ಕ್ರಮದ ಬಗ್ಗೆ ಮಾತನಾಡುತ್ತಲೇ- ಆ ಎಲ್ಲವನ್ನೂ ಕಥೆಯ ಅವಿನಾಭಾವ ಅಂಗವಾಗಿಸಿಬಿಡುವ ಅವರ ಕಥನ ಕಲೆ ಯಾರನ್ನೂ ದಂಗುಬಡಿಸುವಂಥದ್ದು.

ಚಿತ್ತಾಲರ ಸಾಹಿತ್ಯದಲ್ಲಿ ಅನೇಕ ಪಾತ್ರಗಳು ಮತ್ತೆ ಮತ್ತೆ ತಲೆಹಾಕುತ್ತವೆ. ಹೀಗಾಗಿ ಒಂದು ಕಥೆ ಇಲ್ಲಿಗೇ ಮುಗಿಯಿತು ಅನ್ನುವ ಹಾಗಿಲ್ಲ. ಆ ಕಥೆಯ ಸೂತ್ರಗಳನ್ನು ಅವರು ಮತ್ತೆಲ್ಲೋ ಎತ್ತಿ ಅದನ್ನು ವಿಸ್ತಾರಗೊಳಿಸುತ್ತಾರೆ. ಒಂದು ಸುಂದರ ರಾಗಾಲಾಪನೆಯನ್ನು ಶಾಸ್ತ್ರೀಯ ಸಂಗೀತಗಾರರು ಎಷ್ಟು ಅದ್ಭುತವಾಗಿ ವಿಸ್ತರಿಸುತ್ತಾ ಹೋಗುತ್ತಾರೋ ಹಾಗೆ ಚಿತ್ತಾಲರು ತಮ್ಮ ಪಾತ್ರಗಳನ್ನು ಪೋಷಿಸುತ್ತಾ ಹೋಗುತ್ತಾರೆ. ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದಿಂದ ಸಾಹಿತ್ಯ ಕೃಷಿ [ಸಂದರ್ಶನ ಪ್ರಕಟಗೊಂಡದ್ದು ೧೯೫೭ರಲ್ಲಿ] ನಡೆಸುತ್ತಿರುವ ಚಿತ್ತಾಲರ ಈ ಪಾತ್ರಗಳು ಅಲ್ಲಲ್ಲಿ ಮುಖ್ಯಪಾತ್ರಗಳಾಗಿ, ಅಲ್ಲಲ್ಲಿ ಪುಟ್ಟ ಪಾತ್ರಗಳಾಗಿ ಬಂದು ಹೋಗಿವೆ. ಇವುಗಳನ್ನೆಲ್ಲಾ ಸೇರಿಸಿ ಒಂದು ಹಳ್ಳಿಯ- ಕೆಲವು ಸಂಸಾರಗಳ ಚಿತ್ರವನ್ನು ಬಿಡಿಸಬಹುದೋ ಎನ್ನುವ ಪ್ರಯತ್ನವನ್ನು ನಾನು ಹಿಂದೆ ಮಾಡಿದ್ದುಂಟು. ಆದರೆ ಆ ಪಾತ್ರಗಳ ರೂಪುರೇಷೆಗಳು ಒಮ್ಮೊಮ್ಮೆ ಬದಲಾಗಿಬಿಡುವುದರಿಂದ, ಅವುಗಳಿಗೆ ಕಾಲಘಟ್ಟದ ಇಂಟೆಗ್ರಿಟಿ ಇಲ್ಲದಿರುವುದರಿಂದ ಆ ಕಾರ್ಯ ಕಷ್ಟದ್ದು. ಹಾಗೆ ನೋಡಿದರೆ ಅಸ್ತಿತ್ವದ ಮೂಲ ತತ್ವದಬಗ್ಗೆ ಪ್ರಶ್ನೆಗಳನ್ನು ಕೇಳುವ ಚಿತ್ತಾಲರ ಸಾಹಿತ್ಯದಲ್ಲಿ ಕಾಲಘಟ್ಟದ ಇಂಟೆಗ್ರಿಟಿಯನ್ನು ಹುಡುದುವುದೇ ಸರಿಯಾದ ಮಾರ್ಗವಲ್ಲ. ಬದಲಿಗೆ ಅರ್ಥದ ಹೊಳಹುಗಳ ವಿಚಾರವನ್ನು ನಾವು ಹುಡುಕುತ್ತಾ, ಅದಕ್ಕೆ ಉತ್ತರಗಳನ್ನು ಕಲ್ಪಿಸಿಕೊಳ್ಳುತ್ತಾ ಹೋಗುವುದೇ ಉತ್ತಮ ಮಾರ್ಗ. ಈ ಪೀಠಿಕೆಯನ್ನು ನಾನು ಹಾಕುವುದಕ್ಕೆ ಕಾರಣ "ಪುರುಷೋತ್ತಮನ ಮಗ ದತ್ತಾತ್ರೇಯ, ಅವನ ಮಗಳು ಸಾವಿತ್ರಿ" ಅನ್ನುವ ಕಥೆ. ಈ ಕಥೆ ನಿಜಕ್ಕೂ ಪುರುಷೋತ್ತಮ ಕಾದಂಬರಿಗೆ ಪೀಠಿಕೆ. ಹಲವು ವರ್ಷಗಳ ನಂತರ ಬಂದ ಕಾದಂಬರಿಯ ಮೂಲ ಈ ಕಥೆಯಲ್ಲೂ
 ನಾವು ಕಾಣಬಹುದು. ಅಷ್ಟೇ ಅಲ್ಲ ಪುರುಷೋತ್ತಮ ಕಾದಂಬರಿಯಲ್ಲಿ ಒಂದು ಪಾತ್ರ ತುಂಟತನದಿಂದ "ಪುರುಷೋತ್ತಮನ ಮಗ ದತ್ತಾತ್ರೇಯ ಅವನ ಮಗಳು ಯಾರಮ್ಮಾ?" ಅಂತ ಕೇಳುವ ಗಮ್ಮತ್ತಿನ ಸಾಲೂ ಇದೆ! ಕೇವಲ ಒಂದು ಸಣ್ಣ ಕಥೆಯಾಗಿ ಒಂದು ಘಟನೆಯಾಗಿ ಬಂದದ್ದರ ಹಿಂದಿನ ಪದರಗಳೇನಿರಬಹುದು ಅನ್ನುವುದನ್ನ ನಿರೂಪಿಸುವುದಕ್ಕೇ ಪುರುಷೊತ್ತಮ ಕಾದಂಬರಿಯನ್ನು ಅವರು ನಂತರ ಬರೆದರು ಅನ್ನಿಸುತ್ತದೆ. ಹೀಗಾಗಿ ಚಿತ್ತಾಲರ ಸಾಹಿತ್ಯದಲ್ಲಿ ದೊರೆಯುವ ಭಿತ್ತಿಗಳು ಹನೇಹಳ್ಳಿಯಿಂದ ಆರಂಭವಾಗಿ ಮುಂಬಯಿ ತಲುಪಿ ಆಗಾಗ ವಿವಿಧ ರೂಪದಲ್ಲಿ ಪುನರಾವರ್ತನೆಗೊಳ್ಳುತ್ತಿರುತ್ತವೆ. ಪುರುಷೋತ್ತಮ ಕಾದಂಬರಿಯ ಹಿನ್ನೆಲೆಯಲ್ಲಿ ಈ ಕಥೆಯನ್ನು ಓದಿದಾಗ ಅದು ತೆರೆದಿಡುವ ಅರ್ಥದ ಪದರುಗಳು ಅದನ್ನು ಒಂದೇ ಸ್ಟಾಂಡ್ ಎಲೋನ್ ಕಥೆಯಾಗಿ ಓದಿದಾಗಿಗಿಂತ ಭಿನ್ನವಾಗಿರುತ್ತದೆ.

"ನನ್ನ ತಮ್ಮನ ಕಥೆಗೆ ಹೊಸ ಜೀವ ಬಂದಾಗ" ಅನ್ನುವ ಕಥೆಯಲ್ಲಿಯೇ ಮುಂಚೆ ನಾವು ಗುರುತಿಸಿದಂತೆ ಹಲವು ಕಥೆಗಳ ಪದರಗಳಿವೆ. ಒಂದು ಕಥೆಯನ್ನು ಹೇಳುತ್ತಾ ಅದಕ್ಕೆ ಸಂಬಂಧವಿರದ ಘಟನೆಗಳನ್ನು ಸಮಾನಾಂತರವಾಗಿ ಅದರಲ್ಲಿ ನೇಯ್ದು ಎರಡೂ ಕಥೆಗಳಿಗೆ ಕೊಂಡಿಹಾಕಿ ಒಂದೇ ರೀತಿಯ ಅಂತ್ಯ ತರುವ ಪ್ರಯತ್ನ ಅದ್ಭುತವಾದದ್ದು. ಇಲ್ಲಿ ದುರಂತದಲ್ಲಿ ಮುಕ್ತಾಯಗೊಳ್ಳುವ ಈ ಕಥೆಗಳು ನಿಜಕ್ಕೂ ಸುಖಾಂತಗಳು ಅಂತ
ಓದುಗನನ್ನು ನಂಬಿಸುವುದರಲ್ಲಿ ಚಿತ್ತಾಲರು ಯಶಸ್ವಿಯಾಗಿಬಿಡುತ್ತಾರೆ. ಅಂತ್ಯ ಎಲ್ಲರದೂ ಒಂದೇ ರೀತಿಯಾಗಿ ಸಾವಿನಲ್ಲಿ ಆಗುತ್ತದೆ. ಆದರೆ ಆ ಸಾವನ್ನು ಸಾಧಿಸಿದ್ದು ಹೇಗೆ, ಅದನ್ನು ತಲುಪುವ ಪ್ರಕ್ರಿಯೆಯಲ್ಲಿ ಬದುಕಿಗೇನಾಯಿತು ಅನ್ನುವ ಹತ್ತು ಹಲವು ವಿಷಯಗಳ ಬಗೆಗೆ ಯೋಚಿಸಲು ಈ ಕಥೆ ನಮ್ಮನ್ನು ಪ್ರೇರೇಪಿಸುತ್ತದೆ. ಚಿತ್ತಾಲರ ಕಥೆಗಳ ಪ್ರಾಮುಖ್ಯತೆ ಅವುಗಳನ್ನು ಓದಿ ಮುಗಿಸಿದಾಗ ಆಗುವ ಅನುಭವದಿಂದ ತಿಳಿಯುವುದಿಲ್ಲ. ಬದಲಿಗೆ ಅವುಗಳನ್ನು ಮಥಿಸುವುದರಿಂದ ನಮಗೆ ಭಿನ್ನ ಕಾಣ್ಕೆ ಸಿಗುತ್ತದೆ. ಇದು ಒಂದು ಲೋಟಾ ಅತೀ ಉತ್ತಮ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿಯಂತೆ, ಅದನ್ನು ಸೇವಿಸಿದ ನಂತರ ಬಯಲ್ಲಿ ಉಳಿಯುವ "ಆಫ್ಟರ್‍ಟೇಸ್ಟ್"ನ ರುಚಿಗೆ ಸಂಬಂಧಿಸಿದ್ದು. ಹೀಗಾಗಿ ಅವರ ಕಥೆಗಳು ಪುಸ್ತಕ ಮುಚ್ಚಿದಾಗ ಮುಗಿಯುವುದಿಲ್ಲ. ಅವು ಪುಸ್ತಕಮುಚ್ಚಿದಾಗ ಒಂದು ಪುಟ್ಟ ವಿರಾಮ ತೆಗೆದುಕೊಂಡು ನಮ್ಮ ಮನಸ್ಸಿನಲ್ಲಿ ಮುಂದುವರೆಯುತ್ತವೆ.

ಇದೇ ಸಂಕಲನದಲ್ಲಿ ಎರಡು ಹಳೆಯ ಕಥೆಗಳನ್ನೂ ಸೇರಿಸಲಾಗಿದೆ. ಮೊದಲನೆಯದು ಒಂದು ಹೆಸರಿನ ಕಥೆ. ಎಪ್ಪತ್ತರ ದಶಕದಲ್ಲಿ ಬರೆದ ಈ ಕಥೆ ಮಿಕ್ಕ ಕಥೆಗಳಿಗಿಂತ ಸಹಜವಾಗಿಯೇ ಭಿನ್ನವಾಗಿದೆ. ಆ ಕಥೆಯಲ್ಲಿರುವ ಜಿಜ್ಞಾಸೆಗಳು ಮುಂಚೆ ಚರ್ಚಿಸಿದ ಕಥೆಗಳಷ್ಟು ಜಟಿಲವಾದದ್ದಲ್ಲ. ಆದರೆ ಒಂದು ಮನಸ್ಸಿನಲ್ಲಿ ನಡೆವ ಮನೋವ್ಯಾಪಾರಗಳಿಗೂ ಸಾಮಾಜಿಕ ಕಟ್ಟಲೆಯ ದಾಕ್ಷಿಣ್ಯಕ್ಕೂ ನಡುವಿನ ಚಕಮಕಿಯನ್ನು ಇದು ಅದ್ಭುತವಾಗಿ ಚಿತ್ರಿಸುತ್ತದೆ. ಪೊಲಿಟಿಕಲಿ ಕರೆಕ್ಟ್ ಆಗುವ ನಮ್ಮ ತುಡಿತ, ಹಾಗೂ ಆ ಕ್ಷಣದ ತುರ್ತಿನ ಸಜ್ಜನಿಕೆಯ ದಾಕ್ಷಿಣ್ಯದಿಂದಾಗಿ ಎಷ್ಟೋಬಾರಿ ನಾವು ಮಾಡಬೇಕಾದ್ದನ್ನು ಮಾಡದೆಯೇ ಹೇಳಬೇಕಾದ್ದನ್ನು ಹೇಳದೆಯ ಒಳಗೇ ಕುದಿಯುವ ಪ್ರಕ್ರಿಯೆಯನ್ನು ಈ ಕಥೆ ಚಿತ್ರಿಸುತ್ತದೆ. ಈಗಿನ ತಕ್ಷಣದ ಪೇಚನ್ನು ಇಲ್ಲವಾಗಿಸಲು ನಾವು ಕೈಗೊಳ್ಳುವ ಕ್ರಿಯೆಗಳು ನಮ್ಮ ಹಳೆಯ ತುಡಿತವನ್ನು ಹಾಗೇ ಜೀವಂತವಾಗಿ ಇಟ್ಟಿರುತ್ತದೆ ಅನ್ನುವುದಕ್ಕೆ ಈ ಕಥೆ ಒಂದು ಉತ್ತಮ ನಿದರ್ಶನವಾಗಿದೆ.

ಅಪಘಾತ ಬಹಳ ಹಿಂದೆ ಬರೆದ ಕಥೆ. ಈ ಕಥೆ ಪ್ರಾರಂಬವಾಗುವುದು ಒಂದು ಅಪಘಾತದಲ್ಲಿ ತೀರಿಕೊಂಡರೆನ್ನಲಾದ ಒಂದು ಶವವನ್ನು ಗುರುತಿಸಬೇಕೆಂದು ಪೋಲೀಸನೊಬ್ಬನ ಕೋರಿಕೆಯಿಂದ. ಆ ಶವದಲ್ಲಿ ಎಸ್.ವಿ.ಕುಲಕರ್ಣಿ ಎಂಬವರ ರೈಲ್ವೆ ಪಾಸು ದೊರೆತದ್ದರಿಂದ ಅದು ಅವರದೇ ಶವ ಅನ್ನುವ ಗುಮಾನಿ. ಆದರೆ ಪೋಲೀಸಿನವ ಬರುವ ಮನೆಯಲ್ಲಿ ಮೂವರು ಎಸ್.ವಿ.ಕುಲಕರ್ಣಿಗಳಿದ್ದಾರೆ [ಸುರೇಶ, ಸುಭಾಶ, ಸುಧಾಕರ].. ಹೀಗಾಗಿ ಕಥೆಯು ಈ ಮೂವರಲ್ಲಿ ತೀರಿಕೊಂಡವರು ಯಾರಿರಬಹುದು ಅನ್ನುವ ಜಿಜ್ಞಾಸೆಯೊಂದಿಗೆ ಮುಂದುವರೆಯುತ್ತದೆ. ಯಾರೇ ಆಗಿದ್ದರೂ ಸಮಾನ ದುಃಖ ಪಡುವವರು, ಹಾಗೂ ಇವರೊಬ್ಬರಾಗದಿರಲಿ ಎಂದು ಬಯಸುವ ಭಿನ್ನ ಕುಲಕರ್ಣಿಗಳ ಹೆಂಡಂದಿರೂ ಅಲ್ಲಿ ಇದ್ದಾರೆ. ಹೀಗಾಗಿ ಯಾವುದೇ ಸುದ್ದಿ ಸಂಪೂರ್ಣ ಖುಶಿಯ ಸುದ್ದಿಯಾಗಲು ಸಾಧ್ಯವಿಲ್ಲ. ಬರುವ ಸುದ್ದಿ ದುಃಖದ ಕಾರಣವನ್ನು ನಿಖರಗೊಳಿಸುತ್ತಾ ಹೋಗುತ್ತದೆ. ಅಷ್ಟೇ.. ಮಿಸ್ ವರ್ಲ್ಡ್‌ನಂತಹ ಪೋಟಿಯಲ್ಲಿ ಕೌಂಟ್‌ಡೌನ್ ಆಗುವ ರೀತಿಯಲ್ಲಿ ಸತ್ತವರು ಯಾರು ಅನ್ನುವುದು ನಿಖರಗೊಳ್ಳುತ್ತಾ ಕಥೆ ಮುಂದುವರೆಯುತ್ತದೆ. ೧೯೬೫ರಲ್ಲಿ ಬರೆದ ಸಮಯದಲ್ಲಿ ಇಂಥ ಕೌಂಟ್‌ಡೌನ್ ತಂತ್ರಗಳನ್ನು ಅಷ್ಟಾಗಿ ಉಪಯೋಗಿಸುತ್ತಿರಲಿಲ್ಲ ಅನ್ನಿಸುತ್ತದೆ. ಆದರೂ ಅಲ್ಲಿನ ಡಾರ್ಕ್ ಹ್ಯೂಮರನ್ನು ನಾವು ಗಮನಿಸದಿರಲು ಸಾಧ್ಯವಿಲ್ಲ. ಕಥೆ ಕಡೆಗೂ ಒಂದು ಥರದಲ್ಲಿ ಸುಖಾಂತದಲ್ಲಿ ಅಂತ್ಯಗೊಂಡರೂ ನಮಗೆ ಸುಖಾಂತವಾದದ್ದು ಬೇರೊಬ್ಬರಿಗೆ ದುಃಖಾಂತವಾಯಿತೆನ್ನುವ ವಿಪರ್ಯಾಸವನ್ನು ಎತ್ತಿ ತೋರಿಸುತ್ತಲೇ ಕೊನೆಗೊಳ್ಳುತ್ತದೆ. ಒಂದೊಂದು ಘಟ್ಟದಲ್ಲೂ ಹೊಸ ಸುದ್ದಿ ಬರುತ್ತಿದ್ದಂತೆ ಆ ಮನೆಯ ಮೂಡು ಹೇಗೆ ಬದಲಾಗುತ್ತದೆ ಅನ್ನುವುದನ್ನು ಚಿತ್ತಾಲರು ಅದ್ಭುತವಾಗಿ ಚಿತ್ರಿಸುತ್ತಾರೆ.

ಒಟ್ಟಾರೆ ಆ ಕಾಲಘಟ್ಟದ ಚಿತ್ತಾಲರ ಈ ಕಥೆಗಳಲ್ಲಿ ಅಸ್ತಿತ್ವದ ಬಗೆಗಿನ ಪ್ರಶ್ನೆಗಳೂ, ಜೀವನದ ವಿಹ್ವಲಗಳೂ ಅದ್ಭುತವಾಗಿ ಚಿತ್ರಣಗೊಂಡಿವೆ. ತಮ್ಮ ಕಥನ ಕಲೆಯ ಬಗ್ಗೆ, ಉಪಯೋಗಿಸುವ ಪದಗಳ ಬಗ್ಗೆ ಅತೀವ ಎಚ್ಚರವಹಿಸುವ ಚಿತ್ತಾಲರ ಈ ಕಥಾಗುಚ್ಛವನ್ನು ಓದಿ ಮತ್ತೆ ಅವುಗಳೊಂದಿಗೆ ಕೆಲಕಾಲ ಕಥನ-ಮಥನ ನಡೆಸಲು ನನಗೆ ಅವಕಾಶ ದೊರೆಯಿತು. ಅದೇ ಸಮಯಕ್ಕೆ ಒಂದು ಗಮ್ಮತ್ತಿನ ವಿಷಯವನ್ನು ನಾನು ಇಲ್ಲಿ ಹೇಳಲೇ ಬೇಕಾಗಿದೆ. ಹಿಂದೊಮ್ಮೆ ನನ್ನ ನಿಲ್ದಾಣ ಅನ್ನುವ ಕಥೆಯನ್ನು ಓದಿ ಚಿತ್ತಾಲರು "ಈ ಕಥೆಯೇಕೋ ಇದ್ದಕ್ಕಿದ್ದಂತೆ ನಿಂತು ಹೋಯಿತು" ಅಂತ ಎದುರಿಗಿದ್ದ ಜಯಂತ ಕಾಯ್ಕಿಣಿಗೆ ಹೇಳಿದರಂತೆ. ಅದಕ್ಕೆ ಜವಾಬಾಗಿ ಜಯಂತ "ಇಲ್ಲ ಶ್ರೀರಾಮ ಇನ್ನೂ ಬರೆದಿದ್ದ, ಆದರೆ ಅದರ ಉತ್ತಮ ಪ್ರತಿ ನಡೆಸುತ್ತಿದ್ದಾಗ ಲೈಟ್ ಹೋಗಿಬಿಟ್ಟಿತಂತೆ, ಪತ್ರಿಕೆಗೆ ಕಳಿಸುವ ತುರ್ತು ಇದ್ದದ್ದರಿಂದ ಹಾಗೇ ಕಳಿಸಿಬಿಟ್ಟ" ಅಂತ ಹೇಳಿದನಂತೆ. [ಬಹುಶಃ ಜಯಂತನ ಇಂಥ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸುವ ಕೆಲವೇ ಜನರಲ್ಲಿ ಬರಹದ ಕಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಚಿತ್ತಾಲರು ಒಬ್ಬರೇನೋ]. ಈ ಫಲವಾಗಿ ನಾನು ಅವರನ್ನು ಒಮ್ಮೆ ಮುಂಬಯಿಯಲ್ಲಿ ಭೇಟಿಯಾದಾಗ ಕಥೆಗಳನ್ನು ಹೀಗೂ ನಿಲ್ಲಿಸುವುದುಂಟಾ ಅಂತ ನನ್ನನ್ನು ಕೇಳಿದ್ದರು. ಆದರೆ ಆ ಅಂಥ ಚಿತ್ತಾಲರ ಒಂದು ಕಥೆ [ಒಂದು ಹೆಸರಿನ ಕಥೆ] ಹೀಗೆ ಅಂತ್ಯಗೊಳ್ಳುತ್ತದೆ: "ಕತೆ ಇಲ್ಲೆಗೇ ಮುಗಿಸುತ್ತೇನೆ ಆಗದೆ? ಕಾರಣ ಅದನ್ನು ಎಲ್ಲಿಯೂ ಮುಗಿಸಬಹುದು ಅಲ್ಲವೇ?". ಈ ಸಾಲನ್ನು ಓದಿದಾಗ ನಾನು ಹಾಗೆ ನನ್ನ ನಿಲ್ದಾಣ ಕಥೆಯನ್ನು ನಿಲ್ಲಿಸಿರಲಿಲ್ಲವಾದರೂ ಅಪಾರ ಸಮಾಧಾನವಾಯಿತು!!

ಚಿತ್ತಾಲರು ತಮ್ಮ ಕಥನ ತಂತ್ರಕ್ಕೆ ಉಪಯೋಗಿಸುವ ಪದಗಳಿಗೆ ಅವುಗಳು ಹೊರಡಿಸುವ ಅರ್ಥವ್ಯಾಪ್ತಿಗೆ ಎಷ್ಟು ಮಹತ್ವ ಕೊಡುತ್ತಾರೆಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಅವರ ಸಾಹಿತ್ಯವನ್ನು ಅರ್ಥೈಸಬೇಕಾಗುತ್ತದೆ. ಒಟ್ಟಾರೆ ಕಥೆ ಹೇಗೆ ಓದಿಸಿಕೊಳ್ಳುತ್ತದೆ ಅನ್ನುವ ಬಗ್ಗೆ ಚಿತ್ತಾಲರಷ್ಟೇ ಕಾಳಜಿಯಿರುವ ಲೇಖಕನೆಂದರೆ ಮಿಲನ್ ಕುಂದೆರಾ. ಇಬ್ಬರ ಸೃಜನೇತರ ಬರವಣಿಗೆಯಲ್ಲೂ [ಚಿತ್ತಾಲರ ಹೃದಯವುಳ್ಳ ಹಾದಿಯಲ್ಲಿ, ಸಾಹಿತ್ಯ ಸೃಜನಶೀಲತೆ ಮತ್ತು ನಾನು, ಕುಂದೇರಾನ ಆರ್ಟ್‍ ಆಫ್ ದಿ ನಾವೆಲ್‍, ಟೆಸ್ಟಮೆಂಟ್ಸ್ ಬೆಟ್ಟ್ರೇಡ್] ನಾವು ಕಥೆ ಕಟ್ಟುವ ಕಲೆಯ, ಸರಿಯಾದ ಪದಗಳ ಬಳಕೆಯ, ಅನುವಾದದಲ್ಲೂ ಮೂಲ ಅರ್ಥ ನಷ್ಟವಾಗಬಾರದೆಂಬ ಕಳಕಳಿಯನ್ನು ಕಾಣಬಹುದು. ಹೀಗಾಗಿ ಚಿತ್ತಾಲರಂತಹ ಬರಹಗಾರರು ಓದುಗರ ಡಿಲೈಟ್ ಮಾತ್ರವೇ ಆಗಿರದೆ, ಕಥನ ಕಲೆಯಬಗ್ಗೆ ಆಸಕ್ತಿಯಿರುವ ನಮ್ಮಂತಹ ಬರಹಗಾರರ ಡಿಲೈಟೂ ಆಗಿಬಿಡುತ್ತಾರೆ.

ಎಂ.ಎಸ್.ಶ್ರೀರಾಮ್.

No comments:

Post a Comment