Sunday, March 8, 2009

ಕನ್ನಡಕ್ಕಿನ್ನೊಂದು ಪತ್ರಿಕೆ, ಕನ್ನಡ ಕಾವ್ಯ, ಕೆಲವು ಇತರ ವಿಚಾರಗಳು

ಭಾಗ ೧: ಶಬ್ದಗುಣ: ಮತ್ತೊಂದು ಸಣ್ಣ ಪತ್ರಿಕೆ

ದೇಶಕಾಲದ ಬಗ್ಗೆ ಚರ್ಚಿಸುತ್ತಿರುವಾಗಲೇ ಕನ್ನಡಕ್ಕೆ ಮತ್ತೊಂದು ಸಣ್ಣ ಪತ್ರಿಕೆಯ ಪ್ರವೇಶವಾಗಿದೆ. ಇದು ವಸಂತ ಬನ್ನಾಡಿಯವರು ಇತ್ತೀಚೆಗೆ ಹೊರತಂದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ. ದೇಶಕಾಲದ ಬಗ್ಗೆ ನಾನು ನಾಲ್ಕು ಸಂಚಿಕೆಗಳ ನಂತರ ಬರೆದೆನಾದರೂ ಇದರ ಬಗ್ಗೆ ನಾನು ತಕ್ಷಣವೇ ಬರೆಯುತ್ತಿರುವುದಕ್ಕೆ ಕಾರಣಗಳು ಹಲವು. ಮೊದಲ ಭಾಗದಲ್ಲಿ ನಾನು ಈ ಪತ್ರಿಕೆಯ ಸ್ಥಾನ, ಉದ್ದೇಶ, ವಿನ್ಯಾಸದ ಬಗೆ ಚರ್ಚಿಸುತ್ತೇನೆ. ಎರಡನೆಯ ಭಾಗದಲ್ಲಿ ಈ ಸಂಚಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಕಾಲೀನ ಕನ್ನಡಕಾವ್ಯದ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆಯುತ್ತೇನೆ. ಕಡೆಯದಾಗಿ ಕಾವ್ಯವಲ್ಲದೇ ಈ ಸಂಚಿಕೆಯಿಂದ ಹೊರಹೊಮ್ಮಿರುವ ಕೆಲವು ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶ ನನಗಿದೆ. ಅಂದರೆ ಶಬ್ದಗುಣದಲ್ಲಿ ಸಾಕಷ್ಟು ಹೂರಣವಿದೆ ಅಂತ ನಾನು ಒಪ್ಪಿದಂತಾಯಿತು. ಅದು ನಿಜವೂ ಸಹ.



ಶಬ್ದಗುಣ ತನ್ನ ವಿನ್ಯಾಸದಲ್ಲಿ ದೇಶಕಾಲದಿಂದ ಬಹಳಷ್ಟು ಸ್ಫೂರ್ತಿ ಪಡೆದಿರುವಂತಿದೆ. ಸಂಚಿಕೆಯ ಆಕಾರ, ಗಾತ್ರ, ಚಿತ್ರಗಳ ಬಳಕೆ, ವಿನ್ಯಾಸ, ಕಡೆಯಲ್ಲಿ ಕೊಟ್ಟಿರುವ ಲೇಖಕರ ವಿಳಾಸಗಳು ಎಲ್ಲವನ್ನೂ ಗಮನಿಸಿದರೆ ದೇಶಕಾಲದ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಹಲವು ರೀತಿಗಳಿಂದ ಶಬ್ದಗುಣ ದೇಶಕಾಲಕ್ಕಿಂತ ಭಿನ್ನ ಹಾಗೂ ಮುಖ್ಯ.

ಶಬ್ದಗುಣದ ಮೊದಲ ಸಂಚಿಕೆ ಕನ್ನಡ ಕಾವ್ಯಕ್ಕೆ ಮೀಸಲು. ಸಾಮಾನ್ಯವಾಗಿ ಆಂಥಾಲಜಿ ಅಥವಾ ವಾಚಿಕೆಗಳನ್ನು ಮಾಡುವಾಗ ಬಳಸುವ ತಂತ್ರವನ್ನು ಸಂಪಾದಕರಾದ ವಸಂತ ಬನ್ನಾಡಿ ಈ ಪತ್ರಿಕೆಯಲ್ಲಿ ಬಳಸಿದ್ದಾರೆ. ಆದರೆ ಪತ್ರಿಕೆ ಅಂದ ಕೂಡಲೇ ಭಿನ್ನ ಅಭಿರುಚಿಗಳಿಗೆ ಪೂರಕವಾಗುವ ವೈವಿಧ್ಯಮಯತೆಯ ಆಶಯವಿರುವುದರಿಂದ ಕವಿತೆಯ ಪ್ರಕಾರದಲ್ಲಿ ಅಷ್ಟು ಆಸಕ್ತಿಯಿಲ್ಲದವರಿಗೆ ಈ ಸಂಚಿಕೆಯಲ್ಲಿ ಹೆಚ್ಚು ಏನೂ ಸಿಗಲಾರದು. ಪತ್ರಿಕೆಗೆ ಚಂದಾ ನೀಡುವ ಓದುಗರಿಗೆ ತಾವು ಪತ್ರಿಕೆಯಿಂದ ಏನು ನಿರೀಕ್ಷಿಸಬಹುದು ಎಂಬುದರ ಅರಿವು ಬರುವಂತೆ ಮೊದಲ ಸಂಚಿಕೆಗಳು ರೂಪಿತವಾಗಬೇಕಾಗುತ್ತದೆ. ಹೀಗಾಗಿ ಮೊದಲ ಸಂಚಿಕೆಯಲ್ಲೇ ಕವಿತೆಯ ಬಗ್ಗೆ ವಿಶೇಷ ಒಲವು ತೋರಿರುವುದು ನಮ್ಮ ನಿರೀಕ್ಷೆಗಳನ್ನು ಸ್ವಲ್ಪ ಗಲಿಬಿಲಿ ಮಾಡುತ್ತವೆ. ಇದು ಶಬ್ದಗುಣದ ಬಗ್ಗೆ ನನಗಿರುವ ಮೊದಲ ತೊಂದರೆ.

ಎರಡನೆಯ ವಿಚಾರ ಪತ್ರಿಕೆಯ ಒಳವಿನ್ಯಾಸಕ್ಕೆ ಸಂಬಂಧಿಸಿದ್ದು. ಕವಿತೆಗಳು, ಕವಿಗಳ ವಿಚಾರಗಳು, ಪರಿಚಯಗಳು, ಸಂದರ್ಶನಗಳ ನಡುವೆ ನಮಗೆ ಕವಿಗಳ ಭಾವಚಿತ್ರ ಕಾಣಿಸಿದರೆ ಅದು ಸಹಜ. ಕವಿತೆಗೆ ಇಲ್ಲಸ್ಟ್ರೇಶನ್ ಅಂತ ಒಂದು ರೇಖಾಚಿತ್ರವೂ ಸಹಜವೇ. ಆದರೆ ನಾಟಕಗಳ ಭಾವಚಿತ್ರಗಳು ನೋಡಲು ಅಂದವಾಗಿ ಕಾಣುತ್ತವೆಯೇ ಹೊರತು, ಅವುಗಳು ಪಕ್ಕದಲ್ಲಿರುವ ಬರಹಕ್ಕೆ ಪೂರಕವಾಗಿ ಇಲ್ಲವೇ ಇಲ್ಲ.

ಮೂರನೆಯದಾಗಿ ಬನ್ನಾಡಿಯವರು ಪತ್ರಿಕೆಗೆ ಒಂದು ಭಿನ್ನ ವ್ಯಕ್ತಿತ್ವ ಕೊಡುವಲ್ಲಿ ಸೋತಿದ್ದಾರೆ ಅನ್ನಿಸುತ್ತದೆ. ಈ ಸಂಚಿಕೆಯಲ್ಲಿ ಒಂದು ರೀತಿಯ ಸಾತತ್ಯ ಕಾಣಿಸುವುದಿಲ್ಲ. ಇದರಲ್ಲಿ ಬನ್ನಾಡಿಯವರ ವಿಚಾರಕ್ಕಿಂತ ಹೆಚ್ಚಾಗಿ ಅವರ ಉತ್ಸಾಹ ಕಾಣಸಿಗುತ್ತದೆ. ಪ್ರತಿ ಭಾಗದಲ್ಲೂ ಕವಿತೆಗಳ ಜೊತೆಗೆ ಕವಿಗಳನ್ನು-ವಿಮರ್ಶಕರನ್ನು ನಾಲ್ಕೈದು ಬಾಲಿಶ ಪ್ರಶ್ನೆ ಕೇಳಿ ಅವರ ಉತ್ತರಗಳನ್ನು ಹಾಕಿದ್ದಾರೆ. ಶಿವಪ್ರಕಾಶರ ಒಂದು ಅದ್ಭುತ ಸಂದರ್ಶನ ಮೂರುಭಾಗಗಳಲ್ಲಿ ಅಚ್ಚಾಗಿದೆ. ತಿರುಮಲೇಶರ ಅಂಥದೇ ಒಂದು ಸಂದರ್ಶನವಿದೆಯಾದರೂ ಒಂದು ಭಾಗ ಮುಂದಿನ ಸಂಚಿಕೆಯಲ್ಲಿ ಅಚ್ಚುಮಾಡುವುದಾಗಿ ಹೇಳಿ ಅದನ್ನು ಧಾರವಾಹಿಯನ್ನಾಗಿಸಿದ್ದಾರೆ. ಅದೇ ಕಾಲಕ್ಕೆ ಸ.ಉಷಾ, ಸವಿತಾ ನಾಗಭೂಷಣ - ಇಬ್ಬರ ಪುಟ್ಟ ಸಂದರ್ಶನಗಳಿವೆ. [ಹೆಂಗಸರಿಗೆ ಹೆಚ್ಚು ಸ್ಥಳಾವಕಾಶವಿಲ್ಲವೇ, ಅಥವಾ ಸ್ಥಳಾಕ್ರಮಣಕ್ಕೂ ಒಟ್ಟಾರೆ ಕಾವ್ಯಕೃಷಿಯ ಪರಿಮಾಣಕ್ಕೂ ಏನಾದರೂ ಕೊಂಡಿಯಿರಬಹುದೇ?] ಕವಿತೆಯ ಬಗೆಗೇ ಮೀಸಲು ಸಂಚಿಕೆಯಾಗಿದ್ದರೆ, ಸದ್ಯಕ್ಕೆ ಕನ್ನಡ ಕವಿತಾಲೋಕದಲ್ಲಿ ಏನಾಗುತ್ತಿದೆ ಎಂದು ಚರ್ಚಿಸುವಂತಹ ಒಂದು ದೀರ್ಘ ಲೇಖನವಿದ್ದಲ್ಲಿ ಸಂಚಿಕೆಗೂ ಒಂದು ಅರ್ಥ ಬರುತ್ತಿತ್ತು. ಇಷ್ಟೆಲ್ಲಾ ಗೊಣಗಿದರೂ, ನನ್ನ ಮಟ್ಟಿಗೆ ಇದು ಒಂದು ಸಂಗ್ರಹಯೋಗ್ಯ ಸಂಚಿಕೆ. ನಾನು ಮೊದಲೇ ಹೇಳಿದಂತೆ ಇದಕ್ಕೆ ಬನ್ನಾಡಿಯವರ ಉತ್ಸಾಹವೇ ಕಾರಣವಿರಬಹುದು.

ಭಾಗ ೨: ಕನ್ನಡ ಕಾವ್ಯ: ಒಂದು ರಿಪ್ ವ್ಯಾನ್ ವಿಂಕಲ್ ಪ್ರತಿಕ್ರಿಯೆ.

ಹಲವು ವರ್ಷಗಳಿಂದ ಕರ್ನಾಟಕದಿಂದ ದೂರವಿರುವುದರಿಂದ ಸಮಕಾಲೀನಕನ್ನಡ ಕಾವ್ಯದ ಬೆಳವಣಿಗೆಯನ್ನು ನಾನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಕವಿತಾ ಸಂಗ್ರಹವನ್ನು ಓದುವುದು, ಅಥವಾ ವೆಂಕಟೇಶಮೂರ್ತಿಯವರ ಸಮಗ್ರಕಾವ್ಯ ಬಂದಾಗ ಅದನ್ನು ಆಸ್ವಾದಿಸುವುದು, ಅಥವಾ ತಿರುಮಲೇಶರ ಅಪ್ರಕಟಿತ ಕವಿತೆಗಳನ್ನ ಅವರು ಈ ಮೇಲ್ ಮಾಡಿದಾಗ ಓದುವುದು ಬಿಟ್ಟರೆ ನಾನು ಬಹುತೇಕ ಮಟ್ಟಿಗೆ "ನಿರಕ್ಷರಿ"ಯಾಗಿದ್ದೆ. ಪ್ರತಿವಾರದ ಪುರವಣಿಗಳಿಲ್ಲದೇ - ನಿಯಮಿತವಾಗಿ ಯುಗಾದಿ-ದೀಪಾವಳಿ ಸಂಚಿಕೆಗಳು ಇಲ್ಲದೇ, ಸಂಚಯ ಮತ್ತು [ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ] ಸಂವಾದದ ಸಂಚಿಕೆಗಳ ಮೇಲಷ್ಟೇ ನನ್ನ ಓದು ಆಧಾರಿತವಾಗಿತ್ತು. ಇದೀಗ ಕರ್ನಾಟಕಕ್ಕೆ ಮರುಳಿರುವುದು ನನ್ನ ಮಟ್ಟಿಗೆ ಒಂದು ಹೊಸಹುಟ್ಟಾಗಿದೆ. ಈ ನಿಟ್ಟಿನಲ್ಲಿ ಶಬ್ದಗುಣ ನನ್ನ ಮಟ್ಟಿಗೆ ಕನ್ನಡ ಕಾವ್ಯದೊಂದಿಗೆ ಮರುಬೆಸುಗೆ ಪಡೆಯಲು ಪೂರಕವಾಯಿತು. ಶಬ್ದಗುಣದ ಮೊದಲನೆಯ ಸಂಚಿಕೆಯನ್ನು ಕಂಡನಂತರದ ಸೀಮಿತ ಅನುಭವದ ಆಧಾರದ ಮೇಲೆ ಈ ಭಾಗದ ಮಾತುಗಳನ್ನು ಬರೆಯುತ್ತಿದ್ದೇನೆ. ಇದು ಪ್ರಾತಿನಿಧಿಕವೂ ಅಲ್ಲ, ಸಮಗ್ರವೂ ಅಲ್ಲ ಅನ್ನವ ಮಿತಿಯನ್ನು ನಾನು ಬಲ್ಲೆ. ಆದರೂ ನನಗೆ ಇದು ಒಂದು ಕುತೂಹಲದ ಕಾಯಕ.

ಇದರ ಲೇಖಕರ ಪಟ್ಟಿಯಲ್ಲಿ ೪೬ ಮಂದಿಯ ಹೆಸರಿದ್ದು - ಒಟ್ಟಾರೆ ಎಲ್ಲರೂ ಕನ್ನಡ ಕಾವ್ಯವನ್ನು ಬರೆದವರೋ ಅಥವಾ ಕನ್ನಡ ಕಾವ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿದ ವಿಮರ್ಶಕರೋ ಆಗಿದ್ದಾರೆ. ಈ ಸಂಚಿಕೆಯಲ್ಲಿ ಒಂದೂ ಅನುವಾದಿತ ಪದ್ಯವಿಲ್ಲ. ಹೀಗಾಗಿ ಇದು ಒಂದು ಸೀಮಿತ ರೀತಿಯಲ್ಲಿ ಸಮಕಾಲೀನ ಕನ್ನಡ ಕಾವ್ಯವನ್ನ ಪ್ರತಿನಿಧಿಸುತ್ತದೆ ಎಂದು ಹೇಳಬಹುದೇನೋ. ಸ್ಥಾಪಿತ ಕವಿಗಳ ಹಳೆಯ ಕವಿತೆಗಳು - ಜೊತೆಗೆ ಕಾವ್ಯದ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ, ವಿಮರ್ಶಕರ ಒಲವುಗಳು ಮತ್ತು ಅವರಿಗಿಷ್ಟವಾದ ಕವಿತೆ ಹೆಸರು, ಹೊಸ ಕವಿಗಳ ಕವಿತೆಗಳು ಮತ್ತು ಅವರ ಒಲವುಗಳು.... ಹೀಗೆ ಕವಿತೆಯ ಕೆಟಗರಿಯಲ್ಲಿ ಪಂಚಭಕ್ಷ್ಯಗಳನ್ನು ಈ ಸಂಚಿಕೆ ಒದಗಿಸುತ್ತದೆ. ಸುಮಾರು ೧೯೯೨ರಲ್ಲಿ ಕರ್ನಾಟಕದಿಂದ 'ವಿ'ಸ್ಥಾಪಿತನಾದ ನನಗೆ ಕನ್ನಡ ಕವಿತಾಲೋಕದ ಬಗ್ಗೆ ಮತ್ತೆ ಕೈಕುಲುಕಲು ಈ ಸಂಚಿಕೆ ಒಂದು ರೀತಿಯ ಪರಿಚಯ ಗ್ರಂಥವಾಗಿದೆ.

ಮೊದಲಿಗೆ ಶಬ್ದಗುಣದಲ್ಲಿ ಬಂದಿರುವ ಕೆಲ ಕವಿ/ವಿಮರ್ಶಕರ ಬರವಣಿಗೆಯ ಭಾಗವನ್ನು ಪರಿಶೀಲಿಸೋಣ. ಶಬ್ದಗುಣದಲ್ಲಿ ವಿಮರ್ಶಕರನ್ನು ಆರು ಪ್ರಶ್ನೆ ಕೇಳಿ ಅವರ ಉತ್ತರ ಸ್ವೀಕರಿಸಲಾಯಿತು. ಈ ಆರು ಪ್ರಶ್ನೆಗಳಲ್ಲಿ ನಮ್ಮ ಚರ್ಚೆಗೆ ಮುಖ್ಯವಾದವು ಎರಡು: ಹೊಸ ಓದುಗರಿಗೆ ನೀವು ಶಿಫಾರಸು ಮಾಡುವ ಕವಿಗಳು/ಸಂಕಲನಗಳು ಯಾವುವು? ಈಗಿನ ಕಾವ್ಯದ ಬಗ್ಗೆ ನಿಮಗೆ ಏನನ್ನಿಸುತ್ತದೆ, ಗಮನಾರ್ಹ ಕವಿಗಳು ಯಾರು? ಒಂದು ಥರದಲ್ಲಿ ಚಾರಿತ್ರಿಕ ನೆಲೆಯಲ್ಲಿ ಸಮಕಾಲೀನ ಕಾವ್ಯದ ಮೌಲ್ಯಮಾಪನ ಮಾಡುವ ಪುಟ್ಟ ಸನ್ನಾಹ ಇದು. ಕವಿಗಳನ್ನು ಕೇಳಿದ ಪ್ರಶ್ನೆಗಳು ಹೊಸ ಕವಿಗಳಲ್ಲಿ ಗಮನಾರ್ಹರಾದವರು ಯಾರು? ಈ ಎರಡೂ ಭಾಗಗಳು ಅನೇಕರ ಅಭಿಪ್ರಾಯದ ಮೇಲೆ ಆಧಾರಿತವಾಗಿರುವುದರಿಂದ ಸಮಕಾಲೀನ ಲೇಖಕರ ಬಗ್ಗೆ ಒಂದು ಪ್ರಾತಿನಿಧಿಕ ಯಾದಿಯಾಗುವ ಸಾಧ್ಯತೆಯಿದೆ. ಹೀಗಾಗಿ ನಾನು ಕೂತು ಆ ಯಾದಿಯನ್ನು ಸೂಕ್ಷ್ಮವಾಗಿ ಗಮನಿಸಿದೆ.

ವಿಮರ್ಶಕರಲ್ಲಿ ಕೆಲವರು ಯಾವುದೇ ಕವಿಗಳನ್ನು ಸ್ಪಷ್ಟವಾಗಿ ಹೆಸರಿಸಲಿಲ್ಲ. ಕೆಲವರು ನಮಗೆ ಕನ್ನಡ ಕಾವ್ಯದ ಭವ್ಯ ಪರಂಪರೆಯ ನೆನಪು ಮಾಡುವ ಸನ್ನಾಹದಿಂದ ಪಂಪನಿಂದ ಆರಂಭಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅಡಿಗರ ನಂತರದ ಕಾಲಘಟ್ಟದಲ್ಲಿ ಬಂದ ಕೆಲವು ಮುಖ್ಯಹೆಸರುಗಳು ನಮಗೆ ಸ್ಪಷ್ಟವಾಗಿ ಗೋಚರಿಸುವುದಲ್ಲ. ಉದಾಹರಣಿಗೆ ನಮಗೆ ಇಡೀ ಸಂಚಿಕೆಯಲ್ಲಿ ನವ್ಯರು ಗಮನಾರ್ಹವಾಗಿ ಕಾಣುವುದಿಲ್ಲ. ರಾಮಚಂದ್ರ ಶರ್ಮರ ಹೆಸರು ಕಾಣಿಸುವುದೇ ಇಲ್ಲ. ತಿರುಮಲೇಶರ ಒಂದು ಸಂದರ್ಶನವಿದ್ದಾಗ್ಯೂ ಅವರನ್ನು ಬರೇ ವಿಜಯಶಂಕರ್ ಮತ್ತು ಜಯಂತ ಕಾಯ್ಕಿಣಿ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಕವಿ ಗಂಗಾಧರ ಚಿತ್ತಾಲರನ್ನು ಆವಾಹಿಸುವವರು ಶಿವಪ್ರಕಾಶ್ ಮತ್ತು ಜಯಂತ ಕಾಯ್ಕಿಣಿ ಮಾತ್ರ. ಹಾಗೆಯೇ ರಾಮಾನುಜಂ ಬಗ್ಗೆ ನಾವು ಹೆಚ್ಚಿನ ಪ್ರಸ್ತಾಪ ಕಾಣುವುದಿಲ್ಲ. ವೆಂಕಟೇಶಮೂರ್ತಿ, ಲಕ್ಷ್ಮಣರಾಯರ ಪ್ರಸ್ತಾಪವೂ ಹೆಚ್ಚು ಇಲ್ಲ. [ಲಕ್ಷ್ಮಣ ಖುದ್ದು ಇದ್ದಾನೆ], ಲಕ್ಷ್ಮೀನಾರಾಯಣ ಭಟ್ಟರೂ, ಸುಮತೀಂದ್ರ ನಾಡಿಗರೂ ಹೇಳಹೆಸರಿಲ್ಲದೇ ನಾಪತ್ತೆ. ಬಂಡಾಯಕ್ಕೆ ಸಂದಿದ ಮುಖ್ಯ ದಲಿತ ಕವಿ ಸಿದ್ಧಲಿಂಗಯ್ಯ ಇಲ್ಲ, ಬರಗೂರು ಇಲ್ಲ. "ಪ್ರಗತಿಶೀಲ"ರು ಕಾಣುವುದಿಲ್ಲ. ಉತ್ತರ ಕರ್ನಾಟಕಕ್ಕೆ ಹೋದಾಗ ನಮಗೆ ಪಟ್ಟಣಶೆಟ್ಟಿಗಳೂ [ಮಾಲತೀ, ಹೇಮಾ, ಸಿದ್ಧಲಿಂಗ], ಪಾಟೀಲರೂ, ಕಾಣುವುದಿಲ್ಲ. ಮಕ್ಕಳ ಕಾವ್ಯದ ಸಿದ್ದಯ್ಯ ಪುರಾಣಿಕರಿಲ್ಲ, ಮತ್ತು ಹಾಸ್ಯಕವಿಗಳಂತೂ ಇಲ್ಲವೇ ಇಲ್ಲ. ಡುಂಡಿರಾಜ್ ವೈ‌ಎನ್ಕೆ ಇಲ್ಲದಿರುವುದು ಏನಕೆ? ಒಟ್ಟಾರೆ ನಮಗೆ ಮತ್ತೆ ಮತ್ತೆ ಮರುಕಳಿಸುವ ಹೆಸರೆಂದರೆ ಶಿವಪ್ರಕಾಶರದ್ದು. ಇತ್ತೀಚಿನ ಕವಿಗಳಲ್ಲಿ ನಾಪತ್ತೆಯಾಗಿರುವವನು ಅಬ್ದುಲ್ ರಶೀದ್. ಕನ್ನಡಕಾವ್ಯವನ್ನು ನೋಡದೇ ಈ ಸಂಚಿಕೆಯನ್ನಷ್ಟೇ ಓದಿದರೆ ಬಹುಶಃ ನಾವು ಒಪ್ಪಬೇಕಾದದ್ದು ಹೊಸಬರಲ್ಲಿ ಅತಿಮುಖ್ಯವಾದ ಕವಿ - ಲಲಿತಾ ಸಿದ್ದಬಸವಯ್ಯ ಅವರೇ - ಕಾರಣ ಅತಿಹೆಚ್ಚುಮಂದಿ ಅವರ ಹೆಸರಿನ ಪ್ರಸ್ತಾಪ ಮಾಡಿದ್ದಾರೆ.

ಅಂದರೆ ಮುಂದೆ ಕನ್ನಡಕಾವ್ಯಚರಿತ್ರೆ ಓದಿದವರಿಗೆ ನಾನು ಹೆಸರಿಸಿದ [ಹೆಸರಿಸಲಾಗದ] ಮೇಲಿನ ಅನೇಕ ಹೆಸರುಗಳು ಆಗಲೇ ಅಪ್ರಾಸಂಗಿಕವಾಗಿವೆಯೇ? ಅಥವಾ ನಾವು ಎಪ್ಪತ್ತರ, ಎಂಭತ್ತರ, ತೊಂಬತ್ತರ ದಶಕದ ಕಾವ್ಯವನ್ನು ಗಂಭೀರವಾಗಿ ಓದಿಲ್ಲವೆಂದೇ? ಅಥವಾ ಕೇವಲ ಅವಸರದಲ್ಲಿ ಪ್ರಶ್ನೆಗಳನ್ನು ಕೇಳಿದ್ದರಿಂದ ಹೆಸರುಗಳು ತಪ್ಪಿಹೋಗಿರಬಹುದೇ? ಯಾವುದೇನೇ ಇರಲಿ, ನನಗೆ ಈ ಹೆಸರುಗಳು ಕಾಣದಿರುವುದು ಕುತೂಹಲದ, ಸೋಜಿಗದ ವಿಷಯ.

ನನಗೆ ಈ ಪತ್ರಿಕೆಯಿಂದ ಹೊಸದಾಗಿ ಪರಿಚಯವಾದ ಕವಿಗಳು ಮತ್ತು ಅವರುಗಳ ಕೆಲವು ಸಾಲುಗಳು ಇಂತಿವೆ:

ಸೋರುತಿಹುದು...

ಹಚ್ಚ ಹಸುರಿನ ಮುಂಜಾವಿನಲಿ
ಸೂರ್ಯ ಮೋಡಗಳ ಒಳಗೆ ತೂರಿ
ಮಂಕಾಗಿ ಕುಳಿತಾಗ

ಇದ್ದಕ್ಕಿದ್ದಂತೆ ನೆನಪಾಯಿಗು -
ಸೋರುತಿಹುದು ಮನೆಯ ಮಾಳಿಗೆ
ಕಳೆದಿರುಳ ಮಳೆಯಲ್ಲಿ

ಮನೆಯಗಲಕ್ಕೂ ಹರಡಿಟ್ಟ ಪಾತ್ರೆ ಪಗಡಿಗಳು.......

[ಪಿ.ಚಂದ್ರಿಕಾ]

ನಡೆನಡೆದು...

.. ಅವರಿಗೆ ನೆಮ್ಮದಿಯಾಗುವಂತೆ
ಯಾವ ಭಾಗದಲ್ಲಾದರೂ ಇರಿಯಲಿ, ಯಾವ
ಮೂಲೆಯಿಂದಾದರೂ ಆಕ್ರಮಿಸಲಿ, ಶಪಿಸುವುದಿಲ್ಲ;
ಶಾಪಕ್ಕಿಂತ ಪ್ರೀತಿ ಅವರನ್ನು ಹೆಚ್ಚು
ವಿಹ್ವಲಗೊಳಿಸುತ್ತದೆ..
[ವಿಕ್ರಂ ವಿಸಾಜಿ]


ಢಗುಢಗುಲ ಢಗುಢಗುಲ ಢಗುಢಗುಲ ಢಘ್

ಢಗುಢಗುಲ ಢಗುಢಗುಲ ಢಗುಢಗುಲ ಢಘ್ ಢಗುಢಗುಲ ಢಗುಢಗುಲ ಢಗುಢಗುಲ ಢಘ್

ಇಕ್ಕಿದ ಕದಂಗಳ ಹಿಂದೆ ಯಾರಿದ್ದೀರಯ್ಯಾ ವೊಳಗೆ ಹಸಿದ ಜಂಗಮನ ವೊಟ್ಟೆ ಕೂಗುತೈತೆ
ಢಗುಢಗುಲ ಢಗುಢಗುಲ ಢಗುಢಗುಲ ಢಘ್ ಢಗುಢಗುಲ ಢಗುಢಗುಲ ಢಗುಢಗುಲ ಢಘ್
ನುಚ್ಚಿನಂಬಲಿ ಮೇಲೊಂದೆರಡು ಗುಟುಕು ನೀರು ಮಜ್ಜಿಗೆಯ ಅವನೊಟ್ಟೆ ಕೇಳುತೈತೆ

ನಿಂತನಿಲುವಿನಲಿ ಹರಿದು ನಿಂತೈತೆ ಕಿಡಿಬೆವರು ಕರದಕಪ್ಪರದಲ್ಲಿ ಹುರಿದೈತೆ ಬಿಸಿಲು
ನೆಟ್ಟನೋಟವು ರವೆಯಷ್ಟು ಮಿಟುಕಿಲ್ಲ ಮಹಲಿನುದ್ದಕ್ಕು ಬೆಳೆದೈತೆ ಜಂಗಮನ ನೆರಳು
ಢಗುಢಗುಲ ಢಗುಢಗುಲ ಢಗುಢಗುಲ ಢಘ್ ಢಘ್ ಢಘ್ ಢಘ್ ಡ್ಭಡ್ಭಡ್ಭಡ್ಭಡ್ಭಡ್ಭಡ್ಭಡ್ಭ

ಹೊರಗೆ ಜಂಗಮನ ಕಯ್ಯಿ ಬಿಡದಾಡುತೈತೆ ಒಳಗೆ ಊಳಿಗಮಂದಿ ಉಂಡಜೊಂಪಲೈತೆ...

[ಲಲಿತಾ ಸಿದ್ದಬಸವಯ್ಯ]

ಕಟ್ಟೋಣ


ಕಟ್ಟೋಣ ಬನ್ನಿ ಕಟ್ಟೋಣ ಬನ್ನಿ
ಎನ್ನುವ ಮೊದಲು ಇಲ್ಲೇನು
ಮುರಿದು ಬಿದ್ದಿರಲಿಲ್ಲ
ನೀನು ಕಟ್ಟೋಣ ಎಂದಾಗ
ಎಲ್ಲಾ ಮುರಿದು ಬಿತ್ತು.

ಕೆಲವರು ಸದ್ದಿಲ್ಲದೆ ಕಟ್ಟುತ್ತಾರೆ
ನೋಡ, ನೀನು ದಾರಿಯಲ್ಲಿ ಬಿಟ್ಟ
ಜಾರಿಣಿಯ ಪದವಿ ಕೊಟ್ಟವಳಿಗೆ

ಅರಮನೆಯ

ಕೆಲವರು ಕಟ್ಟುತ್ತಾರೆ
ತಿಪ್ಪೆಯಲ್ಲಿ ಬಿದ್ದ ನಕ್ಷತ್ರಗಳಿಗೆ
ಅರಮನೆಯ
.....
ಅವರಾರು ಬೀದಿ ಬೀದಿಯಲ್ಲಿ
ಹರಿದಾಡಿ ಕಟ್ಟೋಣ ಬನ್ನಿ
ಕಟ್ಟೋಣ ಬನ್ನಿ ಎಂದಿಲ್ಲ
ರಕ್ತದೋಕುಳಿ ಹರಿಸಿಲ್ಲ...

[ತಾಜುಮಾ]

ಎಷ್ಟು ಹೊಸ ಬರವಣಿಗೆ, ಉತ್ಸಾಹದ ದನಿಗಳು, ಉನ್ಮಾದದ ದನಿಗಳು.. ಎಲ್ಲವನ್ನೂ ಮತ್ತೆ ಪಡೆದದ್ದು ನನಗೆ ಅಪರಿಮಿತ ಖುಷಿ ನೀಡಿದೆ.

ಭಾಗ ೩: ಶಿವಪ್ರಕಾಶರೊಂದಿಗೆ ಶಬ್ದಗುಣದ ಮಾತುಕತೆ


[ತಿರುಮಲೇಶರೊಂದಿಗೆ ಮಾತುಕತೆಯೂ ಚರ್ಚಿಸಬೇಕಾದ್ದೇ ಆದರೂ, ಅವರ ಸಂದರ್ಶನದ ಒಂದು ಭಾಗ ಮುಂದಿನಸಂಚಿಕೆಯಲ್ಲಿ ಬರಬೇಕಾಗಿದೆಯಾದ್ದರಿಂದ ಆ ಬಗ್ಗೆ ಮುಂದೆಂದಾದರೂ ಚರ್ಚಿಸೋಣ]

ಶಿವಪ್ರಕಾಶರ ವಿಚಾರಗಳನ್ನು ಮೂರು ಭಾಗಗಳಲ್ಲಿ ಗ್ರಹಿಸಲಾಗಿದೆ - ಮೊದಲಿಗೆ ಬನ್ನಾಡಿಯವರು ಶಿವಪ್ರಕಾಶರನ್ನ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಬನ್ನಾಡಿಯವರ ಪ್ರಶ್ನೆಗಳು ಹೆಚ್ಚಿನಂಶ ಶಿವಪ್ರಕಾಶರ ಒಟ್ಟಾರೆ ಸಾಹಿತ್ಯ ಕೃಷಿ, ಅವರ ಸಾಹಿತ್ಯಿಕ-ಸಾಮಾಜಿಕ ನಿಲುವುಗಳಿಗೆ ಸಂಬಂಧಿಸಿದ್ದು. ಶಿವಪ್ರಕಾಶ್ ಅವರ ವಾರಗೆಯವರಲ್ಲಿ ಭಿನ್ನವಾಗಿ ನಿಲ್ಲುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಅಡಿಗ, ಅನಂತಮೂರ್ತಿ, ಲಂಕೇಶ್, ರಾಮಾನುಜಂ, ರಾಮಚಂದ್ರ ಶರ್ಮ, ತಿರುಮಲೇಶರ ನಂತರ ಪ್ರಾಮುಖ್ಯತೆ ಗಳಿಸಿದ ಶಿವಪ್ರಕಾಶ್ ಕಾವ್ಯಕ್ಕೆ ಒಂದು ಹೊಸ ಹುರುಪನ್ನೇ ತಂದರು. ಅಲ್ಲಿ ಇಲ್ಲಿ ಆಗುತ್ತಿದ್ದ ನವ್ಯೋತ್ತರದ ಜಾಗದಲ್ಲಿ ಅವರು ನಿಲ್ಲುವಾಗ ದಲಿತ-ಬಂಡಾಯ ಚಳುವಳಿಯ ಜೊತೆ ಅವಿನಾಭಾವವಾಗಿ ಗುರುತಿಸಿಕೊಳ್ಳಬಹುದಾದ ಅವಕಾಶಗಳು ಅವರಿಗೆ ಇದ್ದರೂ ಶಿವಪ್ರಕಾಶ್ ಒಂದು ರೀತಿಯಿಂದ ಒಂಟಿಯಾಗಿಯೇ ಅವರ ಕಾಯಕವನ್ನು ಮುಂದುವರೆಸಿದರು. ಒಂದು ನಿಟ್ಟಿನಲ್ಲಿ ನವ್ಯದ ಪ್ರಾಕಾರವನ್ನು ದಾಟಿ ವಚನಗಳಲ್ಲಿ, ಮಧ್ಯಯುಗದ ತಮಿಳಿನ ಸಾಹಿತ್ಯದಲ್ಲಿ, ಆಧ್ಯಾತ್ಮಿಕತೆಯಲ್ಲಿ, ಹಾಗೂ ಅಮೃತಾನಂದಮಯಿಯಂತಹ ಆಧ್ಯಾತ್ಮಿಕ ಗುರುಗಳನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವುದರಲ್ಲಿ ರುಚಿ ತೋರಿಸಿ ತಮ್ಮದೇ ಭಿನ್ನ ದಾರಿಯನ್ನು ಕಂಡುಕೊಂಡರು. ಹೀಗಾಗಿ ಅವರು ಯಾವ ಸ್ಲಾಟಿಂಗಿಗೂ ಸಲ್ಲದ ಒಂಟಿಜೀವಿಯಾಗಿ ನಿಂತುಬಿಟ್ಟರು. ಅವರ ಕವಿತೆ-ನಾಟಕಗಳ ರೇಂಜ್ ಅದ್ಭುತವಾದದ್ದು. ಸಮಗಾರ ಭೀಮವ್ವದಂತಹ ಶಕ್ತಿಶಾಲಿ ಕವಿತೆ, ಮಹಾಚೈತ್ರ, ಸುಲ್ತಾನ್ ಟಿಪ್ಪು, ಶೇಕ್ಸಪಿಯರನ ಸ್ವಪ್ನನೌಕೆ ಥರದ ನಾಟಕಗಳನ್ನು ತಪಸ್ಸಿನಂತೆ ಶಿವಪ್ರಕಾಶ್ ಬರೆಯುತ್ತಾ ಹೋದರು. ಒಂದು ವಿಧದಲ್ಲಿ ಡಿ.ಆರ್.ನಾಗರಾಜ್ ಸಾಹಿತ್ಯವನ್ನು ಅರ್ಥೈಸುವಲ್ಲಿ ಮಾಡಿದಷ್ಟೇ ಸಮರ್ಥ ಪಾತ್ರವನ್ನು ಶಿವಪ್ರಕಾಶ್ ಕವಿತಾಲೋಕದಲ್ಲಿ ಮಾಡಿದರೆನ್ನಿಸುತ್ತದೆ. ಹೀಗಾಗಿ ಶಿವಪ್ರಕಾಶರಂಥಹ ಬರಹಗಾರರನ್ನು ನಾವುಅರ್ಥಮಾಡಿಕೊಳ್ಳುವುದಕ್ಕೆ ಪೂರಕವಾಗುವಂತೆ ಈ ಸಂದರ್ಶನಾ ಗುಚ್ಚ ಬಂದಿದೆ. ಶಿವಪ್ರಕಾಶರ ಸಂದರ್ಶನದಲ್ಲಿ ಒಂದು ರೀತಿಯ ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣುತ್ತದೆ - ಯಾವೊಂದು ವಿಚಾರದ ಬಗೆಗೂ ಅವರು ಅತಿರೇಕದ ನಿಲುವನ್ನು ತೆಗೆದುಕೊಳ್ಳುವುದಿಲ್ಲ.

ಇದಕ್ಕೆ ಉದಾಹರಣೆಗಳು ಕೆಲವು:

೧. ಅಡಿಗರನ್ನು ಬಲಪಂಥೀಯರೆಂದು [ಅವರು ಜನಸಂಘದ ಬಗ್ಗೆ ಒಲ
ವು ತೋರಿಸಿದ್ದರ ಹಿನ್ನೆಲೆಯಲ್ಲಿ] ಹೇಗೆ ಗ್ರಹಿಸಬೇಕು ಎನ್ನುವುದಕ್ಕೆ ಶಿವಪ್ರಕಾಶರ ಉತ್ತರ ಹೀಗಿದೆ: "ಅಡಿಗರು ಸಂಘ ಪರಿವಾರದ ಕಡೆಗೆ ಒಲವು ತೋರಿಸಿದ್ದು ನಿಜ. ಆದರೆ ಅವರು ಮಹಾನ್ ಕವಿಗಳಾಗಿರುವುದರಿಂದ, ಅವರ ಕಾವ್ಯ ಸಿದ್ಧಾಂತಕ್ಕೆ ಪೂರ್ತಿ ಬದ್ದರಾಗಿದ್ದರು. ... ಒಬ್ಬ ಕಲಾವಿದ ಯಾಕೆ ದೊಡ್ಡವನಾಗುತ್ತಾನೆ ಅಂದ್ರೆ ಅವನು ಸ್ವೀಕರಿಸುವ ಚಿಂತನೆಗಳಿಂದ ಅಲ್ಲ; ಆ ಚಿಂತನೆಯಿಂದ ಪ್ರೇರಣೆ ಪಡೆದು, ಅನುಭವದ ಸಮಗ್ರತೆಯಲ್ಲಿ ಹೇಗೆ ಹಿಡೀತಾನೆ ಅನ್ನೋದರ ಮೂಲಕ..."

೨. ಸುಬ್ಬಣ್ಣನವರ ಬಗ್ಗೆ ಮಾತನಾಡುತ್ತಾ ಒಂದು ಕುತೂಹಲಕಾರಿ ದೃಷ್ಟಿಯನ್ನು ಶಿವಪ್ರಕಾಶ ನಮ್ಮ ಮುಂದಿಡುತ್ತಾರೆ. ಅದೆಂದರೆ ಸುಬ್ಬಣ್ಣನವರು ಒಂದು ದೈತ್ಯ ಶಕ್ತಿಯೆಂದು ಒಪ್ಪುತ್ತಲೇ ಅವರ ಸಂಸ್ಥೆ ಹೇಗೆ ಅವರು ಸ್ಥಳೀಯ ಸಂಸ್ಕ್ರುತಿಯ ಮಾದರಿಯನ್ನು ನಿರ್ಮಾಣ ಮಾಡಲಿಲ್ಲ ಎನ್ನುವುದ
ನ್ನು ಶಿವಪ್ರಕಾಶ್ ವಿವರಿಸುತ್ತಾರೆ. ಅವರ ಪ್ರಕಾರ ಸುಬ್ಬಣ್ಣನವರು ವಿಶ್ವದಿಂದ ಆಧುನಿಕ ಸಂಸ್ಕೃತಿಯ ಅನೇಕ ಅಂಶಗಳನ್ನು ಆಮದು ಮಾಡಿಕೊಂಡರಾದರೂ, ಆ ಪ್ರದೇಶದಿಂದ ಒಬ್ಬ ಕವಿಯಾಗಲೀ, ನಾಟಕಕಾರನಾಗಲೀ, ವಿಮರ್ಶಕನಾಗಲೀ ಬರಲಿಲ್ಲ ಎಂಬ ಮುಖ್ಯವಿಷಯವನ್ನು ಗುರುತಿಸುತ್ತಾರೆ. ಹಾಗೆ ನೋಡಿದರೆ ನೀನಾಸಂ ಸ್ಕೂಲ್ ಆಫ್ ಥಾಟ್ ಅಥವಾ ನೀನಾಸಂ ಸ್ಟೈಲ್ ಆಫ್ ಡ್ರಾಮಾ ನಮಗೆ ಕಾಣಸಿಗಲಿಲ್ಲ ಎಂಬುದು ನಿಜವಲ್ಲವೇ?

ಶಿವಪ್ರಕಾಶ್ ವಿಸ್ತಾರವಾಗಿ ಅವರ ಬಾಲ್ಯ, ಓದು, ಓಡಾಟದ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಕಾಡುವ ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ. ತಮ್ಮ ತಂದೆ, ತಾಯಿಯ ನಡುವಿನ ಸಂಬಂಧ, ಅದು ತಮ್ಮ ಮೇಲೆ ಬೀರಿದ ಪರಿಣಾಮದ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸಿದ್ದಾರೆ. ಗಮ್ಮತ್ತಿನ ವಿಷಯವೆಂದರೆ, ಇಷ್ಟು ವರ್ಷಕಾಲ ನಾನು ಅವರನ್ನು ಕಂಡು ಒಡನಾಡಿದ್ದರೂ ಅವರು ತಮಿಳು ಸಾಹಿತ್ಯದಿಂದ ಪ್ರೇರಿತರಾಗಿದ್ದಾರೆ ಎಂದು ತಿಳಿದಿದ್ದರೂ, ಅವರ ಕಾವ್ಯದಲ್ಲಿ ತಮಿಳು ಸಾಹಿತ್ಯದ ಮೋಟಿಫ್‍ಗಳನ್ನು ಕಂಡಿದ್ದರೂ [ಸಿಲಪ್ಪದಿಕಾರಂ, ಇಳಂಗೋ ಅಡಿಗಳ್ ಪ್ರಸ್ತಾಪ], ನನಗೆ ಅವರ ತಾಯಿ ತಮಿಳಿನವರೆಂದಾಗಲೀ, ಅವರಿಗೆ ತಮಿಳು ಬರುತ್ತದೆ ಎಂಬ ವಿಚಾರವಾಗಲೀ ತಿಳಿದೇ ಇರಲಿಲ್ಲ!

ಶಿವಪ್ರಕಾಶರ ಕೆಲವು ಸಾಹಿತ್ಯೇತರ ವಿಚಾರಗಳನ್ನೂ ಗಮನಿಸುವುದು ಇಲ್ಲಿ ಅವಶ್ಯ ಅಂತ ನಾನು ಭಾವಿಸಿದ್ದೇನೆ. ಕನ್ನಡ ರಾಷ್ಟ್ರೀಯತೆಯ ಬಗ್ಗೆ ನಡೆದಿರುವ ಚರ್ಚೆಯ ಸಂದರ್ಭದಲ್ಲಿ ಈ ವಿಚಾರಗಳನ್ನು ತುಸು ಆಲೋಚಿಸುವುದು ಉತ್ತಮ:
"ಕರ್ನಾಟಕದಿಂದ ನಾವು ಆರು ಜನ ಜ್ಙಾನಪೀಠ ಸಾಹಿತಿಗಳನ್ನು ಕೊಟ್ಟಿದ್ದೇವೆ [ನಿಜಕ್ಕೂ ಏಳು - ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ್, ಅನಂತಮೂರ್ತಿ, ಕಾರ್ನಾಡ್] ಅಂತ ಹೆಮ್ಮೆ ಪಡ್ತೀವಿ. ನನ್ನಪ್ರಕಾರ ಇದು ಹೆಮ್ಮೆ ಪಡತಕ್ಕಂತ ವಿಷಯ ಏನಲ್ಲ. ಏಕೆಂದರೆ ಸಂಸ್ಕೃತಿಯ ಶ್ರೇಷ್ಠತೆಯನ್ನು ನಮಗೆ ಸಿಕ್ಕಿರೋ ಪ್ರಶಸ್ತಿಗಳಿಂದ ಅಳೀಬಾರದು. ಇವತ್ತು ಓದುವವರ ಸಂಖ್ಯೆ ಕಡಿಮೆ ಆಗ್ತಿದೆ. ಅಂಗಡಿಗೆ ಹೋಗಿ ಕೇಳಿದರೆ ಗೊತ್ತಾಗುತ್ತೆ - ಇವತ್ತು ಜನ ಓದೋ ಪುಸ್ತಕಗಳು ಅಂದರೆ ಸೆಲ್ಫ್ ಹೆಲ್ಪ್ ಪುಸ್ತಕಗಳು ಮತ್ತು ಕಂದಾಚಾರಿ ಧಾರ್ಮಿಕ ಪುಸ್ತಕಗಳು. ಬೌದ್ಧಿಕ ಮತ್ತು ಸಾಂಸ್ಕೃತಿಕ ವಿಕಾಸದ ಬಗ್ಗೆ ಒಟ್ಟಾರೆಯಾಗಿ ಜನರಲ್ಲಿ - ಕನ್ಸೂಮರಿಸಂ ಕಲ್ಚರ್ ಬೆಳೀರಿರೋದ್ರಿಂದ ಎಚ್ಚರ ಕಡಿಮ ಆಗ್ತಿದೆ. ಜನರು ಆಲೋಚಿಸುವ ಶಕ್ತಿಯನ್ನ ಕಳೆದುಕೊಳ್ತಿದ್ದಾರೆ ಇವತ್ತು. ಈ ಒಂದು ಗೊಂದಲಗಳ ಸನ್ನಿವೇಶದಲ್ಲಿ ಅನೇಕ ಬಗೆಯ ಮತಾಂಧತೆಗಳ ಅಮಲು, ಒಂದು ಹಿಂದುತ್ವವಾದೆ ಇನ್ನೊಂದು ಕನ್ನಡ ಹೋರಾಟಗಾರರ ಲಿಂಗ್‍ವಿಸ್ಟಿಕ್ ಚವನಿಸ್ಂ ಮತ್ತು ನಾವು ಅಷ್ಟೊಂದು ಗಮನ ಕೊಡದ ಜಾತೀಯ ಸರ್ವಾಧಿಕಾರದ ಕೇಂದ್ರಗಳು - ಹೀಗೆ ಅನೇಕ ರೀತಿಯ ಹಿಂಸೆಗಳ ನಡುವೆ ಇವತ್ತು ನಾವು ಬದುಕಬೇಕಾಗಿದೆ..."

ಅವರ ಮಿಕ್ಕ ಕೆಲವು ವಿಚಾರಗಳು ಆಸಕ್ತಿಕರವಾಗಿವೆ - ಅವರು ಮತೀಯ ಶಕ್ತಿಗಳನ್ನು ನಿಯೋಕಲೋನಿಯಲಿಸಂ ಮತ್ತು ಲೇಟ್ ಕ್ಯಾಪಿಟಲಿಸಂನ ಬೆಳವಣಿಗೆಗಳಿಂದ ಬೇರ್ಪಡಿಸಿ ನೋಡಲು ಇಷ್ಟಪಡುವುದಿಲ್ಲ. ಇದನ್ನು ತುಸು ಚರ್ಚಿಸಿ ನಾನು ಈ ಬಾರಿಯ ಬರವಣಿಗೆಯನ್ನು ಮುಗಿಸುತ್ತೇನೆ.

ಅವರು ಅನ್ನುವ ಆಸಕ್ತಿಕರ ವಿಷಯವನ್ನು ನಮ್ಮ ಮುಂದಿಡುತ್ತಾರೆ. ಖಾಸಗೀ ಸಂಸ್ಥೆಗಳು ಸರಕಾರಕ್ಕಿಂತ ದೊಡ್ಡದಾಗಿ ಬೆಳೆಯುತ್ತಿರುವುದನ್ನ ಶಿವಪ್ರಕಾಶ್ ಗುರುತಿಸುತ್ತಾರೆ.

ಅವರ ಮಾತುಗಳಲ್ಲಿ ಬರುವು ಆಸಕ್ತಿಕರ ಕೊಂಡಿಗಳು ನೋಡಿ
೧. ಕಾಂಗ್ರೆಸ್ ಮತ್ತು ಮತೀಯ ಶಕ್ತಿಗಳು ಮಧ್ಯೆ ಅವಳಿ-ಜವಳಿ ಅನ್ಯೋನ್ಯ ಸಂಬಂಧ ಇದೆ.
೨. ಪ್ರೈವೆಟೈಸೇಶನ್ ಮತ್ತು ಕಮ್ಯುನಲೈಸೇಶನ್ ಎರಡೂ ಒಟ್ಟಿಗೆ ಆಗ್ತಾ ಇವೆ [ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮೊದಲನೆಯ ಮಾತಿಗೂ ಎರಡನೆಯ ಮಾತಿಗೂ ಇರುವ ಕೊಂಡಿ ನಮಗೆ ಗೋಚರಿಸುತ್ತದೆ]
೩. ಪ್ರೈವಟೈಸೇಶನ್ ಹೆಚ್ಚಾದಷ್ಟಕ್ಕೂ ಕಡುಬಡವರಿಗೆ ಸರಕಾರಿ ಸಂಸ್ಥೆಗಳು [ಆಸ್ಪತ್ರೆ, ಸ್ಕೂಲು] ಮಾತ್ರ ಉಳಿಯುತ್ತವೆ. [ಹೀಗಾಗಿ ಸರಕಾರಿ ವ್ಯವಸ್ಥೆ ಉಪಯೋಗಿಸುವ, ಖಾಸಗೀ ವ್ಯವಸ್ಥೆ ಉಪಯೋಗಿಸುವ ಎರಡು ವರ್ಗಗಳು ಉಂಟಾಗುತ್ತವೆ].

ಮೇಲಿನ ಮಾತುಗಳು ಬಹಳ ಮುಖ್ಯವಾದವು. ಖಾಸಗೀಕರಣ ಹೆಚ್ಚಾದಂತೆಲ್ಲಾ, ಆಯಾ ಕ್ಷೇತ್ರದಿಂದ ಸರಕಾರ ತನ್ನ ಪಾತ್ರವನ್ನು ಸಂಕುಚಿತಗೊಳಿಸುತ್ತಾ ಹೋದರೆ, ಲಾಭಕ್ಕಾಗಿಯೇ ಕೆಲಸ ಮಾಡುವ ಸಂಸ್ಥೆಗಳು ಬಡವರಿಗೆ ಯಾವರೀತಿಯಾದ ಸೇವೆಗಳನ್ನು ಒದಗಿಸಬಹುದು? ಇದು ನಾವು ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆ. ಒಂದು ಥರದಲ್ಲಿ ಉತ್ತಮ ಗುಣಮಟ್ಟದ ಭಾವನೆ ಖಾಸಗೀ ಸಂಸ್ಥೆಗಳಲ್ಲಿ ಗೋಚರಿಸುವುದರಿಂದ ಜನರೂ ಖಾಸಗೀ ಸಂಸ್ಥೆಗಳ ಹಿಂದೆ ಹೋಗುವ ಪ್ರಕ್ರಿಯೆಯೂ ಗೋಚರವಾಗುತ್ತದೆ. ಈ ದುಬಾರಿ ಸವಲತ್ತನ್ನ ಪಡೆಯುವ ಆರ್ಥಿಕ ಸ್ಥೋಮತೆ ಇಲ್ಲದವರು ಬದಿಗೆ ನಿಲ್ಲುತ್ತಾ ಹೋಗುತ್ತಾರೆ. ಶಿವಪ್ರಕಾಶ್ ಒಂದು ಬಹುಮುಖ್ಯವಾದ ವಿಚಾರವನ್ನು ನಮ್ಮ ಗಮನಕ್ಕೆ ತರುತ್ತಾರೆ. ಅದೆಂದರೆ ನಾವು ಪರಿಸ್ಥಿತಿಯನ್ನು ವಿವರಿಸಲು ಉಪಯೋಗಿಸುವ ಭಾಷೆಗೆ ಸಂಬಂಧಿಸಿದ್ದು.. ಶೋಷಿತ ಅನ್ನುವ ಬದಲು ಮುಖ್ಯಧಾರೆಯಂಚಿನಲ್ಲಿ ನಿಂತವರು ಅನ್ನುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ನಮ್ಮ ನುಡಿಗಟ್ಟಿನಿಂದ ಶೋಷಿತ [exploited] ಅನ್ನುವ ಪದವೇ ನಿಧಾನವಾಗಿ ಮಾಯವಾಗುತ್ತಿರುವುದರಿಂದ ಆ ವರ್ಗದ ಬಗ್ಗೆ ನಾವು ಗಮನವನ್ನ ಹರಿಸುವುದು ಸಾಧ್ಯವಿಲ್ಲವಾಗಿದೆಯೇ? ರಾಜಾಸ್ಥಾನದಲ್ಲಿ ಕೈಗೊಂಡ ಒಂದು ಅಧ್ಯಯನದಲ್ಲಿ ಬಡತನದ ರೇಖೆಯನ್ನು ದಾಟಿನಿಂತ ಜನ ಮತ್ತೆ ಬಡತನಕ್ಕೆ ಜಾರುವುದಕ್ಕೆ ಒಂದು ಮುಖ್ಯ ಕಾರಣ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳು ಎಂದು ಅನಿರುಧ್ ಕೃಷ್ಣ ಹೇಳಿದ್ದಾರೆ. ಈ ಎಲ್ಲ ಜನರೂ ಸರಕಾರದ ಸವಲತ್ತುಗಳಿಲ್ಲದ್ದರಿಂದ ಖಾಸಗೀ ಸಂಸ್ಥೆಗಳಿಗೆ ಹೋಗಿ [ಬಹುಶಃ ಅನವಶ್ಯಕವಾದ ಟೆಸ್ಟುಗಳಿಗೆ ಒಳಗಾಗಿ ಅನವಶ್ಯವಾದ ಔಷಧಿಗಳನ್ನು ಸೇವಿಸಿ] ನೆಲಗಚ್ಚಿದವರಿರಬಹುದು.


ಈ ಪ್ರೈವಟೈಸೇಶನ್ ನಿಂದ ಒಂದು ಕ್ಷೇತ್ರದಲ್ಲಿ ಕೋಲಾಹಲವಾಗುತ್ತಿರುವುದನ್ನು ನಾವು ಕಂಡಿದ್ದೇವೆ. ಕೃಷಿಕ್ಷೇತ್ರದಲ್ಲಿ ಬರಬರುತ್ತಾ ಸರಕಾರದ ಪಾತ್ರ ಕಿರಿದಾಗುತ್ತಾ ಹೋಗಿ ಸರಕಾರ ಮಾಡುತ್ತಿದ್ದ ವಿಸ್ತರಣಾ ಕಾರ್ಯವನ್ನು ಹೆಚ್ಚೂ
 ಕಡಿಮೆ ಖಾಸಗೀ ಆಟಗಾರಗಿಗೆ ಬಿಟ್ಟುಕೊಟ್ಟಿದ್ದಾರೆ. ಇಲ್ಲಿ, ಸಹಜವಾಗಿ ತಮಗೆ ಅಭ್ಯಾಸ/ಜ್ಙಾನವಿದ್ದ ಬೆಳೆಗಳನ್ನು ಬಿಟ್ಟು ಹೆಚ್ಚು ಇಳುವರಿ ಕೊಡುವ ಬೆಳೆಗಳತ್ತ ಕೆಲವು ಪ್ರದೇಶದ ರೈತರು ಒಲವು ತೋರಿದ್ದಾರೆ. ಆದರೆ ಆ ಬೆಳೆಗಳನ್ನು ಬೆಳೆಸಲು ಬೇಕಾದ ಜ್ಙಾನವಿಸ್ತಾರದಲ್ಲಿ ಖಾಸಗೀ ಸಂಸ್ಥೆಗಳು ಸೋತಿವೆ, ಹೀಗಾಗಿ ಇಳುವರಿಯಿಲ್ಲದೆ ಸಾಲದಲ್ಲಿ ಮುಳುಗಿದ ರೈತರು ಆತ್ಮಹತ್ಯೆಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ.

ಆದರೆ ಮೇಲಿನ ದಿಕ್ಕು ದಿಸೆಯನ್ನು ಚರ್ಚಿಸುವ, ಪ್ರತಿಭಟಿಸುವ ಬುದ್ಧಿಜೀವಿ ವರ್ಗ - ವಿದ್ಯಾರ್ಥಿವರ್ಗವಾಗಲೀ, ಅಕಾಡಮಿಕ್ ವರ್ಗವಾಗಲೀ - ಈ ಪ್ರೈವಟೈಸೇಶನ್ ನ ಭಾಗವಾಗಿಹೋಗಿರೋದರಿಂದ ಈ ಮಾತುಗಳನ್ನು ವ್ಯಕ್ತ ಪಡಿಸುವುದಕ್ಕೆ ಸಮರ್ಪಕವಾದ ಮಾಧ್ಯಮ ಇಲ್ಲವಾಗಿದೆ. ಈ ಎಲ್ಲ ಚಡಪಡಿಕೆಗಳು ಕೋಮು-ಮತದಲ್ಲಿ ಭಾಷೆಯ ಮೇಲೆ ಕಂಡುಬರುತ್ತವೆ. ಇದಕ್ಕೆ ಕಾರಣ, ಖಾಸಗೀಕರಣದ ಲಾಭಗಳು ಹೆಚ್ಚಾಗಿ ಓದಿಕೊಂಡವರ - ಇಂಗ್ಲೀಷ್ ಕಲಿತವರ ಪಾಲಾಗುವುದರಿಂದ, ಚಡಪಡಿಕೆಗಳು ಭಾಷೆಯ ಮೂಲಕ ಭಾಷಾಂದೋಲನದ ಮೂಲಕ ವ್ಯಕ್ತವಾಗುತ್ತದೆ.

ಬಹಳ ದಿನಗಳ ನಂತರ ಅವರೊಡನೆ ವಿಚಾರ ವಿನಿಮಯ ಮಾಡಿಕೊಂಡ ಅನುಭವ ನನಗಾಯಿತು. ಶಿವಪ್ರಕಾಶರ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳಿವೆ. ಏನಿಲ್ಲವೆಂದರೂ ಈ ಒಂದು ಸಂದರ್ಶನದಿಂದಲೇ ನನ್ನ ಪೈಸೆ ವಸೂಲ್ ಆಯಿತೆನ್ನಬಹುದು.

ಶಬ್ದಗುಣ ತರಿಸಿಕೊಳ್ಳಬೇಕೆಂದಿದ್ದರೆ ಈ ವಿಳಾಸವನ್ನು ಸಂಪರ್ಕಿಸಿ:
ವಸಂತ ಬನ್ನಾಡಿ
ಸಂಪಾದಕರು ಶಬ್ದಗುಣ
ವಿಠಲವಾಡಿ
ವಡೇರಹೋಬಳಿ
ಕುಂದಾಪುರ ೫೭೬೨೦೧
ದೂರವಾಣಿ: ೦೮೨೫೪-೨೩೫೩೬೯,
೯೪೪೯೧೦೫೦೫೨


No comments:

Post a Comment