ದಕ್ಷಿಣ ಏಶಿಯಾದ ಜನ ಸಾಮಾನ್ಯವಾಗಿ ಉತ್ತಮ ಜೀವನ ಚರಿತ್ರೆ/ಆತ್ಮಕಥೆ ಬರೆಯುವುದಿಲ್ಲ ಎನ್ನುವುದು ರಾಮ್ ಗುಹಾ ಅವರ ವಾದ. Why South Asians Don't Write Good Biographies and Why They Should ಎಂಬ ತಮ್ಮ ಪ್ರಬಂಧದಲ್ಲಿ ಈ ಬಗ್ಗೆ ಸಾಕಷ್ಟು ವಿವರವಾಗಿ ಚರ್ಚಿಸಿದ್ದರೆ. ಅವರ ಪ್ರಕಾರ ಕೆಲವು ಉತ್ತಮ ಆತ್ಮಕಥೆಗಳನ್ನು ಬಿಟ್ಟರೆ ಈ ಪ್ರಾಕಾರದಲ್ಲಿ ಹೆಚ್ಚು ಸಾಹಿತ್ಯ ಬಂದೇ ಇಲ್ಲ. ಜೀವನಚರಿತ್ರೆಗಳು ಹೊರಬರಲು ಅಥವಾ ಯಾರೂ ಈ ಸಾಹಿತ್ಯದ ಪ್ರಾಕಾರವನ್ನು ಪ್ರಯತ್ನಿಸದಿರಲು ಸ್ವಲ್ಪಮಟ್ಟಿಗೆ ವ್ಯಕ್ತಿಪೂಜೆಯತ್ತ ಜಾರುವ ನಮ್ಮ ಜನದ ಜಾಯಮಾನ ಒಂದು ಕಾರಣವಿರಬಹುದು ಅನ್ನುತ್ತಾರೆ. ಇದಲ್ಲದೇ "“south asians are careless about keeping letters, records and historical memorabilia in general” ಎಂದು ಗುಹಾ ವಾದಿಸುತ್ತಾರೆ. ಉಮಾರಾವ್ ಬರೆದಿರುವ ವಿ.ಕೆ.ಮೂರ್ತಿಯವರ ಜೀವನಚರಿತ್ರೆಯನ್ನ ನಾನು ಈ ಹಿನ್ನೆಲೆಯಲ್ಲಿ ಚರ್ಚಿಸುವುದು ಸಮಂಜಸವೆನ್ನಿಸುತ್ತದೆ.
ಮೊದಲಿಗೆ ಹೇಳಬೇಕಾದ ಎಲ್ಲ ಒಳ್ಳೆಯ ಮಾತುಗಳನ್ನು ಹೇಳಿ ನಂತರ ಪುಸ್ತಕವನ್ನ ಗಂಭೀರವಾಗಿ ಚರ್ಚಿಸುವುದು ಸಮಂಜಸವಾಗಬಹುದು. ಈ ಪುಸ್ತಕದ ಬಗ್ಗೆ ನಾನು ತುಂಬಾ ಒಳ್ಳೆಯ ಮಾತುಗಳನ್ನು ಕೇಳಿದ್ದೆ. ನೋಡಲೂ ಪುಸ್ತಕ ತುಂಬಾ ಚೆನ್ನಾಗಿದೆ - ಮುಖಪುಟದಿಂದ ಹಿಡಿದು ಒಟ್ಟಾರೆ ವಿನ್ಯಾಸ ವಿ.ಕೆ.ಮೂರ್ತಿಯವರ ಕೆಲಸದ ಸಂದರ್ಭಕ್ಕೆ ಅನುಸಾರವಾಗಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಉಮಾ ಈ ಪುಸ್ತಕ ಬರೆಯಲು ಬೇಕಾದ ಸಂಶೋಧನೆಯನ್ನು ಸರಿಯಾಗಿಯೇ ಕೈಗೊಂಡಿದ್ದಾರೆ. ಮಾತನಾಡಬೇಕಾದವರ ಬಳಿಯೆಲ್ಲಾ ಮಾತನಾಡಿ, ಅದಕ್ಕೆ ಪುರಾವೆಯೆಂಬಂತೆ ಒಬ್ಬೊಬ್ಬರೊಂದಿಗೂ ಫೋಟೋ ತೆಗೆಸಿಕೊಂಡು ಮುದ್ರಿಸಿದ್ದಾರೆ. ಸಂಶೋಧನೆಯಾಧಾರದ ಮೇಲೆ ಜೀವನಚರಿತ್ರೆಯನ್ನು ರಚಿಸುವುದು ಕಥೆ ಕಾದಂಬರಿ ಅಂಕಣಗಳನ್ನು ಬರೆದಂತೆ ತಮ್ಮ ಖಾಸಗೀ ಕಲೆಯನ್ನಾಧರಿಸಿ ಬರೆಯುವ ಪ್ರಕ್ರಿಯೆಯದ್ದಲ್ಲ. ಜೊತೆಗೆ ಇದು ಖರ್ಚಿನ ಬಾಬತ್ತು ಸಹ: ಇಂಥದೊಂದು ಯೋಜನೆಯನ್ನ ಹಾಕಿಕೊಂಡರೆ ಅದಕ್ಕೆ ಮೀಸಲಿಡಬೇಕಾದ ಸಮಯ ಅಪಾರ. ಈ ಪುಸ್ತಕದ ಸಂದರ್ಭದಲ್ಲಂತೂ ಉಮಾ ಮುಂಬೈಗೆ ಹಲವು ಯಾನಗಳನ್ನು ಕೈಗೊಂಡಿರಬೇಕು. ಕೈ ಹಿಡಿದ ಕೆಲಸದ ಬಗ್ಗೆ ಶ್ರದ್ಧೆಯಿದ್ದಾಗ ಮಾತ್ರ ಇಂಥದೊಂದು ಯೋಜನೆಯನ್ನು ಕೈಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಉಮಾ ಅವರು ಎಲ್ಲರ ಅಭಿನಂದನೆಗೆ ಪಾತ್ರರಾಗುತ್ತಾರೆ. ಅವರು ಸಂಗ್ರಹಿಸಿರುವ ವಿವರಗಳು, ಚಿತ್ರಗಳು ಎಲ್ಲವೂ ಉಮಾ ಅವರ ಶ್ರದ್ಧೆ ಮತ್ತು ಶಿಸ್ತಿಗೆ ದ್ಯೋತಕವಾಗಿದೆ.
ಜೀವನಚರಿತ್ರೆಗಳನ್ನು ಎರಡು ಭಿನ್ನ ನೆಲೆಗಳಿಂದ ದಾಖಲಿಸಬಹುದು. ನಮಗಿರುವ ಒಂದು ಫಾರ್ಮಾಟ್ ಅಂದರೆ ಆತ್ಮಚರಿತ್ರೆಯದ್ದು. ಸುಮಾರಷ್ಟು ಜನ ತಮ್ಮ ನೆನಪುಗಳಾಧಾರದ ಮೇಲೆ ಆತ್ಮಚರಿತ್ರೆಗಳನ್ನು ಬರೆಯುವುದುಂಟು. ಆತ್ಮಚರಿತ್ರೆಗಳಿಗೆ ತಮ್ಮದೇ ಆದ ಮಿತಿಗಳಿರುತ್ತವೆ - ಸಾಮಾನ್ಯವಾಗಿ ಆತ್ಮಚರಿತ್ರೆಗಳು ದಾಖಲೆಗಳ ಆಧಾರದ ಮೇಲೆ ಬರೆಯಲ್ಪಡುವುದಿಲ್ಲವಾದ್ದರಿಂದ ಅವುಗಳಲ್ಲಿ ಘಟನೆಗಳನ್ನು ಅತಿರಂಜಕವಾಗಿ ನೋಡುವ ಪ್ರಮೇಯ ಹೆಚ್ಚಾಗಿ ಇರುತ್ತದೆ. ಆತ್ಮಚರಿತ್ರೆಗಳು ಒಂದು ಥರದಲ್ಲಿ ಆತ್ಮರತಿಯ ಫಲಶೃತಿಯಾಗಿ ಬರುವುದರಿಂದ ಘಟನೆಗಳು ತುಸು ಅತಿರೇಕದಿಂದ ವಿವರಿಸಲ್ಪಡುವ ಸಾಧ್ಯತೆಗಳಿರುತ್ತವೆ. ಹಾಗೂ ಎಲ್ಲ ಆತ್ಮಕಥೆಗಳೂ ಬರಹಗಾರನ ಪೂರ್ವಾಗ್ರಹದ ಎಳೆಯಿಂದ ಕೂಡಿರುತ್ತವೆ, ಎಲ್ಲಕ್ಕಿಂತ ಮುಖ್ಯವಾಗಿ ಆತ್ಮಕಥೆಗಳಲ್ಲಿ ಆತ್ಮವಿಮರ್ಶೆಯ ಅಂಶಗಳು ತುಸು ಕಡಿಮೆಯಾಗಿಯೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಇತರರು ಬರೆಯುವ ಜೀವನಚರಿತ್ರೆಗಳಲ್ಲಿ ಹೆಚ್ಚಿನ ವಿವರಗಳೂ, ಇತರ ದೃಷ್ಟಿಕೋನಗಳೂ ಅಡಕವಾಗುವ ಸಾಧ್ಯತೆಯಿದೆ. ಹೀಗಾಗಿ ಉಮಾ ಮೂರ್ತಿಯವರ ಜೀವನಚರಿತ್ರೆಯನ್ನು ಬರೆದಿದ್ದಾರೆಂದು ಕೇಳಿದಾಗ ಅದು ಕೇವಲ ಅವರ ಜೀವನಚರಿತ್ರೆಯಾಗದೇ ಅದಕ್ಕಿಂತ ಮಹತ್ವದ ಕೃತಿಯಾಗುತ್ತದೆಂದು ಆಶಿಸುವುದರಲ್ಲಿ ಅತಿಶಯವಾಗಿರಲಿಲ್ಲವೇನೋ. ಗುರುದತ್, ದೇವ್ ಆನಂದ್, ಗೋವಿಂದ್ ನಿಹಾಲಾನಿ, ಶ್ಯಾಂ ಬೆನೆಗಲ್ ಇಂಥ ಮಹಾರಥಿಗಳ ಜೊತೆ ಕೆಲಸ ಮಾಡಿರುವ ತಮ್ಮದೇ ವಿಶಿಷ್ಟ ಶೈಲಿಯ ಛಾಯಾಗ್ರಹಣಕ್ಕೆ ಹೆಸರುವಾಸಿಯಾದ ಮೂರ್ತಿಯವರ ಜೀವನದೊಂದಿಗೆ ಆ ಘಟ್ಟದ ಹಿಂದಿ ಸಿನೆಮಾದ ಚರಿತ್ರೆಯೂ ಅಡಕವಾಗಿ ನಿಂತಿದೆ.
ಹಾಗೆ ನೋಡಿದರೆ ಈ ಪುಸ್ತಕದ ವಿಷಯದ ಹರಹು ಕನ್ನಡಕ್ಕೂ ಮೀರಿದ್ದು. ಮೂರ್ತಿ ಕೆಲಸ ಮಾಡಿದ್ದು ಹಿಂದಿ ಸಿನೇಮಾಗಳಲ್ಲಿ ಮಾತ್ರ. ಅವರ ಕಲೆಯನ್ನು ಚಿತ್ರರಂಗದಲ್ಲಿ ಕೆಲಸ ಮಾಡುವ ತಂತ್ರಜ್ಞರು ಅಭ್ಯಾಸ ಮಾಡುತ್ತಾರೆ. ಹೀಗಾಗಿ, ಮೂರ್ತಿಯವರ ಬಗೆಗಿನ ಪುಸ್ತಕ ಕನ್ನಡದಾಚೆಯೂ ಪ್ರಕಟಗೊಳ್ಳಬೇಕಾದ ಅವಶ್ಯಕತೆಯಿದೆ -ಈ ನಿಟ್ಟಿನಲ್ಲಿ ಇದು ಮೊದಲಿಗೆ ಇಂಗ್ಲಿಷ್ ಪುಸ್ತಕವಾಗಿದ್ದರೆ ಸಮರ್ಪಕವಾಗುತ್ತಿತ್ತೇನೋ.
ಈ ಪುಸ್ತಕವನ್ನು ಬರೆಯಲು ಬೇಕಾದ ಎಲ್ಲ ಅರ್ಹತೆಗಳೂ ಉಮಾಗೆ ಇವೆ. ಅವರು ದೃಶ್ಯ ಮಾಧ್ಯಮದ ಬಗ್ಗೆ ಅರಿವನ್ನು ಬೆಳೆಸಿಕೊಂಡಿದ್ದಾರೆ, ನಟನೆಯಲ್ಲೂ ಕೈಯಾಡಿಸಿದ್ದಾರೆ, ಹಾಗೂ ಬರವಣಿಗೆಯಲ್ಲಿ ಅವರಿಗೆ ಸುಮಾರಷ್ಟು ಅನುಭವವಿದೆ. ಹೀಗಾಗಿ ಉಮಾ ಅವರಿಂದ ಸಹಜವಾಗಿಯೇ ನಾವುಗಳು ಕನಿಷ್ಟ ಗುಣಮಟ್ಟವನ್ನು ಆಶಿಸುವುದರಲ್ಲಿ ತಪ್ಪೇನಿಲ್ಲ ಅನ್ನಿಸುತ್ತದೆ. ಪುಸ್ತಕ ನಿರ್ಮಾಣದಲ್ಲಿ ಉಮಾ ಅನುಸರಿಸಿರುವ ಶೈಲಿಯ ಬಗ್ಗೆ ಕೆಲ ಮಾತುಗಳನ್ನ ಹೇಳಬಹುದು. ಉಮಾ ಆತ್ಮಚರಿತ್ರೆಗೂ ಜೀವನಚರಿತ್ರೆಗೂ ಮಧ್ಯದ ಒಂದು ವಿಚಿತ್ರ ಶೈಲಿಯನ್ನು ಪುಸ್ತಕದುದ್ದಕ್ಕೂ ಬಳಸುತ್ತಾರೆ. ಆದ್ದರಿಂದ ಪುಸ್ತಕ ಓದುತ್ತಿರುವಾಗ ತುಸು ಗೊಂದಲವಾಗುವುದು ಸಹಜ. ಪುಸ್ತಕದ ಮುಕ್ಕಾಲಂಶ ಬೇರೆಯವರ ಮಾತುಗಳಿಂದ ತುಂಬಿದೆ. ಮೊದ ಮೊದಲು ಪುಸ್ತಕ ಮೂರ್ತಿಯವರ ಆತ್ಮಚರಿತ್ರೆ (ನಿರೂಪಣೆ: ಉಮಾ) ಎಂಬಂತೆ ಪ್ರಾರಂಭವಾಗುತ್ತದೆ. ಇದಕ್ಕೆ ಕಾರಣ ಮೂರ್ತಿಯವರ ಜೀವನದ ಮೊದಲ ಹಂತದ ಬಗ್ಗೆ ಮಾತನಾಡಬಲ್ಲದ್ದು ಮೂರ್ತಿ ಮಾತ್ರ. ಸ್ವಲ್ಪಸಮಯದ ನಂತರ ಮೂರ್ತಿಯವರ ಬಾಲ್ಯಕಾಲದ ಮಿತ್ರ ಶ್ರೀನಿವಾಸನ್ ಅವರು ಪುಸ್ತಕದಲ್ಲಿ ಪ್ರವೇಶ ಮಾಡುತ್ತಾರೆ. ಆದರೂ ಹೆಚ್ಚಿನಂಶ ಈ ಪುಸ್ತಕ ಮೂರ್ತಿಯವರ ಕಣ್ಣಿನಿಂದ ಜಗತ್ತನ್ನು ನೋಡಲು ಪ್ರಯತ್ನಿಸುತ್ತದೆಯೇ ಹೊರತು, ಇತರರ ಕಣ್ಣಿನಿಂದ ಮೂರ್ತಿಯವರನ್ನು ಕ್ರಿಟಿಕಲ್ ಆಗಿ ನೋಡಲು ಪ್ರಯತ್ನಿಸುವುದರತ್ತ ಹೆಚ್ಚು ಗಮನ ಕೊಡುವುದಿಲ್ಲ. ಹೀಗಾಗಿ ಬೇರೊಬ್ಬ ವ್ಯಕ್ತಿ ಮೂರ್ತಿಯವರ ಜೀವನಚರಿತ್ರೆ ಬರೆಯುವುದರಿಂದ ಬರಬಹುದಾಗಿದ್ದ ಸ್ವತಂತ್ರ ದೃಷ್ಟಿ ನಷ್ಟವಾಗಿಬಿಡುತ್ತದೆ. ಉಮಾ ಬೇರೆಯವರನ್ನು ಸಂದರ್ಶಿಸಿದಾಗಲೂ ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಕರಗಿಸಿ ಮಾತಾಡುತ್ತಿರುವವರ ಮಾತುಗಳಿಗೇ ಪ್ರಾಧನ್ಯ ಕೊಡುತ್ತಾರೆ. ಆದರೆ ಇದನ್ನ ಬರೆಯುವಾಗ ಸಂದರ್ಶನದ ಫಾರ್ಮಾಟ್ ಉಪಯೋಗಿಸುವುದಿಲ್ಲವಾದ್ದರಿಂದ ಇದು ಸ್ವಲ್ಪ ಗೊಂದಲದ ಶೈಲಿಯಾಗುತ್ತದೆ. ಪುಸ್ತಕದುದ್ದಕ್ಕೂ ಮೂರ್ತಿಯವರೇ ನಿರೂಪಕರೂ, ಪುಸ್ತಕದ ವಸ್ತುವೂ ಆಗಿ ನಿಂತುಬಿಟ್ಟು ಉಮಾ ನಾಪತ್ತೆಯಾಗಿಬಿಡುತ್ತಾರೆ.
ಹೀಗಾದರೂ, ಗುರುದತ್, ದೇವ್ ಆನಂದ್, ನಿಹಲಾನಿಗಳ ಸಿನೇಮಾಗಳನ್ನು ನೋಡಿ ಬೆಳೆದಿರುವ ಪೀಳಿಗೆಗೆ ಆಗಿನ ಸಿನೆಮಾಗಳನ್ನು ತಾಜಾ ಮಾಡಿಕೊಳ್ಳುವುದಕ್ಕೆ ಇದೊಂದು ಉತ್ತಮ ಮಾಧ್ಯಮವಾಗಿದೆ. ಎಲ್ಲ ದೊಡ್ಡ ಸಮಸ್ಯೆಗಳಿಗೂ ಒಂದು ಪುಟ್ಟ ಪರಿಹಾರವಿದೆ ಅಂತ ಮೂರ್ತಿ ನಿರೂಪಿಸುತ್ತಾರೆ. ಮೂರ್ತಿಯವರ ಜೀವನಚರಿತ್ರೆ ಓದಿದಾಗ ಒಂದು ಅದ್ಭುತ ಸತ್ಯ ನಮ್ಮ ಮುಂದೆ ನಿಲ್ಲುತ್ತದೆ. ಸಿನೇಮಾ ಎಂದ ಕೂಡಲೇ ನಾವು ಅದನ್ನು ನಟರ ಅಥವಾ ನಿರ್ದೇಶಕರ ಮಾಧ್ಯಮ ಎಂದು ಸಹಜವಾಗಿ ನಂಬುತ್ತೇವೆ. ನಿರ್ದೇಶಕರ ಆದೇಶದ ಮೇರೆಗೆ ಮಿಕ್ಕೆಲ್ಲಾ ತಾಂತ್ರಿಕರು ಕೆಲಸ ಮಾಡುತ್ತಾರಾದ್ದರಿಂದ ಅದರ ಒಟ್ಟಾರೆ ಜವಾಬ್ದಾರಿ ನಿರ್ದೇಶಕನ ಮೇಲೆ ಹೇರುವುದು ಸಹಜವೇ. ಆದರೆ ಮೂರ್ತಿಯವರ ಕಾಯಕದ ಜೀವನ ನಿರೂಪಿಸುವುದು ಆ ನಿರ್ದೇಶಕನಡಿಯ ಟೀಮಿನ ಪ್ರತಿ ವ್ಯಕ್ತಿಯೂ ತನ್ನ ವ್ಯಕ್ತಿತ್ವದ ಛಾಪನ್ನು ಆ ಸಿನೇಮಾದ ಮೇಲೆ ಬಿಟ್ಟಿರುತ್ತಾರೆಂಬ ಸತ್ಯವನ್ನು. ಪ್ಯಾಸಾ, ಕಾಗಜ್ ಕೆ ಫೂಲ್ ನಂತಹ ಚಿತ್ರಗಳ ಮೂಲಕ ಮೂರ್ತಿ ಸ್ಪಾಟ್‍ಲೈಟನ್ನು ಗುರುದತ್ ಮೂಲಕ ತಮ್ಮ ಮೇಲೆ ಬರುವಂತೆ ಮಾಡಿದ್ದಾರೆ.
“ಅಲ್ಲಿ ನದಿ ಪಕ್ಕದಲ್ಲೇ ರಸ್ತೆ. ರಸ್ತೆ ೧೦-೧೫ ಅಡಿ ಎತ್ತರದಲ್ಲಿದ್ದಿರಬೇಕು. ರಾತ್ರಿ ಶೂಟಿಂಗ್, ಇದ್ದದ್ದು ಒಂದು ಜನರೇಟರ್, ೪ ಲೈಟುಗಳು, ಹೇಗೆ ಲೈಟಿಂಗ್ ಮಾಡುವುದು, ಗಂಗಾನದಿಗೆ ಲೈಟಿಂಗ್ ಕೊಟ್ಟು ಲೈಟಿಂಗ್ ಮಾಡಲು ಸಾಧ್ಯವೇ? ಅದಕ್ಕೆ ನದಿಗೆ ಆದಷ್ಟು ಬೆಳಕು ಕೊಟ್ಟೆ, ಅದರ ಪ್ರತಿಬಿಂಬ ತೋರಿಸಿದೀನಿ. ಜೊತೆಗೆ ಒಂದು ಬಾಣಲೆಯಲ್ಲಿ ಸಾಂಬ್ರಾಣಿ ತರಿಸಿ ಹೊಗೆ ಹಾಕಿಸಿಬಿಟ್ಟೆ. ಹೊಗೆ ಹಾಗೆ ನೀರಿನಮೇಲೆ ಸರಿದು ಹೋಗುತ್ತದೆ. ಹಾಗೇ ಒಂದು ಶಾಟಲ್ಲಿ ಎಸ್ಟಾಬ್ಲಿಷ್ ಮಾಡಿಬಿಟ್ಟೆ. ನದಿ ಮೇಲೆ ಹೊಗೆ ತೋರಿಸಿಬಿಟ್ಟ ಮೇಲೆ ಮತ್ತೆ ನದಿ ತೋರಿಸಬೇಕಾಗೇ ಇರಲಿಲ್ಲ ಬರೀ ಹೊಗೆ ಬರೋದು ತೋರಿಸಿದರೆ ಸಾಕು..” ಛಾಯಗ್ರಹಣಕ್ಕೆ ಸಂಬಂಧಿಸಿದಂತೆ ಮೂರ್ತಿ-ಗುರುದತ್ ಸಂಬಂಧವೂ ಇಂಥದ್ದೇ. ಗುರುದತ್ ನದಿ.. ಮೂರ್ತಿ ಹೊಗೆ.. ಸ್ಪಾಟ್‍ಲೈಟ್ ಸಹಜವಾಗಿ ಮೂರ್ತಿಯ ಮೇಲೆ!! ಹಾಗೆ ನೋಡಿದರ ಮೂರ್ತಿ ಟೀಮಿನ ಕ್ಯಾಪ್ಟನ್ ಆಗದಿದ್ದರೂ ಒಂದು ಮುಖ್ಯಬಿಂದುವಿನಂತಿರುವ ಎಲ್ಲರ ಗೌರವಕ್ಕೆ ಪಾತ್ರನಾಗುವ ಟೆಂಡೂಲ್ಕರನಂತೆ ಟೀಮಿನ ಅಸಾಮಾನ್ಯ ಸದಸ್ಯರಾಗಿ ಕಂಡುಬರುತ್ತಾರೆ.
ಪುಸ್ತಕದ ಮೊದಲ ನೂರು ಪುಟಗಳು ಮೂರ್ತಿಯ ಬಾಲ್ಯ ಮತ್ತು ಅವರು ಜೀವನದ ದಾರಿ ಕಂಡುಕೊಳ್ಳುವ ದಿನಗಳಿಗೆ ಸಂಬಂಧಿಸಿದ್ದು. ಅಲ್ಲಿನ ಭಾಗದಲ್ಲಿ ಮೂರ್ತಿಯ ಮನೆಯವರು ಬರುತ್ತಾರೆ. ಆ ನಂತರ ಮೂರ್ತಿಯ ನೆರಳು ಬೆಳಕಿನ ಪಯಣ ಆರಂಭವಾದ ಮೇಲೆ ನಮಗೆ ಹೆಚ್ಚು ಕಾಣುವುದು ವ್ಯಕ್ತಿ ಮೂರ್ತಿಗಿಂತ ಹೆಚ್ಚಾಗಿ ಛಾಯಾಗ್ರಾಹಕ ಮೂರ್ತಿ. ಮೂರ್ತಿಗೆ ನೆರಳು ಬೆಳಕು ಮತ್ತು ಲೈಟಿಂಗ್ ಬಗ್ಗೆ ವಿಶೇಷ ಆಸ್ಥೆ ಮತ್ತು ಆಸಕ್ತಿಯಿತ್ತೆಂದು ನಮಗೆ ಪುಸ್ತಕದುದ್ದಕ್ಕೂ ಬರುವ ಅನೇಕ ಘಟನೆಗಳಿಂದ ವೇದ್ಯವಾಗುತ್ತದೆ. ಜೊತೆಗೆ ಎಲ್ಲ ದೊಡ್ಡ ಸವಾಲುಗಳಿಗೂ ಮೂರ್ತಿಯವರ ಬಳಿ ಸಹಜವಾದ ಸರಳವಾದ ಉಪಾಯವಿದೆ. ಮೂರ್ತಿಗೆ ಅದಮ್ಯ ಉತ್ಸಾಹವಿದೆ. ಆತ್ಮಾಭಿಮಾನವಿದೆ. ಆತ ಸರಳ ಆದರೂ ಕೆಲಸದ ಬಗ್ಗೆ ಸುಲಭವಾಗಿ ಕಾಂಪ್ರಮೈಸ್ ಮಾಡಿಕೊಳ್ಳದ ವ್ಯಕ್ತಿ ಎಂಬುದು ವೇದ್ಯವಾಗುತ್ತದೆ. ಅವರ ಜೀವನಕಾಲದಲ್ಲಿ ಅವರು ಮಾಡಿದ ಪ್ರಯೋಗಗಳ ಯಾದಿ ನೋಡಿದರೆ ಅವರ ಕ್ರಿಯೇಟಿವಿಟಿಯ ಅರಿವು ನಮಗಾಗುತ್ತದೆ. ಅದು ಮೂರ್ತಿ ಕಾ ಘೋಡಾ ಆಗಿರಬಹುದು ಅಥವಾ ಪ್ಯಾರಾಬೋಲಿಕ್ ರಿಫ್ಲೆಕ್ಟರ್ ಆಗಿರಬಹುದು.. ಎಲ್ಲದರಲ್ಲೂ ಅವರ ಸಮಯ ಸ್ಫೂರ್ತಿ ನಮಗೆ ಕಾಣಿಸುತ್ತದೆ.
ಇಷ್ಟೆಲ್ಲಾ ಇದ್ದರೂ ಈ ಪುಸ್ತಕ ನನಗೆ ತುಸು ನಿರಾಸೆಯನ್ನೇ ಉಂಟುಮಾಡಿತು. ಉಮಾ ಮಾಹಿತಿ ಶೇಖರಿಸುವುದರಲ್ಲಿ ಯಾವ ಕಾಂಪ್ರಮೈಸ್ ಮಾಡದಿದ್ದರೂ, ನಿರೂಪಣೆಯಲ್ಲಿ ತುಸು ಗೊಂದಲಗೊಂಡವರಂತೆ ಕಾಣುತ್ತಾರೆ. ಒಂದು ಥರದಲ್ಲಿ ಜೀವನಚರಿತ್ರೆಗೆ ಇರಬೇಕಾದಷ್ಟು ಹ್ಯೂಮನ್ ಎಲಿಮೆಂಟ್ ಈ ಪುಸ್ತಕದಲ್ಲಿಲ್ಲ. ಅವರ ಪ್ರೊಫೆಷನಲ್ ಜೀವನದಲ್ಲಿ ಮೂರ್ತಿಯವರ ಮನೆಯವರ ಪಾತ್ರ ಹಿರಿದಾಗಿದ್ದಿರಬೇಕು. ಆದರೆ ಮೊದಲ ನೂರು ಪುಟಗಳ ನಂತರ ನಮಗೆ ಆ ಭಾಗ ಹೆಚ್ಚು ಕಾಣಿಸುವುದಿಲ್ಲ. ಉಮಾ ತಾವು ಸಂಗ್ರಹಿಸಿರುವ ಮಾಹಿತಿಯಷ್ಟನ್ನೂ ಪುಸ್ತಕದಲ್ಲಿ ಅಡಕಗೊಳಿಸುವ ಆತುರ ತೋರಿಸುತ್ತಿರುವಂತಿದೆ. ಹೀಗಾಗಿ ಅನೇಕ ಸಂದರ್ಶನಗಳಲ್ಲಿ ಕೆಲ ಅನವಶ್ಯಕ ಭಾಗಗಳೂ ಸೇರಿಕೊಂಡಿದೆ. ಉದಾಹರಣೆಗೆ ಪ್ಯಾಸಾ, ಕಾಗಜ್ ಕೆ ಫೂಲ್ ಬಗ್ಗೆ ಅವರು ಸಂದರ್ಶಿಸುವ ಅನೇಕರು ಮಾತನಾಡಿದ್ದಾರೆ. ಅವೆಲ್ಲ ಸ್ವಲ್ಪ ಮಟ್ಟಿಗೆ ಪುನರಾವರ್ತನೆಗೊಳ್ಳುತ್ತದೆ. ಮೂರ್ತಿಯವರ ವ್ಯಕ್ತಿತ್ವದ ಬಗ್ಗೆಯೂ ನಮಗೆ ಇಂಥ ಪುನರಾವರ್ತನೆ ಕಾಣಿಸುತ್ತದೆ. ಮೂರ್ತಿ ಶಿಸ್ತನ್ನು ಪಾಲಿಸುತ್ತಿದ್ದರು, ತುಸು ಮುಂಗೋಪಿ, ಎಲ್ಲ ಜಿಜ್ಞಾಸೆಗೂ ಅವರ ಬಳಿ ಸರಳವಾದ ಉಪಾಯಗಳಿರುತ್ತಿದ್ದವು ಎಂಬಂತಹ ಗುಣಲಕ್ಷಣಗಳನ್ನು ಒಮ್ಮೆ ಗುರುತಿಸಿ ನಿರೂಪಿಸಿಬಿಟ್ಟಿದ್ದರೆ ಸಾಕಾಗಿತ್ತು. ಅದೇ ವಿವರ ಬೇರೆಬೇರೆಯವರ ಮಾತುಗಳಲ್ಲಿ ಬಾರಿಬಾರಿ ಬರುವ ಅವಶ್ಯಕತೆಯಿರಲಿಲ್ಲವೇನೋ. [ಮೇಲೆ ವಿವರಿಸಿದ ನದಿಯನ್ನು ಚಿತ್ರೀಕರಿಸುವ ಘಟನೆಯಿಂದ ಈ ರೀತಿಯ ಇಮೇಜನ್ನು ಗ್ರಹಿಸಬಹುದೆಂಬುದನ್ನ ಅದನ್ನ ಎಸ್ಟಾಬ್ಲಿಶ್ ಮಾಡಿದ ನಂತರ ನದಿಯ ಅವಶ್ಯಕತೆ ಇಲ್ಲದ್ದನ್ನ ಉಮಾ ಸರಳವಾಗಿ ನೋಡಬಹುದಿತ್ತು].
ಮೂರ್ತಿಯವರ ಜೀವನಚರಿತ್ರೆಯನ್ನು ಬರೆಯಲು ಮೂರು ಚೌಕಟ್ಟುಗಳನ್ನು ಉಮಾ ಬಳಸಬಹುದಿತ್ತು. ಮೊದಲನೆಯದು ಮೂರ್ತಿಯವರ ಜೀವನವನ್ನು ಕಾಲಘಟ್ಟಗಳ ಮೂಲಕ ಸೆರೆ ಹಿಡಿಯುವುದು. ಒಂದು ರೀತಿಯಲ್ಲಿ ಉಮಾರ ಪ್ರಯಾಸ ಈ ನಿಟ್ಟಿನಲ್ಲಿಯೇ ಇದೆ ಅನ್ನಿಸುತ್ತದೆ. ಆದರ ಆ ಕಾಲಘಟ್ಟಗಳನ್ನು ಇನ್ನಷ್ಟು ತೀಕ್ಷ್ಣವಾಗಿ ಬಿಡಿಸಬೇಕಿತ್ತು. ಹೀಗೆ ಕಾಲಘಟ್ಟದ ಆಧಾರದ ಮೇಲೆ ಜೀವನಚರಿತ್ರೆಯನ್ನು ಆಧರಿಸಿದಾಗ ಕೆಲ ಸಂದರ್ಶನಗಳು ಆ ಕಾಲಘಟ್ಟಕ್ಕೆ ತಕ್ಕಂತೆ ಬರಬಹುದಿತ್ತು.
ಎರಡನೆಯ ಸಾಧ್ಯತೆಯೆಂದರೆ ಅವರ ಜೀವನವನ್ನು ತಮ್ಮ ಕೆಲಸದ ಶೈಲಿಗನುಸಾರವಾಗಿ ಚಿತ್ರಿಸುವುದು.. ಈ ಪದ್ಧತಿಯನ್ನು ಉಮಾ ಅನುಸರಿಸಿದ್ದರೆ ಅವರು ಉಪಯೋಗಿಸುವ ಪರಿಕರಗಳು ಮತ್ತು ಅವು ಬದಲಾದ ರೀತಿ, ಬೆಳಕಿನ ಸಂಯೋಜನೆ ಅದರ ವಿಕಾಸ, ವಿಸ್ತಾರ, ಕಪ್ಪು-ಬಿಳುಪು ಬಣ್ಣದ ಯುಗದಲ್ಲಿನ ವ್ಯತ್ಯಾಸ. ತಾಂತ್ರಿಕ ನೆರವು ಅದರ ವಿಕಾಸ ಮತ್ತು ಚಿತ್ರ ಮಾಡುವ ಇತರ ವಿಭಾಗಗಳೊಂದಿಗಿನ ಅವರ ಸಂಬಂಧ ಮತ್ತು ಅದು ರೂಪುಗೊಂಡರೀತಿ - ಹೀಗೆ ಒಂದು ಚೌಕಟ್ಟನ್ನಿಟ್ಟುಕೊಂಡು ಪುಸ್ತಕವನ್ನು ರಚಿಸಬಹುದಿತ್ತು. ಹೀಗೆ ಮಾಡಿದ್ದರೆ ಅದು ಚಲನಚಿತ್ರಕಲೆಯನ್ನು ಗಂಭೀರವಾಗಿ ಅಭ್ಯಾಸ ಮಾಡುವ ಜನರಿಗೆ ಒಂದು ಆಕರ ಗ್ರಂಥವಾಗಿ ಆ ಪುಸ್ತಕ ಲಭ್ಯವಾಗುವ ಸಾಧ್ಯತೆಯಿತ್ತು. ಆದರೆ ಬಹುಶಃ ಆ ಚೌಕಟ್ಟಿನಲ್ಲಿ ಬರೆಯುವ ಮನಸ್ಥಿತಿ ಸೃಜನಶೀಲ ಲೇಖಕಿಯಾದ ಉಮಾಗೆ ಇಲ್ಲವೆಂದೇ ಅನ್ನಿಸುತ್ತದೆ.
ಮೂರನೆಯ ಹಾಗೂ ಅತ್ಯಂತ ಶಕ್ತಿಶಾಲಿ ರೀತಿಯೆಂದರೆ ಜನರ ನಡುವಿನ ಸಂಬಂಧಗಳ ಮೂಲಕ ಅವರ ಜೀವನವನ್ನು ಸೆರೆ ಹಿಡಿಯುವುದು. ಬಹುಶಃ ಉಮಾ ಅವರ ವ್ಯಕ್ತಿತ್ವಕ್ಕೆ ಇದು ಸಮರ್ಪಕವಾಗಿ ಹೊಂದುತ್ತಿತ್ತೇನೋ.
ಮೂರ್ತಿ ಕೆಲಸ ಮಾಡಿದ ಚಿತ್ರಗಳೂ ಸಂಬಂಧಗಳನ್ನು ಮೂಲವಾಗಿಟ್ಟುಕೊಂಡು ತಯಾರಾದವೇ. ಜೊತೆಗೆ ಅವರು ಸುಮಾರು ಕಾಲ ಗುರುದತ್ ಜೊತೆ ಕಳೆದರು. ಮೇಲಾಗಿ ತಮ್ಮ ಶಿಷ್ಯ ಗೋವಿಂದ್ ನಿಹಲಾನಿಯ ನಿರ್ದೇಶನದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕೂಡಾ ಅವರಗೆ ಒದಗಿ ಬಂದಿತ್ತು. ಸಮರ್ಥ ನಿರ್ದೇಶಕ ಶ್ಯಾಂ ಬೆನೆಗಲ್ ಜೊತೆಯೂ ಕೆಲಸ ಮಾಡಿದ್ದರು. ಹೀಗಾಗಿ ಈ ಎಲ್ಲ ಸಂಬಂಧಗಳ ಪದರಗಳ ಮೂಲಕ ಅವರ ಜೀವನವನ್ನು ನೋಡಿದ್ದರೆ ಈ ಪುಸ್ತಕ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು. ಹಾಗೆ ಆಗಿದ್ದರೆ ಮೂರ್ತಿ ಈ ಪುಸ್ತಕದಲ್ಲಿರುವಂತೆ ಪೂಜ್ಯರಾಗಿ ಎಲ್ಲರ ಗೌರವದ ಪಾತ್ರಧಾರಿಗಳಾಗಿ ದೇವಸಮಾನರಾಗಿ ಕಾಣದೇ ಉತ್ತಮ ಮಾನವರಾಗಿ ಕಾಣುವ ಸಾಧ್ಯತೆಯಿತ್ತು. ಮೂರ್ತಿ ಪುಸ್ತಕದುದ್ದಕ್ಕೂ ಮೂರ್ತಿಸಾಬ್ ಆಗದೆಯೇ ಬರೇ ಮೂರ್ತಿಯಾಗಿಯೇ ಉಳಿದಿದ್ದರೆ ಎಷ್ಟು ಅದ್ಭುತವಾದ ಜೀವನ ಚರಿತ್ರೆ ನಮ್ಮ ಕೈಯಲ್ಲಿದ್ದಿರಬಹುದಾಗಿತ್ತು ಅಂತ ಪುಸ್ತಕ ಮುಗಿಸಿದಾಗ ನನಗೆ ಅನ್ನಿಸಿತು.
ಈ ಬರಹವನ್ನು ಮುಗಿಸುವ ಮುನ್ನ ನಾನು ಉಮಾಗೆ ಕೊಡಬಹುದಾದ ಸಲಹೆಯೆಂದರೆ ಇದು- “ದಯವಿಟ್ಟು ಎಂ.ಎಸ್. ಸುಬ್ಬುಲಕ್ಷ್ಮಿ ಬಗ್ಗೆ ಜಾರ್ಜ್ ಬರೆದಿರುವ ಪುಸ್ತಕವನ್ನು ತಿರುವಿಹಾಕಿ. ಮೂರ್ತಿಯ ಜೀವನದ ವಿಸ್ತಾರಕ್ಕೆ ಅಂಥಹ ಒಂದು ಚೌಕಟ್ಟು ನೀವು ಒದಗಿಸಬಹುದಿತ್ತಲ್ಲವೇ?”
ಪುಸ್ತಕ ಓದಿದ ಮೇಲೆ ಮತ್ತೊಮ್ಮೆ ಪ್ಯಾಸಾ, ಕಾಗಜ್ ಕೆ ಫೂಲ್, ಭಾರತ್ ಏಕ್ ಖೋಜ್, ತಮಸ್ ನೋಡುವ ಮನಸ್ಸಾಗುತ್ತಿದೆ.
ಶ್ರೀರಾಮ್
Thanks once again for Bisilu kolu write up too.
ReplyDelete