ಜಯಂತನ ಇತ್ತೀಚಿನ ಪುಸ್ತಕ ತೂಫಾನ್ ಮೇಲ್ ಮುದ್ರಣಗೊಂಡ ಏಳು ತಿಂಗಳಿಗೇ ಮಾರಾಟವಾಗಿ ಮರುಮುದ್ರಣಕ್ಕೆ ಹೋಗುತ್ತಿದೆಯಂತೆ. ಈ ಭಾಗ್ಯ ಕನ್ನಡದಲ್ಲಿ ಹೆಚ್ಚು ಲೇಖಕರಿಗೆ ಸಲ್ಲುವುದಿಲ್ಲ. ಒಂದು ಕಡೆ ಪತ್ರಿಕೆಗಳನ್ನು ಕೊಂಡು ಓದುವ ಟೈಂಪಾಸ್ ಓದುಗರಿಗೂ, ಸೀರಿಯಸ್ಸಾಗಿ ಸಾಹಿತ್ಯವನ್ನ ಓದುವ ಘನ ಓದುಗರಿಗೂ ಪ್ರಿಯವಾಗುವಂತೆ ಬರೆಯುವುದು ಸುಲಭವಾದ ವಿಷಯವಲ್ಲ. ಆದರೂ ಜಯಂತ ಅದನ್ನು ಸರಳವಾಗಿ ಸಾಧಿಸಿಬಿಡುತ್ತಾನೆ. ಇದಕ್ಕೆ ಎರಡು ಮಗ್ಗುಲುಗಳಿಂದ ಒಂದೇ ಕಾರಣವನ್ನು ಹುಡುಕಬಹುದು - ಯಾವುದೇ ಪೀಳಿಗೆಗೆ ಸಲ್ಲದ ಬರಹಗಾರನಾದ್ದರಿಂದ ಆ ಪೀಳಿಗೆಗಿದ್ದ ಖಯಾಲುಗಳಾದ ನವ್ಯ, ನವ್ಯೋತ್ತರ,ದಲಿತ, ಬಂಡಾಯ, ಬಂಡಾಯೋತ್ತರ ಸಾಹಿತ್ಯದ ಕಟ್ಟುಪಾಡುಗಳ ಹೊರೆ ಜಯಂತನಿಗಿರಲ್ಲಿಲ್ಲ. ಅದೇ ಸಮಯಕ್ಕೆ ವಿಮರ್ಶಕರೂ ಆ ಹೊರೆಯನ್ನು ಅವನ ಮೇಲೆ ಹೊರೆಸಲಿಲ್ಲ. ಹೀಗಾಗಿ, ಕಡಿವಾಣ ಕಡಿದ ಅಶ್ವಮೇಧದ ಕುದುರೆಯಂತೆ ನಮ್ಮ ದಗಡೂ ಪ್ರಪಂಚವನ್ನ ತನ್ನದಾಗಿಸಿಕೊಳ್ಳುತ್ತ ಮುಂದುವರೆದುಬಿಟ್ಟ. ಇದೇ ಅವನ ಸಾಧನೆಯೂ ಮಿತಿಯೂ ಆಯಿತೆನ್ನಿಸುತ್ತದೆ. ಈ ಮಾತುಗಳನ್ನ ನಾನು ಸ್ವಲ್ಪ ತಡವಾಗಿ ತೂಫಾನ್ ಮೇಲ್ ನಲ್ಲಿ ಪ್ರಯಾಣ ಮಾಡಿ ಹೇಳುತ್ತಿದ್ದೇನೆ.
ಜಯಂತನ ಕಥೆಗಳಲ್ಲಿ ಇರುವ ಎಲ್ಲ ಅಂಶಗಳೂ ಈ ಪುಸ್ತಕದಲ್ಲಿದೆ. ಯಾರಿಗೂ ದಕ್ಕದ ಮುಂಬಯಿನ ಒಂದು ವರ್ಗದ ಜನರ ಅತಿ ಸಣ್ಣ ಆತ್ಮೀಯ ವಿವರಗಳು ಇಲ್ಲಿವೆ. ರಿಮಾಂಡ್ ಹೋಮಿನಲ್ಲಿ ಬೆಳೆದ ಅನಾಥೆ ಅಸಾವರಿಗೆ ಲೋಖಂಡೆ ಎಂಬ ಮನೆ ಹೆಸರು ಬಂದ ರೀತಿ, ಪುಟ್ಟ ಹುಡುಗನೊಬ್ಬನ "ಕಡಪಾಮೆ ಮೇರಾ ಬಾಪ್ ಹೈ" ಎನ್ನುವ ಅಮಾಯಕ ಉದ್ಧಟತನ, ಒಂದು ಥರ್ಮಾಸ್ ನ ಚರಿತ್ರೆ ಹುಡುಕಿ ಹೊರಟ ಇಂದ್ರನೀಲನ ತನ್ಮಯತೆ, ಈ ಇಂಥ ವಿವರಗಳನ್ನು ಜಯಂತ ಅದ್ಭುತವಾಗಿ ಅಕ್ಷರಕ್ಕಿಳಿಸುತ್ತಾನೆ. ಖಾಸಗೀ ಕ್ಷಣಗಳ ಖಾಸಗೀ ನಾಚಿಕೆಗಳಿಗೂ,ವೃತ್ತಿಯ ನಿಮಿತ್ತ ವನ್-ಟೂ-ಥ್ರೀ-ಫೋರ್ ಲೆಕ್ಕಕ್ಕೆ ಛಾತಿ ಆಡಿಸಿ ಕುಂಡೆ ಕುಲಿಕಿಸುವ ಮಧುವಂತಿಯ ಇಬ್ಬಂದಿಯನ್ನು ಅರ್ಥಮಾಡಿಕೊಳ್ಳದ ಬಲದೇವ, ನಿಜಜೀವನದಲ್ಲಿ ತೂಫಾನ್ ಮೇಲ್ ನಿಂದ ಧುಮುಕಿ ತನ್ನ ಸಂಸಾರವನ್ನು ಭೇಟಿಯಾಗುತ್ತಿದ್ದ ಗುಪ್ತ ವ್ಯಕ್ತಿಯ ಮಗ ಇಂಥ ಸ್ಟಂಟುಗಳನ್ನೇ ತನ್ನ ಜೀವನದ ಉಪಾದಿಯನ್ನಾಗಿ ಮಾಡಿಕೊಂಡಿರುವ ಚೋದ್ಯ ಈ ಎಲ್ಲವೂ ಜಯಂತನ ಜಗತ್ತಿನ ಛಾಪುಗಳನ್ನು ಬಿಡುತ್ತವೆ. ರೈಲು, ಪ್ಲಾಟ್ ಫಾರ್ಮ್, ಆಸ್ಪತ್ರೆ, ಸಿನೆಮಾ ಹಾಲಿನ ಕತ್ತಲು, ಓಡಿಹೋಗುವ ಪ್ರೇಮಿಗಳು,ಸಮುದ್ರ, ಬಸ್ಸುಗಳು, ಟ್ರಕ್ಕುಗಳು - ಅದರ ಚಾಲಕರು, ಮನೆಯಿಲ್ಲದ ಪುಟ್ಟ ಹುಡುಗರು, ರಿಮಾಂಡ್ ಹೋಮು, ಜನಾರಣ್ಯದಲ್ಲಿ ಒಬ್ಬೊಂಟಿಯಾಗಿ ಜೀವನ ನಡೆಸುವ ನತದೃಷ್ಟರು ಅವನ ಜಗತ್ತಿನಲ್ಲಿ ಭರಪೂರ ಇದ್ದಾರೆ. ಹೀಗಾಗಿಯೇ ನಮಗೆ ತೂಫಾನ್ ನಲ್ಲಿ ಮಿಥುನ್ ನಂಬರ್ ಟೂ ಕಾಣಿಸುತ್ತಾನೆ. ನೋ ಪ್ರೆಸೆಂಟ್ಸ್ ಪ್ಲೀಸ್ ನಲ್ಲಿ ಮಧ್ಯಂತರ ಕಥೆ ಇಣುಕಿ ಹಾಕುತ್ತದೆ. ತೆರೆದಷ್ಟೇ ಬಾಗಿಲುಪುಸ್ತಕದಿಂದ ತೂಫಾನ್ ಮೇಲ್ ವರೆಗೆ ಅವನ ಕೃತಿಗಳನ್ನು ಓದಿದಾಗ ನಮಗೆ ಮಿಕ್ಕ ಬರಹಗಾರರಲ್ಲಿ ಕಾಣುವಂತೆ ಭಿನ್ನ ಘಟ್ಟಗಳು ಕಾಣುವುದಿಲ್ಲ. ಜಯಂತನ ಕಥೆಗಳು, ಕವಿತೆಗಳು, ಪ್ರಬಂಧಗಳು ನಿರಂತರವಾದ ಒಂದು ಯಾನದ ಚಿತ್ರದಂತೆ ಕಾಣುತ್ತದೆ. ಬಹುಶಃ ಅದಕ್ಕೇ ಜಯಂತನ ಕಥೆಗಳು, ಕಥೆಗಳಿಗಿಂತ ಹೆಚ್ಚಾಗಿ ಪದಗಳ ಮೂಲಕ ಚಲಿಸುವ ಚಿತ್ರಗಳಾಗಿವೆ. ಚಲಿಸುವ ಚಿತ್ರಗಳನ್ನು ಒಂದು ಯಾನದಂತೆಯೇ ಪರಗಣಿಸಬೇಕು.. ಅಲ್ಲಿ ಫ್ಲಾಷ್ ಬ್ಯಾಕ್ ಗೆ ಆಸ್ಪದವಿಲ್ಲ, ಫಾಸ್ಟ್ ಫಾರ್ವರ್ಡ್ ಗೆ ಆಸ್ಕಾರವಿಲ್ಲ. ಅದರ ಜೊತೆಗಿರುವುದೇ ಒಂದು ಪ್ರತ್ಯೇಕ ಅನಭವ. ಅಷ್ಟೇ.
ಮುಂಬಯಿಯಲ್ಲಿ ತಮ್ಮ ಜೀವನದ ಬಹಳಷ್ಟು ಕಾಲ ಕಳೆದ ಜಯಂತ ಮತ್ತು ಚಿತ್ತಾಲ, ಇವರಿಬ್ಬರ ಬರವಣಿಗೆಯಲ್ಲಿ ಎಷ್ಟು ವ್ಯತ್ಯಾಸವಿದೆ ಎನ್ನುವುದನ್ನ ಗಮನಿಸಲು ಒಂದೇ ಪುಟ್ಟ ಉದಾಹರಣೆ ಕೊಡಬಹುದು. ಜಯಂತನ ಕಥೆಗಳಲ್ಲಿ ಮುಂಬಯಿಗೇ ಖಾಸ್ ಆಗಿರುವ ಲೋಕಲ್ ರೈಲಿನ ಭಿತ್ತಿ ಎಷ್ಟು ಸಹಜವಾಗಿ ಬರುತ್ತದೆ. ಅದೇ ಚಿತ್ತಾಲರ ಬರವಣಿಗೆಯಲ್ಲಿ ಮೊದಮೊದಲು ಬಂದ ಟ್ರಾಮ್ ಬಿಟ್ಟರೆ, ಲೋಕಲ್ ರೈಲಿನ ಚಿತ್ರ ಬಹುಶಃ ಇಲ್ಲವೇ ಇಲ್ಲವೇನೋ. ಚಿತ್ತಾಲರ ಕಥೆಗಳೆಲ್ಲವೂ ಹನೇಹಳ್ಳಿಯ ಮೂಲದಿಂದ ಬಂದು ಮುಂಬಯಿಯಲ್ಲಿ ವಸತಿ ಮಾಡುತ್ತಾ ಹನೇಹಳ್ಳಿಯ ಮೂಲವನ್ನು ಮತ್ತೆ ಪಡೆಯಲು, ಅನುಭವಿಸಲು, ಆಲೋಚಿಸಲು ಉತ್ಸಾಹ ತೋರಿದರೆ, ಜಯಂತನ ಕಥೆಗಳಲ್ಲಿ ಗೋಕರ್ಣ ಕೇವಲ ಮತ್ತೊಂದು ಊರಾಗಿ ಬರುತ್ತದೆ. ಗೋಕರ್ಣ ಒಂದು ಮೂಲವೂ ಅಲ್ಲ,ಒಂದು ಲಕ್ಷ್ಯವೂ ಅಲ್ಲ.
ಜಯಂತನ ಕಥೆಗಳು ಮುಂಬಯಿಯಂತೆ, ಮುಂಬಯಿನ ಲೋಕಲ್ ರೈಲಿನಂತೆ, ಮುಂಬಯಿನ ಜೀವನದಂತೆ... ಮಿಕ್ಕ ನಗರಗಳಿಗೆ ಹೋಲಿಸಿದರೆ ಮುಂಬಯಿ ಹೆಚ್ಚು ಉದ್ದ ಕಡಿಮೆ ಅಗಲವಿರುವ ನಗರ. ಅದಕ್ಕಾಗಿಯೇ ಅಲ್ಲಿ ಸುಲಭವಾಗಿ ಲೋಕಲ್ ರೈಲುಗಳನ್ನು ಓಡಿಸಲು ಸಾಧ್ಯವಾಯಿತು. ಲೋಕಲ್ ರೈಲು ತನ್ನ ಟೈಂಟೇಬಲಿನ ಪ್ರಕಾರ, ಸಿಗ್ನಲ್ ದೊರತ ಕೂಡಲೇ ಹೊರಟುಬಿಡುತ್ತದೆ. ಅದರ ಪಯಣದಲ್ಲಿ ಒಂದು ಶಿಸ್ತಿದೆ, ಒಂದು ಲಕ್ಷ್ಯವಿದೆ. ತಾನು ಎಲ್ಲಿಂದಬಂದೆ, ಏತಕ್ಕಾಗಿ ಎಂದು ಯೋಚಿಸುವ ಕುತೂಹಲವಾಗಲೀ,ಸಮಯವಾಗಲೀ ರೈಲಿಗೆ ಇಲ್ಲ. ಅದರ ದೃಷ್ಟಿಯೆಲ್ಲಾ ಗಮ್ಯದತ್ತ. ಗಮ್ಯಸೇರಿದ ನಂತರ ಅದು ಬಂದಲ್ಲಿಗೇ ವಾಪಸ್ಸಾದರೂ, ಅದು ಮೂಲ ಹುಡುಕಿ ಹೊರಟ ಪ್ರಯಾಣವಲ್ಲ ಅದು ಹೊಸದೇ ಒಂದು ಗಮ್ಯದತ್ತ ಯಾನ. ಮೊದಲು ಮೂಲವಾಗಿದ್ದ ಜಾಗವೇ ಈಗ ಗಮ್ಯವಾಗಿರಬಹುದು, ಅದು ಮುಖ್ಯವಲ್ಲ. ಜಯಂತ ನಮ್ಮೆಲ್ಲರಿಗಿಂತ ಭಿನ್ನವಾಗಿರುವುದು ತನ್ನ "ಈಗ ಹೀಗೆ, ಮುಂದೆಯೂ ಹೀಗೆಯೇ ಇರುವುದನ್ನ ಸಂಭ್ರಮದಿಂದ ಆನಂದಿಸೋಣ" ಎಂಬ ನಿಲುವಿನಿಂದಾಗಿ. ಸಂತೃಪ್ತ ಜಯಂತನ ಪಾತ್ರಗಳೂ ಸಂತೃಪ್ತರಾಗಿ ಆತ್ಮೀಯರಾಗಿ ಭಿತ್ತಿ ಚಿತ್ರಗಳಾಗಿ ನಿಂತುಬಿಡುತ್ತಾರೆ. ಜಯಂತ ಮೂಲತಃ ಒಬ್ಬ ಛಾಯಾಚಿತ್ರಗ್ರಾಹಕ.ಅದೃಷ್ಟವಶಾತ್ ಅವನ ಕೈಯಲ್ಲಿ ಕ್ಯಾಮರಾಗೆ ಬದಲು ಲೇಖನಿ ಇದ್ದುಬಿಟ್ಟಿದೆ. ಆ ಲೇಖನಿಯಿಂದ ಹೊಮ್ಮುವ ಚಿತ್ರಗಳು ಕ್ಯಾಮರಾದ ಚಿತ್ರಗಳಿಗಿಂತ ಸಫಲವಾಗಿವೆ....
No comments:
Post a Comment