Wednesday, March 11, 2009

ಅರವಿಂದ ಅಡಿಗರ ಬಿಳಿಹುಲಿ


ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು.  ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.

ಈ ಪುಸ್ತಕದ ಆಯ್ದ ಭಾಗಗಳು ಪತ್ರಿಕೆಗಳಲ್ಲೂ ಅದರ ವಿಮರ್ಶೆಗೆ ಮುನ್ನ ಬಂದುಬಿಟ್ಟಿತ್ತು. ಹಾಗೆ ನೋಡಿದರೆ ಈ ಪುಸ್ತಕವನ್ನು ಓದಲು ನನ್ನನ್ನು ಪ್ರೇರೇಪಿಸಿದ್ದೇ ಪತ್ರಿಕೆಯಲ್ಲಿ ಬಂದ ಪುಸ್ತಕದ ಮೊದಲ ಭಾಗ. ವೈಟ್ ಟೈಗರ್ ಪ್ರಾರಂಭವಾಗುವುದು ಬೆಂಗಳೂರು ನಗರದಲ್ಲಿ. ಎಲೆಕ್ಟ್ರಾನಿಕ್ ಸಿಟಿಯ ವಿಳಾಸದಿಂದ ಚೈನಾದ ಪ್ರಧಾನಿ ವೆನ್ ಜಿಯಾಬೋಗೆ ಅಶೋಕ್ ಶರ್ಮಾ ಎನ್ನುವವನು ಬರೆವ ಪತ್ರದಿಂದ ಈ ಕಥೆ ಪ್ರಾರಂಭವಾಗುತ್ತದೆ. ಪತ್ರಿಕೆಗಳಲ್ಲಿ ಬಂದ ಎಲೆಕ್ಟ್ರಾನಿಕ್ ಸಿಟಿಯ ವಿಳಾಸ ಮತ್ತು ಮೊದಲ ಭಾಗವನ್ನು ಓದಿ, ಇದೂ ಸಾಫ್ಟವೇರಿಗೆ ಸಂಬಂಧಿಸಿದ ಕಥೆಯಿರಬಹುದು, ಬೆಂಗಳೂರಿನ ಬೆಳವಣಿಗೆಯ ಕಥೆಯಿರಬಹುದು ಎಂದು ನಾನು ಯೋಚಿಸಿದ್ದೆ. ಜೊತೆಗೆ ಅಡಿಗ ಎನ್ನುವ ಹೆಸರೂ ಆ ಭ್ರಮೆಗೆ ಪೂರಕವಾಗಿತ್ತೆನ್ನಿಸುತ್ತದೆ. ಆದರೆ ಈ ಕಾದಂಬರಿಯನ್ನು ಓದುತ್ತಾ ಹೋದಂತೆ ಅದರ ಆಶಯವೇ ಬೇರೆ ಅಂತ ತಿಳಿಯಿತು. ಆಶಯವು ಬೇರೆ ಆದಗ್ಯೂ, ಆ ನಿರಾಶೆಯಿಂದಾಗಿ ಪುಸ್ತಕವನ್ನು ಬದಿಗಿಡಲು ನಾನು ತಯಾರಿರಲಿಲ್ಲ.

ಈ ಪುಸ್ತಕವಾಗಲೀ ಕಥೆಯಾಗಲೀ ನನಗೆ ಹಿಡಿಸಲಿಲ್ಲ. ಕಥೆ ಓದುತ್ತಿರುವಾಗಲೂ ಈ ಪುಸ್ತಕಕ್ಕೆ ಯಾಕಿಷ್ಟು ಪ್ರಚಾರ, ಯಾಕೆ ನಾನು ಓದುತ್ತಿದ್ದೇನೆ ಎಂದು ಪ್ರಶ್ನಿಸಿಕೊಂಡೆನಾದರೂ ಅದನ್ನು ನಿರಾಕರಿಸಿ ಪಕ್ಕಕ್ಕಿಡಲಿಲ್ಲ. ಓದಿದ ನಂತರ ಮನಸ್ಸು ಶಾಂತಿಯಿಂದಿರಲೂ ಇಲ್ಲ. ಎಲ್ಲೋ ಒಂದು ಅಸಮಾಧಾನವಿದ್ದಾಗ್ಯೂ ಈ ಪುಸ್ತಕ ನನ್ನ ಮನಸ್ಥಿತಿಯನ್ನು ವಿಚಿತ್ರ ರೀತಿಯಲ್ಲಿ ಕಲಕಿಬಿಟ್ಟಿತ್ತು. ಈ ಕಾದಂಬರಿಯಲ್ಲಿ ನಮ್ಮನ್ನು ಅಲುಗಾಡಿಸುವ, ನಮ್ಮ ಸಮತೋಲನ ತಪ್ಪಿಸುವ ಯಾವುದೋ ವಿಚಾರವಿದೆ. ಅದು ಹಿತವಾದ ವಿಚಾರವಲ್ಲ. ಆ ವಾಸ್ತವವನ್ನು ನಾವು ಎದುರಿಸಿ ನಿಲ್ಲಲು, ಇಂಥ ಕಟುವಾಸ್ತವವನ್ನು ಗುರುತಿಸಲೂ ಧೈರ್ಯ ಬೇಕು. ಬಹುಶಃ ನನ್ನಲ್ಲಿ ಆ ಧೈರ್ಯವಿಲ್ಲದ್ದರಿಂದಲೇ ಈ ಬಗ್ಗೆ ನಾನು ಅಸಮಾಧಾನದಿಂದ ಇದ್ದೆ ಅನ್ನಿಸುತ್ತದೆ. ಹೀಗಾಗಿಯೇ ಈ ಪುಸ್ತಕ ಬುಕರ್‍ ಪ್ರಶಸ್ತಿಯ ಯಾದಿಯಲ್ಲಿ ಇದೆ ಎಂಬ ಸುದ್ದಿ ಬಂದಾಗಲೂ ಅದು ನನಗೆ ವಿಶೇಷ ಖುಷಿಯೇನೂ ಆಗಲಿಲ್ಲ. ಭಾರತೀಯರಾದ, ಅದರಲ್ಲೂ ಕನ್ನಡಿಗರಾದ ಅರವಿಂದ ಅಡಿಗರ ಹೆಸರಿರುವುದು ಸಹಜವಾಗಿಯೇ ಖುಷಿಯನ್ನುಂಟುಮಾಡಬೇಕಾಗಿತ್ತಾದರೂ ಆ ಸಮಾಧಾನ ನನ್ನಲ್ಲಿರಲಿಲ್ಲ. ಹಾಗೆಯೇ ಒಂದು ರೀತಿಯಲ್ಲಿ ಅಮಿತಾವ್ ಘೋಷ್ ಅವರ ’ಸೀ ಆಫ್ ಪಾಪ್ಪೀಸ್’ ಕೃತಿಗೆ ಈ ಪ್ರಶಸ್ತಿ ಬರಲಿಲ್ಲವಲ್ಲ ಅನ್ನುವ ಬೇಸರವೂ ನನ್ನ ಮನಸ್ಸಿನಲ್ಲಿ ಉಂಟಾಯಿತು. ಅಮಿತಾವ್ ಅವರ ಒಟ್ಟಾರೆ ಸಾಹಿತ್ಯಿಕ ಕೃಷಿಯನ್ನು ಗಮನದಲ್ಲಿಟ್ಟಾಗ ಅವರಿಗೆ ಇಂಥ ಪ್ರಶಸ್ತಿ ಬರಬೇಕಿದ್ದದ್ದು ನನ್ನ ಮಟ್ಟಿಗೆ ಸಹಜವಾಗಿದ್ದಿರಬಹುದು. ಆದರೆ ಬುಕರ್ ಪ್ರಶಸ್ತಿಯನ್ನು ನಿರ್ಧರಿಸುವವನು ನಾನಲ್ಲವಲ್ಲ! ಹೀಗಾಗಿ ಈ ನಿರ್ಧಾರದ ಬಗ್ಗೆ ನಾನು ಟಿಪ್ಪಣಿ ಮಾಡುವುದಕ್ಕಿಂತ, ಬುಕರ್ ಸಂದರ್ಭದಲ್ಲಿ ಈ ಪುಸ್ತಕವನ್ನು ಪರಿಶೀಲಿಸುವುದೇ ಉತ್ತಮವಾದ ಕೆಲಸ ಅನ್ನಿಸುತ್ತದೆ.

ಪುಸ್ತಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಈ ಪುಸ್ತಕವನ್ನು ಬೆರಗುಗಣ್ಣುಗಳಿಂದ ಸ್ವಾಗತಿಸಲೂ ಬೇಕು, ಮೆಚ್ಚಲೂ ಬೇಕು. ಈ ವಿರೋಧಾಭಾಸದ ಮಾತುಗಳನ್ನು ಆಡುವುದಕ್ಕೆ ಕಾರಣವಿದೆ. ಈ ಪುಸ್ತಕವನ್ನು ಅಡಿಗ ರೂಪಿಸಿರುವ ರೀತಿ ಅದ್ಭುತವಾದದ್ದು. ವೈಟ್ ಟೈಗರ್‌ ನಿರೂಪಕ ಬಲರಾಮ್ ಹಲವಾಯಿ ಅನ್ನುವ ವ್ಯಕ್ತಿ. ಈತ ಬಹುಶಃ ಝಾರ್‍ಖಂಡ್ ಪ್ರದೇಶಕ್ಕೆ ಸೇರಿದವನು. ಈ ಬಗ್ಗೆ ಪುಸ್ತಕದಲ್ಲಿ ಸ್ಪಷ್ಟ ಸೂಚನೆಗಳಿಲ್ಲದಿದ್ದರೂ ಆ ಪ್ರಾಂತದ ವಿವರ ಮತ್ತು ಧನ್‍ಬಾದ್ ನಗರದ ಪ್ರಸ್ತಾಪ ಬರುವುದರಿಂದ ಈತ ಆ ಕ್ಷೇತ್ರಕ್ಕೆ ಸೇರಿದ ಬಡಕುಟುಂಬದ ವ್ಯಕ್ತಿ ಅನ್ನುವುದು ನಮಗೆ ಪುಸ್ತಕ ಓದುತ್ತಾ ಹೋದಂತೆ ತಿಳಿಯುತ್ತದೆ. ಈ ಬಲರಾಮ್ ಹಲವಾಯಿ ಈಗ ಅಶೋಕ ಶರ್ಮಾ ಅನ್ನುವ ಹೆಸರನ್ನು ತನ್ನದಾಗಿಸಿಕೊಂಡು ಬೆಂಗಳೂರು ನಗರದಲ್ಲಿ ವೈಟ್ ಟೈಗರ್ ಅನ್ನುವ ಟ್ಯಾಕ್ಸಿ ಕಂಪನಿಯನ್ನು ಚಲಯಿಸುತ್ತಿದ್ದಾನೆ. ಚೀನಾದ ಪ್ರಧಾನ ಮಂತ್ರಿ ಬೆಂಗಳೂರಿಗೆ ಭೇಟಿ ನೀಡಿ, ಆ ಭೇಟಿಯ ಕಾಲದಲ್ಲಿ ಬೆಂಗಳೂರಿನ ’ಸತ್ಯ’ವನ್ನು ಅರಿಯಲು ಇಲ್ಲಿನ ಕಥೆಯನ್ನು ತಿಳಿಯಲು ಉತ್ಸುಕರಾಗಿದ್ದಾರೆ ಅನ್ನುವ ವಾರ್ತೆಯ ಹಿನ್ನೆಲೆಯಲ್ಲಿ ಈತ ಚೀನಾದ ಪ್ರಧಾನ ಮಂತ್ರಿಗೆ ಒಂದು ಉದ್ದನೆಯ ಪತ್ರವನ್ನು ಬರೆಯುತ್ತಾನೆ. ಬಲರಾಮ ಹಲವಾಯ್ ಉರುಫ್ ಅಶೋಕ ಶರ್ಮಾನಿಗೆ ಈ ಪತ್ರವನ್ನು ಬರೆಯಲು ಏಳುದಿನಗಳು ಹಿಡಿಯುತ್ತವೆ. ಹೀಗೆ ತನ್ನ ಆತ್ಮಕಥೆಯನ್ನು ವಿವರಿಸುತ್ತ, ಬಲರಾಮ್ ಹಲವಾಯಿ ಭಾರತದ ಭವ್ಯ ಪ್ರಗತಿಯ ಹಿಂದೆ ಅಡಗಿರಬಹುದಾದ ಕರಾಳ ಸತ್ಯಗಳನ್ನು ಬಿಡಿಸುತ್ತಾ ಹೋಗುತ್ತಾನೆ. ಈ ಕಥೆ ಹೇಳಲು ಅವನು ಚೀನಾದ ಪ್ರಧಾನ ಮಂತ್ರಿಯನ್ನೇ ಆರಿಸುವುದರಲ್ಲೂ ಒಂದು ಮರ್ಮವಿರಬಹುದು. ಯಾಕೆಂದರೆ ಚೀನಾದ ಅದ್ಭುತ ಪ್ರಗತಿಯ ಹಿಂದೆಯೂ ಬಡತನ, ಹಿಂಸೆ, ಮತ್ತು ಶೋಷಣೆಯ ಕರಾಳ ಕಥೆಗಳನ್ನು ನಾವು ಆಗಾಗ ಕೇಳುತ್ತೇವೆ.
ಬಲರಾಮ್ ಹಲ್ವಾಯಿಯ ನಿರೂಪಣೆ - ಮತ್ತು ಆ ದೃಷ್ಟಿಯಿಂದ ಲೋಕವನ್ನು ಸೆರೆಹಿಡಿಯುವ ಪ್ರಕ್ರಿಯೆಯನ್ನು ಅಡಿಗ ಅದ್ಭುತವಾಗಿ ಸಾಧಿಸುತ್ತಾರೆ. ಬಲರಾಮ್ ಹಲ್ವಾಯಿ ಶ್ರೀಮಂತ ಕುಟುಂಬವೊಂದರ ಕಾರಿನ ಚಾಲಕನಾಗಿ ದೆಹಲಿಯನ್ನು ನೋಡುತ್ತಾನೆ. ಆ ನೌಕರಿಯಲ್ಲಿರಬಹುದಾದ ಅನೇಕ ಒಳಪದರಗಳನ್ನು ಅಡಿಗ ಚೆನ್ನಾಗಿ ಸೆರೆಹಿಡಿಯುತ್ತಾರೆ. ದಿನವೂ ಈ ರೀತಿಯ ಚಾಲಕರು ಚಲಿಸುವ ಕಾರಿನಲ್ಲಿ ಓಡಾಡುವ ಅನೇಕರಿಗೆ, ಅನೇಕ ವೇಳೆ ಕಾರನ್ನು ಚಲಾಯಿಸುತ್ತಿರುವುದು ಚಾಲಕ ಅನ್ನುವ ಪ್ರಜ್ಞೆಯೇ ಇರುವುದಿಲ್ಲ. ಅದರಲ್ಲೂ ಮೌನವಾಗಿರುವ ಚಾಲಕರು ಎಷ್ಟೆಲ್ಲ ಜನರ ಗುಟ್ಟು-ಪಿತೂರಿಗಳ ಶ್ರವಣಮಾಡುತ್ತಾ ಸಾಗಿರುತ್ತಾರೆ ಅನ್ನುವುದು ಸುಮಾರಷ್ಟು ಬಾರಿ ಹಿಂದೆ ಕೂತು ದರ್ಪ ಚಲಾಯಿಸುವವರಿಗೆ ಅರ್ಥವೇ ಆಗಿರುವುದಿಲ್ಲ. ಈ ಚಾಲಕರು ಎಷ್ಟು ಮೌನವಾಗಿರುತ್ತಾರೆಂದರೆ, ಅವರ ತುಟಿಗಳಿಂದ ಬೇರೆಯವರ ಕಥೆಗಳೂ ಕೇಳಿಬರುವುದಿಲ್ಲ. ಹೀಗಾಗಿಯೇ ಹಿಂದೆ ಕೂತವರ ಕಥೆಗಳೂ ಅನಾಮಿಕವಾಗಿ ಅಗ್ರಾಹ್ಯವಾಗಿ ಉಳಿದುಬಿಡುತ್ತವೆ ಅಂತ ನಾವೆಲ್ಲರೂ ನಂಬಿ ನಡೆಯಲಿಕ್ಕೂ ಸಾಕು. ಹೀಗಾಗಿ ಆ ದೃಕ್ಪಥದಿಂದ ಬರೆಯುವುದರಲ್ಲೂ ಒಂದು ವಿಶೇಷ ಅರ್ಥವನ್ನು ಅಡಿಗ ಕಂಡಿರಬಹುದು. 

ಅರವಿಂದ ಅಡಿಗರ ಕಥನ ತಂತ್ರ ಏಕಮುಖವಾಗಿ ಒಂದು ಪತ್ರ ಬರೆವ ರೂಪದಲ್ಲಿ, ಭಾರತದ ಪ್ರಗತಿಯ ಹಿನ್ನೆಲೆಯನ್ನು ಅದರ ಕರಾಳರೂಪವನ್ನು ನಿರೂಪಿಸುವುದರಲ್ಲಿದೆ. ಒಬ್ಬ ಚಾಲಕನ ಮೌನ ಎಷ್ಟು ಮುಚ್ಚಿಡುತ್ತದೋ, ಅವನ ವಾಚಾಳಿತನ ಅಷ್ಟೇ ಕರಾಳತೆಯನ್ನು ಬಿಚ್ಚುತ್ತದೆನ್ನುವುದನ್ನು, ಹಾಗೂ ಬಡತನದ, ಪ್ರಗತಿಯ ಫಲಗಳಿಂದ ವಂಚಿತರಾದ ಜನರ ಮೌನದ ಹಿಂದೆ ಒಂದು ಭೀಕರತೆ ಇರಬಹುದು ಅನ್ನುವುದನ್ನು ಅಡಿಗ ಅದ್ಭುತವಾಗಿ ಬಿಚ್ಚಿಡುತ್ತಾರೆ. ಆದರೆ ಇಂಥಹ ನಗ್ನ ಕಟು ಸತ್ಯವನ್ನು ಗ್ರಹಿಸಲು ನಾವು ತಯಾರಿದ್ದೇವೆಯೇ? ಯಾಕೆಂದರೆ ಈ ಕಥೆಯನ್ನು ಓದಲು ಹೊರಟವರು ಯಾರೂ ಚಾಲಕನ ಶ್ರೇಣಿಗೆ ಸಲ್ಲುವವರಲ್ಲ. ಈ ಕಥೆಯನ್ನು ಅಡಿಗ ಅವರಿಗಾಗಿ ಬರೆದೇ ಇಲ್ಲ. ಬದಲಿಗೆ ಅದನ್ನು ಓದುವವರೆಲ್ಲಾ ಚಾಲಕನ ಹಿಂದಿನ ಸೀಟಿನಲ್ಲಿ ಕೂಡಬಹುದಾದಂತಹ ಜನ. ಅವರಿಗೆ ಇದು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಸತ್ಯವಂತೂ ಅಲ್ಲ.

ಹೀಗೆ ಕಥೆ ಹೇಳುತ್ತಿರುವ ಬಲರಾಮ ಹಲ್ವಾಯಿ ಉಪಯೋಗಿಸಬಹುದಾದ ಭಾಷೆಯನ್ನೂ ಅಡಿಗ ಚೆನ್ನಾಗಿ ಗ್ರಹಿಸುತ್ತಾರೆ. ಆ ಭಾಷಾಪ್ರಯೋಗವನ್ನು ಯಾವ ಸಂಕೋಚವೂ ಇಲ್ಲದೇ ಮಾಡುತ್ತಾರೆ. ಈ ಭಾಷೆಯೂ ಶಿಷ್ಟಜಗತ್ತಿಗೆ ಧಕ್ಕೆಯುಂಟುಮಾಡುವ ಭಾಷೆಯೇ.  ಈ ಭಾಷೆಯನ್ನು ಉಪಯೋಗಿಸುತ್ತಿರುವ ಕಥೆಗಾರ ಯಾವ ಕ್ಷಣದಲ್ಲೂ ತಾನು ಬಡವರ್ಗಕ್ಕೆ ಸೇರಿದವನು, ತನಗೆ ಅನ್ಯಾಯವಾಗಿದೆ ಹಾಗೂ ತಾನು ವಂಚಿತನಾಗಿದ್ದಾನೆ ಅನ್ನುವ ಭಾವನೆಯನ್ನು ಒಂದು ಕ್ಷಣದ ಮಟ್ಟಿಗಾದರೂ ವ್ಯಕ್ತ ಪಡಿಸುವುದಿಲ್ಲ. ಬದಲಿಗೆ ತಾನು ಕಾಣುತ್ತಿರುವ ಮೇಲ್ವರ್ಗದವರ ಪಿತೂರಿಗಳು, ವಂಚನೆಗಳನ್ನು ನೋಡಿ ಒಂದು ಸ್ಥರದಲ್ಲಿ ಅದನ್ನು ಆನಂದಿಸುವುದಲ್ಲದೇ, ತಾನೂ ತನ್ನ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಲು ಇಂಥ ತಂತ್ರಗಳನ್ನು ಉಪಯೋಗಿಸಲು ಪ್ರಯತ್ನಿಸುತ್ತಾನೆ.

ಬಲರಾಮ್ ಹಲ್ವಾಯಿ ತನ್ನ ಲೋಕದಿಂದ ಬಿಡುಗಡೆ ಪಡೆಯಲು ಹಾಗೂ ಬೇರೊಂದು ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳಲು ಏನಾದರೂ ಮಾಡಬೇಕು. ಕಥೆಯ ತಿರುವು ಇರುವುದೇ ಹಲವಾಯಿಯ ಈ ದಿಟ್ಟ ನಿಲುವಿನಲ್ಲಿ. ಈ ನಿಲುವೇ ಓದುಗರನ್ನು ವಿಚಲಿತಗೊಳಿಸುತ್ತದೆ. ಈ ನಿಲುವಿನ ಸತ್ಯವನ್ನು ಎದುರಿಸುವ ಎದೆಗಾರಿಕೆ ಬಹಳಷ್ಟು ಮಂದಿಗೆ ಇರಲಾರದೆನ್ನಿಸುತ್ತದೆ. ನನಗಂತೂ ಇಲ್ಲ. ತನ್ನ ಪರಿಸ್ಥಿತಿಯಿಂದ ಬೇರೊಂದು ಸ್ಥರಕ್ಕೆ ಹೋಗಲು ಬಲರಾಮ ತನ್ನ ಮೇಲೆ ಅವನ ಮಾಲೀಕ ಇಟ್ಟಿರುವ ನಂಬಿಕೆಗೆ ವಂಚನೆ ಮಾಡಿ, ತನ್ನ ಮಾಲೀಕನ ಕೊಲೆ ಮಾಡಿ, ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಅನಾಮಿಕನಾಗಿ ಜೀವನವನ್ನು ಸಾಗಿಸುತ್ತಾನೆ.  

ಒಂದು ರೀತಿಯಲ್ಲಿ ತನ್ನ ಮಾಲೀಕನ ಮೇಲೆ ತಾನು ತೀರಿಸಿಕೊಂಡ ಸೇಡೆಂದೂ ಇದನ್ನು ಗ್ರಹಿಸಬಹುದೇನೋ. ಏಕೆಂದರೆ ಇದಕ್ಕೆ ಮೊದಲೇ ಬಲರಾಮನ ಮಾಲೀಕನ ಹೆಂಡತಿ ’ಪಿಂಕಿ ಮ್ಯಾಡಂ’ ಒಂದಾನೊಂದು ರಾತ್ರೆ ಅವರ ಗಾಡಿಯನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿತ್ತಿರುವಾಗ ಕಾರಿನಡಿಗೆ ಏನೋ ಸಿಗುತ್ತದೆ. ಮೊದಲಿಗೆ ಅದು ಬೀದಿ ನಾಯಿ ಎನ್ನುವ ಚರ್ಚೆ ನಡೆಯುತ್ತದಾದರೂ ಕಾರಿನಡಿಗೆ ವಾಸ್ತವದಲ್ಲಿ ಸಿಕ್ಕಿಬಿದ್ದಿರುವುದು ಒಂದು ಮಗು. ಆಗ ಕಾರನ್ನು ಹಿಂದಕ್ಕೆ ತಿರುಗಿಸಿ ಏನಾಗಿದೆ ಎನ್ನುವುದನ್ನು ನೋಡಬೇಕೋ ಅಥವಾ ಮುಂದೆ ಮನೆಯ ಕಡೆಗೆ ಪಲಾಯನ ಮಾಡಬೇಕೋ ಅನ್ನುವ ಚರ್ಚೆಯಲ್ಲಿ ಗೆಲ್ಲುವ ವಾದ ಪಲಾಯನದ್ದು. ಆದರೆ ನಾಳೆ ಏನಾದರೂ ಈ ಬಗ್ಗೆ ಪತ್ತೆಯಾದರೆ ಏನು ಮಾಡುವುದು ಅನ್ನುವ ಪ್ರಶ್ನೆಗೆ ಸುಲಭವಾಗಿ ದೊರೆಯುವ ಉತ್ತರ - "ಇದು ನಡೆದಾಗ ನಾನೇ ಗಾಡಿಯನ್ನು ಚಲಾಯಿಸುತ್ತಿದ್ದೆ" ಎನ್ನುವ ಬಲರಾಮನ ವಕ್ತವ್ಯವನ್ನು ಒಂದು ಹಾಳೆಯ ಮೇಲೆ ಪಡೆಯುವುದು ಎಂದಾಗುತ್ತದೆ. ಹೀಗೆ ಬಲರಾಮನನ್ನು ಪೋಲೀಸರ ಜಾಲದಲ್ಲಿ ಸಿಕ್ಕಿಸಬೇಕೆನ್ನುವ ಹುನ್ನಾರ ನಡೆಯುವಾಗ ಅವನು ಒಳಗಿಂದ ಕುದಿಯುತ್ತಲೇ ಮೌನವಾಗಿರುತ್ತಾನೆ. ಊರಿನಲ್ಲಿರುವ ತನ್ನ ಸಂಸಾರವನ್ನು ಅವರುಗಳು ನೋಡಿಕೊಳ್ಳುತ್ತಾರೆನ್ನುವ ಒಂದೇ ಕಾರಣಕ್ಕೆ ಅವನು ಈ ಆಪಾದನೆಯನ್ನು ತನ್ನ ಮೇಲೆ ಹೇರಿಕೊಂಡು ಜೈಲಿಗೆ ಹೋಗಲು ತಯಾರಿಲ್ಲ ಎನ್ನುವುದು ವೇದ್ಯವಾಗುತ್ತದೆ. ಅದೃಷ್ಟವಶಾತ್ ಈ ಘಟನೆಯ ಬಗ್ಗೆ ಯಾವ ವಿಚಾರಣೆಯೂ ನಡೆವ ಲಕ್ಷಣ ಕಾಣುವುದಿಲ್ಲವಾದ್ದರಿಂದ ಬಲರಾಮ್ ಬಚಾವಾಗುತ್ತಾನೆ.

ಆದರೆ ಪುಸ್ತಕವನ್ನು ಓದಿದಾಗ ಅನ್ನಿಸುವುದು ಬಲರಾಮನಿಗೆ ತನ್ನ ಮಾಲೀಕನನ್ನು ಕೊಂದದ್ದರ ಬಗ್ಗೆಯಾಗಲೀ - ಅವನಿಂದ ಹಣವನ್ನು ತೆಗೆದು ಅದರಿಂದ ತನ್ನ ಜೀವನದ ಸ್ಥರವನ್ನು ಉತ್ತಮಗೊಳಿಸಿಕೊಂಡದ್ದರ ಬಗ್ಗೆಯಾಗಲೀ ಯಾವ ಪಾಪಪ್ರಜ್ಞೆಯೂ ಇಲ್ಲ. ಮೇಲಾಗಿ, ಮೇಲೆ ವಿವರಿಸಿದ ಘಟನೆಯಿಂದ ಮಾಲೀಕನ ಮೇಲೆ ಸಿಟ್ಟಾಗಿ ಸೇಡಿನ ಭಾವನೆಯಿರಬಹುದು ಅನ್ನುವ ಅಭಿಪ್ರಾಯವೂ ನಮಗೆ ಉಂಟಾಗುವುದಿಲ್ಲ. ಒಂದು ರೀತಿಯಲ್ಲಿ ಕೊಲೆ ಮಾಡುವುದೂ ಒಂದು ಅತೀ ಸಹಜ ಕ್ರಿಯೆ ಅನ್ನುವಂತೆ ಬಲರಾಮ ನಿರುದ್ವೇಗದಿಂದ ಎಲ್ಲವನ್ನೂ ವಿವರಿಸುತ್ತಾನೆ. ರಾಮಗೋಪಾಲ ವರ್ಮಾರ ಸಿನೇಮಾ ಕಂಪನಿಯಲ್ಲಿ ನಿರೂಪಿಸಿರುವಂತೆ ಕೊಲೆಯೂ ನೌಕರಿಯ ಹಾಗೆ ಒಂದು ಸಹಜ ಪ್ರಕ್ರಿಯೆಯಾಗಿಬಿಡುತ್ತದೆ. ಈ ಅಂತ್ಯವಲ್ಲದೇ ಬೇರಾವ ಅಂತ್ಯವೂ ಈ ಕಥೆಗೆ ಸಾಧ್ಯವಿದ್ದಿಲ್ಲ ಅನ್ನುವ ಅಭಿಪ್ರಾಯ ಓದುಗನನ್ನು ತಟ್ಟುತ್ತದೆ. ಈ ಘಟನೆಯ ನಂತರ ಬಲರಾಮ್ ತನ್ನ ಈ ಉನ್ನತಿಗೆ ತನ್ನ ಎಲ್ಲ ಚರಿತ್ರೆಯನ್ನೂ, ತನ್ನ ಊರು, ಜನರನ್ನೂ ಮರೆತು ಸುಖವಾಗಿ ಇರಲು ಸಿದ್ಧನಿದ್ದಾನೆ. 

ಈ ರೀತಿಯ ನಿರುದ್ವಿಗ್ನ ನಿರೂಪಣೆ ಎಲ್ಲೋ ನಮ್ಮನ್ನು ಗಾಢವಾಗಿ ಕಲಕುತ್ತದೆ. ಅಂದರೆ ಒಳ್ಳೆಯತನ, ಮಾನವೀಯತೆ, ಕರುಣೆ, ಬಂಧನಗಳು ಯಾವುದೂ ಪವಿತ್ರವಲ್ಲ. ಎಲ್ಲವೂ ಲಾವಾದೇವಿಯ ಸ್ಥರಕ್ಕೆ ಇಳಿದುಬಿಡುತ್ತದೆ. ಹೀಗಾಗಿಯೇ ಈ ಕಾದಂಬರಿ ನಮ್ಮನ್ನು ನಮ್ಮ ನಂಬಿಕೆಗಳ ಮೂಲವನ್ನು ಪ್ರಶ್ನಿಸಿ ಸರಿ-ತಪ್ಪುಗಳೇ ಇಲ್ಲದ ವ್ಯಾವಹಾರಿಕ ಸ್ಥರದಲ್ಲಿ ಅಸಹಾಯಕ ನೋಡುಗರನ್ನಾಗಿ ಮಾಡಿಬಿಡುತ್ತದೆ. ಜೀವನವನ್ನು ನೋಡುವ ಈ ನಕಾರಾತ್ಮಕ ದೃಷ್ಟಿಕೋನ ನಿಜಕ್ಕೂ ಭಯಾನಕವಾದದ್ದಾದ್ದರಿಂದ ಈ ಕಾದಂಬರಿಯನ್ನು ಇಷ್ಟ ಪಡುವುದು ಕಷ್ಟವಾಗುತ್ತದೆ. ನಿಷ್ಟೂರದ ನಿಜವಾದರೂ ಅದನ್ನು ಬಹುಶಃ ನೋಡುವ ಧೈರ್ಯ ನಮಗಿಲ್ಲವೇನೋ.

ಒಂದು ಥರದಲ್ಲಿ ನಾವು ಬೀಗಿತ್ತಿರುವ ಆರ್ಥಿಕ ಪ್ರಗತಿಯ ಕಥೆಯೂ ಇಂಥದ್ದೇ ಇರಬಹುದು. ಇಂಡಿಯಾ ಶೈನಿಂಗ್ ಎಂದು ಬೀಗುತ್ತಿರುವ ನಾವು, ಭಾರತ ಸಂಜಾತರಾದ ಎಷ್ಟು ಜನ ಫೋರ್ಬ್ಸ್ ಪತ್ರಿಕೆಯ ಕೋಟ್ಯಾಧಿಪತಿಗಳ ಯಾದಿಯಲ್ಲಿರುವ ಲಕ್ಷ್ಮೀ ಮಿತ್ತಲ್ ಆದಿಯಾಗಿ ಪ್ರೇಂಜಿ, ನಾರಾಯಣಮೂರ್ತಿಗಳ ಶ್ರೀಮಂತಿಕೆಯನ್ನು ಕಂಡು ಖುಶಿ ಪಡುವ ಸಂಭ್ರಮದಲ್ಲಿ ಬಹುಶಃ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಬಡತನ-ಹಸಿವಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಒಂದು ದೊಡ್ಡ ವರ್ಗವನ್ನು ತಿಳಿಯದೆಯೇ ಯಾವ ಪಾಪಭಾವನೆಯೂ ಇಲ್ಲದೆ ಅವರವರ ಜಾಗದಲ್ಲಿ ಬಿಟ್ಟು ಮರೆತು ಮುಂದುವರೆಯುತ್ತಿದ್ದೇವೆಯೇ ಅನ್ನುವ ಕಷ್ಟದ ಪ್ರಶ್ನೆಯನ್ನ ನಾವು ಕೇಳಿಕೊಳ್ಳುವಂತೆ ಈ ಕಾದಂಬರಿ ನಮ್ಮನ್ನು ಒತ್ತಾಯಿಸಿತ್ತದೆ. ಬಲರಾಮ ಹಲ್ವಾಯಿ ಭಾರತದ ಆರ್ಥಿಕ ಪ್ರಗತಿಯ ಪ್ರತೀಕವಾದರೆ ಆ ಪ್ರಗತಿಯ ಹಿಂದಿರಬಹುದಾದ ಹಿಂಸಾಚಾರ, ಮತ್ತು ತನ್ನ ಚರಿತ್ರೆ ಬಂಧನಗಳೇ ಇಲ್ಲವೆಂಬಂತೆ ಮುಂದುವರೆವ ರೀತಿ ನಿಜವಾದರೆ, ಅದನ್ನು ಎದುರಿಸುವ ಧೈರ್ಯ ನಮಗಿದೆಯೇ?

ಹೀಗೆ ಮನಸ್ಸಿಗೆ ಹಿಂಸೆಯುಂಟುಮಾಡುವ, ಕಷ್ಟದ ಪ್ರಶ್ನೆಗಳನ್ನು ಕೇಳುವ ಪುಸ್ತಕಕ್ಕೆ ಬುಕರ್ ಬಂದಿದೆ. ಇಂಥ ಪ್ರಶಸ್ತಿಯನ್ನು ಸಂಪಾದಿಸಿದ ಅಡಿಗರಿಗೆ ಅಭಿನಂದನೆಗಳು.


No comments:

Post a Comment