Sunday, July 5, 2015

ಕನಸುಗಾರನ ಏಳು ಬೀಳು: ಮುನ್ನುಡಿ


ಈ ಪುಸ್ತಕಕ್ಕೆ ಮುನ್ನುಡಿ ಬರೆಯುವ ಸಮಯಕ್ಕೆ ತಮ್ಮ ಅಸ್ತಿತ್ವವನ್ನು ನಿರ್ದೇಶಿಸಿದ ಯುಬಿ ಸ್ಪಿರಿಟ್ಸ್ ಕಂಪನಿಯ ನಿರ್ವಹಣಾ ಮಂಡಲಿಯಿಂದ ವಿಜಯ್ ಮಲ್ಯರನ್ನು ಹೊರಹಾಕಬೇಕೆಂಬ ಕೋರಿಕೆ ಬಂದಿದೆ. ಅದು ಸಫಲವಾದರೆ ಈ ಪುಸ್ತಕದ ಶೀರ್ಷಿಕೆ ಸೂಚಿಸುವಂತೆ ಸೊಗಸುಗಾರನ ಏಳೂ, ಬೀಳೂ ಎರಡೂ ಒಂದು ರೀತಿಯಲ್ಲಿ ಸಂಪೂರ್ಣಗೊಂಡಂತಾಗುತ್ತದೆ. ಆದರೂ ವಿಜಯ್ ಮಲ್ಯರನ್ನು ನಾವು ಯಾವುದೇ ರೀತಿಯಲ್ಲಿ ಕಡೆಗಣಿಸುವಂತಿಲ್ಲ. ಅವರು ಯಾವ ರೂಪದಲ್ಲಿ ಹೇಗೆ ವ್ಯಾಪಾರಕ್ಕೆ ವಾಪಸ್ಸಾಗುತ್ತಾರೋ ತಿಳಿಯದಾದರೂ ಈಗ್ಯೆ ಒಂದು ಮಹತ್ವದ ಅಧ್ಯಾಯ ಮುಗಿದಂತೆ ಎಂದೇ ಪರಿಗಣಿಸಬಹುದು. ಇಲ್ಲಿಯವರೆಗೂ ಮಲ್ಯರು ಅನೇಕ ವ್ಯಾಪಾರಗಳನ್ನು ನಿರ್ವಹಿಸಿದ್ದಾರೆ, ಕೆಲವು ವ್ಯಾಪಾರಗಳಲ್ಲಿ ಯಶಸ್ಸೂ ದೊರೆತಿದೆ, ಕೆಲವು ವ್ಯಾಪಾರಗಳಿಂದ ಅವರು ಯಶಸ್ವಿಯಾಗಿ ಹೊರಬಿದ್ದಿದ್ದಾರೆ. ಆದರೆ ಹಿಂದೆಂದೂ ಅವರ ಮೂಲ ವ್ಯಾಪಾರವಾದ ಮದ್ಯದ ಧಂಧೆಯಲ್ಲಿ ಅವರು ಸೋಲನುಭವಿಸಿರಲಿಲ್ಲ. ಅವರ ಯಾವುದೇ ವ್ಯಾಪಾರವೂ ಹಣದ ರಾಶಿಯನ್ನು ಪೂರೈಸುತ್ತಿದ್ದ ಮದ್ಯದ ವ್ಯಾಪಾರವನ್ನು ಸ್ವಾಹಾ ಮಾಡುವಷ್ಟು ಕೆಟ್ಟದಾಗಿಯೂ ಬೇರೆ ವ್ಯಾಪಾರಗಳನ್ನು ಅವರು ನಿರ್ವಹಿಸಿಲಿಲ್ಲ. ಆದರೆ ಈಗ ಮಲ್ಯರಿಗೆ ಅವನತಿಯ ಕಾಲ ಬಂದಂತಿದೆ.

ದೊಡ್ಡ ಉದ್ದಿಮೆದಾರರ ಖಾಸಗೀ ಬದುಕಿನ ಬಗ್ಗೆ ಒಂದು ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಶ್ರೀಮಂತರ ಯಾದಿಗೆ ಸೇರಿದವರು ತಮ್ಮ ಶ್ರೀಮಂತಿಕೆಯನ್ನು ಹೇಗೆ ಬಳಸುತ್ತಾರೆಂಬ ಬಗ್ಗೆ ಕಥೆಗಳೂ ಊಹಾಪೋಹಗಳೂ ಇರುವುದು ಸಹಜವೇ. ನಾರಾಯಣ ಮೂರ್ತಿ, ಅಜೀಂ ಪ್ರೇಂಜಿಗಳು ಸರಳ ಬದುಕಿಗೆ ಹೆಸರಾದವರು. ಅಂಬಾನಿ ಅದಾನಿಯರಿಗೆ ಖಾಸಗೀ ಬದುಕೆಂಬುದೇ ಇಲ್ಲವೆಂಬಂತೆ ಅವರು ಎಚ್ಚರವಿರುವ ಅಷ್ಟೂ ತಾಸು ವ್ಯಾಪಾರದಲ್ಲಿಯೇ ಮುಳುಗಿರುತ್ತಾರೆ. ಕೆಲವರಿಗೆ ತಮ್ಮ ಖಾಸಗೀ ಆಸಕ್ತಿಗಳಿರುತ್ತವೆ. ವಿಜಯಪತ್ ಸಿಂಘಾನಿಯಾಗೆ ಒಂಟಿಯಾಗಿ ವಿಮಾನ ಹಾರಿಸುವ ಹುಚ್ಚು - ರಿಚರ್ಡ್ ಬ್ರಾನ್ಸನ್ ಗೆ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ. ಆಧ್ಯಾತ್ಮ, ಗಾಲ್ಫ್, ಸಂಗೀತ, ನಾಟಕ, ಸಿನೇಮಾ, ಹೀಗೆ ವ್ಯಾಪಾರದಲ್ಲಿರುವ ಶ್ರೀಮಂತರ ಆಸಕ್ತಿಗಳೂ ವಿಭಿನ್ನ. ಈ ಹೊರಗಿನ ಆಸಕ್ತಿಗಳು ವ್ಯಾಪಾರಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳವ ಜಾಗ್ರತೆಯನ್ನು ಸಾಮಾನ್ಯವಾಗಿ ವ್ಯಾಪಾರಿಗಳು ಕೈಗೊಳ್ಳುತ್ತಾರೆ. ಆದರೆ ತಮ್ಮ ಖಾಸಗೀ ಬದುಕಿನ ಶೈಲಿಯನ್ನು ವ್ಯಾಪಾರಕ್ಕೆ ಅಳವಡಿಸಿದಾಗ ಏನು ತೊಂದರೆಯಾಗಬಹುದು ಎನ್ನುವುದೇ ವಿಜಯ ಮಲ್ಯರ ಬದುಕಿನ ಪಾಠ ಎನ್ನಿಸುತ್ತದೆ. ಹೀಗಾಗಿಯೇ ಅವರು ತಮ್ಮ ವಿಮಾನಯಾನ ಸಂಸ್ಥೆಯನ್ನು ಒಬ್ಬ ಗ್ರಾಹಕನ ದೃಷ್ಟಿಯಿಂದ ನೋಡಿದರೇ ವಿನಃ ಅದರ ಲಾಭನಷ್ಟಗಳೇನೆಂದು ನಿಷ್ಠುರವಾಗಿ ನೋಡುವ ವ್ಯಾಪಾರಿ ದೃಷ್ಟಿಯಿಂದ ನೋಡಲಿಲ್ಲವೇನೋ. ಅದರಿಂದಾಗಿ, ತಮ್ಮ ಐಷಾರಾಮವನ್ನು ವ್ಯಾಪಾರದಲ್ಲಿ ಅಳವಡಿಸಲು ಹೋಗಿ ಮಲ್ಯರು ಸೋತಿರಬಹುದು.

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಸಂಸ್ಥೆಗೆ ಮಲ್ಯರನ್ನು ಕರೆಯಿಸಲಾಗಿತ್ತು. ಅವರು ವೃತ್ತಿಪರ ಯುವಕರು ಪಾಲಿಸಬೇಕಾದ ಮೌಲ್ಯಗಳು  ಎನ್ನುವ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಮಲ್ಯರು ತಮ್ಮ ಬೆಂಜ್ ಕಾರಲ್ಲಿ ಬಂದರು. ತಮ್ಮ ವಿಶಿಷ್ಯ ಶೋಕಿಯ ಶೈಲಿಯಲ್ಲಿ ಹಸಿರು ಬಣ್ಣದ ಟೈ, ಬೂದು ಬಣ್ಣದ ಸೂಟು ಧರಿಸಿದ್ದರು. ಕೋಟಿನ ಒಳಜೇಬಿನಿಂದ ತಾವು ಬರೆದು ತಂದಿದ್ದ ಭಾಷಣವನ್ನು ನಿರರ್ಗಳವಾಗಿ ಓದಿದರು. ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ಹೇಳಿದರು. ಅವರು ಆಗಷ್ಟೇ ಬರ್ಜರ್ ಜೆನ್ಸನ್ ನಿಕಲ್ಸನ್ ಕಂಪನಿಯನ್ನು ಖರೀದಿಸಿದ್ದರು. ಕೊಂಡುಕೊಳ್ಳಲಿರುವ ಕಂಪನಿಯ ಆಸ್ತಿಯನ್ನೇ ಅಡ ಇಟ್ಟು ಅದರ ಮೇಲೆ ಸಾಲಪಡೆದು ಸ್ವಾಮ್ಯ ಪಡೆಯಬಹುದಾದ ಲಿವರೇಜ್ಢ್ ಬೈ ಔಟ್ ಎನ್ನುವ ಕ್ಲಿಷ್ಟ ಪದ್ದತಿಯ ಬಗ್ಗೆ ನಮಗೆ ಸರಳವಾಗಿ ವಿವರಿಸಿದರು. ಕಡೆಗೂ ಮಾತು ಮುಗಿದು ಪ್ರಶ್ನೋತ್ತರದ ವೇಳೆಯಲ್ಲಿ ಮಲ್ಯರು ಆಗ್ಗೆ ಕಣ್ಣು ಹಾಕಿದ್ದರೆನ್ನಲಾದ ಐಡಿಯಲ್ ಜಾವಾ ಕಂಪನಿಯ ಬಗ್ಗೆ ಪ್ರಶ್ನೆ ಉದ್ಭವವಾಯಿತು. ಅದಕ್ಕೆ ಆತ ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ನಮ್ಮಪ್ಪ ನನ್ನನ್ನು ಮಾರಾಟದ ಕೆಲಸಕ್ಕೆ ಹಾಕಿದ್ದರು. ಓಡಾಡಲು ಗಾಡಿ ಬೇಕೆಂದು ನಾನು ಕೇಳಿದ್ದಕ್ಕೆ ಒಂದು ಜಾವಾ ಬೈಕ್ ಕೊಡಿಸಿದ್ದರು. ಆ ಬೈಕ್ ಬಗ್ಗೆ ನನಗೆ ತುಂಬಾ ಪ್ರೀತಿಯಿತ್ತು. ಈಗ ಆ ಕಂಪನಿ ತೊಂದರೆಯಲ್ಲಿದೆ ಎಂದು ತಿಳಿದು ಬಂದಿದೆ. ಹಳೆಯ ನೆನಪಿಗೊಸ್ಕರ ಅದನ್ನು ಖರೀದಿಸಲೂ ಬಹುದು ಎಂದು ಉತ್ತರಿಸಿದ್ದರು. ಅವರು ಆ ಉತ್ತರವನ್ನು ಲಘುವಾಗಿ ನೀಡಿದ್ದರಾದರೂ, ಅವರ ವ್ಯಾಪಾರದ ವೈಖರಿ ಹಾಗೇ ಇತ್ತೆಂದು ಈ ಪುಸ್ತಕ ಓದಿದಾಗ ನಮಗೆ ಮನವರಿಕೆಯಾಗುತ್ತದೆ. ಒಬ್ಬ ವಿದ್ಯಾರ್ಥಿ ಮಲ್ಯರ ಕಾರುಗಳು, ಕುದರೆಗಳು ಮತ್ತು ಬೈಕಿನ ಪ್ರೀತಿಯ ಬಗ್ಗೆ ಮಾತಾಡಲಿಲ್ಲವಲ್ಲ ಎಂದು ಕೇಳಿದ. ಅದಕ್ಕೆ ಯುವ ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳು ಅವು ಅಲ್ಲವಾದ್ದರಿಂದ ಆ ಬಗ್ಗೆ ಮಾತಾಡಲಿಲ್ಲ. ನಾನು ಭಾಷಣವನ್ನು ತಯಾರು ಮಾಡಿ ತಂದದ್ದೂ ಅದೇ ಕಾರಣವಾಗಿ. ನೀವು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ನಾನು ಯೋಚಿಸಬೇಕಾಯಿತು, ಅವು ನಾನು ಪಾಲಿಸವ ಮೌಲ್ಯಗಳಲ್ಲ..ಎಂದೂ ಒಂದು ಚಟಾಕಿ ಹಾರಿಸಿದ್ದರು.

ಮಲ್ಯರು ವಿವರಿಸುತ್ತಿದ್ದ ಲಿವರೇಜ್ಡ್ ಬೈ ಔಟ್ ಪದ್ಧತಿಯೇ, ಅವರ ಜೀವನಶೈಲಿಯಲ್ಲಿಯೂ ಇತ್ತು. ಹೀಗಾಗಿಯೇ ಇಂದಿನ ಐಷಾರಾಮವು ಕಾಣಿಸುತ್ತು ಹಾಗೂ ನಾಳಿನ ಬಗೆಗಿನ ಚಿಂತೆಯು ಕಾಣುತ್ತಿರಲಿಲ್ಲ. ಮದ್ಯದ ವ್ಯಾಪಾರದಲ್ಲಿ ಬರುತ್ತಿದ್ದ ಅತೀ ಹೆಚ್ಚಿನ ಲಾಭದಿಂದಾಗಿ ಅವರ ಇತರ ವ್ಯಾಪಾರದಲ್ಲಿನ ಗೆಲುವು ಸೋಲುಗಳ ಪರಾಮರ್ಶೆಯೂ ಸಮರ್ಪಕವಾಗಿ ನಡೆಯಲಿಲ್ಲ. ಕಡೆಗೂ ಅವರು ಮಣ್ಣುಮುಕ್ಕಲು ಒಂದು ವಿಮಾನಯಾನ ಸಂಸ್ಥೆಯೇ ಬೇಕಾಯಿತು. ಅತೀ ಕಡಿಮೆ ಲಾಭಾಂಶವಿರುವ, ದುಡ್ಡನ್ನು ನೀರಿನಂತೆ ನುಂಗುವ ವ್ಯಾಪಾರವಾದ ವಿಮಾನಯಾನದ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡದ್ದು ಮತ್ತದರ ಫಲವಾಗಿ ತಮ್ಮ ಮದ್ಯದ ವ್ಯಾಪಾರವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಮುಟ್ಟಿದ್ದು ಈಗ ಸರ್ವವಿದಿತ.

ಕಿಂಗ್-ಫಿಶರ್ ಏರ್ಲೈನ್ಸ್ ಒಂದು ರೀತಿಯಲ್ಲಿ ಮಲ್ಯರ ಜೀವನವನ್ನು ಫಾಸ್ಟ್ ಫಾರ್ವಡ್ ಮಾಡಿ ನೋಡಿದಂತಿತ್ತು. ಅತ್ಯಂತ ಯಶಸ್ವೀ ಸಂಸ್ಥೆಯಾಗಿ, ಅತ್ಯಂತ ಐಷಾರಾಮಿ ಪದ್ಧತಿಗಳನ್ನು ಅನುಸರಿಸುತ್ತಿದ್ದ ಸಂಸ್ಥೆಯಾಗಿ, ಇದ್ದ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ನಿದ್ದೆಗೆಡಿಸಿ, ಪ್ರಯಾಣಿಕರಿಗೆ ಪ್ರೀತಿಯ-ಐಷಾರಾಮದ ವಿಮಾನಯಾನ ಒದಗಿಸುವ ಸಂಸ್ಥೆ ಏನೂ ಇಲ್ಲವಾಗಿ ನಾಶನವಾಗಿಹೋಯಿತು. ಗ್ರಾಹಕರನ್ನು ಮಹಾರಾಜರಂತೆ ನೋಡಿಕೊಳ್ಳುವ, ಆದರೆ ಅವರಿಂದ ಅದಕ್ಕೆ ತಕ್ಕ ಬೆಲೆಯನ್ನು ಪಡೆಯಲಾರದ, ವಿಪರೀತ ಹೆಚ್ಚಿನ ಸಿಬ್ಬಂದಿ ಹೊಂದಿದ್ದ ಈ ಸಂಸ್ಥೆ ಭೂಮಿಗಿಳಿಯದೇ ಆಕಾಶದಲ್ಲೇ ತೇಲಾಡುತ್ತಿತ್ತು. ಆದರೆ ಆ ಸಂಸ್ಥೆ ಕುಸಿದಾಗ ಮಲ್ಯ ಕಟ್ಟಿದ್ದ ಸಾಮ್ರಾಜ್ಯವನ್ನು ಮುಳುಗಿಸಿಯೇ ಹೋಯಿತು.


ಇಂಥ ಜೀವನ ಶೈಲಿಯ – ವ್ಯಾಪಾರಿಯ ಕಥೆಯನ್ನು ಕೆ ಗಿರಿಪ್ರಕಾಶ್ ಅವರು ಪುಸ್ತಕರೂಪಕ್ಕೆ ಇಳಿಸಿದ್ದಾರೆ. ಈ ಪುಸ್ತಕದ ಒಂದೊಂದು ಅಧ್ಯಾಯದಲ್ಲೂ ಮಲ್ಯರ ಒಂದೊಂದು ವ್ಯಾಪಾರದ ಏಳು ಬೀಳಿನ ಬಗ್ಗೆ ಅವರು ಚರ್ಚಿಸಿದ್ದಾರೆ. ಮಲ್ಯರ ವ್ಯಕ್ತಿತ್ವ, ಚಾಣಾಕ್ಷತನ, ವ್ಯಾಪಾರೀ ಧೋರಣೆ, ಐಷಾರಾಮ, ಎಲ್ಲ ವಿವರಗಳನ್ನೂ ಗಿರಿಪ್ರಕಾಶ್ ಅಧ್ಯಯನ ಮಾಡಿ ಸುಲಭವಾಗಿ ದಕ್ಕುವಂತೆ ಓದುಗರಿಗೆ ಉಣಬಡಿಸಿದ್ದಾರೆ. ಮಲ್ಯರ ಜೀವನದಲ್ಲಿ ಅನೇಕ ರೋಚಕ ಘಟನೆಗಳು ನಡೆದಿದ್ದರೂ ಗಿರಿಪ್ರಕಾಶ್ ರೋಚಕತೆಗೆ ಮಣಿದಿಲ್ಲ. ಲಕ್ಷ್ಮೀ ಮಿತ್ತಲ್ ಬಗ್ಗೆ ಬಂದಿರುವ ಕೋಲ್ಡ್ ಸ್ಟೀಲ್, ಸುಬ್ರತೋ ರಾಯ್ ಬಗ್ಗೆ ಬಂದಿರುವ ಸಹಾರಾ – ದ ಅನ್ ಟೋಲ್ಡ್ ಸ್ಟೋರಿಯಂತಹ ಪುಸ್ತಕಗಳಿಗೆ ಹೋಲಿಸಿದರೆ ಈ ಪುಸ್ತಕ ಡ್ರಾಮಾದಿಂದ ಮುಕ್ತವಾಗಿದೆ. ಆ ಎರಡೂ ಪುಸ್ತಕಗಳು, ಹಾಗೂ ಈ ರೀತಿಯ ವ್ಯಾಪಾರಿಗಳ ಜೀವನಶೈಲಿಯ ಬಗೆಗೆ ಬಂದಿರುವ ಅನೇಕ ಪುಸ್ತಕಗಳ ನಿರೂಪಣೆಯಲ್ಲಿ ಒಂದು ಪತ್ತೇದಾರಿ ಕಾದಂಬಿರಿಯ ಶೈಲಿಯನ್ನು ಅನುಸರಿಸುವ ಗೋಜಿಗೆ ಗಿರಿಪ್ರಕಾಶ್ ಹೋಗಿಲ್ಲ. ಆದರೂ ಆ ಶೈಲಿ ಕೆಲ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಮಲ್ಯರ ಬಾಲ್ಯ, ಅವರ ತಂದೆಯೊಂದಿಗಿನ ಸಂಬಂಧ, ಅವರ ಧೋರಣೆಯನ್ನು ಗ್ರಹಿಸುತ್ತ ಪ್ರಾರಂಭವಾಗುವ ಪುಸ್ತಕ, ಒಂದು ಜೀವನ ಚರಿತ್ರೆಯಂತೆ ಓದಿಸಿಕೊಳ್ಳಬಹುದಿತ್ತು. ಆದರೆ ಇದು ಬಿಡಿಬಿಡಿ ಕಥೆಗಳ ಕಥಾಸಂಕಲನವಿದ್ದಂತಿದೆ. ಇದಕ್ಕೆ ಗಿರಿಪ್ರಕಾಶ್ ಅನುಸರಿಸಿರುವ ಶೈಲಿಯೇ ಕಾರಣವಾಗಿದೆ. ಪ್ರತಿ ಅಧ್ಯಾಯದಲ್ಲಿ ಮಲ್ಯರ ಒಂದು ವ್ಯಾಪಾರದ ಬಗ್ಗೆ ಗಿರಿಪ್ರಕಾಶ್ ಚರ್ಚಿಸುತ್ತಾರೆ. ಆದರೆ ಆ ವ್ಯಾಪಾರಕ್ಕೂ, ಮಲ್ಯರ ಇತರ ವ್ಯಾಪಾರಗಳಿಗೂ, ಮಲ್ಯರ ಒಟ್ಟಾರೆ ವ್ಯಾಪಾರಿ ದೃಷ್ಟಿಗೂ ಕೊಂಡಿಗಳನ್ನು ಅವರು ಹಾಕಲು ಪ್ರಯತ್ನಸುವುದಿಲ್ಲ. ಹೀಗಾಗಿ  ನಮಗೆ ಮಲ್ಯರ ಒಟ್ಟಾರೆ ವ್ಯಾಪಾರಿ ಸಾಮ್ರಾಜ್ಯದ ಬಗ್ಗೆ ಒಂದು ವಿಹಂಗಮ ನೋಟ ಸಿಗುವುದಿಲ್ಲ. ಆ ಕೊಂಡಿಗಳು ಇದ್ದಿದ್ದರೆ ಪುಸ್ತಕ ಇನ್ನೂ ಸರಳವಾಗಿ ಓದಿಸಿಕೊಂಡು ಹೋಗುವುದಲ್ಲದೇ ಹೆಚ್ಚು ಉಪಯುಕ್ತವಾಗೂ ಇರುತ್ತಿತ್ತು.

ಈ ಪುಸ್ತಕವನ್ನು ಗೆಳೆಯರಾದ ಬಿಎಸ್ ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದಾರೆ. ಅನುವಾದಕರಾಗಿ ಅವರು ಕನ್ನಡೀಕರಿಸುತ್ತಿರುವ ಭಿನ್ನ ಪುಸ್ತಕಗಳು ನಮಗೆ ಮುಖ್ಯವೂ ಅವಶ್ಯಕವೂ ಆಗಿವೆ. ಬೇರೆಬೇರೆ ಮೂಲಗಳಿಂದ ಬರಬಹುದಾದ ಅನುಭವಗಳನ್ನು ನಮ್ಮ ಭಾಷೆಯಲ್ಲಿಯೇ ಸರಳವಾಗಿ ಓದಲು ಸಾಧ್ಯವಾದರೆ ನಮಗೆ ಓದಿನ ಆಯ್ಕೆಯೂ ಹೆಚ್ಚುತ್ತದೆ, ವಿಷಯ ವೈವಿಧ್ಯವೂ ದೊರೆಯುತ್ತದೆ. ವಿಜಯ್ ಮಲ್ಯ ಒಂದು ರೀತಿಯಿಂದ ಬೆಂಗಳೂರಿಗರು, ಕನ್ನಡಿಗರು ಎನ್ನುವ ಕಾರಣಕ್ಕಾಗಿ ಈ ಪುಸ್ತಕದ ಮಹತ್ವ ತುಸು ಹೆಚ್ಚಾಗುತ್ತಾದರೂ, ಒಬ್ಬ ವ್ಯಾಪಾರಿಯ ಜೀವನ, ಮನೋಧರ್ಮ, ವ್ಯಾಪಾರೀ ಯೋಜನೆಗಳನ್ನು ಅರಿಯಲು ಈ ಪುಸ್ತಕ ಅನುವು ಮಾಡಿಕೊಟ್ಟದೆ. ಜೆಪಿ ಭಿನ್ನ ಭಾಷೆಯನ್ನೇ ಉಪಯೋಗಿಸುವ ವ್ಯಾಪಾರೀ ಜಗತ್ತನ್ನು ತಮ್ಮ ಸರಳ ಮತ್ತು ಆಪ್ಯಾಯಮಾನವಾದ ಶೈಲಿಯಲ್ಲಿ ಕನ್ನಡೀಕರಿಸಿದ್ದಾರೆ.


ವಿಜಯ್ ಮಲ್ಯರು ತಮ್ಮ ಬದುಕಿನ ಶೈಲಿಯಿಂದಾಗಿ ತುಸು ಹೆಚ್ಚೇ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಬಗ್ಗೆ ಬರೆಯುವಾಗ ಅದನ್ನು ಒಂದು ಗಾಸಿಪ್ ಕಾಲಂನಂತೆ, ಪೇಜ್ 3 ವರದಿಯಂತೆ ಬರೆಯುವ ಅಪಾಯವಿದ್ದೇ ಇದೆ. ಆದರೆ ಆ ದಿಕ್ಕಿಗೆ ಹೋಗದೇ, ಅವರ ವ್ಯಪಾರದ ಬಗ್ಗೆ ವಸ್ತುನಿಷ್ಠವಾಗಿ ಬರೆದಿರುವ ಗಿರಿಪ್ರಕಾಶ್ ಅವರನ್ನೂ, ಸಮರ್ಥವಾಗಿ ಅನುವಾದಿಸಿರುವ ಜೆಪಿ ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಭಾಷೆಯಲ್ಲಿನ ಓದಿನ ವೈವಿಧ್ಯಕ್ಕೆ ಈ ಪುಸ್ತಕದ ಕೊಡುಗೆ ಮುಖ್ಯವಾದದ್ದು ಮತ್ತು ಮಹತ್ವದ್ದು ಎಂದು ಭಾವಿಸಿದ್ದೇನೆ.



No comments:

Post a Comment