Wednesday, January 27, 2010

ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕಾದಂಬರಿ: Death of a Moneylender
ಲೇಖಕಿ - ಕೋಟ ನೀಲಿಮಾ

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.

ಇತ್ತೀಚೆಗೆ ಬಂದ ಆಕೆಯ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಕಾದಂಬರಿ ಅನೇಕ ಕಾರಣಗಳಿಗಾಗಿ ಹಚ್ಚಿನ ಚರ್ಚೆಗೊಳಪಡಬೇಕಿತ್ತು. ಆ ಪುಸ್ತಕದ ಬಗ್ಗೆ ಹೆಚ್ಚಿನ ವಿಮರ್ಶೆಗಳೂ ಬರಬೇಕಿತ್ತು. ಆದರೆ ಆ ಪುಸ್ತಕದ ಬಗ್ಗೆ ಹೆಚ್ಚೆನ ಚರ್ಚೆಯೇ ನನಗೆ ಕಂಡಿಲ್ಲ. ಅದಕ್ಕೆ ನಮ್ಮ ಮೀಡಿಯಾದ ಬ್ರೇಕಿಂಗ್ ನ್ಯೂಸ್ ಲೋಲುಪತೆಯೇ ಕಾರಣವಿರಬಹುದು. ಈ ಗಡಿಬಿಡಿಯ ಜೀವನದ ನಡುವಿನಲ್ಲಿ ಪತ್ರಕರ್ತರ ಕಾರ್ಯವೈಖರಿ, ಹಾಗೂ ನಗರಪ್ರದೇಶದಿಂದ ದೂರವಿರುವ "ಸೆಕ್ಸಿ" ಅಲ್ಲದ ವಿಷಯಗಳ ಬಗ್ಗೆ ತುಸು ತಾಳ್ಮೆಯಿಂದ- ಸಂಶೋಧನಾ ಮನೋಭಾವದಿಂದ ಬರೆಯಬಹುದಾದ ಪತ್ರಕರ್ತರಿಲ್ಲದ ಈ ಸಮಯದಲ್ಲಿ - ಅದೂ ಪ್ರಿಂಟ್ ಮೀಡಿಯಾದ ಸಂದರ್ಭದಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿ ನನ್ನ ಮಟ್ಟಿಗೆ ಬೆಚ್ಚನೆಯ ಬದಲಾವಣೆಯನ್ನು ಸೂಚಿಸಿದ್ದರಿಂದ ತುಂಬಾ ಹಿಡಿಸಿತು ಅನ್ನಿಸುತ್ತದೆ.

ನೀಲಿಮಾ ಅವರ ಕಾದಂಬರಿ ಪ್ರಾರಂಭವಾಗುವುದು ದೆಹಲಿಯ ಪತ್ರಿಕಾ ಕಾರ್ಯಾಲಯಕ್ಕೆ ಬರುವ ಸುದ್ದಿಯನ್ನು ಹೇಗೆ ವಿಶ್ಲೇಶಿಸಬೇಕು - ಅನ್ನುವ ಪ್ರಶ್ನೆಯನ್ನು ಹಿಡಿದು. ಯಾವುದೋ ದೂರದ ಗ್ರಾಮದಲ್ಲಿ ಒಂದು ಸಾವು ಉಂಟಾಗಿದೆ. ಸಾವು ಸಹಜವಾದ ಸಾವಲ್ಲ. ಸತ್ತಿರುವುದೂ ಸಾಧಾರಣ ವ್ಯಕ್ತಿಯಲ್ಲ. ಆಗಿರುವುದು ಒಬ್ಬ ಬಡ್ಡಿವ್ಯಾಪಾರಿಯ ದುರ್ಮರಣ. ಆತನ ಶವ ಊರ ನಡುವಿನ ದೀಪದ ಕಂಬದಿಂದ ನೇತಾಡುತ್ತಿದೆ. ಈ ರೀತಿಯ ಸುದ್ದಿ ಸಹಜವಾಗಿ ಒಂದು ರೀತಿಯ ರಂಜಕತೆಯನ್ನುಂಟು ಮಾಡುವುದು ನಿರೀಕ್ಷಿತವೇ. ಇದು ಓದುಗರ ಗಮನವನ್ನು ಆಕರ್ಷಿಸುವ ಮುಖ್ಯಸುದ್ದಿಯಾಗಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿ - ಆ ಮರಣದ ಹಿನ್ನೆಲೆಯನ್ನು ವಿವರಿಸುವ ಕೆಲಸ, ಅದರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಒದುಗರಿಗೆ ಒಂದು ಸೂಚನೆ ಕೊಡುವ ಕಾರ್ಯಧರ್ಮ ಪತ್ರಕರ್ತರದ್ದು. ಅಲ್ಲಿಗೆ ಹೋಗುವ ತಾಳ್ಮೆ, ಅಲ್ಲಿಂದ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಶಿಸಿ, ವರದಿಮಾಡುವ, ಅದೇ ಕಾಲಕ್ಕೆ ಒದುಗರ ಗಮನವನ್ನೂ ಹಿಡಿದಿಡುವ, ಹಾಗೂ ತನ್ನ ಮೇಲಿನವರಿಂದ ಮೆಚ್ಚುಗೆಯನ್ನೂ ಪಡೆವ ಕೆಲಸವನ್ನು ಆ ಬೀಟ್ ಪಡೆದ ಪತ್ರಕರ್ತ ಮಾಡಬೇಕಾಗುತ್ತದೆ.

ಹೀಗೆ ಪ್ರಾರಂಭವಾಗುವ ಕಾದಂಬರಿ, ಅನೇಕ ಸಮಕಾಲೀನ ವಿಷಯಗಳನ್ನು ಉದ್ವೇಗರಹಿತವಾಗಿ ಚರ್ಚಿಸುತ್ತದೆ. ಫಲಕ್ ಅನ್ನುವ ಪತ್ರಕರ್ತನಿಗೆ ಈ ಮರಣದ ಹಿನ್ನೆಲೆಯನ್ನು ಕಂಡುಹಿಡಿವ, ಆ ಬಗ್ಗೆ ವರದಿಮಾಡುವ ಕೆಲಸವನ್ನು ಒಪ್ಪಿಸಲಾಗುತ್ತದೆ. ಆತ ತನ್ನ ವೃತ್ತಿಯ ಏಣಿಯನ್ನು ತ್ವರಿತವಾಗಿ ಏರಬೇಕೆನ್ನುವ ತವಕದಲ್ಲಿರುವ ಮಹತ್ವಾಕಾಂಕ್ಷೀ ವರದಿಗಾರ. ಈಗಾಗಲೇ ಅವನು ತನ್ನ ಪತ್ರಿಕೆಯಲ್ಲಿ ಪಡೆಯಬೇಕಾದ ಬಡ್ತಿಯನ್ನು ಪಡೆದಿದ್ದಾನೆ. ಮುಂದಿನ ಬಡ್ತಿ ಪಡೆದು ಯಶಸ್ವೀ ಪತ್ರಕರ್ತನಾಗಲು ಆತ ಏನು ಮಾಡಲೂ ಸಿದ್ಧ. ಯಶಸ್ವೀ ಪತ್ರಕರ್ತನಿಗೂ ಉತ್ತಮ ಪತ್ರಕರ್ತನಿಗೂ ವ್ಯತ್ಯಾಸವಿರಬಹುದೆನ್ನುವ ಸಾಧ್ಯತೆಯನ್ನು ಆ ಕಾದಂಬರಿಯಲ್ಲಿ ಸೂಚಿಸುವವಳು ತನ್ನ ಮಾಜಿ ಗೆಳತಿ - ಹಾಗೂ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬಾಕೆ. ಒಂದು ರೀತಿಯಲ್ಲಿ ಆಕೆ ಕಾದಂಬರಿಯುದ್ದಕ್ಕೂ ಫಲಕ್ ನ ಆತ್ಮಸಾಕ್ಷಿಯ ಪ್ರತೀಕವಾಗಿ ಆಗಾಗ ತಲೆಹಾಕುತ್ತಾಳೆ. ಆಕೆಯ ದೃಷ್ಟಿಯಲ್ಲಿ ಪತನಗೊಳ್ಳದೆಯೇ ತಾನು ಹೇಗೆ ಯಶಸ್ವಿಯಾಗುವುದು - ಅರ್ಥಾತ್ ಆತ್ಮವನ್ನು ಮಾರಿಕೊಳ್ಳದೆಯೇ ಹೇಗೆ ವೃತ್ತಿಯಲ್ಲಿ ಮೇಲೇರುವುದು ಅನ್ನುವ ಪ್ರಶ್ನೆ ಫಲಕ್ ನನ್ನು ಕಾದಂಬರಿಯುದ್ದಕ್ಕೂ ಕಾಡುತ್ತದೆ. ಆಕೆಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲವಾದರೂ, ಆತನಿಗೆ ಮಾತ್ರ ಯಶಸ್ಸಿನ ಚಡಪಡಿಕೆ ಇದ್ದೇ ಇರುತ್ತದೆ.

ಇಲ್ಲಿ ಒಬ್ಬ ಬಡ್ಡಿವ್ಯಾಪಾರಿಯ ಸಾವು ಅದರ ಹಿಂದಿನ ಕಾರಣಗಳನ್ನು ಹುಡುಕುವ ಪತ್ತೆದಾರಿಕೆಯು ಒದುಗರನ್ನು ಹಿಡಿದಿಡುವ ಒಂದು ಸೂತ್ರವಾಗಿದೆ. ಈ ಪತ್ತೆದಾರಿಕೆಯ ಕುತೂಹಲವನ್ನು ಬುನಾದಿಯಾಗಿಟ್ಟುಕೊಂಡು ಲೇಖಕಿ ಅನೇಕ ಕಷ್ಟದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ ನಾವುಗಳು ಬರೇ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ಆದರೆ ಯಾವ ಬಡ್ಡಿ ವ್ಯಾಪಾರಿಯ ಆತ್ಮಹತ್ಯೆಯೂ ಕೇಳಿಬಂದಿಲ್ಲ? ಹಾಗೆ ಒಬ್ಬ ಬಡ್ಡಿವ್ಯಾಪಾರಿಯ ಮರಣವಾದಾಗ ಅದಕ್ಕೆ ಪತ್ರಿಕೆಗಳು ಎಷ್ಟು ಸ್ಥಳವನ್ನು ಕಾಯ್ದಿರಿಸಬೇಕು? ಒಬ್ಬ ಬಡ್ಡಿವ್ಯಾಪಾರಿಯ ಸಾವು ಅನೇಕ ರೈತರ ಆತ್ಮಹತ್ಯೆಗಿಂತ ಹೆಚ್ಚಿನ ಸುದ್ದಿಪುಟಗಳನ್ನ ಆಕ್ರಮಿಕೊಳ್ಳುವುದಕ್ಕೆ ಕಾರಣವೇನಿರಬಹುದು? ಇದರಲ್ಲಿರಬಹುದಾದ ಪತ್ರಿಕಾ ವ್ಯಾಪರದ "ಧರ್ಮ" ಏನು? ಈ ಎಲ್ಲ ಪ್ರಶ್ನೆಗಳನ್ನೂ ನೀಲಿಮಾ, ಕೇಳದೆಯೇ ಕೇಳುತ್ತಾರೆ.

ಹೀಗೆ ಒಬ್ಬ ಪತ್ರಕರ್ತನ ಆಂತರಿಕ ತಲ್ಲಣಗಳನ್ನು ಮನಸ್ಸಿನ ವಿರೋಧಾಭಾಸಗಳನ್ನು ಓದುಗರ ಮುಂದಿಡುತ್ತಲೇ, ಸಹಜವಾಗಿ ಕೃಷಿಯ ಲಾಭದಯಕತೆ, ಗ್ರಾಮಜೀವನದಲ್ಲಿನ ಇತರ ತಲ್ಲಣಗಳು, ಸ್ಥಳೀಯ ಸಾಮಾಜಿಕ ಪದ್ಧತಿಯ ಪದರಗಳನ್ನು ನೀಲಿಮಾ ಬಿಚ್ಚಿಡುತ್ತಾ ಹೋಗುತ್ತಾರೆ. ಪತ್ರಕರ್ತರಿಗೆ ತಮ್ಮ ವೃತ್ತಿಜೀವನದಲ್ಲಿ ಜೀವನದಲ್ಲಿ ಕಂಡೂ ಪತ್ರಿಕಾ ವೃತ್ತಿಯ ಮಿತಿಗಳಲ್ಲಿ ನಿರೂಪಿಸಲಾಗದ ಕಥೆಗಳನ್ನು ಒಂದೊಂದಾಗಿ ಈ ಕಾದಂಬರಿಯ ಮೂಲಕ ಆಕೆ ಬಿಚ್ಚುತ್ತಾ ಹೋಗುತ್ತಾರೆ.

ಮೂಲಭೂತವಾಗಿ ಬಡ್ಡಿವ್ಯಾಪಾರಿಗಳೆಂದರೆ ಸಿಕ್ಕಸಿಕ್ಕ ಜನರನ್ನೆಲ್ಲಾ ಶೋಷಣೆಗೊಳಪಡಿಸಿ, ಅವರ ರಕ್ತವನ್ನು ಹೀರಿ ಜೀವನ ಮಾಡುವವರು ಅನ್ನುವ ಭಿತ್ತಿಯನ್ನು ನಾವೆಲ್ಲಾ ಹೊತ್ತು ತಿರುಗುತ್ತಿರುತ್ತೇವೆ. ಹೀಗಾಗಿ, ಒಂದು ಗ್ರಾಮದಲ್ಲಿ ಊರಿನ ಮಧ್ಯೆ ಒಬ್ಬ ಬಡ್ಡಿವ್ಯಾಪಾರಿಯ ಶವ ದೀಪದ ಕಂಬದಿಂದ ನೇತಾಡುತ್ತಿದೆಯೆಂದರೆ ಅದರಲ್ಲಿ ಯಾವುದೋ ರೀತಿಯ ರಕ್ತಕ್ರಾಂತಿಯ ಮೊದಲ ಬೀಜಗಳು ಕಾಣಬಹುದು ಅನ್ನುವ ಭಾವನೆ ಸಹಜವೇ ಆಗಿದೆ. ಹೀಗಾಗಿ ಈ ರೀತಿಯ ಕಥೆ ಒದುಗರ ಆಸಕ್ತಿಯನ್ನು ಹಿಡಿದಿಡುತ್ತದೆ ಎನ್ನುವುದನ್ನು ಪರಿಗಣಿಸಿ, ಇದರ ಸುತ್ತಲೂ ಆಕೆ ತನ್ನ ಕಥನವನ್ನು ಹಣೆಯುತ್ತಾರೆ. ಹೀಗೆ, ಗ್ರಾಮ್ಯ ಜೀವನದಲ್ಲಿರುವ ಅನೇಕ ಪದರಗಳನ್ನು ಆಕೆ ಬಿಚ್ಚಿಡುವುದರಲ್ಲಿ ಸಫಲರಾಗುತ್ತಾರೆ. ಹೀಗಾಗಿಯೇ ನಗರ ಪ್ರದೇಶದಲ್ಲಿ ಬದುಕುವವರು ಕೃಷಿ ಮತ್ತು ಗ್ರಾಮ್ಯ ಜೀವನದ ಬಗ್ಗೆ ತಲೆಯಲ್ಲಿ ತುಂಬಿಕೊಂಡಿರಬಹುದಾದ ಸ್ಟೀರಿಯೋಟೈಪ್ ಗಳನ್ನೂ ಮರುಪರೀಕ್ಷಿಸುವುದು ಈ ಕಾದಂಬರಿಯಿಂದಾಗಿ ಸಾಧ್ಯವಾಗುತ್ತದೆ.

ಆದರೆ ನೀಲಿಮಾಗೆ ಕಥನದ ಹಿಡಿತವಿದ್ದರೂ, ಕಥೆ ಕಟ್ಟುವ ಕಲೆಯಿನ್ನೂ ಪೂರ್ತಿಯಾಗಿ ಒಗ್ಗಿ ಬಂದಿಲ್ಲವೇನೋ. ಆದ್ದರಿಂದಲೇ ಈ ಕಾದಂಬರಿ ಸೆಳೆಯಬೇಕಾದಷ್ಟು ಗಮನವನ್ನು ಸೆಳೆದಿಲ್ಲವೇನೋ. ಕಥನದ ಪ್ರಕ್ರಿಯೆಯಲ್ಲಿ - ಎತ್ತಿಕೊಂಡ ಪ್ರತಿ ವಿಷಯಕ್ಕೂ ಒಂದು ಅಂತ್ಯವಿರಬೇಕು, ಪ್ರತಿ ಪಾತ್ರವೂ ಒಂದು ಹಂತವನ್ನು ತಲುಪಿ ಪರಿಪೂರ್ಣವಾಗಬೇಕು ಅನ್ನುವ ನಂಬಿಕೆಯ ತುರ್ತು ಈ ಕಥನಕ್ಕೆ ಮುಳುವಾಗುತ್ತದೆ. ಸಹಜವಾಗಿಯೇ ಕಥೆ/ಕಾದಂಬರಿ ಬರೆಯುವವರಿಗೂ, ಪತ್ರಿಕಾ ವರದಿಯ ಶಿಸ್ತನಡಿಯಲ್ಲಿ ಬರವಣಿಗೆ ಮಾಡುತ್ತಿರುವವರಿಗೂ ಇರಬಹುದಾದ ವ್ಯತ್ಯಾಸ ನಮಗೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪತ್ರಿಕಾ ವರದಿಯಲ್ಲಿ ಸಾಮಾನ್ಯವಾಗಿ ಹುಡುಕುವ ತಕ್ಷಣ-ಸಮಾಧಾನ, ಈಕ್ಷಣದ ಉತ್ತರ, ಈಕ್ಷಣದ ಸತ್ಯದ ತುರ್ತು ಕಾದಂಬರಿಯ ಹರವಿಗಿರುವುದಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಎಲ್ಲವಿಚಾರಗಳನ್ನು ಅರಗಿಸಿ, ಮಥಿಸಿ ಒಂದು ಗುಳಿಗೆಯಲ್ಲಿ ಎಲ್ಲವನ್ನೂ ಅಡಕ ಮಾಡುವ ತುರ್ತೂ ಲೇಖಕಿಗಿರುವುದಿಲ್ಲ. ಕಾದಂಬರಿಯ ಹರವಿನಲ್ಲಿ ಈ ಎಲ್ಲ ಮಥನದ ಯಾನವನ್ನು ಓದುಗನೊಂದಿಗೇ ಲೇಖಕಿ ಕೈಗೂಳ್ಳಬಹುದು. ಹೀಗಾಗಿ ಅಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವದಲ್ಲಿರುವ ಅನೇಕ ಮಜಲುಗಳನ್ನು, ಗೊಂದಲಗಳನ್ನೂ, ವೈವಿಧ್ಯವನ್ನೂ ಬಿಡಿಸಿಡಲು ಕಾದಂಬರಿಯ ಹರವಿಗೆ ಸಾಧ್ಯವಿದೆ. ನೀಲಿಮಾ ಈ ರೀತಿಯ ಭಿನ್ನತೆಯನ್ನು ಫಲಕ್ ನ ಪಾತ್ರದಲ್ಲಿ ತರಲು ಸಫಲರಾದರೂ ಮಿಕ್ಕ ಪಾತ್ರಗಳನ್ನು ತುಂಬುವುದರಲ್ಲಿ ತುಸು ವಿಫಲರೇ ಆಗುತ್ತಾರೆ. ಉದಾಹರಣೆಗೆ ದೀಪದ ಕಂಬಕ್ಕೆ ಏರಿದ ಬಡ್ಡಿವ್ಯಾಪಾರಿ ದುಷ್ಟನಲ್ಲವೇ ಅಲ್ಲ, ಬದಲಿಗೆ ಮಿಕ್ಕ ಬಡ್ಡಿವ್ಯಾಪಾರಿಗಳ ಹಾಗಿರದೇ ಕರುಣಾಳುವಾಗಿದ್ದ ಎನ್ನುವ ವಿಚಾರ ಕಾದಂಬರಿಯ ಮೊದಲ ಭಾಗದಲ್ಲಿಯೇ ಬರುತ್ತದೆ. ಹಾಗಾದರೆ ಅವನಿಗೆ ಈ ದುರ್ಮರಣ ಬಂದದ್ದು ಯಾಕೆ - ಅದಕ್ಕೆ ಕಾದಂಬರಿಯ ಅಂತ್ಯದಲ್ಲಿ ವಿವರಣೆಯಿದೆಯಾದರೂ, ಆ ವಿವರಣೆ ತೀರಾ ಬಾಲಿಶ ಮತ್ತು ಒಳ್ಳೆಯತನದ ಮಹಾಪೂರದಿಂದ ಕೂಡಿದ್ದಾಗಿದೆ. ಹೀಗಾಗಿಯೇ ಆ ಸಾವಿನಿಂದ ಆಗಬಹುದಾದ ಲೇಖಕಿಯ ಉದ್ದೇಶಿತ ಪರಿಣಾಮ ನಿಜಕ್ಕೂ ಆಗಬಹುದೇ ಅನ್ನುವ ಅನುಮಾನ ಓದುಗನನ್ನು ಕಾಡುತ್ತದೆ. ಸತ್ತ ಬಡ್ಡಿವ್ಯಾಪಾರಿಯ ಪಾತ್ರದ ಹಲವು ಮಜಲುಗಳನ್ನು ಆಕೆ ಇತರರ ನೆನಪುಗಳ ಮೂಲಕ ತರಲು ಪ್ರಯತ್ನಸಿತ್ತಾರಾದರೂ ಆ ಪಾತ್ರದ ತಲ್ಲಣಗಳು ಕಾದಂಬರಿಯಲ್ಲಿ ಎಲ್ಲೂ ಹೊರಬರುವುದೇ ಇಲ್ಲ. ಹೀಗಾಗಿ ಆ ಪಾತ್ರ ಒಂದೇ ಆಯಾಮದ ಪಾತ್ರದಂತೆ ಕಂಡುಬಿಡುತ್ತದೆ.

ಒಳಿತು ಮಾಡುತ್ತಿದ್ದ ಈ ಮನುಷ್ಯ ಹೀಗೆ ದುರ್ಮರಣ ಹೊಂದಿದರೆ, ಕೆಡುಕು ಮಾಡುವವರಿಗೆ ಇನ್ನೂ ದಾರುಣವಾದ ಸಾವು ಕಾದಿರಬಹುದೆಂಬ ಬೆದರಿಕೆಯ ಸೂತ್ರ ಕಥೆಯುದ್ದಕ್ಕೂ ಇದೆಯಾದರೂ - ಅದೇ ಪತ್ರಿಕೆಯಲ್ಲಿ ಮುಖ್ಯ ಸುದ್ದಿಯಾಗಬಹುದೆಂದು ಅನ್ನಿಸಿದರೂ, ಅದರಿಂದ ಆಗಬಹುದಾದ ಮಿಕ್ಕ ಫಲಿತಗಳ ಬಗ್ಗೆ ನೀಲಿಮಾ - ಅಥವಾ ಅವರ ಪಾತ್ರಗಳು ಯೋಚಿಸುವುದೇ ಇಲ್ಲ. ಹೀಗಾಗಿ ಕಥೆಗೆ ಇರಬೇಕಾದ ಹಲವು ಮಗ್ಗಲುಗಳು ಒಂದು ಸತ್ಯ ಸುಳ್ಳಿನ ನಡುವಿನ - ಹೌದೋ ಇಲ್ಲವೋ ಅನ್ನುವ ಬೈನರಿಯಾಗಿ ನಿಂತುಬಿಡುತ್ತದೆ. ಜೀವನದ ಸಂಕೀರ್ಣತೆ ಒಳಿತು-ಕೆಡುಕಿನ ಹೌದು-ಇಲ್ಲದ ಈ ಬೈನರಿ ವಿಧಾನದಲ್ಲಿ ಗ್ರಾಹ್ಯವಾಗುವುದಿಲ್ಲವಾದ್ದರಿಂದಲೇ ಅದ್ಭುತವಾಗಬಹುದಾಗಿದ್ದ ಈ ಬೆಚ್ಚನೆಯ ಬರವಣಿಗೆ ಬರೇ ಉತ್ತಮ ಬರವಣಿಗೆ ಮಾತ್ರವಾಗಿ ಸೊರಗಿಬಿಡುತ್ತದೆ.

ನೀಲಿಮಾ ಕಾದಂಬರಿಯನ್ನು ಓದಿದಾಗ ಒಂದು ಉತ್ತಮ ಕಥೆಯನ್ನು ಸಾಧಾರಣವಾಗಸುವಲ್ಲಿ ಕಥನ ತಂತ್ರದ ಪಾತ್ರ ಮಹತ್ವದ ಬಗ್ಗೆ ಆಲೋಚನೆಗಳು ಸಹಜವಾಗಿಯೇ ಬಂದುವು. ಯಾವುದೇನೇ ಇದ್ದರೂ, ಈ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ, ಕೋರ್ಟುಗಳಿಗಿಂತ ಮುನ್ನವೇ ವಿಷಯಗಳನ್ನು ಎತ್ತಿ ಜನರ ಕಣ್ಣೆದುರಿಗೆ ಐದು ಕಮರ್ಷಿಯಲ್ ಬ್ರೇಕುಗಳನಡುವೆ ನಾಲ್ಕು ಪ್ರಶ್ನೆಗಳನ್ನೊಗೆದು ತೀರ್ಪು ನೀಡುತ್ತಿರುವ ಈ ದೃಶ್ಯಮಾಧ್ಯಮದ ಧಾಳಿಯ ನಡುವೆ ಹೀಗೂ ವಿಚಾರಗಳನ್ನು ವಿಶ್ಲೇಷಿಸಬಹುದೆನ್ನುವ ಪತ್ರಿಕಾಧರ್ಮವನ್ನು ಒಂದು ರೀತಿಯಿಂದ ಎತ್ತಿ ಹಿಡಿಯುವ ಈ ಕಾದಂಬರಿ ಇನ್ನಷ್ಟು ಚರ್ಚಿತಗೊಳ್ಳಬೇಕಿತ್ತು ಅನ್ನಿಸುತ್ತದೆ. ಕಥನ ಸಂಭ್ರಮವಿಲ್ಲದಿದ್ದಾಗ್ಯೂ ಕಟ್ಟುವ ಕಲೆಯಲ್ಲಿ ನ್ಯೂನತೆಗಳಿದ್ದಾಗ್ಯೂ ಈ ಕಾದಂಬರಿ ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗಿಯೇ ಉಳಿದಿದೆ. ಆದರೆ ಪತ್ರಕರ್ತೆ ನೀಲಿಮಾ ತನ್ನ ವೃತ್ತಿಯಲ್ಲಿ ಕಂಡುಕೊಂಡ ಲಿಮಿಟೇಷನ್ನನ್ನು ಕಾದಂಬರಿಯ ಕಥನ ತಂತ್ರದ ಮೂಲಕ ಭೇದಿಸಿದ ದಿನ ಹಚ್ಚಿನ ಚರ್ಚಿತರಾಗಬಹುದೆಂಬ ನಂಬಿಕೆ, ಹಾಗೂ ಆಕೆ ಉತ್ತಮ ಪತ್ರಕರ್ತೆಯಿಂದ ಉತ್ತಮ ಕಾದಂಬರಿಗಾರ್ತಿಯಾಗಿ ಬೆಳೆಯಲು ಸಾಧ್ಯ ಎನ್ನುವುದು ಅವರ ಬರವಣಿಗೆ ಸೂಚಿಸುತ್ತದೆ.


No comments:

Post a Comment