ಪದಚಮತ್ಕಾರ ಶ್ಲೇಷೆ, ವಿಕಟಾರ್ಥ, ನಾನ್‌ಸೆನ್ಸ್, ಅರ್ಥರಹಿತ ಪ್ರಾಸ, ಅರ್ಥಪೂರ್ಣ ಪ್ರಾಸ, ಈ ಎಲ್ಲವನ್ನೂ ಪ್ರತಿನಿಧಿಸಲು ಒಂದೇ ಹೆಸರು ಬೇಕು ಎನ್ನುವುದಾದರೆ ನಾವು ಆಗ್ಡೆನ್ ನ್ಯಾಶ್‌ರನ್ನು ನೆನಪುಮಾಡಿಕೊಳ್ಳಬಹುದು. ನಾನ್ಸೆನ್ಸ್ ಪದ್ಯಗಳ ರಚನೆಯ ರೀತಿಗೇ ಹಲವು ಆಯಾಮಗಳನ್ನು ನೀಡಿದ ಕವಿ ನ್ಯಾಶ್. ನ್ಯಾಶ್ ಬಗ್ಗೆ ಯಾರೇ ಬರೆದರೂ ಓದಲು ಖುಷಿಯಾಗುತ್ತದೆ. ಕಾರಣ: ಎಷ್ಟೇ ಒಣ ವಿಮರ್ಶಕ ಲೇಖನ ಬರೆದರೂ ನ್ಯಾಶ್‌ರ ಕವಿತೆಗಳ ತುಣುಕುಗಳು ಉದಾಹರಣೆಯಾಗಿ ಬರುವುದರಿಂದ, ತನ್ನಿಂದತಾನೇ ಆ ಲೇಖನಕ್ಕೆ ಜೀವ ಬಂದುಬಿಡುತ್ತದೆ.
"ಗಂಭೀರ ಕಾವ್ಯಾಭ್ಯಾಸಿಗಳಲ್ಲಿ, ಹೆರಾಲ್ಡ್ ಮತ್ತು ಡೆನಿಸ್ ರಾಬಿನ್ಸ್‌ರ ಪುಸ್ತಕ ಓದುವವರ ಗುಂಪಿನಲ್ಲಿ ನ್ಯಾಶ್ ಹೆಸರು ಚಾಲ್ತಿಯಲ್ಲಿಲ್ಲದಿರಬಹುದು... ಆದರೆ ನ್ಯಾಶ್‌ರ ಚಟ ಒಮ್ಮೆ ಹತ್ತಿಬಿಟ್ಟರೆ ಬಿಡಿಸಿಕೊಳ್ಳುವುದು ಕಷ್ಟ. ಡಿಕ್ಷನರಿಯಲ್ಲಿ Ogden Nashish ಎಂಬ ಪದಕ್ಕೆ ಚಟದಂತೆ ಅಂಟುವ hasishಹಾಗೆ ಎಂಬ ಅರ್ಥ ನೀಡಬಹುದು." ಎಂದು ಆಂಥೊನಿ ಬರ್ಗೆಸ್ ಬರೆದಿದ್ದಾರೆ. ಆದರೂ ನ್ಯಾಶ್‌ರ ಚಟ ಹತ್ತಿಬಿಟ್ಟರೆ ಸಂದರ್ಭಕ್ಕೆ ಒಂದರಂತೆ ಅವರ ಕವಿತೆಗಳು ನಮ್ಮ ಬಾಯಿಗೆ ಬರುತ್ತಲೇ ಇರುತ್ತವೆ. A Nash for every Bash ಎಂಬಂತೆ.
ನ್ಯಾಶ್ ಕವಿತೆಗಳು ಚಮತ್ಕಾರಿಕ ಅನ್ನಿಸುವುದಕ್ಕೆ ಬಹಳಷ್ಟು ಕಾರಣಗಳಿವೆ. ಇಂಗ್ಲೀಷ್ ಭಾಷೆಯಲ್ಲಿಯೇ ಇರುವ ಅನಂತ ಸಾಧ್ಯತೆಗಳಿಗೆ ಮುಖ್ಯ ಕಾರಣವೆಂದರೆ - ಆ ಭಾಷೆ phonetic ಭಾಷೆ ಆಗಿಲ್ಲದಿರುವುದು(Phonetic: ಬರೆದಂತೆ ಉಚ್ಚರಿಸುವ ಭಾಷೆ). ಭಾರತೀಯ ಭಾಷೆಗಳೆಲ್ಲವೂ phonetic ಆದ್ದರಿಂದ ನಮ್ಮ ಹಾಸ್ಯಪ್ರಜ್ಞೆ ಕುಂಠಿತವಾಗಿದೆಯೇ ಎಂಬ ವಿಷಯದ ಬಗ್ಗೆ ಬಹುಶಃ ಯಾರಾದರೂ ಭಾಷಾಶಾಸ್ತ್ರಜ್ಞರು ಒಂದು ಡಾಕ್ಟರೇಟ್ ಮಾಡುಬಹುದೇನೋ. ಭಾಷೆ Phonetic ಆದ್ದರಿಂದ punಉಪಯೋಗ ಪರಿಣಾಮಕಾರಿಯಾಗಿ ಮಾಡಬಹುದು. ನ್ಯಾಶ್ ಅವರದು ಪನ್ (ಶ್ಲೇಷೆ)ಯಲ್ಲಿ ಎತ್ತಿದ ಕೈ. ಉದಾಹರಣೆಗೆ ಅವರ ಒಂದು ಪುಸ್ತಕದ ಹೆಸರೇ Versus (Verses - ಪದ್ಯಗಳು ಎಂಬ ಅರ್ಥ ಬರುವ ಪದಕ್ಕೆ ಇದು ಶ್ಲೇಷೆ - vesrus ಎಂದರೆ ವಿರುದ್ಧವಾಗಿ ಎಂದರ್ಥ!) ಇದು ಉಚ್ಚಾರಣಾಬದ್ಧವಾದ ಕನ್ನಡ ಭಾಷೆಯಲ್ಲಿ ಕಷ್ಟಸಾಧ್ಯ,... ಅದಕ್ಕೇ ಕನ್ನಡದ ಪನ್-ಡಿತರು ಶ್ಲೇಷೆಯ ಬಳಕೆಗೆ ಇಂಗ್ಲೀಷಿನ ಶರಣುಹೋಗುವುದು.
ಕೈಲಾಸಂ ತಮ್ಮ ಬಂಡ್ವಾಳವಿಲ್ಲದ ಬಡಾಯಿ ನಾಟಕದಲ್ಲಿ Eclipse of the earth (ಭೂಮಿಯ ಗ್ರಹಣ)ವನ್ನ The shadow of my son (son: ಮಗ - - sun ಸೂರ್ಯನೊಂದಿಗೆ -pun - what fun!!) on the earth ಎಂಬ ಸಾಲುಗಳನ್ನ ಬರೆದಿರೋದನ್ನ ಮರೆಯಲು ಸಾಧ್ಯವಿಲ್ಲ. ವೈಎನ್‌ಕೆ ಅವರ "Wonder ಕಣ್ಣು" ಕೂಡಾ ಇದಕ್ಕೆ ಒಂದು ಉದಾಹರಣೆ.
ಹೀಗಾಗಿಯೇ ಕನ್ನಡದಲ್ಲಿ ಪ್ರಾಸಕ್ಕೆ ಬಳಸಿದ ಶ್ಲೇಷೆ ತ್ರಾಸದಿಂದ ಹಾಕಿದ ಕ್ಷೀಷೆಯಂತೆ ಕಾಣುವುದು. (ಈ ವಾಕ್ಯವೇ ಅದಕ್ಕೆ ಉದಾಹರಣೆ! ಇದನ್ನು Self-referential sentence ಎಂದು ಪಂಡಿತರು ಕರೆಯುತ್ತಾರಂತೆ)
ನ್ಯಾಶ್ ಕವಿತೆಗಳ ಶ್ಲೇಷೆಯಲ್ಲಿ ಅರ್ಥರಹಿತ ಪದಗಳು ಸಹಾ ಇರುತ್ತವೆ. ಅವರ ಒಂದು ಜನಪ್ರಿಯ ಕವಿತೆ The Panther ನೋಡಿ:
The Panther
The Panther is like a Leopard
Except that it hasn't been peppered
Should you behold a panther crouch
Prepare to say ouch
Better yet, if called by a panther
Don't anther
(The Face is Familiar, 1940 ೧೯೪೦ ಸಂಗ್ರಹ)
ಇಲ್ಲಿ anther ಎಂಬ ಪದಕ್ಕೆ ಅರ್ಥ 'ಪರಾಗ' ಎಂದು. ಇದನ್ನು answerಗೆ ಶ್ಲೇಷೆಯಾಗಿ ಉಪಯೋಗಿಸಿದ್ದಾರೆ. 'ಪರಾಗ'ಎಂದು ಬರೆಯುವುದು ಈ ಸಂದರ್ಭಕ್ಕೆ ಒಗ್ಗದು. ಪ್ರಾಸಕ್ಕಾಗಿಯೇ ಇಂಥ ಪದಪ್ರಯೋಗ ನ್ಯಾಶ್ ಮಾಡುವುದನ್ನು ನಾವು ಕಾಣಬಹುದು. ಇದಕ್ಕೆ " panther ಕಂಡು ಭಯಗೊಂಡ ನ್ಯಾಶ್ ಉಚ್ಚಾರ ಕೆಟ್ಟು ಹೀಗೆ ತೊದಲಿದ್ದಾರೆ ... ಇದು ಜೀವಂತ ಚಿತ್ರಣ" ಎಂಬದತಹ ಅನಾವಶ್ಯಕ ವ್ಯಾಖ್ಯೆಯನ್ನ ಗಹನ ವಿಮರ್ಶಕರು ಮಾಡಬಹುದು. (panther ಎದುರಿಗಿರುವಾಗ ಆಗುವ ಚಿತ್ರಣ ಜೀವಂತವೋ ಮರಣಾಂತ್ಯವೋ ಎಂಬುದರ ಬಗ್ಗೆ ಚರ್ಚೆ ಬೇಡ!!). Antherಗೆ ಪರಾಗದ ಅರ್ಥವಿರುವುದು ನಿಜಕ್ಕೂ ಕಾಕತಾಳೀಯ, ಆ ಅರ್ಥವನ್ನು ಉಪಯೋಗಿಸುವ ಉದ್ದೇಶ ನ್ಯಾಶ್‌ಗೆ ನಿಜಕ್ಕೂ ಇಲ್ಲ. ಅವರ ಕವಿತೆಯ ಮತ್ತೊಂದು ಉದಾಹರಣೆ ಇದಕ್ಕೆ ಪುರಾವೆ:
Pediatric Reflections (ಶಿಶುವೈದ್ಯಶಾಸ್ತ್ರಾವಲೋಕನ?)
Many an infant that screams like a calliope
Could be soothed by a little attention to its diope
Calliope (ಇದೊಂದು ಸಂಗೀತ ವಾದ್ಯ. ಇದರಿಂದ ಪ್ರೆಶರ್‌ಕುಕರ್‌ನಲ್ಲಿ ಆವಿ ಹೆಚ್ಚಾದಾಗ ಬರುವಂತಹ ಶಬ್ದವನ್ನ ಹೊರಡಿಸಬಹುದು) ನಂತೆ ಅರಚಾಡುವ ಮಗುವನ್ನು ಸಮಾಧಾನಗೊಳಿಸಲು ಅದರ ಚೆಡ್ಡಿಯತ್ತ ಗಮನ ಹರಿಸಿದರೆ ಸಾಕೆಂದು ನ್ಯಾಶ್ ಕವಿತೆಯ ಅಭಿಪ್ರಾಯ. ಪದ್ಯದ ಚಮತ್ಕಾರ ಇರುವುದು diope ಎಂಬ ಪದದಲ್ಲಿ. ಇದು ಪ್ರಾಸಕ್ಕಾಗಿ ಉಪಯೋಗಿಸಿರುವ ಪದ. ಹೀಗೊಂದು ಪದ ನಿಘಂಟಿನಲ್ಲಿ ಇಲ್ಲವೇ ಇಲ್ಲ. ಆದರೂ ಅರ್ಥಮಾತ್ರ ಸುಲಭಸಾಧ್ಯ. Diaperನ ತಿರುಚುವಿಕೆಯಿಂದ ಉಂಟಾಗುವ ಈ ಚಮತ್ಕಾರವೇ ನ್ಯಾಶ್‌ರ ಹಸ್ತಾಕ್ಷರ.
ನ್ಯಾಶ್ ಎರಡು ಸಾಲಿನ ಚುಟಕಗಳಿಂದ ಹಿಡಿದು ದೊಡ್ಡ ದೊಡ್ಡ (ಉದ್ದುದ್ದ ಗದ್ಯದ ಸಾಲುಗಳಿರುವ ಪದ್ಯಗಳನ್ನು ಬರೆದಿದ್ದಾರೆ. ಐದು ಸಾಲಿನ ಲಿಮರಿಕ್‌ಗೆ ಬದಲಾಗಿ ನಾಲ್ಕು ಸಾಲಿನ 'ಲಿಮಿಕ್' ಕವಿತೆಗಳನ್ನೂ ನ್ಯಾಶ್ ಬರೆದಿದ್ದಾರೆ. ಲಿಮರಿಕ್‌ನ ಬಂಧದಲ್ಲಿಯೇ ಲಿಮಿಕ್ ಸಹಾ ಮೂಡಿಬರುತ್ತದೆ. ಲಿಮರಿಕ್ ಮತ್ತು ಲಿಮಿಕ್‌ಗಳ ಉದಾಹರಣೆ ನೋಡಿ:
Carlotta
There was an old man in the trunk
Who inquired of his wife, "Am I drunk?"
She replied with regret
"I'm afraid so, my pet"
And he answered, "It's just as I thunk."
(The Primrose Path, ೧೯೩೫ರ ಸಂಗ್ರಹದಿಂದ)
(ಟ್ರಂಕ್‌ನಲ್ಲಿದ್ದ ಒಬ್ಬ ಮುದುಕ
ತನ್ನ ಹೆಂಡತಿಯನ್ನ ಕೇಳಿದ 'ಆದೆನೇ ನಾನು ಕುಡುಕ?'
ವಿಷಾದಭರಿತವಾಗಿ ಉತ್ತರಿಸಿದಳಾಕೆ
'ಹೌದು, ಅನುಮಾನವೇಕೆ?'
ಆಗವನಂದ - 'ಅದೇ ನಾನಂದುಕೊಂಡಾಂತಕ!')
ಇಲ್ಲಿ ಚಮತ್ಕಾರವಿರುವುದು drinkನ ಭೂತಕಾಲ drunk ಆದಂತೆ thinkನ ಭೂತವನ್ನ thunk ಎಂಬ ಅರ್ಥರಹಿತ ಪದದಲ್ಲಿ ತಿರುಚಿರುವ ವಿಧಾನದಲ್ಲಿ. (ಕನ್ನಡಾನುವಾದದ ಕಡೆಯ ಪದ ಅಂಥದ್ದು)
ಅಂತೆಯೇ ಲಿಮಿಕ್‌ನ ಒಂದು ಉದಾಹರಣೆ ನೋಡಿ:
First Limmick
An old person of Troy
Is so prudish and coy
That it doesn't know yet
If it's a girl or a boy
(Versus, ೧೯೪೯ ಸಂಗ್ರಹದಿಂದ)
(ಟ್ರಾಯ್‌ನ ಹಳೆ ವ್ಯಕ್ತಿ
ಭೋಳೆ ಸಾದಾ ಅಭಿವ್ಯಕ್ತಿ
ತಾನು ಹುಡುಗಿಯೋ ಹುಡಗನೋ
ತಿಳಿದಿಲ್ಲದಿರುವ ಸಂಗತಿಯೇನೋ!!)
ಲಿಮರಿಕ್ ಹಾಸ್ಯಕವಿಗಳಲ್ಲಿ ಬಹಳ ಜನಪ್ರಿಯವಾಗಿರುವ ಬಂಧ. ಕನ್ನಡದಲ್ಲಿ ಚೌಪದಿ ಇದ್ದಂತೆ. ಆದರೆ ಲಿಮಿಕ್ ಎಂಬುದು ನ್ಯಾಶ್‌ರ ತುಂಟತನ. ನಾಲ್ಕು ಸಾಲಿನ ಕವಿತೆಯನ್ನು ಚೌಪದಿ ಎಂದು ಕರೆದಂತೆ, ಐದು ಸಾಲಿನ ಲಿಮರಿಕ್‌ನ ಕನ್ನಡದಲ್ಲಿ ದ್ರೌಪದಿ ಎಂದೇಕೆ ಕರೆಯಬಾರದೆಂಬ ಪ್ರಶ್ನೆ ಕೇಳಿದವರು ನಮ್ಮ ಅವಿನ್ಯಾಶ್ - ವೈಎನ್‌ಕೆ. ನ್ಯಾಶ್ ಕವಿತೆಗಳಲ್ಲಿ ತುಂಬಾ ಜನಪ್ರಿಯವಾದವು ಅವರ ಸಣ್ಣ ಸಣ್ಣ ಕವಿತೆಗಳು. ಒಮ್ಮೆ ಓದಿದರೆ ನೆನಪಿನಲ್ಲಿ ಸ್ಥಿರವಾಗಿ ಉಳಿಯುವಂಥವು. (nonsense verse ಎಂಬುದನ್ನು ಧೃವೀಕರಿಸಲೆಂದೇ ಒಮ್ಮೊಮ್ಮೆ ಕವಿತೆಗಳಿಗೂ ಶೀರ್ಷಿಕೆಗೂ ಸಂಬಂಧವೇ ಇಲ್ಲದಿರುತ್ತದೆ ಅಂತ ಹೇಳುವುದು 'ತಲೆ'ಹರಟೆಯಾದೀತು.) ನ್ಯಾಶ್‌ರ ಎರಡು ಸಾಲಿನ ಚಮತ್ಕಾರ ನೋಡಿ:
Reflection on a wicked world
Purity
Is Obscurity
(Hard Lines, ೧೯೩೧ರ ಸಂಗ್ರಹದಿಂದ)
(ಕ್ರೂರ ಜಗತ್ತಿನ ಬಗ್ಗೆ ಅವಲೋಕನ:
ಶುದ್ಧತೆ
ವಿರಳತೆ)
ಪದಗಳ ಮೇಲೇ ಆಧಾರಿತವಾಗಿರುವ ಶ್ಲೇಷೆಯ ಮೇಲೆ ನಿಂತಿರುವ ಈ ಪದ್ಯಗಳನ್ನು ಕಾವ್ಯದ ಚರ್ಚೆಯಲ್ಲಿ ಉದಾಹರಿಸದಿರುವುದು ದುರಂತ. "Poetry is what is lost in translation" (ಅನುವಾದದಲ್ಲಿ ನಷ್ಟವಾಗುವುದೇ ಕಾವ್ಯ) ಎಂದು ಹೇಳಿರುವ ವಾಕ್ಯ ನಿಜವೇ ಆದರೆ Ogden Nash is lost in translation - ಹೀಗಾಗಿ ನ್ಯಾಶ್ ಕಾವ್ಯವೇ ಮೈವೆತ್ತಂತೆ! ಉದಾಹರಣೆಗೆ ಅವರ Genealogical Reflection ಎಂಬ ಕವಿತೆಯನ್ನು ಅನುವಾದ ಮಾಡುವುದು ಹೇಗೆ? ಕವಿತೆಯನ್ನ ನೋಡಿ:
Genealogical Reflection
No McTavish
Was ever lavish
(Hard Lines, ೧೯೩೧ರ ಸಂಗ್ರಹದಿಂದ)
McTavish ಎಂಬುದು ಸ್ಕಾಟ್ಲಂಡಿನ ವ್ಯಕ್ತಿಯ ಹೆಸರು. ಸ್ಕಾಟ್ಲಂಡಿನ ಜನ ಅತೀ ಜುಗ್ಗರೆಂದು ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ನೇರವಾಗಿ ಅನುವಾದ ಮಾಡಿದರೆ ಮೂಲ ಕವಿತೆಯ ಗಾಳಿಯೇ ಇಳಿದುಹೋಗುತ್ತದೆ. ಇದೇ ಕವಿತೆಯನ್ನು ಸ್ವಲ್ಪ ತಿರುಚಿ ಬರೆದದ್ದು ಹೀಗೆ:
ವಂಶಾವಳಿಯ ಬಗ್ಗೆ ಅವಲೋಕನ
ಯಾವ ಕೋಮಟಿ ಶೆಟ್ಟಿ
ದುಂದುಗಾರನಾಗಿರಲಿಲ್ಲವೆಂಬುದು ಗಟ್ಟಿ
(ಇದನ್ನು ಬರೆಯಲಿಲ್ಲ ಕೆ.ಟಿ.ಗಟ್ಟಿ.)
ಅಥವಾ ಅವರ ಹಾಗೆಯೇ ಪದತಿರುಚಿ, ಅವಗಳನ್ನು ಹಿಂಡಿ, ಶ್ಲೇಷೆ ಬಳಸಿ ಅವರದೇ ಕವಿತೆಯನ್ನು ಕನ್ನಡದಲ್ಲಿ ಬರೆಯುವ ಈ ಯತ್ನವನ್ನು ನೋಡಿ (ಮೂಲ ಕವಿತೆಯ ಹೆಸರು: More about people, Hardlines ಸಂಗ್ರಹದಿಂದ)
ಜನರ ಬಗ್ಗೆ ಮತ್ತಷ್ಟು
ಜನ ನಿಮ್ಮನು ಪ್ರಶ್ನೆ ಕೇಳದಿರುತ
ಉಪದೇಶ ಕೊಡುವುದು ಖಂಡಿತ
ಅದೂ ಇಲ್ಲವಾದರೆ ನಿಮ್ಮ ಭುಜದ ಮೇಲಿಂದ ಹಣಕಿ
ಕಾಲ ಅಡಿಯಿಂದ ಇಣಕಿ (ಸಾಧ್ಯವಾದರೆ ತಿಣುಕಿ)
ಕೊಡುತಾರೆ ತೊಂದರೆ
ಇಲ್ಲ ನಿಮ್ಮೂರಿಗೆ ಬಂದು ವಲಸೆ
ನಿಮಗೇ ಕೂಡುತ್ತಾರೆ ಕೆಲಸೆ
ಆರಾಮವಾಗಿರುವವರ ಕಂಡರೆ
ಕಂಡವರಿಗೆಲ್ಲ ತೊಂದರೆ
'ಕೆಲಸ ಎಲ್ಲ ರೋಗಕ್ಕೂ ಮದ್ದು' ಎಂದು ನಿಮಗಿವರು ಭಾಸಣ
ಉದಾಹರಣೆಗೆ ನೋಡಿ, ಫೈರ್‌ಸ್ಟೋನ್, ಫೋರ್ಡ್, ಎಡಿಸಣ
ಉಸಿರುಗಟ್ಟಿ ಸಾಯೋವರೆಗೂ ಇದೇ ಕೊರೆತವೇ ಕೊರೆತನ
ಆದರೂ ಮುಗಿಯದೀ ಚಿರಂಜೀವಿಗಳ ಜೀವನ
ಎಲ್ಲವೂ ಮುಗಿವುದೀ ವಿಚಿತ್ರದಲಿ --
ಕೆಲಸ ಮಾಡೋ ಇಷ್ಟವಿಲ್ಲದಿದ್ದರೆ, ಕೆಲನಮಾಡದಿರಲು ಹಣ
ಸಂಪಾದಿಸಲು, ಕೆಲಸ ಮಾಡಲೇಬೇಕೆನ್ನುವ ನೀತೀಲಿ
ನಮ್ಮ ಪರಿಸರದ ಬಗ್ಗೆ ನಾವು ಚಿಂತಿಸಬೇಕೇ ಬೇಡವೇ? ೧೯೯೩ರಲ್ಲಿ ಪರಿಸರದ ಬಗ್ಗೆ 'ಗಿಡ ಬೆಳೆಸಿ ಮರ ಉಳಿಸಿ' ಎಂಬ ಆಶಯದ ಕವಿತೆಗಳನ್ನ ನೋಡುವಾಗ - ಆಹಾ! ಹಿಂದೆ ಎಷ್ಟೊಂದು ದಟ್ಟ ಕಾಡುಗಳಿದ್ದುವು ಎಂದು ಉದ್ಗರಿಸುವಾಗ ನಾವು ಈ ಕವಿತೆಯನ್ನು 'ಸಾಮಾಜಿಕ ಜವಾಬ್ದಾರಿಯದು' ಎಂದು ಅಪ್ಪಿಕೊಂಡುಬಿಟ್ಟೇವು.
Song of the Open Road
I think I shall never see
A billboard lovely as a tree
Indeed, unless billboards fall
I'll never see a tree at all
(Happy Days, ೧೯೩೩ ಸಂಗ್ರಹದಿಂದ)
ಖಾಲಿ ರಸ್ತೆಯ ಹಾಡು:
ಮರದಷ್ಟು ಚಂದಕ್ಕ
ಕಾಣುವುದಿಲ್ಲ ಫಲಕ
ಫಲಕ ಬಿದ್ದ ಹೊರತು ಚಕ್ಷ
ಕಾಣುವುದಿಲ್ಲ ವೃಕ್ಷ.
'ಅಕ್ಷರ ಹೊಸ ಕಾವ್ಯ' ದ ಎರಡನೇ ಆವೃತ್ತಿ (೧೯೯೩)ಗೆ ಮುನ್ನುಡಿ ಬರೆಯುತ್ತಾ ಲಂಕೇಶ್ ಉತ್ತಮ ಕವಿತೆಯ ಲಕ್ಷಣಗಳಲ್ಲಿ ಒಂದಾಗಿ ಈ ಕೆಳಗಿನ ಅಂಶವನ್ನ ಗುರುತಿಸುತ್ತಾರೆ - 'ಬರೆದ ದಿನಾಂಕವಿಲ್ಲದಿದ್ದರೂ ಸಮಕಾಲೀನತೆ ಮತ್ತು ಅನಂತತೆಯ ಆಯಾಮ ಪಡೆದಂತಿರುತ್ತದೆ.' ಈಗ ಗ್ರಾಹಕ ಚಳವಳಿ (consumerism) ನ ಏಟಿನಿಂದ ಬಳಲುತ್ತಿರುವ ಕಾಲದಲ್ಲಿ ಕುಳಿತು Song of the Open Road ಓದಿದರೆ, ಅದು ಸಮಕಾಲೀನ ಎನ್ನಿಸುವುದಿಲ್ಲವೇ? ಈ ಕವಿತೆ ನ್ಯಾಶ್ ಬರೆದದ್ದು ೬೦ ವರ್ಷಗಳ ಹಿಂದೆ! (ಅಥವಾ ತಲೆಹರಟೆಯಾಗಿ, ಇಂದಿನ ಭಾರತ ೬೦ ವರ್ಷಗಳ ಹಿಂದಿನ ಅಮೆರಿಕದಷ್ಟು ಮಾತ್ರ ಮುಂದುವರೆದಿದೆ ಅನ್ನಬಹುದೇ?)
ನನ್ನ ಅನೇಕ ವಿದ್ಯಾರ್ಠಿಗಳಲ್ಲಿ ಒಬ್ಬ ಅರುವಿಂದ್ ಲಾಮಾ. ನ್ಯಾಶ್ ಬಹುಶಃ ಅವನ ಬಗ್ಗೆಯೇ ಬರೆದ ಕವಿತೆ ಇದಾಗಿರಬಹುದು:
The Lama
The one-l lama
He’s a priest
The two-l llama
He’s a beast
And I will bet
A silk pajama
There isn’t any
Three-l lllama
(the author’s attention has been called to a type of conflagration known as the three-alarmer. Pooh.)
[ಒಂದು ಎಲ್ ಲಾಮಾ
ಪೂಜಾರಿ
ಎರಡು ಎಲ್ ಲಾಮಾ
ಮೃಗವೇ ರೀ
ನನ್ನ ರೇಷ್ಮೆ ಪೈಜಾಮದಾಣೆ
ಮೂರು ಎಲ್ ಲಾಮಾ ಇಲ್ಲರೀ]
(ನಾಲ್ಕೈನ ಎಚ್ ಎಸ್ ಬಿಳಿಗಿರಿ ಈ ಬಗ್ಗೆ ಮಾತಾಡಲಿಲ್ಲ ಎಂಬುದು ಸಂತೋಷದ ವಿಷಯ. ನಿಮಗೆ ನೆನಪಿರಬಹುದು - ಎನ್ನಯ ಹೆಸರು ಎಚ್. ಎಸ್.ಬಿಳಿಗಿರಿ. ಶಿವನಿಗೆ ಮೂರೈ, ನನಗೋ ನಾಲ್ಕೈ.. ಬಿ ಐ ಎಲ್ ಐ ಜಿ ಐ ಆರ್ ಐ..)
ಎರಡು ಬಾಲಂಗೋಚಿಗಳು:
ಈ ಲೇಖನದ ಮೊದಲಲ್ಲೇ "A Nash for Every Bash" ಎಂಬ ವಾಕ್ಯ ಬರೆದಿದ್ದೇನೆ. ಉತ್ತಮ ಕಾವ್ಯ ಜೀವನಕ್ಕೆ ಹತ್ತಿರವಾಗಿ ಸ್ಪಂದಿಸುತ್ತದೆ ಎನ್ನುವುದನ್ನು ನಿರೂಪಿಸುವಂತೆ ಈಚೆಗೊಂದು ಘಟನೆ ಜರುಗಿತು. ಈ ಘಟನೆಯನ್ನು ಈ ಲೇಖನದಲ್ಲಿ ಸೇರಿಸಲು ನಿಜವಾದ ಬಲವಾದ ಕಾರಣ ಯಾವುದೂ ಇಲ್ಲ. Nonsense Verse ಬಗ್ಗೆ ನಾವು ಮಾತನಾಡುತ್ತಿರುವುದರಿಂದ - ಈ ನಾನ್‌ಸೆನ್ಸ್‌ನ ಸೇರಿಸಲಾಗಿದೆ. ನ್ಯಾಶ ಕವಿತೆಗಳ ಗುಂಗಿನಲ್ಲೇ ಇದ್ದ ನಾನು (ನ್ಯಾಶನಲಿಸ್ಟ್ ಅಂತ ಕರೀಬಹುದೇ??) ಏನೋ ತಿಕ್ಕಲು ತಿರುಗಿ ನಾನಿದ್ದ ಊರು 'ಆನಂದ'ದ ದಂತವೈದ್ಯರ ಬಳಿ ಹಲ್ಲು ಶುದ್ಧಿ ಮಾಡಿಸಿಕೊಳ್ಳಲು ಹೋದೆ. (ಊರಿನ ಹೆಸರು ಆನಂದ ಆದರೇನಂತೆ, ಜಿಲ್ಲೆಯ ಹೆಸರೇ Kheda ಖೇದ ಆಗಿರುವಾಗ?) ಆ ದಂತವೈದ್ಯರು ಮೊದಲಿಗೆ ಜೇಬು ಸಾಫ್ ಮಾಡಿ ನಂತರ ಹಲ್ಲು ಸಾಫ್ ಮಾಡಬೇಕೆಂದು ನಿರ್ಧರಿಸಿದಂತಿತ್ತು. ಮಾತಾಡುತ್ತಾ 'ನೀವು ನಿಮ್ಮ ಸಂಸ್ಥೆಯ ಮೆಡಿಕಲ್ ರೀ-ಇಂಬರ್ಸ್‌ಮೆಂಟ್ ಕಾಗದಗಳನ್ನು ತಂದುಬಿಡಿ, ಸೈನ್ ಹಾಕುತ್ತೇನೆ' ಎಂದು ಹೇಳಿದಾಗ ಹಲ್ಲು ಸಾಫ್ ಮಾಡಲು ರೂ.೫೦೦ ಯಾಕೆಂಬುದಕ್ಕೆ ನನಗೆ ಕಾರಣ ಹೊಳೆಯಿತು. ಆದರೆ ನಮ್ಮ ಸಂಸ್ಥೆಯವರು ಹಲ್ಲಿನ ಸಮಸ್ಯೆಗಳಿಗೆ ಹಣ ಕೊಡುವುದಿಲ್ಲ ಎಂದಾಗ ನೆನಪಾದದ್ದು ನ್ಯಾಶ್:
Some pains are physical
Some are mental
That which is both is dental
ವೈದ್ಯರ ಬಳಿ ಹೋದಾಗ ಈ ಕವಿತೆ ಹೇಳಿದೆ. ಅವರು ಚೆನ್ನಾಗಿ ನಕ್ಕು ಕೈ ಚಾಚಿದರು. (ಒಳ್ಳೆಯ ಜೋಕ್ ಹೇಳಿದಾಗ ಕೈ ಒಡ್ಡುವುದು, ಅದರ ಮೇಲೆ ಒಮ್ಮೆ ತಟ್ಟುವುದು ಗುಜರಾತಿ ಪದ್ಧತಿ) ನಾನೂ ಕೈ ತಟ್ಟಿದೆ. ಜತೆಗೆ ನನ್ನ ತೊಳಲಾಟ ಅರ್ಥಮಾಡಿಕೊಂಡು ರೇಟು ಕಮ್ಮಿ ಮಾಡಬಹುದೆಂಬ ಆಶಾವಾದ ನನ್ನಲ್ಲಿತ್ತು. ತಟ್ಟಿದ ನಂತರವೂ ಚಾಚಿದ ಕೈ ಹಿಂದಕ್ಕೆ ಹೋಗಲಿಲ್ಲ - ೫೦೦ ರೂಪಾಯಿ ತಟ್ಟಿದ ಮೇಲೆಯೇ ಅವರು ಶಾಂತವಾದದ್ದು. Nash for every bash ಎಂಬುದು ಮತ್ತೆ ನೆನಪಾಯಿತು. ಜೀವನದಲ್ಲಿ ಒಂದೊಂದು ಏಟು ತಿಂದಾಗಲೂ ಒಂದೊಂದು ನ್ಯಾಶ್ ಪದ್ಯ ನೆನಪಾಗುವುದು ಎಂದು. ಈ ಸಂದರ್ಭಕ್ಕೆ ನ್ಯಾಶ್ ಅವರೇ ಒಂದು ಕಡೆ ಬರೆದಿದ್ದಾರೆ:
Certainly there are lots of things in life money won't buy, but it's very funny
Have you ever tried to buy them without money?
(Happy Days, ೧೯೩೩ರ ಸಂಗ್ರಹ)
ಎರಡನೆಯದು:
ನಾನು ಯಾವಾಗಲೂ ಪ್ರತಿಸಂದರ್ಭಕ್ಕೂ ನ್ಯಾಶ್ ಇದ್ದಾನೆ ಎಂದು ನಂಬಿರುವವನು. ನನ್ನ ಆಗ ಆರುವರ್ಷದವನಾಗಿದ್ದ ಮಗ ಶಾಲಯಲ್ಲಿ ಕಂಠಪಾಠ ಸ್ಪರ್ಧೆಯಿದೆ ಎಂದು ನನ್ನ ಬಳಿ ಹೇಳಿದಾಗ ನನಗೆ ನಿಜವಾಗಿಯೂ ಸೃಜನಾತ್ಮಕವಾಗಿ ಶಾಲೆಯನ್ನು ಹೆದರಿಸಿ/ಬೆದರಿಸಿ ಬಹುಮಾನ ಪಡೆಯಬೇಕು ಅನ್ನಿಸಿತು. ಆಗ ನಾನು ನ್ಯಾಶ್‍ರನ್ನ ಸಮೀಪದಿಂದ ಪರೀಕ್ಷಿಸಿದಾಗ ಹೊಳೆದದ್ದು -- ಈತ ಮಕ್ಕಳಿಗಾಗಿ ಬರೆಯುವುದಿರಲಿ, ಮಕ್ಕಳ ಬಗ್ಗೆ ಒಂದಿಷ್ಟು ಒಳ್ಳೆಯ ಭಾವನೆಗಳನ್ನೂ ಇಟ್ಟುಕೊಂಡಿಲ್ಲ ಅಂತ ಹೊಳೆಯಿತು. ಉದಾಹರಣೆಗೆ ಈ ಕವಿತೆಯನ್ನೇ ತೆಗೆದುಕೊಳ್ಳಿ
Everybody who has a baby thinks everybody who hasn’t a baby ought to have a baby
Which accounts for the success of such plays as the Irish Rose of Abie,
The idea apparently being that just by being fruitful
You are doing something beautiful
Which if it is true
Means that a common housefly is several million times more beautiful than me or you
(ಇದನ್ನು ನಾನು ಅನುವಾದಿಸಲು ಪ್ರಯತ್ನಿಸುವುದಿಲ್ಲ)
ಹೀಗೆ ಮಗನ ಕಂಠಪಾಠ ಸ್ಫರ್ಧೆಗೆ ನಾವು ಕಡೆಗೆ ಕಂಡು ಹುಡುಕಿದ ಪದ್ಯ ಇದು:
The Giraffe
I beg you children do not laugh
When you survey a tall giraffe.
It's hardly sporting to attack
A beast that cannot answer back.
Now you and I have shorter necks,
But we can talk of gin and sex;
He has a trumpet for a throat
And cannot blow a single note.
It isn't that his voice he hoards;
He hasn't any vocal cords.
I wish for him, and for his wife,
A voluble girafter life.
(The Primrose Path 1935)
ಆದರೆ ಇದರಲ್ಲಿ ಒಂದು ಸಣ್ಣ ಸಮಸ್ಯೆ ಇತ್ತು. ಆರು ವರ್ಷದ ಕಂದ "ಸರ್ವೆ" ಎಂಬ ಪದವನ್ನು ಬಳಸಿದರೆ, ಮಿಕ್ಕ ಪುಟ್ಟ ಕಂದಮ್ಮಗಳಿಗೆ ಅರ್ಥವಾಗಬೇಕಲ್ಲವೇ.. ಅದಕ್ಕಾಗಿ ಅದನ್ನ "ಸೀ" [see] ಎಂದು ಬದಲಾಯಿಸಿದೆವು. ಆದರೆ ಮುಂದಿನದು ಸ್ವಲ್ಪ ಕಷ್ಟದ್ದಾಗಿತ್ತು.. “gin and sex” ಎಂಬುದನ್ನು ನನ್ನ ಕಂದ ಹೇಳಿದರೆ ಬಹುಮಾನ ಹೋದಂತೆಯೆ... ಅಷ್ಟೇ ಏಕೆ ಯಾರಯಾರ ಕಾಲಿಗೋ ಬಿದ್ದು ಕಷ್ಟಪಟ್ಟು ಸಂಪದಿಸಿರುವ ಸ್ಕೂಲಿನ ಸೀಟೂ ಹೋಗಬಹುದು.. ಹೀಗಾಗಿ ನಮ್ಮ ಬುದ್ದಿಯನ್ನೆಲ್ಲ ಉಪಯೋಗಿಸಿ gin and sex ಪದಗಳನ್ನ books and texts ಮಾಡಿದೆವು. sex ಮತ್ತು texts ಪ್ರಾಸಬದ್ಧವಾಗಿರಬಹುದೆಂದು ಯಾರಾದರೂ ಯೋಚಿಸಿದ್ದರೇ??…
ಕಡೆಗೆ ಅವನಿಗೆ ಬಹುಮಾನ ಬಂತೆಂಬುದು ಬೇರೆ ವಿಷಯ.
ಮುಗಿಸುವ ಮುನ್ನ ನ್ಯಾಶ್ ಸ್ಫೂರ್ತಿಯಿಂದ ಬರೆದ ಕೆಲವು [ನನ್ನದೇ] ಕವಿತೆಗಳು:
ಹೆಸರಿನ ಬಗ್ಗೆ ಒಂದು ಮಂಗಾವಲೋಕನ
ಹೆಸರು ಹನುಮಂತೂ.
ಬಾಲವೊಂದಿಲ್ಲ ಅಂತೂ, ಇನಿತೂ.
ಮೊಲದ ಬಗ್ಗೆ ಒಂದೇ ಕವಿತೆ
ಈ ಕವಿತೆಯ ವಸ್ತು ಮೊಲ
ಅದರ ಹವ್ಯಾಸಗಳ ಉಲ್ಲೇಖ ಮಾತ್ರ ಇಲಾ
ಹೆಣ್‍ಸಂಖ್ಯೆ
ಮರಳಿ ಯತ್ನವ ಮಾಡುವರು ಮೂರು ಹೆಣ್ಣು ಹೆತ್ತವರು
ಸಾಧ್ಯತೆ ೫೦ರಷ್ಟು ಹೆಣ್ಣೇ ಹೆರಬಹುದು ಮತ್ತವರು
ಗಂಡು ಮಗ, ಮಕ್ಕಳಿದ್ದವರು ಅಲ್ಲಿಗೇ ನಿಲ್ಲಿಸುವುದು
ಈ ಜಗದ ಹೆಣ್‍ಸಂಖ್ಯೆಯ ಬಗ್ಗೆ ತಿಳ್ಳಿಸುವುದು.
ರಾಜಾ ಸೀಟ್
ಕುಪ್ಪಳಿಸಿದಾಗ ಹಕ್ಕಿ ಹಾರಿದಂತೆ ಕಾಣುವ ಕಪ್ಪೆ
ಕುಂಡೆಯೂರದೆಯೇ ನೆಲದ ಮೇಲೆ ಕೂರುವುದು ತಪ್ಪೇ?
ಕ್ರಿಸ್ತ ಶೆಕೆ
ಕವಿಯು ತಾನೇ ಕವಿತೆ ಬರೆವೆನೆಂದುಕೊಳ್ಳಲಿ ಬಿಡಿ
ಪೋಲೀಸನೂ ಕಳ್ಳನಿಗೆ ತಾನೇ ತೊಡಿಸಲಿ ಬೇಡಿ
ಅವರಿಗೆಲ್ಲಾ ತಿಳಿಯದು ಪಾಪವು
ನಾನೆ ಸತ್ಯವು, ನಾನೆ ಜೀವವು ನಾನೆ ಪೋಲೀಸರ ಬೇಡಿ
ನಾನೆ ಕಳ್ಳನು ನಾನೆ ಕವಿತೆಯು ನಾನೆ ಸೂರ್ಯನ ತಾಪವು
ವಿಸರ್ಜನೆಯ ಬಗ್ಗೆ ಒಂದು ಸಿಂಹಾವಲೋಕನ
ಎದುರಿಗೆ ನಿಂತರೆ ಸಿಂಹ, ಕೇಳಿಸಿದರೆ ಘರ್ಜನೆ
ಸರಳವಾಗಿ ಆಗುವುದು ಮೂತ್ರ ವಿಸರ್ಜನೆ
ಅರ್ಥ ಶಾಸ್ತ್ರ
ಯಾರಿಗೆ ಬೇಕು ಅರ್ಥ?
ನನಗಿಲ್ಲ ಸ್ವಾರ್ಥ.
ಶತಾಯ ಗತಾಯ
ಖುಶಿಯಿಂದಿದ್ದ ಶತಪಾದ
ಶತಪಾದ ಹಾಕುತ್ತಾ ಶಥಪಥ
ಕೇಳಲೊಂದು ದಿನ ಕುಪ್ಪಳಿಸುವ ಕಪ್ಪೆ
(ಅದು ಶುದ್ಧ ಬೆಪ್ಪೇ!)
"ಉದ್ದುದ್ದ" ನಡೆವಾಗ ಶತಪಾದ..
ಬೆಳೆಸುವುದು ನೀನಾವುದಾದ ಮೇಲಾವಪಾದ?
ಯೋಚಿಸಿದ ಚಿಂತಿಸಿದ ಶತಪಾದ: ತಿಳಿಯಲಿಲ್ಲ
ಆ ಕೋಣೆಯ ಮೂಲೆಯಿಂದವನ ಪಾದ ಬೆಳೆಯಲಿಲ್ಲ.
ಯೋಚಿಸಿ, ಯೋಚಿಸಿ ಶತಪಾದ, ಹಾಕಿ ಶಥಪಥ
ಹಾಕಿ, ಹೆಜ್ಜೆ, ಯೋಚಿಸಿ, ಯೋಚಿಸಿ, ನಡೆಯುವುದನ್ನೇ ಮರೆಥ.
ಪಾರ್ಟಿ
ಬನ್ನಿ ಹಾಕುವೆ ಶುದ್ಧ ಸರ್ಕಾರಿ ಊಟ
ಮತ್ಸ್ಯವಿಲ್ಲ ಮಾಂಸವಿಲ್ಲ ಇಲ್ಲ ಮೂಳೆ ಕಾಟ
ಮದ್ಯವಿಲ್ಲ ಮದಿರೆಯಿಲ್ಲ ನೀರ್ತುಂಬಿದ ಲೋಟ
ಕ್ಯಾಲರಿಗನುಸಾರವಾಗಿ ಒಬ್ಬೊಬ್ಬರಿಗೂ ಕೋಟ
ಸಿಹಿಯು ಇಲ್ಲ ಕೊಬ್ಬು ಇಲ್ಲ ಒಣ ತರಕಾರಿ ತಟ್ಟೆ
ಸೀರೆಯುಟ್ಟ ನೀರೆಯರ ಮೈತುಂಬಾ ಬಟ್ಟೆ
ಎರ್ಡು ಲೋಟ ನೀರ್ನಿಂದ ಮನಸು ಹಾರದು ತೊಲೆ
ಖಾಲಿ ತಟ್ಟೆ ಖಾಲಿ ಹೊಟ್ಟೆ ಹಾಲಿ ಖಾಲಿ ತಲೆ
ಬಾಳೆ ಎಲೆ ಬಿಡಿಸಿ ಹಾಸಿ ನೆಲದ ಮೇಲೆ ಮಣೆ
ಅರಿಥಿಯಿಲ್ಲ, ನಾನೂ ಇಲ್ಲ, ಖಾಲಿಯಾದ ಕೋಣೆ
ಓದಿ ಹೋದವಳು
ನಟಿಸುವುದ ಮರೆಥೆ
ಬರೆಯುವೆನು ಕವಿಥೆ
ಎಂದ ಚಿತ್ರನಟಿ ರಾಧಿ
ದ್ವಿಗುಣ ಅಪರಾಧಿ
ನಂಬಿಲ್ಲವಾದರೆ ಅವಳ ಕವಿತೆಗಳನ್ನು ಓಧಿ
No comments:
Post a Comment