ಕನ್ನಡದಲ್ಲಿ ಅತ್ಯುತ್ತಮ ಸಣ್ಣ ಪತ್ರಿಕೆಗಳು ಬಂದಿವೆ, ಮತ್ತು ನಿಂತುಹೋಗಿವೆ ಸಹ. ಕೆಲವು ಸಣ್ಣ ಪತ್ರಿಕೆಗಳು ಆಯಾಕಾಲದ ಸಾಹಿತ್ಯದ, ಸಾಹಿತ್ಯ ಶೈಲಿಯನ್ನು ಪ್ರತಿನಿಧಿಸಿ ನಿಂತಿವೆ. ಹೀಗಾಗಿಯೇ ಅವು ಆಯಾ ಸಾಹಿತ್ಯಕಾಲದ ಉತ್ತಮ ಲೇಖಕರ ಹೆಸರಿನ ಜೊತೆ ಅವಿನಾಭಾವವಾಗಿ ಅಂಟಿನಿಂತಿದೆ. ಸಾಕ್ಷಿಯ ಜೊತೆ ಅಡಿಗರ ಹೆಸರು, ರುಜುವಾತುವಿನ ಜೊತೆ ಅನಂತಮೂರ್ತಿಯವರ ಹೆಸರು, ಅದಕ್ಕೂ ಹಿಂದೆ ಜೀವನದ ಜೊತೆ ಮಾಸ್ತಿಯವರ ಹೆಸರು ಇದಕ್ಕೆ ಉದಾಹರಣೆಗಳು. ಒಂದು ಥರದಲ್ಲಿ ಈ ಲೇಖಕರು ಆಯಾ ಸಮಯಘಟ್ಟಕ್ಕೆ ಪ್ರಯೋಗಗೊಂಡ ಹೊಸ ಬರವಣಿಗೆಯ ಶೈಲಿಯನ್ನು ಪ್ರತಿನಿಧಿಸುತ್ತದ್ದರಿಂದ ಆ ಶೈಲಿಯ ಸಮರ್ಥ ಅನುಯಾಯಿಗಳನ್ನು ಹುಟ್ಟುಹಾಕುವುದರಲ್ಲಿ ಈ ಪತ್ರಿಕೆಗಳು ಪ್ರೇರಕವಾಗುವಂತಹ ಕೆಲಸ ಮಾಡಿದವು. ಅಂಕಣದಂತಹ ಪತ್ರಿಕೆಯನ್ನು ಹುಟ್ಟುಹಾಕಿದ್ದು ಪಿಪಿ ಗೆಳೆಯರ ಬಳಗದ ತ್ರಿಮೂರ್ತಿಗಳು [ಪಿಪಿ= ಪೋಲಿ ಪಟಾಲಂ].ಅವರಲ್ಲಿ ಎಚ್ ಎಸ್ ಆರ್ ಮತ್ತು ಕೆ ವಿ ನಾರಾಯಣ ವಿಮರ್ಶಕರೆಂದು ಪ್ರಸಿದ್ಧರು.ಚಿ.ಶ್ರೀನಿವಾಸರಾಜು ಸಾಹಿತ್ಯಪ್ರೇಮಿ, ಸಾಹಿತ್ಯ ಪರಿಚಾರಕರು, ಮತ್ತು ಲೇಖಕರು [ಆದರೆ ಹೆಚ್ಚು ಬರೆದವರಲ್ಲ]. ಬಹುಶಃ ಕನ್ನಡದ ಸಣ್ಣಪತ್ರಿಕೆಯಲ್ಲಿ ಒಂದು ಗುಂಪಿನ ಪ್ರಯತ್ನ ಇದೇ ಮೊದಲನೆಯದಿರಬಹುದು.
ಇದಲ್ಲದೇ ತಮ್ಮ ಸ್ವಂತ ಬರವಣಿಗೆ ಹೊಸ ಚಳವಳಿಗೆ ಹೊಸ ಹುಟ್ಟು ಹಾಕದಿದ್ದರೂ ಚಳವಳಿಯ ಅವಿನಾಭಾವ ಪಾತ್ರವಾಗಿ, ವ್ಯಕ್ತಿ ಕೇಂದ್ರಿತವಾಗಿ ಸುಮಾರಷ್ಟು ಕಾಲ ಬಂದ ಪತ್ರಿಕೆಗಳು ಶೂದ್ರ ಮತ್ತು ಸಂಕ್ರಮಣ. ಎರಡೂ ಪತ್ರಿಕೆಗಳು ಒಂದು ರೀತಿಯಲ್ಲಿ ದಲಿತ-ಬಂಡಾಯ ಚಳುವಳಿಯ ಪ್ರತೀಕಗಳಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದವು. ಉಡುಪಿಯಿಂದ ಜಿ ರಾಜಶೇಖರ್ ಮತ್ತು ಇತರರು ಅರಿವುಬರಹ ಎಂಬ ಪತ್ರಿಕೆಯನ್ನು ತರಲು ಪ್ರಯತ್ನಿಸಿದರು - ಈ ಪತ್ರಿಕೆಗೆ ಎಡಪಂಥದ ಧೋರಣೆಯಿದ್ದದ್ದು ಕಾಣಿಸುತ್ತಿತ್ತು.. ಆದರೆ ಅರಿವುಬರಹ ಹೆಚ್ಚುದಿನ ನಿಲ್ಲಲಿಲ್ಲ. ಶೂದ್ರಕ್ಕೆ ಶ್ರೀನಿವಾಸನ ಕಮಿಟ್ಮೆಂಟ್ ಇದ್ದಂತೆ, ಸಂಕ್ರಮಣವನ್ನು ಚಂಪಾ ಅವಿರತವಾಗಿ ನಡೆಸಿಕೊಂಡು ಬಂದರು. ಇಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಯಾವಾಗಲೂ ಸುದ್ದಿಯಲ್ಲಿದ್ದವರೇ. ಬಹಳ ಕಾಲದವರೆಗೆ ಒಂಟಿಯಾಗಿ ಆರ್.ಜಿ.ಹಳ್ಳಿ ನಾಗರಾಜ್ ಅನ್ವೇಷಣೆಯನ್ನ ನಡೆಸಿಕೊಂಡು ಬಂದರು.
ಭಾಷೆ, ನುಡಿಗಟ್ಟು, ಶೈಲಿ, ಮೀಡಿಯಂಗಳಲ್ಲಿ ಪ್ರಯೋಗ ಮಾಡಬಯಸುವ ಲೇಖಕರಿಗೆ ಈಇಂದಿನ [status quo] ಪರಿಸ್ಥಿತಿಯ ಬಗ್ಗೆ ಯಾವಾಗಲೂ ಅಸಮಾಧಾನವಿರುತ್ತದೆ. ಕಾರಣ: ಈಇಂದಿನ ಸ್ಥಿತಿ ಪ್ರಯೋಗಗಳಿಗೆ ಅಭಿವ್ಯಕ್ತಿಸುವ ಮಾರ್ಗಗಳನ್ನು ನೀಡುವುದಿಲ್ಲ. ಹೀಗಾಗಿಯೇ ಹೊಸಪ್ರಯೋಗಗಳನ್ನು ಮಾಡಹೊರಟವರು ಯಾವಾಗಲೂ ಹೊಸ ಪತ್ರಿಕೆಯೊಂದನ್ನು ಹುಟ್ಟು ಹಾಕುವ ಹುನ್ನಾರ ಹಾಕುತ್ತಲೇ ಇರುತ್ತಾರೆ. ವೈಎನ್ಕೆ ಪ್ರಜಾವಾಣಿಯಿಂದ ಹೊರಬಂದನಂತರ ಹಾಸ್ಯಬರಹಕ್ಕೆ ಒಂದು ಒಳ್ಳೆಯ ಪತ್ರಿಕೆಯಿಲ್ಲವೆಂಬಂತಹ ಕೊರತೆಯನ್ನು ತುಂಬಲೆಂಬಂತೆ ಬಾಕಿನಾಗೆ ಕುಮ್ಮಕ್ಕು ಕೊಟ್ಟು ಗಾಂಧಿಬಜಾರ್ ಪತ್ರಿಕೆಯನ್ನು ಪ್ರಾರಂಭಿಸುವಂತೆ ಮಾಡಿದರು. ಬಹುಶಃ ಅವರ ಲೈಟ್ ಪದ್ಯಗಳು ಹೆಚ್ಚಾಗಿ ಬರೆದದ್ದು ಆ ಕಾಲದಲ್ಲಿಯೇ ಅಂತ ಕಾಣುತ್ತದೆ. ಆದರೆ ವೈಎನ್ಕೆ ಕನ್ನಡಪ್ರಭ ಸೇರಿ ಗಾಂಧಿಬಜಾರ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದಂತೆಯೇ ಆ ಪತ್ರಿಕೆ ಬಾಕಿನಾರಿಗೆ ಪ್ರಿಯವಾದ ಸಾಹಿತ್ಯದತ್ತ ಹೊರಳಿಬಿಟ್ಟಿತ್ತು. ಮುಂಬಯಿಯಲ್ಲಿ ಹೇಮಂತ ಕುಲಕರ್ಣಿ ಮತ್ತು ಅರವಿಂದ ನಾಡಕರ್ಣಿ ಸೇರಿ ಕಾವ್ಯಕ್ಕೇ ಸಮರ್ಪಿತವಾದ ಸೃಜನವೇದಿ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದರು. ಅದೂ ಒಂದೆರಡುಮೂರು ವರ್ಷಗಳ ಕಾಲ ನಡೆಯಿತೆನ್ನಿಸುತ್ತದೆ. ರೂಪತಾರಾ ಪತ್ರಿಕೆಯನ್ನು ಬಿಟ್ಟಾಗೆ ವಿಜಯಾ 'ಸಂಕುಲ' ಎಂಬ ಪತ್ರಿಕೆಯನ್ನು ಕಲೆ- ಸಿನೇಮಾ -ನಾಟಕದ ದೃಶ್ಯ ಮಾಧ್ಯಮಕ್ಕೆಂದೇ ಸೀಮಿತವಾಗಿ ಪ್ರಾರಂಭಿಸಿದರು. ಅವರ ಮಗ ಗುರು ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್ ನ ಸವಲತ್ತು ಇದ್ದಾಗ್ಯೂ ಆ ಪತ್ರಿಕೆಯನ್ನು ಹೆಚ್ಚು ದಿನ ಸಂಭಾಳಿಸಲು ಆಕೆಗೆ ಸಾಧ್ಯವಾಗಲಿಲ್ಲ.
ನಾನು ಹೈದರಾಬಾದಿನಲ್ಲಿದ್ದಷ್ಟು ಕಾಲ ಅಲ್ಲಿನ ಕನ್ನಡ ಸಾಹಿತ್ಯ ಮಂದಿರದ ವತಿಯಿಂದ ಬರುತ್ತಿದ್ದ ವಾರ್ತಾಪತ್ರವನ್ನು ಸಾಹಿತ್ಯಿಕ ಪತ್ರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದೆವು. ತಿರುಮಲೇಶ,ಬಿ.ಟಿ.ದೇಸಾಯಿ ಇಬ್ಬರ ಪ್ರೋತ್ಸಾಹ ಹಾಗೂ ಕಿಶನ್ ರಾವ್, ಅರವಿಂದ ಸಂಗಂ, ಪ್ರಹ್ಲಾದ ಜೋಷಿ, ಪವನ್ ಮಾನ್ವಿಯ ಅದ್ಭುತ ಟೀಂನಲ್ಲಿ ನಾನೂ ಒಬ್ಬನಾಗಿದ್ದೆ. ಆಗಿನ ದಿನಗಳಲ್ಲಿ ಅದಕ್ಕೆ ಒಂದು ಸ್ಥರದ ಜಾಗವನ್ನು ಸೃಷ್ಟಿಸಲು ನಮಗೆ ಸಾಧ್ಯವಾದರೂ - ಅದಕ್ಕೊಂದು ಸ್ಪಷ್ಟನಿಲುವಿಲ್ಲದೆಯೇ ಅದು ಸೊರಗಿತು. ಗಂಭೀರ ವಿಮರ್ಶೆ, ವಿಶ್ವಸಾಹಿತ್ಯದ ಉತ್ತಮ ಕಥೆಗಳ ಅನುವಾದದ ಅಂಕಣ "ಕಥಾಪ್ರಪಂಚ" ಈ ಎಲ್ಲವೂ ಇದ್ದಾಗ್ಯೂ, ಹಾಸ್ಯ, ಮಂದಿರದ ಚಟುವಟಿಕೆಗಳ ವರದಿ, ಲೋಕಲ್ ಟ್ಯಾಲೆಂಟಿಗೆ ಕೊಡಬೇಕಾದ ಪ್ರೋತ್ಸಾಹದಂತಹ ಕಾರಣಗಳಿಂದ ಅದು ಸ್ಥಾಯಿಯಾಗಿ ಉಳಿಯಲಿಲ್ಲ.
ಪತ್ರಿಕೆ ಮಾಡಬೇಕೆನ್ನುವ ಹುಕ್ಕಿ ಯಾಕೆ ಬರುತ್ತದೆ ಅನ್ನುವುದು ನನಗಿನ್ನೂ ತಿಳಿದಿಲ್ಲ. ಆದರೆ ಹೈದರಾಬಾದಿನಿಂದ ಬೆಂಗಳೂರಿಗೆ ಬಂದ ಮೇಲೆ ನಾವುಗಳು ಒಂದು ಪತ್ರಿಕೆ ಮಾಡಬೇಕೆಂದು ಬಹಳ ಓಡಾಡಿದ್ದು ನಿಜ. ಬೆಂಗಳೂರಿನ ಪ್ರಯತ್ನದ ಹಿಂದೆ ಇದ್ದ ಮುಖ್ಯ ತಲೆ ಎಸ್.ದಿವಾಕರ್.ಜೊತೆಗೆ ಉತ್ಸಾಹಿಗಳಾಗಿ ಸೇರಿಕೊಂಡವರು ವಿವೇಕ ಮತ್ತು ನಾನು. ವ್ಯಾಸರಾವ್ ಮತ್ತು ನರಹಳ್ಳಿ ನಮ್ಮ ಜೊತೆಗಿದ್ದರೂ ಅವರಲ್ಲಿ ನಮ್ಮಲ್ಲಿದ್ದ ಪ್ಯಾಷನ್ ಇರಲಿಲ್ಲ ಎನ್ನಿಸುತ್ತದೆ. ನಾನು ಆಗ ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಅಭ್ಯರ್ಥಿ, ಹೀಗಾಗಿ ನನಗೆ ಎಲ್ಲರಿಗಿಂತ ಹೆಚ್ಚು ಬಿಡುವಿನ ಸಮಯ. ವಿವೇಕ ಆಗಷ್ಟೇ ಕಲಕತ್ತಾದಿಂದ ವರ್ಗವಾಗಿ ಬೆಂಗಳೂರಿಗೆ ಬಂದಿದ್ದ. ದಿವಾಕರ್ ತಮ್ಮ"ಇತಿಹಾಸ"ದ ಕರಾಳ ದಿನಗಳಿಂದ ಆಗಷ್ಟೇ ಮುಕ್ತರಾಗುತ್ತಾ ಹೊಸ ಹುರುಪಿನಲ್ಲಿದ್ದರು. ಎಲ್ಲರೂ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ[ಆಗಿದ್ದ] ಉದ್ಯಾವನ್ ಹೋಟಲಿನಲ್ಲಿ ಕಾಫಿ ಹೀರುತ್ತಾ ಪತ್ರಿಕೆಯ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದೆವು. ಕನ್ನಡದಲ್ಲಿ ಒಂದು ಅದ್ಭುತ ಸಾಹಿತ್ಯಿಕ ಪತ್ರಿಕೆಯನ್ನು ತರಬೇಕೆಂಬುದೇ ಏಕಮಾತ್ರ ಉದ್ದೇಶ. ದಲಿತ ಬಂಡಾಯ ಚಳುವಳಿಗಳು ತಮ್ಮ ತೀವ್ರತೆಯನ್ನು ಕಳೆದುಕೊಳ್ಳುತ್ತಿದ್ದ ಆ ಸಮಯಕ್ಕೆ ಮಾಂತ್ರಿಕ ವಾಸ್ತವವಾದದ ಮೂಲ ಭೂತ ಹೂರಣವನ್ನು ಪತ್ರಿಕೆಗೆ ಕೊಡಬೇಕೆಂಬುದು ನಮ್ಮ ಆಸೆ. ದಿವಾಕರ್ ಅನೇಕ ವಿದೇಶೀ ಲಿಟ್ಲ್ ಮ್ಯಾಗ್ ಗಳನ್ನು ಕೆಕೆಎಸ್.ಮೂರ್ತಿಯವರ ಸೆಲೆಕ್ಟ್ ಬುಕ್ ಶಾಪಿನಿಂದ ಸಂಗ್ರಹಿಸಿ ನಮಗೆ ತೋರಿಸುತ್ತಿದ್ದರು. ನನಗೆ ಸಲ್ಮಾಗುಂಡಿ ಎಂಬ ಒಂದು ಪತ್ರಿಕೆಯಲ್ಲಿ ಮಿಲೆನ್ ಕುಂದೆರಾನಿಗೇ ಸೀಮಿತವಾದ ಒಂದು ಸಂಚಿಕೆ ತುಂಬಾ ಹಿಡಿಸಿತ್ತು. ಪತ್ರಿಕೆಯ ಮೂಲಕ ಅನೇಕ ರೀತಿಯಾದಂತಹ ಪ್ರಯೋಗಗಳ ಯಾದಿಯೇ ನಮ್ಮ ಬಳಿಯಿತ್ತು. ಕೆಲವು ಐಡಿಯಾಗಳು ಇಂತಿದ್ದವು:
- ಒಂದೇ ಥೀಮಿನ ಕಥೆ-ಕಾವ್ಯವನ್ನು ಸಂಗ್ರಹಿಸಿ ಸಂಚಿಕೆಗಳನ್ನು ಮಾಡುವುದು - ಉದಾಹರಣೆಗೆ ಕಳ್ಳತನದ ಕಥೆಗಳಲ್ಲಿ ಚಿತ್ತಾಲರ ಕಳ್ಳ ಗಿರಿಯಣ್ಣ, ಗಾರ್ಸಿಯಾ ಮಾರ್ಕೇಸನ ಕಥೆ [ಹೆಸರು ನೆನಪಿಲ್ಲ], ಇದೇ ರೀತಿಯ ಅಸ್ಸಾಮಿ ಕಥೆಯನ್ನಾಧರಿಸಿ ಕಲ್ಪನಾ ಲಾಜ್ಮಿ ನಿರ್ದೇಶಿಸಿದ್ದ ಲೋಹಿತ್ ಕಿನಾರೆ ಸೀರಿಯಲ್ಲಿನ ಕಥೆ ಇಟಾಲಿಯನ್ ಚಲನಚಿತ್ರ ಬೈಸಿಕಲ್ ಥೀಫ್ ಎಲ್ಲವನ್ನೂ ಒಂದೆಡೆಗೆ ಸೇರಿಸಿ ಚರ್ಚಿಸುವುದು, ರಾಮಚಂದ್ರ ದೇವರ ಮೂಗೇಲ, ಗೊಗೋಲ್ ರ ಮೂಗಿನ ಕಥೆ.. ಎಲ್ಲವನ್ನೂ ಒಂದೆಡೆ ಚರ್ಚಿಸುವುದು.
- ಒಂದಿಡೀ ಸಂಚಿಕೆ ಒಬ್ಬ ಲೇಖಕನ ಸಂದರ್ಶನಕ್ಕೆ ಮೀಸಲಿಡುವುದು - ಉದಾಹರಣೆಗೆ ಯಶವಂತ ಚಿತ್ತಾಲರೊಂದಿಗೆ ನಾಲ್ಕಾರು ಮಂದಿ ಎರಡು ಮೂರು ದಿನಗಳ ಕಾಲ ಮಾತನಾಡಿ ಅದನ್ನು ಅವರ ಕೃತಿಗಳ ಒಂದು ವಿಹಂಗಮ ನೋಟದೊಂದಿಗೆ ಪ್ರಕಟಿಸುವುದು [ಈ ಐಡಿಯಾವನ್ನ ನರಹಳ್ಳಿ ಆಯ್ದು ಆಗ ತಾವು ಮಾಡುತ್ತಿದ್ದ ಥೀಸಿಸ್ ಗಾಗಿ ಕೆ.ಎಸ್.ನರಸಿಂಹಸ್ವಾಮಿಯವರನ್ನು ಸಂದರ್ಶಿಸಿ "ನುಡಿಮಲ್ಲಿಗೆ" ಎಂಬ ಪುಸ್ತಕವನ್ನು ಪ್ರಕಟಸಿದರು, ಆದರೆ ಆ ಪುಸ್ತಕವನ್ನು ಓದಿದಾಗ ಅವರು ಕೆ.ಎಸ್.ನ ಅವರ ಸಾಹಿತ್ಯದ ಸಂದರ್ಭದಲ್ಲಿ ಅವರ ಮನಸ್ಸು ಗ್ರಹಿಸುವ ಕೆಲಸ ಮಾಡದೆಯೇ ಸುಮ್ಮನೆ ಅನ್ನ ಸಾರು, ಇಷ್ಟವಾದ ಸಿನೆಮಾ, ಅಡುಗೆ, ಹೆಂಡತಿಯ ಜೊತೆಗಿನ ಅನ್ಯೋನ್ಯತೆ ಹೀಗೆಲ್ಲಾ ಉದ್ದಕ್ಕೆ ಅವಿನಾಭಾವ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿ ಒಂದು ಸುವರ್ಣಾವಕಾಶವನ್ನ ಪೋಲು ಮಾಡಿದರು]
- ಲೇಖಕರ ಕೈಯಲ್ಲಿ ತಮ್ಮ ಖ್ಯಾತಿಗೆ ವಿರುದ್ಧವಾದ ಬರವಣಿಗೆಯನ್ನು ಬರೆಸುವುದು - ಜಯಂತ ಕಾಯ್ಕಿಣಿ ನಮಗಾಗಿಯೇ ಧೂಳು ಎಂಬ ಶಬ್ದ ಚಿತ್ರ [ಇದು ಕಾವ್ಯರೂಪದಲ್ಲಿಲ್ಲದ ಆದರೆ ನಿಬಂಧವಲ್ಲದ ಕಾವ್ಯಾತ್ಮಕವಾಗಿ ಸಾಲಾಗಿ ಓದುಗನ ಮುಂದೆ ಚಿತ್ರಗಳನ್ನು ಶಬ್ದಗಳ ಮೂಲಕ ಹರಡುವ ಬರವಣಿಗೆ] ಬರೆದ - ನಂತರ, ಇದೇ ರೀತಿಯಾದ ಹೆದ್ದಾರಿಯ ಹೆರಳುಗಳು ಎಂಬ ಮತ್ತೊಂದು ಬರಹವನ್ನೂ ಅವನು ಬರೆದಿದ್ದ. ಯಶವಂತ ಚಿತ್ತಾಲರ ಕೈಯಲ್ಲಿ ಕವಿತೆಗಳನ್ನು ಬರೆಸುವ ಕೆಲಸವನ್ನೂ ನಾವೇ ಮೊದಲಿಗೆ ಮಾಡಿದ್ದು. ಆಗ ಅವರು ಬರೆದ ಬ್ಯಾಂಡ್ ಸ್ಟಾಂಡಿನ ಬಂಡೆಗಳು ಎಂಬ ಬರಹಕ್ಕೆ ಅವರು ಕವಿತೆಯ ಪಟ್ಟ ಕೊಡಲು ಇಷ್ಟಪಡದೆ ಅದನ್ನು "ಲಬಸಾ" [ಲಯ ಬದ್ಧ ಸಾಲುಗಳು] ಎಂದು ನಾಮಕರಣ ಮಾಡಿದ್ದರು.
ಎರಡು ಸಂಚಿಕೆಗಳಿಗಾಗುವಷ್ಟು ಬರಹಗಳು ನಮ್ಮಲ್ಲಿದ್ದರೂ ಕಡೆಗೆ ಪತ್ರಿಕೆಯನ್ನು ಹೊರತರಲಾಗಲಿಲ್ಲ. ದಿವಾಕರ್ ಗೆ ಅಮೆರಿಕನ್ ಕಾನ್ಸಲೇಟ್ ನಲ್ಲಿ ಕೆಲಸ ಸಿಕ್ಕಿ ಅವರು ಚೆನ್ನೈಗೆ ರವಾನೆಯಾದರು. ವಿವೇಕ ಅಮೆರಿಕೆಗೆ ಹೊರಟುಹೋದ. ಮಾಂತ್ರಿಕ ವಾಸ್ತವವಾದದ ಆಧಾರದ ಮೇಲೆ ನಡೆಯಬೇಕಿದ್ದ ಈ ಪತ್ರಿಕೆಗೆ ಮಾಯಾದರ್ಪಣ ಅಂತ ಹೆಸರು ಕೊಟ್ಟಿದ್ದೆವು. ಕಡೆಗೆ ಆ ಪತ್ರಿಕೆಯ ನೆನಪಿಗಾಗಿಯೆಂದೇ ನಾನು ನನ್ನ ಮೊದಲ ಕಥಾಸಂಕಲನಕ್ಕೆ ಮಾಯಾದರ್ಪಣ ಹೆಸರನ್ನು ಕೊಟ್ಟೆ. ಆ ಪುಸ್ತಕ ಅರ್ಪಿತವಾಗಿದ್ದು ದಿವಾಕರ್ ಮತ್ತು ವಿವೇಕರಿಗೆ. ನನ್ನ ಎರಡನೆಯ ಪುಸ್ತಕ 'ಅವರವರ ಸತ್ಯ' ಅರ್ಪಿತವಾಗಿದ್ದು 'ಪರಿಚಯ'ದ ಗ್ಯಾಂಗ್ ಆದ ಕಿಶನ್ ರಾವ್, ಪ್ರಹ್ಲಾದ್ ಜೋಷಿ, ಅರವಿಂದ್ ಸಂಗಂ, ಪವನ್ ಮಾನ್ವಿ ಗಳಿಗೆ!!
ನಾವೆಲ್ಲಾ ಕುಣಿದು ಕುಪ್ಪಳಿಸುತ್ತಿರಲು ವಿವೇಕ ಮಾತ್ರ ಹೆಚ್ಚಿನಂಶ ಮೌನವಾಗಿರುತ್ತಿದ್ದ. ಅವನಲ್ಲಿ ಒಂದು ವಿಚಿತ್ರ ರೀತಿಯ ಎನರ್ಜಿಯಿದೆ. ಅವನು ದುಡಿಯುತ್ತಿರುವಂತೆ ಕಾಣುವುದಿಲ್ಲ. ಯಾವಾಗಲೂ ಕೂಲಾಗಿ ಆರಾಮವಾಗಿರುವಂತಿರುತ್ತಾನೆ. ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುವವರಿಗಿರುವ ಯಾವ ಹೊರ ಲಕ್ಷಣಗಳೂ ಅವನಲ್ಲಿ ಕಾಣುವುದಿಲ್ಲ. ಅರ್ಜುನ ರಣತುಂಗ, ಇಂಜಮಾಮ್ ಥರ ಅವನ ಬ್ಯಾಟಿಂಗ್ ನಲ್ಲಿ ಎಫರ್ಟ್ಲೆಸ್ ಸ್ಟ್ರೋಕ್ ಪ್ಲೇ ಕಾಣಿಸುತ್ತದೆ. ನಮಗೆ ಎಮೋಶನಲ್ ಆಗಿ ತಟ್ಟಿದ ಪತ್ರಿಕೆ ನಡೆಸುವ ಇರಾದೆಯನ್ನು ಬಹಶಃ ಸೀರಿಯಸ್ಸಾಗಿ ಮನಸ್ಸಿನಿಂದ ಆಲೋಚಿಸಿದವನು ಅವನೊಬ್ಬನೇ ಅನ್ನಿಸುತ್ತದೆ. ಆಗಿನಿಂದಲೂ ಅವನು ಪತ್ರಿಕೆಯ ಆಲೋಚನೆಯನ್ನು ಎಂದೂ ಬಿಟ್ಟುಕೊಡಲಿಲ್ಲ. ಮಧ್ಯಕಾಲದಲ್ಲಿ ಅನಂತ ಮೂರ್ತಿಯವರು ರುಜುವಾತನ್ನ ಅವನಿಗೆ ಬಿಟ್ಟುಕೊಡುವುದಾಗಿ ಹೇಳಿದ್ದಂತೆ ನೆನಪು. ಒಂದಿಷ್ಟು ದಿನಗಳ ಕಾಲ ಯೋಚಿಸಿ ವಿವೇಕ ಆ ಪ್ರಸ್ತಾವನೆಯನ್ನ ಸ್ವೀಕರಿಸಲಿಲ್ಲ. ಜಯಂತ ಭಾವನಾ ಪತ್ರಿಕೆಯ ಸಂಪಾದಕನಾದಾಗ ಒಂದು ರೀತಿಯಲ್ಲಿ ನಮಗೆಲ್ಲಾ ಆಸಕ್ತಿ ಮತ್ತು ಒಂದು ಸಫಲತೆ ಭಾವ ಬಂದಿದ್ದಿರಬೇಕು. ಯಾಕೆಂದರೆ ಪಾಪ್ಯುಲರ್ ಫಾರ್ಮಾಟಿನಲ್ಲಿ ಉತ್ತಮವಾದ ಸಾಹಿತ್ಯವನ್ನು ಕೊಡುವ ಪ್ರಯತ್ನವನ್ನು ಜಯಂತ ಮಾಡಿದ್ದ. ಅದಕ್ಕೂ ಮೊದಲು ಅವನು ಕಾಲನಿರ್ಣಯದ ದೀಪಾವಳಿ ಸಂಚಿಕೆ ಮಾಡಿ ಅನುಭವವಿದ್ದವನು. ಆದರೆ ದುರಾದೃಷ್ಟವಶಾತ್ ಆ ಪತ್ರಿಕೆಯೂ ನಿಂತುಹೋಯಿತು. ಆ ಸಂಧರ್ಭದಲ್ಲಿ ವಿವೇಕ ಜಯಂತನೊಡನೆ ಸೇರಿ ಮತ್ತೊಂದು ಪತ್ರಿಕೆಯನ್ನು ಹೊರಡಿಸಲು ತಯಾರಿದ್ದ. ತನ್ನ ನೌಕರಿಯನ್ನೂ ಬಿಟ್ಟುಕೊಡುವ ಧೈರ್ಯತೋರಿಸಿದರೂ ಜಯಂತನ ಮನಸ್ಸಿನಲ್ಲಿ ದ್ವಂದ್ವವಿತ್ತು. ಸಮಯ ಎಂದು ನಾಮಕರಣ ಮಾಡಿದ್ದ ಆ ಪತ್ರಿಕೆ ಐಡಿಯಾದ ಸ್ಥರದಲ್ಲಿಯೇ ನಿಂತು ಹೋಯಿತು. ಕಡೆಗೂ ವಿವೇಕನ ಮನಸ್ಸಿಗೆ - ತನ್ನ ಹುಕ್ಕಿಯನ್ನ ತನ್ನ ಪ್ಯಾಷನ್ನಿನ ಹೊರೆಯನ್ನ ಒಂಟಿಯಾಗಿಯೇ ಹೊರುವುದು ಸಮರ್ಪಕ ಅಂತ ಅನ್ನಿಸಿರಬೇಕು. ಅದರ ಫಲವೇ ದೇಶಕಾಲ.
ದೇಶಕಾಲದ ನಾಲ್ಕನೆಯ ಸಂಚಿಕೆಯೂ ಸಮಯಕ್ಕೆ ಬಂದು ಸೇರಿದೆ. ಅದರ ಜೊತೆಗೆ ನಾನು ಬಹಳ ದಿನಗಳಿಂದ ನೋಡಿಯೇ ಇರದಿದ್ದ ಮನಿಯಾರ್ಡರಿನ ಫಾರಂ, ಸ್ವ-ವಿಳಾಸವಿರುವ ಅಂಚೆ ಚೀಟಿ ಹಚ್ಚಿದ ಲಕೋಟೆ ಮತ್ತು ನನ್ನ ಹೆಸರಿಗೆ [ಖಾಸಗಿಯಾಗಿ ಬರೆಯದ] ಒಂದು ಪತ್ರ. ನಮ್ಮೆಲ್ಲರ ಸಮೂಹಿಕ ಕನಸನ್ನು ಸಾಕಾರಗೊಳಿಸಿದ ವಿವೇಕನಿಗೆ ಎಲ್ಲ ಅಭಿನಂದನೆಗಳು ಸಲ್ಲಬೇಕು.
ದೇಶಕಾಲದ ಪ್ರತಿ ಸಂಚಿಕೆಯೂ ಹಿಂದಿನದಕ್ಕಿಂತ ಉತ್ತಮವಾಗಿ ರೂಪುಗೊಳ್ಳುತ್ತಿದೆ. ವಿವೇಕ-ಅಕ್ಷರರ ಜೋಡಿ ಸಮಯಪರೀಕ್ಷೆಯ ಅಂಕಣದಲ್ಲಿ ಆಸಕ್ತಿಕರ ಪ್ರಯೋಗಗಳನ್ನು ಮಾಡಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಒಂದು ಅನ್ಯಭಾಷಾ ಲೇಖಕರ ಪರಿಚಯ ಅವರ ಬರವಣಿಗೆ, ಅದರ ಬಗ್ಗೆ ವಿಮರ್ಶೆ ಮತ್ತು ಟಿಪ್ಪಣಿಗಳ ಜೊತೆ ಉತ್ಕೃಷ್ಟ ಬರವಣಿಗೆಯನ್ನು ಕೊಡುತ್ತಿದ್ದಾರೆ. ಅನ್ಯಭಾಷಾ ಲೇಖಕರನ್ನುದೇಶಕಾಲಕ್ಕಾಗಿಯೇ ನಿರ್ದಿಶ್ಟವಾಗಿ ಬರೆಯಲು ಪ್ರೋತ್ಸಾಹಿಸುವುದು ಸರಳವಾದ ಮಾತೇನೂ ಅಲ್ಲ.ರಾಮ್ ಗುಹಾ, ಮಹಾಶ್ವೇತಾ ದೇವಿಯಂತಹ ಬರಹಗಾರರನ್ನು ಕನ್ನಡದ ಪತ್ರಿಕೆಗಾಗಿಯೇ ಖಾಸ್ ಬರೆಯಲು ಕೇಳಿಕೊಳ್ಳುವುದು ಒಂದು ಹೊಸದೇ ಪ್ರಯೋಗ. ಅನ್ಯಭಾಷಾ ಸಾಹಿತ್ಯವನ್ನು ಕನ್ನಡಕ್ಕೆ ತರುವಾಗ ನಾವುಗಳು ಹೆಚ್ಚಿನಂಶ ಪಶ್ಚಿಮದತ್ತ ತಿರುಗಿನೋಡಿ ನಮಗಿಷ್ಟಬಂದ ವಿದೇಶೀ ಲೇಖಕರನ್ನು ಕನ್ನಡಕ್ಕೆ ಕರೆತರುವುದು ಸಾಮಾನ್ಯವಾದ ಮಾತು. ಆದರೆ ದೇಶಕಾಲದ ಈ ತರ್ಜುಮೆಗಳಲ್ಲಿ ಒಂದು ತುರ್ತು, ಗುಣಮಟ್ಟವನ್ನು ಸಾಧಿಸುವ ಒಂದು ತಪನ ಕಾಣುತ್ತದೆ. ಭಾಷಾಂತರದಲ್ಲಿ ಭಾವಾಂತರವಾಗಬಾರದು ಎಂದೇ ಏನೋ ಮೂಲ ಲೇಖಕರ ಸಹಕಾರದೊಂದಿಗೇ ಈ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಅರ್ಥಾಥ್ ಸಂಚಿಕೆ ತಯಾರು ಮಾಡುವುದೆಂದರೆ ಕೇವಲ ಇಂಥೊಬ್ಬ ಅನುವಾದಕರನ್ನು ಕಂಡುಹುಡುಕಿ ಅವರಿಗೆ ಕೆಲಸ ಒಪ್ಪಿಸಿದರೆ ಆಗುವಂಥದ್ದಲ್ಲ... ಬದಲಿಗೆ ಈ ಮಿಲನಗಳು ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸಂಪಾದಕರ ತಲೆಗೆ ಬಂದು ಬಿಡುತ್ತದೆ. ಇಲ್ಲಿಯತನಕ ಬಂದಿರುವ ನಾಲ್ಕು ಸಂಚಿಕೆಗಳಲ್ಲಿ ಅನ್ಯರಾಜ್ಯಗಳ ಭಾಷೆಗಳಾದ ಮಳಯಾಳಂ ಮತ್ತು ತಮಿಳಿನ ಜೊತೆಗೆ ಕರ್ನಾಟಕದ್ದೇ ಭಾಷೆಗಳಾದ ತುಳು ಮತ್ತು ಕೊಂಕಣಿಯ ಸಾಹಿತ್ಯವೂ ಇದೆ. ಸ್ಪಾನಿಷ್ ನಲ್ಲಿ ಬರೆಯುವ ಇಸಾಬೆಲ್ ಆಯೆಂಡೆ ನಮಗೆ ಸರಳವಾಗಿ ಲಭ್ಯವಾದರೂ ತುಳು ಲೇಖಕ ಆನಂದಕೃಷ್ಣರ ಕೃತಿ ನಮಗೆ ಸರಳವಾಗಿ ಲಭ್ಯವಾಗುವುದಿರಲಿಲ್ಲ. ಆ ನಿಟ್ಟಿನಲ್ಲಿ ಈ ಪ್ರಯತ್ನ ಸ್ವಾಗತಾರ್ಹವಾದದ್ದು.
ಪತ್ರಿಕೆಯ ಸಂಚಿಕೆಗಳಲ್ಲಿ ಅನೇಕ ರೀತಿಯ ಪ್ರಯೋಗಗಳಿವೆ. ಸುಬ್ಬಣ್ಣನವರು ತೀರಿಕೊಂಡಾಗ ಅವರು ಮುಗಿಸದೇ ಉಳಿಸಿದ ಒಂದು ಲೇಖನವನ್ನು ಅವರದೇ ಟಿಪ್ಪಣಿಗಳಜೊತೆಗೆ ಪ್ರಕಟಿಸಲಾಗಿದೆ. ಅದೇ ಸಂಚಿಕೆಯ ಹೊದ್ದಿಕೆಯ ಹಿಂಭಾಗದಲ್ಲಿ ಸುಬ್ಬಣ್ಣನವರ ಒಂದು ಅಪರೂಪದ ಚಿತ್ರ. ನಾಲ್ಕನೆಯ ಸಂಚಿಕೆಯಲ್ಲಿ ಕವಿ ಗಂಗಾಧರ ಚಿತ್ತಲರ ಮತ್ತೊಂದು ಅಪರೂಪದ ಚಿತ್ರ ಇವೆಲ್ಲಾ ಕನ್ನಡ ನುಡಿಯ ಮೇಲೆ ಅಪರಿಮಿತ ಪ್ರೀತಿಯಿದ್ದರೆ ಮಾತ್ರ ಮಾಡಬಲ್ಲಂತಹ ಕೆಲಸಗಳು.
ಯಾವುದೇ ಬರಹಗಾರಿನಿಗೆ ತನ್ನ ಪುಸ್ತಕ ಪ್ರಕಟವಾದಾಗ ಅದರ ಪರಿಚಯ ವಿಮರ್ಶೆ ಎಲ್ಲಾದರೂ ಬಂದರೆ ಎಂಬ ಕುತೂಹಲವಿರುತ್ತದೆ. ಅನೇಕ ಬಾರಿ ಬಹಳಷ್ಟು ಕಾದರೂ ಆ ಬಗ್ಗೆ ಎಲ್ಲೂ ಏನೂ ಪ್ರಕಟವಾಗುವುದಿಲ್ಲ. ಇತ್ತೀಚಿನ ಸಂಚಿಕೆಯಲ್ಲಿ ವಿವೇಕ ತನ್ನ ಸಂಪಾದಕೀಯದಲ್ಲಿ ಈ ಮಾತುಗಳನ್ನು ಹೇಳುತ್ತಾನೆ:
- “ತಮ್ಮ ಪುಸ್ತಕಗಳ ಬಗ್ಗೆ ಸಾಕಷ್ಟು ವಿಮರ್ಶೆ ಬರಲಿಲ್ಲವಾದ್ದರಿಂದ ತಮಗೆ ಸಾಕಷ್ಟು ಫೀಡ್ ಬ್ಯಾಕ್ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಮೊದಲನೇಯದಾಗಿ, ತನ್ನ ಭಾಷೆಯ ಲೇಖಕರನ್ನು ಸರಿಯಾಗಿ ಓದಿದವನಿಗೆ ತನ್ನ ಬರಹದ ಬಗ್ಗೆ ಬೇರೆ ಯಾರೂ ಹೇಳುವ ಮೊದಲೇ ಗೊತ್ತಾಗಿರುತ್ತದೆ. ಎರಡನೇಯದಾಗಿ ಭಾಷೆಯಲ್ಲಿ ನಡೆಯುವ ಎಲ್ಲದಕ್ಕೆ ಸ್ಪಂದಿಸುವ ಸೂಕ್ಷ್ಮಗರಾಹಿಗೆ ಇತರ ಲೇಖಕರ ಬಗೆಗಿನ ವಿಮರ್ಶೆಯೇ ಅಗತ್ಯವಾದ ಫೀಡ್ ಬ್ಯಾಕ್ ಕೊಟ್ಟಿರುತ್ತದೆ..”
- ರುನೊಸುಕೆ ಅಕುತಗವ ರ "ಒಂದು ತೋಪಿನಲ್ಲಿ" ಕಥೆಯ ಅನುವಾದ ಪ್ರಥಮ ಸಂಚಿಕೆಯಲ್ಲಿದೆ. ಇದೇ ಕಥೆಯನ್ನಾಧರಿಸಿ ಕುರಾಸೊವಾ ರಶೋಮೊನ್ ಸಿನೇಮಾ ಮಾಡಿದ್ದರ ಉಲ್ಲೇಖವೂ ಇದೆ. ಸಂಚಿಕೆ ಬಂದ ಸಮಯಕ್ಕೆ ಸುಬ್ಬಣ್ಣನವರು ಇದ್ದರು.ಅಕ್ಷರ ಕೂಡಾ ಸಹಭಾಗಿಯಾಗಿ ಅಲ್ಲಿದ್ದಾರೆ. ನೀನಾಸಂನಿಂದ ಹೊರಬಂದಿರುವ ತಲೆಮಾರುಗಳ ತಂಡೋಪತಂಡ ಜನ ಆ ಸಿನೆಮಾವನ್ನು ನೋಡಿದ್ದಾರೆ. ಹೆಗ್ಗೋಡಿನ ಸಾಮಾನ್ಯ ಜನತೆ ಅದರ ಬಗ್ಗೆ ಮಾತನಾಡುತ್ತದೆಂದು ಕೇಳಿದ್ದೇನೆ. ಆದರೂ ಈ ಕಥೆಯನ್ನು ಪ್ರಕಟಿಸುವಾಗ ಸುಬ್ಬಣ್ಣನವರಿಂದಾಗಲೀ, ಅಕ್ಷರನಿಂದಾಗಲೀ, ಅಥವಾ ಪ್ರಥಮ ಸಂಚಿಕೆಗೆ ಲಭ್ಯವಾಗಿದ್ದ ದಿವಾಕರ್ ಕೈಲಾಗಲೀ ಒಂದು ಟಿಪ್ಪಣಿ ಬರೆಸದೇ ಇದ್ದದ್ದು ನನಗೆ ಕೌತುಕವನ್ನುಂಟುಮಾಡಿದೆ.
- ಪೂರ್ತಿ ಸಂಚಿಕೆ ಒಂದೇ ಕಾಲಮ್ಮಿನಲ್ಲಿ ಅಚ್ಚಾದರೂ, ಯಾವುದಾದರೂ ಒಂದು ಕೃತಿ ಇದ್ದಕ್ಕಿದ್ದಂತೆ ಎರಡು ಕಾಲಮ್ಮುಗಳಿಗೆ ಇಳಿದು ಮಯೂರ ಪತ್ರಿಕೆಯಂತೆ ಕಾಣುತ್ತದೆ. ಮೊದಲ ಸಂಚಿಕೆಯಲ್ಲಿ ಗೋಪಿಯವರ ಕಥೆಗೆ ಈ ಗತಿ [ರಶೀದ, ದಿವಾಕರ್,ರುನೊಸುಕೆ ಬಚಾವು]. ಎರಡನೆಯ ಸಂಚಿಕೆಯಲ್ಲಿ ಸೂರಿಯ ಕಥೆಗೆ ಈ ಗತಿ [ಶೆರ್ ವುಡ್ ಆಂಡರ್ ಸನ್, ವಿವೇಕ ಬಚಾವು]ಮೂರನೆಯ ಸಂಚಿಕೆಯಲ್ಲಿ ಕಥೆಗಳು ಬಚಾವು, ವಿಜ್ಜಾನ ಜಿಜ್ಜಸೆಗೆ ಈ ಗತಿ. ನಾಲ್ಕನೆಯ ಸಂಚಿಕೆಯಲ್ಲಿ ಮತ್ತೆ ಸೂರಿಯ ಪುಸ್ತಕದ ವಿಮರ್ಶೆಗೆ ಈ ಗತಿ. ವಿವೇಕನಾಗಲೀ ಚೆನ್ನಕೇಶವ ಆಗಲೀ ಈ ಎರಡು ಕಾಲಮ್ಮಿನ ಒಗಟನ್ನು ಬಿಡಿಸಿದರೆ ಚೆನ್ನು [ಚೆನ್ನುಕೇಶವ].
- ಕಾದಂಬರಿಯ ಪುಟಗಳನ್ನು ಅಚ್ಚಿಸುವುದರಲ್ಲಿನ ಮಹತ್ತರ ಅರ್ಥ ನನಗೆ ಗೋಚರಿಸುತ್ತಿಲ್ಲ. ಮೊದಲಿಗೇ ಸಾಹಿತ್ಯದ ಜೊತೆಗೆ ಕಲೆ,ಸಂಗೀತ, ಛಾಯಾಗ್ರಹಣ ಹೀಗೆ ವಿಭಿನ್ನತೆಯನ್ನೊಳಗೊಂಡಿರುವ ಸಂಚಿಕೆಗಳಲ್ಲಿ ಶೈಲಿಗಳೂ ಭಿನಾವಾಗಿರುವುದು ಸಹಜವಷ್ಟೆ. ಈ ಮಧ್ಯದಲ್ಲಿ ಚಿತ್ತಾಲರ, ಕಂಬಾರರ, ಲೋಕಾಪುರರ, ಸತ್ಯನ ಕಾದಂಬರಿಯ ಎರಡು ಪುಟಗಳನ್ನೋದಿ ಓದುಗ ಸಾಧಿಸುವುದು ಏನನ್ನು? ಖ್ಯಾತ ಲೇಖಕರ ವಾಚಿಕೆಗಳಲ್ಲಿ ಕಾದಂಬರಿಯ ಭಾಗಗಳನ್ನು ಕೊಡುವುದರಲ್ಲಿ ಅರ್ಥವಿದೆ. ಅಲ್ಲಿ ಅದೇ ಲೇಖಕನ ಇತರ ಕೃತಿಗಳೂ ಇರುವುದರಿಂದ ಅದಕ್ಕೊಂದು ಸಂದರ್ಭವಿರುತ್ತದೆ. ಈ ಭಾಗ ಯಾಕಿದೆ ಎನ್ನುವುದೂ ನನ್ನ ಕೌತುಕಕ್ಕೆ ಸೇರಿದ್ದು.
- ಸಮಯಪರೀಕ್ಷೆಯಲ್ಲಿ ಬರುವ ಬರವಣಿಗೆಯಲ್ಲಿ ಶೈಲಿಯ ಭಿನ್ನತೆ ಮತ್ತು ವಿಷಯದ ಭಿನ್ನತೆಯಿಂದಾಗಿ ಅದಕ್ಕಿರುವ ಕೇಂದ್ರ ಅನೇಕ ಬಾರಿ ಅದೃಶ್ಯವಾಗಿಬಿಡುತ್ತದೆ. ಹಿಂಸೆಯ ಮೀಮಾಂಸೆ ಓದಿದಾಗ ಅನ್ನಿಸಿದ್ದು: ಜಬರ್ದಸ್ತಿಯಿಂದ ಅಲ್ಲಿ ಮೊಗಳ್ಳಿ ಗಣೇಶರೆ ಕಥೆ ತುರುಕ ಬೇಕಿತ್ತೇ? ಮಹಾಶ್ವೇತಾ ದೇವಿಯವರ ಸಂದರ್ಶನ ಮಾಡುವುದೇ ಇದ್ದಿದ್ದರೆ, ಅದನ್ನ ಸಮಯಪರೀಕ್ಷೆಯ ಸೀಮಿತ ಕ್ಯಾನ್ವಾಸಿಗೆ ಅಡಕಗೊಳಿಸದೆಯೇ ಒಂದು ವಿಸ್ತಾರವಾದ ಸಂದರ್ಶನ ಮತ್ತು ಬರವಣಿಗೆಯ ಭಾಗಗಳನ್ನು ನಮಗೆ ಕೊಡಬಹುದಿತ್ತಲ್ಲವೇ? ಆಕೆಯನ್ನು ಇಷ್ಟಕ್ಕೇ ಸೀಮಿತಗೊಳಿಸಿದ್ದರಿಂದ ಅವಕಾಶನಾಶ ವಾಯಿತೇ ಎನ್ನುವುದು ಕೌತುಕದ ವಿಷಯ.ಕನ್ನಡ ಕಾವ್ಯದ ಹೊಸ ಬೆಳೆ [ನಾಲ್ಕನೆಯ ಸಂಚಿಕೆ] ಯಂತಹ ಅದ್ಭುತ ಯೊಜನೆಯನ್ನು ಪ್ರತಿ ಸಂಚಿಕೆಗೂ ಯಾಕೆ ಅನ್ವಯಿಸಬಾರದು? ಕವಿಗಳಿಗೆ ಸಿಕ್ಕ ಭಾಗ್ಯ ಕಥೆಗಾರರಿಗೂ ದೊರಕಬಹುದೇ?
ದೇಶಕಾಲವನ್ನ ಮುಂದೆ ಓದಬಯಸುವವರಿಗೆ ವಿವರಗಳು:
ವಾರ್ಷಿಕ ಚಂದಾ ೩೦೦ ರೂಪಾಯಿಗಳು (ನಾಲ್ಕು ಸಂಚಿಕೆಗಳಿಗೆ, ಅಂಚೆವೆಚ್ಚ ಸೇರಿ)ಡಿಡಿ/ಚೆಕ್ಕುಗಳು "ದೇಶಕಾಲ" ಹೆಸರಿನಲ್ಲಿರಬೇಕು. ಬೆಂಗಳೂರಿನ ಚೆಕ್ಕುಗಳಿಗೆ ಕಮಿಶನ್ ಇಲ್ಲ. ಹೊರ ಊರಿನ ಚೆಕ್ ಕಳಿಸುವವರು ಬ್ಯಾಂಕ್ ಕಮಿಶನ್ ರೂಪಾಯಿ ನಲವತ್ತೈದು ಸೇರಿಸಿ. ಪತ್ರಿಕೆ ರವಾನಿಸಬೇಕಾದ ವಿಳಾಸ ಸ್ಪಷ್ಟವಾಗಿ ಬರೆಯಿರಿ. ಬಿಡಿಪ್ರತಿ ನೂರು ರೂಪಾಯಿಗಳು.
ವಿಳಾಸ
ವಿವೇಕ ಶಾನಭಾಗ
ಡಿ-೧ ವಿಕ್ಟೋರಿಯನ್ ವಿಲ್ಲಾ
ಅಲೆಕ್ಸಾಂಡ್ರಾ ಸ್ಟ್ರೀಟ್
ರಿಚ್ಮಂಡ್ ಟೌನ್
ಬೆಂಗಳೂರು ೫೬೦೦೨೫
ಭಾರತ [ಹೌದು, ವಿಳಾಸ ಕಂಡರೆ ಹಾಗನ್ನಿಸುವುದಿಲ್ಲ, ಆದರೂ ಭಾರತ ದೇಶವೇ!!]
email deshakaala at gmail dot com
PARICHAYA da bagge ondu salu helabahudittu
ReplyDeleteGonwar kishanrao