Showing posts with label ಶ್ರೀರಾಮ್. Show all posts
Showing posts with label ಶ್ರೀರಾಮ್. Show all posts

Monday, October 5, 2009

ಭೂಗತ ಜಗತ್ತಿನ ಒಳನೋಟಗಳು


ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.

ಸುಧೀರ್ ಶಿಕಾಗೋ ನಗರದಲ್ಲಿನ ಬಡತನವನ್ನು [ಅರ್ಬನ್ ಪಾವರ್ಟಿ] ಅರ್ಥಮಾಡಿಕೊಳ್ಳಲು ಅದರ ಬಗ್ಗೆ ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆಯಲೆಂದು ಆ ನಗರದ ರಾಬರ್ಟ್ ಟೇಲರ್ ಹೋಮ್ಸ್ ಕಡೆಗೆ ಮೊದಲಿಗೆ ಹೊರಡುತ್ತಾರೆ. ಅವರು ಶುದ್ಧ ರಿಸರ್ಚ್ ವಿದ್ಯಾರ್ಥಿಯಾಗಿ ಕೈಯಲ್ಲಿ ಒಂದು ಪ್ರಶ್ನಾವಳಿಯನ್ನು ಹಿಡಿದು ಅದನ್ನು ಒಂದು ರಟ್ಟಿನ ಕ್ಲಿಪ್ಪಿನ ಕೆಳಗೆ ತೂರಿಸಿ, ಅಲ್ಲಿನ ಮನೆಗಳ ಪಟ್ಟಿಯಿಂದ ತಮ್ಮ ಸಂಶೋಧನಾ ನಿಯಮಾವಳಿಯನುಸಾರ ಯಾರನ್ನೆಲ್ಲಾ ಮಾತನಾಡಿಸಬೇಕೆಂಬ ಯಾದಿಯನ್ನು ತಯಾರು ಮಾಡಿ, ಆ ಜನವಸತಿಯನ್ನು ಪ್ರವೇಶಿಸುತ್ತಾರೆ. ಸಂಶೋಧನಾ ಪದ್ಧತಿಯ ದೃಷ್ಟಿಯಿಂದ ಅವರ ತಯಾರಿಯಲ್ಲಿ ಯಾವ ನ್ಯೂನತೆಯೂ ಇಲ್ಲವಾದರೂ ಈ ಪದ್ಧತಿಯ ಅರ್ಥಹೀನತೆಯನ್ನು ಸುಧೀರ್ ಶೀಘ್ರದಲ್ಲೇ ಗ್ರಹಿಸುತ್ತಾರೆ. ಇಲ್ಲ - ಸುಧೀರ್ ಪದ್ಧತಿಯ ಅರ್ಥಹೀನತೆಯನ್ನು ಹಿಡಿದು ಲೇವಡಿ ಮಾಡುವುದಿಲ್ಲ. ಸರ್ವೇ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ರೀತಿಯನ್ನು ಅವರು ಟೀಕಿಸುವುದೂ ಇಲ್ಲ. ಆದರೆ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಬರಬಹುದಾದ ಗ್ರಹಿಕೆ ಮತ್ತು ಈ ಗ್ರಹಿಕೆ ಸರಕಾರೀ ನೀತಿಯನ್ನು ಯಾವರೀತಿಯಿಂದ ರೂಪಿಸಬಹುದು ಹಾಗೂ ಅದರ ಮಿತಿಗಳೇನು ಅನ್ನುವುದನ್ನು ಅವರು ಸೂಕ್ಷ್ಮವಾಗಿ ನಮ್ಮ ಮುಂದಿಡುತ್ತಾರೆ. ಅದಕ್ಕೆ ಕಾರಣ: ನಾವು ಎದುರಿಸುತ್ತಿರುವ ಸಮಸ್ಯೆ ಅತೀ ಜಟಿಲವಾದದ್ದು, ಅನೇಕ ಪದರಗಳನ್ನೂ, ಒಳಕಥೆಗಳನ್ನೂ ಒಳಗೊಂಡದ್ದು. ಅದಕ್ಕೆ ನಾವು ಕಂಡುಕೊಳ್ಳುತ್ತಿರುವ ಉತ್ತರ ಸರಕಾರಿ ನೀತಿಗೆ ಅಡಕವಾಗಬೇಕಿದ್ದರೆ ಸರಳವಾಗಿಯೂ, ಅನೇಕ ಜಾಗಗಳಲ್ಲಿ ಅಮಲಾಗುವಷ್ಟು ಸಾಮಾನ್ಯವಾಗಿಯೂ ಇರಬೇಕು. ಹೀಗಾಗಿ ಸರಳೀಕರಿಸಿದ ಈ ಉತ್ತರಗಳ ಮಿತಿಯನ್ನು ಮತ್ತು ಅವುಗಳಿಂದ ಆಗುವ ಅಪಾಯ/ನಷ್ಟವನ್ನು ಸುಧೀರ್ ಎತ್ತಿ ತೋರಿಸುತ್ತಾರೆ. ಪುಸ್ತಕವನ್ನು ಅವರು ಅಂಕಿ-ಸಂಖ್ಯೆಯಾಧಾರದ ಮೇಲೆಯೇ ಸಂಶೊಧನೆ ನಡೆಸುವ "ಕ್ವಾಂಟಿಟೇಟಿವ್" ಜನರಿಗೂ, ಸಂಸ್ಕೃತಿಯ - ಸಂಬಂಧಗಳ ಚೌಕಟ್ಟಿನಲ್ಲಿ ಸಂಶೋಧನೆ ನಡೆಸುವ "ಎಥ್ನೋಗ್ರಾಫರ್ಸ್" ಗೂ ಇರುವ ವ್ಯತ್ಯಾಸವನ್ನು ಚರ್ಚಿಸುತ್ತಲೇ ಪ್ರಾರಂಭಿಸಿದರೂ ತಾವೇ ಮೊದಲಿಗೆ ಪ್ರಶ್ನಾವಳಿಯನ್ನು ಹಿಡಿದು ಸಂಖ್ಯಾಶಾಸ್ತ್ರದ ಮೂಲಕ ಆ ಬಡವರ ಕೇರಿಯನ್ನು ಪ್ರವೇಶಿಸಿದರು ಎನ್ನುವುದನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತುಬಿಡುತ್ತಾರೆ.

ಸುಧೀರ್ ಒಂದು ಪ್ರಶ್ನಾವಳಿಯನ್ನು ಹಿಡಿದು ರಾಬರ್ಟ್ ಟೇಲರ್ ಹೋಮ್ಸ್ ಕೇರಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನು ವಿವರಿಸುವ ರೀತಿಯನ್ನು ನಾವು ಗ್ರಹಿಸಿದರೆ ನಮಗೆ ಸುಧೀರ್ ನಿಜಕ್ಕೂ ಅಂಥ ಒಂದು ಮಳ್ಳ ಪ್ರಶ್ನಾವಳಿಯನ್ನು ಹಿಡಿದು ಹೊರಟಿದ್ದರೇ ಅಥವಾ ಅದನ್ನು ನಾಟಕೀಯವಾಗಿಸಿ ತಾವು ಅಧ್ಯಯನ ಮಾಡುತ್ತಿರುವ ವಿಷಯದ ಜಟಿಲತೆಯನ್ನು ನಮಗೆ ವಿವರಿಸುತ್ತಿದ್ದಾರೆಯೇ ಅನ್ನುವ ಅನುಮಾನ ಬರುತ್ತದೆ.

ನಾನು ಹೀಗೆ ಹೇಳುವುದಕ್ಕೆ ಕಾರಣ ಅವರು ಆ ಬಿಲ್ಡಿಂಗಿಗೆ ಪ್ರವೇಶಿಸಿ, ಅಲ್ಲಿ ವಾಸವಾಗಿರುವವರನ್ನು ಕೇಳಿದ್ದರೆನ್ನಲಾದ ಮೊದಲ ಪ್ರಶ್ನೆ: “How does it feel to be black and poor?” [ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ? [p.14] ಇದಕ್ಕೆ ಐದು ಉತ್ತರಗಳಲ್ಲಿ ಒಂದನ್ನು ಆ ವ್ಯಕ್ತಿ ಆರಿಸಬೇಕು: "ತುಂಬಾ ಹೀನ, ಕೆಟ್ಟದನ್ನಿಸುತ್ತದೆ, ಪರವಾಗಿಲ್ಲ, ಉತ್ತಮ, ಅತ್ಯುತ್ತಮ". ಬಡತನವನ್ನು ಅರ್ಥಮಾಡಿಕೊಳ್ಳಲು ಸುಧೀರ್ ನಿಜಕ್ಕೂ ಈ ರೀತಿಯ ಪ್ರಶ್ನೋತ್ತರಗಳಿದ್ದ ಪ್ರಶ್ನಾವಳಿಯನ್ನು ತೆಗೆದು ಹೋಗಿದ್ದರೆ ಅದರ ನಿರರ್ಥಕತೆ ನಮ್ಮ ಕಣ್ಣಿನೆದುರಿಗೇ ಎದ್ದು ನಿಲ್ಲುತ್ತದೆ. ಈ ರೀತಿಯ ಪ್ರಶ್ನೆಗೆ ಗ್ಯಾಂಗುಗಳಲ್ಲಿ ಕೆಲಸ ಮಾಡುವ ಕತ್ತಿ ಝಳಪಿಸುವ ರೌಡಿ "ಕೇಯಿಸಿಕೋ, ನಿನಗೆ ಇದೇನು ಕೇಯಿಸಿಕೊಳ್ಳುವ ಮಕ್ಕಳಾಟ ಅನ್ನಿಸುತ್ತಿದೆಯಾ? [“Fuck you!... You got to be Fucking kidding me…..”] ಅನ್ನುವ ಪ್ರಶ್ನೆಯನ್ನು ಕೇಳಿದರೆ, ಈ ಪ್ರಶ್ನಾವಳಿಯನ್ನು ನೋಡಿದ ಸಾರಸ್ವತ ಲೋಕ ರೌಡಿ ಉಪಯೋಗಿಸಿದ ಪದಗಳನ್ನು ಉಪಯೋಗಿಸಲಾರದಾದರೂ, ಅವರ ಭಾಷೇ ಶಿಷ್ಟವಾಗಿರುತ್ತದಾದರೂ, ಅವರುಗಳ ಪ್ರತಿಕ್ರಿಯೆಯ ಹಿಂದಿನ ಭಾವನೆಗಳು ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ.
ಮುಂದೆ ಜೆ.ಟಿ ಎನ್ನುವ ವ್ಯಕ್ತಿಯ ಜೊತೆಗಿನ ಒಡನಾಟದಲ್ಲಿ ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಪ್ರಶ್ನೆಯ ಹಿಂದಿನ ಜಟಿಲವಿಚಾರವನ್ನು ಅನ್ನುವುದು ನಮಗೆ ಕೂಡಲೇ ವೇದ್ಯವಾಗುತ್ತದೆ. ಆದರೂ ಒಬ್ಬ ಸಂಶೋಧಕ ಈ ರೀತಿಯ ಐದು ಅಂಶಗಳ ರೆನ್ಸಿಸ್ ಲಿಕರ್ಟ್ ಮಾಪನವನ್ನು ಹಿಡಿದು ಪ್ರಶ್ನಾವಳಿಯ ಜೊತೆಗೆ ಈ ಇಂಥ ಏರಿಯಾದಲ್ಲಿ ಓಡಾಡುತ್ತಿರುವುದನ್ನು ನೆನಸಿಕೊಂಡರೆ ನನಗೆ ನಡುಕ ಹುಟ್ಟುತ್ತದೆ!

ಬಹುಶಃ ಇದು ಸರ್ವೇ ವಿಧಾನದ ಬಗ್ಗೆ ಅವರು ಮಾಡುತ್ತಿರುವ ಅಣಕವಿರಬಹುದು. ಆದರೆ ಸುಧೀರ್ ಪ್ರವೇಶಿಸುವ ಜಟಿಲ ಜಗತ್ತಿಗೆ ಇದು ಒಂದು ಒಳ್ಳೆಯ ಪ್ರವೇಶ ಮಾರ್ಗ. ಪುಟ ೧೬ರರಲ್ಲಿ ಸುಧೀರನ್ನು ಗ್ಯಾಂಗುಗಳ ಪ್ರಪಂಚಕ್ಕೆ ಸೇರಿಸಲು ಸಹಾಯ ಮಾಡುವ ಜೆ.ಟಿ ಜೊತೆಗೆ ನಡೆಯುವ ಸಂಭಾಷಣೆ ಅವರ ಮನಸ್ತತ್ವವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.

"ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ?"

“ನಾನು ಕಪ್ಪುಬಣ್ಣದವನಲ್ಲ” ಆತ ಮಿಕ್ಕವರನ್ನು ನೋಡುತ್ತಾ ಎಲ್ಲ ಅರಿತವನಂತೆ ಉತ್ತರಿಸಿದ.

“ಹಾಗಾದರೆ ಆಫ್ರಿಕನ್ ಅಮೆರಿಕನ್ ಆಗಿ, ಬಡವರೂ ಆಗಿರುವುದು ನಿಮಗೆ ಹೇಗನ್ನಿಸುತ್ತದೆ?” ನಾನು ಬಣ್ಣದ ಮಾತಾಡಿ ಆತನನ್ನು ಬೇಸರಗೊಳಿಸಿದ್ದೆ ಅಂದುಕೊಳ್ಳುತ್ತಾ ಕ್ಷಮೆಯಾಚಿಸುವ ಧ್ವನಿಯಲ್ಲಿ ಕೇಳಿದೆ.

“ನಾನು ಆಫ್ರಿಕನ್ ಅಮೆರಿಕನ್ ಅಲ್ಲ.... ನಾನೊಬ್ಬ ನಿಗ್ಗರ್"

……..

“ಈ ಕಟ್ಟಡದಲ್ಲಿರುವವರು ನಿಗ್ಗರ್ ಗಳು” ಆತ ಕಡೆಗೂ ಹೇಳಿದ “ಆಫ್ರಿಕನ್ ಅಮೆರಿಕನ್ನರು ಬಡಾವಣೆಗಳಲ್ಲಿರುತ್ತಾರೆ. ಆಫ್ರಿಕನ್ ಅಮೆರಿಕನ್ನರು ಕೆಲಸಕ್ಕೆ ಟೈ ಕಟ್ಟಿ ಹೋಗುತ್ತಾರೆ. ನಿಗ್ಗರ್‌ಗಳಿಗೆ ಕೆಲಸವೇ ಸಿಗುವುದಿಲ್ಲ.”


ಸರ್ವೆ ಮಾಡುವಾಗಲೂ ಪ್ರಶ್ನೆಗಳನ್ನು ರೂಪಿಸುವುದು ಹಾಗೂ ಅದನ್ನು ಕೇಳುವುದು ಹೇಗೆನ್ನುವ ಪಾಠವನ್ನು ಸುಧೀರ್‌ಗೆ ಈ ಮೊದಲ ಭೇಟಿಯೇ ಕಲಿಸಿಕೊಡುತ್ತದೆ. ಹೀಗಾಗಿಯೇ ಸರ್ವೇ ವಿಧಾನವನ್ನು ಬಿಟ್ಟು ಮುಂದುವರೆಯಲು ಈ ಅನುಭವವೇ ಆತನಿಗೆ ಸಾಕಾಗಿರಬೇಕು. ಆ ದಿನ ಸುಧೀರನ್ನು ಕೊಲ್ಲಲೂ ಅವರು ತಯಾರಿದ್ದರು. ಒಂದು ರಾತ್ರೆಗೆ ಅವನನ್ನು ತಮ್ಮಲ್ಲಿ ಬಂಧಿಸಿದ್ದರು. ಹಾಗೂ "ಈ ರೀತಿಯ ಮಳ್ಳ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲು ಅವರ ಜೊತೆಯಲ್ಲಿ ಕಾಲ ಕಳೆಯುವುದರ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಬಹುದು" ಅನ್ನುವ ಉಪದೇಶವನ್ನೂ ನೀಡಿದ್ದರು. ಈ ಅನುಭವವನ್ನು ಪಡೆದ ಯಾವುದೇ ಸಂಶೋಧಕ ಅಲ್ಲಿಂದ ಓಡಿ ತನ್ನ ವಿಶ್ವವಿದ್ಯಾಲಯದ ಬೆಚ್ಚನೆಯ ವಾತಾವರಣದಲ್ಲಿ ಅಡಗಿ ತನ್ನ ಸಂಶೋಧನೆಯ ವಿಷಯವನ್ನು ಬದಲಿಸುವುದು ಸಹಜವೇ ಆಗಿತ್ತು.

ಆದರೆ ಮಾರನೆಯ ದಿನ ಸುಧೀರ್ ಮತ್ತೆ ಜೆಟಿಯ ಬಳಿ ಹೋಗಿ ಅವರ ಜೊತೆ ಕಾಲಹರಣಮಾಡಿ ಅವರುಗಳನ್ನು ಅರ್ಥಮಾಡಿಕೊಳ್ಳಲು ತಯಾರಾಗುತ್ತಾರೆ. ಹೀಗೆ ಸುಧೀರ್ ಬಗ್ಗೆ ಸ್ಟೀವನ್ ಡಬ್ನರ್ ಬರೆದ ಮಾತುಗಳನ್ನು ಸುಧೀರ್ ನಿಜವಾಗಿಸುತ್ತಾರೆ. ಪುಸ್ತಕದ ಮುನ್ನುಡಿಯಲ್ಲಿ ಡಬ್ನರ್ ಸುಧೀರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: “ಸುಧೀರ್ ವೆಂಕಟೇಶ್ ಎರಡು ನ್ಯೂನತೆಗಳನ್ನು ಹೊತ್ತು ಜನ್ಮ ಪಡೆದಿದ್ದಾರೆ: ಒಂದು ಅತೀ ವಿಕಸಿತವಾದ ಕುತೂಹಲ ಮತ್ತು ವಿಕಸನಗೊಳ್ಳದ ಭಯದ ಭಾವ.” - ಸುಧೀರ್ ಅನುಭವಿಸಿದ ಘಟನೆಗಳನ್ನು ಗಮನಿಸಿದಾಗ ಈ ಎರಡೂ ನಿಜವೇ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ.

ಸುಧೀರ್ ಈ ವಸತಿಯನ್ನು ಮೊದಲ ಬಾರಿಗೆ ಪ್ರವೇಶಿಸುವುದು ೧೯೮೯ರಲ್ಲಿ. ಈ ಪುಸ್ತಕ ಅಲ್ಲಿಂದ ಆರಂಭವಾಗಿ ೧೯೯೬ರ ತನಕದ ಘಟನೆಗಳನ್ನು ವಿವರಿಸುತ್ತದೆ. ಸುಧೀರ್‌‍ಗೆ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಬಂದು ಶಿಕಾಗೋದಿಂದ ಹೊರಬೀಳಬೇಕಾಗಿ ಬಂದಾಗ ಈ ವಸತಿಯ ಜನರೊಂದಿಗಿನ ಸಂಬಂಧಗಳಿಗೂ ಸಹಜವಾಗಿಯೇ ತೆರೆ ಬೀಳುತ್ತದೆ. ಗಮ್ಮತ್ತಿನ ವಿಷಯವೆಂದರೆ ಆ ಸಮಯಕ್ಕೇ ಶಿಕಾಗೋ ಹೌಸಿಂಗ್ ಅಥಾರಿಟಿಯವರು ಈ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ನಿರ್ಧರಿಸುತ್ತಾರೆ. ಹೀಗೆ ಸುಧೀರ್ ಏಳು ವರ್ಷಗಳ ಕಾಲ ಒಡನಾಡಿದ ಜನಸಮೂಹವೂ ಅಲ್ಲಿಂದ ಹೊರಬಿದ್ದು ಬೇರೊಂದೆಡೆ ಕೆಲಸ, ಧಂಧೆ ಕಂಡುಕೊಂಡು ಹೊಸ ಸವಾಲುಗಳನ್ನೂ ಹೊಸ ಜೀವನೋಪಾಯವನ್ನೂ ಹುಡುಕಿ ಹೊರಡಬೇಕಾಗಿದೆ.

ಎಲ್ಲೆಡಯೂ ಬಡತನವಿದ್ದರೂ, ಹೀಗೆ ಮೂಲೆಗುಂಪಾಗಿರುವ ಜನಸಮೂಹ ಈ ರೀತಿಯ ಜೀವನ ಮತ್ತು ಈ ರೀತಿಯ ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಪ್ರಶ್ನೆಗಳನ್ನು ಉತ್ತರಿಸುವ ಯತ್ನವನ್ನೂ ಈ ಪುಸ್ತಕ ಮಾಡುವುದಿಲ್ಲ. ಈ ಸಮೂಹಗಳನ್ನು ನೋಡಿದಾಗ ನಮಗನ್ನಿಸುವುದು ಮಾದಕ ದ್ರವ್ಯಗಳನ್ನು ಮಾರುವುದೂ, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುವುದೂ ಅವರಿಗೆ ಸಹಜವಾಗಿಯೇ ಕರಗತವಾಗಿದೆ ಎಂದು. ಇದು ತಪ್ಪೆಂದು ಅವರಿಗೆ ಅನ್ನಿಸುವುದೇ ಇಲ್ಲ. ಅವರಿಗೆ ಬೇರೆ ಉದ್ಯೋಗಾವಕಾಶ ಇಲ್ಲ ಅನ್ನುವುದೂ ನಿಜವಲ್ಲವೇನೋ. ಯಾಕೆಂದರೆ ಆ ಸಮೂಹದಲ್ಲೇ ಕಾರು ರಿಪೇರಿ ಮಾಡುವವರೂ, ಪುಟ್ಟ ವ್ಯಾಪಾರಿಗಳೂ, ಜಗಳಗಳನ್ನು ಪರಿಹರಿಸುವವರೂ, ಕಿರಾಣೆಯಂಗಡಿಯನ್ನು ನಡೆಸುವವರೂ ಹೀಗೆ "ಗ್ಯಾಂಗ್"ಗೆ ಸಣ್ಣಪುಟ್ಟ ಸೇವೆಗಳನ್ನು ಒದಗಿಸುವವರನ್ನು ನಾವು ಕಾಣಬಹುದು. ಈ ರೀತಿಯ “ಗ್ಯಾಂಗು”ಗಳ ಕಥೆಯನ್ನು ರೋಮಾಂಚಕವಾಗಿ ವಿವರಿಸುವ ಕಥೆ-ಕಾದಂಬರಿಗಳಿವೆಯಾದರೂ, ಸುಧೀರ್ ಅವರ ಪುಸ್ತಕ ಈ ಕಥೆಗಳು ಸತ್ಯದೂರವಲ್ಲ ಅನ್ನುವುದನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ. ವ್ಯತ್ಯಾಸ: ಕಥೆಗಳಲ್ಲಿ ಬರುವ ಪಾತ್ರಗಳಷ್ಟು ವರ್ಣರಂಜಿತವಾಗಿ ನಿಜಜೀವನದ ಪಾತ್ರಗಳು ಇಲ್ಲ. ಅಷ್ಟೇ.

ಸುಧೀರ್ ಬರವಣಿಗೆಯಿಂದ ನಮಗೆ ವೇದ್ಯವಾಗುವುದೇನೆಂದರೆ ’ಬ್ಲಾಕ್ ಕಿಂಗ್ಸ್’ನಂತಹ ಗ್ಯಾಂಗುಗಳು ಸರಕಾರ ಮತ್ತು ಕಂಪನಿಯ ಮಿಶ್ರಣದ ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ಕೊನೆಯಲ್ಲಿ ಕಂಪನಿಯ ರೀತಿಯಲ್ಲಿ - ಮಾದಕ ಪದಾರ್ಥಗಳನ್ನು ಮಾರಾಟಮಾಡುವ ’ಸೇಲ್ಸ್ ಮನ್’ಗಳಿದ್ದರೆ ಅವರ ಅಫೀಸರುಗಳಂತೆ ಪದಾರ್ಥಗಳನ್ನು ಕೊಳ್ಳುವವರೂ ಹಾಗೂ ಕೆಳಗಿನಿಂದ ಮೇಲಕ್ಕೆ ಬಡ್ತಿ ಪಡೆಯುವ ಪ್ರಕ್ರಿಯೆಯೂ ಆ ಗ್ಯಾಂಗುಗಳಲ್ಲಿ ಉಂಟು. ಸುಧೀರ್ ಪರಿಚಯಿಸಿಕೊಂಡು ಗ್ಯಾಂಗಿನ ಜೊತೆ ಒಡನಾಟಕ್ಕೆ ಪರವಾನಗಿ ನೀಡಿದ ಜೆ.ಟಿ.ಗೂ ಈ ಅಧ್ಯಯನ ನಡುವೆ ಒಂದು ಬಡ್ತಿ ಸಿಕ್ಕಿಬಿಡುತ್ತದೆ. ಒಟ್ಟಾರೆ ಜೆ.ಟಿ. ಈ ಏಣಿಯ ನಡುವಿನಲ್ಲಿ ಇದ್ದಂತೆ ನಮಗೆ ಕಾಣುತ್ತದೆ. ಹೀಗಾಗಿ ಗ್ಯಾಂಗುಗಳ ಬಗೆಗಿನ ನಮ್ಮ ಗ್ರಹಿಕೆಯೂ ಆ ಮಟ್ಟದಿಂದ ಉಂಟಾಗುತ್ತದೆ. ಅಲ್ಲಿಂದ ಮುಂದಕ್ಕೆ ಗ್ಯಾಂಗುಗಳ ನಾಯಕತ್ವದ ಆಲೋಚನಾ ಸರಣಿ ಹೇಗಿರುತ್ತದೆ ಎನ್ನುವ ಒಳನೋಟ ಸುಧೀರ್‌ಗಾಗಲೀ ನಮಗಾಗಲೀ ಸಿಗುವುದಿಲ್ಲ. ನಾಯಕತ್ವವನ್ನು ಸುಧೀರ್ ಭೇಟಿಮಾಡುವುದು ’ಗ್ಯಂಗ್ ಪಾರ್ಟಿ’ಯಲ್ಲಿ ಒಮ್ಮೆ ಮಾತ್ರ. ಆದರೆ ಆ ಭಾಗದಲ್ಲಿ ನಮಗೆ ಯಾವ ಒಳನೋಟವೂ ದೊರೆಯುವುದಿಲ್ಲ.

ಆದರೆ ಜೆ.ಟಿಯ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಒಳ್ಳೆಯ ಗ್ರಹಿಕೆ ಉಂಟಾಗುತ್ತದೆ. ಈ ಗುಂಪಿನಲ್ಲಿ ಗ್ಯಾಂಗಿಗೆ ಅನೇಕ ಸಹಾಯಕ ಸೇವೆಗಳನ್ನೊದಗಿಸುವ ಜನರ ಪರಿಚಯವೂ ನಮಗಾಗುತ್ತದೆ. ಇವರುಗಳ ನಡುವೆ ಕೆಲ ಪೋಲೀಸಿನವರೂ ಇದ್ದಾರೆ. ಅವರು ಇಲಾಖೆಯಲ್ಲಿದ್ದರೂ ಈ ಜನಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ’ಸಮುದಾಯ’ವನ್ನು ಅರ್ಥಮಾಡಿಕೊಳ್ಳಲು ಬಹುಶಃ ನಾವು ಕೇಳಬೇಕಾದ ಪ್ರಶ್ನೆಯೆಂದರೆ: ಇಷ್ಟೊಂದು ಜನ ಈ ಕಾಯಕದಲ್ಲಿ ಶಾಮೀಲಾಗಲು ಕಾರಣವೇನು ಎನ್ನುವದಾಗಿದೆ. ಅಲ್ಲಿ ಅವರು ತಮ್ಮಿಷ್ಟಾನುಸಾರವಾಗಿ ಗ್ಯಾಂಗಿನಲ್ಲಿದ್ದಾರೆಯೇ? ಅವರುಗಳಿಗೆ ಆ ಕಾಯಕ ಬಿಟ್ಟುಹೋಗಬೇಕೆನ್ನುವ ಬಯಕೆಯಿದೆಯೇ? ಈ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಆದರೆ ಹೀಗೆ ಒಂದು ನಿಯಮಿತ ಸ್ಥಳದಲ್ಲಿ ಜೀವಿಸುವ ಜನರ ಜೀವನದಲ್ಲಿ ’ಬದಲಾವಣೆ’ಯನ್ನುಂಟುಮಾಡಲು ಹೊರಟ ’ಸಮುದಾಯ ಕೇಂದ್ರಿತ ಸಂಸ್ಥೆ’ಗಳನ್ನು ನಡೆಸುವವರಿಗೆ ಈ ಉತ್ತರವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಈ ಪುಸ್ತಕದಲ್ಲಿರುವ ಭಾಷೆ ಅದರ ಹಿಂದಿನ ಮನೋಧರ್ಮವನ್ನು ನಾವು ಗಮನಿಸಿದರೆ, ಈ ರೀತಿಯ ಬದಲಾವಣೆಯನ್ನುಂಟುಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಅದು ದೊರೆತಾಗ ಮತ್ತು ದೊರೆತಷ್ಟೂ ಕಾಲ ಅನುಭವಿಸುತ್ತಲೇ ತಮ್ಮ ಜೀವನವನ್ನು ಎಂದಿನಂತೆ ಮುಂದುವರೆಸಲು ಆ ಜನ ನಿರ್ಧರಿಸಿರುವಂತೆ ಅನ್ನಿಸುತ್ತದೆ. ಉದಾಹರಣೆಗೆ ಪುಸ್ತಕದ ಕೆಲಭಾಗಗಳಲ್ಲಿ "ಸಮುದಾಯ" ಈ ರೀತಿಯ ’ಬದಲಾವಣೆ’ಯಿಂದ ಖುಷಿಯಾಗೇನೂ ಇಲ್ಲವೆನ್ನುವುದು ವೇದ್ಯವಾಗುತ್ತದೆ. ಅವರನ್ನುತ್ತಾರೆ "ಈ ಕರಿಯರು ನಮ್ಮ ಜೀವನವನ್ನು ನರಕಸದೃಶ ಮಾಡಬಹುದು, ಆದರೂ ಅವರು ನಮ್ಮವರೇ ಅನ್ನುವುದನ್ನು ಮರೆಯಲು ಸಾಧ್ಯವೇ. ಹಾಗೂ ಯಾವ ಮನೆಯಲ್ಲಿ ನಾವು ಹುಟ್ಟುತ್ತೇವೆನ್ನುವುದನ್ನು ನಾವು ಆಯ್ದು ಬರಲು ಸಾಧ್ಯವೇ?" ಎನ್ನುವಂಥಹ ಪ್ರಶ್ನೆಗಳನ್ನು ಅವರು ಕೇಳುತ್ತಾರೆ [ಪು.89]

ಹೀಗೆ ಒಂದು ಸ್ಥರದಲ್ಲಿ ಸಿಕ್ಕಿಬಿದ್ದಿರುವ ಜನರ ದ್ವಂದ್ವಗಳನ್ನು ಸುಧೀರ್ ಚೆನ್ನಾಗಿ ಗ್ರಹಿಸುತ್ತಾರೆ. ಹಸಿವೆಯನ್ನು ತೊಡೆಯಲು ಹೊಟ್ಟೆಪಾಡಿಗೆ ದುಡಿಯಬೇಕೋ ಅಥವಾ ಶಾಲೆಗೆ ಹೋಗಿ ವಿದ್ಯೆಯನ್ನು ಆರ್ಜಿಸಬೇಕೋ ಅನ್ನುವ ದ್ವಂದ್ವ ಬಡವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಈ ಬಗ್ಗೆ ಪ್ರಶ್ನೆಗಳ ಸರಣಿಯನ್ನು ಸುಧೀರ್ ಕೇಳುವುದಕ್ಕೆ ಬದಲಾಗಿ - ಆ ಸಮುದಾಯದ ಭಾಗವೇ ಆಗಿರುವ ಶ್ರೀಮತಿ ಬೇಯ್ಲಿ ಕೇಳಿ ಸುಧೀರನ್ನು ಉತ್ತರಿಸಲು ಹೇಳಿದಾಗ ಅದರಲ್ಲಿ ಕಡೆಗೆ ಬರುವ ತೀರ್ಪು ನಿರೀಕ್ಷಿತ ದಿಕ್ಕಿನಲ್ಲಿಯೇ ಹೋಗುತ್ತದೆ. ಹೀಗಾಗಿಯೇ ಸುಧೀರ್ ಒಗೆಯುವ "ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ ೨೫ ಪ್ರತಿಶತದಷ್ಟು ಹೆಚ್ಚುತ್ತದೆ" ಎನ್ನುವ ಸಂಶೋಧನೆಯ ಫಲಿತಗಳು ಅರ್ಥಹೀನವಾಗಿ ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಯಾಕೆಂದರೆ ಈ ಟೈಲರ್ ಹೋಮ್ಸ್ ಅನ್ನುವ ಈ ವಸತಿಯಲ್ಲಿ ಕಷ್ಟಪಟ್ಟು ದಿನಕ್ಕೆರಡು ಊಟ ಹೇಗೋ ಸಂಪಾದಿಸುವ ಬಡವರಿದ್ದಾರೆ; ಅಲ್ಲಿಯೇ ಇದ್ದು ಆ ವಾತಾವರಣದಲ್ಲೇ ’ಬೆಳೆದು’ ಮ್ಯಾಲಿಬೂ ಕಾರುಗಳನ್ನು ಓಡಿಸುವ ಮಾಜಿ ಬಡವರಿದ್ದಾರೆ. ಆ ಕಾರುಗಳನ್ನು ಮತ್ಯಾರೋ ತೊಳೆಯುತ್ತಾರೆ. ಹಾಗೆ ತೊಳೆಯುವವರಿಗೆ ದುಡ್ಡು ಸಿಗುವುದಿಲ್ಲ. ಯಾಕೆಂದರೆ ಈ ಸೇವೆಗೆ ಬದಲಾಗಿ ಕಾರು ತೊಳೆದವನ ಮನೆಗೆ ಈತ ’ರಕ್ಷಣೆ’ ನೀಡುತ್ತಾನೆ. ಜನತೆಯ ಒಟ್ಟಾರೆ ಹಿತಕ್ಕಾಗಿ ನಾವು ತೆತ್ತುವ ತೆರಿಗೆಯಂತೆ ಇದೂ ಒಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿ ನಡೆಯುತ್ತಿದೆ.

ಅಲ್ಲಿನ ಕಾರ್ಯವೈಖರಿಯಲ್ಲಿ ಸಮಸ್ಯೆಯನ್ನು ’ಹೇಗೆ’ ಪರಿಹರಿಸಬೇಕು ಅನ್ನುವ ಬಗ್ಗೆ ವಿಚಾರವಾಗುತ್ತದೆಯೇ ಹೊರತು - ಆ ಸಮಸ್ಯೆಯನ್ನು ಪರಿಹರಿಸಬೇಕೋ ಇಲ್ಲವೋ ಅನ್ನುವುದರ ಬಗ್ಗೆ ಚರ್ಚೆ ನಡೆಯುವುದಿಲ್ಲ [ಪು.164]. ನ್ಯಾಯ ಸಂಪಾದಿಸಲು ಪರಿಹಾರ ಕಂಡುಕೊಳ್ಳಲು ಅವರು ಉಪಯೋಗಿಸುವ ಮಾರ್ಗವನ್ನು ಕಂಡು ಸುಧೀರ್ ಚಡಪಡಿಕೆಯಿಂದ ಹೇಳುತ್ತಾರೆ: "ಇದು ಎಷ್ಟು ವಿಚಿತ್ರ ಜೀವನ - ಹೀಗೆ ಹೇಗೆ ಬದುಕುವುದು ಸಾಧ್ಯ?" ಆದರೆ ಸುಧೀರ್ ಕೇಳಿದ ಈ ಪ್ರಶ್ನೆಗೆ "ಬಹುಶಃ ನಿನಗೆ ಈಗ ಅರ್ಥವಾಗಲು ಪ್ರಾರಂಭವಾಗಿದೆ ಅನ್ನಿಸುತ್ತದೆ. ಬಹುಶಃ ನೀನು ಈ ಬಗ್ಗೆ ಕಲಿಯಲೂ ಪ್ರಾರಂಭಿಸಿರಬಹುದು" ಅನ್ನುವುದು ಬೇಯ್ಲಿಯ ಉತ್ತರ. ಆ ಕಲಿಕೆ ಕೇವಲ ಸುಧೀರ್‌ಗೆ ಮಾತ್ರವಲ್ಲದೇ ಓದುಗನಿಗೂ ಉಂಟಾಗುತ್ತದೆ.

ಸುಧೀರ್ ಬರವಣಿಗೆಯಲ್ಲಿ ಒಂದು ಥರದ ಸ್ಥಿತ ಪ್ರಜ್ಞತೆ ಹಾಗೂ ಒಳಗೊಳ್ಳದಿರುವ ಶೈಲಿಯಿದೆ. ಬಹುಶಃ ಈಗ ಆ ಎಲ್ಲದರಿಂದ ದೂರವಾಗಿ ತಮ್ಮ ವಿಶ್ವವಿದ್ಯಾನಿಲಯದ ಬೆಚ್ಚನೆಯ ವಾತಾವರಣದಲ್ಲಿ ಕೂತುಬರೆಯುತ್ತಿರುವುದರಿಂದ ನಮಗೆ ಹಾಗನ್ನಿಸಬಹುದೇನೋ. ಆತ ಹೆಚ್ಚಾದ ವಿಶ್ಲೇಷಣೆಯನ್ನು ನೀಡದೆಯೇ ಕೇವಲ ತಮ್ಮ ಅನುಭವವನ್ನು ದಾಖಲಿಸಿ, ಮಿಕ್ಕ ವಿಚಾರಗಳನ್ನು ಓದುಗರ ತೀರ್ಪಿಗೆ ಬಿಟ್ಟುಬಿಡುತ್ತಾರೆ. ಘಟಿಸಿದ ಘಟನಾವಳಿಯನ್ನು ತಮ್ಮ ಭಾವನೆಗಳನ್ನು ಒಳಪಡಿಸದೆಯೇ ದೂರದಿಂದ ನೋಡಿ ವರದಿ ಮಾಡುವ ಶೈಲಿಯನ್ನು ಸುಧೀರ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸುಧೀರ್ ಚಿತ್ರಿಸುವ ಘಟನಾವಳಿಗಳ ಸರಣಿ ಅವರ ಒಟ್ಟಾರೆ ’ಕಥೆ’ಯನ್ನು ನಾವು ಅಂತರ್ಗತ ಮಾಡಿಕೊಳ್ಳಲು ಪೂರಕವಾಗಿದೆ.

ಈ ಪುಸ್ತಕದ ಮಹತ್ವ ಇರುವುದು ಒಂದು ಮುಖ್ಯವಾದ ಅಂಶದಲ್ಲಿ. ಸಂಶೋಧನೆಯಲ್ಲಿ ತೊಡಗುವ ಜನರಿಗೆ ಈ ರೀತಿಯ ಗ್ಯಾಂಗುಗಳೊಂದಿಗೆ ಇದ್ದು ಅಲ್ಲಿಂದ ತಮ್ಮ ಒಳನೋಟಗಳನ್ನು ಪಡೆಯುವ ಘನತೆ ಸಾಮಾನ್ಯವಾಗಿ ದೊರೆಯುವುದಿಲ್ಲ. ಅವರುಗಳು ಜೀವಿಸುವ ಜಾಗವನ್ನು ಸರಕಾರ "ಪ್ರಾಜೆಕ್ಟ್" ಎಂದು ಕರೆದರೂ ಅವರು ಅದನ್ನು ಸಮುದಾಯವೆಂದೇ ಕರೆಯುತ್ತಾರೆ. ಈ ಸಮುದಾಯದಲ್ಲಿ ಇರುವುದು ಮಾದಕ ವಸ್ತುಗಳನ್ನು ಮಾರಾಟ ಮಾಡುವ, ಚಿಲ್ಲರೆ ಅಪರಾಧಗಳನ್ನೆಸಗುವ, ಕಾನೂನು ಮುರಿಯುವ ಆದರೆ ಎಲ್ಲವೂ ತಮ್ಮದೇ ಕಾಯಿದೆಯ ಪ್ರಕಾರ ಮಾಡುವ ಜನ. ಆ ಸಮುದಾಯಕ್ಕೆ ಯಾವುದೇ ಕಾರ್ಪರೇಟ್ ಜಗತ್ತಿನಂತೆಯೇ ಅಧಿಕಾರದ ಮಜಲುಗಳೂ, ಬಡ್ತಿ ಕಾರ್ಯಕ್ರಮಗಳೂ, ಅಸೂಯೆಗಳೂ ಹಾಗೂ ಮಾರುಕಟ್ಟೆಯಲ್ಲಿರಬಹುದಾದ ಪೈಪೋಟಿಗಳೂ ಇವೆ!

ಸಂಶೋಧನೆಗೆಂದು ಹೊರಟಿರುವ ಜನರ ನಡವಳಿಕೆಯಲ್ಲಿರಬಹುದಾದ ದ್ವಂದ್ವಗಳನ್ನೂ ಆ ಸ್ಥಳವನ್ನಾಕ್ರಮಿಸಿದ ತಾತ್ವಿಕ ನೆಲೆಯನ್ನೂ ಪುಸ್ತಕ ಚರ್ಚಿಸುತ್ತದೆ. ಎಷ್ಟೋ ಬಾರಿ ಸಂಶೋಧಕನ ನಡವಳಿಕೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಪರೀಕ್ಷೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿಯಾದರೆ, ಒಮ್ಮೊಮ್ಮೆ ಪರೋಕ್ಷವಾಗಿ ಸುಧೀರ್ ಅಂತಹ ಸಂಶೋಧಕರನ್ನು ಕಾಡುತ್ತದೆ. ಉದಾಹರಣೆಗೆ ವಿಶ್ವವಿದ್ಯಾನಿಲಯದಲ್ಲಿ ಜ್ಞಾನವರ್ಧನೆಯ ಕೆಲಸ ಮಾಡುವ ಸಂಶೋಧಕರು ಒಂದು ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಹೊರಟಾಗ - ಹಾಗೊಂದು ’ವಿಷಯ’ವಿದೆ ಅನ್ನುವ ಅಹಂನೊಂದಿಗೆ ಹೋಗುತ್ತಾರೆ. ಆದರೆ ಸುಧೀರ್ ಅಥವಾ ಅವರಂತಹ ಸಂಶೋಧಕರನ್ನೇ ಈ ಸಮುದಾಯ ಹತ್ತಿರದಿಂದ ಅಧ್ಯಯನ ಮಾಡುತ್ತದಲ್ಲದೇ ಅವರನ್ನು ತಮ್ಮದೇ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲೂ ಬಹುದು ಅನ್ನುವುದು ನಮಗೆ ಮನವರಿಕೆಯಾಗುತ್ತದೆ. ಸುಧೀರ್ ಇರುವ ಸಂದರ್ಭದಲ್ಲಿ ಅದರಲ್ಲೂ ಅಪರಾಧವನ್ನೇ ಜೀವನಮಾಡಿಕೊಂಡ ಈ ಸಮುದಾಯದ ಭಯಭೀತಿಗಳ ನಡುವಿನಲ್ಲಿ ತಾವು ಮತ್ತಷ್ಟು ಪರೀಕ್ಷೆಗೊಳಗಾಗುವುದನ್ನು ಕಂಡುಕೊಳ್ಳುತ್ತಾರೆ. ಆ ಪರೀಕ್ಷೆಯನ್ನು ನಡೆಸುವವರು ಸುಧೀರನ್ನು ಒಳಸೇರಿಸಿದ ಜನರು ಮಾತ್ರವಲ್ಲ ಬದಲಿಗೆ ಆತನ ಜೊತೆ ಮಾತನಾಡಿದ-ಒಡನಾಡಿದ ಪ್ರತಿಯೊಬ್ಬರೂ ಆತನನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ ಅನ್ನುವುದನ್ನು ನಾವು ಗಮನಿಸಬೇಕು. ಕೆಲವು ಬಾರಿ ತಮಗೆ ತಿಳಿಯದೆಯೇ ಸುಧೀರ್ ಒಂದು ಪಕ್ಷವನ್ನು ಬೆಂಬಲಿಸಿಬಿಡುತ್ತಾರೆ [ಅಥವಾ ಜೆ.ಟಿಯ ಏಜೆಂಟ್ ಅನ್ನುವ ಅಭಿಪ್ರಾಯ ಉಂಟಾಗುವುದರಿಂದ ಆತನ ಪಕ್ಷಪಾತ ಮಾಡುತ್ತಿರುವಂತೆ ಇತರರಿಗೆ ಕಂಡುಬರುತ್ತಾರೆ]. ಒಮ್ಮೆ ಜೆಟಿಯ ಸಹಚರರು ಆತನ ಬಗ್ಗೆ ದೂರಿದ್ದನ್ನು ತಮಗರಿವಿಲ್ಲದಂತೆಯೇ ಸಹಜ ಸಂಭಾಷಣೆಯಲ್ಲಿ ಜೆಟಿಯ ಜೊತೆ ಚರ್ಚಿಸಿ ಸಹಚರರ ಕೋಪ-ಶಾಪಕ್ಕೊಳಗಾಗುತ್ತಾರೆ. ಸುಧೀರ್‌ಗೆ ಮಾಹಿತಿ ನೀಡುತ್ತಿರುವವರೇ ಆತ ಬರೆದುಕೊಂಡ ಮಾಹಿತಿಯ ನೋಟ್ಸ್ ಕೂಲಂಕಶವಾಗಿ ಪರೀಕ್ಷಿಸುತ್ತಿದ್ದಾರೆ! ಹೀಗಾಗಿ ಆ ನೋಟ್ಸ್ ಅನುಸಾರವಾಗಿ ಹೊಸ ಮಾಹಿತಿಯನ್ನೂ ಅವರು ತಿರುಚಿ ನೀಡುವ ಸಾಧ್ಯತೆಯಿದೆ! ಹೀಗಾಗಿಯೇ ಭಾಗವಹಿಸಿ ಕಂಡುಕೊಳ್ಳುವ [participant observation] ವಿಧಾನದ ಅಧ್ಯಯನದ ಬಗ್ಗೆ ಕೆಲ ಪ್ರಶ್ನೆಗಳೂ ಉದ್ಭವವಾಗುತ್ತವೆ. ಭಾಗವಹಿಸುವ ಪ್ರಕ್ರಿಯೆ ಮುಗಿಯುವುದು, ಕಂಡುಕೊಳ್ಳುವ ಪ್ರಕ್ರಿಯ ಪ್ರಾರಂಭವಾಗುವುದೂ ಯಾವ ಬಿಂದುವಿನಲ್ಲಿ? ಅಥವಾ ಸಮುದಾಯದ ವತಿಯಿಂದ ನೋಡಿದರೆ ಮಾಹಿತಿ ನೀಡುವುದಕ್ಕೂ - ಒಂದು ರೀತಿಯಾಗಿ ಮಾಹಿತಿಯನ್ನು ಬರೆದುಕೊಳ್ಳಲೆಂದೇ ಭಿನ್ನರೀತಿಯ ಪ್ರವರ್ತನೆಯನ್ನು ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳು ಅಧ್ಯಯನದ ರೀತಿನೀತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಗಳಾಗುತ್ತವೆ.

ಈ ವಿಷಯಗಳನ್ನು ಸುಧೀರ್ ಚರ್ಚಿಸುವುದಿಲ್ಲವಾದರೂ, ನೇರ ಉತ್ತರಗಳಿಲ್ಲದ ಅನೇಕ ದ್ವಂದ್ವಗಳನ್ನು ಅವರು ಎತ್ತುತ್ತಾರೆ. ಈ ಗ್ಯಾಂಗುಗಳ ಅಧ್ಯಯನ ನಡೆಸುತ್ತಿರುವಾಗ ಪೋಲೀಸರು ತನ್ನನ್ನು ಕರೆದು ಪ್ರಶ್ನಿಸಿದರೆ ತಾನೇನು ಮಾಡಬೇಕು? ತನಗೆ ತಿಳಿದಿರುವ ವಿಚಾರವನ್ನು ಅವರಿಗೆ ಹೇಳಬೇಕೇ? ಈ ಗ್ಯಾಂಗಿನವರು ಒಂದು ಕೊಲೆ ಮಾಡಲು ಯೋಜನೆ ಹಾಕುತ್ತಿರುವುದು ತನಗೆ ತಿಳಿದುಬಂದಾಗ ತೆಗೆದುಕೊಳ್ಳಬೇಕಾದ ನಿಲುವೇನು? ತನ್ನ ಸಂಶೋಧನೆ ಮುಂದುವರೆಯಲು ತಮ್ಮ ಸಮಯವನ್ನೂ ಒಳನೋಟಗಳನ್ನೂ ನೀಡಿದ ಈ ಸಮುದಾಯದವರಿಗೆ ತಾನು ಕೃತಜ್ಞತೆ ತೋರುವುದು ಹೇಗೆ? ಅವರಿಗೆ ಹಣ ನೀಡಬೇಕೇ? ಅವರ ಜೀವನದಲ್ಲಿ ಏನಾದರೂ ಉತ್ತಮವಾಗುವಂತೆ ಕೆಲಸ ಮಾಡಬೇಕೇ? ತನಗೆ ತಿಳಿದಿರುವ ಸರ್ಕಾರಿ ಯೋಜನೆಗಳು ಇವರತ್ತ ಹರಿಯುವಂತೆ ಏನಾದರೂ ಮಾಡಬೇಕೇ? ಅಥವಾ ಈ ಸಮುದಾಯವನ್ನು ಕೇವಲ ’ಅಧ್ಯಯನದ ವಿಷಯ’ ಮತ್ತು ’ಉದಾಹರಣೆ’ಗಳೆಂದು ನೋಡಿ ತನ್ನ ಜೀವನವನ್ನು ಮುಂದುವರೆಸಬೇಕೇ? ಇವುಗಳಲ್ಲಿ ಕೆಲವು ಪ್ರಶ್ನೆಗಳು ಆ ನಾಡಿನ ಕಾನೂನಿಗೆ ಸಂಬಂಧಿಸಿದ್ದಾದರೆ, ಬಹಳಷ್ಟು ಪ್ರಶ್ನೆಗಳು ಸಂಶೋಧಕರಿಗಿರುವ ತಾತ್ವಿಕ ನಿಲುವಿನ ಕಷ್ಟದ ಪ್ರಶ್ನೆಗಳಾಗಿವೆ. ಅಧ್ಯಯನ ನಡೆಸುವವರಿಗೂ, ಅಧ್ಯಯನಕ್ಕೊಳಗಾಗುವವರಿಗೂ ನಡುವಿನ ಈ ಜಟಿಲ ಹಾಗೂ ಗಹನ ಸಂಬಂಧದೊಳಗೆ ಯಾವನಿಲುವು ’ಸರಿ’ ಯಾವುದು ’ತಪ್ಪು’ ಎಂದು ನಿರ್ಧರಿಸಲು ಆಗುವುದೇ ಇಲ್ಲ!

ಸುಧೀರ್ ಈ ಪುಸ್ತಕದಲ್ಲಿ ತಮ್ಮ ವಿಚಾರಗಳನ್ನೂ ಹೆಚ್ಚು ವ್ಯಕ್ತವಾಗಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸುವುದು ಸಹಜ. ಆಗ ನಾವುಗಳು ಲೇಖಕರೊಂದಿಗೂ ಚರ್ಚೆಗಿಳಿಯಬಹುದಿತ್ತು. ಆದರೆ ಸುಧೀರ್ ಅವರ ವಿಚಾರಗಳು ವ್ಯಕ್ತವಾಗಿ ಇಲ್ಲದಿದ್ದರೂ ಪುಸ್ತಕದ ಮಹತ್ವವೇನೂ ಕುಂದುವುದಿಲ್ಲ. ಅವರ ಬರವಣಿಗೆಯ ಶೈಲಿ ನಮ್ಮನ್ನು ಈ ವಿಚಾರಗಳಲ್ಲಿ ಒಳಗೊಳ್ಳವ ರೀತಿಯಲ್ಲಿಯೇ ಇದೆ. ಆಗಾಗ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವದರಲ್ಲೂ ಸುಧೀರ್ ಸಫಲರಾಗುತ್ತಾರೆ. ಗಂಭೀರ ಅಧ್ಯಯನವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಜನಪ್ರಿಯ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀರ್ ಸಫಲರಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಾಗಿದೆ.




Thursday, September 24, 2009

ತಿರುಮಲೇಶರ ಕಾವ್ಯ


ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.

"ಕನ್ನಡ ಕಾವ್ಯಕ್ಷೇತ್ರದಲ್ಲೀಗ ಹೊಸ ಸಾಧ್ಯತೆಗಳನ್ನು ಕಂಡುಹಿಡಿಯುವುದು ಅಡಿಗೋತ್ತರರ ಕರ್ತವ್ಯವೆಂದು ನನ್ನ ನಂಬಿಕೆ" ಎಂದು ಮಹಾಪ್ರಸ್ಥಾನದ ಪ್ರಸ್ತಾವನೆಯಲ್ಲಿ ತಿರುಮಲೇಶರು ಬರೆದಿದ್ದರು. ಆ ಕಳಕಳಿ ಅವರಲ್ಲಿ ತಮ್ಮ ಮೊದಲ ಸಂಕಲನದಿಂದಲೇ ಇದ್ದುದನ್ನು ಕಾಣಬಹುದಾಗಿದೆ. ಮುಖವಾಡಗಳು ಸಂಕಲನದ ಕವಿತೆಯ ಈ ಸಾಲುಗಳನ್ನು ಗಮನಿಸಿ:

ಕೇರಳ
........
ಛೀ ಸಾಕು
ಈ ಹುಚ್ಚು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆಯಿದು
ಪಂಪ ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ...
....

ತಿರುಮಲೇಶರ ಕಾವ್ಯವನ್ನು ಅಧ್ಯಯನ ಮಾಡಿದಾಗ ಅವರ ಬೆಳವಣಿಗೆಯನ್ನು ಸ್ಪಷ್ಟವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. ’ಮುಖವಾಡಗಳು’, ’ವಠಾರ’ ಹಾಗೂ ಒಂದಂಶದವರೆಗೂ ’ಮಹಾಪ್ರಸ್ಥಾನ’ ಅಡಿಗರ ಜಾಡಿನಲ್ಲೇ ಬರೆದ, ಬೇರೊಂದು ಮಾರ್ಗಕ್ಕಾಗಿ ಶೋಧನೆ ನಡೆಸುತ್ತಿರುವ ಘಟ್ಟವಾದರೆ, ’ಮುಖಾಮುಖಿ’ ಅವರ ಹೊಸಮಾರ್ಗದ ಹುಡುಕಾಟಕ್ಕೆ ಒಂದು ಸ್ಪಷ್ಟ ದಿಕ್ಕನ್ನು ಕಲ್ಪಿಸಿದ ಸಂಕಲನ. ’ಅವಧ’ ಖಂಡಿತವಾಗಿಯೂ ಸಂಪೂರ್ಣ ತಿರುಮಲೇಶರದೇ ಎಂಬಂಥ ಶೈಲಿಯನ್ನು ಮೈಗೂಡಿಸಿಕೊಂಡಿದೆ. ’ವಠಾರ’ ’ಮುಖವಾಡಗಳು’ ಸಂಕಲನಗಳಲ್ಲಿರುವ ಕವಿತೆಗಳು ಬಹಳ ಎಕ್ಸ್ ಪ್ಲಿಸಿಟ್ ಸಂಕೇತಗಳೂ, ನೇರ ನಿರೂಪಣೆಯನ್ನೂ ಹೊಂದಿದ್ದರೆ, ಆನಂತರದ ಕವಿತೆಗಳು ಸಂಕೀರ್ಣವಾಗುತ್ತಾ ಹೋಗುವುದನ್ನ ಕಾಣಬಹುದು. ಅವರ ಬರವಣಿಗೆ, ಅತೀ ಸಣ್ಣವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯಲ್ಲಿ ನಿರತವಾಗುತ್ತವೆ. ’ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದ[ವಾದುದರಿಂದ] ಕವನವನ್ನು ಹೇಗೇ ವ್ಯಾಖ್ಯಾನಿಸಲೂ ಅನುಕೂಲವಾದ [ವಾಗಿದೆ]’ [ವಿಜಯಶಂಕರ್, ರುಜುವಾತು, ಸಂಚಿಕೆ ೯] ಕವಿತೆಗಳನ್ನು ತಿರುಮಲೇಶ್ ಬರೆದಿರುವುದರಲ್ಲಿ ಅವರ ಸ್ಪಷ್ಟ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.

ತಿರುಮಲೇಶರ ಮೊದಲ ಸಂಕಲನಗಳ ಕವಿತೆಗಳು ’ನಿಯತ ಛಂದೋಗತಿಯಿಂದ ಮುಕ್ತವಾಗಿ, ಆದರೂ ಮುಕ್ತ ಪದ್ಯವಾಗದೆ, ಗದ್ಯದ ಗತಿಗೆ ಬಹು ಸಮೀಪ ಬಂದು ಆದರೂ ಗದ್ಯವಾಗದೆ ಸ್ವತಂತ್ರ ಕಾವ್ಯಕ್ಕೆ ತಕ್ಕ ಗತಿಯನ್ನು’ [ಗೋಪಾಲಕೃಷ್ಣ ಅಡಿಗ, ಮುಖವಾಡಗಳು ಮುನ್ನುಡಿ] ಒದಗಿಸಿದರೆ. ಈಚೀಚಿನ ಕವಿತೆಗಳು ಭಾವಗೀತಾತ್ಮಕ ಶೈಲಿಯಲ್ಲಿ ಬರೆದವುಗಳು ಎಂಬುದನ್ನು ಗಮನಿಸಬಹುದು.

’ಮುಖವಾಡಗಳು’ ಸಂಕಲನದಲ್ಲಿರುವ ಕವಿತೆಗಳು ಒಂದು ರೀತಿಯ ಹುಡುಕಾಟದಲ್ಲೇ ಓಡಾಡುತ್ತವೆ. ’ನನ್ನ ಕತೆ’ ಎಂಬ ಮೊದಲ ಕವಿತೆಯಲ್ಲಿ ಸೂಚ್ಯವಾಗಿ ತಿರುಮಲೇಶ್ ಅದನ್ನೇ ಹೇಳುತ್ತಾರೆ:

...
ಈ ಮನೀಷೆ
ಈ ಒಳತೋಟಿ
ಅನುಭವಿಸಿ, ಅನುಭವಿಸಿ ಸೋತು ಸುಸ್ತಾಗಿ
ಯಶೋಧರೆಯ ಮಗ್ಗುಲಲಿ
ಹೊರಳಿದ್ದು
ಎಲ್ಲೋ ಎನೋ ಕಳೆದುಹೋಗಿದೆಯೆಂದು
ಬೋಧಿವೃಕ್ಷದ ಕೆಳಗೆ
ಹುಡುಕಿದ್ದು
ಬುದ್ಧನಾದದ್ದು ಗೊಮ್ಮಟನಾದದ್ದು
ಕಲ್ಲಾಗಿ ಬಿದ್ದದ್ದು
ನನ್ನ ಕತೆ..
...

ಈ ಹುಡುಕಾಟದಲ್ಲಿ ಮುಖ್ಯವಾಗಿ ವಾಸ್ತವಿಕತೆ ಹಾಗೂ ಅನುಭವಕ್ಕೆ ವಿಪರೀತವಾದ ಒತ್ತು ಕೊಟ್ಟಿರುವುದನ್ನೂ ನೋಡಬಹುದು. ’ಸಮರ್ಥನೆ: ಸೈತಾನ’ ’ಸಮರ್ಥನೆ: ಗುಂಡಿಯಿಲ್ಲದ ಪ್ಯಾಂಟು ಧರಿಸಿದವ’ ಕವಿತೆಯ
...
ಹುಟ್ಟಿ ಬಂದಾಗ ಮಾತು ಕೊಟ್ಟಿದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲಾ?
ತಪ್ಪು ಮುತ್ತಜ್ಜ ಆದಮನದು
ಅಲ್ಲ ಮುತ್ತಜ್ಜಿಯದೋ
ಬಾ, ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನ ರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ ಬಯಸಿದ ಹಾಗೆ
..

ಎಂಬ ಸಾಲುಗಳು, ’ವಾಸ್ತವತೆ’ ಕವಿತೆಯ ಸಾಲುಗಳು, ಹಾಗೂ ’ಮುಖವಾಡಗಳು’, ’ಕೇರಳ’ ಈ ಎಲ್ಲ ಕವಿತೆಗಳದೂ ಒಂದೇ ಧ್ವನಿ. ಆಷಾಢಭೂತಿತನದ ಪೊರೆ ಕಳಚಿ ಸಹಜವಾಗಿ ವಾಸ್ತವದಲ್ಲಿ ಬಂದದ್ದು ಬಂದಂತೆ, ಇದ್ದದ್ದು ಇದ್ದಂತೆ, ಯಾವ ಒಪ್ಪಂದಗಳೂ ಇಲ್ಲದೇ ಇರುವಂತಹ ಬದುಕಿನ ಶೋಧನೆ.

’ವಠಾರ’ ಸಂಕಲನಕ್ಕೆ ಬರುವ ವೇಳೆಗೆ ತಿರುಮಲೇಶರು ಹುಡುಕಾಟದಿಂದ ಸ್ವಲ್ಪ ಹುಡುಗಾಟಿಕೆಯತ್ತ ವಾಲುತ್ತಾರೆ. ’ಮುಖವಾಡಗಳು’ವಿನಲ್ಲಿನ ಪೊರೆ ಕಳಚಿ ವಾಸ್ತವದ ಮುಖಾಮುಖಿಯಾಗಿ ನಿಲ್ಲುವ ಮೂಲತಂತುವನ್ನು ಈ ಸಂಕಲನದಲ್ಲೂ ಪೋಷಿಸಿಕೊಂಡು ಬಂದರೂ, ಕವಿತೆ ಬರೆಯುವ ಶೈಲಿ ಇಲ್ಲಿ ಬೇರೊಂದು ಮುಖವನ್ನೇ ಪಡೆಯುವುದನ್ನು ಗಮನಿಸಬಹುದು. ಇಲ್ಲಿ ಹೆಚ್ಚಿನ ಕವಿತೆಗಳು ಹುಡುಗಾಟದ ಕೂಗಾಟದ ಅಬ್ಬರದಿಂದ ತತ್ತರಿಸಿವೆ. ’ವಠಾರ’ದ ಪ್ರಸ್ತಾವನೆಯಲ್ಲಿಯೇ ತಿರುಮಲೇಶ್ ಹೇಳಿಬಿಡುತ್ತಾರೆ.. "’ಮುಖವಾಡಗಳು’ ಸ್ವಲ್ಪಮಟ್ಟಿಗೆ ಅನುಕರಣಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲೂ ನನ್ನದೇ ಲಯಗಳನ್ನು ಗುರುತಿಸುವ ಯತ್ನ ಮಾಡಿದ್ದೆ. ’ವಠಾರ’ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ, ಅಲ್ಲಿಗೆ ಅದು ಅರ್ಥಪೂರ್ಣ.’ ಇಷ್ಟೇ ಸೀಮಿತವಾದ ಘೋಷಿತ ಉದ್ದೇಶಗಳಿರುವ ಈ ಕವಿತೆಗಳು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರ ಪರಿಣಾಮ ಬೀರುತ್ತವೆ. ’ವಠಾರ’ದಲ್ಲಿರುವ ಕವಿತೆಗಳ ಶೈಲಿ ನೋಡಬೇಕೆಂದರೆ ಅದರ ಮೊದಲ ಕವಿತೆ ಕೀರ್ತನೆ ಪರಿಶೀಲಿಸಬಹುದು:


ಕೀರ್ತನೆ

ಯನ್ನ ತಲೆಯನ್ನ ಸೋರೆ ಮಾಡಿ
ಯನ್ನ ನರಗಳನ್ನ ತಂತಿ ಮಾಡಿ
ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ
ಗೊಂಬೆಯಾಟವಯ್ಯಾ ಎಂದು ಕುಣಿಸಿ
ಮಣಿಸಿ ದಣಿಸಿ
ದಾಸರ ದಾಸ ಚಪ್ರಾಸಿ ಮಾಡ್ಕೋ
ತಲೆಮೇಲೆ ಕೂತ್ಕೋ
ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ
ರೋಡಿಗೆ ಹಾಕ್ಕೋ
ಓಡ್ಸು ಅದರ ಮೇಲೆ ನಿನ್ನ ಇಂಪಾಲಾ
ಯನ್ನ ಚರ್ಮವ ಚಪ್ಪಲಿ ಮಾಡ್ಕೋ
ಹಾಕಿಕೋ ತುಳ್ಕೋ
ಖಂಡವಿದೆಕೋ ಮಾಂಸವಿದಿಕೋ
ಬೇಕಾದ್ರೆ ಬೇಯಿಸ್ಕೋ
ಉಂಡು ತೇಗು ಕ್ಕೊಕ್ಕೋ
ತಗೋ ಯನ್ನ ಮೂಳೆ
ನಿನ್ನ ತ್ರಾಣಕ್ಕೆ ಒಳ್ಳೇದು
ಸೂಪು ಮಾಡಿ ಕುಡೀ.

ಈ ಕವಿತೆಯಲ್ಲಿ ನಾವು ಕಾಣುವುದು ವಿಜಯಶಂಕರ್ ಹೇಳಿದಂತೆ "ವ್ಯಂಗ್ಯ ತಿರಸ್ಕಾರಗಳಲ್ಲಿ ಬೆಳೆಯುವ ಸಿಟ್ಟು". ಇಲ್ಲಿ ಉಪಯೋಗಿಸಿರುವ ಅಣಕಮಾಡುವ ಶೈಲಿ ಮೊನಚು ವ್ಯಂಗ್ಯದತ್ತ ಬೊಟ್ಟು ಮಾಡಿ ತೋರಿಸುತ್ತದೆ. ತಿಳಿದೂ ಶೋಷಣೆಗೆ ಒಳಪಡುತ್ತಿರುವ ಪ್ರಕ್ರಿಯೆಯನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸಲು ಯತ್ನಿಸಿದರೂ, ಕೂಗಾಟದ ರೀತಿಯ ಅಬ್ಬರವಿರುವುದರಿಂದ ಬೀರಬಹುದಾದ ಸೂಕ್ಷ್ಮ ಪರಿಣಾಮಕ್ಕೆ ಧಕ್ಕೆಯಾದಂತೆನ್ನಿಸುತ್ತದೆ. ವಿಜಯಶಂಕರ ಇದನ್ನು "ಖಾರವಾಗಿ ತನ್ನ ಹಿಂದಿನದನ್ನು ಚುಚ್ಚುವ ಮನೋಭಾವ [ದುಂಡುಚಿ] ಕೇವಲ ಗೇಲಿ ಮಾಡುವ ಹುಡುಗಾಟದ ಖುಷಿ [ಕೂ.ಮಂ.ಭಟ್ಟರ ಕಾವ್ಯವಿಳಾಸ]" ಎನ್ನುತ್ತಾರೆ. ಇಂಥವು ಹಲವು ’ವಠಾರ’ದಲ್ಲಿ ನಮಗೆ ಕಾಣುತ್ತವೆ. ’ಅಸ್ವಸ್ಥರು’ ಕವಿತೆಯಲ್ಲೂ ವಿಡಂಬನೆಯ ಧ್ವನಿಯನ್ನು ಕಾಣಬಹುದು. ಆಷಾಢಭೂತಿತನದ ಪೊರೆ ಕಳಚುವ ಮತ್ತೊಂದು ಪ್ರಯತ್ನವೂ [ಮುಖವಾಡಗಳ ಕವಿಗೆ] ಈ ಸಂಕಲನದಲ್ಲಿದೆ.

ಮೊದಲೇ ಹೇಳಿದಂತೆ, ’ವಠಾರ’ದಲ್ಲಿ ಎಕ್ಸ್ ಪ್ಲಿಸಿಟ್ ಸಂಕೇತಗಳು ಸಾಕಷ್ಟು ಬಳಸಲ್ಪಟ್ಟಿವೆ. ’ಶ್ವಾನ ಮೀಮಾಂಸೆ’ಯಲ್ಲಿ ಈ ರೀತಿಯ ಬಹಿರಂಗ ಸಂಕೇತವನ್ನು ಉಪಯೋಗಿಸಿರುವುದನ್ನು ನಾವು ಕಾಣಬಹುದು:

...
ಕಚ್ಚುವ ನಾಯಿ
ಬೊಗಳುವ ನಾಯಿ ಹೀಗೆ
ಕೋಮು ಕಟ್ಟಲಿಲ್ಲವೇ ನೀವು
...

ಆದರೆ ಅದೇ ಕವಿತೆಯಲ್ಲಿ ಚಿರವಾಸ್ತವದ ಅಂಶವನ್ನೂ ಸೂಕ್ಷ್ಮವಾಗಿ ಸೇರಿಸುವ ಕಲೆಗಾರಿಕೆಯನ್ನೂ ತಿರುಮಲೇಶ ತೋರುತ್ತಾರೆ:

..
ಬದಲಾಗುತ್ತಿರುವೀ ಮೌಲ್ಯಗಳಲ್ಲೂ
ಕಪ್ಪು ನಾಯಿ ಬಿಳಿಯಾಗುವುದಿಲ್ಲ
ಡೊಂಕು ಬಾಲ ನೆಟ್ಟಗೆ ನಿಲ್ಲುವುದಿಲ್ಲ
ಎಂಬುದು ನಿಜವೆಂದು ಒಪ್ಪುವುದಿಲ್ಲವೇ ನೀವು
...

ಗೀತೆಯ, ಪರಂಪರೆಯ ಮುಸುಕಿನಲ್ಲಿ ಅಡಗಿ ಪಲಾಯನವಾದವನ್ನು ಪೋಷಿಸುವ ಸಂಪ್ರದಾಯಸ್ಥರನ್ನು ಸ್ವಲ್ಪ ಕಟು ಎನ್ನಿಸುವ ಭಾಷೆಯಲ್ಲಿಯೇ ತಿರುಮಲೇಶ್ ಟೀಕಿಸುತ್ತಾರೆ:

..
ಹಿಟ್ಟಿಗಿಂತ ಹೊಟ್ಟೆ ದೊಡ್ಡದು
ಹೊಟ್ಟೆಗಿಂತ ಮನುಷ್ಯ ದೊಡ್ಡದು
ಮನುಷ್ಯನಿಗಿಂತ ಆತ್ಮ ದೊಡ್ಡದು
ಆತ್ಮಕ್ಕಿಂತ ಪರಮಾತ್ಮ ದೊಡ್ಡದು
ಎಂಬ ಲೆಕ್ಕಾಚಾರದ ಹಿಂದೆ
ದೊಂಬರಾಟ ಹಾಕಿ
ಫಿಲಾಸಫಿಯ ಕೆಳಗಡೆ ಅಡಗಿ
ಲಾಜಿಕ್ಕಿನ ಸುತ್ತ ಖೊಕ್ಕೋ ಆಡಿ
ಸಿನಿಕನ ಕೆಮ್ಮು ಬೀಡಿಯ ದಮ್ಮು
ಮಿಸ್ಟಿಸಿಸಮಿನ ಮಾರ್ಫಿಯಾ ಎಂದು ಮಲಗಿ
ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ
ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ
ಎದ್ದು ಹೋರಾಡುವ ಧರ್ಮ
ಗೀತೆಯ ಮರ್ಮ - ಕೇಳದೇ ಹುಟ್ಟಿಬಂದವರು
ಬದುಕಿಗೆ ಅರ್ಥ ಕಾಣದೇ ಹೋಗುವರು
ಕರ್ಮಣ್ಯೇವಾಧಿಕಾರಸ್ತೇ
ಇಂದಿಗೆ ಸಾಕು ಗುಡ್ ನೈಟ್ ನಮಸ್ತೇ
...


’ಮಹಾಪ್ರಸ್ಥಾನ’ ಸಂಕಲನ ಬರುವ ವೇಳೆಗೆ ಒಂದು ರೀತಿಯ ಪ್ರೌಢಿಮೆ ತಿರುಮಲೇಶರ ಕಾವ್ಯದಲ್ಲಿ ಮೂಡಿಬಂದದ್ದನ್ನು ನಾವು ಕಾಣಬಹುದು. ’ವಠಾರ’ದಲ್ಲಿ ಕಂಡ ಆಂಗ್ರಿ ಯಂಗ್ ಮ್ಯಾನ್ ಈಗ ಬಹಳ ಎಚ್ಚರದಿಂದ ಮಾತನಾಡುತ್ತಾರೆ. ಸೂಕ್ಷ್ಮವಾಗಿ ಚುಚ್ಚುತ್ತಾರೆ. ’ಮಹಾಪ್ರಸ್ಥಾನ’ದ ಕವಿ ಅನಂತಮೂರ್ತಿಯವರು ಹೇಳಿದಂತೆ "ನಾವೆಲ್ಲರೂ ಅತ್ಯಂತ ಎಚ್ಚರದಿಂದ ಓದಬೇಕಾದ ಇನ್ನೊಬ್ಬ ಲೇಖಕ.. ಕಾವ್ಯದಲ್ಲಿ ನಿಜವಾದ ಹೊಸಮಾತು ಸದ್ಯಕ್ಕೆ ಆಡುತ್ತಿರುವವರು ಇವರು."

’ತಿರುವನಂತಪುರ ೭೧’ ಕವಿತೆಯಲ್ಲಿ ತಿರುಮಲೇಶರು ಮೂಡಿಸುವ ನಗರೀಕರಣದ ಏಕತಾನತೆ ಅದ್ಭುತವಾಗಿದೆ. ಕವಿತೆಯ ಪ್ರಾರಂಭದಲ್ಲೇ ನಾಯಕ ಇಳಿದುಕೊಳ್ಳುವುದಕ್ಕೆ ಒಂದು ತಾಣವನ್ನು ಹುಡುಕುತ್ತಾ ಸಾಗುತ್ತಾನೆ. ’ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ’ ಎನ್ನುವಾಗ ಎಲ್ಲೋ ಜನಾರಣ್ಯದಲ್ಲಿ ಕಳೆದು ಹೋಗುತ್ತಿರುವ ಅಭಿಪ್ರಾಯ ಮೂಡುತ್ತದೆ. ಆದರೆ ಕವಿತೆಯ ಅಂತ್ಯ ಓದುತ್ತಿದ್ದಂತೆ.. ಇದೇ ಸಾಲು ಹೊಸ ಅರ್ಥವ್ಯಾಪ್ತಿಯನ್ನೂ ಪಡೆಯುತ್ತದೆ. ಆತ ಹೆಗಲಿಗೇರಿಸಿಕೊಂಡು ಹೋದದ್ದು ಆ ನಗರದ ನೆನಪುಗಳ ಲಗ್ಗೇಜನ್ನು ಎಂಬುದು ವೇದ್ಯವಾಗುತ್ತದೆ. ಅಲ್ಲೇ ನಾಯಕ ಈ ಹಿಂದೆ ಕಂಡಿದ್ದ ಅದೇ ನಗರದ ಪುನರಾನ್ವೇಷಣೆಯೂ ನಡೆಯುತ್ತದೆ:

...
ಇಳಿದುಕೊಳ್ಳುವುದಕ್ಕೆ ರೂಮು ಅನ್ವೇಷಿಸಿದೆ
ಅನ್ವೇಷಿಸುತ್ತಾ ನಡೆದೆ, ನಡೆಯುತ್ತಾ ಅನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ.
...

ಇಲ್ಲಿ ಹುಡುಕು ಎನ್ನುವ ಪದವನ್ನು ಅವರು ಉಪಯೋಗಿಸಿಲ್ಲವೆಂಬುದು ಬದಲಿಗೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯುಳ್ಳ ’ಅನ್ವೇಷಣೆ’ ಪದವನ್ನು ಉಪಯೋಗಿಸಿರುವುದನ್ನು ಗಮನಿಸಿ. ಈ ಅನ್ವೇಷಣೆ ನಡೆಯುವ ಸಮಯದಲ್ಲೇ ಹಲವು ವಾಸ್ತವಗಳೂ ತಿಳಿದು ಬರುತ್ತವೆ. ಮೊದಲನೆಯದೆಂದರೆ, ಹಳೆಯದೆಲ್ಲವನ್ನೂ ನಗರೀಕರಣ ನುಂಗಿ ಹಳೇ ನೆನಪುಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ನಗರ ಏಕತಾನತೆಯಿಂದ ಒಡಗೂಡಿದೆ. ಈ ಏಕತಾನತೆಯನ್ನೂ ಕವಿ ಸೂಕ್ಷ್ಮವಾಗಿ ಚಿತ್ರಿಸಿರುವ ರೀತಿ ನೋಡಿ:
..
ಈ ತಿರುವ
ನಂತಪುರ, ನಂತಪುರ ನಂತಪುರನಗರ ನಂತಪುರ ನಗರ
ಧೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತದೆ
..

ಇಲ್ಲಿ ಸಾಲುಗಳನ್ನು ಕತ್ತರಿಸಿರುವ ರೀತಿ ಅತ್ಯಂತ ಕಲಾತ್ಮಕವಾದದ್ದು. ನಂತರ ’ನಂತಪುರ’ ಎಂದು ಪದೇ ಪದೇ ಹೇಳುವುದು ಒಂದು ರೀತಿಯ ಏಕತಾನತೆಯನ್ನು ತೋರಿದರೆ ಪಕ್ಕದಲ್ಲಿಯೇ ’ನಗರ ನಗರ’ ಎಂದು ಅದರ ಕಾಣರವಾದ ನಗರೀಕರಣವನ್ನೂ ಮನಕ್ಕೆ ನಾಟುವಂತೆ ಹೇಳುತ್ತಾರೆ.

’ದ್ವಾರಕೆ ಮುಳುಗಿದಾಗ’ ’ಮಹಾಪ್ರಸ್ಥಾನ’ ’ತೀರ್ಪು’ ಇತ್ಯಾದಿ ಸಮರ್ಥ ಕವಿತೆಗಳು ಈ ಸಂಕಲನದಲ್ಲಿವೆ. ಹಾಗೇ ಈ ಸಂಕಲನದ ’ಕಿಟಕಿ’ ಕವಿತೆಯೂ ಬಂಧನದಿಂದ ಮುಕ್ತವಾಗಿ ಹೊರಹೋಗುವ ಪ್ರಯತ್ನ ಹೊಸತನದ ಅನ್ವೇಷಣೆಯ ಫ್ಯಾಂಟಸಿಯಲ್ಲಿ ಸಾಗಿ ಕಡೆಗೆ ಬಂಧನದ ಸರಳುಗಳಾಗಿ ನಿಲ್ಲುವ ಕಡುವಾಸ್ತವದ ಆಂಟಿಕ್ಲೈಮಾಕ್ಸ್ ನಲ್ಲಿ ಪರ್ಯಾವಸನವಾಗುವ ಕ್ರಿಯೆಯನ್ನು ಚಿತ್ರಿಸುತ್ತದೆ.

ತಿರುಮಲೇಶರ ಮುಂದಿನ ಸಂಕಲನ ’ಮುಖಾಮುಖಿ’ ಅತ್ಯಂತ ಗಮನಾರ್ಹವಾದ ಸಂಕಲನ. ಇದು ಎಲ್ಲ ಕಾವ್ಯಪ್ರೇಮಿಗಳೂ ಗಂಭೀರವಾಗಿ ಗಮನಿಸಲೇಬೇಕಾದ ಸಂಕಲನ ಎನ್ನಿಸುತ್ತದೆ. ’ಮಹಾಪ್ರಸ್ಥಾನ’ದ ಕವಿಗೂ, ’ಮುಖಾಮುಖಿ’ಯ ಕವಿಗೂ ನಾವು ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಯನ್ನು ವಿಜಯಶಂಕರ್ ಗುರುತಿಸಿದ್ದಾರೆ - "ಮಹಾಪ್ರಸ್ಥಾನದ ನಾಯಕ ’ಅನುಭವದ ಎಲ್ಲ ಅಂಶಗಳನ್ನೂ ಒಂದೇ ಫೋಕಸ್ಸಿಗೆ ತರುವ’ ಪ್ರಯತ್ನಮಾಡಿದರೆ ’ಮುಖಾಮುಖಿ’ಯಲ್ಲಿ ಒಂದು ಅನುಭವಕ್ಕೆ ಸ್ವತಂತ್ರವಸ್ತುವಿನಂತೆ ಕೊಡಲ್ಪಟ್ಟ ಅಸ್ತಿತ್ವದ ಅನುರಣನಗಳು ಕೇಂದಾಪಗಾಮಿಯಾಗಿ ಹರಡುತ್ತದೆ."

’ಮಹಾಪ್ರಸ್ಥಾನ’ದ ನಂತರದ ಕವಿತೆಗಳಲ್ಲಿ ಆಗುವ ಪರಿಸರದ ಬದಲಾವಣೆಯೂ ಒಂದು ಗಮನಾರ್ಹ ಅಂಶ. ತಿರುಮಲೇಶರು ಬದುಕುವ ಪರಿಸರದ ಸಾರವನ್ನು ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಅಳವಡಿಸುತ್ತಾರೆ ಅನ್ನುವುದಕ್ಕೆ ’ಮುಖಾಮುಖಿ’ ಒಂದು ಉತ್ತಮ ಉದಾಹರಣೆ. ಈ ಬದಲಾವಣೆಯನ್ನು transitive ಆಗಿ ಈ ಸಂಗ್ರಹದ ಕವಿತೆಗಳಲ್ಲಿ ಕಾಣಬಹುದು.

’ಮುಖಾಮುಖಿ’ಯಲ್ಲಿ ಹೈದರಾಬಾದಿ ಸಂಸ್ಕೃತಿಯನ್ನು ಕವಿತಗಳಲ್ಲಿ ಅಳವಡಿಸಿರುವುದು, ಅದೇ ಸಂಕೇತಗಳನ್ನು ಉಪಯೋಗಿಸಿಕೊಂಡಿರುವುದು ಅವರ ಕವಿತೆಗಳಿಗೆ ವಿಶೇಷ ವೈವಿಧ್ಯತೆಯನ್ನು ನೀಡಿದೆ. ಒಂದು ಬದಲಾವಣೆಯ ಅನುಭವವನ್ನು, ಅದಕ್ಕೆ ಹೊಂದಿಕೊಳ್ಳುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಅವರು ತಮ್ಮ ಕವಿತೆಗಳಲ್ಲಿ ಅಳವಡಿಸುತ್ತಾರೆ - ’ಹೊಸಬರು’ ಕವಿತೆಯ ಕೆಲ ಸಾಲುಗಳನ್ನು ಉದಾಹರಣೆಯಾಗಿ ನೋಡಬಹುದು:


...
ಆಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ
ಇವರ ಮಧ್ಯ
ಹೇಗೆ ಉಳಿಯುವುದು ಸಾಧ್ಯ?
ಈ ಊರ
ಅನ್ನ ತಿಳಿಸಾರು, ಕಬ್ಬಿನ ಹಾಲು ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ. ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತನಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು. ಈ ಆಶ್ಚರ್ಯವೂ
ಹೋಗುವುದು. ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ. ಅದಲ್ಲದೇ ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು -
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
...


’ವಠಾರ’ ’ಮುಖವಾಡಗಳು’ಗಳ ಕವಿಗೂ ’ಮುಖಾಮುಖಿ’ ಯ ಕವಿಗೂ ಮೂಲಭೂತ ವ್ಯತ್ಯಾಸ ಕಂಡುಕೊಳ್ಳಲು ಅಲ್ಲಿನ ಕಟು ವ್ಯಂಗ್ಯ [ಗೀತಾರಹಸ್ಯ, ದುಂಡುಚಿ, ಕೇಳು ಜನಮೇಜಯನೆ ಇತ್ಯಾದಿಗಳು] ಹಾಗೂ ’ಮುಖಾಮುಖಿ’ ಯ ಸೂಕ್ಷ್ಮ ವ್ಯಂಗ್ಯ ಬದಿಬದಿಯಲ್ಲಿಟ್ಟು ನೋಡಬಹುದು. ’ಮುಖಾಮುಖಿ’ಯ ’ಇಬ್ಬರು’ ಸೂಕ್ಷ್ಮ ವ್ಯಂಗ್ಯದ ಒಂದು ಉದಾಹರಣೆ:


ಇಬ್ಬರು

ಮೊದಲು ಒಬ್ಬನೇ ಇದ್ದ. ತನ್ನ ಅಡುಗೆಯನ್ನೂ
ನಿದ್ದೆಯನ್ನೂ ತಾನೇ ಮಾಡುತ್ತಿದ್ದ. ತನ್ನ ಶರ್ಟುಗಳನ್ನು
ವಿಚಾರಗಳನ್ನೂ ತಾನೇ ಒಗೆಯುತ್ತಿದ್ದ

ಒಂದು ದಿನ ಬೇಜಾರಲ್ಲಿ ಊಟಕ್ಕೆಂದು
ಸಮೀಪದ ಹೊಟೆಲ್ಲಿಗೆ ಹೋದ. ಅಲ್ಲಿ
ಆಕೆಯ ಭೇಟಿಯಾಯಿತು

ಅಂದಿನಿಂದ ಆಕೆ ಇವನ ಅಡುಗೆಯನ್ನೂ
ಈತ ಅವಳ ನಿದ್ದೆಯನ್ನೂ ಮಾಡುವುದಕ್ಕೆ
ಮತ್ತು ಆಕೆ ಇವನ ಶರ್ಟುಗಳನ್ನೂ
ಈತ ಅವಳ ವಿಚಾರಗಳನ್ನೂ ಒಗೆಯುವುದಕ್ಕೆ

ಸುರುವಾಯಿತು.

ಇದೇ ರೀತಿಯ ಸೂಕ್ಷ್ಮ ವಿಡಂಬನೆ ’ಈ ಪೇಟೆಗೊಂದು ಒಳಚರಂಡಿ’ ನಮ್ಮ ಮೂಲ ಪ್ರವೃತ್ತಿಯನ್ನು ಶೋಧಿಸುವಂತೆ ಮಾಡುವ.. ಎಲ್ಲವನ್ನೂ ಆಲೋಚನೆಯ ಸ್ಥರದಲ್ಲೇ ಕೈಬಿಡುವ ಸಾಂಕೇತಿಕತೆಯನ್ನು ವಿಡಂಬನಾತ್ಮಕ ಧ್ವನಿಯಲ್ಲಿ ಸಫಲವಾಗಿ ಹೇಳುವ ’ಇನ್ನೂ ಬರೆಯದ’ ಮತ್ತು ’ದೊಡ್ಡ ಜನರು’ ಕವಿತೆಗಳಲ್ಲಿವೆ.

’ಅಬೀಡ್ಸಿನಲ್ಲಿ ರಸ್ತೆ ದಾಟುವುದು’ ನಿರಂತರತೆಯ ಪ್ರತೀಕವಾಗಿ ನಿಲ್ಲುವ ಕವಿತೆ. ’ಅಬೀಡ್ಸಿನಿಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು ಜೇಬಿನಲ್ಲಿ ಹಾಕಿಕೊಂಡಿರಬೇಕು’ ಎನ್ನುವ ಕವಿ ಅದರ ಅಲ್ಪಪರಿಣಾಮ ನಿರಂತರತೆಯ ಮೇಲೆ ಆದದ್ದನು ಚಿತ್ರಿಸುತ್ತಾರೆ:

..
ಅಂತೂ ದಾಟಿದ ಮೇಲೆ ಹೇಗನ್ನಿಸುತ್ತದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೇ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ..
...

’ಆರ್ಟ್ಸ್ ಕಾಲೇಜಿನ ರಸ್ತೆಯಲ್ಲಿ’ ಕವಿತೆಯಲ್ಲಿ ನಗರೀಕರಣವನ್ನು ಚಿತ್ರಿಸುತ್ತಲೇ ಅದರಲ್ಲೇ ಸೌಂದರ್ಯವನ್ನರಸುವ ಕವಿ ಹೃದಯವನ್ನು ಕಾಣಬಹುದು.

ಪರಂಪರೆಯನ್ನು ಆಗಾಗ ನೆನಪಿಗೆ ತರುವ ’ಹಳೇ ಮಾರ್ಗಗಳು’ ’ಹಳೆಗನ್ನಡದ ಆಸೆ’ ಒಂದು ರೀತಿಯ obsession ಅನ್ನು ಚಿತ್ರಿಸುವ ’ಅವರವರ ಚಾಳಿ’ಯಂತಹ ಉತ್ತಮ ಕವಿತೆಗಳೂ ’ಮುಖಾಮುಖಿ’ ಸಂಕಲನದಲ್ಲಿವೆ. ಹಾಗೇ ವಿಶೇಷ ಅರ್ಥವಂತಿಕೆಗೆ ಅನೇಕ ರೀತಿಯ ಅರ್ಥೈಸುವಿಕೆಗೆ ಒಡ್ಡಿಕೊಂಡಿರುವ ಕವಿತೆಗಳನ್ನು ಈ ಸಂಕಲನದಿಂದೀಚೆಗೆ ಕಾಣಬಹುದು. ಇದು ತಿರುಮಲೇಶರ ನಿಜವಾದ ಬೆಳವಣಿಗೆ. ಇದಕ್ಕೆ ಉದಾಹರಣೆಯಾಗಿ ’ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ’ಒಂದು ಬೂದಗುಂಬಳಕಾಯಿಯ ಮೇಲೆ ನಿಂತು’ ’ಇಲಿಗಳನ್ನು ಕೊಲ್ಲುವುದು’ ’ಚಿಟ್ಟೆಗಳನ್ನು ಹಿಡಿಯುವುದು’ ಮುಂತಾದ ಕವಿತೆಗಳನ್ನು ಹೆಸರಿಸಬಹುದು. ವಿಜಯಶಂಕರ್ ಹೇಳಿದಂತೆ "ಯಾವುದೇ ಸಂದರ್ಭವಿಲ್ಲದೇ ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದುದರಿಂದ ಕವನವನ್ನು ಹೇಗೆ ವ್ಯಾಖ್ಯಾನಿಸಲೂ ಅನುಕೂಲವಿದೆ."

ತಿರುಮಲೇಶರ ಮತ್ತೊಂದು ವಿಶೇಷತೆಯೆಂದರೆ ಅವರು ಆಗಾಗ ಮಾಡುವ ಆತ್ಮಾವಲೋಕನ. ಈ ಅನುಭವವನ್ನೂ ಅವರು ಕವಿತೆಗಳಾಗಿ ಪರಿವರ್ತಿಸುತ್ತಾರೆ. ’ಮಹಾಪ್ರಸ್ಥಾನವನ್ನು ಇನ್ನೂಮ್ಮೆ ಓದಿದಾಗ’ ಅವರ ಬದಲಾದ ದೃಷ್ಟಿಕೋನವನ್ನು ದಾಖಲಿಸುತ್ತದೆ. ’ಅವಧ’ ಸಂಕಲನದಲ್ಲಿರುವ ’ಮತ್ತೊಂದು ಮುಖಾಮುಖಿ’ ಸಹ ಇಂಥದೇ ಒಂದು ಪ್ರಯತ್ನವಾಗಿದೆ.

ಈ ಎಲ್ಲವನೂ ಮೀರಿ ಬೆಳೆದು ನಿಂತ ಅವರ ಇತ್ತೀಚಿನ ಕವನ ಸಂಗ್ರಹ ’ಅವಧ’. ನೂರ ಅರವತ್ತೈದು ಕವಿತೆಗಳ ಈ ಸಂಕಲನ ಅತ್ಯಂತ ಗಮನಾರ್ಹವಾದ ಕೃತಿ [ಅದಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಪುರಸ್ಕಾರವೂ ಪ್ರಾಪ್ತವಾಯಿತು]. ಒಂದು ಸಣ್ಣ ಅನುಭವವನ್ನೂ ದಿನನಿತ್ಯದ ಸಣ್ಣ ವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯನ್ನು ಈ ಸಂಕಲನ ಬಿಂಬಿಸುತ್ತದೆ. ’ಅವಧ’ದಲ್ಲಿ ತಿರುಮಲೇಶರ ಕವಿತೆಗಳ ಶೈಲಿಯೂ ಗಮನಾರ್ಹವಾಗಿ ಬದಲಾಗಿದೆ. ಮೂರನೇ ವಿಭಾಗದಲ್ಲಿರುವ ಕವಿತೆಗಳಂತೂ ಸಂಪೂರ್ಣ ಭಾವಗೀತೆಗಳ ಶೈಲಿಯಲ್ಲಿವೆ. ಇಲ್ಲಿನ ಕವಿತೆಗಳ ಸ್ವರೂಪವೇ ಬೇರೆ. ’ಮಹಾಪ್ರಸ್ಥಾನ’ದ ಪ್ರಸ್ತಾವನೆಯಲ್ಲಿ ಹೇಳಿದ "ಬರೆಯುವ ರೀತಿಯಿಂದ ಹೇಳುವುದಿದ್ದರೆ, ಒಂದು ಪದ್ಯದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದ ವಿಷಯವೆಂದರೆ ಆ ಪದ್ಯವೇ ಆಗಿದೆ. ಆದ್ದರಿಂದ ಪದ್ಯದ ಸ್ವರೂಪದ ಬಗ್ಗೆ ನಾನು ಕಾಳಜಿವಹಿಸುತ್ತೇನೆ." ಎಂಬ ಮಾತನ್ನು ತಿರುಮಲೇಶರು ಇಂದಿಗೂ ಪಾಲಿಸುತ್ತಾ ಬಂದಿರುವುದು ನಮಗೆ ಕಾಣುತ್ತದೆ.

"ಬದ್ಧವಾಗಿ ಬರೆಯುವುದು ಸೃಜನಶೀಲತೆಗೆ ಧಕ್ಕೆ ತರುವಂಥದು" ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿರುಮಲೇಶ್ ಹೇಳಿದ್ದಾರೆ. ಬಹುಶಃ ಅವರ ಕವಿತೆಗಳಲ್ಲಿನ ವೈವಿಧ್ಯತೆಗೂ ಇದೇ ಕಾರಣವಿರಬಹುದು. ಆದರೆ ’ಅವಧ’ ಓದಿದಾಗ ಯಾರಿಗಾದರೂ ಮಿಶ್ರಭಾವನೆಗಳು ಹುಟ್ಟುತ್ತವೆ. ಇದರಲ್ಲಿ ತಿರುಮಲೇಶ್ ಸಾಧಿಸಿರುವ ’ಉನ್ನತಿ’ ಮತ್ತು ಅದೇ ಕ್ಷಣದಲ್ಲಿ ನೆಲಕಚ್ಚಿರುವ ರೀತಿ ಹಳೆಯ ಕವಿತೆಗಳಲ್ಲಿದ್ದ consistencyಗೆ ವಿರುದ್ಧವಾಗಿವೆ. ’ಸರಕಾರದ ವಿರುದ್ಧ ನಾಯಕ’ ’ಸರಕಾರದ ಪರವಾಗಿ ನಾಯಕ’ ’ವಿಮರ್ಶಕನಾಗಿ ನಾಯಕ’ ಈ ರೀತಿಯಾದ ಕವಿತೆಗಳು ಬರೇ ಪದಗಳೊಂದಿಗೆ ಆಟ ಹಾಗೂ ಪ್ರಾಸ-ಪ್ರಯಾಸವಾಗಿದೆ. ಬದ್ಧರಾಗಿ ಬರೆಯದಿರುವುದೂ ಸೃಜನಶೀಲತೆಗೆ ಧಕ್ಕೆ ತರಲಾರದೇ ಎಂದು ಈ ಕವಿತೆಗಳನ್ನು ನೋಡಿದಾಗ ಅನ್ನಿಸಬಹುದು. ಇದೇ ಸಂಕಲನದಲ್ಲಿರುವ ’ಅವಧ’ ’ಪರಕಾಯ ಪ್ರವೇಶ’ ’ವಿಧಿ’ ’ಅಖಿಟೊಪ’ ’ತುತಂಖಮನ್’ ’ಹೈಡ್‍ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ’ ’ಸೂರ್ಯನಿಗೆ’ ಥರದ ಕವಿತೆಗಳು ಉತ್ತಮವಾಗಿವೆ ಹಾಗೂ ತಿರುಮಲೇಶರು ಏರಬಲ್ಲ ಎತ್ತರದ ದ್ಯೋತಕವಾಗಿದೆ.

’ಅವಧ’ ನಿಸ್ಸಂದೇಹವಾಗಿ ಒಂದು ಉತ್ತಮ ಕವಿತೆ. ಈ ಕವಿತೆ ಹಿಂದಿನ ’ಔಧ್’ ರಾಜಮನೆತನಕ್ಕೆ ಸಂಬಂಧಿಸಿದ ಕವಿತೆಯೆಂದು ಈಚಿನ ಸಂದರ್ಶನದಲ್ಲಿ ಸ್ವತಃ ತಿರುಮಲೇಶರೇ ವಿವರಣೆ ಕೊಟ್ಟಿದ್ದಾರೆ. ಈ ಕವಿತೆಯಲ್ಲಿ, ಚರಿತ್ರೆ ವರ್ತಮಾನಗಳನ್ನು ಬೆಸೆದು ನೋಡುವ ಪ್ರಯತ್ನವಿದೆ. ಚರಿತ್ರೆಯ ಫ್ಯಾಂಟಸಿಯ ಲೋಕದಲ್ಲಿ ವಿಹರಿಸುತ್ತಿರುವಾಗಲೇ ವರ್ತಮಾನದ ಕಟುವಾಸ್ತವಕ್ಕೆ ಕರೆತರುವ ಸೂಕ್ಷ್ಮ ತಂತ್ರ ಪ್ರಿಯವೆನ್ನಿಸುತ್ತದೆ.


...
ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು
ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು
ಬಡಾ ಇಮಾಮನೊ ಅಥವಾ ಛೋಟಾ ಇಮಾಮನೊ
ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ
..

ಎನ್ನುವಲ್ಲಿ ಗಡ್ಡಕ್ಕೆ ಬಂಗಾರಬಣ್ಣ ಇತ್ಯಾದಿಗಳು ಚರಿತ್ರೆಯ ಪ್ರತೀಕವಾದಂತೆ, ಅರಬನಿಗೆ ಹೆಣ್ಣುಕೊಡುವ ಈಗಿನ ಕ್ಷೀಣಿಸಿದ ವಸ್ತು ಸ್ಥಿತಿಯನ್ನು ಚಿತ್ರಿಸಿದ ಸಾಫಲ್ಯತೆ ಈ ಕವಿತೆಗಿದೆ. ಹಾಗೇ

..
ಬಚ್ಚದಿರು ಮನವೆ ಕುದುರೆಗಳ ಖುರಪುಟವಕೇಳಿ
ಅದು ಕೇವಲ ಒಣಧೂಳೆಬ್ಬಿಸುವ ಬಿರುಗಾಳಿ
...

ಈ ಸಾಲುಗಳು ವಿಶೇಷ ಪರಿಣಾಮ ಬೀರುತ್ತವೆ.

’ಪರಕಾಯ ಪ್ರವೇಶ’ ಕವಿತೆಯಲ್ಲಿ ಸೂಕ್ಷ್ಮ ವಿಡಂಬನೆಯನ್ನು ಬಳಸಿ, ಬೇರೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ನಾವು ಗಮನಿಸಬಹುದು. ಅತೀ ನೈಜತೆಯ, ಅನಿವಾರ್ಯತೆಯ, ಸಂಕೋಚದ ಪ್ರವರ್ತನೆ ಸಹ ಪ್ರಶಂಸೆಗೆ ಒಳಗಾಗುವ ವಿರೋಧಾಭಾಸ. ಫ್ಯಾಂಟಸಿಯನ್ನೇ ಒಂದು ಘಟ್ಟದಲ್ಲಿ ನಿಜವೆಂದು ನಂಬುವ ಕ್ರಿಯೆ. ಮುಖವಾಡ, ವಾಸ್ತವಗಳ ನಡುವೆ ದೊಡ್ಡ ಸಮರ ನಡೆಯುತ್ತಿದೆಯೆಂದು ಭಾವಿಸಿ ಕುಳಿತಾಗ, ತಾನೇತಾನಾಗಿ, ಏನೂ ಆಗಿಲ್ಲವೆಂಬಂತೆ ಪ್ರವರ್ತಿಸಿವ ಮಿಕ್ಕ ಜನ. ಈ ಎಲ್ಲದರ ಚಿತ್ರಣವನ್ನೂ ಕವಿತೆ ಏಕಕಾಲಕ್ಕೆ ನೀಡುತ್ತದೆ.

’ಮಹಾಪ್ರಸ್ಥಾನ’ದಲ್ಲಿ ನೀಡಿದ ನಗರೀಕರಣದ ಕವಿತೆಗಳಿಂದ ತಿರುಮಲೇಶ್ ಸಂಪೂರ್ಣವಾಗಿ ಹೊರಬಂದಿಲ್ಲ ಎನ್ನುವುದಕ್ಕೆ ’ರಾಜಮಾರ್ಗ ಒಳಮಾರ್ಗ’ ’ತಾರನಾಕದ ಚೌಕ’ ’ಗೋಮತಿಯ ತೀರದಲ್ಲಿ’ ’ಒಂದು ಗ್ರಾಮದ ಮುಖಗಳು’ ಕವಿತೆಗಳೇ ಸಾಕ್ಷಿ.

’ಗೋಮತಿಯ ತೀರದಲ್ಲಿ’ ಕವಿತೆಯು ನಿಸರ್ಗವೆಂದು ಸಾಮಾನ್ಯವಾಗಿ ಚಿತ್ರಿಸುವ ಯಾವ ಅಂಶಗಳೂ ಗೊಮತಿಯ ಕಡಲಲ್ಲಿ ಇಲ್ಲ - ಅಲ್ಲಿರುವುದು ಕಹಿಸತ್ಯಗಳೇ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ. ಆದರೂ ಕವಿ ಆ ಸತ್ಯಗಳಿಂದ ಪಲಾಯನ ಮಾಡಲು ತಯಾರಿಲ್ಲ.
...
ಬಿಟ್ಟರೆ ಇದನ್ನೂ ಪಡೆಯಲಾರದವರಂತೆ
ಪಡೆದರೂ ಬಯಸದವರಂತೆ ಸಕಲ ಬಯಕೆಗಳನ್ನೂ
ಮೀರಿದ ಇಚ್ಛಾಮರಣಿಗಳಂತೆ ಇಲ್ಲಿ ಇಂದು
..

ಎಂಬ ಸಾಲುಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಚಿತ್ರಿತವಾಗಿದೆ ಎನ್ನಿಸುತ್ತದೆ. ಸಕಲ ಬಯಕೆಗಳನ್ನೂ ಮೀರಿ, ಇಚ್ಛಾಮರಣಿಯಾದರೂ ಸಾಯಲು [ಪಲಾಯನ ಮಾಡಲು] ತಯಾರಿಲ್ಲದ, ಅದಕ್ಕೂ ಒಂದು ಪಕ್ವಕಾಲ ಬರಬೇಕೆಂಬ ಪ್ರಜ್ಞೆ ಇಲ್ಲಿ ಕವಿಯನ್ನು ಕಾಡುತ್ತಿರುವಂತೆ ಅನ್ನಿಸುತ್ತದೆ.

’ತಾರನಾಕದ ಚೌಕದಲ್ಲಿ’ ಕವಿತೆಯಲ್ಲೂ ಇದೇ ರೀತಿಯ ನಗರೀಕರಣದ ಸೂಕ್ಷ್ಮ ಚಿತ್ರಣವಿದೆ.
..
ಇಲ್ಲಿ ಹಾಡು ಹಗಲೇ ಇರುಳು
ತಾರೆಗಳ ಬದಲು ಮಿಣುಕುವ
ಕ್ಷೀಣಕಾಂತಿಯ ಬಲ್ಬುಗಳು
ಎಣಿಸುವುದಕ್ಕೆ ಸುಲಭ
..

ಎಂಬಂಥ ಅರ್ಥಗರ್ಭಿತ ಸಾಲುಗಳಿವೆ.

ಇಕಾಲಜಿಯ ಬಗೆಗಿನ ಕಾಳಜಿಯೂ ತಿರುಮಲೇಶರ ಅನೇಕ ಕವಿತೆಗಳಲ್ಲಿ ಕಂಡುಬರುತ್ತದೆ. ’ಒಂದು ಗ್ರಾಮದ ಮುಖಗಳು’ ಕವಿತೆಯಲ್ಲಿ ನಾಶವಾಗುತ್ತಿರುವ ಇಕಾಲಜಿಯ ಸಮತೋಲನದ ಬಗ್ಗೆ ಕಾಳಜಿ ಇದೆ.
...
ಕಾರಡ್ಕ ಮುಳ್ಳೇರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ
...
ಎಂಬ ಕವಿತೆಯ ಪ್ರಾರಂಭದ ಸಾಲುಗಳು ಮನುಷ್ಯ ಈ ಭೂಮಿಯ ತರುಣಾವಸ್ಥೆಯಲ್ಲಿ ಕಾಲಿಟ್ಟವನು ಎಷ್ಟು ಅಲ್ಪಾವಧಿಯಲ್ಲಿ ಅದರ ಇಕಾಲಜಿಯ ಸಮತೋಲನದ ಅವನತಿಗೆ ಕಾರಣನಾದ ಎನ್ನುವುದು [ಒಂದು ವರುಷಕ್ಕಷ್ಟೇ ಒಂದು ಶೆಕೆ] ಮುಂದಿನ ಸಾಲುಗಳಲ್ಲಿ ವ್ಯಕ್ತವಾಗುವುದು. ಗ್ರಾಮದ ಕೆಲ ಚಿತ್ರಗಳನ್ನು ನೀಡಿ, ನಿರೀಕ್ಷೆ ಹುಟ್ಟಿಸಿ, ಕಡೆಗೆ ನಗರೀಕರಣದ ಆಗಮನದ ಚಿತ್ರಣ ಕೊಟ್ಟು ಸಂಪೂರ್ಣ ಅವನತಿಯನ್ನು ಸಂಕೇತಿಸುವ ಸಾಲುಗಳನ್ನು ಅವರು ಬರೆದುಬಿಡುತ್ತಾರೆ
...
ಬರಲಿಲ್ಲ ಗಾಡಿ, ಬಂತು ಕೊರೆಯುವ ಮಾಗಿ
ಕಾದಿದ್ದಂತೆ ಎಲ್ಲವೂ ಸಂದಿಯಲಡಗಿ
ಬಂತು ಮನೆ ಮನೆ ಸೂರುಗಳಿಂದ ಇಬ್ಬನಿ ತೂಗಿ
ಒಂದು ಮೈ ನಡುಕದಿಂದ ಇನ್ನೊಂದಕ್ಕೆ ಸಾಗಿ
ಮುಟ್ಟಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತ್ತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ
..

ಈ ನಗರೀಕರಣದ ಕಾಳಜಿಯನ್ನಿರಿಸಿ ಅದನ್ನೇ ಮುಂದುವರೆಸಿ ಬರೆಯುತ್ತಿರುವ ತಿರುಮಲೇಶ್ ಸಾಕಷ್ಟು ವಿಭಿನ್ನವಾಗಿಯೂ ಬರೆಯುತ್ತಾರೆ. ಹಲವಾರು ಕವಿತೆಗಳು ಬೇರೆ ರೀತಿಯ ಮಿಶ್ರಪರಿಣಾಮವನ್ನುಂಟು ಮಾಡುತ್ತವೆ. ’ಫಿಲ್‍ನ ವಿಧಾನ’ ಒಂದು ರೀತಿಯ ಬೆಳವಣಿಗೆಯನ್ನು ಸೂಚಿಸಿದರೆ ’ಪಿಶಾಚಿ ದೈವಕ್ಕೆ ಹೇಳಿದ್ದು’ ’ಪಿಶಾಚಿಗೆ ದೈವದ ಉತ್ತರ’ ’ಮರಿ ಪಿಶಾಚಿ ಪದ್ಯ’ ಬೇರೊಂದು ರೀತಿಯ ಬೆಳವಣಿಗೆಯನ್ನು ಸೂಚಿಸುತ್ತವೆ.

ತಿರುಮಲೇಶರ ಸಂಕಲನದ ಬಗ್ಗೆ ಸ್ಥೂಲವಾಗಿ ಹೇಳಲು ನನಗಿಂತ ಅವರೇ ಸಮರ್ಥರು. ಅವರ ’ನನ್ನ ಸಂಕಲನ’ ಕವಿತೆ ಇಂತಿದೆ:

ನನ್ನ ಸಂಕಲನವೆಂದರೆ ನದಿ
ಅದರ ಕವಿತೆಗಳೆಂದರೆ ಉಪನದಿಗಳು
ಅವು ಎಲ್ಲಿಂದಲೂ ಯಾವ ಮೂಲದಿಂದಲೂ
ಹುಟ್ಟಿ ಬಂದಿವೆ - ಎಷ್ಟೋ ನೆಲದಲ್ಲಿ
ಎಷ್ಟೋ ಹೊಲದಲ್ಲಿ ಹರಿದು ಬಂದಿವೆ

ನನ್ನ ಸಂಕಲನವೆಂದರೆ ವೃಕ್ಷ
ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು
ಅವು ವಿವಿಧ ದಿಕ್ಕಿನಲ್ಲಿ ಬೆಳೆದಿವೆ
ಎಷ್ಟೋ ಎಲೆಗಳನು ಹೂ ಹಣ್ಣುಗಳನು ಬಿಟ್ಟಿವೆ
ಅಲ್ಲಿ ಎಷ್ಟೋ ಹಕ್ಕಿಗಳು ಕುಳಿತಿವೆ

ನನ್ನ ಸಂಕಲನವೆಂದರೆ ಅರಣ್ಯ
ಅದರ ಕವಿತೆಗಳೆಂದರೆ ಮರಗಿಡ ಬಳ್ಳಿಗಳು
ಅವು ಬೇರೆ ಬೇರೆ ಜಾತಿಯವು
ಸಿಕ್ಕಂತೆ ಬೆಳೆದಿವೆ ಬೆಳಕಿನ ಕಡೆಗೆ
ಮೈ ಚಾಚಿವೆ ನೆರಳನ್ನು ಚೆಲ್ಲಿವೆ.

ನನ್ನ ಸಂಕಲನವೆಂದರೆ ಸಂತೆ
ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು
ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು
ಮಣಿಸರದ ಮಾಲಗಳು ಬಿದ್ದರೆ ಒಡೆಯುತ್ತವೆ.
ಅಲ್ಲಿಯ ತನಕ ಬದುಕಿಕೊಳ್ಳುತ್ತವೆ.

ಒಟ್ಟಿನಲ್ಲಿ ನೋಡುವುದಾದರೆ ಪರಿಸರಕ್ಕೆ ಪ್ರತಿಸ್ಪಂದಿಸುವುದು ತಿರುಮಲೇಶರ ವೈಶಿಷ್ಟ್ಯ. ಹೊಸ ಪರಿಸರವನ್ನು ನಿರಂತರವಾಗಿ ಅನ್ವೇಷಿಸುತ್ತಾ, ಅವುಗಳ ಬಗೆಗೆ ಬರೆಯುತ್ತಾ, ಮುಂದುವರೆದಿರುವ ತಿರುಮಲೇಶರ ಮೂಲ ಪರಿಸರದಲ್ಲೇ ಇದೆಯೆನ್ನಿಸುತ್ತದೆ. ಅವರು ಹೈದರಾಬಾದಿನಲ್ಲಿದ್ದರೆ ಅಲ್ಲಿಯ ಪರಿಸರದ ರೀತಿನೀತಿಗಳ ಸಾರವನ್ನು ಅಭ್ಯಾಸ ಮಾಡಿಬರೆದ ಕವಿತೆಗಳು ಮೂಡುತ್ತವೆ. ಇಂಗ್ಲೆಂಡಿಗೆ ಹೋದರೆ ’ಥೇಮ್ಸ್ ನದಿಯ ಮೇಲೆ’ ಬರೆಯುತ್ತಾರೆ. ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ಕವಿತೆಗಳ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ. ಈ ರೀತಿಯ ಪ್ರತಿಸ್ಪಂದನ ಇಲ್ಲದಿದ್ದಲ್ಲಿ ’ಜಾನ್ ಮೆಕೆನ್ರೋ’ ’ತುತಂಖಮನ್’ ’ಕಿಂಗ್‍ಸ್ಲಿಯ ಗಾಂಧಿ’ ’ಮೂನ್ ಮೂನ್ ಸೇನಳಿಗೆ’ ’ಅತುಲತ್ ಮುದಲಿ’ಯಂತಹ ಕವಿತೆಗಳನ್ನು ಅವರಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ರೀತಿಯ ವಿಷಯ ವೈವಿಧ್ಯಗಳ ಹಿನ್ನೆಲೆಯಲ್ಲಿ ಬಂದ ಕವಿತೆಗಳನ್ನು ಓದಿದರೆ ಒಮ್ಮೊಮ್ಮೆ ಅರ್ಥವಾಗದೇ ಉಳಿದೀತು. ಏಕೆಂದರೆ ಒಂದು ಪರಿಸರ, ಹಿನ್ನೆಲೆ, ಉಪಯೋಗಿಸಿಕೊಂಡಾಗ ತಿರುಮಲೇಶ್ ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿ, ಅಷ್ಟೇ ಜ್ಞಾನವ್ಯಾಪ್ತಿಯ ಓದುಗನನ್ನೂ ಕಲ್ಪಿಸಿಕೊಂಡು ಬರೆಯುತ್ತಾರೆ. ಈಚೆಗೆ ಬರೆದ ಅವರ ಕವಿತೆಗಳನ್ನು ಅರ್ಥೈಸಲು ಕಠಿಣವಾಗಿದೆ ಎನ್ನುವ ವಿಮರ್ಶೆಗೆ ಇದೂ ಕಾರಣವಾಗಿರಬಹುದು. ತಿರುಮಲೇಶರಿಗೂ ಅದರ ಅರಿವಿದೆ. ’ಕವಿತೆಗಳನ್ನು ತಿಳಿದುಕೊಳ್ಳುವುದಕ್ಕೆ ಓದುಗ ಬೇರೆ ಸಲಕರಣೆಗಳನ್ನು ಬಳಸಿಕೊಂಡರೆ ತಪ್ಪೇನೂ ಇಲ್ಲ’ ಎನ್ನುವ ಅವರು ಆ ವಿಷಯವ್ಯಾಪ್ತಿಯನ್ನು ಓದುಗರೂ ಅಷ್ಟೇ ಆಳವಾಗಿ ಗ್ರಹಿಸಬೇಕೆಂದು ನಿರೀಕ್ಷಿಸುತ್ತಾರೆ.

ಈ ರೀತಿಯ ಸಂಶೋಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂಬ ಮಾತು ನಿಜವೇ. ಆದರೆ ಕವಿತೆ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದಂತೆ ಅದು ದಕ್ಕುವುದು ಕೈಬೆರಳೆಣಿಕೆಯಷ್ಟೇ ಜನರಿಗೆ ಸೀಮಿತವಾದರೆ ಸ್ವಲ್ಪ ಚಡಪಡಿಕೆಯಾಗುತ್ತದೆ. ಇಲ್ಲಿ ಕವಿ ಸಂಕೀರ್ಣತೆಗೂ ವಿಷಯವ್ಯಾಪ್ತಿಗೂ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ. ಕವಿತೆಗೆ ಪ್ರತಿಸ್ಪಂದನ ಬರದಿದ್ದಾಗ ಅದು ಎಷ್ಟರ ಮಟ್ಟಿಗೆ ಸಫಲವಾಯಿತೆಂಬುದು ಒಂದು ಪ್ರಶ್ನಾರ್ಥಕ ಚಿನ್ಹೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅವನತಿ ಹೊಂದುತ್ತಿರುವ ನಮ್ಮ ಹಳೇ ನೆನಪುಗಳನ್ನು ರೋಚಕ ಅನುಭವಗಳಿಗೆ ಆಗುತ್ತಿರುವ ಯಾಂತ್ರಿಕತೆಯನ್ನು ಚಿತ್ರಿಸುವ ’ಎಲ್ಲಿ ಹೋದಳು ನಮ್ಮ ಅಡುಗೂಲಜ್ಜಿ’ಯಂತಹ ಕವಿತೆಗಳು ಬಾಲವಿಹಾದರಲ್ಲಿರಬೇಕಾದ ಕವಿಗೆಗಳೆನ್ನಿಸಿದರೂ ಅಶ್ಚರ್ಯವಿಲ್ಲ.

’ಅವಧ’ ಸಂಕಲನ ಓದಿದಾಗ ಒಮ್ಮೊಮ್ಮೆ ತಿರುಮಲೇಶರು ಎಟುಕದಷ್ಟು ಬೆಳೆದುಬಿಟ್ಟಿದ್ದಾರೆಯೆ ಎಂದು ಅನ್ನಿಸಬಹುದು. ಅವಧ, ಮುಖಾಮುಖಿಯ ಕೆಲವು ಕವಿತೆಗಳು ತುಂಬಾ ಪ್ರಿಯವಾಗಲು ನಾನು ಹೈದರಾಬಾದಿನಲ್ಲಿ ಕಳೆದ ಅನೇಕ ವರ್ಷಗಳು ಕಾರಣವಿರಬಹುದು. ಅವರ ’ಮಾಯಾವಿ’ ’ಹೈದರ್‌ಗೂಡಾದಲ್ಲೊಬ್ಬ ಹೈದ’ ’ಜಲಾಲುದ್ದೀನ್ ಜಲಾಲಿ’ ’ಅಖ್ತರ್ ಹುಸೇನ್’ ಕವಿತೆಗಳು ಈ ಕಾರಣವಾಗಿ ಪ್ರಿಯವಾಗುತ್ತವೆ. ಸೃಜನಶೀಲತೆಗೆ ಹೊಸತನ ಬೇಕೆಂಬ ಮಾತು ನಿಜ. ಆದರೆ ಎಷ್ಟರ ಮಟ್ಟಿಗೆ ನಾವು ಹೊಸಪರಿಸರವನ್ನು ಕವಿತೆಗೆ ಅಳವಡಿಸುತ್ತೇವೆ, ಎಲ್ಲಿಯವರೆಗೆ ಓದುಗರನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ.

ಆದರೆ ಎಂದಿಗೂ ಜಡವಾಗದ, ನಿರಂತರವಾಗಿ ಬರೆಯುವ, ಸದಾ ಹೊಸತನದ ಶೋಧದಲ್ಲಿರುವ ತಿರುಮಲೇಶರ ಬಗ್ಗೆ ಯಾರೂ ಎಂದೂ ನಿರಾಶರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಈ ನಿರಂತರ ಕೃಷಿ, ಆತ್ಮಾವಲೋಕನ ಹಾಗೂ ಭಾಷಾಸಾಧ್ಯತೆಗಳ ಬಗೆಗಿನ ಪ್ರಯೋಗ ಏನಾದರೊಂದು ಹೊಸತನ್ನು ಅವರಿಂದ ಹೊಮ್ಮಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ.

ಡಿಸೆಂಬರ್ ೧೯೮೭


ಶ್ರೀರಾಮ್ ಎಂ.ಎಸ್ (1988). ತಿರುಮಲೇಶರ ಸೃಷ್ಟಿ, ಹೊಸತನದ ದೃಷ್ಟಿ. ಬುದ್ದಣ್ಣ ಹಿಂಗಮಿರೆ (ಸಂ.) ಸಾಹಿತ್ಯ ವಿಮರ್ಶೆ 1987. ಬೆಂಗಳೂರು. ಕರ್ನಾಟಕ ಸಾಹಿತ್ಯ ಅಕಾಡೆಮಿ. ಪುಟ-171-187.



Wednesday, June 3, 2009

ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್

ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.

ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು... ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.

ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ನಡೆಸುವ ಹಿರಿಯ ಶಾನಭಾಗರ ಪುಸ್ತಕಜ್ಞಾನ ಅದ್ಭುತವಾದದ್ದು. ಅಲ್ಲಿಗೆ ಹೋದರೆ ಎರಡು ಪುಸ್ತಕಗಳನ್ನು ನೀವು ಆಯ್ದರೆ, ನಿಮ್ಮ ಅಭಿರುಚಿಯನ್ನು ಗ್ರಹಿಸಿ, ಅದಕ್ಕೆ ನಾಲ್ಕು ಪುಸ್ತಕಗಳನ್ನು ಜೋಡಿಸುವ, ಅಕಸ್ಮಾತ್ ನಿಮಗೆ ಯಾವುದೇ ಪುಸ್ತಕ ದೊರೆಯದಿದ್ದರೆ ಆ ವಿವರಗಳನ್ನು ಸಂಗ್ರಹಿಸಿ, ನಿಮಗಾಗಿ ಆ ಪುಸ್ತಕವನ್ನು ತರಿಸುವುದಲ್ಲದೇ ಆ ಬಗ್ಗೆ ನಿಮಗೆ ಸುದ್ದಿಯನ್ನೂ ಕೊಡುವ ಪರಿಪಾಠ ಹಿರಿಯ ಶಾನಭಾಗರಿಗಿತ್ತು. ಬಹುಶಃ ಪದ್ಮಶ್ರೀ ಪಡೆದ ಏಕೈಕ ಪುಸ್ತಕ ವ್ಯಾಪಾರಿ ಆತ ಇರಬಹುದು. 

ಇತ್ತೀಚೆಗೆ ಸ್ಟ್ರಾಂಡ್‍ನಲ್ಲಿದ್ದ ಹಿರಿಯ ಶಾನಭಾಗರ ವೈಶಿಷ್ಟ್ಯತೆ ನಮಗೆ ಸಿಗುತ್ತಿಲ್ಲ ಅನ್ನಿಸುತ್ತದೆ. ಏನೇ ಆದರೂ ಮುಂಬಯಿನ ಸ್ಟ್ರಾಂಡಿನಲ್ಲಿ ವ್ಯಾಪಾರವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆ ನಮಗೆ ಕಾಣಿಸುತ್ತಿತ್ತು. ಹೀಗಾಗಿಯೇ ಪುಸ್ತಕ ಜ್ಞಾನದ ಜೊತೆಗೆ ಹಿರಿಯ ಶಾನಭಾಗರದ್ದು ಒಪ್ಪ ಓರಣ. ನಮ್ಮ ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನ ಎಂದು ಹೇಳಬಹುದು. ನೀವು ಯಾವುದಾದರೂ ಪುಸ್ತಕ ಕೇಳಿದರೆ ತಕ್ಷಣಕ್ಕೆ ತರಿಸುತ್ತಾರೆ, ಆದರೆ ಅದು ಬಂದಿದೆ ಎಂದು ಫೋನ್ ಮಾಡುವ ಪರಿಪಾಠ ಆತನಿಗಿದ್ದಂತಿರಲಿಲ್ಲ. ಮುಂದಿನ ಬಾರಿ ಹೋದಾಗ ಆ ಪುಸ್ತಕ ನಿಮಗೆ ದೊರೆತರೆ ಅದು ನಿಮ್ಮ ಅದೃಷ್ಟ.

ಪ್ರೀಮಿಯರ್ ನಲ್ಲಿ ಮೂರ್ನಾಲ್ಕು ಪದರದ ಪುಸ್ತಕಗಳ ರಾಶಿಯ ಷೆಲ್ಫುಗಳ ನಡುವೆ ತೆಳುವಾಗಿ ಅಡ್ಡಡ್ಡವಾಗಿ ನಡೆದುಕೊಂಡು ಹೋಗಬೇಕಾದಂತಹ ಪುಟ್ಟ ಜಾಗ - ಮೊಣಕೈ ತಾಕಿದರೆ ಒಂದು ರಾಶಿ ಪುಸ್ತಕಗಳು ದೊಪ್ಪೆಂದು ಕೆಳಕ್ಕೆ ಬೀಳುವ ಗ್ಯಾರೆಂಟಿ, ಆದರೆ ಕೇಳಿದ ಪುಸ್ತಕವನ್ನು ಯಾವುದೋ ಕಂಡರಿಯದ ಮೂಲೆಯಿಂದ ಹೆಕ್ಕಿ ಕೊಡಬಲ್ಲ ವಿಶಿಷ್ಟ ಕಲೆಯನ್ನು ಶಾನಭಾಗ್ ಮತ್ತು ಅವರ ಸಹಾಯಕರು ಕರವಶಮಾಡಿಕೊಂಡಿದ್ದರು. "ಓ ಅಲ್ಲಿ ಉಂಟು ನೋಡು, ಆಕ್ಸ್ ಫರ್ಡ್‍ನಿಂದ ಬಂದ ಹೈದರಾಬಾದಿನ ಪುಸ್ತಕ" ಎಂದು ಆತ ಹೇಳಿದ್ದೇ, ಜಾದೂವಿನಂತೆ ನಮಗೆ ಬೇಕಾದ ಪುಸ್ತಕ ಪ್ರತ್ಯಕ್ಷವಾಗುತ್ತಿತ್ತು. ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಪುಸ್ತಕದ ರಾಶಿಯಿರುವ ಮೇಜಿನ ಹಿಂದೆ ಕಂಡೂ ಕಾಣದಂತೆ ಶಾನಭಾಗ್ ಕೂತಿರುತ್ತಿದ್ದರು. ಎಲ್ಲಿಂದಲೋ ಬಿಲ್ ಪುಸ್ತಕವನ್ನು ಹೆಕ್ಕಿ ತಮ್ಮ ಕಾಗೆಬರಹದಲ್ಲಿ ಗೀಚಿ ನಿಮ್ಮ ಕೈಗೆ ಒಂದು ಹಳದಿ ಚೀಟಿಯನ್ನು ಹಚ್ಚುತ್ತಿದ್ದರು. ಅದರಲ್ಲಿ ಪುಸ್ತಕದ ಹೆಸರು ಯಾವುದು ರಿಯಾಯಿತಿ ಯಾವುದಕ್ಕೆ - ದೇವರೇ ಬಲ್ಲ. ನಾನು ಮೊದಲ ಬಾರಿಗೆ ಹೋದಾಗಿನಿಂದಲೂ ಬಿಲ್ಲಿನ ಬಣ್ಣ ಮತ್ತು ಶಾನಭಾಗರ ಕೈಬರಹ ಒಂದಿನಿತೂ ಬದಲಾಗಿರಲಿಲ್ಲ.

ಹಾಗೆ ನೋಡಿದರೆ ಶಾನಭಾಗರ ಬಗ್ಗೆ ನನಗೆ ಹೆಚ್ಚೇನೂ ಗೊತ್ತೇ ಇಲ್ಲ. ಹೆಚ್ಚು ಮಾತೇ ಆಡದ ಆತನ ಜೊತೆ ಬಲವಂತವಾಗಿ ನಾಲ್ಕಾರು ಮಾತಾಡಿದರೂ ಅವರು ಸಂಭಾಷಣೆಯನ್ನು ತಾವಾಗಿಯೇ ಎಂದೂ ಮುಂದುವರೆಸುತ್ತಿರಲಿಲ್ಲ. ಆದರೆ ಅವರ ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಮಾರಿಸಿದ ಹೆಮ್ಮೆ ನನಗಿದೆ ಎಂದು ನಾನು ಎದೆ ತಟ್ಟಿ ಹೇಳಿಕೊಳ್ಳಬೇಕು... ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ ಪುಸ್ತಕವನ್ನು ನಾವು ಗೆಳೆಯರು ಪ್ರಕಟಿಸಿದಾಗ ಅದರ ಹತ್ತು ಪ್ರತಿಗಳನ್ನೂ ನನ್ನ ಮಾಯಾದರ್ಪಣದ ಐದು ಪ್ರತಿಗಳನ್ನೂ ಶಾನಭಾಗ್ ತಮ್ಮ ಅಂಗಡಿಯಲ್ಲಿ ಮಾರಿದ್ದರು! ಅದನ್ನು ಇಂಗ್ಲೀಷ್ ಪುಸ್ತಕಗಳ ರಾಶಿಯ ನಡುವೆ ಅಡಕವಾಗಿಟ್ಟರೂ, ಯಾರೋ ಅದನ್ನು ಕೊಂಡಿದ್ದರು ಎನ್ನುವುದು ನನಗೆ ಹೆಮ್ಮೆಯ ವಿಷಯವಾಗಿತ್ತು.

ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನರಾಗಿದ್ದರು. ಅವರಿಗೆ ವ್ಯಾಪಾರದಿಂದ ದುಡ್ಡು ಮಾಡಬೇಕು ಅನ್ನುವ ಇರಾದೆಗಿಂತ, ಪುಸ್ತಕಗಳ ನಡುವೆ ಕೂತು, ಮನೆಗಾಗುವಷ್ಟು ಹಣ ಸಂಪಾದಿಸಿದರೆ ಸಾಕು ಅನ್ನುವ ಮನಸ್ಥಿತಿ ಇದ್ದಂತಿತ್ತು. ಹೀಗಾಗಿ, ಅವರ ಖರ್ಚಿಗೆ ಬೇಕಾದಷ್ಟು ಹಣವನ್ನು ಅವರು ತೆಗೆದುಕೊಂಡು, ಮಿಕ್ಕ ಲಾಭವನ್ನೆಲ್ಲಾ, ಪುಸ್ತಕದಂಗಡಿಯಲ್ಲಿ ಹೆಚ್ಚು ಪುಸ್ತಕಗಳನ್ನು ಸೇರಿಸಿಡುವುದರಲ್ಲಿ ತೊಡಗಿಸುತ್ತಿದ್ದರು ಅಂತ ನನಗನ್ನಿಸುತ್ತದೆ. ಅವರ ಹಿರಿಯ ಸ್ಟ್ರಾಂಡ್ ಶಾನಭಾಗರಿಂದ ಅವರು ಕಲಿಯದಿದ್ದ ಮತ್ತೊಂದು ಪಾಠವೆಂದರೆ "ಸೇಲ್"ಗಳನ್ನು ಏರ್ಪಾಡು ಮಾಡುವುದು.

ನಾನು ಕಂಡಿರುವ ಇತರ ಪುಸ್ತಕವ್ಯಾಪಾರಿಗಳಲ್ಲಿರುವ ತೀವ್ರತೆಯನ್ನು ನಾನು ಶಾನಭಾಗರಲ್ಲಿ ಕಂಡೇ ಇಲ್ಲ. ಎಲ್ಲವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುವ ಬುದ್ಧನಂತೆ ಯಾವಾಗಲೂ ಹಸನ್ಮುಖಿಯಾಗಿ ಮೌನವಾಗಿ ಆತ ಕೂತಿರುತ್ತಿದ್ದರು. 

ದೆಹಲಿಯ ಕನಾಟ್ ಪ್ಲೇಸಿನಲ್ಲಿರುವ ಬುಕ್ ವರ್ಮ್ ಪುಸ್ತಕದಂಗಡಿಯ ಮಾಲೀಕ ನೀವು ಕೇಳಿದ ಪುಸ್ತಕವನ್ನು ಎತ್ತಿ ಕೊಡುವುದಲ್ಲದೇ ಇಲ್ಲದಿರಬಹುದಾದ ಪುಸ್ತಕಗಳನ್ನು ತರಿಸಿಕೊಡುವುದರಲ್ಲಿ ನಿಷ್ಣಾತ. ಜೊತೆಗೇ, ಕೆಲವು ಹಳೆಯ ಪುಸ್ತಕಗಳನ್ನು ನೀವು ಕೇಳಿದರೆ "ಓ ಅದಾ, ೧೯೮೩ರ ಪುಸ್ತಕ, ಅದ್ಭುತವಾದದ್ದು. ನಾನು ಓದಿದ್ದೇನೆ, ಈಗ ಔಟ್ ಆಫ್ ಪ್ರಿಂಟ್, ನನ್ನ ಮನೆಯಲ್ಲಿ ಒಂದು ಕಾಪಿಯಿದೆ, ನಿಮಗೆ ಸಿಗುವುದಿಲ್ಲ" ಎಂದು ಹೇಳಿ ಹೊಟ್ಟೆಉರಿಯುಂಟು ಮಾಡಬಹುದಾದ ನಿಷ್ಣಾತ. 

ಖಾನ್ ಮಾರ್ಕೆಟ್ಟಿನಲ್ಲಿರುವ ಬಾಹರಿ ಸನ್ಸ್ ನಿಮ್ಮನ್ನು ಬೇಕಾದ ಹಾಗೆ ಓಡಾಡಲು ಬಿಟ್ಟು ನಿಮ್ಮ ಪ್ರಶ್ನೆಗಳಿಗೆ ಯೋಚಿಸಿ, ಫೋನು ಫಿರಾಯಿಸಿ ಜವಾಬು ಕೊಡುವ ಚಾಣಾಕ್ಷ. 

ಬೆಂಗಳೂರಿನ ಶಂಕರ್‍ ಪುಸ್ತಕಗಳನ್ನು ಓರಣವಾಗಿಟ್ಟು ಕೇಳಿದ್ದನ್ನು ಮಾತ್ರ ತೆಗೆದುಕೊಡುವ, ಎಷ್ಟುಬೇಕೋ ಅಷ್ಟು ಮಾತನಾಡುವ ಮಿತಭಾಷಿ. 

ಚೆನ್ನೈ-ಬೆಂಗಳೂರುಗಳ ಲ್ಯಾಂಡ್‍ಮಾರ್ಕ್ ಅಂಗಡಿಗಳು ರಾಶಿರಾಶಿ ಪುಸ್ತಕಗಳನ್ನು ಪೇರಿಸಿರುವ, ಆದರೆ ಆ ಪುಸ್ತಕಗಳ ಮೌಲ್ಯವೇನೆಂದು ತಿಳಿಯದ ಅನಾಮಿಕ ಸೇಲ್ಸ್ ಮನ್‍ಗಳ ಮೂಲಕ ನಡೆಯುತ್ತಿರುವ ಮಳಿಗೆಗಳು. 

ಕ್ರಾಸ್‍ವರ್ಡ್ ಅಂಗಡಿಗಳು ವ್ಯಾಪಾರೀ ಮನೋಭಾವದ ಉತ್ತುಂಗ ತೋರುವ ಮಳಿಗೆ-ಮಾಲೆ, ಹೀಗಾಗಿ ಅಲ್ಲಿ ಅನೇಕ ಬೆಸ್ಸ್ಟ್ ಸೆಲ್ಲರುಗಳು [ಫಿಕ್ಷನ್, ನಾನ್ ಫಿಕ್ಷನ್, ಮಕ್ಕಳ ಪುಸ್ತಕಗಳು, ಸೆಲ್ಫ್ ಹೆಲ್ಪ್.. ಇತ್ಯಾದಿ ಯಾದಿಗಳ ಜಾಗ] - ಜೊತೆಗೆ ಬಹಳಕಾಲದ ವರೆಗೂ ’ಆರ್.ಶ್ರೀರಾಮ್ ರೆಕಮಂಡ್ಸ್’ ಅನ್ನುವ ಮಳಿಗೆಯ ಮುಖ್ಯಾಧಿಕಾರಿಯ ಶಿಫಾರಸ್ಸಿನ ಅಂಟುಚೀಟಿ ಹೊತ್ತ ಕೆಲವು ಪುಸ್ತಕಗಳು. ಈ ಆರ್.ಶ್ರೀರಾಮ್ ಅನ್ನುವ ಮಹಾತ್ಮನ ಶಿಫಾರಸ್ಸಿನ ಹಮ್ಮು ವ್ಯಾಪಾರೀಕರಣದ ಉತ್ತುಂಗ ಅಂತ ನನಗನ್ನಿಸಿತ್ತು. ಅವರ ಶಿಫಾರಸ್ಸಿನ ಪುಸ್ತಕಗಳ ಯಾದಿ ನೋಡಿದರೆ ಅವರಿಗೊಂದು ವ್ಯಕ್ತಿತ್ವ ಮತ್ತು ಸ್ವಂತ ಅಭಿಪ್ರಾಯವಿದೆ ಅನ್ನುವ ಭಾವನೆಯೇ ನಮಗೆ ಬರುತ್ತಿರಲಿಲ್ಲ.

ಇನ್ನು ಸೆಲೆಕ್ಟ್ ಬುಕ್ ಷಾಪಿನ ಮೂರ್ತಿಯಂತೂ ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಬೇಕೆನ್ನುವ, ಅವರೊಂದಿಗೆ ಚರ್ಚಿಸಿ ಅವರ ಅಭಿರುಚಿಗನುಸಾರ ನಿಧಾನವಾಗಿ ಒಳಗಿನಿಂದ ಸುಪ್ತ ಖಜಾನೆಯನ್ನು ತೆಗೆದುಕೊಡುವಂತ ಹಂತ ಹಂತವಾಗಿ ಗ್ರಾಹಕರನ್ನು ಕೈವಶ ಮಾಡಿಕೊಳ್ಳುವ ಗಾರುಡಿಗ. ಮೂರ್ತಿಯವರು ಎಷ್ಟು ಬಾರಿ ತಮ್ಮ ಮೇಜಿನ ಕೆಳಕ್ಕೆ ಕೈ ಹಾಕಿ ಜಾದೂವಿನಂತೆ ನನಗೆ ಬೇಕಾದ ಪುಸ್ತಕವನ್ನು ನನ್ನ ಮುಂದೆ ತುಂಟತನದಿಂದ ಹಿಡಿದಿದ್ದಾರೋ ಲೆಕ್ಕವಿಲ್ಲ.

ಹೈದರಾಬಾದಿನ ವಾಲ್ಡೆನ್ ನಲ್ಲಿ ಪರಿಚಾರಕರು ಹೆಚ್ಚಿಲ್ಲ. ಆದರೂ ಆ ಅಂಗಡಿಗೆ ಅದರದೇ ವ್ಯಕ್ತಿತ್ವವಿದೆ. ಹೀಗಾಗಿ ಅಲ್ಲಿ ಅಡ್ಡಾಡುವುದೂ ಒಂದು ಖುಷಿಯ ವಿಷಯವೇ. ರಾತ್ರೆ ಎಂಟಕ್ಕೆ ಮುಂದಿನ ಬಾಗಿಲನ್ನು ಮುಚ್ಚಿ ಐದು ನಿಮಿಷಕ್ಕೊಮ್ಮೆ ಒಂದಷ್ಟು ದೀಪಗಳನ್ನು ಆರಿಸಿ ಸಂಜೆಯ ಗ್ರಾಹಕರನ್ನು ಹೊರಹಾಕುವ ವಾಲ್ಡೆನ್ ನ ಪರಿ ಅದ್ಭುತವಾದದ್ದು. 

ಅಬೀಡ್ಸಿನಲ್ಲಿನ ಎ.ಎ.ಹುಸೇನ್ ಹಳೆಯ ಕಾಲದ ಎಲ್ಲ ಪುಸ್ತಕಗಳನ್ನೂ ಗಾಜಿನ ಕಪಾಟಿನಲ್ಲಿಟ್ಟು ಮಾರಾಟ ಮಾಡುವ ಜಾಗರೂಕತೆ ತೋರುತ್ತಿದ್ದರೂ ಹೈದರಾಬಾದ್ ಸಂಬಂಧಿತ ಪುಸ್ತಕಗಳಿಗೆ ಒಂದು ಅದ್ಭುತ ಜಾಗ. 

ಅದೇ ಊರಿನ ಓರಿಯಂಟ್ ಲಾಂಗ್ಮನ್ ನಡೆಸುವ ಬುಕ್ ಪಾಯಿಂಟ್ ಕೂಡಾ ಸ್ವ-ಸಹಾಯ ಮಾಡಿಕೊಳ್ಳುವವರಿಗೆ ಒಂದು ಖಜಾನೆಯೇ. ಹಾಗೂ ಭಾನುವಾರಗಳಂದು ಅಬೀಡ್ಸ್ ಮತ್ತು ನಾಂಪಲ್ಲಿರಸ್ತೆಯ ಗುಂಟ ಹಬ್ಬಿಹರಡಿರುವ ಹಳೆಯ ಪುಸ್ತಕಗಳಲ್ಲಿ ಕೆಲ ಅಪರೂಪದ ಪುಸ್ತಕಗಳನ್ನು ನಾನು ಹೆಕ್ಕಿ ತಂದಿದ್ದೇನೆ. ೮೦ರ ದಶಕದಲ್ಲಿ ನಾನು ಹೈದರಾಬಾದಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಅಬೀಡ್ಸಿನಲ್ಲಿ ಪುಸ್ತಕ ವ್ಯಾಪಾರ, ಇರಾಣಿ ಚಹಾ ಮತ್ತು ಸಂತೋಷ್/ಸಪ್ನಾ ಚಿತ್ರಮಂದಿರಗಳಲ್ಲಿ ಸಿನೇಮಾದ ಪರಿಪಾಠವಿತ್ತು.

ವಾಷಿಂಗ್ಟನ್ನಿನಲ್ಲಿ ನಾನು ಕ್ರೇಮರ್ ಬುಕ್ಸ್ ಆಂಡ್ ಆಫ್ಟರ್ ವರ್ಡ್ಸ್ ಅನ್ನುವ ಅಂಗಡಿಗೆ ಭೇಟಿ ನೀಡಿದ್ದೆ. ಅಂಗಡಿಯಲ್ಲಿ ಪುಸ್ತಕಗಳನ್ನು ತೆಗೆದು ಓದಬಹುದು. ಪುಸ್ತಕದಂಗಡಿಯಲ್ಲೇ ಒಂದು ಕಾಫಿ, ತಿಂಡಿ, ಬಿಯರು ಸಿಗುವ ಜಾಗವಿದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡುತ್ತಾ ಪುಸ್ತಕ ತಿರುವಿಹಾಕುತ್ತಾ ಒಂದು ಬಿಯರನ್ನೂ ಹೀರಬಹುದು. ನನ್ನಬಳಿ ವಿಪರೀತ ದುಡ್ಡು ಬಂದು ಮಾಡಲೇನೂ ತೋಚದಿದ್ದರೆ, ಇಂಥದೊಂದು ಅಂಗಡಿಯನ್ನು ತೆರೆಯಬೇಕು ಅನ್ನುವುದು ನನ್ನ ಆಸೆ. 

ಈ ಎಲ್ಲ ಪುಸ್ತಕದಂಗಡಿಗಳೂ, ಕಲಕತ್ತಾದ ಆಕ್ಸ್ ಫರ್ಡ್ ಬುಕ್ ಸ್ಟೋರು, ಮದರಾಸಿನ ಫೌಂಟನ್‍ಹೆಡ್ ಎಲ್ಲವನ್ನೂ ಅವಲೋಕಿಸಿದರೂ ಪ್ರೀಮಿಯರ್ ಬುಕ್ ಷಾಪಿನ ಆತ್ಮೀಯತೆ ಮತ್ತು ವೈಶಿಷ್ಟ್ಯತೆ ನನಗೆ ಎಲ್ಲೂ ಕಂಡಿಲ್ಲ. ಮಿಕ್ಕ ಪುಸ್ತಕದಂಗಡಿಯವರಂತೆ ಶಾನಭಾಗರು ಎಂದೂ ತಮ್ಮ ಜ್ಞಾನವನ್ನು ಪದರ್ಶಿಸಿದವರಲ್ಲ. ಎಷ್ಟೋ ಬಾರಿ ನಾನು ಪುಸ್ತಕಗಳ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಿದೆ. "ಚೆನ್ನಾಗಿ ಮಾರಾಟವಾಗುತ್ತಿದೆ" ಅನ್ನುವ ಮಾತನ್ನು ಹೇಳುತ್ತಿದ್ದರೇ ವಿನಃ ತಮ್ಮ ಅಭಿಪ್ರಾಯವನ್ನು ಎಂದೂ ನೀಡಿದವರಲ್ಲ. ಆದರೆ ಮಿಕ್ಕ ಪುಸ್ತಕ ವ್ಯಾಪಾರಿಗಳಿಗೆ ಹೀಗೆ ಮುಫತ್ತಿನ ರೆಕಮಂಡೇಷನ್ ಕೊಡುವ ತೆವಲು ಇದ್ದೇ ಇರುತ್ತದೆ. ಶಾನಭಾಗರಿಗೆ ತಮ್ಮ ವ್ಯಾಪಾರವನ್ನು ಬೆಳೆಸಬೇಕೆಂಬ ಆಕಾಂಕ್ಷೆಯೂ ಇರಲಿಲ್ಲ. ಮಿಕ್ಕ ಪುಸ್ತಕದಂಗಡಿಗಳು ಬೆಳೆಯುತ್ತಾ ಹೋದರೂ ಅವರು ತಮ್ಮ ಮೂಲೆಯಲ್ಲೇ ಅವಿತು ಕೂತಿದ್ದರು. ಕಡೆಗೆ ಶಾನಭಾಗರಿಗೆ ಅಂಗಡಿ ಮುಚ್ಚುವುದರಲ್ಲೂ ದುಃಖ ಆದಂತಿಲ್ಲ. ತಾವು ತಮ್ಮ ಕೆಲಸ ಮುಗಿಸಿ ಮುಂದುವರೆಯುತ್ತಿರುವಂತೆ ಸ್ಥಿತಪ್ರಜ್ಞರಾಗಿ ಅವರು ತಮ್ಮ ಟ್ರೇಡ್ ಮಾರ್ಕ್ ಕಿರುನಗೆಯನ್ನು ಬೀರಿ ಸುಮ್ಮನಾಗುವರು. ಪ್ರೀಮಿಯರ್ ಮುಚ್ಚಿಹೋಗುತ್ತಿರುವುದಕ್ಕೆ ಅವರಿಗಿಂತ ಹೆಚ್ಚಿನ ದುಃಖ ಅವರ ಗ್ರಾಹಕರಿಗಾಗುತ್ತಿರಬಹುದು. ಸಾಮಾನ್ಯವಾಗಿ ವ್ಯಾಪಾರಗಳು ಕೈ ದಾಟುತ್ತವೆ, ಕ್ಷೀಣಿಸುತ್ತವೆ, ಏಟುತಿನ್ನುತ್ತವೆ, ಬೆಳೆಯುತ್ತವೆ. ಆದರೆ ಮೊದಲ ಬಾರಿಗೆ ಒಂದು ಪುಸ್ತಕದಂಗಡಿ ರಿಟೈರಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕ್ರಿಕೆಟ್ಟಿನಲ್ಲಿ ಹೇಳುವಂತೆ, ಶಾನಭಾಗ್ ವೈ [ಯಾಕೆ?] ಎನ್ನುವ ಪ್ರಶ್ನೆ ಕೇಳುತ್ತಿರುವಾಗಲೇ ರಿಟೈರಾಗಿ ವೈನಾಟ್ [ಯಾಕಾಗಬಾರದು] ಅನ್ನುವ ಪ್ರಶ್ನೆಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ. 

ಕಳೆದ ವಾರ ಶಾನಭಾಗರನ್ನು ಭೇಟಿ ಮಾಡಲೆಂದು ಪ್ರೀಮಿಯರ್ ಗೆ ಹೋದೆ, ಆತ ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಹೋಗಿದ್ದಾರೆ, ಈ ವಾರ ಇಲ್ಲ ಎಂದು ಅಂಗಡಿಯಿಂದ ತಿಳಿಯಿತು. ಮತ್ತೆ ಬೆಂಗಳೂರಿಗೆ ಬರುವ ವೇಳೆಗೆ ಶಾನಭಾಗ್ ಅಂತರ್ಧಾನರಾಗಿರುತ್ತಾರೆ. ಹೀಗೆ ಇಪ್ಪತ್ತೈದು ವರ್ಷಗಳ ಪರಿಚಯದ ಶಾನಭಾಗ ಒಂದು ಫೋನ್ ನಂಬರು, ವಿಳಾಸ, ಯಾವುದೂ ಇಲ್ಲದೇ ನನ್ನ ಸಂಪರ್ಕದಿಂದ ಕೈಜಾರುತ್ತಿದ್ದಾರೆ. ಅವರು ತಮ್ಮ ಮಕ್ಕಳ ಜೊತೆಗೆ ಆಸ್ಟ್ರೇಲಿಯಾದಲ್ಲಿ ಶೇಷಜೀವನವನ್ನು ಕಳೆಯುತ್ತಾರಂತೆ. ಅವರ ಅಂಗಡಿಯ ಪುಸ್ತಕದ ರಾಶಿಯನಡುವೆ ಕಾಣೆಯಾಗಿಯೇ ಇದ್ದ ಶಾನಭಾಗ ಮತ್ತು ಪ್ರೀಮಿಯರ್ ಬೆಂಗಳೂರಿನ ಚರಿತ್ರೆಯ ಒಂದು ಭಾಗವಾಗಿ ಕಾಣೆಯಾಗುತ್ತಿದ್ದಾರೆ. ಗುಡ್ ಬೈ ಶಾನಭಾಗ್. ಟೇಕ್ ಕೇರ್.



Monday, May 11, 2009

ಸೊರಗಿದ ಪ್ರೀಮಿಯರ್....

ಅಹಮದಾಬಾದಿನಲ್ಲಿ ನನಗೆ ಸಿಗದಿರುವ ಹಾಗೂ ತಹತಹಿಸುವ ಅಂಶ ಒಂದು ಒಳ್ಳೆಯ ಪುಸ್ತಕದಂಗಡಿ ಇಲ್ಲದ್ದು. ಬೆಂಗಳೂರಿನಿಂದ ಬಂದಿರುವ ನನಗೆ ಎಂ.ಜಿ ರಸ್ತೆಯ ಆಸುಪಾಸಿನಲ್ಲಿರುವ ಹೊಸ-ಹಳೆಯ ಪುಸ್ತಕಗಳನ್ನು ಮಾರುವ ಅದ್ಭುತ ಪುಸ್ತಕದಂಗಡಿಗಳು, ಮೆಜೆಸ್ಟಿಕ್ಕಿನಲ್ಲಿ ಸಪ್ನಾ, ಕನ್ನಡಪುಸ್ತಕಗಳಿಗೆ ಸಾಹಿತ್ಯ ಭಂಡಾರ, ಗಾಂಧಿಬಜಾರಿನ ಅಂಕಿತಾ ಹಾಗೂ ರೆಸಿಡೆಂನ್ಷಿಯಲ್ ಪ್ರದೇಶಗಳಲ್ಲೂ ಇರುವ ಜಯನಗರದ ನಾಗಶ್ರೀ, ಪ್ರಿಸಂ ಎಲ್ಲವನ್ನೂ ಪರಿಗಣಿಸಿದಾಗ ಅಹಮದಾಬಾದಿನ ಬಗ್ಗೆ ಅಸಮಾಧಾನವಾಗುವುದು ಸಹಜವೇ. ಮೊದಲಬಾರಿಗೆ ನಾನು ವಿದ್ಯಾರ್ಥಿಯಾಗಿ ಗುಜರಾತ್ ಪ್ರವೇಶಮಾಡಿದಾಗ ಪುಟ್ಟ ನಗರವಾದ ಆಣಂದದ ಸ್ಟೇಷನ್ ರೋಡಿನಲ್ಲಿ ನಡೆದಾಡುತ್ತಾ "ಬುಕ್ಸ್" ಎಂದು ಸ್ವಾಗತಿಸುತ್ತಿದ್ದ ದೊಡ್ಡ ಫಲಕವನ್ನು ನೋಡಿ ವಿಚಿತ್ರ ಪುಳಕದಿಂದ ಅದರ ಸಮೀಪಕ್ಕೆ ಹೋದರೆ ನನಗೆ ಕಂಡದ್ದು ಕೆಂಪು ಬಣ್ಣದ "ಚೋಪಡಿ" ಎಂದು ಕರವ ಲೆಕ್ಕಪತ್ರದ ಲೆಡ್ಜರುಗಳು. ಈ ಚೋಪಡಿಗಳಲ್ಲಿ ಕಾಣುವುದು ಯಾವ ಆಯಕರ ಆಫೀಸರನೂ ಅರ್ಥೈಸಲು ಸಾಧ್ಯವಾಗದಂತಹ ಮೋಡಿ ಅಕ್ಷರಗಳ ಮಾಯಾಲೋಕ.

ಕೆಲವರ್ಷಗಳ ಕೆಳಗೆ ಅಹಮದಾಬಾದಿನಲ್ಲಿ ನ್ಯೂ ಆರ್ಡರ್ ಬುಕ್ ಕಂಪನಿ ಅನ್ನುವ ಹಳೆಯ ಪುಸ್ತಕಗಳನ್ನು ಮಾರಾಟ ಮಾಡುವ ಮಳಿಗೆಯಿತ್ತು. ಆದರೆ ನಮ್ಮ ಕೆ.ಕೆ.ಎಸ್.ಮೂರ್ತಿ ನಡೆಸುವ ಸೆಲೆಕ್ಟ್ ಬುಕ್ ಷಾಪಿನಷ್ಟು ಉತ್ತಮ ಎಂದು ನನಗನ್ನಿಸಿರಲಿಲ್ಲ. ಆ ಅಂಗಡಿ ತುಸು ಹೆಚ್ಚೇ ಒಪ್ಪ ಓರಣವಾಗಿತ್ತು ಹಾಗೂ ಅಲ್ಲಿನ ಬೆಲೆಗಳೂ ಹೆಚ್ಚಾಗಿದ್ದವು. ಪುಸ್ತಕಗಳನ್ನು ಮುಚ್ಚಿದ ಕಪಾಟಿನಲ್ಲಿ ಇಟ್ಟಿದ್ದರಿಂದ ತಿರುವಿಹಾಕಲೂ ಕಷ್ಟವಾಗುತ್ತಿತ್ತು. ಈ ಪ್ರವರ್ತನೆ ಗುಜರಾತಿನಲ್ಲಿ ಪುಸ್ತಕದಂಗಡಿಗೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ಮಳಿಗೆಗಳಿಗೆ ಹೋದಾಗಲೂ ಅಂಗಡಿಯ ಪರಿಚಾರಕರು ನಿಮ್ಮ ಬೆನ್ನ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡುತ್ತಾರೆ. 
ಇರಲಿ. ಈಗ ಈ ನ್ಯೂ ಆರ್ಡರ್ ಬುಕ್ ಕಂಪನಿಯೂ ಮುಚ್ಚಿದೆ. ಹೊಸಪುಸ್ತಕಗಳಿಗೆ ನಮಗಿರುವುದು ಗ್ರಂಥಾಘರ್, ನಟರಾಜ್ [ಪಾನ್ ಅಂಗಡಿಯಂತೆ ಇದು ಪುಟ್ಟ ಪೆಟ್ಟಿಗೆಯಂಗಡಿಯಾದರೂ, ನಿಮ್ಮ ಮನಸ್ಸಿನಲ್ಲಿ ಒಂದು ಪುಸ್ತಕದ ಶಿರೋನಾಮೆಯಿದ್ದರೆ, ಆತ ಆ ಪುಸ್ತಕವನ್ನು ತರಿಸಿಕೊಡುತ್ತಾನೆ] ಕಿತಾಬ್ ಮಹಲ್ ಮತ್ತು ಎಲ್ಲಕ್ಕಿಂತ ಮಿಗಿಲಾದ ಕ್ರಾಸ್‍ವರ್ಡ್. ಅಹಮದಾಬಾದಿನ ಕ್ರಾಸ್‍ವರ್ಡ್ ಬೆಂಗಳೂರಿನ ಕ್ರಾಸ್‍ವರ್ಡ್‍ಗಿಂತ ತುಂಬಾ ಭಿನ್ನವೆನ್ನಬೇಕು. ಅಹಮದಾಬಾದಿನ ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳಿಗಿಂತ ಆಟಿಕೆಗಳು, ಡಿವಿಡಿ, ಸಂಗೀತ ಮತ್ತು ಕಾಗದ-ಪ್ಯಾಡು-ಪೆನ್ನುಗಳಂಥವು ಹೆಚ್ಚಾಗಿ ಸಿಗುತ್ತವೆ! ಇಲ್ಲೂ ಪರಿಚಾರಕರು ನಿಮ್ಮನ್ನು ಹಿಂಬಾಲಿಸುತ್ತಾರೆ - ಬಹಳ ದಿನಗಳ ವರೆಗೆ ಸಿ.ಡಿಗಳನ್ನು ನೀವು ಒಯ್ಯುವಂತಿರಲಿಲ್ಲ - ಅದನ್ನು ಪರಿಚಾರಿಕರಿಗೆ ಮುಟ್ಟಿಸಿದರೆ, ಹಣ ಕೊಡುವಾಗ ನೀವು ಅದನ್ನು ಪಡೆಯಬಹುದಿತ್ತು - ಈಗ ಈ ಪರಿಪಾಠ ಉತ್ತಮಗೊಂಡಿದೆ.  ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳನ್ನು ತಿರುವಿಹಾಕುವ ಅವಕಾಶವಿದೆ, ಹೀಗಾಗಿ ಈ ಜಾಗದಲ್ಲಿ ಜನಜಂಗುಳಿ ಹೆಚ್ಚು. ಹಣ ಕಟ್ಟುವ ಜಾಗಕ್ಕೆ ಒಂದು ಪುಟ್ಟ ಕ್ಯೂ ಇರುವುದೂ ಸಾಮಾನ್ಯ. ಇಷ್ಟೆಲ್ಲಾ ಇದ್ದರೂ, ನಾನು ಎಂದಾದರೂ ಇಕ್ಕಟ್ಟಿನ ಪ್ರೀಮಿಯರ್ ಬುಕ್ ಷಾಪಿನಲ್ಲಿ ಅಹಮದಾಬಾದಿನ ಕ್ರಾಸ್‍ವರ್ಡ್‍ಗಿಂತ ಹೆಚ್ಚು ಸಮಯವನ್ನು ಕಳೆಯಲು ತಯಾರಿರುತ್ತೇನೆ. ಅಹಮದಾಬಾದಿನ ಏರ್ಪೋರ್ಟ್ ಪುಸ್ತಕದಂಗಡಿಯಲ್ಲಿ ಕ್ರಾಸ್‍ವರ್ಡ್‌ಗಿಂತ ಕಡಿಮೆ ಪುಸ್ತಕಗಳಿದ್ದಾಗ್ಯೂ ಅದೇ ವಾಸಿ ಅಂತ ನನಗೆ ಅನೇಕ ಬಾರಿ ಅನ್ನಿಸಿರುವುದುಂಟು. ಈಗ ಹೊಸ ಟರ್ಮಿನಲ್‍ನಲ್ಲಿ ಶಂಕರ್ಸ್ ಬಂದಿದೆ.

ಪರಿಸ್ಥಿತಿ ಹೀಗಿರುವಾಗ, ನಾನು ಅಹಮದಾಬಾದಿನಿಂದ ಹೊರಕ್ಕೆ ಹೊರಟಾಗಲೆಲ್ಲಾ, ಮುಖ್ಯವಾಗಿ ಬೆಂಗಳೂರಿಗೆ ಬಂದಾಗ 
ಪುಸ್ತಕದಂಗಡಿಯನ್ನು ಹುಡುಕುವುದು ಸಹಜವೇ ಆಗಿತ್ತು. ಸೆಲೆಕ್ಟ್ ಮತ್ತು ಪ್ರೀಮಿಯರ್ ಬುಕ್ ಷಾಪಿನ ಜೊತೆಗಿನ ನನ್ನ ಸಖ್ಯ ನನ್ನ ಕಾಲೇಜಿನ ದಿನಗಳಿಂದಲೂ ಇದ್ದೇ ಇದೆ. ಒಂದಾನೊಂದು ಕಾಲದಲ್ಲಿ ಪ್ರತಿ ಶನಿವಾರ ನಾನು ಬ್ರಿಗೇಡ್ ರೋಡಿಗೆ ಹೋಗಿ ಪಕ್ಕದ ಓಕನ್ ಕ್ಯಾಸ್ಕ್ ಅನ್ನುವ ಪಬ್ಬಿನ ಹ್ಯಾಪಿ ಅವರಿನಲ್ಲಿ ಒಂದಿಷ್ಟು ಬಿಯರು ಹೀರಿ - ಅಲ್ಲಿಂದ ಸೆಲೆಕ್ಟ್ ಬುಕ್ ಷಾಪಿಗೆ ಹೋಗುತ್ತಿದ್ದ ಪರಿಪಾಠವಿತ್ತು. ಸ್ವಲ್ಪ ಹೊತ್ತು ಪುಸ್ತಕಗಳನ್ನು ಹುಡುಕುವುದು, ಹಾಗೂ ಬಿಯರಿನ ವಾಸನೆ ಕಡಿಮೆಯಾಗುವವರೆಗೂ ಮೂರ್ತಿಯ ಜೊತೆ ಹರಟೆ ಕೊಚ್ಚುವುದೂ - ಹಾಗೂ ಮನೆಗೆ ಹೋಗಲು ಧೈರ್ಯ ಬರುವವರೆಗೂ ಆ ಪ್ರಾಂತದಲ್ಲೇ ಅಡ್ಡಾಡುವುದೂ ವಾಡಿಕೆಯಾಗಿತ್ತು!!  ಹೀಗೆ ಹಲವು ಶನಿವಾರಗಳನ್ನು ಸೆಲೆಕ್ಟ್ ನಲ್ಲಿ ಕಳೆದು ಅಲ್ಲಿನ ಮೂಲೆ ಮೂಲೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದು ಆ ದಿನಗಳು ನನಗೆ ಸಫಲತೆಯನ್ನು ತಂದ ದಿನಗಳಾಗಿದ್ದುವು. ಆಗಿನ ದಿನಗಳಲ್ಲಿ ಮಿಕ್ಕ ಪುಸ್ತಕದಂಗಡಿಗಳಲ್ಲೂ - ಹಿಗ್ಗಿನ್‍ಬಾಥಮ್ಸ್, ಎಲ್.ವಿ, ಪ್ಲಾಜಾ ಥಿಯೇಟರಿನ ಅಡಿಯಲ್ಲಿ ಅಡಗಿ ಕುಳಿತಿದ್ದ ಬುಕ್ ಸೆಲ್ಲರ್, ಮತ್ತು ಗಂಗಾರಾಮ್ಸ್ - ನಾನು ಹಾಜರಿ ಹಾಕುತ್ತಿದ್ದೆನಾದರೂ, ಈಚೀಚೆಗೆ ಮತ್ರ ನಾನು ಬೆಂಗಳೂರಿಗೆ ಬಂದಾಗ ಸಮಯದ ಅಭಾವದಿಂದಾಗಿ ನನ್ನ ಹಾಜರಿಯಲ್ಲಿ ತುಸು ಮತಲಬಿತನವೂ ಇರುತ್ತಿತ್ತು.

ನನಗಿದ್ದ ಮೂರು ನಾಲ್ಕು ಘಂಟೆಗಳ ಸಮಯದಲ್ಲಿ ನಾನು ಪ್ರೀಮಿಯರ್‌ನ ಒಂದು ಸುತ್ತು ಹಾಕಿ, ಸೆಲೆಕ್ಟಿಗೆ ಹೋಗಿ ಮೂರ್ತಿಯ ಜೊತೆ ತುಸು ಹರಟೆ, ಒಂದು ಕಾಫಿ ಆಗುವಷ್ಟರಲ್ಲಿ ನನ್ನ ಸಮಯ ಮುಗಿದಿರುತ್ತಿತ್ತು. ಹಿಂದಿನ ದಿನಗಳಲ್ಲಿ ಗಂಗಾರಾಮ್ಸ್ ಕೂಡ ಅದ್ಭುತ ಪುಸ್ತಕದಂಗಡಿಯಾಗಿತ್ತಾದರೂ, ಕಪಾಲೀ ಥಿಯೇಟರಿನ ಪಕ್ಕದ ಅವರ ಕಟ್ಟಡ ಕುಸಿದದ್ದೇ ಗಂಗಾರಾಮ್ಸ್ ಉತ್ತುಂಗವೂ ಕುಸಿಯಿತು ಅನ್ನಿಸುತ್ತದೆ. ಹಿಗ್ಗಿನ್‍ಬಾಥಮ್ಸ್ ಮತ್ತು ಎಲ್.ವಿ ಎಂದಿಗೂ ಅಷ್ಟಕಷ್ಟೇ.

ಪ್ರೀಮಿಯರ್ ಮತ್ತು ಸೆಲೆಕ್ಟನ್ನು ಮಾತ್ರ ಭೇಟಿಮಾಡುತ್ತಾ ನಾನು ಆ ಪ್ರಾಂತದಲ್ಲಿ ಹುಟ್ಟಿದ್ದ ಹೊಸ ಪುಸ್ತಕದಂಗಡಿಗಳನ್ನು ನೋಡಿಯೇ ಇರಲಿಲ್ಲ. ಚರ್ಚ್ ಸ್ಟ್ರೀಟ್‌ನಲ್ಲಿ ಹುಟ್ಟಿಕೊಂಡ ಇಂಗ್ಲೀಷ್ ಎಡಿಷನ್, ಮತ್ತು ಬ್ಲಾಸಮ್ಸ್, ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿ ಹುಟ್ಟಿದ್ದ ಬುಕ್‍ವರ್ಮ್ ರೆಸಿಡೆನ್ಸಿ ರಸ್ತೆಯಲ್ಲಿನ ಕ್ರಾಸ್‍ವರ್ಡ್ ಅಂಗಡಿಗಳನ್ನು ನಾನು ನೋಡಿಯೇ ಇರಲಿಲ್ಲ. ಈ ಬಾರಿ ನಾನು ಪ್ರೀಮಿಯರ್‌ಗೆ ಹೋದಾಗ ಏನೋ ಎಡವಟ್ಟಾದಂತೆ ಕಂಡಿತು. ಸಾಮಾನ್ಯವಾಗಿ ಪ್ರೀಮಿಯರ್‍ ಗೆ ಹೋಗುವುದೆಂದರೆ ನಾನು ದಪ್ಪವಾಗಿದ್ದೇನೋ ಇಲ್ಲವೋ ಎನ್ನುವುದರ ಚೆಕಿಂಗೂ ಆಗುತ್ತಿತ್ತು. ಪ್ರೀಮಿಯರ್ ನ ಸಂದಿಗಳಲ್ಲಿ ಯಾವ ಪುಸ್ತಕದ ರಾಶಿಯೂ ಬೀಳದಂತೆ ಅಡ್ಡಾಡಲು ಸಾಧ್ಯವಾದರೆ ನಾನು ಫಿಟ್ಟಾಗಿದ್ದೇನೆ ಅನ್ನುವುದು ಸಾಮಾನ್ಯವಾದ ನಂಬಿಕೆ. [ಒಂದೆರಡು ಮೊಟ್ಟೆಗಳನ್ನು ಮುರಿಯದೇ ಆಮ್ಲೆಟ್ಟನ್ನು ಮಾಡಲಾಗುವುದಿಲ್ಲ ಅನ್ನುವಂತೆಯೇ, ಒಂದೆರಡು ರಾಶಿ ಪುಸ್ತಕಗಳನ್ನು ಕೆಡವದೇ ಪ್ರೀಮಿಯರ್ ನಲ್ಲಿ ಒಂದು ಉತ್ತಮ ಪುಸ್ತಕವನ್ನು ಹೆಕ್ಕುವುದೂ ಸಾಧ್ಯವಿರಲಿಲ್ಲ]. ಆದರೆ ಇದ್ದಕ್ಕಿದ್ದ ಹಾಗೆ ಪ್ರೀಮಿಯರ್ ನನ್ನ ಬೊಜ್ಜಿಗೆ ಅವಕಾಶ ಮಾಡಿಕೊಟ್ಟು ತಾನೇ ಸೊರಗಿನಿಂತಂತಿತ್ತು.

ಹಿಂದೆ ಒಮ್ಮೆ ನಾನು ನಮ್ಮ ಪ್ರೀಮಿಯರ್ ಶಾನಭಾಗರನ್ನು ತಾವು ಮುಂಬಯಿನ ಸ್ಟ್ರಾಂಡ್ ಶಾನಭಾಗರ ಸಂಬಂಧದವರೇ ಎಂದು ಕೇಳಿದ್ದೆ. ಆಗ ಆತ, "ಹೌದು ಅವರು ನನ್ನ ಅಂಕಲ್, ನಾನು ಅವರಲ್ಲಿಯೇ ಪುಸ್ತಕ ವ್ಯಾಪಾರವನ್ನು ಕಲಿತೆ" ಎಂದಿದ್ದರು. ಆ ತರಬೇತಿ ಪೂರ್ಣವಾಗಿರಲಿಲ್ಲವೇನೋ. ಯಾಕೆಂದರೆ, ಪ್ರೀಮಿಯರ್ ಶಾನಭಾಗರು ಅಂಗಡಿಯಲ್ಲಿ ಪುಸ್ತಕಗಳನ್ನು ಜೋಡಿಸಿಡುವುದನ್ನು ತಮ್ಮ ಪ್ರಖ್ಯಾತ ಅಂಕಲ್‍ನಿಂದ ಕಲಿತಿರಲಿಲ್ಲ ಅನ್ನಿಸುತ್ತದೆ. ಈಗ ನಾನು ಪ್ರೀಮಿಯರ್ ನೋಡುತ್ತಿರುವಾಗ ಶಾನಭಾಗರು ಎಲ್ಲೋ ಪುಸ್ತಕ ಜೋಡಣೆಯ ತುರ್ತು ತರಬೇತಿ ಪಡೆದು ಬಂದಂತೆ ಅನ್ನಿಸುತ್ತಿತ್ತು!! ಹತ್ತು ವರ್ಷಗಳ ಕೆಳಗೆ - ಪ್ರತೀ ವರ್ಷವೂ ಎರಡುದಿನ ಕಾಲ ಸ್ಟಾಕ್ ಟೇಕಿಂಗ್ ಎಂದು ಪ್ರೀಮಿಯರ್ ಬುಕ್ ಷಾಪಿಗೆ ಶಾನಭಾಗರು ಬಾಗಿಲು ಜಡಿಯುತ್ತಿದ್ದರು. ಒಮ್ಮೆ ಇದು ಎಷ್ಟು ನಿರರ್ಥಕ ಕೆಲಸ ಎಂದು ಅವರೊಂದಿಗೆ ನಾನು ಮಸ್ಕರಿ ಮಾಡಿದ್ದೆ. ಆಗ ಆಡಿದ್ದ ತುಂಟತನದ ಮಾತು ನಿಜವಾಯಿತೇನೋ.. ಈಚೀಚೆಗೆ ಎರಡು ದಿನಗಳ ರಜೆ ಮತ್ತು ಪುಸ್ತಕಗಳನ್ನು ಎಣಿಸುವ ಕಾಯಕವನ್ನು ಶಾನಭಾಗ್ ಬಿಟ್ಟುಕೊಟ್ಟಿದ್ದರು. 

ಮೂರ್ನಾಲ್ಕು ಪದರಗಳ ಪುಸ್ತಕ ಖಜಾನೆ ಪ್ರೀಮಿಯರ್ ನಲ್ಲಿತ್ತು. ಎದುರಿಗೆ ಕಾಣುವ ಪುಸ್ತಕಗಳ ಹಿಂದೆ ಅಡಗಿರುವ ಪುಸ್ತಕಗಳು ಬೆಳಕು ಕಾಣುವಂತೆ ಒಂದು ಸೇಲ್ ಏರ್ಪಾಟು ಮಾಡಬೇಕೆಂದು ರಾಮ್ ಗುಹಾ ಒಮ್ಮೆ ಶಾನಭಾಗರಿಗೆ ಹೇಳಿದ್ದು ನನಗೆ ನೆನಪಿದೆ. ಆಗ ಶಾನಭಾಗ್ ಕಿರುನಗೆ ಬೀರಿ ಏನೂ ಹೇಳದೇ ಇದ್ದರು. ಈಗ ಆ ಮಾತು ನಿಜವಾಗುವ ಕಾಲ ಬಂದಂತಿದೆ.

ಈ ಬಾರಿ ನಾನು ಪ್ರೀಮಿಯರ್‌ಗೆ ಭೇಟಿ ನೀಡಿದಾಗ ಒಂದು ನಿರ್ದಿಷ್ಟ - ನರೇಂದ್ರ ಲೂಥರ್ ಅವರ ಹೈದರಾಬಾದಿನ ಬಗೆಗಿನ - ಪುಸ್ತಕವನ್ನು ನಾನು ಹುಡುಕುತ್ತಿದ್ದೆ. ಅತ್ಯಾಶ್ಚರ್ಯವೆಂದರೆ ಪ್ರೀಮಿಯರ್ ನಲ್ಲಿ ಆ ಪುಸ್ತಕ ಇರಲಿಲ್ಲ! ಅದನ್ನು ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‍ನಿಂದ ತರಿಸುತ್ತೀರಾ ಎಂದು ಕೇಳಿದ್ದಕ್ಕೆ ಶಾನಭಾಗ್ ಖುಷಿಯಿಂದಲೇ ಸರಿ ಎಂದರು. ಎರಡು ದಿನಗಳ ನಂತರ ನನಗೆ ಫೋನ್ ಮಾಡಿ ಪುಸ್ತಕ ಬಂದಿದೆ ಎಂದೂ ಹೇಳಿ - ಆ ಪುಸ್ತಕ ಬೇಕೇ ಅಥವಾ ವಾಪಸ್ಸು ಕಳಿಸಲೇ ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ನನಗೆ ಕುತೂಹಲವನ್ನೂ ಅಶ್ಚರ್ಯವನ್ನೂ ಉಂಟುಮಾಡಿತ್ತು. ಯಾಕೆಂದರೆ, ಅಕಸ್ಮಾತ್ ನಾನು ಆ ಪುಸ್ತಕವನ್ನು ಕೊಳ್ಳದಿದ್ದರೂ ಶಾನಭಾಗ್ ಆ ಪುಸ್ತಕವನ್ನು ತಮ್ಮ ಅಂಗಡಿಯಲ್ಲಿ ಇಡುತ್ತಿದ್ದರು. ಆ ಮಾತುಕತೆಯಾದ ನಂತರ ಪ್ರೀಮಿಯರ್ ಮುಚ್ಚುತ್ತಿದೆ ಅನ್ನುವ ವಿಚಾರ ನನಗೆ ಗೆಳೆಯರು ತಿಳಿಸಿದರು. ಈ ಸುದ್ದಿ ಕೇಳಿದಾಗ ಪ್ರೀಮಿಯರ್ ಸೊರಗಿರುವುದರ ಹಿನ್ನೆಲೆಯ ಮಜಕೂರು ನನಗೆ ಅರ್ಥವಾಯಿತು. ನಂತರ ಶಾನಭಾಗರೂ ತಮ್ಮ ಅಂಗಡಿಯ ಗುತ್ತಿಗೆಯ ಕಾಲ ಮುಗಿದಿದ್ದು, ಕಟ್ಟಡದ ಮಾಲೀಕ ಅದನ್ನು ಖಾಲಿ ಮಾಡಲು ಹೇಳಿದ್ದಾನೆಂದು ಹೇಳಿ ಕಿರುನಕ್ಕರು. ತಾವು ವ್ಯಾಪಾರ ನಿಲ್ಲಸಿ ನಿವೃತ್ತಿ ಪಡೆಯುವುದಾಗಿಯೂ ಹೇಳಿದರು.

ಇದ್ದಕ್ಕಿದ್ದ ಹಾಗೆ ನನಗೆ ನನ್ನ ಬೆಂಗಳೂರಿನ ಯಾತ್ರೆಗಳಲ್ಲಿ ಉಂಟಾಗಲಿದ್ದ ಶೂನ್ಯದ ಭಾವದ ಅರಿವಾಯಿತು. ಶಾನಭಾಗರು ತಮ್ಮ ಜೀವನವನ್ನು ಮುಂದುವರೆಸಬೇಕಿತ್ತು. ನಾನೂ ಸಹ. ಆತ ತಮ್ಮ ಮೂಲೆಯಲ್ಲಿ ಕೂತು ಎಂದೆಂದಿಗೂ ವ್ಯಾಪಾರ ಮಾಡಬೇಕೆಂದು ಬಯಸುವುದರಲ್ಲಿ ನನ್ನ ತಪ್ಪೇನೂ ಇಲ್ಲವೇನೋ. ರಾಮ್ ಗುಹಾ ಹೇಳಿದಹಾಗೆ ಆ ಅಂಗಡಿಯಲ್ಲಿನ ಒನ್-ವೇ ನಿಯಮವನ್ನು ಪಾಲಿಸುತ್ತಾ ಎಡಬದಿಯಿಂದ ಆರಂಭಿಸಿ ಪೂರ್ಣ ವೃತ್ತವನ್ನು ಸುತ್ತುಹಾಕಿ ದಾರಿಯಲ್ಲಿ ಕೆಲ ಅದ್ಭುತ ಪುಸ್ತಕಗಳನ್ನು ಕಂಡುಹಿಡಿಯುವಕ್ಕಿಂತ ದೊಡ್ಡ ಖುಷಿ ಪುಸ್ತಕ ಪ್ರಿಯರಿಗಿರಲಿಲ್ಲ ಅನ್ನಿಸುತ್ತದೆ. ಮೊಟ್ಟ ಮೊದಲಬಾರಿಗೆ ಶಾನಭಾಗರ ಅಂಗಡಿಯಲ್ಲಿ ಮೈಕ್ರೋಕ್ರೆಡಿಟ್ ಬಗೆಗಿನ ನನ್ನದೇ ಪುಸ್ತಕವೂ ಕಾಣಿಸಿತು. ಬಹುಶಃ ಒಳಪದರದಲ್ಲಿ ಅಡಗಿದ್ದ ಈ ಪುಸ್ತಕ ಈ ಮುಹೂರ್ತಕ್ಕಾಗಿಯೇ ಕಾಯುತ್ತಿತ್ತೋ ಏನೋ. ಹೀಗೆ ಪ್ರೀಮಿಯರ್ ಮುಚ್ಚುತ್ತಿರುವ ದುಃಖದಲ್ಲೇ ನಾನು ಮಿಕ್ಕ ಪುಸ್ತಕದಂಗಡಿಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದೆಂದು ಎರಡು ಅಂಗಡಿಗಳ ಮೂರು ಜಾಗಗಳನ್ನು ಹುಡುಕಿ ಹೊರಟೆ.

ಬ್ಲಾಸಮ್ಸ್ ನನ್ನ ಮಟ್ಟಿಗೆ ಒಂದು ಉತ್ತಮ ಶೋಧವಾಯಿತು. ಅಲ್ಲಿ ಹೊಸ-ಹಳೆಯ ಪುಸ್ತಕಗಳ ಉತ್ತಮ ಸಂಗ್ರಹವಿದೆ. ಸೆಲೆಕ್ಟಿನ ಮೂರ್ತಿಯವರ ಹಳೆಯ ಗಿರಾಕಿಯಾಗಿರುವುದರಿಂದ ನಾನು ಹಳೆಯ ಪುಸ್ತಕಗಳನ್ನು ಮಾರುವ ಹೊಸ ಅಂಗಡಿಗಳನ್ನು ಒಂದು ರೀತಿಯ ಅನುಮಾನದಿಂದಲೇ ನೋಡುತ್ತೇನೆ. ಅಲ್ಲಿ ಫೋರ್ಸಿತ್, ಲುಡ್ಲುಮ್, ಸಿಡ್ನಿ ಷೆಲ್ಡನ್, ಆರ್ಚರ್ ಮತ್ತು ಜಾನ್ ಗ್ರಿಷಾಮುಗಳನ್ನು ಮೀರಿದ ಪುಸ್ತಕಗಳು ಇರುವುದಿಲ್ಲ ಅನ್ನುವುದು ನನ್ನ ಪೂರ್ವಾಗ್ರಹ.  ಆದರೆ ಬ್ಲಾಸಮ್ಸ್ ನಿಜಕ್ಕೂ ಒಳ್ಳೆಯ ಪತ್ತೆಯಾಗಿತ್ತು, ಹಾಗೂ ಈ ಬಾರಿ ಅಲ್ಲಿಗೆ ಹೋದದ್ದಕ್ಕೆ ನನಗೆ ಖುಷಿಯೂ ಆಯಿತು. ಅದು ಪ್ರೀಮಿಯರ್‍‍ಗೆ ಸರಿಯಾದ ’ವಾರಸು’ ಅಲ್ಲದಿದ್ದರೂ [ಅಲ್ಲಿ ಪುಸ್ತಕಗಳನ್ನು ಉದ್ದುದ್ದಕ್ಕೆ, ಚೆನ್ನಾಗಿಯೇ ಜೋಡಿಸಿದ್ದಾರೆ!, ಹೀಗಾಗಿ ಅಡಗಿದ ಪುಸ್ತಕಗಳನ್ನು ಕಂಡುಹಿಡಿಯುವುದರ ಪುಳಕ ನನಗೆ ದಕ್ಕಲಾರದು] ಪ್ರೀಮಿಯರ್ ಇಲ್ಲದ ಪ್ರಪಂಚದಲ್ಲಿ ತುಸು ಹಿತವನ್ನು ಕೊಡುವ ಒಳ್ಳೆಯ ಮಲತಾಯಿಯಂತೆ ಕಾಣಿಸಿತು. ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿರುವ ಮತ್ತು ಮೂರ್ತಿಯ ಸೆಲೆಕ್ಟ್ ಬಳಿಯಿರುವ ಬುಕ್-ವರ್ಮಿಗೂ ನಾನು ಭೇಟಿಯಿತ್ತೆ. ಈ ಅಂಗಡಿಯಲ್ಲೂ ಒಳ್ಳೆಯ ಪುಸ್ತಕಗಳು ನನಗೆ ಕಂಡುಬಂದುವು. ಮೂರ್ತಿಯ ಅಂಗಡಿಯ ದಾರಿಯಲ್ಲಿ ಹಳೆಯ ಪುಸ್ತಕಗಳ ಅಂಗಡಿಯೊಂದನ್ನು ತೆಗೆವ ಮೂರ್ತಿಯ ಮನೆಗೇ ಪೈಪೋಟಿಯನ್ನು ಒಯ್ಯುವ ದಾರ್ಷ್ಟ್ಯ ತೋರಿದ ಬುಕ್-ವರ್ಮ್ ಕಂಡು ನಾನು ಒಳಗೊಳಗೇ ನಕ್ಕೆ. 

ಸೆಲೆಕ್ಟಿನಲ್ಲಿ ಮೂರ್ತಿಯ ಮಗ ಸಂಜಯ್ ಸಹ ವ್ಯಾಪಾರಕ್ಕೆ ಸೇರಿದ್ದಾರೆ. ಸೆಲೆಕ್ಟ್ ಇದ್ದ ಕಟ್ಟಡದ ಭಾಗವನ್ನು ಮೂರ್ತಿ ಕೊಂಡುಕೊಂಡಿದ್ದಾರೆ. ಮೊದಲನೆಯ ಮಹಡಿಗೆ ಅಂಗಡಿಯನ್ನು ವಿಸ್ತರಿಸಿದ್ದಾರೆ. ಹೆಚ್ಚಿನ ಪುಸ್ತಕಗಳೂ, ಕಲಾಕೃತಿಗಳೂ ಈಗ ಮೂರ್ತಿಯ ಅಂಗಡಿಯಲ್ಲಿ ಇದೆ. ಆದರೆ ಕಳೆದೈದಾರು ವರ್ಷಗಳಲ್ಲಿ ಮೂರ್ತಿ ಮತ್ತು ಸಂಜಯ್ ತಮ್ಮ ಅಂಗಡಿಯನ್ನು ತುಸು ವೈಶಿಷ್ಟ್ಯದ - ಸ್ಪೆಷಲೈಜ್ಡ್ ಅಂಗಡಿಯಾಗಿ ಪರಿವರ್ತಿಸುತ್ತಿದ್ದಾರೋ ಅನ್ನುವ ಅನುಮಾನ ನನ್ನನ್ನು ಕಾಡುತ್ತಿದೆ. ಸೆಲೆಕ್ಟ್ ಅಂಗಡಿಯಲ್ಲಿ ಈ ರೀತಿಯ ವಿಶಿಷ್ಟ ಪುಸ್ತಕಗಳನ್ನು ಹೆಕ್ಕುತ್ತಲೇ ನಿಮಗೆ ಲುಡ್ಲುಮ್, ವುಡ್‍ಹೌಸ್, ಜಾಯ್ಸ್ ಮತ್ತು ಮಾರ್ಕೇಸರ ಪುಸ್ತಕಗಳೂ ಸಿಗುತ್ತಿದ್ದುವು. ಆದರೆ ಈಚೀಚೆಗೆ ಸೆಲೆಕ್ಟ್ ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಪುಸ್ತಕಗಳ ದಾಸ್ತಾನು ಕಡಿಮೆಯಾಗಿ ಬರೇ ವಿಶಿಷ್ಟ ಪುಸ್ತಕಗಳು ಮಾತ್ರ ಇವೆ ಅನ್ನುವ ಅನುಮಾನ ನನಗೆ. ಹೀಗಾಗಿ ಸೆಲೆಕ್ಟ್ ಖುಷಿಯಿಂದಲೇ ಆ ಸ್ಥಾನವನ್ನು ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ಗೆ ಬಿಟ್ಟುಕೊಡುತ್ತಿದೆಯೇ? ಈ ಅನುಮಾನ ನಿಜವಾಗದಿರಲಿ. ಯಾಕೆಂದರೆ ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ನಲ್ಲಿ ಪುಸ್ತಕಗಳನ್ನು ಕೊಳ್ಳುವುದು ಸಾಧ್ಯವಾದರೂ, ಸೆಲೆಕ್ಟ್ ನಲ್ಲಿ ಪುಸ್ತಕ ನೋಡುವುದಲ್ಲದೇ, ತಿರುವಿ ಹಾಕುವುದಲ್ಲದೇ ಮೂರ್ತಿಯೊಂದಿಗೆ ಗಮ್ಮತ್ತಿನ ಮಾತುಕತೆಯನ್ನೂ ಬೆಳೆಸಬಹುದು [ಹಾಗೂ ಅವರು ತಮ್ಮ ಗಿರಾಕಿಗಳಬಗ್ಗೆ ಹೇಳುವ ಗಮತ್ತಿನ ಕಥೆಗಳನ್ನೂ ಕೇಳಬಹುದು]. ಸಾಲದ್ದಕ್ಕೆ ಅಲ್ಲಿಯೇ ರಾಮ್ ಗುಹಾ, ಗಿರೀಶ್ ಕಾರ್ನಾಡ, ರಸ್ಕಿನ್ ಬಾಂಡ್, ದಿವಾಕರರಂತಹ ಮೂರ್ತಿಯ "ಸ್ಟಾರ್ ಗಿರಾಕಿ"ಗಳ ದರ್ಶನವೂ ಆಗುವ ಸಾಧ್ಯತೆಯಿದೆ! ಮೂರ್ತಿಯ ಜೊತೆ ವಿಚಿತ್ರ ಚೌಕಾಸಿಯನ್ನೂ ಮಾಡುವ ಸಾಧ್ಯತೆಯಿದೆ. ಎಷ್ಟೋ ಬಾರಿ ಮೂರ್ತಿ ಹೇಳಿದ ಬೆಲೆಗಿಂತ ೮೦% ಕಡಿಮೆ ಬೆಲೆಗೂ, ಕೆಲವೊಮ್ಮೆ ಮುಫತ್ತಾಗಿಯೂ ಮೂರ್ತಿ 
ಪುಸ್ತಕಗಳನ್ನು ನೀಡಿದ್ದಾರೆ. ಮತ್ತೆ ಕೆಲವೊಮ್ಮೆ ಹೇಳಿದ ಬೆಲೆಗಿಂತ ಒಂದು ಪೈಕೂಡಾ ಕಡಿಮೆ ಮಾಡದೆ ಬೇಕಿದ್ದರೆ ತೆಗೋ ಇಲ್ಲವಾದರ ಬಿಡು ಅನ್ನುವಂಥಹ ಹಠವನ್ನೂ ಹಿಡಿದಿದ್ದಾರೆ. ಒಂದೊಮ್ಮೆ "ನಿಮಗೀ ಪುಸ್ತಕ ಬೇಕೂಂತ ನನಗೆ ಗೊತ್ತು. ಆದರೆ ಇದು ಪುಸ್ತಕದ ಮೊದಲ ಆವೃತ್ತಿ - ಹೀಗಾಗಿ ಇದಕ್ಕೆ ನಾನು ಹೆಚ್ಚಿನ ಬೆಲೆಯನ್ನು ಬೇರೆಯವರಿಂದ ಪಡೆಯಬಲ್ಲೆ. ಬೇಕಿದ್ದರೆ ಒಂದೆರಡು ದಿನದ ಮಟ್ಟಿಗೆ ಇದನ್ನು ತೆಗೆದುಕೊಂಡು ಹೋಗಿ ಫೋಟೋಕಾಪಿ ಮಾಡಿಸಿ ತನ್ನಿ" ಅನ್ನುವುದೂ ಉಂಟು. ಹೊಸದಾಗಿ ಬಂದಿರುವ ಈ ಥಳುಕಿನ ಅಂಗಡಿಗಳ ಜೊತೆ ಇಂಥಹ ಸಂಬಂಧವನ್ನು ಬೆಳೆಸುವುದು ನನಗೆ ಸಾಧ್ಯವಿಲ್ಲ. ಬಹುಶಃ ಐಸಿಐಸಿಐ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಸಿಂಡಿಕೇಟ್ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಇರುವ ವ್ಯತ್ಯಾಸ ಇದೇ ಏನೋ!!
ಶಾನಭಾಗರಿಗೆ ನಮ್ಮ ಪಬ್ ರಾಜಧಾನಿಯಲ್ಲಿ ಮತ್ತೊಂದು ಅಂಗಡಿ ದೊರೆಯಬಹುದೇ ಎಂದು ಆಶಿಸುತ್ತಿದ್ದೇನೆ. ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರೀಮಿಯರ್ ನಂತಹ ಅರಾಜಕ ಜಾಗದ ಅವಶ್ಯಕತೆ ನಮಗಿದೆ.

[ಈ ಲೇಖನವನ್ನು ಬರೆದದ್ದು ಮಾರ್ಚ್ ೨೦೦೬, ಆ ನಂತರ ಕಟ್ಟಡದ ಮಾಲೀಕ ಗುತ್ತಿಗೆಯನ್ನು ಎರಡು ವರ್ಷ ಬೆಳೆಸಿ ಪ್ರೀಮಿಯರ್‍ ಗೆ ಮರುಜನ್ಮ ನೀಡಿದ್ದ. ಆ ಗುತ್ತಿಗೆಯೂ ಮುಗಿದು, ಈಗ ಪ್ರೀಮಿಯರ್ ನಿಜಕ್ಕೂ ಮುಚ್ಚುತ್ತಿದೆ..]




Thursday, May 7, 2009

ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ

ದೇಶಕಾಲ ಪತ್ರಿಕೆಗಾಗಿ ಮಾಡಿದ ಅವಲೋಕನ

ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. 

"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."

ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. 

ಗುರುವಿನ ಮೊದಲ ಪುಸ್ತಕ ನಿರ್ಗುಣವನ್ನ ಒಂದು ಮಹತ್ವದ ಡೆಬ್ಯು - ಅದ್ಭುತವಾದ ಮೊದಲ ಪುಸ್ತಕ - ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಬಹುಶಃ ಎಲ್ಲ ಹೊಸ ಲೇಖಕರಂತೆ ಗುರು ತಮ್ಮದೇ ಧ್ವನಿಯನ್ನೂ ವ್ಯಕ್ತಿತ್ವವನ್ನೂ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಸಂಕಲನದಲ್ಲಿ ಗುರು ತಮ್ಮ ಕಾಳಜಿಗಳನ್ನೂ ಕಥನ ಶೈಲಿಯನ್ನೂ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಿರ್ಗುಣದಲ್ಲಿರುವ ಕಥೆಗಳು ಒಳಗಿರುವ ತಹತಹವನ್ನೆಲ್ಲಾ ಕಕ್ಕಬೇಕೆನ್ನುವ ಅತೀ ಬರವಣಿಗೆಯ ಕಥೆಗಳೆನ್ನಿಸುತ್ತವೆ. ಈ ಅತೀ ಬರವಣಿಗೆ ಮತ್ತು ಕೆಲಮಟ್ಟಿಗೆ ’ಕಾಳಜಿ’ಗಳ ಕೃತಕತೆ ಓದುಗ ವಲಯವನ್ನು [ಕಥಾಸ್ಪರ್ಧೆಯ ತೀರ್ಪುಗಾರರು, ವಿಮರ್ಶಕರು, ಬರವಣಿಗೆಯನ್ನು ಗಮನಿಸಬೇಕಾದ ಸಂಪಾದಕರು, ಸಂಪಾದಕರಿಗೆ ಓಲೆಯನ್ನು ಬರೆಯಬಹುದಾದ ಎಕ್ಟಿವಿಸ್ಟ್ ಓದುಗರು, ಹೀಗೆ] ಮನಸ್ಸಿನಲ್ಲಿ ಇಟ್ಟು ಬರೆದಾಗ ಉಂಟಾಗುತ್ತದೆ. ಬಹುಶಃ ಲೇಖಕರಾಗಿ ನಾವೆಲ್ಲರೂ ಈ ಪ್ರಕ್ರಿಯೆಯ ಮೂಲಕವೇ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಅನ್ನಿಸುತ್ತದೆ. ಈ ವಿಕಸನದ ಪ್ರಕ್ರಿಯೆಯಲ್ಲಿ ಎಲ್ಲೋ ಬೇರೊಬ್ಬರ ಅಭಿಪ್ರಾಯ ಹೇಗೆ ಬರಬಹುದು ಅನ್ನುವುದಿಕ್ಕಿಂತ ತನಗೆ ಏನು ಹೇಳಬೇಕಾಗಿದೆ ಅನ್ನುವ ಘಟ್ಟಕ್ಕೆ ಬಂದಾಗಲೇ ಲೇಖಕನ ಮೂಲಭೂತ ಶೈಲಿ ಮತ್ತು ಕಾಳಜಿಗಳು ತೆರೆದುಕೊಳ್ಳುತ್ತವೆಯೇನೋ. 

ಒಬ್ಬ ಲೇಖಕ ಆ ಮೊದಲ ಘಟ್ಟದಿಂದ ಎರಡನೆಯ ಘಟ್ಟಕ್ಕೆ ಎಷ್ಟು ಬೇಗ ಸೀಮೋಲ್ಲಂಘನ ಮಾಡಬಹುದೋ ಅಷ್ಟುಬೇಗ ಸಾರಸ್ವತ ಲೋಕ ಆತನನ್ನು ಗಮನಿಸುತ್ತದೆ. ಆದರೆ ಆ ಗಮನವನ್ನು ಸೆಳೆಯಲು ಇಂಥ ಸೀಮೋಲ್ಲಂಘನ ಮಾಡಿದ ಲೇಖಕನಲ್ಲಿ ಮೂಲಭೂತವಾದ ಸೃಜನಶೀಲತೆ ಮತ್ತು ನಿಜವಾದಂತಹ ನಂಬಿಕೆಗಳಿರಬೇಕು. ಎಷ್ಟೋ ಲೇಖಕರು ಈ ಸೀಮೋಲ್ಲಂಘನ ಮಾಡಲಾರದೆಯೇ ಮೊದಲ ಘಟ್ಟದಲ್ಲಿಯೇ ತಮ್ಮ ಮೆಚ್ಚುಗೆಯನ್ನು ಹೊರಪ್ರಪಂಚದಿಂದ ಬಯಸುತ್ತಲೇ ’ಜನಪ್ರಿಯ’ರಾಗುವ ನೆಲೆಯಲ್ಲಿ ನಿಂತುಬಿಡುತ್ತಾರೆ - ಈ ಸಾಲಿನಲ್ಲಿ ನನಗೆ ತಕ್ಷಣ ಮನಸ್ಸಿಗೆ ತಟ್ಟುವ ಲೇಖಕ ನಾಗತಿಹಳ್ಳಿ ಚಂದ್ರಶೇಖರ. ನಾಗತಿಹಳ್ಳಿಗೆ ಭಾಷೆಯ ಮೇಲಿನ ಪ್ರಭುತ್ವವೂ ಇತ್ತು, ಜೀವನಾನುಭವದ ಭಿನ್ನತೆಯ ದೊಡ್ಡ ಬುತ್ತಿಯೂ ಇತ್ತು, ಆದರೆ ನಾಗತಿಹಳ್ಳಿ ಈ ಸೀಮೋಲ್ಲಂಘನ ಮಾಡದೆಯೇ ಬೇರೊಂದು ದಾರಿಯನ್ನು ಹಿಡಿದರು. ಗುರು ತಮ್ಮ ಶಕುಂತಳಾ ಮತ್ತು ಬಿಳಿಯ ಚಾದರ ಪುಸ್ತಕಗಳ ಮೂಲಕ ಸಾಹಿತ್ಯಿಕವಾಗಿ ಆ ಸೀಮೋಲ್ಲಂಘನವನ್ನು ಮಾಡಿದ್ದಾರೆ.

ಹೀಗೆ ಅವರು ತಮ್ಮ ಸೃಜನಶೀಲಲೋಕದಲ್ಲಿ ಈ ಸೀಮೋಲ್ಲಂಘನವನ್ನು ಸಾಧಿಸಿದ್ದರೂ ಅವರ ’ವೈದ್ಯ ಮತ್ತೊಬ್ಬ’ ಒಬ್ಬ ಲೇಖಕನ ಮೊದಲ ಕೃತಿಯ ಎಲ್ಲ ಮಿತಿಗಳನ್ನೂ ಒಳಗೊಂಡಿದೆ. ಅವರ ಪ್ರಬಂಧಗಳಲ್ಲಿ ಅನೇಕ ಗಂಭೀರ ಕಾಳಜಿಗಳಿವೆಯಾದರೂ ಅವುಗಳ ಚರ್ಚೆಯನ್ನು ಗುರು ಏರಿಸಬೇಕಾದ ಎತ್ತರಕ್ಕೆ ಏರಿಸದೆಯೇ ಬಿಟ್ಟುಬಿಡುತ್ತಾರೆ. ಒಂದು ಥರದಲ್ಲಿ ಗುರುವಿನ ವೃತ್ತಿಯಾದ ವೈದ್ಯಕೀಯರಂಗ [ವೈದ್ಯ] - ಹಾಗೂ ಪ್ರವೃತ್ತಿಯ ಕಲೆ-ಸಾಹಿತ್ಯದ [ಇನ್ನೊಬ್ಬ] ಬಗ್ಗೆ ಬರೆಯುತ್ತಾ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲಾಗದ ದ್ವಂದ್ವದಲ್ಲಿ ಗುರು ಇದ್ದಾರಾದರೂ, ಒಂದೊಂದೇ ಬಿಡಿ ಲೇಖನವನ್ನು ಓದಿದಾಗ ಅವರು ಒಂದು ತಕ್ಷಣದ ನಿಲುವನ್ನು ತೆಗೆದುಕೊಂಡು ಒಂದು ತೀರ್ಮಾನವನ್ನೂ ಕೊಟ್ಟುಬಿಡುತ್ತಿರುವಂತೆ ನಮಗೆ ಕಾಣಿಸುತ್ತದೆ. ಒಟ್ಟಾರೆ ಅವರ ತಲ್ಲಣ ಮಾರುಕಟ್ಟೆಯ ನೀತಿ ಹೀನ ಲಾಭಕೇಂದ್ರಿತ [ಅ]ಸಿದ್ಧಾಂತದ ಬಗ್ಗೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅದಕ್ಕೆ ಸಮಾಧಾನವನ್ನು ಎಡಪಂಥೀಯರು ಮಾರುಕಟ್ಟೆಯಾಚೆಯ ಸರಕಾರೀ ರಂಗ ’ಸ್ಟೇಟ್’ನಲ್ಲಿ ಕಂಡುಕೊಂಡು ಮಾರುಕಟ್ಟೆಯನ್ನು ತಿರಸ್ಕರಿಸುವ ನಿಲುವನ್ನೂ ಗುರು ಒಪ್ಪುತ್ತಿರುವಂತೆ ಕಾಣುವುದಿಲ್ಲ. ಹೀಗಾಗಿ ಸಿದ್ಧಾಂತವೇ ಇಲ್ಲದ ಮಾರುಕಟ್ಟೆಯಲ್ಲಿಯೇ ಅವರು ಎಥಿಕಲ್ ಪ್ರವೃತ್ತಿಯನ್ನು ಕಂಡುಕೊಳ್ಳಬೇಕೆಂಬ ತೀರ್ಮಾನವನ್ನು ಮಾಡಿ ಅದಕ್ಕೆ ದಾರಿಯನ್ನು ಹುಡುಕುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಸಫಲರಾಗದೆಯೇ ಚಡಪಡಿಸುತ್ತಿರುವಂತೆ ಕಾಣುತ್ತಾರೆ. 

ಒಂದು ಥರದಲ್ಲಿ, ಗುರುವಿಗೆ ಸಮಸ್ಯೆ ಏನೆಂಬುದು ಗೊತ್ತು, ಅದಕ್ಕೆ ಅವರದೇ ತಕ್ಷಣ ಉತ್ತರವನ್ನೂ ಅವರು ಕಂಡುಕೊಂಡಿದ್ದಾರೆ - ಆದರೆ ಆ ಉತ್ತರ ಸಮಸ್ಯೆಯ ಸಂದರ್ಭಕ್ಕೆ ಸಮಂಜಸವಾದದ್ದೇ ಅಲ್ಲವೇ ಅನ್ನುವ ದ್ವಂದ್ವವನ್ನು ಅವರು ಪರಿಷ್ಕರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅಷ್ಟೇ ಅಲ್ಲ ಅವರ ’ಪ್ರಿಸ್ಕ್ರಿಪ್ಷನ್’ಗಳು ಕನ್ವಿಂಸಿಂಗ್ ಆಗಿಲ್ಲ. ಅವರ ಪ್ರಬಂಧಗಳ ಪ್ರಯೋಗವನ್ನು ಮೇಲಿನ ಸೀಮೋಲ್ಲಂಘಾನವನ್ನು ಹುಡುಕುತ್ತಿರುವ ಪ್ರಯೋಗಗಳಾಗಿಯೇ ನಾವು ನೋಡಬೇಕಾಗಿದೆ. ಹೀಗಾಗಿಯೇ ಅವರು ದಂತವೈದ್ಯನ ಕ್ಲಿನಿಕ್ಕನ್ನೂ, ಅವನ ತಲ್ಲಣವನ್ನೂ, ವೈದ್ಯಕೀಯರಂಗದಲ್ಲೂ ಮೆಕ್‍ಡೊನಲ್ಡ್ ಥರದ ಸಮರೂಪತೆಯನ್ನೂ ತರಬಹುದಾದ ಆಶಯವನ್ನು ಅವರು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಸಮಸ್ಯೆಯ ಪದರಗಳು ಅತೀ ಜಟಿಲವಾಗಿರುವಾಗ ಅದನ್ನು ಚರ್ಚಿಸುವುದೇ, ಬಿಡಿಸಿನೋಡುವುದೇ ಅದರ ಸಮಾಧಾನದತ್ತ ಒಂದು ಹೆಜ್ಜೆ ಅನ್ನುವುದನ್ನು ಗುರು ಮನಗಂಡಾಗ, ಹಾಗೂ ಪ್ರತಿಯೊಂದಕ್ಕೂ ಈಗಿನಿಂದೀಗಲೇ ಸಮಾಧಾನ ನೀಡಬೇಕೆಂಬ ತುರ್ತನ್ನು ಗುರು ಮೀರಿದಾಗ ಅವರು ಅವರ ವೈದ್ಯ ಮತ್ತೊಬ್ಬನ - ಸೀಮೋಲ್ಲಂಘನ ಮಾಡುತ್ತಾರೆ.

ಗುರುವಿನ ಕೃತಿಗಳ ಹಿನ್ನೋಟವನ್ನು ನಾವಿಟ್ಟುಕೊಂಡರೆ ಅವರು ನಿರ್ಗುಣದಲ್ಲಿ ಈ ರೀತಿಯ ಸೀಮೋಲ್ಲಂಘನಕ್ಕೆ ತಯಾರಿ ಮಾಡುತ್ತಿರುವುದು ನಮಗೆ ಕಾಣುತ್ತದೆ. ಈ ಕಥೆಗಳ ಕಾಲಘಟ್ಟದಲ್ಲಿ ಎಷ್ಟು ಭಾರತದಲ್ಲಿ ಬರೆದವು, ಎಷ್ಟು ಕಥೆಗಳು ಅವರು ವಿದೇಶಕ್ಕೆ ಹೋಗಿ ಅಲ್ಲಿನ ಜೀವನವನ್ನು ನೋಡಿದ ನಂತರ ಬರೆದವು ಅನ್ನುವುದು ನನಗೆ ತಿಳಿಯದು. ಆದರೆ ಗುರು ಅವರ ಕಥೆಗಳ ಸಂದರ್ಭ ಭಾರತದಿಂದಾಚೆ ಹೋದ ಕೂಡಲೇ ಒಂದು ವಿಶಿಷ್ಟ ಪ್ರತಿಭೆಯನ್ನು ತೋರುವುದನ್ನು ನಾವು ನೋಡಬಹುದು. ಅವರ ಮಧ್ವ ವಿಜಯದಂತಹ ಕಥೆಗಳು ವಿಫಲಗೊಂಡಂತೆ ಅನ್ನಿಸುವುದು ಬಹುಶಃ ಅವು ಗುರುವಿನ ವೈಯಕ್ತಿಕ ಅನುಭವ ಕ್ಷೇತ್ರಕ್ಕಿಂತ ದೂರವಾಗಿರುವುದರಿಂದಲೇ ಇರಬಹುದು. ಉದಾಹರಣೆಗೆ ಅದ್ಭುತವಾದ ಕಥೆಯಾಗಬಹುದಾಗಿದ್ದ ’ಬರಿದೇ ಬಾರಿಸದಿರೋ ತಂಬೂರಿ’ ಒಂದು ವಾಚ್ಯ ಬಾಲಿಶ ಕಥೆಯಾಗುವುದು ಗುರು ಮೊದಲೇ ಒಂದು ’ಮೆಸೇಜ್’ ಕೊಡಬೇಕೆಂದು ನಿರ್ಧರಿಸಿ ಹೊರಟಿರುವ ಪ್ರವೃತ್ತಿಯನ್ನು ತೋರಿಸಿರುವುದರಿಂದ ಅನ್ನಿಸುತ್ತದೆ. ಹೀಗಾಗಿ ಗುರುವಿನ ಈ ಎರಡೂ ಕೃತಿಗಳನ್ನು ತಯಾರಿಯ ಕೃತಿಗಳೆಂದು ಪರಿಗಣಿಸಿ ಮಿಕ್ಕೆರಡು ಕೃತಿಗಳನ್ನು ಮಹತ್ವವನ್ನು ನಾವು ಚರ್ಚಿಸಬೇಕು.

’ವೈದ್ಯ ಮತ್ತೊಬ್ಬ’ದಲ್ಲಿರುವ ವೈದ್ಯಕೀಯ ತಲ್ಲಣಗಳನ್ನು ಅವರು ಶಕುಂತಳಾ ಮತ್ತು ಬಿಳಿಯ ಚಾದರದಲ್ಲಿ ಅಡಕಗೊಳಿಸಿದಾಗ ಆ ತಲ್ಲಣಗಳಿಗೆ ಒಂದು ಚೌಕಟ್ಟು ಸಿಗುತ್ತಿರುವುದು ಕಾಣಿಸುತ್ತದೆ. ಹೀಗಾಗಿ ಅವರ ಮೂಲ ತಲ್ಲಣಗಳಿಗೆ ಸರ್ವವ್ಯಾಪ್ತಿಯ ಸಮಾಧಾನವಿಲ್ಲ ಎನ್ನುವುದನ್ನು ನಾವು ಮನಗಾಣುತ್ತೇವೆ, [ಅದನ್ನು ಗುರು ಇನ್ನೂ ಮನಗಾಣಬೇಕಾಗಿದೆ]. ಎಲ್ಲ ತಲ್ಲಣಗಳಿಗೂ ಸಂದರ್ಭೋಚಿತವದ ಪರಿಹಾರಗಳೂ, ಹಾಗೂ ಅನೇಕ ಸಂದರ್ಭೋಚಿತ ಪರಿಹಾರಗಳು ಸರ್ವವ್ಯಾಪ್ತಿಯ ಪರಿಹಾರಗಳಿಗೆ ಆಂತರಿಕವಾಗಿ ವಿರುದ್ಧವಾಗಿರುವುದನ್ನೂ ನಾವು ಕಾಣಬಹುದು. 

ಒಂದು ರೀತಿಯಿಂದ ಸರಳೀಕರಿಸಿ ಹೇಳಬೇಕೆಂದರೆ ಗುರುವಿನ ಮೂಲ ಕಾಳಜಿಗಳು ನಿರಂತರವಾಗಿ ಎದುರಾಗುವ ದ್ವಂದ್ವಗಳನ್ನು ಪರಿಹರಿಸಿಕೊಳ್ಳುವುದೂ, ಮತ್ತು ಆ ಪರಿಹಾರಗಳಲ್ಲಿ ಒಂದು ಪದ್ಧತಿಯಿದೆಯೇ ಎಂದು ಶೋಧಿಸುವುದೂ ಆಗಿದೆ. ಸಮಾಜದ ನಿಟ್ಟಿನಲ್ಲಿ, ದೇಶಾಂತರದ ಕ್ಯಾನ್ವಾಸಿನಲ್ಲಿ ಗುರು ತಮ್ಮ ಬರವಣಿಗೆಯ ಚೌಕಟ್ಟನ್ನು ಸೃಷ್ಟಿಸುತ್ತಾರಾದರೂ ಅವರ ಮೂಲಸೆಲೆಯಿರುವುದು ವೈಯಕ್ತಿಕವಾಗಿ. ಈ ಮೂಲಸೆಲೆಯನ್ನು ಅವರು ಶಕುಂತಳಾ ಸಂಗ್ರಹದಲ್ಲಿ ತೋರಿಸಿದ್ದರಾದರೂ ಅದು ಬಿಳಿಯ ಚಾದರದಲ್ಲಿ ಎದ್ದು ಕಾಣುತ್ತದೆ. ’ವೈದ್ಯ ಮತ್ತೊಬ್ಬ’ದಲ್ಲಿ ಗುರು ತೆಗೆದುಕೊಂಡಿರುವ ನಿಲುವುಗಳು ಒಮ್ಮೊಮ್ಮೆ ಬಾಲಿಶ ಎನ್ನಿಸಲು ಅವರ ಬಿಳಿಯ ಚಾದರದ ಪದರಗಳೇ ಸಾಕ್ಷಿ ಎನ್ನಿಸಿವೆ. 

’ಬಿಳಿಯ ಚಾದರ’ದಲ್ಲಿ - ಶಕುಂತಳಾದಲ್ಲಿರುವಂತೆಯೇ ಒಂದು ರೀತಿಯ ಡಾರ್ಕ್ ಹ್ಯೂಮರ್ ಇದೆ. ಎಲ್ಲವನ್ನೂ ಒಂದು ಕಾನೂನಿನ ಚೌಕಟ್ಟಿನಲ್ಲಿಟ್ಟು ತಗಾದೆಗೆ ತರುವ ಲಿಟಿಗೆಂಟ್ ಸೊಸೈಟಿಯ ಕುಹಕ - ಗೋರಿಯಲ್ಲಿ ಒಂದು ಕಾಲಿಟ್ಟಿದ್ದರೂ ಕಥಾನಾಯಕ ಶ್ರೀಧರನ ಮೇಲೆ ಕೇಸು ಹಾಕಿ ಹಣ ಕೊಳ್ಳೆ ಹೊಡೆವ ಪಿತೂರಿಯ ನಡುವೆ [ಅಪಘಾತ ಎನ್ನುವ ಭಾಗ, ಪುಟ ೧೪೮] ಕಾಣಿಸುತ್ತದೆ. ಶಕುಂತಳಾದಲ್ಲಿ ಪ್ರಾರಂಭವಾದ - ಕುಟುಂಬ- ಅದರೊಳಗಿನ ಸಂಬಂಧಗಳು, ಸಮಾಜದಲ್ಲಿನ ಸಂಬಂಧಗಳ ಸೂಕ್ಷ್ಮ ಹಾಗೂ ತುಂಡಾಗುತ್ತಿರುವ ಎಳೆಗಳ ತಲ್ಲಣವನ್ನು  ಗುರು ’ಬಿಳಿ ಚಾದರ’ದಲ್ಲಿ ಸಶಕ್ತವಾಗಿ ಮುಂದುವರೆಸುತ್ತಾರೆ. 

’ಬಿಳಿಯ ಚಾದರ’ದಲ್ಲಿರುವ ಎಲ್ಲ ಪಾತ್ರಗಳೂ ಏಕಾಂಗಿಗಳು. ಯಾರಿಗೂ ಯಾವುದೇ ಸಂಬಂಧಗಳ ಬಗ್ಗೆ ಭಾವೋದ್ವೇಗವಿಲ್ಲ. ಎಲ್ಲವೂ ಲಾವಾದೇವಿಯ ಒಂದು ಹಂತದಲ್ಲೇ ಉಳಿದುಬಿಡುತ್ತದೆ. ಎಲ್ಲ ಪಾತ್ರಗಳಿಗೂ ಖಾಸಗೀ ನಿಟ್ಟಿನಲ್ಲಿ ಮೌಲ್ಯಗಳ ಎಥಿಕಲ್ ದ್ವಂದ್ವಗಳು. ಆದರೆ ಅದಕ್ಕೆ ಸಮಾಜದ ಒಂದು ಹಂದರ ಒಗ್ಗದೇ ಸಮಾಜದ ಸ್ಥರದಲ್ಲಿ ಸಾಮಾಜಿಕ ಮೌಲ್ಯಗಳ ಚೌಕಟ್ಟಿನಲ್ಲಿ ಪರಿಷ್ಕಾರ ಒಂದೂ ಪಾತ್ರಕ್ಕೆ ಸಿಗದಿರುವುದೂ, ಖಾಸಗೀ ನಿಟ್ಟಿನಲ್ಲಿಯೇ ಆ ತಲ್ಲಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬ ಒಂದು ಏಲಿಯನೇಟೆಡ್ ಧ್ವನಿಯನ್ನು ಗುರು ತೋರಿಸುತ್ತಾರೆ. ಸಾಮೂಹಿಕ ಸ್ಥರದಲ್ಲಿ ಸಂಬಂಧಗಳನ್ನು ಇರಿಸಿ ನೋಡುವ ಮೊದಲಿನ ಕಥೆಗಳಾದ ಮಧ್ವ ವಿಜಯ, ನಿರ್ಗುಣ, ವಿಚ್ಛಿನ್ನ, ಪ್ರವೇಶದಂತಹ ಕಥೆಗಳಲ್ಲಿ ಖಾಸಗೀ ನಿರ್ಧಾರಗಳನ್ನು ಪಾತ್ರಗಳು ತೆಗೆದುಕೊಂಡರೂ ಸಾಮಾಜಿಕ ನೀತಿ ನಿಯಮಗಳ ದೊಡ್ಡ ಕ್ಯಾನ್ವಾಸಿನಲ್ಲಿ ಅದನ್ನು ಪರೀಕ್ಷಿಸುವುದಲ್ಲದೇ ಅದನ್ನು ಆ ಮಟ್ಟದಲ್ಲಿ ಇತರ ಪಾತ್ರಗಳೊಂದಿಗೆ ಚರ್ಚಿಸುವ ವಾಚ್ಯವನ್ನು ಗುರು ತೋರಿಸುತ್ತಾರೆ. ಆದರೆ ಶಕುಂತಳಾಕ್ಕೆ ಬರುವ ವೇಳೆಗೆ ಇದು ಇನ್ನಷ್ಟು ಖಾಸಗಿಯಾಗುತ್ತಾ ಹೋಗುತ್ತದೆ. ಹೀಗಾಗಿ ಬೀಜ, ಅಲಬಾಮಾದ ಅಪನವಾಯು, ದೇಜಾವೂ, ಕಥೆಗಳನ್ನು ಅವರು ಹೆಚ್ಚು ಖಾಸಗಿಯಾಗಿಸುತ್ತಲೇ ದೊಡ್ಡ ಸಾಮಾಜಿಕ ಕಡಿವಾಣಗಳು - ನಿಯಮಗಳನ್ನು ಕುಹಕದ ದೃಷ್ಟಿಯಿಂದ ನೋಡಲು ಪ್ರಾರಂಭಿಸುತ್ತಾರೆ. ’ಬಿಳಿಯ ಚಾದರ’ದ ವೇಳೆಗೆ ಈ ಕೊಂಡಿಗಳೆಲ್ಲ ಕಳಚಿಬಿದ್ದು ಏಕಾಂಗಿತನದ ಏಲಿಯೇಷನ್ನಿನ ತಾರಕಕ್ಕೆ ಗುರು ತಮ್ಮ ಪಾತ್ರಗಳನ್ನು ತಂದುಬಿಟ್ಟಿದ್ದಾರೆ.

’ಬಿಳಿಯ ಚಾದರ’ದಲ್ಲಿನ ಮುಖ್ಯ ಪಾತ್ರಗಳಾದ ಶ್ರೀಧರ, ರಶ್ಮಿ, ಬೆಟ್ಟಿ, ಘೂಗೆ, ನಾಗೇಶ, ಮತ್ತು ತಾಯಿಯರ ಪಾತ್ರಗಳನ್ನು ಪ್ರಾತಿನಿಧಿಕವಾಗಿ ನಾವು ತೆಗೆದುಕೊಂಡರೆ ಎಲ್ಲರೂ ಒಂದು ನಿಟ್ಟಿನ ಎಥಿಕಲ್ ಡೈಲೆಮಾಗಳನ್ನು ಎದುರಿಸುತ್ತಲೇ, ತಮ್ಮ ಸುತ್ತು ಸಮಾಜವೇ ಇಲ್ಲವೇನೋ ಅನ್ನುವಂತೆ ಖಾಸಗಿಯಾಗಿ ನಿರ್ಧಾರಗಳನ್ನು ಒಂದು ಅವ್ಯಕ್ತ ಸ್ವಾರ್ಥಪರತೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಧರ ಬೆಟ್ಟಿಯ ಸಂಬಂಧದಲ್ಲಿನ್ನಿನ ವ್ಯಾವಹಾರಿಕತೆ ಮತ್ತು ಅವರುಗಳ ನಡುವೆ ಬರುವ ಬೆಟ್ಟಿಯ ಬಸಿರನ್ನು ಉಳಿಸಬೇಕೋ ಇಲ್ಲವೋ ಅನ್ನುವ ಚರ್ಚೆ ಖಾಸಗೀ ಅನುಕೂಲತೆ ಮತ್ತು ನಂಬಿಕೆಗಳ ಆಧಾರವಾಗಿಯೇ ಇದೆ. ಆ ಬಸಿರನ್ನು ಉಳಿಸಬೇಕೆನ್ನುವ ಬೆಟ್ಟಿಯ ನಿರ್ಧಾರ ಸಂಬಂಧಗಳ ತುರ್ತಿನಿಂದಾಗಲೀ, ತನಗೊಂದು ಮಗು ಬೇಕೆಂಬ ತೀವ್ರತೆಯಿಂದಾಗಲೀ ಕೂಡಿಯೇ ಇಲ್ಲ. ಹಾಗೆಯೇ ಶ್ರೀಧರನಿಗೂ ಆ ಬಗ್ಗೆ ಒಂದು ಸ್ಪಷ್ಟ ನಿಲುವಿಲ್ಲ. ಆ ಮಗುವಿಗೆ ತಾನು ತಂದೆಯಾಗಲು ಸಿದ್ಧ ಎಂದು ಅವನು ಬೆಟ್ಟಿಗೆ ಹೇಳುವಾಗಲೂ ಅವನಿಗೆ ಆಂತರ್ಯದ ನಂಬುಕೆಗಳಿಲ್ಲ. ಅವಳು ತನ್ನ ಈ ಪ್ರಸ್ತಾಪವನ್ನು ಬೇಡವೆಂದರೂ ಮನಸ್ಸಿಗೆ ಏನೂ ಆಗಲಾರದೆಂಬ ವ್ಯಾವಹಾರಿಕತೆ ಆ ಪಾತ್ರದಲ್ಲಿ ಕಾಣಿಸುತ್ತದೆ. ಬೆಟ್ಟಿಯ ಪಾತ್ರವೂ ಒಂದು ನಂಬಿಕೆಯ ತೀವ್ರತೆಯ ಆಧಾರದ ಮೇಲೆ ನಿಂತಿರುವಂತೆ ನಮಗನ್ನಿಸುವುದಿಲ್ಲ.

ಶ್ರೀಧರ-ರಶ್ಮಿಯರ ತಾಯಿಯ ಪಾತ್ರದ ಬಗ್ಗೆ ನಮಗೆ ನೇರ ಪರಿಚಯವಾಗಗಿದ್ದರೂ ಆಕೆಯೂ ಸಮಾಜದ ಕೊಂಡಿಗಳನ್ನು ತೊರೆದು ತಮ್ಮದೇ ಕಂಫರ್ಟ್ ಜೋನಿನಲ್ಲಿ ತಮ್ಮ ಪರಿಷ್ಕಾರವನ್ನು ಕಂಡುಕೊಳ್ಳುತ್ತಾರೆ. ರಶ್ಮಿಯೂ ತನ್ನ ಸಾಫ್ಟ್-ವೇರ್ ಕೆಲಸ, ನಾಗೇಶನ ಜೊತೆಗಿನ ಸಂಬಂಧದ ನಿರ್ಲಿಪ್ತತೆಯ ನಡುವೆ ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಒಂದು ನಿಲುವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಶ್ರೀಧರನ ಮೆಡಿಕಲ್ ಜೀವನಕ್ಕೂ ಅವನ ಅವಳಿಯಾದ ರಶ್ಮಿಯ ಸಾಫ್ಟ್-ವೇರ್ ಜೀವನಕ್ಕೂ ಗುರು ಹಾಕುವ ಈ ಕೊಂಡಿ ಅವರ ಮಿಕ್ಕೆಲ್ಲ ಸಂಬಂಧಗಳಿಗಿಂತ ಬಲವಾದ ಕೊಂಡಿಯಗುತ್ತದೆ. ಆದರೆ ಆ ಕೊಂಡಿಯಲ್ಲೂ ಕಡೆಗೆ ನಮಗೆ ಕಾಣುವುದು ನಿರರ್ಥಕತೆಯೇ. 

ಮಿಂಚಿನಂತೆ ಬಂದು ’ಮೇರಾ ಭಾರತ್ ಮಹಾನ್’ ಅನ್ನುವ ಅಧ್ಯಾಯದಲ್ಲಿ ಮಾಯವಾಗುವ ನಾಗೇಶನ ಪಾತ್ರವೂ ಈ ಅರ್ಥಹೀನತೆಯನ್ನೇ ಪ್ರದರ್ಶಿಸುತ್ತದೆ. ಅವನು ಅಮೆರಿಕೆಗೆ ಯಾಕೆ ಬಂದ, ಹೇಗೆ ಕೆಲಸ ಮಾಡಿದ, ಯಾಕೆ ಕೆಲಸ ಕಳೆದುಕೊಂಡ, ಭಾರತಕ್ಕೆ ಯಾಕೆ ಮರುಳಿದ ಅನ್ನುವುದಕ್ಕೆಲ್ಲಕ್ಕೂ ಮೇಲಿಂದ ಮೇಲೆ ಕಾರಣಗಳು ಸಿಕ್ಕರೂ ಯಾವುದರಲ್ಲೂ ತೀವ್ರತೆ ನಮಗೆ ಕಾಣುವುದಿಲ್ಲ. 

ನಮಗೆ ಸಹಜವಾದ, ವಯಸ್ಸಾದ ಮುದಿ ’ದಂಪತಿ’ಗಳನ್ನು ಕಾರಿನಲ್ಲಿ ಕೂಡಿಸಿ ಆಸ್ಪತ್ರೆಗೆ ಒಯ್ಯುವ ಮಾನವೀಯ ಕ್ರಿಯೆಯ ಧನ್ಯತಾಭವವೂ ಹೇಗೆ ದಕ್ಕಲಾರದೆಂಬ ಸಿನಿಕ ದೃಷ್ಟಿಯನ್ನು ನಾವು ನಂಬುವ ರೀತಿಯಲ್ಲಿ ಸಮರ್ಥವಾಗಿ ಚಿತ್ರಿಸುವಲ್ಲಿ ಗುರು ಯಶಸ್ವಿಯಾಗುತ್ತಾರೆ.

ಹೀಗೆ ಸಮಕಾಲೀನ ’ಡೆವಲಪ್ಡ್’ ಬದುಕಿನ ಅರ್ಥಹೀನತೆಯನ್ನು ಚಿತ್ರಿಸುತ್ತಲೇ ಸಮಕಾಲೀನ ಬದುಕಿನ ಕಠೋರ ಅಣಕವಾಡನ್ನು ಆತ ನಮ್ಮ ಮುಂದಿಡುತ್ತಾರೆ. ಇದು ಅಮೆರಿಕದ ಸಾಮಾಜಿಕ ಪರಿಸರದಲ್ಲೇ ಆಗಬಹುದಾದ ಕಾದಂಬರಿ. ಇಲ್ಲಿನ ಪಾತ್ರಗಳೆಲ್ಲವೂ ಹೆಚ್ಚಿನಂಶ ಭಾರತೀಯ ಪಾತ್ರಗಳೇ. ಹೀಗಾಗಿ ಆ ಪಾತ್ರಗಳಿಗೆ ಅಮೆರಿಕದ ಸಮಾಜದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಸಾಮಾಜಿಕ ತುರ್ತು ಇಲ್ಲ. ಆದರೂ ಅವರುಗಳು ಅಂಥದೇ ನಿರ್ಧಾರಗಳನ್ನು ಸಹಜವೆನ್ನಿಸುವಂತೆ ತೆಗೆದುಕೊಳ್ಳುತ್ತಾರೆ. ಇದು ಈಗಿನ ತಲೆಮಾರು ಎದುರಿಸುತ್ತಿರುವ ಒಂಟಿತನದ ತಲ್ಲಣದ ಒಂದು ಮಜಲೇ. ಈ ಕಥೆ ಭಾರತದಲ್ಲಿಯೇ ಆಗಬಹುದಿತ್ತು. ಇಲ್ಲಿಯ ಪರಿಸರದಲ್ಲೇ ಗುರು ಇದನ್ನು ಸಮರ್ಥವಾಗಿ ಬರೆಯಲೂ ಬಹುದಿತ್ತು. ಆದರೆ ಅದನ್ನು ನಾವು ಒಂದು ಸಮಸ್ಯೆ ಎಂದು ಇನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗೆ ತಲುಪಿಲ್ಲವೇನೋ. ಹೀಗಾಗಿಯೇ ಅಮೆರಿಕದ ಪರಿಸರ ಈ ಕಥೆಗೆ ಮುಖ್ಯವಾಗುತ್ತದೆ.,

ಶಕುಂತಳಾ ಬಗ್ಗೆ ಬರೆಯುತ್ತಾ ನಾನು ಈ ಮಾತುಗಳನ್ನು ಹೇಳಿದ್ದೆ:

ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್‌ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ.

ಆದರೆ ಬಿಳಿಯ ಚಾದರದಲ್ಲಿ ಗುರು ನನ್ನ ಈ ಮಾತುಗಳ ಮೇಲೆ ಸೇಡು ತೀರಿಸಿಕೊಳ್ಳಲೋ ಏನೋ ಅನ್ನುವಂತೆ ಧನ್ವಂತರಿ, ಪ್ರಣಪಾಲಕ, ಪಾಳಯ, ಮೃದುಯಂತ್ರಿ, ತೊಡೆಮೇಲಿಗ [ಲ್ಯಾಪ್‍ಟಾಪ್], ಗೋಡೆ ಬೀದಿಯ ಸಾಪ್ತಾಹಿಕ [ವಾಲ್ ಸ್ಟ್ರೀಟ್ ಜರ್ನಲ್] ಇಂಥಹ ಪದಪ್ರಯೋಗಗಳನ್ನು ಮಾಡುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ನಾವು ಅದರ ಇಂಗ್ಲೀಶ್ ತರ್ಜುಮೆಯ ಶರಣು ಪಡೆಯಬೇಕಿರುವ ವ್ಯಂಗ್ಯವನ್ನು ಇಲ್ಲಿ ಗಮನಿಸಬೇಕಾಗಿದೆ. ಈ ಪದಪ್ರಯೋಗ ಯಾವುದೋ ಉದ್ದೇಶದಿಂದಲೇ ಗುರು ಮಾಡಿರಬೇಕು. ಆದರೆ ಅದೇನೆಂದು ನಮಗೆ ವೇದ್ಯವಾಗದೇ ಒಂದು ಗಿಮಿಕ್ಕಿನಂತೆಯೂ, ಕಾದಂಬರಿಯ ಗಂಭೀರತೆಗೆ ಧಕ್ಕೆಯಾಗುವಂತೆಯೂ ಇದೆ.

ಈ ಒಂದು ಆಕ್ಷೇಪಣೆಯನ್ನು ಹೊರತುಪಡಿಸಿದರೆ ಪುಸ್ತಕದಿಂದ ಪುಸ್ತಕಕ್ಕೆ ಗುರು ಅವರ ತೀವ್ರಗತಿಯ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ. ಏಲಿಯನೇಷನ್ ಅನ್ನು ಕನ್ನಡದ ಸಂದರ್ಭದಲ್ಲಿ ಅರ್ಥೈಸುವತ್ತ ಗುರುವಿನ ದೇಣಿಗೆ ಮಹತ್ವದ್ದು. ಇದೊಂದು ಇವರ ಬರವಣಿಗೆಗೇ ವಿಶಿಷ್ಟವಾದದ್ದೂ ಹೌದು. ಆದರೆ ಕನ್ನಡ ಸಾಹಿತ್ಯದ ದಿಕ್ಕನ್ನು ತಿರುಗಿಸುವ, ಒಂದಿಷ್ಟು ಗುದ್ದುವ ಶಕ್ತಿ ಇನ್ನೂ ಗುರು ಬರವಣಿಗೆಗೆ ಬಂದಿಲ್ಲ. ಆದರೆ ಮಧ್ಯಮವರ್ಗದ ತಲ್ಲಣಗಳು, ವಿದೇಶದಲ್ಲಿರುವ ತಲ್ಲಣಗಳು, ನಗರೀಕರಣದ, ಜಾಗತೀಕರಣದ ತಲ್ಲಣಗಳನ್ನು ಗುರು ಯಾವ ಪಾಪಪ್ರಜ್ಞೆಯೂ ಇಲ್ಲದೇ ಚಿತ್ರಿಸುತ್ತಾರೆ. ನವ್ಯದ ನಂತರ ಬಂದ ದಲಿತ, ಪ್ರಗತಿಪರ ಚಳುವಳಿಗಳು ಇಂಥ ತಲ್ಲಣಗಳಿಗೆ ಆಸ್ಪದವಿಲ್ಲದಂತೆ, ಈ ಪ್ರಯೋಗಗಳು ತುಚ್ಛ ಎನ್ನುವಂತೆ ನೋಡುತ್ತಿದ್ದ ಸಂದರ್ಭವನ್ನು ನಾವು ಈಗ ಮೀರಿದ್ದೇವೆ ಅನ್ನಿಸುತ್ತದೆ. ಒಟ್ಟಾರೆ ಗುರುವಿನ ಕೃತಿಗಳ ಗಂಭೀರ ಚರ್ಚೆಯಾಗುತ್ತಿದ್ದರೆ ಅದು ಇಂಥ ಒಂದು ಜಾಗತೀಕರಣದ ತಲ್ಲಣವನ್ನು ಕಡುಬಡವರಲ್ಲದವರು, ಗ್ರಾಮೀಣ ಪ್ರದೇಶದಲ್ಲಿ ಇಲ್ಲದವರು ಹೇಗೆ ಎದುರಿಸುತ್ತಾರೆ, ಅವರ ತಲ್ಲಣಗಳಿಗೂ ಹೇಗೆ ಮುಖ್ಯವಾದದ್ದು ಅನ್ನುವುದನ್ನ ನಿರೂಪಿಸುತ್ತದೆ. ಈ ನಿಟ್ಟಿನಲ್ಲಿ ಒಂದು ಸಾಚಾ ಧ್ವನಿಯನ್ನು ಗುರು ಒದಗಿಸಿಕೊಟ್ಟಿದ್ದಾರೆ. ಹೀಗಾಗಿ ಅವರು ಸಾಹಿತ್ಯದ ಪರಂಪರೆಯಲ್ಲಿ ಒಂದು ಮುಖ್ಯ ಕೊಂಡಿಯಾಗಿ ನಿಲ್ಲುತ್ತಾರೆ.