Tuesday, March 10, 2009

ಹೈದರಾಬಾದ್: ಒಂದೆರಡು ಪುಸ್ತಕ, ಒಂದು ಸಿನೇಮಾ


ಹೈದರಾಬಾದಿನ ವಿಷಯಕ್ಕೆ ಬಂದಾಗ ನರೇಂದ್ರ ಲೂಥರ್ ಪಳಗಿದ ಕೈಯೆಂದೇ ಹೇಳಬೇಕು. ಆತನಿಗೆ ಈ ನಗರದ ಬಗ್ಗೆ ಚೆನ್ನಾಗಿ ಗೊತ್ತು, ಅವರು ನಗರದ ನಾಡಿಬಡಿತವನ್ನು ಕರಗತಮಾಡಿಕೊಂಡಿದ್ದಾರೆ. ಹೈದರಾಬಾದಿನ ಚರಿತ್ರೆಯ ಬಗ್ಗೆ ಆತ ಸಾಕಷ್ಟು ಬರೆದಿದ್ದಾರೆ. ಹೈದರಾಬಾದ್ ನಗರದ ಸ್ಥಾಪಕ ಕುಲಿಕುತುಬ್ ಷಾ ಬಗ್ಗೆಯೂ ಒಂದು ಪುಸ್ತಕ ಬರೆದಿದ್ದಾರಲ್ಲದೇ, ಈಚೆಗೆ ಹೈದರಾಬಾದಿನ ಜನರಿಂದ ಭಿನ್ನವಾಗಿ ಜೀವಿಸುತ್ತಿದ್ದ ರಾಜಮನೆತನದವರ ಬದುಕಿನ ಸಂಜೆ/ರಾತ್ರೆಗಳನ್ನು ಚಿತ್ರಿಸಿರುವ ಜೈಸಿಯ ನಾಕ್ಟರ್ನಲ್ ಕೋರ್ಟ್ [ರಾತ್ರೆಯ ದರಬಾರು] ಎಂಬ ಪುಸ್ತಕವನ್ನು ಉರ್ದುವಿನಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಲೂಥರ್ ಅವರು ಇತ್ತೀಚಿನ ಮುಸ್ಥಕ ಮಾರುಕಟ್ಟೆಗೆ ಇಳಿದಿದೆ ಎನ್ನುವುದನ್ನು ನಾನು ಓದಿದಾಗ ಅದನ್ನು ನಾನು ಹುಡುಕಿ ಹೊರಟದ್ದು ನಿಜ. ಲೂಥರ್ ಹೈದರಾಬಾದಿನ ಚರಿತ್ರೆಯಬಗ್ಗೆ ಹೊಸತೇನನ್ನು ಹೇಳಿರಬಹುದು ಎನ್ನುವ ಕುತೂಹಲ ನನ್ನಲ್ಲಿದ್ದೇ ಇತ್ತು. ಅಹಮದಾಬಾದಿನ ಕ್ರಾಸವರ್ಡ್ ಪುಸ್ತಕದಂಗಡಿಯನ್ನು ನಾನು ಪುಸ್ತಕಗಳೂ ಇರುವ ಆಟಿಕೆಯಂಗಡಿಯೆಂದೇ ಕರೆಯುತ್ತೇನೆ. ಕಡೆಗೂ ನನ್ನ ಈ ಇಂಥ ಆಸಕ್ತಿಗಳಿಗೆಲ್ಲ ಸಹಕಾರ ನೀಡುವ ಪುಸ್ತಕದಂಗಡಿಯೆಂದರೆ ಶಾನಭಾಗ್ ನಡೆಸುವ ಬೆಂಗಳೂರಿನ ಪ್ರೀಮಿಯರ್ ಬುಕ್ ಷಾಪ್ ಮಾತ್ರ!

ಪುಸ್ತಕ ಕಂಡಾಗ ನನಗೆ ನಿಜಕ್ಕೂ ಇಷ್ಟವಾಯಿತು. ರಕ್ಷಾಕವಚಕ್ಕೆ ಎಂ.ಎಫ್.ಹುಸೇನ್ ಅವರ ಚಾರ್‌ಮಿನಾರಿನ ಪೇಂಟಿಂಗ್ ಇತ್ತು. ತಿರುವಿಹಾಕಿದರೆ ಲೂಥರ್ ತಮ್ಮ ಹಿಂದಿನ ಪುಸ್ತಕಕ್ಕಿಂತ ಹೆಚ್ಚು ಗಂಭೀರವಾಗಿ, ಸಂಶೋಧನೆ ನಡೆಸಿ ಬರೆದಿರುವಂತೆ ಕಾಣಿಸಿತು. ತಕ್ಷಣ ಬ್ಯಾಗಿಗೆ ಪುಸ್ತಕವನ್ನು ತೂರಿಸಿ ಮನೆಗೆ ಬಂದೆ. ಆದರೆ ಪುಸ್ತಕ ತೆರೆದು ಓದಲು ಪ್ರಾರಂಭಿಸಿದಾಗ ನನಗಿದ್ದ ನಿರೇಕ್ಷೆಯ ಮುಂದೆ ನಿರಾಶೆಯೇ ಕಾದಿದೆ ಅನ್ನಿಸಿತು. ನಾನಂದುಕೊಂಡಂತೆ ಇದು ಹೊಸ ಪುಸ್ತಕವಾಗಿರಲಿಲ್ಲ. ಬದಲಿಗೆ ಲೂಥರ್ ಹಿಂದೆ ಬರೆದಿದ್ದ "ಹೈದರಾಬಾದ್: ಮೆಮಾಯಿರ್ಸ್ ಆಫ್ ಎ ಸಿಟಿ" ಅನ್ನುವ ಪುಸ್ತಕದ ಪರಿಷ್ಕೃತ ಆವೃತ್ತಿಯಾಗಿತ್ತು. ಆ ಪುಸ್ತಕವನ್ನು ಓರಿಯಂಟ್ ಲಾಂಗ್‍ಮನ್ ಸಂಸ್ಥೆಯವರು ಪ್ರಕಟಿಸಿದ್ದರು. ಆದರೆ ಈ ಪುಸ್ತಕವನ್ನು ಆಕ್ಸ ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಮಾಡಿದ್ದರಿಂದ, ಹಾಗೂ ಹಿಂದಿನ ಪುಸ್ತಕಕ್ಕಿಂತ ದಪ್ಪಗಿದ್ದಿದ್ದರಿಂದ ಇದು ಬೇರೆಯದೇ ಪುಸ್ತಕವೆಂದು ನಾನು ಭಾವಿಸಿದ್ದೆ. ಹೀಗಾಗಿ ಈ ಪುಸ್ತಕದ ಬಗ್ಗೆ ನಾನು ಬರೆಯುವ ಮೊದಲು, ಹಿಂದಿನ ಪುಸ್ತಕಕ್ಕೆ ನಾನು ಕಾಂಟೆಂಪರರಿ ಸೌಥ್ ಏಷಿಯಾ ಅನ್ನುವ ಪತ್ರಿಕೆಗೆ ಬರೆದಿದ್ದ ವಿಮರ್ಶೆಯನ್ನು ಮೊದಲಿಗೆ ನೀಡುತ್ತೇನೆ. ನನ್ನ ವಿಮರ್ಶೆ ಹೀಗಿತ್ತು.

ಹೈದರಾಬಾದ್: ಮೆಮಾಯರ್ಸ್ ಆಫ್ ಎ ಸಿಟಿ
ನರೇಂದ್ರ ಲೂಥರ್
ಲಂಡನ್: ಸಂಗಂ ಪುಸ್ತಕಗಳು, ಮತ್ತು ಹೈದರಾಬಾದ್: ಓರಿಯಂಟ್ ಲಾಂಗ್‌ಮನ್, ೧೯೯೫
ISBN 0-86311-588-8

ಒಂದು ಊರಿನ ಕಥೆಯನ್ನು ಬರೆಯುವುದು ಹೇಗೆ? ಈ ಪ್ರಶ್ನೆಗೆ ನರೇಂದ್ರ ಲೂಥರ್ ಉತ್ತರವೆಂದರೆ ನಗರದ ದೇಹದೊಳಕ್ಕೆ ಹೊಕ್ಕು, ಆ ನಗರದ ಆತ್ಮಕಥೆಯನ್ನು ಬರೆಯುವುದು. ಆ ನಗರ ರೂಪುಗೊಂಡದ್ದು ಹೇಗೆ, ಅದನ್ನು ಧರೆಗೆ ತಂದಿದ್ದು ಹೇಗೆ ಅದನ್ನು ಬೆಳೆಸಿದ್ದು ಹೇಗೆ ಎನ್ನುವ ಕಥೆಯನ್ನು ಲೂಥರ್ ಹೇಳುತ್ತಾರೆ. ಗಂಭೀರವಾದ ಚರಿತ್ರೆಯ ಪುಸ್ತಕಗಳಿಗೆ ಉಪಯೋಗಿಸುವ ನೇರ ಶೈಲುಯನ್ನು ಲೂಥರ್ ಉಪಯೋಗಿಸಿದ್ದಲ್ಲಿ ಅಂಥ ಪುಸ್ತಕಗಳಿಗೆ ಬಳಸುವ ಮಾನದಂಡಗಳನ್ನು ಈ ಪುಸ್ತಕಕ್ಕೂ ಬಳಸಬಹುದಿತ್ತು. ಹೀಗಾಗಿ ಆತ್ಮಕಥನಾತ್ಮಕ ಶೈಲಿ ಈ ಪುಸ್ತಕಕ್ಕೆ ಅನಿವಾರ್ಯವಾಗಿತ್ತೇನೋ. ಇದರಿಂದ ಲೂಥರ್ ಗಂಭೀರ ವಿಮರ್ಶೆಯಿಂದ ಮುಕ್ತವಾಗುವ ಸರಳ ಮಾರ್ಗವನ್ನಂತೂ ಕಂಡುಕೊಂಡಿದ್ದಾರೆ.


ಚಾರಿತ್ರಿಕ ಘಟನೆಗಳನ್ನು ನಾಟಕೀಯಗೊಳಿಸಿ ನಿರೂಪಣಾವಿಧಾನದಲ್ಲಿ ಬಂಧಮುಕ್ತರಾಗಿರುವ ಲೂಥರ್ ಘಟನಾಕ್ರಮಮನ್ನು ಮಾತ್ರ ಕಾಲಾನುಸಾರ ನಿರೂಪಿಸುತ್ತಾರೆ. ಈ ಪುಸ್ತಕ ಮೂರು ಭಾಗಗಳಲ್ಲಿ ಬರೆಯಲ್ಪಟ್ಟಿದೆ. ಮೊದಲೆನೆಯ ಭಾಗ ಹೈದರಾಬಾದನ್ನು ಕುತುಬ್ ಶಾಹಿಗಳು "ಪ್ರಸವಿಸಿದ" ಕಾಲಕ್ಕೆ ಸಂಬಂಧಿಸಿದ್ದು. ಎರಡನೆಯ ಕಾಲಘಟ್ಟ ಅಸಫ್ ಜಾಹಿಗಳು ಹೈದರಾಬಾದನ್ನು "ಬೆಳೆಸಿದ" ಕಾಲಘಟ್ಟಕ್ಕೆ ಸಂಬಂಧಿಸಿದ್ದು. ಮೂರನೆಯ "ಕಡೆಯ" ಭಾಗ ಇಪ್ಪತ್ತನೆಯ ಶತಮಾನದ ಹೈದರಾಬಾದಿಗೆ ಸಂಬಂಧಿಸಿದ್ದು.

ಲೂಥರ್ ಜಾಗರೂಕರಾಗಿ ಯಾವ ವಿವರವನ್ನೂ ಬಿಡದೆಯೇ ಬರೆಯುತ್ತಾರೆ. ಉದಾಹರಣೆಗ ಹೈದರಾಬಾದಿನ ಕಥನವನ್ನು ಕಂಡಾಗಲೆಲ್ಲಾ ಅಸಫಿಯಾ ಧ್ವಜದಲ್ಲಿ ಕುಲ್ಚಾರೊಟ್ಟಿ ಹೇಗೆ ಬಂತು ಅನ್ನುವ ಒಂದು ಕಥನವಿದೆ. [ಇದು ಬೆಂದಕಾಳೂರಿನ ಕಥನದಂತಹದ್ದೇ!]. ಲೂಥರ್ ಈ ಕಥೆಯನ್ನು ನಿರೂಪಿಸುವದಲ್ಲದೇ ಅದನ್ನು ಚರ್ಚಿಸುತ್ತಾರೆ ಸಹ. ಅದು ನಿಜವಲ್ಲ ಎನ್ನುವ ವಾದವನ್ನು ಅವರು ಒಡ್ಡುತ್ತಾರೆ. ಅವರ ವಾದ ಮೂಲ ಕಥೆಯಷ್ಟೇ ದುರ್ಬಲವಾಗಿದೆ. ಆ ಕಥನದ ಮೂಲ ಹೇಗೆ ಯಾರಿಗೂ ತಿಳಿದಿಲ್ಲವೋ, ಹಾಗೆಯೇ ಲೂಥರ್ ಅವರ ಕಥನದ ಮೂಲವೂ ನಿಗೂಢವಾಗಿಯೇ ಉಳಿದು - ಒಂದು ದುರ್ಬಲ ನಂಬಿಕೆಯ ವಿರುದ್ಧ ಮತ್ತೊಂದಾಗಿ ನಿಲ್ಲುತ್ತದೆ. ಆದರೆ ಲೂಥರ್ ಈ ಇಂಥ ವಿವರಗಳನ್ನು ಬಿಡದೇ ಚರ್ಚಿಸುವುದು ಆಸಕ್ತಿಯ ವಿಷಯವೇ ಆಗಿದೆ.

ಕುಲಿ ಕುತುಬ್ ಶಾ ಈ ನಗರವನ್ನು ಹೇಗೆ ರೂಪಿಸಿದ ಅನ್ನುವುದರ ಬಗ್ಗೆ ಈ ಪುಸ್ತಕದಲ್ಲಿ ಸಾಕಷ್ಟು ವಿವರವಾದ ಚರ್ಚೆಯಿದೆ. ಕುಲಿ ಸ್ವರ್ಗದ ಪ್ರತಿರೂಪವನ್ನು ಭೂಮಿಯ ಮೇಲಿಳಿಸುವಂತಹ ನಗರವನ್ನು ಕಟ್ಟಲು ಹೊರಟವನು [ಪು ೧೭] ಈ ಸ್ವರ್ಗದ ಪ್ರತಿರೂಪವನ್ನು ಭೂಮಿಗಿಳಿಸುವಾಗ ನಮಗೆ ಆ ಆಲೋಚನೆಯನ್ನು ಕಾರ್ಯಗತಗೊಳಿಸುವ ರೀತಿಯ ವಿವರ ಸಿಗುತ್ತದೆ. ಈಡನ್ ತೋಟಕ್ಕೆ ಪ್ರತೀಕವಾಗಿ ನಾಲ್ಕು ಕಾಲುವೆಗಳನ್ನೂ ನೀರಿನ ಪುಗ್ಗೆಯನ್ನೂ ನಿರ್ಮಿಸಿದ್ದರು..[ಪುಟ ೨೧] ಆದರೆ ಸ್ವರ್ಗದಲ್ಲಿದೆಯೆನ್ನಲಾದ ಸಿದ್ರ್ ಮತ್ತು ತಲ್ಹಾ ಮರಗಳನ್ನು ಭೂಮಿಯಮೇಲೆ ಕಾಣಲಾಗುವುದಿಲ್ಲ, ಹೀಗಾಗಿ ಅವುಗಳಿಗೆ ಬದಲಾಗಿ ನಗರವನ್ನು ಕಟ್ಟುತ್ತಿದ್ದವರು ತೆಂಗಿನ ಮತ್ತು ಅಡಿಕೆಯ ಮರಗಳನ್ನು ನೆಟ್ಟರು!!

ಈ ರೀತಿಯಾದಂತಹ ವಿವರಗಳು ಆತ್ಮಕಥನಾತ್ಮಕವಾದ ನಿರೂಪಣೆಗೆ ಒಗ್ಗುತ್ತವೆ: ಆದರೆ ಅದನ್ನೇ ಅತಿಯಾಗಿಸಿದಾಗ ಅದು ವಿಚಿತ್ರ ರೀತಿಯ ಅಭಿವ್ಯಕ್ತಿಗೆ ಎಡೆಮಾಡಿಕೊಡುತ್ತದೆ. ಉದಾಹರಣೆಗೆ ನಗರವೇ ಈ ರೀತಿಯಾದ ಮುನ್ನುಡಿಯನ್ನು ಬರೆಯುವುದನ್ನು ಗಮನಿಸಿ:

ನಾನಾಗಿಯೇ ನನ್ನ ಆತ್ಮಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲದ್ದರಿಂದ, ಇದು ನನ್ನ ಮುದ್ದಿನ ಮಗ ನರೇಂದ್ರ ಬರೆಯುತ್ತಿರುವ ನನ್ನ ಆತ್ಮಚರಿತ್ರೆ. ನಾನು ನನ್ನ ಕಥೆಯನ್ನು ಅವನಿಗೆ ನಿರೂಪಿಸಿದಾಗ ಅವನು ಈ ಕಥೆಯನ್ನು ಬರೆಯುವ ಅವಕಾಶ ನೀಡಬೇಕೆಂದು ನನ್ನನ್ನು ಒತ್ತಾಯಿಸಿದ. ನಾನು ಅವನನ್ನು ನಂಬುತ್ತೇನಾದ್ದರಿಂದ ಅವನ ಕೋರಿಕೆಯನ್ನು ನಿರಾಕರಿಸಲು ಆಗಲಿಲ್ಲ.[ಪುಟ xi-xii]

ಈ ಥರದ ನಗರ ತನ್ನ ಮಾತುಗಳನ್ನಾಡುವುದನ್ನು ಎಷ್ಟು ಕಾಲ ಭರಿಸಲು ಸಾಧ್ಯ? ಪುಸ್ತಕ ೪೦೦ ಪುಟಗಳಿಗೂ ಹೆಚ್ಚಿರುವಾಗ ಇದು ಕಿರಿಕಿರಿಯ ಮಾತೇ ಸರಿ. ಆದರೆ ಪುಸ್ತಕದಲ್ಲಿರುವ ದಂತಕಥೆ, ಸಂಶೋಧನೆ ಮತ್ತು ಕಿವಿಮಾತುಗಳ ವಿವರಗಳು ಪುಸ್ತಕವನ್ನು ಓದಿಸಿಕೊಂಡು ಹೋಗುವುದಕ್ಕೆ ಪೂರಕವಾಗುತ್ತದೆ. ಒಂದು ಥರದಲ್ಲಿ ಹೈದರಾಬಾದು ತನ್ನ ೪೦೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಬಂದ ಅನೇಕ ಪುಸ್ತಕಗಳಿಗಿಂತ ಆತ್ಮೀಯವಾಗಿಯಂತೂ ಇದೆ.

ಈಗ ನಾನು ಓದಿದ ಪುಸ್ತಕ ೨೦೦೬ರ ತಾರೀಖನ್ನು ಹೊಂದಿದೆ. ಆದರೆ ಹಕ್ಕುಗಳ ವಿವರಗಳನ್ನು ಕೊಡುವ ಪುಟದಲ್ಲಿ ಈ ಪುಸ್ತಕದ ಹಿಂದಿನ ಆವೃತ್ತಿಯಬಗ್ಗೆ ಚಕಾರವೂ ಇಲ್ಲ. ಒ.ಯು.ಪಿ ಯಂಥಹ ದೊಡ್ಡ ಪ್ರಕಾಶನ ಸಂಸ್ಥೆಗೆ ಇದು ತಿಳಿದಿರಲಿಲ್ಲವೇ ಅಥವಾ ಅವರು ಈ ಪುಸ್ತಕದ ಚರಿತ್ರೆಯನ್ನು ಕಡೆಗಣಿಸಿದರೆ? ಎರಡೂ ವಿಷಾದಕರ ವಿಷಯಗಳು. ದೊಡ್ಡ ಸಂಸ್ಥೆಗಳು ಹೀಗೆ ವರ್ತಿಸಿದಾಗ ಬೇಸರವಾಗುವುದು ಸಹಜವೇ. ಲೇಖಕರ ಮಾತಿನಲ್ಲಿ ಲೂಥರ್ ಪುಸ್ತಕದ ಹಿಂದಿನ ಆವೃತ್ತಿಯಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಲೂಥರ್ ಪ್ರಕಾರ ಪುಸ್ತಕದ ಪ್ರತಿಗಳು ಮುಗಿದುಹೋಗಿದ್ದುವು. ಆದರೆ ಪ್ರಕಾಶಕರ ವೆಬ್‍ಸೈಟಿನಲ್ಲಿ ಈ ಪುಸ್ತಕ ಇನ್ನೂ ಲಭ್ಯವಿದೆ! ಹೀಗಾಗಿ ಇಲ್ಲಿ ಏನೋ ಹೆಚ್ಚುಕಮ್ಮಿ ಇರುವಂತಿದೆ. ಅದಂತಿದ್ದರೂ ನನಗಿರುವ ಹೈದರಾಬಾದಿನ ಆಸಕ್ತಿಯಿಂದಾಗಿ ಈ ಪುಸ್ತಕವನ್ನು ಮತ್ತೊಮ್ಮೆ ಓದುವುದರಿಂದ ಅಥವಾ ಈ ಪ್ರತಿಯನ್ನು ಕೊಳ್ಳುವುದರಿಂದ ನನಗೆ ಹೆಚ್ಚಿನ ನಷ್ಟವೇನೂ ಆಗಲಿಲ್ಲ. ಬದಲಿಗೆ ನನ್ನ ನೆನಪನ್ನು ತಾಜಾಗೊಳಿಸಲು ಇದು ಪೂರಕವಾಯಿತು. ಕನಿಷ್ಠಪಕ್ಷ ಲೂಥರ್ ತಮ್ಮ ಆತ್ಮಕಥಾನಕ ಶೈಲಿಯನ್ನು ಇದರಲ್ಲಿ ಕಿತ್ತೊಗೆದಿರುವುದರಿಂದ ಇದು ಹಿಂದಿನ ಪುಸ್ತಕಕ್ಕಿಂತ ಚೆನ್ನಾಗಿಯೇ ಓದಿಸಿಕೊಳ್ಳುತ್ತದೆ. ಸಾಲದ್ದಕ್ಕೆ ಈ ಪುಸ್ತಕದಲ್ಲಿ ಇತ್ತೀಚಿನ ಚಂದ್ರಬಾಬುವಿನ ಸರಕಾರದ ಪತನದ ಬಗೆಗಿನ ಘಟನಾವಳಿಗಳ ಬಗ್ಗೆಯೂ ಕೆಲವು ಪುಟಗಳಿವೆ. ಸಮಕಾಲೀನ ಚರಿತ್ರೆಯ ಪುಟಗಳು ಚರಿತ್ರೆಯ ಪುಟಗಳಿಗಿದ್ದ ತೀವ್ರತೆಯನ್ನು ಒಳಗೊಂಡಿಲ್ಲ ಹಾಗೂ ಒಳನೋಟಗಳಿಲ್ಲದ ರಾಜಕೀಯ ವಿಶ್ಲೇಷಣೆಯಂತೆ ಕಾಣುತ್ತದೆ. ಇದು ಈ ಪುಸ್ತಕದಲ್ಲಿ ಇಲ್ಲದಿದ್ದರೂ ನಡೆಯುತ್ತಿತ್ತೇನೋ. ಈಚಿನ ಘಟನೆಗಳ ಬಗ್ಗೆ ಸಾಕಷ್ಟು ವಸ್ತುವೈವಿಧ್ಯದ ಲೇಖನಗಳು ಅನೇಕ ಇವೆ.

ಈ ಹೊಸ ಪುಸ್ತಕದ ಶೈಲಿ ಕಥನ ಮತ್ತು ಚರಿತ್ರೆಯ ನಿರೂಪಣಾ ಶೈಲಿಗಳ ನಡುವೆ ತೂಗಾಡುತ್ತದೆ. ಚರಿತ್ರಾತ್ಮಕ ಕಾದಂಬರಿಯಂತೆ ಈ ಪುಸ್ತಕದಲ್ಲಿರುವ ಪಾತ್ರಗಳು ಒಬ್ಬರೊಂದಿಗೊಬ್ಬರು ಮಾತನಾಡುವುದಲ್ಲದೇ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಅನ್ನುವುದನ್ನೂ ಲೇಖಕರು ವಿವಿರಿಸುತ್ತಾರೆ! ಆ ವಿವರಣೆಗೆ ಅವರು ವಿಶಿಷ್ಟ ಶೈಲಿಯನ್ನೂ ಬಳಸಿದ್ದಾರೆ. ಈ ಪುಸ್ತಕ ಹಿಂದಿನದಿಕ್ಕಿಂತ ಹೆಚ್ಚು ಅಕಾಡಮಿಕ್ ಎಂದು ಲೂಥರ್ ಹೇಳುತ್ತಾರೆ. ಆದರೆ ಅವರ ನಿರೂಪಣಾ ವಿಧಾನ ಇದು ಅಷ್ಟು ಅಕಾಡಮಿಕ್ ಅನ್ನುವುದನ್ನು ಒಪ್ಪಲು ಪೂರಕವಾಗಿಲ್ಲ. ಈ ಪುಸ್ತಕ ಓದಿದ ಸಮಯದಲ್ಲೇ ನಾನು ಹೈದರಾಬಾದಿನ ಬಗ್ಗೆ ಒಂದು ಸಿನೇಮಾವನ್ನೂ ನೋಡಿದೆ "ಭಾಗ್‍ಮತಿ: ಕ್ವೀನ್ ಆಫ್ ಫಾರ್ಚೂನ್ಸ್" ಅನ್ನುವ ಸಿನೇಮಾ ಹೈದರಾಬಾದಿನ ಸಂಸ್ಥಾಪಕ ಕುಲಿ ಕುತುಬ್ ಶಾನ ಜೀವನದ ಮೇಲೆ ಆಧಾರಿತವಗಿದೆ. ಲೂಥರ್ ಪುಸ್ತಕದ ಮೊದಲ ಭಾಗಕ್ಕೂ ಸಿನೇಮಾಕ್ಕೂ ಅನೇಕ ಹೋಲಿಕೆಗಳಿವೆ. ಈ ಸಿನೇಮಾವೂ ಲೂಥರ್ ಅವರ ಪ್ರಯೋಗದಂತೆ ಒಂದು ಭಿನ್ನ ಪ್ರಯೋಗದ್ದಾಗಿದೆ! ಸಿನೇಮಾದಲ್ಲಿ ಸಮಕಾಲೀನ ಪಾತ್ರಗಳೆಲ್ಲಾ ನಿಜರೂಪದಲ್ಲಿ ಬಂದರೆ, ಚಾರಿತ್ರಿಕ ಪಾತ್ರಗಳೆಲ್ಲಾ ಎನಿಮೇಷನ್ ಮೂಲಕ ಕಾರ್ಟೂನ್ ಪಾತ್ರಗಳಂತೆ ಕಾಣಿಸಿಕೊಳ್ಳುತ್ತಾರೆ. ಆ ಸಿನೆಮಾದ ಬಗ್ಗೆ ನಾನು ಮುಂದೆ ಬರೆಯುತ್ತೇನೆ. ಆದರೆ ನಾನು ಹೇಳಬಯಸಿದ ಮೂಲ ವಿಷಯವೆಂದರೆ, ಹೇಗೆ ಸಿನೆಮಾ ಡಾಕ್ಯುಮೆಂಟರಿಯ ರೂಪವನ್ನು ಪಡೆದಿಲ್ಲವೋ ಹಾಗೆಯೇ ಲೂಥರ್ ಪುಸ್ತಕವೂ ಪೂರ್ಣವಾಗಿ ಚರಿತ್ರೆಯ ಪುಸ್ತಕದ ರೂಪದಲ್ಲಿಲ್ಲ. ಪುಸ್ತಕದ ಮೊದಲ ಭಾಗ ತೋಂಡಿ ಸಂಪ್ರದಾಯದ ಆಧಾರದ ಮೇಲೆ ಬರೆಯಲಾಗಿದೆ. ಚರಿತ್ರೆಯನ್ನು ಈ ರೀತಿಯಾಗಿ ಬರೆಯುವುದು ತಪ್ಪೆಂದು ನಾನು ಹೇಳುತ್ತಿಲ್ಲವಾದರೂ, ವಾಚ್ಯದ ಆಧಾರದ ಮೇಲೆ ಚರಿತ್ರೆಯನ್ನು ಬರೆಯುವಾಗಲೂ ಅದಕ್ಕೆ ಒಂದು ವಿಧಾನವಿದೆ. ಅಲ್ಲಿ ಮನಸ್ಸಿನ ಮರ್ಕಟದೊಳಕ್ಕೆ ಹೋಗಲು ಮೂರನೆಯ ವ್ಯಕ್ತಿಯಿಲ್ಲದ ಖಾಸಗೀ ಕ್ಷಣಗಳನ್ನು ವಿವರಿಸಲು ಸಾಧ್ಯವಿಲ್ಲ. ಲೂಥರ್ ಪುಸ್ತಕದುದ್ದಕ್ಕೂ ಈ ರೀತಿಯಾದ ಶೈಲಿಯನ್ನೇ ಅಳವಡಿಸಿಕೊಳ್ಳುವುದಿಲ್ಲ. ಕುಲಿ ಕುತುಬ್ ಶಾ ಬಗ್ಗೆ ಬರೆದ ನಂತರ ಪುಸ್ತಕ ಇದ್ದಕ್ಕಿದ್ದಂತೆ ಚರಿತ್ರೆಯ ಪುಸ್ತಕವಾಗಿಬಿಡುತ್ತದೆ. ಈ ನಿರೂಪಣಾ ವಿಧಾನದ ವಿರೋಧಾಭಾಸವನ್ನು ನಿಭಾಯಿಸಲು ಲೂಥರ್‌‍ಗೆ ಸಾಧ್ಯವಾಗಿಲ್ಲ.

ಆದರೆ ಮುಖ್ಯವಾಗಿ ಒಂದು ನಗರವನ್ನು ಕಟ್ಟಲು ಏನೆಲ್ಲಾ ಯೋಜನೆಗಳನ್ನು ಮಾಡಬೇಕು ಅನ್ನುವುದರ ಬಗ್ಗೆ ಈ ಪುಸ್ತಕ ಒಳನೋಟಗಾಳನ್ನು ನೀಡುತ್ತದೆ. ಭಾರತದಲ್ಲಿ ಎಷ್ಟು ನಗರಗಳು "ಯೋಜಿತ" ನಗರಗಳೋ ನನಗೆ ತಿಳಿಯದೆ. ಆದರೆ ಹೈದರಾಬಾದ್ ನಿರ್ಮಾಣದಲ್ಲಿ ಒಂದು ದೂರದೃಷ್ಟಿ ಇತ್ತೆನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ನಗರದ ಹೊರನೋಟ ಹೇಗಿರಬೇಕು ಅನ್ನುವುದಲ್ಲದೇ, ಅಲ್ಲಿನ ಹೆಚ್ಚುವ ಜನಸಂಖ್ಯೆಯನ್ನು ಹೇಗೆ ನಿಭಾಯಿಸಿ ಎತ್ತ ವಸತಿಗಳನ್ನು ಏರ್ಪಾಟು ಮಾಡಬೇಕು ಅನ್ನುವ ಬಗ್ಗೆಯೂ ಒಂದು ದೃಷ್ಟಿಯಿತ್ತು ಅನ್ನುವುದು ನಮಗೆ ಲೂಥರ್ ಕಥನದಿಂದ ತಿಳಿಯುತ್ತದೆ.

ಹೈದರಾಬಾದಿನ ಚರಿತ್ರೆಯನ್ನು ಮೂರು ಭಾಗಗಳಲ್ಲಿ ಪರಿಶೀಲಿಸಬಹುದು. ಅದರ ಜನುಮಕ್ಕೆ ಕಾರಣರಾದ ಕುತುಬ್ ಶಾಹಿಗಳ ಕಾಲ ಒಂದು ಘಟ್ಟ. ಅಸಫ್ ಜಾಹಿಗಳು ನಗರವನ್ನು ಆಳಿದ ಎರಡನೆಯ ಘಟ್ಟ. ಮತ್ತು ಆಂಧ್ರಪ್ರದೇಶ, ಭಾರತದೊಂದಿಗೆ ಸೇರಿದ ಸ್ವಾತಂತ್ರಾನಂತರದ ಸಮಕಾಲೀನ ಘಟ್ಟ. ಪುಸ್ತಕ ಹೈದರಾಬಾದ್ ನಗರದ ಬಗ್ಗೆ ಮಾತನಾಡಿದರೂ, ರಾಜ್ಯದ ಇತರೆಡೆ ನಡೆಯುತ್ತಿದ್ದ ಘಟನಾವಳಿಗಳಿಂದ ಹೈದರಾಬಾದು ಹೊರತಾಗಿರಲಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಲೂಥರ್‍‌ಗೆ ಈ ವಿಚಾರಗಳಿಗಿಂತ ಸಣ್ಣ ಸಣ್ಣ ವಿವರಗಳೇ ಮುಖ್ಯವೆನ್ನಿಸಿಬಿಡುತ್ತದೆ. ಲೂಥರ್‌ರ ಗಮನ ಸೆಳೆಯುವ ವಿಚಾರಗಳ ಒಂದು ಮಾದರಿಯೆಂದರೆ ಮುಸರಂಬಾಗ್ ಅನ್ನುವು ಹೈದರಾಬಾದಿನ ಒಂದು ಪ್ರಾಂತಕ್ಕೆ ಅದರ ಹೆಸರು ಹೇಗೆ ಬಂತು ಅನ್ನುವು ಪ್ರಶ್ನೆ. ಮಾಸ್ಯೂರ್ ರೇಮಂಡ್ ಅನ್ನುವ ಫ್ರೆಂಚ್ ಪ್ರಯೋಗ ಭಾರತೀಯ-ಹೈದರಾಬಾದೀಕರಣಗೊಂಡು ಮುಸಲ್ಮಾನರಿಗೆ ಮೂಸಾ ರಹೀಮ್ ಎಂದೂ, ಹಿಂದೂಗಳಿಗೆ ಮೂಸಾ ರಾಮ್ ಎಂದೂ ಆಗಿ ಹೆಸರು ಹೀಗೆ ಪರಿವರ್ತಿತಗೊಂಡಿತು ಎಂದ ಆತ ಹೇಳುತ್ತಾರೆ.

ಹೈದರಾಬಾದಿಗೆ ಬಂದಾಗ ಎಲ್ಲಕ್ಕಿಂತ ಆಕರ್ಷಕ ವಿಚಾರವೆಂದರೆ ಅಲ್ಲಿನ ಜನರ ವೈವಿಧ್ಯತೆ. ಆ ಪ್ರಾಂತವನ್ನು ಆಳಿದವರು ಹೊರಗಿನಿಂದ ಬಂದವರು. ಹಾಗೆಯೇ ಆ ರಾಜ್ಯದ ಅನೇಕ ಬುದ್ಧಿಜೀವಿಗಳೂ ಹೊರಗಿನವರಾಗಿದ್ದರು. ಆ ನಗರಕ್ಕೆ ಬಂದ ಬ್ರಿಟಿಷರು, ಫ್ರೆಂಚರು, ಆಫಘನ್ನರು, ರೊಹಿಲ್ಲರು ಅಲ್ಲದೇ ಭಾರತದಿಂದಲೇ ಬಂದ ಪಂಜಾಬಿ ಖತ್ರಿಗಳು, ಸಿಖ್ಖರ ಬಗ್ಗೆ ಅವರು ಮಾತಾಡುತ್ತಾರೆ [ಪು ೧೨೯]. ಈಗಿನ ಹೈದರಾಬಾದಿನಲ್ಲೂ ಈ ವೈವಿಧ್ಯತೆ ಕಾಣಿಸುತ್ತದೆ. ಭಿನ್ನ ಪಂಥದವರು, ಭಿನ್ನ ಸ್ಥರದವರೂ ಬದಿಬದಿಯಲ್ಲಿ ಜೀವಿಸಿ ಊರನ್ನು ಬಣ್ಣದ ಚಿತ್ತಾರದ ಹಾಗೆ ರೂಪಿಸಿ ಶಾಂತಿಯಿಂದ ಜೀವಿಸುತ್ತಿದ್ದಾರೆ!

ನಾಲ್ಕು ನೂರು ವರ್ಷಗಳ ಘನ ಚರಿತ್ರೆಯಿದ್ದರೂ ಈ ಊರಿನದು ರಕ್ತಪಾತಹೀನವಾದ ಚರಿತ್ರೆಯೆಂದೇ ಹೇಳಬೇಕು. ಏನಾದರೂ ತೊಡಕುಗಳಿದ್ದರೆ ಅದು ಸಣ್ಣ ಸ್ಥರದಲ್ಲೇ ಇರುತ್ತಿದ್ದುವು. ಜೀವನ ಹೆಚ್ಚಿನ ಆತಂಕವಿಲ್ಲದೇ ನಡೆಯುತ್ತಿತ್ತು. ಅಸಫ್ ಜಾಹಿಗಳ ಆಳ್ವಿಕೆಯ ಮೊದಲಭಾಗದಲ್ಲಿ ಅವರು ಮುಘಲ್ ಸಂಸ್ಥಾನದ ಪ್ರತಿನಿಧಿಗಳಾಗಿರುವಲ್ಲಿ ಸಂತುಷ್ಟರಾಗಿದ್ದರು. ಎರಡನೆಯ ಭಾಗದಲ್ಲಿ ಬ್ರಿಟಿಷ್ ಸಂಸ್ಥಾನದ ಸಹಯೋಗಿಗಳಾಗುವುದರಲ್ಲಿ ಅವರಿಗೆ ಹೆಚ್ಚಿನ ತೊಂದರೆಯಿರಲಿಲ್ಲ. "ಹಾಗೆ ನೋಡಿದರೆ ನಿಜಾಮ ನಿಜಕ್ಕೂ ಮುಘಲ್ ಚಕ್ರವರ್ತಿಗಳ ಉಪಚಕ್ರವರ್ತಿಯಷ್ಟೇ ಆಗಿದ್ದ" ಎಂದು ಲೂಥರ್ ಹೇಳುತ್ತಾರೆ. ಬಿಟಿಷ್ ಗವರ್ನರ್ ಜನರಲ್ ಹೈದರಾಬಾದು ತನ್ನದೇ ನಾಣ್ಯಗಳನ್ನು ಅಚ್ಚು ಹಾಕಬಹುದು ಎಂದು ಹೇಳಿದಾಗ್ಯೂ ನಿಜಾಮ ಅದರ ಬಗ್ಗೆ ತಮ್ಮ ಅನುಮಾನವನ್ನು ತೋರಿಸುತ್ತಾನೆ. ಏಳನೆಯ ನಿಜಾಮನ ಹೆಗ್ಗಳಿಕೆಯೆಂದರೆ ತನಗೆ ಬಂದ "ಬ್ರಿಟಿಷ್ ಸಂಸ್ಥಾನದ ಅತೀ ನಂಬುಗಸ್ತ ವಿಶ್ವಾಸಿ ಸಹಚರ" ಅನ್ನುವ ಪಟ್ಟ. ಇಂದಿಗೂ ನಗರ ಆರಾಮವಾಗಿರುವುದಕ್ಕೆ ಈ ಶಾಂತಿಪ್ರಿಯತೆಯೇ ಕಾರಣವೇನೋ!

ನಾಲ್ಕುನೂರು ವರ್ಷಗಳ ಭವ್ಯ ಚರಿತ್ರೆಯನ್ನು ಅಷ್ಟೇ ಪುಟಗಳಲ್ಲಿ ನಿರೂಪಿಸುವುದು ಕಷ್ಟವೆನ್ನುವುದನ್ನು ಒಪ್ಪುತ್ತಲೇ ಈ ಪುಸ್ತಕದ ಹಲವು ಪುಟಗಳು ನಿರಾಸೆಯನ್ನುಂಟುಮಾಡುತ್ತವೆ ಎಂದು ಹೇಳಲೇಬೇಕಾಗಿದೆ. ಉದಾಹರಣೆಗೆ ಆರನೆಯ ನಿಜಾಮ ಮಹಬೂಬ್ ಅಲಿಯ ಬಗೆಗಿನ ಭಾಗ ಆತನನ್ನು ಅಷ್ಟೇನೂ ಉತ್ತಮ ರಾಜನಲ್ಲ ಅನ್ನುವಂತೆ ಚಿತ್ರಿಸುತ್ತದೆ. ಅದೇ ಹಾರಿಯಟ್ ಲಿಂಟನ್ ಮತ್ತು ಮೋಹಿನಿ ರಾಜನ್ ಬರೆದ್ "ಡೇಸ್ ಆಫ್ ದ ಬಿಲವೆಡ್" ಅನ್ನುವ ಮಹಬೂಬ್ ಅಲಿ ಬಗೆಗೇ ವಾಚ್ಯ ಮತ್ತು ಕಥನಗಳ ಮೂಲಕ ಗ್ರಹಿಸಿರುವ ಪುಸ್ತಕ ಆತನನ್ನು ಭವ್ಯವಾಗಿ ಚಿತ್ರಿಸುತ್ತದೆ. ಲೂಥರ್ ಆ ಪುಸ್ತಕದ ನಂತರ ತಮ್ಮ ಪುಸ್ತಕವನ್ನು ಬರೆಯುತ್ತಾರಾದ್ದರಿಂದ, ಅಕಸ್ಮಾತ್ ಅವರಿಗೆ ಲಿಂಟನ್ ಮತ್ತು ರಾಜನ್ ಪುಸ್ತಕದ ಬಗ್ಗೆ ಅಸಮಾಧಾನ, ಕಿರಿಕಿರಿಯಿದ್ದಲ್ಲಿ ಅದನ್ನು ಪ್ರಶ್ನಿಸುವ ಅವಕಾಶವನ್ನು ಕಳೆದುಕೊಂಡು ಬಿಟ್ಟಿದ್ದಾರೆನ್ನಿಸುತ್ತದೆ. ಚರಿತ್ರೆಯ ಬಗ್ಗೆ ಮಾತನಾಡುವಾಗ ಆ ಕಾಲದ ಬಗ್ಗೆ ಇರುವ ಸಾಹಿತ್ಯವನ್ನು ಓದುವುದು, ಆ ಬಗ್ಗೆ ಚರ್ಚಿಸುವುದು ಅವಶ್ಯಕ ಅನ್ನಿಸುತ್ತದೆ. ಹಾಗೆಯೇ ಏಳನೆಯ ನಿಜಾಮನಾದ ಉಸ್ಮಾನ್ ಅಲಿ ಬಗ್ಗೆ ಕರಾಕಾ ಬರೆದಿರುವ ಜೀವನ ಚರಿತ್ರೆಯನ್ನು ಲೂಥರ್ ಕಡೆಗಣಿಸುತ್ತಾರೆ. ಅದೇ ರೀತಿ ವಿ.ಕೆ.ಬಾವಾ ಬರೆದಿರುವ ಒಳ್ಳೆಯ ಪುಸ್ತಕದ ಬಗ್ಗೆ ಚರ್ಚಿಸಲು ಸಾಕಷ್ಟ ಪುಟಗಳನ್ನು ಖರ್ಚುಮಾಡಿದರೂ, ಆ ಬಗ್ಗೆ ಅವರ ಚರ್ಚೆ ಸಮಾಧಾನಕರವಾಗಿಲ್ಲ.

ಏಳನೆಯ ನಿಜಾಮನ ಜೀವನದಲ್ಲಿ ಸುಮಾರಷ್ಟು ವಿರೋಧಾಭಾಸಗಳಿದ್ದುವು. ಲೂಥರ್ ಏಳನೆಯ ನಿಜಾಮನ ತಿಕ್ಕಲುತನಗಳನ್ನು ಚಿತ್ರಿಸುವುದಕ್ಕೇ ಸೀಮಿತಗೊಳಿಸಿಬಿಡುತ್ತಾರೆ. ಉಸ್ಮಾನ್ ಅಲಿ ತನ್ನ ಪ್ರಧಾನ ಮಂತ್ರಿಯನ್ನು ನಾಲ್ಕು
ಗಂಟೆಯ ಸಮಯಕ್ಕೆ ಭೇಟಿಯಾದರೆ ಅವರಿಗೆ ಚಹಾ ಕೊಡಬೇಕಾಗುತ್ತದೆಂಬ ಕಾರಣಕ್ಕೆ ಭೇಟಿ ಮಾಡುತ್ತಿರಲಿಲ್ಲವೆನ್ನುವಂಥಹ ವಿಷಯಗಳನ್ನು ವಿಶ್ವವಿಖ್ಯಾತವಾದ ಆತನ ಜಿಪುಣತನವನ್ನೂ ಚಿತ್ರಿಸಿ ಉಸ್ಮಾನ್ ಅಲಿಯನ್ನೂ ಉತ್ತಮನಲ್ಲದಂತೆ ಚಿತ್ರಿಸುತ್ತಾರಾಗಲೀ, ಉಸ್ಮಾನ್ ಅಲಿಯ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಿದ ಎಷ್ಟೋ ಸರಕಾರಿ ಸಂಸ್ಥೆಗಳ ಬಗ್ಗೆ ಮಾತಾಡುವುದೇ ಇಲ್ಲ [ಮಹಿಳೆಯರಿಗಾಗಿಯೇ ಪ್ರತ್ಯೇಕ ಕಾಲೇಜು, ನಿಜಾಮಿಯಾ ತಾರಾಗಣ, ಆರ್ಟ್ಸ್ ಕಾಲೇಜು, ತರ್ಜುಮೆಗೆ ಮೀಸಲಾದ ದರ್-ಉಲ್-ತರ್ಜುಮಾ, ವೈದ್ಯಕೀಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯ], ಉಸ್ಮಾನ ಅಲಿ ತನ್ನ ಜೀವನವನ್ನು ದಾರಿದ್ರ್ಯದಲ್ಲಿ ಕಳೆದರೂ, ಈ ರೀತಿಯ ಸಂಸ್ಥೆಗಳನ್ನು ನಿರ್ಮಿಸುವಾಗ ಯಾವ ಜಿಪುಣತನವನ್ನೂ ತೋರಿಸಿರಲಿಲ್ಲ. ಈ ಬಗ್ಗೆ ಈಗಗಲೇ ಸಾಕಷ್ಟು ಬರಹಗಳಿರುವುದರಿಂದ ಲೂಥರ್ ಈ ವಿಷಯದವಿಶ್ಲೇಷಣೆ ಹೇಗೆ ಮಾಡುತ್ತಿದ್ದಿರಬಹುದೆನ್ನುವ ಕುತೂಹಲ, ಕುತೂಹಲವಾಗಿಯೇ ಉಳಿದಿದೆ. ಹಾಗೇ ಪೋಲೀಸ್ ಕಾರ್ಯಾಚರಣೆ [ಆಪರೇಷನ್ ಪೋಲೋ] ನಂತರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ನಡುವ ಹಂಚಿಹೋದ ಹೈದರಾಬಾದು ಆಗಿನ ಮುಸಲ್ಮಾನ ಸಮಾಜದ ಮೇಲೆ ಬಂದ ರಾಜಕೀಯ ಸಾಮಾಜಿಕ ಒತ್ತಡ ಈ ಎಲ್ಲದರ ಬಗ್ಗೆ ಅದ್ಭುತವಾಗಿ ಗ್ರಹಿಸಿ ಬರೆದಿರುವ ರತ್ನಾ ನಾಯ್ಡು, ಒಮರ್ ಖಲೀದಿಯಂತಹ ವಿದ್ವಾಂಸರ ಬರಹವನ್ನು ಲೂಥರ್ ಹೆಚ್ಚು ಚರ್ಚಿಸದೆಯೇ ತಳ್ಳಿಹಾಕುತ್ತಾರೆ. ಖಲೀದಿಯವರ ವಾದಗಳನ್ನು ಅಲ್ಲಿರುವ ಅಂಕಿಸಂಖ್ಯೆಗಳು ಅತಿ ಎಂದು ಹೇಳಿ ಲೂಥರ್ ಒಂದೇ ಏಟಿಗೆ ತಳ್ಳಿಹಾಕುತ್ತಾರೆ.

ಹೈದರಾಬಾದು ಸಂಸ್ಥಾನ ಭಾರತದ ಸೈನ್ಯದ ವಿರುದ್ಧ ಸಮರಕ್ಕೆ ಹೋಗಲೇ ಇಲ್ಲವೆನ್ನುವುದನ್ನು ಒಂದು ಆಸಕ್ತಿಕರ ಘಟನೆಯ ಮೂಲಕ ನಿರೂಪಿಸಲಾಗಿದೆ [ಪು ೨೭೮]. "ಹೈದರಾಬಾದಿನ ಪ್ರಧಾನ ಮಂತ್ರಿ ತನ್ನ ಸೇನಾಪತಿಯೊಂದಿಗೆ ಮಾತುಕತೆ ಮುಗಿಸಿ ಕಂಟ್ರೋಲ್ ರೂಮಿಗೆ ಬಂದಾಗ ಭಾರತೀಯ ಸೈನ್ಯದ ಟ್ಯಾಂಕುಗಳೂ ಸಶಸ್ತ್ರ ವಾಹನಗಳೂ ಕಲ್ಯಾಣಿ-ಬೀದರ್ ರಸ್ತೆಯ ಮೇಲೆ ಓಡಾಡುತ್ತಿವೆ ಅನ್ನುವ ಸುದ್ದಿ ಬಂದಿತು. ಲೈಕ್ ಅಲಿ ಗೋಡೆಯ ಮೇಲಿದ್ದ ನಕಾಶೆಯನ್ನು ನೋಡಿದ. ಅದ್ದನ್ನೇ ದಿಟ್ಟಿಸಿ ನೋಡಿದಾಗ ಕಲ್ಯಾಣಿಗೂ-ಬೀದರ್‌‍ಗೂ ನಡುವೆ ರಸ್ತೆಯಿದ್ದಂತೆ ಕಾಣಲಿಲ್ಲ. ಆತ ತನ್ನ ಕುರ್ಚಿಯಿಂದ ಎದ್ದ, ಕನ್ನಡಕ ಸರಿಮಾಡಿಕೊಂಡ, ಹಾಗೂ ನಕ್ಷೆಯಲ್ಲಿ ಪಶ್ಚಿಮ ವಿಭಾಗವನ್ನು ಅಮೂಲಾಗ್ರ ಪರಿಶೀಲಿಸಿದ. ಆ ಎರಡೂ ಊರುಗಳನ್ನು ಹಸುರು ಬಣ್ಣದ ಸೂಜಿಚುಚ್ಚಿ ಗುರುತಿಸಿದ್ದರು. ಆದರೆ ಅವುಗಳ ನಡುವೆ ರಸ್ತೆಯಿರಲಿಲ್ಲ. ತಕ್ಷಣ ಮುಖ್ಯ ಅಭಿಯಂತರನಿಗೆ ಫೋನ್ ಮಾಡಿ ಆ ನಗರಗಳ ನಡುವೆ ರಸ್ತೆಯಿದೆಯೇ ಎಂದು ಕೇಳಿದ. ಮುಖ್ಯ ಅಭಿಯಂತರ ಹೌದು, ಇತ್ತೀಚೆಗಷ್ಟೇ ಪ್ರಥಮ ದರ್ಜೆಯ ರಸ್ತೆಯನ್ನು ಈ ಎರಡೂ ನಗರಗಳ ನಡುವೆ ಉದ್ಘಾಟಿಸಲಾಯಿತೆಂದು ಜಂಬವಾಗಿ ಹೇಳಿದ. ಆದರೆ ಸೈನ್ಯದ ಬಳಿಯಿದ್ದ ನಕ್ಷೆಯಲ್ಲಿ ಆ ರಸ್ತೆಯಿರಲೇ ಇಲ್ಲ!!

ನಿಜಕ್ಕೂ ಹೈದರಾಬಾದಿನ ಆತ್ಮವನ್ನು ಪ್ರತಿನಿಧಿಸುವುದಕ್ಕೆ ಈ ಘಟನೆ ಒಂದು ಉತ್ತಮ ನಿದರ್ಶನ [ಪು ೨೯೩]. [ಭಾರತಕ್ಕೆ ಸ್ವಾತಂತ್ರ ಬಂದನಂತರ] ಕೇಂದ್ರ ಸರಕಾರದ ಅಧಿಕಾರಿಗಳು ಹಳೆಯ ಹೈದರಾಬಾದ್ ಸಂಸ್ಥಾನದ ಅಧಿಕಾರಿಗಳೊಂದಿಗೆ ಭೇಟಿಯಾಗುವ ಏರ್ಪಾಟು ಮಾಡುತ್ತಾರೆ. ಮೊದಲಿಗೆ ರಾಯ್ ಜಾನಕೀ ಪರ್‌ಶಾದ್ ಅವರ ಜೊತೆ ಭೇಟಿಯೆಂದು ಎ.ಡಿ.ಸಿ ಘೋಷಿಸುತ್ತಾನೆ. ಜಾನಕೀ ಪರ್‌ಶಾದ್ ಶೇರ್‍ವಾನಿ ಮತ್ತು ಫೇಜ್ ಟೋಪಿ ಧರಿಸಿ ಸಭೆಗೆ ಬರುತ್ತಾರೆ. ಆಗ ನಡೆಯುವ ಘಟನೆ ನೋಡಿ:

ಜಾನಕೀ ಪರ್‌ಶಾದ್ ಘನಗಂಭೀರವಾಗಿ ಎದ್ದು ಭೇಟಿಗೆಂದು ಬಾಗಿಲತ್ತ ಹೆಜ್ಜೆ ಹಾಕುತ್ತಾರೆ. ಎ.ಡಿ.ಸಿ ಗತ್ತಿನಿಂದ ಅವರತ್ತ ತಿರುಗಿ "ಮಿಸ್ಟರ್ ನೀವಲ್ಲ" ಎಂದು ಗಡುಸಾಗಿ ಹೇಳಿ "ಅವರು ಭೇಟಿಯಾಗಬಯಸುವುದು ರಾಯ್ ಜಾನಕೀ ಪರ್‌ಶಾದ್ ಅವರನ್ನು" ಅನ್ನುತ್ತಾನೆ.

"ನಾನೇ ಜಾನಕೀ ಪರ್‌ಶಾದ್" ಸಮಾಚಾರ ವಿಭಾಗದ ಮುಖ್ಯಸ್ಥ ಬೇಸರದ ದನಿಯಲ್ಲಿ ಹೇಳುತ್ತಾರೆ.

"ಓಹ್!" ಕ್ಯಾಪ್ಟನ್ ಪ್ಯಾರೇಲಾಲ್ ಉದ್ಗರಿಸಿ ಹೇಳುತ್ತಾನೆ "ಹಾಗಾದರೆ ನೀವು ಮುಸಲ್ಮಾನರಂತೆ ಯಾಕೆ ಬಟ್ಟೆ ಧರಿಸಿದ್ದೀರಿ?

"ಇಲ್ಲಿ ನಾವು ಬಟ್ಟೆ ಧರಿಸುವುದೇ ಹೀಗೆ" ಜಾನಕೀ ಪರ್‌ಶಾದ್ ತಣ್ಣಗೆ ಉತ್ತರಿಸುತ್ತಾರೆ.

ಇಲ್ಲಿ ಬಟ್ಟೆ ಧರಿಸುವ ವಿಧಾನಕ್ಕೂ, ಪಾಲಿಸುವ ಧರ್ಮಕ್ಕೂ ನೇರ ಸಂಬಂಧವಿರಲಿಲ್ಲ, ಅಥವಾ ವಿರೋಧಾಭಾಸವೂ ಇರಲಿಲ್ಲ. ಹೀಗಾಗಿಯೇ ಹೈದರಾಬಾದ್ ಭವ್ಯ ನಗರವಾಗುತ್ತದೆ. ಸರ್ವಧರ್ಮದವರೂ ಬೆರೆತು, ಹಳೆಯ ಬೇರಿನೊಂದಿಗೆ ಹೊಸ ಚಿಗುರೂ ಸೇರಿ ವೈವಿಧ್ಯತೆಯ ಪ್ರತೀಕವಾಗಿ ನಿಲ್ಲುತ್ತದೆ. ಹೀಗಾಗಿಯೇ ಸನಾತನಿಗಳನ್ನೂ ಆಧುನಿಕರನ್ನೂ ಹೈದರಾಬಾದು ಆಕರ್ಷಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಭಾರತದ ಕೆಲವೇ ನಗರಗಳಂತೆ ಹೈದರಾಬಾದೂ ಅನೇಕ ಶತಮಾನಗಳನ್ನು ಏಕಕಾಲಕ್ಕೆ ತನ್ನದಾಗಿಸಿಕೊಳ್ಳಬಹುದು. ಈ ಬಗ್ಗೆ ಏನಾದರೂ ಅನುಮಾನವಿದ್ದಲ್ಲಿ, ಮೊದಲು ಚೂಡಿಬಜಾರಿನಲ್ಲಿ ಒಂದು ಸುತ್ತು ಹಾಕಿ ತಕ್ಷಣವೇ ಸಿಕಂದರಾಬಾದಿನ ಸರದಾರ್ ಪಟೇಲ್ ರಸ್ತೆಯಲ್ಲಿ ಇಳಿದರೆ ನಮಗೆ ಈ ವೈವಿಧ್ಯತೆಯ ಅರ್ಥ ತಕ್ಷಣವೇ ಆಗುತ್ತದೆ!

ಹೈದರಾಬಾದಿಯಾದ ಲೂಥರ್ ಈ ಪುಸ್ತಕವನ್ನು ಜಾಗರೂಕತೆಯಿಂದ ಬರೆದಿದ್ದಾರಾದರೂ, ಮಿಕ್ಕ ವಿದ್ವಾಂಸರು ತರಲು ಸಾಧ್ಯವಾಗದ ತೀವ್ರತೆಯನ್ನು ಈ ಪುಸ್ತಕಕ್ಕೆ ತರಬಹುದಿತ್ತು. ಆದರೆ ಅವರು ಹಾಗೆ ಮಾಡುವುದಿಲ್ಲ. ದುರಂತವೆಂದರೆ ಅವರು ತಮ್ಮ ತೀವ್ರತೆಯನ್ನು ರೋರಿಸುತ್ತಲೇ ಪಾಂಡಿತ್ಯದ ಸೋಗನ್ನೂ ಹಾಕುವ ಪ್ರಯತ್ನ ಮಾಡುತ್ತದೆ. ಹೀಗಾಗಿ ಮೊದಲ ಭಾಗದಲ್ಲಿ ಬರೇ ತೀವ್ರತೆ ಕಂಡರೆ, ಮುಂದಿನ ಭಾಗದಲ್ಲಿ ಪಾಂಡಿತ್ಯ ಮೇಲುಗೈಯಾಗುತ್ತಾ ತೀವ್ರತೆ ಇಲ್ಲವಾಗುತ್ತದೆ.

ಇನ್ನು ನಾನು ಹೇಳಿದ ಚಲನಚಿತ್ರ ಭಾಗ್‌ಮತಿಯ ಬಗ್ಗೆ. ಈ ಚಲನಚಿತ್ರವನ್ನು ನಾನು ಹೈದರಾಬಾದಿನ ಬಗ್ಗೆ ಇರುವ ಕುತೂಹಲದ ಏಕೈಕ ಕಾರಣಕ್ಕಾಗಿ ನೋಡಿದೆ ಅನ್ನಬಹುದಾದರೂ ಈ ಚಲನಚಿತ್ರದಲ್ಲಿದ್ದ ,ಸ್ಥಳೀಯ ಜನರಿಂದ ಮಾಡಿಸಿದ್ದ ಅನಿಮೇಷನ್ ಎಷ್ಟು ಚೆನ್ನಾಗಿದೆ ಅನ್ನುವುದೂ ನನ್ನ ಕುತೂಹಲದ ವಿಷಯವಾಗಿತ್ತು. ಕೇವಲ ಎನಿಮೇಷನ್ನಿನ ಗುಣಮಟ್ಟವನ್ನು ನೋಡಬೇಕೆಂದರೆ ವಿವರಗಳು ಮತ್ತು ಚಿತ್ರದಲ್ಲಿನ ಆಳ ಆಯಾಮಗಳ ವಿಷಯದಲ್ಲಿ ಚೆನ್ನಾಗಿದೆ ಅನ್ನಿಸಿತು. ಆದರೆ ಈ ಚಿತ್ರವನ್ನು ಎನಿಮೇಷನ್ ಫಾರ್ಮಾಟಿನಲ್ಲಿ ಮಾಡಬೇಕಿತ್ತೇ? ಈ ಪ್ರಶ್ನೆ ಲೂಥರ್ ಪುಸ್ತಕ ಕಾದಂಬರಿಯ ರೂಪ ಪಡೆಯಬೇಕಿತ್ತೇ ಅಥವಾ ಚರಿತ್ರೆಯ ಪಾಂಡಿತ್ಯಪೂರ್ಣ ಪುಸ್ತಕವಾಗಿರಬೇಕಿತ್ತೇ ಅನ್ನುವ ಪ್ರಶ್ನೆಯಂತೆಯೇ ಇದೆ. ಕುಲಿ ಕುತುಬ್ ಶಾ ಕಥೆ ಆಸಕ್ತಿಕರವಾಗಿದೆ. ಆದರೆ ಈರೀತಿಯ ಚಿತ್ರೀಕರಣಕ್ಕೆ ಒಳಗಾಗುವಷ್ಟು ಮಹತ್ತರೆ ಕಥೆಯೇ? ಬಹುಶಃ ಇಲ್ಲ. ಹೀಗಾಗಿಯೇ ನಿರ್ದೇಶಕರು ಅದರೊಳಕ್ಕೆ ಸಮಕಾಲೀನ ಕಥೆಯೊಂದನ್ನು ತುರುಕುವ ಪ್ರಯತ್ನ ಮಾಡಿದ್ದಾರೆನ್ನಿಸುತ್ತದೆ. ಆದರೂ ತಬುವನ್ನು ಕರೆತಂದು ಅವಳನ್ನು ಶಿವರಂಜನಿಯ ಪಾತ್ರಕ್ಕಿಳಿಸಿ ಅವಳು ಭಾಗ್‌ಮತಿಯ ಪುನರ್ಜನ್ಮ ಅನ್ನುವ ಅರ್ಥ ಬರುವಂತೆ ಚಿತ್ರಿಸಿರುವುದು ಸ್ವಲ್ಪ ಅತಿ ಅನ್ನಿಸಿತು.

ಈ ಚಿತ್ರದ ನಿರ್ದೇಶಕರಾದ ಅಶೋಕ್ ಕೌಲ್ ಕೂಡಾ ಚರಿತ್ರೆಯ ಪ್ರೊಫೆಸರಾಗಿ ಆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ನಿರ್ದೇಶಕರಾಗಿ ಆತನೇ ನಟನೆಯಲ್ಲಿ ಒಂದೆರಡು ಪಾಠಗಳನ್ನು ತಮ್ಮ ನಟವೃಂದದಿಂದ ಕಲಿಯಬಹುದೆನ್ನಿಸುತ್ತದೆ. ಎಂದಿನಂತೆ ತಬು ಗಂಭೀರವಾಗಿ ಪಾತ್ರಪೋಷಣೆ ಮಾಡಿದ್ದರೂ ಈ ಸಿನೆಮಾಕ್ಕೆ ಆಕೆಯ ನೈಪುಣ್ಯತೆಯ ಅವಶ್ಯಕತೆಯಿರಲಿಲ್ಲವೇನೋ. ಬಹುಶಃ ಆಕೆ ಈ ಚಿತ್ರದಲ್ಲಿ ನಟಿಸಲು ಒಪ್ಪಲು ಅದು ಹೈದರಾಬದಿನ ಬಗೆಗಿನ ಚಿತ್ರ ಅನ್ನುವುದೇ ಏಕೈಕ ಕಾರಣವಿರಬಹುದು. [ಎಂ.ಎಫ್.ಹುಸೇನ್ ನಿರ್ದೇಶಿಸಿದ - "ಮೀನಾಕ್ಷಿ ಮೂರುನಗರಗಳ ಕಥೆ" ಚಿತ್ರದಲ್ಲೂ ಆಕೆ ಇದೇ ಕಾರಣಕ್ಕೆ ನಟಿಸಿರಲು ಸಾಕು.] ಮಿಲಿಂದ್ ಸೋಮನ್ ಈ ಚಿತ್ರದಲ್ಲಿ ಯಾಕಿದ್ದಾನೆಂದು ಅವನಿಗೂ ತಿಳಿಯದೆನ್ನಿಸುತ್ತದೆ. ಆದರೆ ಈ ಚಿತ್ರವನ್ನು ಚಿತ್ರೀಕರಿಸಿರುವ ರೀತಿ ನಿಜಕ್ಕೂ ಲೂಥರ್ ಚಿತ್ರಿಸಿರವ ಕುಲಿಕುತುಬ್ ಶಾರ ಕಥೆಗೆ ಹತ್ತಿರವಾಗಿರುವುದು ಕುತೂಹಲದ ವಿಷಯ. ಲೂಥರ್ ಪುಸ್ತಕವನ್ನು ಈ ಚಿತ್ರ ತಯಾರಕರು ಗಮನಿಸಿರಬಹುದುನ್ನುವುದಕ್ಕೆ ಯಾವ ಸಂಕೇತವೂ ಚಿತ್ರದ ಟೈಟಲ್ ಕಾರ್ಡ್ ಗಳಲ್ಲಿ ಕಾಣುವುದಿಲ್ಲ. ಒಂದು ಮುಖ್ಯವಾದ ವಿವರದಲ್ಲಿ ಎರಡೂ ಕೃತಿಗಳು ಸಮಾನಾಂತರವಾಗಿರುವುದೆಂದರೆ ಭಾಗಮತಿಯನ್ನು ಪುಸ್ತಕದಲ್ಲೂ ಸಿನೆಮಾದಲ್ಲೂ ಕುಲಿ "ಭಾಗ್" ಎಂದು ಸಂಭೋಧಿಸುತ್ತಾನೆ. ಇದೇ ರೀತಿಯಲ್ಲಿ ಚಿತ್ರದಲ್ಲಿ ಬರುವ ಪಿತೂರಿಗಳೂ, ಉಪಕಥೆಗಳೂ ಲೂಥರ್ ಪುಸ್ತಕದಲ್ಲಿರುವಂತೆಯೇ ಇದೆ. ಬಹುಶಃ ಆಗಿನ ಸಮಯದ ಚರಿತ್ರೆಯನ್ನು ಚೆನ್ನಾಗಿ ದಾಖಲಿಸಲಾಗಿದೆಯೇನೋ.

ಈ ಪುಸ್ತಕವನ್ನು ನಾನು ಹೈದರಾಬಾದಿನ ಬಗ್ಗೆ ಇರುವ ಆಸಕ್ತಿಯ ಕಾರಣವಾಗಿ ಓದಿದೆ. ಇಲ್ಲವಾದಲ್ಲಿ ಮತ್ತೆ ಓದುತ್ತಿರಲಿಲ್ಲವೇನೋ. ಇನ್ನು ಸಿನೆಮಾದ ವಿಷಯಕ್ಕೆ ಬಂದರೆ ನನ್ನನ್ನು ನಾನೇ ಕೇಳುವ ಪ್ರಶ್ನೆ: ಈ ಸಿನೆಮಾ ಲಖನೋವಿನಬಗ್ಗೆ ಬಂದಿದ್ದರೆ ನೋಡುತ್ತಿದ್ದೆನೇ? ಬಹುಶಃ ಇಲ್ಲ. ಖಂಡಿತವಾಗಿಯೂ ಇಲ್ಲ....

Labels: , , ,

No comments:

Post a Comment