Tuesday, December 17, 2013

ರಶೀದ್: ಕವಿತೆಗಳು ನೆಪಮಾತ್ರ

ಅಬ್ದುಲ್ ರಶೀದ್ ಎಂದರೆ ನಮಗೆಲ್ಲಾ ಏನೇನೋ. ಶ್ರೀನಿವಾಸರಾಜು ಮೇಷ್ಟ್ರು ತಮ್ಮ ಮೌನದ ನಡವೆ ಹೆಮ್ಮೆಯಿಂದ ಎತ್ತುತ್ತಿದ್ದ ಹೆಸರು, ಕಿ.ರಂ.ಗೆ ಪುಳಕವುಂಟುಮಾಡುವಂತಹ ಕವಿತೆಗಳನ್ನೂ, ಬರವಣಿಗೆಯನ್ನೂ ಬರೆಯುತ್ತಿದ್ದ ಹೆಸರು, ಭಾಷೆಯನ್ನು ತನ್ನ ಸುಪರ್ದಿನಲ್ಲಿಟ್ಟು ಪದಜೋಡಣೆಯಿಂದಲೇ ಒಂದು ಅದ್ಭತ ದೃಶ್ಯವನ್ನು ನಮ್ಮ ಮುಂದಿಡಬಹುದಾದ ಒಂದು ಪ್ರತಿಭೆ. ಅಷ್ಟೇ ಅಲ್ಲ – ರಶೀದ್ ಎಂದರೆ ಜನರ ಬಗೆಗಿನ ನಿರಂತರ ಕುತೂಹಲ: ಅದು ಅವರ ಪಯಣಗಳ ಕಾಲುಚಕ್ರ. ಹಳ್ಳಿರೇಡಿಯೋ ಮೂಲಕ ಕಂಡ ಬುಡಕಟ್ಟು ಜನಾಂಗದವರ ಜೀವನಚಿತ್ರ. ಲಡಾಕಿನಲ್ಲಿ, ಶೀಲಾಂಗಿನಲ್ಲಿ, ಮೇಘಾಲಯದಲ್ಲಿ ಸಿರಿಯಾದಲ್ಲಿ ಕಂಡುಬಂದ ಜನ. ಕೆಲವು ಕವಿತೆಯ ರೂಪದಲ್ಲಿ, ಕೆಲವು ಅಂಕಣರೂಪದಲ್ಲಿ, ಮತ್ತು ಕೆಲವು ಕೇವಲ ಅವರ ಕ್ಯಾಮರಾದಿಂದ ಬಂದ ದೃಶ್ಯಗಳು.

ಆಕಾಶವಾಣಿಯಂತಹ ಶ್ರಾವ್ಯ ಮಾಧ್ಯಮಗಲ್ಲಿ ಈವರೆಗೆ ದುಡಿಯುತ್ತಿದ್ದರೂ, ಅಲ್ಲಿಯ ಶ್ರವಣದ ಮೂಲಕವೇ ನಮಗೆ ದೃಶ್ಯವನ್ನು ಒದಗಿಸಿದ ಒಬ್ಬ ಮಹಾ ಪ್ರತಿಭಾವಂತ. ನಾವು ರಶೀದರ ಸೃಜನಶೀಲ ಪಯಣದಲ್ಲಿ ಅವರ ಗ್ರಾಹಕರು. ಗ್ರಾಹಕ ಅನ್ನುವ ಪದವನ್ನು ಕನ್ಸ್ಯೂಮರ್ ಅನ್ನುವ ಪರಿಮಿತಿಯಿಂತ ನೋಡದೇ, ವಿಸ್ತಾರವಾದ ಅರ್ಥದಲ್ಲಿ ಸಾಹಿತ್ಯ-ಬರವಣಿಗೆಯ ಅಕ್ಷರಗುಚ್ಛ-ಛಾಯಾಚಿತ್ರಗಳು-ಕಿವಿಯ ಮೇಲೆ ಬಿದ್ದ ಆಕಾಶವಾಣಿಯ ತರಂಗಗಳು-ಪದಗಳ ಜೋಡಣೆಯ ಅರ್ಥವಿನ್ಯಾಸವಲ್ಲದೇ ಅದರ ಸುತ್ತಿರುವ ದೃಶ್ಯವಿನ್ಯಾಸ ಇವುಗಳನ್ನೆಲ್ಲಾ ಗ್ರಹಿಸುವವರೆಂದು ನಾವು ಅರ್ಥೈಸಿದಾಗ ಗ್ರಾಹಕನಿಗೊಂದು ವಿಸ್ತಾರವಾದ ಕ್ಯಾನ್ವಾಸ್ ಸಿಗುತ್ತದೆ. ರಶೀದರು ತಮ್ಮ ಗ್ರಾಹಕರ ಒಂದು ಇಂದ್ರಿಯವನ್ನಾಕ್ರಮಿಸುತ್ತಾರೆಂದರೆ ಅದು ನೋಟಕ್ಕೆ ಸಂಬಂಧಿಸಿದ್ದು. ಯಾವುದನ್ನೂ ಕಣ್ಣಿಗೆ ಕಟ್ಟುವುದು ಅವರ ಸೃಜನಶೀಲ ಪಯಣದ ಮುಖ್ಯ ವ್ಯಸನವಾಗಿದೆ ಎಂದು ನನಗನ್ನಿಸುತ್ತದೆ. ಹೀಗಾಗಿಯೇ ರಶೀದರು ಬಳಸುವ ಪದಪುಂಜದಲ್ಲಿ ಗ್ರಾಹಕ ಪದಕ್ಕಿರುವ ಕನ್ಸ್ಯೂಮರ್ ಅನ್ನುವದಕ್ಕಿಂದ ಹಿರಿದಾದ ಅರ್ಥವಿಸ್ತರಣೆ ನಮಗೆ ಕಾಣಿಸುತ್ತಾ, ಅದು ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಾ ಬೆರಗುಗೊಳಿಸುತ್ತಾ ಹೋಗುತ್ತದೆ.

ಉದಾಹರಣೆಗೆ ಕೆಂಡಸಂಪಿಗೆಯನ್ನೇ ತೆಗೊಳ್ಳೋಣ. ಕನ್ನಡ ಜಾಲತಾಣಕ್ಕೆ ಒಂದು ಹೊಸ ಎಸ್ತಟಿಕ್ಸನ್ನ ಆ ಪ್ರಯೋಗ
ಒದಗಿಸಿಕೊಟ್ಟಿತ್ತು. ಹೊಸ ಎಸ್ತಟಿಕ್ಸ್ ನಮಗೆ ಜಾಲತಾಣ ಕಾಣುವ ರೀತಿಯಲ್ಲಿ, ಆದರಲ್ಲಿ ಬರುತ್ತಿದ್ದ ಭಿನ್ನ ರೀತಿಯ ಬರವಣಿಗೆಗಳಲ್ಲಿ, ಅದು ಪರಿಚಯಿಸಿದ ಹೊಸ ಪ್ರತಿಭೆಗಳಲ್ಲಿ, ಇದ್ದ ಸಿದ್ಧ ಬರಹಗಾರರ ಮೂಲಕ ಕಾಣಿಸಿದ ಹೊಸ ಬರವಣಿಗೆಗಳಲ್ಲಿ. ಆದರೆ ರಶೀದರ ಸೃಜನಶೀಲತೆಯ ಹಿಂದೆ ಒಂದು ತುಂಟ ಮನಸ್ಸೂ ಇದೆ. ಆ ತುಂಟತನವೇ ಅವರ ಬರವಣಿಗೆಯ ಗಾಂಭೀರ್ಯವನ್ನೂ ವಿಸ್ತರಿಸುತ್ತದೆ. ಆ ತುಂಟ ಮನಸ್ಸು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ.

ಖಾಸಗಿಯಾಗಿ ಅವರ ತುಂಟತನ ಗೆಳೆಯರಾದ ನಮಗೆ ಕಾಣಿಸುತ್ತಿತ್ತಾದರೂ ಸಾರ್ವಜನಿಕವಾಗಿ ಆ ತುಂಟತನ ಕಂಡದ್ದು ಕೆಂಡಸಂಪಿಗೆಯ ಎಟಿಕೆಟ್ಟಿನಲ್ಲಿ. ಕೆಂಡಸಂಪಿಗೆಯ ಹೂರಣ, ಓರಣಕ್ಕೆ ಗಾಂಭೀರ್ಯವನ್ನೂ ಎಸ್ತಟಿಕ್ಸನ್ನೂ ತಂದ ರಶೀದ್ ಆ ಗಾಂಭೀರ್ಯವನ್ನು ಕೆಳಗೆ ಎಗ್ಗಿಲ್ಲದೇ ಬರುತ್ತಿದ್ದ ಜನರ ಪ್ರತಿಕ್ರಿಯೆಗಳಿಗೆ ಕತ್ತರಿ ಹಾಕದೇ ದೊಡ್ಡ ದೊಡ್ಡ ಲೇಖಕರ ಗರ್ವಭಂಗ ಮಾಡಿದರು. ಅಲ್ಲಿ ಅವರ ಎಸ್ತಟಿಕ್ಸು ಗೆರೆಯ ಮೇಲಕ್ಕೆ ಸೀಮಿತವಾಗಿತ್ತು. ಲೇಖನ ಮುಗಿದ ಗೆರೆಯಡಿಯಲ್ಲಿ ನಮಗೆ ಕಂಡದ್ದು ನಿರರ್ಗಳ-ನಿರ್ಭಿಡೆ. ಆಗಾಗ ಪ್ರತಿಕ್ರಿಯೆಗಳನ್ನು ತಡೆಹಿಡಿವ ಪ್ರಯೋಗವನ್ನು ಮಾಡಿದರೂ ಅವರೊಳಗಿನ ತುಂಟ ಹೀಗೆ ಉದ್ದೀಪನಗೊಳ್ಳುತ್ತಲೇ ಇದ್ದ.

ರಶೀದರ ತುಂಟತನ ಸೃಜನಶೀಲರೂಪ ಪಡೆದದ್ದೇ ಭಿನ್ನರೀತಿಯಲ್ಲಿ. ಅವರ ಈ ತನಕದ ಕವಿತೆಗಳ ಪುಸ್ತಕ – ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿಯನ್ನು ಅವರು ಅರ್ಪಿಸಿರುವುದು ನಕ್ಷತ್ರ ಮತ್ತು ಇತರ ದುಷ್ಟದೇವತೆಗಳಿಗೆಅದೇ ನಕ್ಷತ್ರಳೇ ಇವರಿಗೆ ಬೆನ್ನುಡಿಯನ್ನೂ ಬರೆದಿದ್ದಾಳೆ. ಆದರೆ ನಕ್ಷತ್ರ ಯಾರು ಎನ್ನುವ ಕುತೂಹಲವನ್ನು ರಶೀದ್ ಉಳಿಸಿಕೊಳ್ಳುವುದಲ್ಲದೇ ಬೆಳೆಸುತ್ತಲೂ ಹೋಗುತ್ತಾರೆ. ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿಯೂ ನಕ್ಷತ್ರಳ ಹೆಸರು ಬರುತ್ತದೆ. ಜೊತೆಗೆ ತಾನೇ ನಕ್ಷತ್ರಳಲ್ಲ ಎನ್ನುವ ವಾದವನ್ನೂ ರಶೀದ್ ಮಾಡುತ್ತಾರೆ. ಅದರ ಸತ್ಯಾಸತ್ಯತೆ ಕಂಡುಕೊಳ್ಳಬೇಕಾದ್ದು ನಮ್ಮ ಕೆಲಸವಲ್ಲ. ಅದರ ಅವಶ್ಯಕತೆಯೂ ಇಲ್ಲ. ಯಾಕೆಂದರೆ ಲಂಕೇಶ್ ಪತ್ರಿಕೆಯಲ್ಲಿ ಮಿಂಚುತ್ತಿದ್ದ ನೀಲು, ನಿಮ್ಮಿಗಳ್ಯಾರೆಂದು ಕಾಲಾನುಕ್ರಮೇಣ ನಮಗೆ ತಿಳಿದು ಬಂತು. ಹಾಗೆಯೇ ಒಂದಿಲ್ಲೊಂದು ದಿನ ನಕ್ಷತ್ರಳ (ಅಥವಾ ನಕ್ಷತ್ರನ) ಗುಟ್ಟೂ ರಟ್ಟಾಗಬಹುದು. ರಟ್ಟಾಗದಿದ್ದರೂ ಪರವಾಗಿಲ್ಲ. ಆದರೆ ನಕ್ಷತ್ರಳ ನೆಪದಲ್ಲಿ  ಅವರ ಸೃಜನಶೀಲ ತುಂಟತನದ ಚರ್ಚೆಯನ್ನು ಮಾಡುವುದು ಅವಶ್ಯಕ. ಅದನ್ನು ಭಟ್ಟರಲ್ಲಿಗೆ ತಂದಿಡೋಣ.

ರಶೀದರ ಕವಿತೆಗಳ ಪುಸ್ತಕ ಬಿಡುಗಡೆಯ ಸಮಯಕ್ಕೆ ಮಾತನಾಡಿದ ನಾನು ಅವರ ಮೂಲ ಹಸ್ತಪ್ರತಿಯಿಂದ ನನಗೆ ತುಂಬಾ ಹಿಡಿಸಿದ ಒಂದು ಕವಿತೆಯನ್ನು ಹೆಕ್ಕಿದ್ದೆ. ಅದರ ಹೆಸರು ಚೆಲುವೆ ಹೆಂಡತಿಗೆ ಬರೆದ ಕವಿತೆಆದರೆ ಛಾಪಾಗಿದ್ದ ಪುಸ್ತಕವನ್ನು ನಾನು ಕೈಯಲ್ಲಿ ಹಿಡಿದಾಗ ನನಗೆ  ಚೆಲುವೆ ಹೆಂಡತಿಯ ಮಂದೆ ಭಟ್ಟರುಬಂದು ನಿಂತದ್ದು ಕಾಣಿಸಿತು. ಆ ಬಗ್ಗೆ ನಾನು ಪ್ರಸ್ತಾಪಿಸಿ, ಇದ್ದಕ್ಕಿದ್ದಹಾಗೆ ರಶೀದರೇ ಬರೆದಿದ್ದ ಚೆಲುವೆ ಹಂಡತಿಯನ್ನು ಭಟ್ಟರ ಪಾಲಾಗಿಸಿದ್ದು ಏಕೆನ್ನುವ ಅನುಮಾನವನ್ನು ಸಹಜವಾಗಿ ಸಭೆಯ ಮುಂದಿಟ್ಟೆ. ಅದಕ್ಕೆ ರಶೀದರ ಸಮಜಾಯಿಷಿಯಲ್ಲಿಯೇ ಅವರ ತಂಟತನ ಕಂಡುಬಂತು. ಇದು ತಾನು ಕೆಂಡಸಂಪಿಗೆಯಲ್ಲಿ ಮಹಾಲಿಂಗೇಶ್ವರ ಭಟ್ ಎಂಬ ಹೆಸರಿನಲ್ಲಿ ಬರೆದ ಕವಿತೆಯಾದ್ದರಿಂದ ಭಟ್ಟರ ಹೆಸರನ್ನು ಕವಿತೆಯ ಮೊದಲಿಗೇ ಜೊಡಿಸಿದ್ದೆಂದು ಅಬ್ದುಲ್ ರಶೀದ್ ಭಟ್ ಹೇಳಿದರು! ಆ ಕವಿತೆಯನ್ನು ಇನ್ನೊಮ್ಮೆ ಆಸ್ವಾದಿಸೋಣ:

ಚೆಲುವೆ ಹೆಂಡತಿಗೆ ಒಂದು ಕವಿತೆ
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.
ಎಂಥ ಕಣ್ಣೀರು, ನಾಟಕದಂತಹ ರೊಚ್ಚೆ ಅಳು!


ಈಗಷ್ಟೆ ಅಡಿಕೆಯ ಪಾತಿಗೆ ನೀರೆರೆದು,
ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು,
ಅಳುವ ಮಗುವ ತುಟಿಗೊಂದಿಷ್ಟು ಮೊಲೆಯ ತೊಟ್ಟನು
ತುರುಕಿ ಅದಕೂ ಬೈದು, ಉಣ್ಣಿ ಕಚ್ಚಿದ ಮೊಣಗಂಟನ್ನು 
ತುರಿಸುತ್ತಾ ಬಂದವಳೆ. ‘ಕಂಡೆಯಾ ಎನ್ನ ಹೆಂಗಸ್ತನ’ ಅಂದವಳೆ!
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

ಆಹಾ ಎಷ್ಟು ನಯ, ವಿನಯ, ಕೊಂಕು, 
ಶೇಲೆ, ಹಣೆಯ ಕುಂಕುಮ, ಕರಿಮಣಿ,
ಕಾಲ ಉಂಗುರ ಈಗ ತಾನೇ ಹಸೆಯಿಂದೆದ್ದು 
ಬಂದ ನಾಚುಗೆ, ಕೊರಳಲ್ಲಿ ಬೆವರ ಸಾಲೆ
ನಿನ್ನ ಕೊಂಡಾಟವ ಇಂದು ಮುಂಜಾವ ಕಂಡಿಲ್ಲವೇನೇ
ಬೆಳಕು ಹರಿವಷ್ಟೂ ಹೊತ್ತು ಜರೆದು, ಉಗುರಿಂದ ಸಿಗಿದು,
ಇದು ಆ ಕ್ಷತವೆಂದು ಇದು ಈ ಕ್ಷತವೆಂದು
ಎದೆಯಲ್ಲಿ ನೂರು ಅರೆ ಚಂದ್ರಗಳ ಎಳೆದು
ಮೇಲೆ ಬಂದು ಮಥಿಸಿ ಕೊಟ್ಟಿಗೆಗೆ ಸಗಣಿ ಬಾಚಲು ಹೋದವಳು
ನೀನಲ್ಲವೇನೇ. ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

-ಮಹಾಲಿಂಗೇಶ್ವರ ಭಟ್

ಹೀಗಾಗಿಯೇ ಈ ಮಹಾಲಿಂಗೇಶ್ವರ ಭಟ್ ಅವರ ಹಿನ್ನೆಲೆಯಲ್ಲಿ ನಾವು ನಕ್ಷತ್ರಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಶೀದರ ನಡುವಯಸ್ಕ ಹೃದಯಕ್ಕೆ ನಾನಾ ರೀತಿಯಲ್ಲಿ ಘಾತವುಂಟುಮಾಡಿ ಅದರಿಂದಲೇ ಕವಿತೆಯನ್ನು ಹೊರಡಿಸುವ – ಈಬದಿಯಂದಾಬದಿಗೆ ಆಬದಿಯಿಂದೀಬದಿಗೆ ಕವಿತೆಗಳನ್ನು ಬರೆಯಿಸುವ ಜುಗಲ್ ಬಂದಿಯನ್ನು ಸ್ವಾಗತಿಸುತ್ತಲೇ ನಮ್ಮ ಅನುಮಾನವನ್ನು ಹಿಂದಕ್ಕಟ್ಟಬೇಕಾಗುತ್ತದೆ. ಅದು ಅಂತಿರಲಿ – ಈ ಮಹಾಲಿಂಗೇಶ್ವರ ಭಟ್ ಕವಿತೆಯಲ್ಲಿರುವ ಎರಡು ಭಾಗಗಳಲ್ಲಿನ ವೈರುಧ್ಯತೆಯನ್ನು ನೋಡಿ. ಮೊದಲನೆಯದ್ದು ದೈನಿಕವನ್ನೇ ಕವಿತೆಯನ್ನಾಗಿಸಿರುವ ಪರಿ. ಅಲ್ಲಿ ಹೆಂಡತಿ ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು ಅಳುವ ಮಗುವಿನ ತುಟಿಗೊಂದಿಷ್ಟು ಮೊಲೆಯ ತೊಟ್ಟನು ತುರುಕುತ್ತಾಳೆ. ಅ ವಾಸ್ತವವನ್ನು ಶಿಷ್ಟವಾಗಿ ಕವಿತೆಯಲ್ಲಿ ಬಣ್ಣಿಸುವ ಪರಿ ಎರಡನೆಯ ಭಾಗದಲ್ಲಿ ನಮಗೆ ಕಾಣಿಸುತ್ತದೆ. ಇದನ್ನು ಓದಿದಾಗ ತಿರುಮಲೇಶರ ಒಂದು ಪದ್ಯದ ಸಾಲುಗಳು ಸಹಜವಾಗಿಯೇ ನೆನಪಾಗುತ್ತದೆ. ಪರಕಾಯ ಪ್ರವೇಶ ಎಂಬ ಕವಿತೆಯ ಸಾಲುಗಳು ಹೀಗಿವೆ:

...... ಅಶ್ವಿನಿಗೆ ಮಾತ್ರ
 ಕುಂಡೆಯಲ್ಲೊಂದು ಕುರುವಾದ್ದರಿಂದ
ಒಂದು ಥರ ಲಾಸ್ಯದಲ್ಲಿ ನಡೆಯುತ್ತಾಳೆ
ಒಂದು ಥರ ಆಲಸ್ಯದಲ್ಲಿ ಕುಳಿತುಕೊಳ್ಳತ್ತಾಳೆ
ಪ್ರೇಕ್ಷಕರು ದಂಗಾಗಿದ್ದಾರೆ! ಇಂಥ ಮಾದಕ
ಭಂಗಿಯನ್ನು ಅವರು ಇದುತನಕ
ನೋಡಿಯೇ ಇಲ್ಲ!.......

ರಶೀದ್ ಕವಿಯಾಗಿ, ಲೇಖಕನಾಗಿ ಬೆಳೆಯುವುದಿಲ್ಲ. ಇಂಥ ದೈತ್ಯ ಪ್ರತಿಭೆಯುಳ್ಳ ಯುವಕರು ಎಂದೂ ಮುದಿಯಾಗುವುದಿಲ್ಲ. ಜಯಂತ ಕಾಯ್ಕಿಣಿಯಾಗಲೀ ಅಬ್ದುಲ್ ರಶೀದ್ ಆಗಲೀ ತಮ್ಮ ಸಹಜ ಪ್ರತಿಭೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಾಗಿಯೇ ಮೊದಲ ಸಂಕಲನದಲ್ಲಿರುವ ಕವಿತೆಯ ಬೆರಗು ಇತ್ತೀಚಿನ ಕವಿತೆಯಲ್ಲೂ ಕಾಣಬಹುದು. ನಡುವಯಸ್ಸಿನಲ್ಲಿ ಬರೆದ ಕವಿತೆಯ ಗಾಂಭೀರ್ಯ ಮತ್ತು ಪ್ರಬುದ್ಧತೆ ಟೀನೇಜ್ ಕವಿತೆಗಳಲ್ಲೂ ಕಾಣಿಸುತ್ತದೆ. ಅಂದರೆ ಬಹುಬೇಗನೆ ಜೀವನದ ಕಾಣ್ಕೆಯ ಪ್ರಬುದ್ಧತೆ ಇದ್ದಾಗ್ಯೂ ಅದಮ್ಯ ಕುತೂಹಲ ಮತ್ತು ಜೀವನಪ್ರೀತಿ ಈ ಲೇಖಕರನ್ನು ಸದಾ ತಾಜಾತನದಲ್ಲಿಟ್ಟಿರುತ್ತವೆ.

ಇದಕ್ಕೆ ಉದಾಹರಣೆಯಾಗಿ ಎರಡು ಪದ್ಯಗಳ ಕೆಲವು ಸಾಲುಗಳನ್ನು ಕೊಡುತ್ತೇನೆ. ಮೊದಲನೆಯದು ತಮ್ಮ ಮೊದಲ ಕವಿತೆಯಾದ ನನ್ನ ಪಾಡಿಗೆ ನಾನು ಕವಿತೆಯದ್ದು:
ನನ್ನ ಪಾಡಿಗೆ ನಾನು ನನ್ನ ಪಾಡಿಗೆ ಹೋಗಿ
ನನ್ನ ಉಮ್ಮನ ಮುಂದೆ ಅತ್ತುಬಿಡುವೆ
ಅತ್ತು ಅತ್ತೂ ಅವಳ ಅಲಿಕತ್ತ ತೂತಕ್ಕೆ
ಕೈಯಿಕ್ಕಿ ಎಳೆದೆಳೆದು ನಕ್ಕು ಬರುವೆ.


ಈ ಕೆಳಗಿರುವ ಸಾಲುಗಳು ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ ಕವಿತೆಯದ್ದು:
ಸುಮ್ಮನೆ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈತುತ್ತಿನಂತಹ
ವಾತ್ಸಲ್ಯ ಉಂಡು ಯಾಕೆ ಬೆನ್ನುತಡವಿಸಿಕೊಂಡು ಬರಲಾಗುತ್ತಿಲ್ಲ

ಈ ಎರಡೂ ಕವಿತೆಯ ಸಾಲುಗಳ ನಡುವೆ ಅನೇಕ ವರ್ಷಗಳ ಸಮಯ ಕಳೆದಿದೆ. ಆದರೆ ಆ ಸಾಲುಗಳನ್ನು ಬರೆದಿರುವ ಹುಡುಗನ ಮುಗ್ಧತೆ ಮುಂದುವರೆದಿದೆ. ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆದ ಕಿ.ರಂ 1992ರಲ್ಲಿ ಬರೆದದ್ದು ಈ ಸಾಲುಗಳು:

ಈ ಸಂಕಲನದ ಕವಿತೆಗಳಲ್ಲಿ ಮೇಲಿಂದ ಮೇಲೆ ಮುಗ್ಧ ಹುಡುಗನೊಬ್ಬ ಕಾಣಿಸುತ್ತಾನೆ. ಆ ಹುಡುಗ ಇಲ್ಲಿನ ಕವಿತೆಗಳ ಕೇಂದ್ರ. ಅವನು ಒಳಗೊಳ್ಳುವ ಅನೇಕ ಸಂಬಂಧಗಳು ಈ ಕವಿತೆಗಳ ಮುಖ್ಯ ಆವರಣ. ಈ ಆವರಣದಲ್ಲಿ ಹುಡುಗ ಅತ್ಯಂತ ಸಾಚಾ ಆದ ತನ್ನ ಆಲೋಚನೆಗಳಿಗೆ, ಅನುಭವಗಳಿಗೆ ಎದುರಾಗುತ್ತಾನೆ. ಮುಗ್ಧತೆ ಅನುಭವಗಳನ್ನು, ಅದರ ಸೂಕ್ಷ್ಮತೆಗಳನ್ನು ಗಾಢವಾಗಿ ಒಳಗೊಳ್ಳಲು ತಕ್ಕ ಒಂದು ಅವಸ್ಥೆ ಎಂಬುದು ಆ ಹುಡುಗನ ಮೂಲಕ ತಿಳಿಯುತ್ತದೆ. ಮುಗ್ಧ ಅನುಭವ ಒಂದು ತಾತ್ವಿಕವಾದ ಸೆಲೆಯನ್ನು ಕಟ್ಟಿಕೊಡುವಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡಿರುವುದು ಇಲ್ಲಿನ ವಿಶಿಷ್ಟತೆ.

ಆ ಮಾತುಗಳು ಇಂದಿಗೂ ವರ್ತಿಸುತ್ತವೆ. ಹುಡುಗ ಹುಡುಗಿಗೆ ನಿವೇದಿಸಿಕೊಳ್ಳುತ್ತಿರುವಂತೆಯೇ ಬೆಳೆದು ಬಂದಿರುವ ರಶೀದರ ಕಾವ್ಯಮಾರ್ಗದಲ್ಲಿ ಆ ಮುಗ್ಧತೆಯೂ ಇದೆ, ಬೆರಗೂ ಇದೆ, ಅದು ಕಾಣಿಸುವ ಪ್ರಬುದ್ಧತೆಯೂ ಇದೆ. ಹೀಗಾಗಿಯೇ ಆತ ಮೋಹಿತನಾಗಿಯೇ ಉಳಿದು ಹಾಗೆಯೇ ಬೆಳೆದುಬಿಡುತ್ತಾನೆ.
ಅವರ ಈ ತನಕದ ಕವಿತೆಗಳಲ್ಲಿ ಇದುವರೆಗೆ ಬರೆದ ಎಲ್ಲ ಕವಿತೆಗಳೂ ಇಲ್ಲಿಲ್ಲ….. ಕೆಲವನ್ನು ನಾನೇ ನುಂಗಿ ನೀರು ಕುಡಿದಿರುವೆಎನ್ನುತ್ತಾರೆ. ಮೊದಲ ಸಂಕಲನದಲ್ಲಿ ಇರುವ, ಅವರೀಗ ನುಂಗಿರುವ ಒಂದು ಕವಿತೆಯನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಇದನ್ನು ಯಾಕೆ ನುಂಗಿದರೆಂದು ನನಗಿನ್ನೂ ಅರ್ಥವಾಗುತ್ತಿಲ್ಲ.

ಮಳೆ

ಇಂದು ಎನಗೆ ಇಂಥ ಸುಖವು ಬಂತೆ ಎಲ್ಲಿಂದ!
ಪರಮಾತ್ಮನಿಂದ, ಮಣ್ಣಿನಿಂದ ಮಳೆ ಹಾತೆ ನಿನ್ನಿಂದ
ಹಾತೆ ಬಂದರೂ ಮಳೆಯ ಸುಳಿವೇ ಇಲ್ಲ ಯಾಕಣ್ಣಾ?
ತಂಗಿ ಎನಗೆ ಇಂಥ ಸುಖವು ಬಂತೆ ಎಲ್ಲಿಂದ?

ತಂಗಿ, ತಂಗಿ, ನಿನ್ನ ಮೋಹಕೆ ಮಳೆಯು ಸುರಿದಿಲ್ಲ
ಅಲ್ಲಿ ಬಂದಂಥ ಮಳೆಯು ಇಲ್ಲಿ ಬಂದಿಲ್ಲ
ಅವಳು ಬಂದಳು ಅವಳೂರಿನಿಂದ ಮಳೆಯ ಊರಿಂದ ತಂಗಿ
ಮಳೆಯ ಹನಿಗಳು ಸೋಕುತಿಹವು ಮುಡಿಯ ಮೇಲಿಂದ.

ಮುಡಿಯೆ ಮುಡಿಯೆ ಮುಗಿಲು ಮಿಂಚೇ
ಗುಡುಗು ಮೇಲಿಂದ, ಬಿದಿರುಮಳೆಗೆ ಸಿಡಿಲು
ಮಿಂಚೆ ಅವಳ ಊರಿಂದ ತಂಗಿ,
ಬಿದಿರು ಹೂವು ಚುಕ್ಕೆ ಹಾಗೆ ಎತ್ತಿ ಮುಡಿಯಿಂದ
ಮಳೆಯ ಹಾಗೆ ಮುಡಿಯ ಅಲುಗಿಸು
ಎದೆಯ ಮೇಲೆಲ್ಲಾ.

ಅಣ್ಣ ಅಣ್ಣ ಹಾತೆ ಬಂದರೂ ಮಳೆಯ ಸುಳಿವಿಲ್ಲ
ತಂಗಿ ತಂಗಿ ಅವಳು ಬಂದಳು ಮಳೆಯ ಊರಿಂದ
ಇಲ್ಲಿ ಬಂದಂಥ ಮಳೆಯು ಎಲ್ಲು ಬಂದಿಲ್ಲ
ಬಿದಿರು ಮಳೆಯ ಹೂವು ಮಳೆಯು ಒದ್ದೆ ಮೈಯೆಲ್ಲಾ
ಹನಿಯು ಹನಿಯು ಒದ್ದೆ ಹುಡುಗಿ ಸುರಿವನಗೆಯೆಲ್ಲಾ

ಹೀಗೆ ಮಳೆಯನ್ನೇ ನುಂಗಿದ ನೀರುಕುಡಿದ ರಶೀದರ ವಿರಳ ಕವಿತೆಗಳು ನಮಗೆ ಪುಸ್ತಕರೂಪದಲ್ಲಿ ಈಗ ಸಿಗುತ್ತಿದೆ. ರಶೀದರ ತುಂಟತನವಲ್ಲದ, ತುಂಟತನವಿಲ್ಲದ ಈ ಬರವಣಿಗೆಯನ್ನು ನಾವು ಸಂಭ್ರಮಿಸಬೇಕು. ಅಷ್ಟೇ. ಆ ಅಪ್ಪಟ ಸಂಭ್ರಮಕ್ಕೆ ಆಹ್ವಾನಪತ್ರಿಕೆ ಈ ಲೇಖನ.





No comments:

Post a Comment