ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.
ಸುಧೀರ್ ಶಿಕಾಗೋ ನಗರದಲ್ಲಿನ ಬಡತನವನ್ನು [ಅರ್ಬನ್ ಪಾವರ್ಟಿ] ಅರ್ಥಮಾಡಿಕೊಳ್ಳಲು ಅದರ ಬಗ್ಗೆ ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆಯಲೆಂದು ಆ ನಗರದ ರಾಬರ್ಟ್ ಟೇಲರ್ ಹೋಮ್ಸ್ ಕಡೆಗೆ ಮೊದಲಿಗೆ ಹೊರಡುತ್ತಾರೆ. ಅವರು ಶುದ್ಧ ರಿಸರ್ಚ್ ವಿದ್ಯಾರ್ಥಿಯಾಗಿ ಕೈಯಲ್ಲಿ ಒಂದು ಪ್ರಶ್ನಾವಳಿಯನ್ನು ಹಿಡಿದು ಅದನ್ನು ಒಂದು ರಟ್ಟಿನ ಕ್ಲಿಪ್ಪಿನ ಕೆಳಗೆ ತೂರಿಸಿ, ಅಲ್ಲಿನ ಮನೆಗಳ ಪಟ್ಟಿಯಿಂದ ತಮ್ಮ ಸಂಶೋಧನಾ ನಿಯಮಾವಳಿಯನುಸಾರ ಯಾರನ್ನೆಲ್ಲಾ ಮಾತನಾಡಿಸಬೇಕೆಂಬ ಯಾದಿಯನ್ನು ತಯಾರು ಮಾಡಿ, ಆ ಜನವಸತಿಯನ್ನು ಪ್ರವೇಶಿಸುತ್ತಾರೆ. ಸಂಶೋಧನಾ ಪದ್ಧತಿಯ ದೃಷ್ಟಿಯಿಂದ ಅವರ ತಯಾರಿಯಲ್ಲಿ ಯಾವ ನ್ಯೂನತೆಯೂ ಇಲ್ಲವಾದರೂ ಈ ಪದ್ಧತಿಯ ಅರ್ಥಹೀನತೆಯನ್ನು ಸುಧೀರ್ ಶೀಘ್ರದಲ್ಲೇ ಗ್ರಹಿಸುತ್ತಾರೆ. ಇಲ್ಲ - ಸುಧೀರ್ ಪದ್ಧತಿಯ ಅರ್ಥಹೀನತೆಯನ್ನು ಹಿಡಿದು ಲೇವಡಿ ಮಾಡುವುದಿಲ್ಲ. ಸರ್ವೇ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ರೀತಿಯನ್ನು ಅವರು ಟೀಕಿಸುವುದೂ ಇಲ್ಲ. ಆದರೆ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಬರಬಹುದಾದ ಗ್ರಹಿಕೆ ಮತ್ತು ಈ ಗ್ರಹಿಕೆ ಸರಕಾರೀ ನೀತಿಯನ್ನು ಯಾವರೀತಿಯಿಂದ ರೂಪಿಸಬಹುದು ಹಾಗೂ ಅದರ ಮಿತಿಗಳೇನು ಅನ್ನುವುದನ್ನು ಅವರು ಸೂಕ್ಷ್ಮವಾಗಿ ನಮ್ಮ ಮುಂದಿಡುತ್ತಾರೆ. ಅದಕ್ಕೆ ಕಾರಣ: ನಾವು ಎದುರಿಸುತ್ತಿರುವ ಸಮಸ್ಯೆ ಅತೀ ಜಟಿಲವಾದದ್ದು, ಅನೇಕ ಪದರಗಳನ್ನೂ, ಒಳಕಥೆಗಳನ್ನೂ ಒಳಗೊಂಡದ್ದು. ಅದಕ್ಕೆ ನಾವು ಕಂಡುಕೊಳ್ಳುತ್ತಿರುವ ಉತ್ತರ ಸರಕಾರಿ ನೀತಿಗೆ ಅಡಕವಾಗಬೇಕಿದ್ದರೆ ಸರಳವಾಗಿಯೂ, ಅನೇಕ ಜಾಗಗಳಲ್ಲಿ ಅಮಲಾಗುವಷ್ಟು ಸಾಮಾನ್ಯವಾಗಿಯೂ ಇರಬೇಕು. ಹೀಗಾಗಿ ಸರಳೀಕರಿಸಿದ ಈ ಉತ್ತರಗಳ ಮಿತಿಯನ್ನು ಮತ್ತು ಅವುಗಳಿಂದ ಆಗುವ ಅಪಾಯ/ನಷ್ಟವನ್ನು ಸುಧೀರ್ ಎತ್ತಿ ತೋರಿಸುತ್ತಾರೆ. ಪುಸ್ತಕವನ್ನು ಅವರು ಅಂಕಿ-ಸಂಖ್ಯೆಯಾಧಾರದ ಮೇಲೆಯೇ ಸಂಶೊಧನೆ ನಡೆಸುವ "ಕ್ವಾಂಟಿಟೇಟಿವ್" ಜನರಿಗೂ, ಸಂಸ್ಕೃತಿಯ - ಸಂಬಂಧಗಳ ಚೌಕಟ್ಟಿನಲ್ಲಿ ಸಂಶೋಧನೆ ನಡೆಸುವ "ಎಥ್ನೋಗ್ರಾಫರ್ಸ್" ಗೂ ಇರುವ ವ್ಯತ್ಯಾಸವನ್ನು ಚರ್ಚಿಸುತ್ತಲೇ ಪ್ರಾರಂಭಿಸಿದರೂ ತಾವೇ ಮೊದಲಿಗೆ ಪ್ರಶ್ನಾವಳಿಯನ್ನು ಹಿಡಿದು ಸಂಖ್ಯಾಶಾಸ್ತ್ರದ ಮೂಲಕ ಆ ಬಡವರ ಕೇರಿಯನ್ನು ಪ್ರವೇಶಿಸಿದರು ಎನ್ನುವುದನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತುಬಿಡುತ್ತಾರೆ.
ಸುಧೀರ್ ಒಂದು ಪ್ರಶ್ನಾವಳಿಯನ್ನು ಹಿಡಿದು ರಾಬರ್ಟ್ ಟೇಲರ್ ಹೋಮ್ಸ್ ಕೇರಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನು ವಿವರಿಸುವ ರೀತಿಯನ್ನು ನಾವು ಗ್ರಹಿಸಿದರೆ ನಮಗೆ ಸುಧೀರ್ ನಿಜಕ್ಕೂ ಅಂಥ ಒಂದು ಮಳ್ಳ ಪ್ರಶ್ನಾವಳಿಯನ್ನು ಹಿಡಿದು ಹೊರಟಿದ್ದರೇ ಅಥವಾ ಅದನ್ನು ನಾಟಕೀಯವಾಗಿಸಿ ತಾವು ಅಧ್ಯಯನ ಮಾಡುತ್ತಿರುವ ವಿಷಯದ ಜಟಿಲತೆಯನ್ನು ನಮಗೆ ವಿವರಿಸುತ್ತಿದ್ದಾರೆಯೇ ಅನ್ನುವ ಅನುಮಾನ ಬರುತ್ತದೆ.
ನಾನು ಹೀಗೆ ಹೇಳುವುದಕ್ಕೆ ಕಾರಣ ಅವರು ಆ ಬಿಲ್ಡಿಂಗಿಗೆ ಪ್ರವೇಶಿಸಿ, ಅಲ್ಲಿ ವಾಸವಾಗಿರುವವರನ್ನು ಕೇಳಿದ್ದರೆನ್ನಲಾದ ಮೊದಲ ಪ್ರಶ್ನೆ: “How does it feel to be black and poor?” [ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ? [p.14] ಇದಕ್ಕೆ ಐದು ಉತ್ತರಗಳಲ್ಲಿ ಒಂದನ್ನು ಆ ವ್ಯಕ್ತಿ ಆರಿಸಬೇಕು: "ತುಂಬಾ ಹೀನ, ಕೆಟ್ಟದನ್ನಿಸುತ್ತದೆ, ಪರವಾಗಿಲ್ಲ, ಉತ್ತಮ, ಅತ್ಯುತ್ತಮ". ಬಡತನವನ್ನು ಅರ್ಥಮಾಡಿಕೊಳ್ಳಲು ಸುಧೀರ್ ನಿಜಕ್ಕೂ ಈ ರೀತಿಯ ಪ್ರಶ್ನೋತ್ತರಗಳಿದ್ದ ಪ್ರಶ್ನಾವಳಿಯನ್ನು ತೆಗೆದು ಹೋಗಿದ್ದರೆ ಅದರ ನಿರರ್ಥಕತೆ ನಮ್ಮ ಕಣ್ಣಿನೆದುರಿಗೇ ಎದ್ದು ನಿಲ್ಲುತ್ತದೆ. ಈ ರೀತಿಯ ಪ್ರಶ್ನೆಗೆ ಗ್ಯಾಂಗುಗಳಲ್ಲಿ ಕೆಲಸ ಮಾಡುವ ಕತ್ತಿ ಝಳಪಿಸುವ ರೌಡಿ "ಕೇಯಿಸಿಕೋ, ನಿನಗೆ ಇದೇನು ಕೇಯಿಸಿಕೊಳ್ಳುವ ಮಕ್ಕಳಾಟ ಅನ್ನಿಸುತ್ತಿದೆಯಾ? [“Fuck you!... You got to be Fucking kidding me…..”] ಅನ್ನುವ ಪ್ರಶ್ನೆಯನ್ನು ಕೇಳಿದರೆ, ಈ ಪ್ರಶ್ನಾವಳಿಯನ್ನು ನೋಡಿದ ಸಾರಸ್ವತ ಲೋಕ ರೌಡಿ ಉಪಯೋಗಿಸಿದ ಪದಗಳನ್ನು ಉಪಯೋಗಿಸಲಾರದಾದರೂ, ಅವರ ಭಾಷೇ ಶಿಷ್ಟವಾಗಿರುತ್ತದಾದರೂ, ಅವರುಗಳ ಪ್ರತಿಕ್ರಿಯೆಯ ಹಿಂದಿನ ಭಾವನೆಗಳು ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ.
ಮುಂದೆ ಜೆ.ಟಿ ಎನ್ನುವ ವ್ಯಕ್ತಿಯ ಜೊತೆಗಿನ ಒಡನಾಟದಲ್ಲಿ ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಪ್ರಶ್ನೆಯ ಹಿಂದಿನ ಜಟಿಲವಿಚಾರವನ್ನು ಅನ್ನುವುದು ನಮಗೆ ಕೂಡಲೇ ವೇದ್ಯವಾಗುತ್ತದೆ. ಆದರೂ ಒಬ್ಬ ಸಂಶೋಧಕ ಈ ರೀತಿಯ ಐದು ಅಂಶಗಳ ರೆನ್ಸಿಸ್ ಲಿಕರ್ಟ್ ಮಾಪನವನ್ನು ಹಿಡಿದು ಪ್ರಶ್ನಾವಳಿಯ ಜೊತೆಗೆ ಈ ಇಂಥ ಏರಿಯಾದಲ್ಲಿ ಓಡಾಡುತ್ತಿರುವುದನ್ನು ನೆನಸಿಕೊಂಡರೆ ನನಗೆ ನಡುಕ ಹುಟ್ಟುತ್ತದೆ!
ಬಹುಶಃ ಇದು ಸರ್ವೇ ವಿಧಾನದ ಬಗ್ಗೆ ಅವರು ಮಾಡುತ್ತಿರುವ ಅಣಕವಿರಬಹುದು. ಆದರೆ ಸುಧೀರ್ ಪ್ರವೇಶಿಸುವ ಜಟಿಲ ಜಗತ್ತಿಗೆ ಇದು ಒಂದು ಒಳ್ಳೆಯ ಪ್ರವೇಶ ಮಾರ್ಗ. ಪುಟ ೧೬ರರಲ್ಲಿ ಸುಧೀರನ್ನು ಗ್ಯಾಂಗುಗಳ ಪ್ರಪಂಚಕ್ಕೆ ಸೇರಿಸಲು ಸಹಾಯ ಮಾಡುವ ಜೆ.ಟಿ ಜೊತೆಗೆ ನಡೆಯುವ ಸಂಭಾಷಣೆ ಅವರ ಮನಸ್ತತ್ವವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.
"ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ?"
“ನಾನು ಕಪ್ಪುಬಣ್ಣದವನಲ್ಲ” ಆತ ಮಿಕ್ಕವರನ್ನು ನೋಡುತ್ತಾ ಎಲ್ಲ ಅರಿತವನಂತೆ ಉತ್ತರಿಸಿದ.
“ಹಾಗಾದರೆ ಆಫ್ರಿಕನ್ ಅಮೆರಿಕನ್ ಆಗಿ, ಬಡವರೂ ಆಗಿರುವುದು ನಿಮಗೆ ಹೇಗನ್ನಿಸುತ್ತದೆ?” ನಾನು ಬಣ್ಣದ ಮಾತಾಡಿ ಆತನನ್ನು ಬೇಸರಗೊಳಿಸಿದ್ದೆ ಅಂದುಕೊಳ್ಳುತ್ತಾ ಕ್ಷಮೆಯಾಚಿಸುವ ಧ್ವನಿಯಲ್ಲಿ ಕೇಳಿದೆ.
“ನಾನು ಆಫ್ರಿಕನ್ ಅಮೆರಿಕನ್ ಅಲ್ಲ.... ನಾನೊಬ್ಬ ನಿಗ್ಗರ್"
……..
“ಈ ಕಟ್ಟಡದಲ್ಲಿರುವವರು ನಿಗ್ಗರ್ ಗಳು” ಆತ ಕಡೆಗೂ ಹೇಳಿದ “ಆಫ್ರಿಕನ್ ಅಮೆರಿಕನ್ನರು ಬಡಾವಣೆಗಳಲ್ಲಿರುತ್ತಾರೆ. ಆಫ್ರಿಕನ್ ಅಮೆರಿಕನ್ನರು ಕೆಲಸಕ್ಕೆ ಟೈ ಕಟ್ಟಿ ಹೋಗುತ್ತಾರೆ. ನಿಗ್ಗರ್‌ಗಳಿಗೆ ಕೆಲಸವೇ ಸಿಗುವುದಿಲ್ಲ.”
ಸರ್ವೆ ಮಾಡುವಾಗಲೂ ಪ್ರಶ್ನೆಗಳನ್ನು ರೂಪಿಸುವುದು ಹಾಗೂ ಅದನ್ನು ಕೇಳುವುದು ಹೇಗೆನ್ನುವ ಪಾಠವನ್ನು ಸುಧೀರ್‌ಗೆ ಈ ಮೊದಲ ಭೇಟಿಯೇ ಕಲಿಸಿಕೊಡುತ್ತದೆ. ಹೀಗಾಗಿಯೇ ಸರ್ವೇ ವಿಧಾನವನ್ನು ಬಿಟ್ಟು ಮುಂದುವರೆಯಲು ಈ ಅನುಭವವೇ ಆತನಿಗೆ ಸಾಕಾಗಿರಬೇಕು. ಆ ದಿನ ಸುಧೀರನ್ನು ಕೊಲ್ಲಲೂ ಅವರು ತಯಾರಿದ್ದರು. ಒಂದು ರಾತ್ರೆಗೆ ಅವನನ್ನು ತಮ್ಮಲ್ಲಿ ಬಂಧಿಸಿದ್ದರು. ಹಾಗೂ "ಈ ರೀತಿಯ ಮಳ್ಳ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲು ಅವರ ಜೊತೆಯಲ್ಲಿ ಕಾಲ ಕಳೆಯುವುದರ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಬಹುದು" ಅನ್ನುವ ಉಪದೇಶವನ್ನೂ ನೀಡಿದ್ದರು. ಈ ಅನುಭವವನ್ನು ಪಡೆದ ಯಾವುದೇ ಸಂಶೋಧಕ ಅಲ್ಲಿಂದ ಓಡಿ ತನ್ನ ವಿಶ್ವವಿದ್ಯಾಲಯದ ಬೆಚ್ಚನೆಯ ವಾತಾವರಣದಲ್ಲಿ ಅಡಗಿ ತನ್ನ ಸಂಶೋಧನೆಯ ವಿಷಯವನ್ನು ಬದಲಿಸುವುದು ಸಹಜವೇ ಆಗಿತ್ತು.
ಆದರೆ ಮಾರನೆಯ ದಿನ ಸುಧೀರ್ ಮತ್ತೆ ಜೆಟಿಯ ಬಳಿ ಹೋಗಿ ಅವರ ಜೊತೆ ಕಾಲಹರಣಮಾಡಿ ಅವರುಗಳನ್ನು ಅರ್ಥಮಾಡಿಕೊಳ್ಳಲು ತಯಾರಾಗುತ್ತಾರೆ. ಹೀಗೆ ಸುಧೀರ್ ಬಗ್ಗೆ ಸ್ಟೀವನ್ ಡಬ್ನರ್ ಬರೆದ ಮಾತುಗಳನ್ನು ಸುಧೀರ್ ನಿಜವಾಗಿಸುತ್ತಾರೆ. ಪುಸ್ತಕದ ಮುನ್ನುಡಿಯಲ್ಲಿ ಡಬ್ನರ್ ಸುಧೀರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: “ಸುಧೀರ್ ವೆಂಕಟೇಶ್ ಎರಡು ನ್ಯೂನತೆಗಳನ್ನು ಹೊತ್ತು ಜನ್ಮ ಪಡೆದಿದ್ದಾರೆ: ಒಂದು ಅತೀ ವಿಕಸಿತವಾದ ಕುತೂಹಲ ಮತ್ತು ವಿಕಸನಗೊಳ್ಳದ ಭಯದ ಭಾವ.” - ಸುಧೀರ್ ಅನುಭವಿಸಿದ ಘಟನೆಗಳನ್ನು ಗಮನಿಸಿದಾಗ ಈ ಎರಡೂ ನಿಜವೇ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ.
ಸುಧೀರ್ ಈ ವಸತಿಯನ್ನು ಮೊದಲ ಬಾರಿಗೆ ಪ್ರವೇಶಿಸುವುದು ೧೯೮೯ರಲ್ಲಿ. ಈ ಪುಸ್ತಕ ಅಲ್ಲಿಂದ ಆರಂಭವಾಗಿ ೧೯೯೬ರ ತನಕದ ಘಟನೆಗಳನ್ನು ವಿವರಿಸುತ್ತದೆ. ಸುಧೀರ್‌ಗೆ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಬಂದು ಶಿಕಾಗೋದಿಂದ ಹೊರಬೀಳಬೇಕಾಗಿ ಬಂದಾಗ ಈ ವಸತಿಯ ಜನರೊಂದಿಗಿನ ಸಂಬಂಧಗಳಿಗೂ ಸಹಜವಾಗಿಯೇ ತೆರೆ ಬೀಳುತ್ತದೆ. ಗಮ್ಮತ್ತಿನ ವಿಷಯವೆಂದರೆ ಆ ಸಮಯಕ್ಕೇ ಶಿಕಾಗೋ ಹೌಸಿಂಗ್ ಅಥಾರಿಟಿಯವರು ಈ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ನಿರ್ಧರಿಸುತ್ತಾರೆ. ಹೀಗೆ ಸುಧೀರ್ ಏಳು ವರ್ಷಗಳ ಕಾಲ ಒಡನಾಡಿದ ಜನಸಮೂಹವೂ ಅಲ್ಲಿಂದ ಹೊರಬಿದ್ದು ಬೇರೊಂದೆಡೆ ಕೆಲಸ, ಧಂಧೆ ಕಂಡುಕೊಂಡು ಹೊಸ ಸವಾಲುಗಳನ್ನೂ ಹೊಸ ಜೀವನೋಪಾಯವನ್ನೂ ಹುಡುಕಿ ಹೊರಡಬೇಕಾಗಿದೆ.
ಎಲ್ಲೆಡಯೂ ಬಡತನವಿದ್ದರೂ, ಹೀಗೆ ಮೂಲೆಗುಂಪಾಗಿರುವ ಜನಸಮೂಹ ಈ ರೀತಿಯ ಜೀವನ ಮತ್ತು ಈ ರೀತಿಯ ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಪ್ರಶ್ನೆಗಳನ್ನು ಉತ್ತರಿಸುವ ಯತ್ನವನ್ನೂ ಈ ಪುಸ್ತಕ ಮಾಡುವುದಿಲ್ಲ. ಈ ಸಮೂಹಗಳನ್ನು ನೋಡಿದಾಗ ನಮಗನ್ನಿಸುವುದು ಮಾದಕ ದ್ರವ್ಯಗಳನ್ನು ಮಾರುವುದೂ, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುವುದೂ ಅವರಿಗೆ ಸಹಜವಾಗಿಯೇ ಕರಗತವಾಗಿದೆ ಎಂದು. ಇದು ತಪ್ಪೆಂದು ಅವರಿಗೆ ಅನ್ನಿಸುವುದೇ ಇಲ್ಲ. ಅವರಿಗೆ ಬೇರೆ ಉದ್ಯೋಗಾವಕಾಶ ಇಲ್ಲ ಅನ್ನುವುದೂ ನಿಜವಲ್ಲವೇನೋ. ಯಾಕೆಂದರೆ ಆ ಸಮೂಹದಲ್ಲೇ ಕಾರು ರಿಪೇರಿ ಮಾಡುವವರೂ, ಪುಟ್ಟ ವ್ಯಾಪಾರಿಗಳೂ, ಜಗಳಗಳನ್ನು ಪರಿಹರಿಸುವವರೂ, ಕಿರಾಣೆಯಂಗಡಿಯನ್ನು ನಡೆಸುವವರೂ ಹೀಗೆ "ಗ್ಯಾಂಗ್"ಗೆ ಸಣ್ಣಪುಟ್ಟ ಸೇವೆಗಳನ್ನು ಒದಗಿಸುವವರನ್ನು ನಾವು ಕಾಣಬಹುದು. ಈ ರೀತಿಯ “ಗ್ಯಾಂಗು”ಗಳ ಕಥೆಯನ್ನು ರೋಮಾಂಚಕವಾಗಿ ವಿವರಿಸುವ ಕಥೆ-ಕಾದಂಬರಿಗಳಿವೆಯಾದರೂ, ಸುಧೀರ್ ಅವರ ಪುಸ್ತಕ ಈ ಕಥೆಗಳು ಸತ್ಯದೂರವಲ್ಲ ಅನ್ನುವುದನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ. ವ್ಯತ್ಯಾಸ: ಕಥೆಗಳಲ್ಲಿ ಬರುವ ಪಾತ್ರಗಳಷ್ಟು ವರ್ಣರಂಜಿತವಾಗಿ ನಿಜಜೀವನದ ಪಾತ್ರಗಳು ಇಲ್ಲ. ಅಷ್ಟೇ.
ಸುಧೀರ್ ಬರವಣಿಗೆಯಿಂದ ನಮಗೆ ವೇದ್ಯವಾಗುವುದೇನೆಂದರೆ ’ಬ್ಲಾಕ್ ಕಿಂಗ್ಸ್’ನಂತಹ ಗ್ಯಾಂಗುಗಳು ಸರಕಾರ ಮತ್ತು ಕಂಪನಿಯ ಮಿಶ್ರಣದ ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ಕೊನೆಯಲ್ಲಿ ಕಂಪನಿಯ ರೀತಿಯಲ್ಲಿ - ಮಾದಕ ಪದಾರ್ಥಗಳನ್ನು ಮಾರಾಟಮಾಡುವ ’ಸೇಲ್ಸ್ ಮನ್’ಗಳಿದ್ದರೆ ಅವರ ಅಫೀಸರುಗಳಂತೆ ಪದಾರ್ಥಗಳನ್ನು ಕೊಳ್ಳುವವರೂ ಹಾಗೂ ಕೆಳಗಿನಿಂದ ಮೇಲಕ್ಕೆ ಬಡ್ತಿ ಪಡೆಯುವ ಪ್ರಕ್ರಿಯೆಯೂ ಆ ಗ್ಯಾಂಗುಗಳಲ್ಲಿ ಉಂಟು. ಸುಧೀರ್ ಪರಿಚಯಿಸಿಕೊಂಡು ಗ್ಯಾಂಗಿನ ಜೊತೆ ಒಡನಾಟಕ್ಕೆ ಪರವಾನಗಿ ನೀಡಿದ ಜೆ.ಟಿ.ಗೂ ಈ ಅಧ್ಯಯನ ನಡುವೆ ಒಂದು ಬಡ್ತಿ ಸಿಕ್ಕಿಬಿಡುತ್ತದೆ. ಒಟ್ಟಾರೆ ಜೆ.ಟಿ. ಈ ಏಣಿಯ ನಡುವಿನಲ್ಲಿ ಇದ್ದಂತೆ ನಮಗೆ ಕಾಣುತ್ತದೆ. ಹೀಗಾಗಿ ಗ್ಯಾಂಗುಗಳ ಬಗೆಗಿನ ನಮ್ಮ ಗ್ರಹಿಕೆಯೂ ಆ ಮಟ್ಟದಿಂದ ಉಂಟಾಗುತ್ತದೆ. ಅಲ್ಲಿಂದ ಮುಂದಕ್ಕೆ ಗ್ಯಾಂಗುಗಳ ನಾಯಕತ್ವದ ಆಲೋಚನಾ ಸರಣಿ ಹೇಗಿರುತ್ತದೆ ಎನ್ನುವ ಒಳನೋಟ ಸುಧೀರ್‌ಗಾಗಲೀ ನಮಗಾಗಲೀ ಸಿಗುವುದಿಲ್ಲ. ನಾಯಕತ್ವವನ್ನು ಸುಧೀರ್ ಭೇಟಿಮಾಡುವುದು ’ಗ್ಯಂಗ್ ಪಾರ್ಟಿ’ಯಲ್ಲಿ ಒಮ್ಮೆ ಮಾತ್ರ. ಆದರೆ ಆ ಭಾಗದಲ್ಲಿ ನಮಗೆ ಯಾವ ಒಳನೋಟವೂ ದೊರೆಯುವುದಿಲ್ಲ.
ಆದರೆ ಜೆ.ಟಿಯ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಒಳ್ಳೆಯ ಗ್ರಹಿಕೆ ಉಂಟಾಗುತ್ತದೆ. ಈ ಗುಂಪಿನಲ್ಲಿ ಗ್ಯಾಂಗಿಗೆ ಅನೇಕ ಸಹಾಯಕ ಸೇವೆಗಳನ್ನೊದಗಿಸುವ ಜನರ ಪರಿಚಯವೂ ನಮಗಾಗುತ್ತದೆ. ಇವರುಗಳ ನಡುವೆ ಕೆಲ ಪೋಲೀಸಿನವರೂ ಇದ್ದಾರೆ. ಅವರು ಇಲಾಖೆಯಲ್ಲಿದ್ದರೂ ಈ ಜನಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ’ಸಮುದಾಯ’ವನ್ನು ಅರ್ಥಮಾಡಿಕೊಳ್ಳಲು ಬಹುಶಃ ನಾವು ಕೇಳಬೇಕಾದ ಪ್ರಶ್ನೆಯೆಂದರೆ: ಇಷ್ಟೊಂದು ಜನ ಈ ಕಾಯಕದಲ್ಲಿ ಶಾಮೀಲಾಗಲು ಕಾರಣವೇನು ಎನ್ನುವದಾಗಿದೆ. ಅಲ್ಲಿ ಅವರು ತಮ್ಮಿಷ್ಟಾನುಸಾರವಾಗಿ ಗ್ಯಾಂಗಿನಲ್ಲಿದ್ದಾರೆಯೇ? ಅವರುಗಳಿಗೆ ಆ ಕಾಯಕ ಬಿಟ್ಟುಹೋಗಬೇಕೆನ್ನುವ ಬಯಕೆಯಿದೆಯೇ? ಈ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಆದರೆ ಹೀಗೆ ಒಂದು ನಿಯಮಿತ ಸ್ಥಳದಲ್ಲಿ ಜೀವಿಸುವ ಜನರ ಜೀವನದಲ್ಲಿ ’ಬದಲಾವಣೆ’ಯನ್ನುಂಟುಮಾಡಲು ಹೊರಟ ’ಸಮುದಾಯ ಕೇಂದ್ರಿತ ಸಂಸ್ಥೆ’ಗಳನ್ನು ನಡೆಸುವವರಿಗೆ ಈ ಉತ್ತರವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಈ ಪುಸ್ತಕದಲ್ಲಿರುವ ಭಾಷೆ ಅದರ ಹಿಂದಿನ ಮನೋಧರ್ಮವನ್ನು ನಾವು ಗಮನಿಸಿದರೆ, ಈ ರೀತಿಯ ಬದಲಾವಣೆಯನ್ನುಂಟುಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಅದು ದೊರೆತಾಗ ಮತ್ತು ದೊರೆತಷ್ಟೂ ಕಾಲ ಅನುಭವಿಸುತ್ತಲೇ ತಮ್ಮ ಜೀವನವನ್ನು ಎಂದಿನಂತೆ ಮುಂದುವರೆಸಲು ಆ ಜನ ನಿರ್ಧರಿಸಿರುವಂತೆ ಅನ್ನಿಸುತ್ತದೆ. ಉದಾಹರಣೆಗೆ ಪುಸ್ತಕದ ಕೆಲಭಾಗಗಳಲ್ಲಿ "ಸಮುದಾಯ" ಈ ರೀತಿಯ ’ಬದಲಾವಣೆ’ಯಿಂದ ಖುಷಿಯಾಗೇನೂ ಇಲ್ಲವೆನ್ನುವುದು ವೇದ್ಯವಾಗುತ್ತದೆ. ಅವರನ್ನುತ್ತಾರೆ "ಈ ಕರಿಯರು ನಮ್ಮ ಜೀವನವನ್ನು ನರಕಸದೃಶ ಮಾಡಬಹುದು, ಆದರೂ ಅವರು ನಮ್ಮವರೇ ಅನ್ನುವುದನ್ನು ಮರೆಯಲು ಸಾಧ್ಯವೇ. ಹಾಗೂ ಯಾವ ಮನೆಯಲ್ಲಿ ನಾವು ಹುಟ್ಟುತ್ತೇವೆನ್ನುವುದನ್ನು ನಾವು ಆಯ್ದು ಬರಲು ಸಾಧ್ಯವೇ?" ಎನ್ನುವಂಥಹ ಪ್ರಶ್ನೆಗಳನ್ನು ಅವರು ಕೇಳುತ್ತಾರೆ [ಪು.89]
ಹೀಗೆ ಒಂದು ಸ್ಥರದಲ್ಲಿ ಸಿಕ್ಕಿಬಿದ್ದಿರುವ ಜನರ ದ್ವಂದ್ವಗಳನ್ನು ಸುಧೀರ್ ಚೆನ್ನಾಗಿ ಗ್ರಹಿಸುತ್ತಾರೆ. ಹಸಿವೆಯನ್ನು ತೊಡೆಯಲು ಹೊಟ್ಟೆಪಾಡಿಗೆ ದುಡಿಯಬೇಕೋ ಅಥವಾ ಶಾಲೆಗೆ ಹೋಗಿ ವಿದ್ಯೆಯನ್ನು ಆರ್ಜಿಸಬೇಕೋ ಅನ್ನುವ ದ್ವಂದ್ವ ಬಡವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಈ ಬಗ್ಗೆ ಪ್ರಶ್ನೆಗಳ ಸರಣಿಯನ್ನು ಸುಧೀರ್ ಕೇಳುವುದಕ್ಕೆ ಬದಲಾಗಿ - ಆ ಸಮುದಾಯದ ಭಾಗವೇ ಆಗಿರುವ ಶ್ರೀಮತಿ ಬೇಯ್ಲಿ ಕೇಳಿ ಸುಧೀರನ್ನು ಉತ್ತರಿಸಲು ಹೇಳಿದಾಗ ಅದರಲ್ಲಿ ಕಡೆಗೆ ಬರುವ ತೀರ್ಪು ನಿರೀಕ್ಷಿತ ದಿಕ್ಕಿನಲ್ಲಿಯೇ ಹೋಗುತ್ತದೆ. ಹೀಗಾಗಿಯೇ ಸುಧೀರ್ ಒಗೆಯುವ "ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ ೨೫ ಪ್ರತಿಶತದಷ್ಟು ಹೆಚ್ಚುತ್ತದೆ" ಎನ್ನುವ ಸಂಶೋಧನೆಯ ಫಲಿತಗಳು ಅರ್ಥಹೀನವಾಗಿ ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಯಾಕೆಂದರೆ ಈ ಟೈಲರ್ ಹೋಮ್ಸ್ ಅನ್ನುವ ಈ ವಸತಿಯಲ್ಲಿ ಕಷ್ಟಪಟ್ಟು ದಿನಕ್ಕೆರಡು ಊಟ ಹೇಗೋ ಸಂಪಾದಿಸುವ ಬಡವರಿದ್ದಾರೆ; ಅಲ್ಲಿಯೇ ಇದ್ದು ಆ ವಾತಾವರಣದಲ್ಲೇ ’ಬೆಳೆದು’ ಮ್ಯಾಲಿಬೂ ಕಾರುಗಳನ್ನು ಓಡಿಸುವ ಮಾಜಿ ಬಡವರಿದ್ದಾರೆ. ಆ ಕಾರುಗಳನ್ನು ಮತ್ಯಾರೋ ತೊಳೆಯುತ್ತಾರೆ. ಹಾಗೆ ತೊಳೆಯುವವರಿಗೆ ದುಡ್ಡು ಸಿಗುವುದಿಲ್ಲ. ಯಾಕೆಂದರೆ ಈ ಸೇವೆಗೆ ಬದಲಾಗಿ ಕಾರು ತೊಳೆದವನ ಮನೆಗೆ ಈತ ’ರಕ್ಷಣೆ’ ನೀಡುತ್ತಾನೆ. ಜನತೆಯ ಒಟ್ಟಾರೆ ಹಿತಕ್ಕಾಗಿ ನಾವು ತೆತ್ತುವ ತೆರಿಗೆಯಂತೆ ಇದೂ ಒಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿ ನಡೆಯುತ್ತಿದೆ.
ಅಲ್ಲಿನ ಕಾರ್ಯವೈಖರಿಯಲ್ಲಿ ಸಮಸ್ಯೆಯನ್ನು ’ಹೇಗೆ’ ಪರಿಹರಿಸಬೇಕು ಅನ್ನುವ ಬಗ್ಗೆ ವಿಚಾರವಾಗುತ್ತದೆಯೇ ಹೊರತು - ಆ ಸಮಸ್ಯೆಯನ್ನು ಪರಿಹರಿಸಬೇಕೋ ಇಲ್ಲವೋ ಅನ್ನುವುದರ ಬಗ್ಗೆ ಚರ್ಚೆ ನಡೆಯುವುದಿಲ್ಲ [ಪು.164]. ನ್ಯಾಯ ಸಂಪಾದಿಸಲು ಪರಿಹಾರ ಕಂಡುಕೊಳ್ಳಲು ಅವರು ಉಪಯೋಗಿಸುವ ಮಾರ್ಗವನ್ನು ಕಂಡು ಸುಧೀರ್ ಚಡಪಡಿಕೆಯಿಂದ ಹೇಳುತ್ತಾರೆ: "ಇದು ಎಷ್ಟು ವಿಚಿತ್ರ ಜೀವನ - ಹೀಗೆ ಹೇಗೆ ಬದುಕುವುದು ಸಾಧ್ಯ?" ಆದರೆ ಸುಧೀರ್ ಕೇಳಿದ ಈ ಪ್ರಶ್ನೆಗೆ "ಬಹುಶಃ ನಿನಗೆ ಈಗ ಅರ್ಥವಾಗಲು ಪ್ರಾರಂಭವಾಗಿದೆ ಅನ್ನಿಸುತ್ತದೆ. ಬಹುಶಃ ನೀನು ಈ ಬಗ್ಗೆ ಕಲಿಯಲೂ ಪ್ರಾರಂಭಿಸಿರಬಹುದು" ಅನ್ನುವುದು ಬೇಯ್ಲಿಯ ಉತ್ತರ. ಆ ಕಲಿಕೆ ಕೇವಲ ಸುಧೀರ್‌ಗೆ ಮಾತ್ರವಲ್ಲದೇ ಓದುಗನಿಗೂ ಉಂಟಾಗುತ್ತದೆ.
ಸುಧೀರ್ ಬರವಣಿಗೆಯಲ್ಲಿ ಒಂದು ಥರದ ಸ್ಥಿತ ಪ್ರಜ್ಞತೆ ಹಾಗೂ ಒಳಗೊಳ್ಳದಿರುವ ಶೈಲಿಯಿದೆ. ಬಹುಶಃ ಈಗ ಆ ಎಲ್ಲದರಿಂದ ದೂರವಾಗಿ ತಮ್ಮ ವಿಶ್ವವಿದ್ಯಾನಿಲಯದ ಬೆಚ್ಚನೆಯ ವಾತಾವರಣದಲ್ಲಿ ಕೂತುಬರೆಯುತ್ತಿರುವುದರಿಂದ ನಮಗೆ ಹಾಗನ್ನಿಸಬಹುದೇನೋ. ಆತ ಹೆಚ್ಚಾದ ವಿಶ್ಲೇಷಣೆಯನ್ನು ನೀಡದೆಯೇ ಕೇವಲ ತಮ್ಮ ಅನುಭವವನ್ನು ದಾಖಲಿಸಿ, ಮಿಕ್ಕ ವಿಚಾರಗಳನ್ನು ಓದುಗರ ತೀರ್ಪಿಗೆ ಬಿಟ್ಟುಬಿಡುತ್ತಾರೆ. ಘಟಿಸಿದ ಘಟನಾವಳಿಯನ್ನು ತಮ್ಮ ಭಾವನೆಗಳನ್ನು ಒಳಪಡಿಸದೆಯೇ ದೂರದಿಂದ ನೋಡಿ ವರದಿ ಮಾಡುವ ಶೈಲಿಯನ್ನು ಸುಧೀರ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸುಧೀರ್ ಚಿತ್ರಿಸುವ ಘಟನಾವಳಿಗಳ ಸರಣಿ ಅವರ ಒಟ್ಟಾರೆ ’ಕಥೆ’ಯನ್ನು ನಾವು ಅಂತರ್ಗತ ಮಾಡಿಕೊಳ್ಳಲು ಪೂರಕವಾಗಿದೆ.
ಈ ಪುಸ್ತಕದ ಮಹತ್ವ ಇರುವುದು ಒಂದು ಮುಖ್ಯವಾದ ಅಂಶದಲ್ಲಿ. ಸಂಶೋಧನೆಯಲ್ಲಿ ತೊಡಗುವ ಜನರಿಗೆ ಈ ರೀತಿಯ ಗ್ಯಾಂಗುಗಳೊಂದಿಗೆ ಇದ್ದು ಅಲ್ಲಿಂದ ತಮ್ಮ ಒಳನೋಟಗಳನ್ನು ಪಡೆಯುವ ಘನತೆ ಸಾಮಾನ್ಯವಾಗಿ ದೊರೆಯುವುದಿಲ್ಲ. ಅವರುಗಳು ಜೀವಿಸುವ ಜಾಗವನ್ನು ಸರಕಾರ "ಪ್ರಾಜೆಕ್ಟ್" ಎಂದು ಕರೆದರೂ ಅವರು ಅದನ್ನು ಸಮುದಾಯವೆಂದೇ ಕರೆಯುತ್ತಾರೆ. ಈ ಸಮುದಾಯದಲ್ಲಿ ಇರುವುದು ಮಾದಕ ವಸ್ತುಗಳನ್ನು ಮಾರಾಟ ಮಾಡುವ, ಚಿಲ್ಲರೆ ಅಪರಾಧಗಳನ್ನೆಸಗುವ, ಕಾನೂನು ಮುರಿಯುವ ಆದರೆ ಎಲ್ಲವೂ ತಮ್ಮದೇ ಕಾಯಿದೆಯ ಪ್ರಕಾರ ಮಾಡುವ ಜನ. ಆ ಸಮುದಾಯಕ್ಕೆ ಯಾವುದೇ ಕಾರ್ಪರೇಟ್ ಜಗತ್ತಿನಂತೆಯೇ ಅಧಿಕಾರದ ಮಜಲುಗಳೂ, ಬಡ್ತಿ ಕಾರ್ಯಕ್ರಮಗಳೂ, ಅಸೂಯೆಗಳೂ ಹಾಗೂ ಮಾರುಕಟ್ಟೆಯಲ್ಲಿರಬಹುದಾದ ಪೈಪೋಟಿಗಳೂ ಇವೆ!
ಸಂಶೋಧನೆಗೆಂದು ಹೊರಟಿರುವ ಜನರ ನಡವಳಿಕೆಯಲ್ಲಿರಬಹುದಾದ ದ್ವಂದ್ವಗಳನ್ನೂ ಆ ಸ್ಥಳವನ್ನಾಕ್ರಮಿಸಿದ ತಾತ್ವಿಕ ನೆಲೆಯನ್ನೂ ಪುಸ್ತಕ ಚರ್ಚಿಸುತ್ತದೆ. ಎಷ್ಟೋ ಬಾರಿ ಸಂಶೋಧಕನ ನಡವಳಿಕೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಪರೀಕ್ಷೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿಯಾದರೆ, ಒಮ್ಮೊಮ್ಮೆ ಪರೋಕ್ಷವಾಗಿ ಸುಧೀರ್ ಅಂತಹ ಸಂಶೋಧಕರನ್ನು ಕಾಡುತ್ತದೆ. ಉದಾಹರಣೆಗೆ ವಿಶ್ವವಿದ್ಯಾನಿಲಯದಲ್ಲಿ ಜ್ಞಾನವರ್ಧನೆಯ ಕೆಲಸ ಮಾಡುವ ಸಂಶೋಧಕರು ಒಂದು ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಹೊರಟಾಗ - ಹಾಗೊಂದು ’ವಿಷಯ’ವಿದೆ ಅನ್ನುವ ಅಹಂನೊಂದಿಗೆ ಹೋಗುತ್ತಾರೆ. ಆದರೆ ಸುಧೀರ್ ಅಥವಾ ಅವರಂತಹ ಸಂಶೋಧಕರನ್ನೇ ಈ ಸಮುದಾಯ ಹತ್ತಿರದಿಂದ ಅಧ್ಯಯನ ಮಾಡುತ್ತದಲ್ಲದೇ ಅವರನ್ನು ತಮ್ಮದೇ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲೂ ಬಹುದು ಅನ್ನುವುದು ನಮಗೆ ಮನವರಿಕೆಯಾಗುತ್ತದೆ. ಸುಧೀರ್ ಇರುವ ಸಂದರ್ಭದಲ್ಲಿ ಅದರಲ್ಲೂ ಅಪರಾಧವನ್ನೇ ಜೀವನಮಾಡಿಕೊಂಡ ಈ ಸಮುದಾಯದ ಭಯಭೀತಿಗಳ ನಡುವಿನಲ್ಲಿ ತಾವು ಮತ್ತಷ್ಟು ಪರೀಕ್ಷೆಗೊಳಗಾಗುವುದನ್ನು ಕಂಡುಕೊಳ್ಳುತ್ತಾರೆ. ಆ ಪರೀಕ್ಷೆಯನ್ನು ನಡೆಸುವವರು ಸುಧೀರನ್ನು ಒಳಸೇರಿಸಿದ ಜನರು ಮಾತ್ರವಲ್ಲ ಬದಲಿಗೆ ಆತನ ಜೊತೆ ಮಾತನಾಡಿದ-ಒಡನಾಡಿದ ಪ್ರತಿಯೊಬ್ಬರೂ ಆತನನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ ಅನ್ನುವುದನ್ನು ನಾವು ಗಮನಿಸಬೇಕು. ಕೆಲವು ಬಾರಿ ತಮಗೆ ತಿಳಿಯದೆಯೇ ಸುಧೀರ್ ಒಂದು ಪಕ್ಷವನ್ನು ಬೆಂಬಲಿಸಿಬಿಡುತ್ತಾರೆ [ಅಥವಾ ಜೆ.ಟಿಯ ಏಜೆಂಟ್ ಅನ್ನುವ ಅಭಿಪ್ರಾಯ ಉಂಟಾಗುವುದರಿಂದ ಆತನ ಪಕ್ಷಪಾತ ಮಾಡುತ್ತಿರುವಂತೆ ಇತರರಿಗೆ ಕಂಡುಬರುತ್ತಾರೆ]. ಒಮ್ಮೆ ಜೆಟಿಯ ಸಹಚರರು ಆತನ ಬಗ್ಗೆ ದೂರಿದ್ದನ್ನು ತಮಗರಿವಿಲ್ಲದಂತೆಯೇ ಸಹಜ ಸಂಭಾಷಣೆಯಲ್ಲಿ ಜೆಟಿಯ ಜೊತೆ ಚರ್ಚಿಸಿ ಸಹಚರರ ಕೋಪ-ಶಾಪಕ್ಕೊಳಗಾಗುತ್ತಾರೆ. ಸುಧೀರ್‌ಗೆ ಮಾಹಿತಿ ನೀಡುತ್ತಿರುವವರೇ ಆತ ಬರೆದುಕೊಂಡ ಮಾಹಿತಿಯ ನೋಟ್ಸ್ ಕೂಲಂಕಶವಾಗಿ ಪರೀಕ್ಷಿಸುತ್ತಿದ್ದಾರೆ! ಹೀಗಾಗಿ ಆ ನೋಟ್ಸ್ ಅನುಸಾರವಾಗಿ ಹೊಸ ಮಾಹಿತಿಯನ್ನೂ ಅವರು ತಿರುಚಿ ನೀಡುವ ಸಾಧ್ಯತೆಯಿದೆ! ಹೀಗಾಗಿಯೇ ಭಾಗವಹಿಸಿ ಕಂಡುಕೊಳ್ಳುವ [participant observation] ವಿಧಾನದ ಅಧ್ಯಯನದ ಬಗ್ಗೆ ಕೆಲ ಪ್ರಶ್ನೆಗಳೂ ಉದ್ಭವವಾಗುತ್ತವೆ. ಭಾಗವಹಿಸುವ ಪ್ರಕ್ರಿಯೆ ಮುಗಿಯುವುದು, ಕಂಡುಕೊಳ್ಳುವ ಪ್ರಕ್ರಿಯ ಪ್ರಾರಂಭವಾಗುವುದೂ ಯಾವ ಬಿಂದುವಿನಲ್ಲಿ? ಅಥವಾ ಸಮುದಾಯದ ವತಿಯಿಂದ ನೋಡಿದರೆ ಮಾಹಿತಿ ನೀಡುವುದಕ್ಕೂ - ಒಂದು ರೀತಿಯಾಗಿ ಮಾಹಿತಿಯನ್ನು ಬರೆದುಕೊಳ್ಳಲೆಂದೇ ಭಿನ್ನರೀತಿಯ ಪ್ರವರ್ತನೆಯನ್ನು ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳು ಅಧ್ಯಯನದ ರೀತಿನೀತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಗಳಾಗುತ್ತವೆ.
ಈ ವಿಷಯಗಳನ್ನು ಸುಧೀರ್ ಚರ್ಚಿಸುವುದಿಲ್ಲವಾದರೂ, ನೇರ ಉತ್ತರಗಳಿಲ್ಲದ ಅನೇಕ ದ್ವಂದ್ವಗಳನ್ನು ಅವರು ಎತ್ತುತ್ತಾರೆ. ಈ ಗ್ಯಾಂಗುಗಳ ಅಧ್ಯಯನ ನಡೆಸುತ್ತಿರುವಾಗ ಪೋಲೀಸರು ತನ್ನನ್ನು ಕರೆದು ಪ್ರಶ್ನಿಸಿದರೆ ತಾನೇನು ಮಾಡಬೇಕು? ತನಗೆ ತಿಳಿದಿರುವ ವಿಚಾರವನ್ನು ಅವರಿಗೆ ಹೇಳಬೇಕೇ? ಈ ಗ್ಯಾಂಗಿನವರು ಒಂದು ಕೊಲೆ ಮಾಡಲು ಯೋಜನೆ ಹಾಕುತ್ತಿರುವುದು ತನಗೆ ತಿಳಿದುಬಂದಾಗ ತೆಗೆದುಕೊಳ್ಳಬೇಕಾದ ನಿಲುವೇನು? ತನ್ನ ಸಂಶೋಧನೆ ಮುಂದುವರೆಯಲು ತಮ್ಮ ಸಮಯವನ್ನೂ ಒಳನೋಟಗಳನ್ನೂ ನೀಡಿದ ಈ ಸಮುದಾಯದವರಿಗೆ ತಾನು ಕೃತಜ್ಞತೆ ತೋರುವುದು ಹೇಗೆ? ಅವರಿಗೆ ಹಣ ನೀಡಬೇಕೇ? ಅವರ ಜೀವನದಲ್ಲಿ ಏನಾದರೂ ಉತ್ತಮವಾಗುವಂತೆ ಕೆಲಸ ಮಾಡಬೇಕೇ? ತನಗೆ ತಿಳಿದಿರುವ ಸರ್ಕಾರಿ ಯೋಜನೆಗಳು ಇವರತ್ತ ಹರಿಯುವಂತೆ ಏನಾದರೂ ಮಾಡಬೇಕೇ? ಅಥವಾ ಈ ಸಮುದಾಯವನ್ನು ಕೇವಲ ’ಅಧ್ಯಯನದ ವಿಷಯ’ ಮತ್ತು ’ಉದಾಹರಣೆ’ಗಳೆಂದು ನೋಡಿ ತನ್ನ ಜೀವನವನ್ನು ಮುಂದುವರೆಸಬೇಕೇ? ಇವುಗಳಲ್ಲಿ ಕೆಲವು ಪ್ರಶ್ನೆಗಳು ಆ ನಾಡಿನ ಕಾನೂನಿಗೆ ಸಂಬಂಧಿಸಿದ್ದಾದರೆ, ಬಹಳಷ್ಟು ಪ್ರಶ್ನೆಗಳು ಸಂಶೋಧಕರಿಗಿರುವ ತಾತ್ವಿಕ ನಿಲುವಿನ ಕಷ್ಟದ ಪ್ರಶ್ನೆಗಳಾಗಿವೆ. ಅಧ್ಯಯನ ನಡೆಸುವವರಿಗೂ, ಅಧ್ಯಯನಕ್ಕೊಳಗಾಗುವವರಿಗೂ ನಡುವಿನ ಈ ಜಟಿಲ ಹಾಗೂ ಗಹನ ಸಂಬಂಧದೊಳಗೆ ಯಾವನಿಲುವು ’ಸರಿ’ ಯಾವುದು ’ತಪ್ಪು’ ಎಂದು ನಿರ್ಧರಿಸಲು ಆಗುವುದೇ ಇಲ್ಲ!
ಸುಧೀರ್ ಈ ಪುಸ್ತಕದಲ್ಲಿ ತಮ್ಮ ವಿಚಾರಗಳನ್ನೂ ಹೆಚ್ಚು ವ್ಯಕ್ತವಾಗಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸುವುದು ಸಹಜ. ಆಗ ನಾವುಗಳು ಲೇಖಕರೊಂದಿಗೂ ಚರ್ಚೆಗಿಳಿಯಬಹುದಿತ್ತು. ಆದರೆ ಸುಧೀರ್ ಅವರ ವಿಚಾರಗಳು ವ್ಯಕ್ತವಾಗಿ ಇಲ್ಲದಿದ್ದರೂ ಪುಸ್ತಕದ ಮಹತ್ವವೇನೂ ಕುಂದುವುದಿಲ್ಲ. ಅವರ ಬರವಣಿಗೆಯ ಶೈಲಿ ನಮ್ಮನ್ನು ಈ ವಿಚಾರಗಳಲ್ಲಿ ಒಳಗೊಳ್ಳವ ರೀತಿಯಲ್ಲಿಯೇ ಇದೆ. ಆಗಾಗ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವದರಲ್ಲೂ ಸುಧೀರ್ ಸಫಲರಾಗುತ್ತಾರೆ. ಗಂಭೀರ ಅಧ್ಯಯನವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಜನಪ್ರಿಯ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀರ್ ಸಫಲರಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಾಗಿದೆ.
No comments:
Post a Comment