Tuesday, March 24, 2009

ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ

ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು. ಅದನ್ನು ಪತ್ರಕರ್ತರ ಶೈಲಿ ಅನ್ನಲು ಸಾಧ್ಯವಿಲ್ಲ, ಕಥನವೂ ಅಲ್ಲ, ಆಗಾಗ ತಮ್ಮ ಕಾಯಕದಿಂದ ಬ್ರೇಕ್ ಪಡೆಯಲು ಪ್ರಖ್ಯಾತ ವ್ಯಕ್ತಿಗಳು ಬರೆಯುವ ಕಾಲಂ ಕೂಡಾ ಅಲ್ಲ. ಆತ ಯಾವುದೇ ಬರವಣಿಗೆಯನ್ನು ಚರಿತ್ರೆಯ-ಸಂಶೋಧನೆಯ ಆಧಾರದ ಮೇಲೆ ಬರೆಯುತ್ತಾರೆ. ಆ ಬರವಣಿಗೆ ಕ್ರಿಕೆಟ್ಟಿನ ಬಗ್ಗೆ ಇರಬಹುದು, ಜನರ ಬಗ್ಗೆ ಇರಬಹುದು, ಅಥವಾ ಚರಿತ್ರೆಯೇ ಇರಬಹುದು - ಎಲ್ಲದರಲ್ಲೂ ಕೆಲವು ಕಥನಗಳು, ಮತ್ತು ಆದಷ್ಟೂ ಮಾಹಿತಿಯ ಆಧಾರದ ಮೇಲೆ ಅವರ ಬರವಣಿಗೆ ನಿಂತಿರುತ್ತದೆ. ಹೀಗಾಗಿಯೇ ರಾಮ್ ಭಿನ್ನ ವ್ಯಕ್ತಿಯಾಗಿ ನಮ್ಮ ಮುಂದೆ ನಿಂತಿದ್ದಾರೆ.

ಆಗಾಗ ಟೆಲಿವಿಷನ್ನಿನ ಪರದೆಯ ಮೇಲೆ ಯಾವುದೋ ರಾಜಕೀಯ ವಿಷಯದ ವಿಶ್ಲೇಷಣೆ ನಡೆಸುತ್ತಲೋ ಅಲ್ಲಿ-ಇಲ್ಲಿ ಯಾವುದಾದರೂ ವಿಷಯದ ಬಗ್ಗೆ ಬರೆಯುತ್ತಲೋ ಇರುವುದನ್ನು ನೀವು ಕಂಡಿರಬಹುದು. ಗಂಭೀರವಾದ ಅಕಾಡಮಿಕ್ ಬರಹಗಾರರಿಗಿರಬಹುದಾದ ಪ್ರಕಟಣಾ ಗೃಹಗಳಾದ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, ಪರ್ಮನೆಂಟ್ ಬ್ಲಾಕ್ ನಂತಹ ಸಂಸ್ಥೆಗಳು ತಮ್ಮ ಹಸ್ತಪ್ರತಿಗೆ ತಹತಹಿಸುವಂತೆ ಮಾಡಬಲ್ಲ ಆದರೂ ಪರಿಸರ-ಚರಿತ್ರೆಯ ಬಗ್ಗೆಯೇ ಗಂಭೀರವಾಗಿ ಬರೆದು ಅದನ್ನು ಮಾರಾಟಕ್ಕಿಳಿಸುವ ಶಕ್ತಿಯಿರುವ ಅಪರೂಪದ ಬರಹಗಾರ. ಹೀಗಾಗಿ ಅವರು ಕ್ರಿಕೆಟ್ಟಿನ ಬಗ್ಗೆ ಬರೆಯುವಾಗಲೂ ಅಷ್ಟೇ ಪಾಂಡಿತ್ಯಪೂರ್ಣವಾಗಿ ಬರೆಯಬಲ್ಲರು.

ಹೀಗೆ ಚರಿತ್ರೆ ಬಗ್ಗೆ ಶ್ರದ್ಧೆ ಮತ್ತು ಕ್ರಿಕೆಟ್ಟಿನ ಬಗ್ಗೆ ತೀವ್ರ ಆಸಕ್ತಿಯಿರುವುದರಿಂದ ಅವರು ಕ್ರಿಕೆಟ್ಟಿನ ಬಗ್ಗೆ ಬರೆಯುವಾಗ ಭಿನ್ನವಾಗಿಯೂ ಗಮ್ಮತ್ತಿನಿಂದಲೂ ಬರೆಯುತ್ತಾರೆ. ನಾನು ಐಐಎಂನಲ್ಲಿ ಸೆಮಿನಾರುಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕೈಗೊಂಡಿದ್ದ ಕಾಲದಲ್ಲಿ ಆತನನ್ನು "ತೀರಥ್ ಗುಪ್ತಾ ಸ್ಮಾರಕ" ಭಾಷಣವನ್ನು ಕೊಡಲು ಆಹ್ವಾನಿಸಿದ್ದೆ. ಆಗ ರಾಮ್ "ಒಬ್ಬ ವ್ಯಕ್ತಿ ಎಷ್ಟು ಸೇವಿಸಬೇಕು" [How much should a person consume] ಎನ್ನುವ ಅದ್ಭುತ ಲೆಕ್ಚರ್ ಕೊಟ್ಟಿದ್ದರು. 

ಅವರು ಬಂದ ಅವಕಾಶವನ್ನು ಉಪಯೋಗಿಸಿ ನಾನು ವಿದ್ಯಾರ್ಥಿಗಳೊಂದಿಗೆ ಒಂದೆರಡು ಘಂಟೆಕಾಲ ಕ್ರಿಕೆಟ್ಟಿನ ಬಗ್ಗೆಯೂ ಒಂದು ಸಂವಾದವನ್ನು ಮಾಡಲು ತಯಾರಿದ್ದಾರೆಯೇ ಎಂದು ಕೇಳಿದ್ದೆ. ದೇಶಾದ್ಯಂತ ಕ್ರಿಕೆಟ್ಟು ಎಷ್ಟು ಜನಪ್ರಿಯವೋ ನಮ್ಮ ಕ್ಯಾಂಪಸ್ಸಿನಲ್ಲೂ ಅದು ಅಷ್ಟೇ ಜನಪ್ರಿಯವಾಗಿತ್ತು ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಜೊತೆಗೆ ಐಐಎಂ - ಅಹಮದಾಬಾದಿನಲ್ಲಿ ಓದಿ ಕಾಮೆಂಟರಿಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಹರ್ಷಾ ಬೊಗ್ಲೆಯ ಬಗ್ಗೆ ಜನ ಮಾತಾಡುತ್ತಿರುತ್ತಾರೆ. ಹೀಗಾಗಿ ಐಐಎಂ (ಕಲಕತ್ತಾ) ದಿಂದ ತನ್ನ ಉನ್ನತ ವಿದ್ಯೆಯನ್ನು ಸಂಪಾದಿಸಿದ ಮತ್ತೊಬ್ಬ ಪಂಡಿತನ ಜೊತೆಗಿನ ಸಂವಾದ ವಿದ್ಯಾರ್ಥಿಗಳಿಗೆ ಹಿಡಿಸಬಹುದು ಅನ್ನುವುದು ನನ್ನ ವಿಚಾರವಾಗಿತ್ತು. ರಾಮ್ ಸಹ ತಕ್ಷಣ ಒಪ್ಪಿದರು. ವಿದೇಶದಿಂದ ಬಂದಿದ್ದ ಕೆಲ ವಿದ್ಯಾರ್ಥಿಗಳಿಗೂ ಕ್ರಿಕೆಟ್ಟಿನ ಬಗ್ಗೆ ಒಂದು ಪರಿಚಯವಾಗುತ್ತದೆಂದು ವಿನಿಮಯ ಕಾರ್ಯಕ್ರಮದಡಿ ಬಂದಿದ್ದ ಎಲ್ಲ ವಿದ್ಯಾರ್ಥಿಗಳಿಗೂ ರಾಮ್ ಜೊತೆಗಿನ ಸಂವಾದಕ್ಕೆ ಆಹ್ವಾನ ಕಳಿಸಿದ್ದೆವು. ಹೆಚ್ಚಾಗಿ ಸಾಕರ್ ಪ್ರಿಯರಾದ ಈ ಯೂರೋಪಿಯನ್ ವಿದ್ಯಾರ್ಥಿಗಳಿಗೆ ಭಾರತೀಯ ಬದುಕಿನ ಒಂದು ಅಂಶವನ್ನು ಅರ್ಥಮಾಡಿಕೊಳ್ಳಲು ಅನುವಾಗಬಹುದು ಅನ್ನುವುದು ನಮ್ಮ ವಿಚಾರವಾಗಿತ್ತು. ಆದರೆ ಈ ವಿಚಾರದಲ್ಲಿ ರಾಮ್ ಆಲೋಚನೆ ಭಿನ್ನವಾಗಿತ್ತು ಅನ್ನಿಸುತ್ತದೆ. ಆತ ಎಷ್ಟೋ ಅಂತರರಾಷ್ಟ್ರೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪಳಗಿರುವ ಕುಳ. ಹೀಗಾಗಿ ಈ ವಿದೇಶೀ ವಿದ್ಯಾರ್ಥಿಗಳಿಗೆ ತನ್ನ ಭಾಷಣದಲ್ಲಿ ಹೆಚ್ಚಿನ ಆಸಕ್ತಿ ಇರಲಾರದು ಅನ್ನುವುದನ್ನು ಮೊದಲೇ ಕಂಡುಕೊಂಡಿದ್ದರನ್ನಿಸುತ್ತದೆ. ಹೀಗಾಗಿ ತಾವು ಮಾತನಾಡುವುದಕ್ಕೆ ಮೊದಲೇ ಆ ಕೋಣೆಯಿಂದ ಯಾರು, ಯಾವಾಗ ಬೇಕಿದ್ದರೂ ಎದ್ದು ಹೋಗಬಹುದೆನ್ನುವುದಾಗಿ ಹೇಳಿದರು. ಮೇಲಾಗಿ ಕ್ರಿಕೆಟ್ಟು ತಮ್ಮ ಅಭಿಪ್ರಾಯದಲ್ಲಿ ಸಾಂಸ್ಕೃತಿಕ ಮಹತ್ವಕ್ಕಿಂತ ಸ್ಥಳೀಯ ಮಹತ್ವದ್ದೆನ್ನುವುದನ್ನ ತಾವು ನಂಬುವುದರಿಂದ ಇದನ್ನು ಸಾಂಸ್ಕೃತಿಕ ವಿನಿಮಯ ಎಂದು ಭಾವಿಸಿ ಬಂದವರಿಗೆ ಬೋರ್ ಹೊಡೆಯಬಹುದು ಎಂದು ಹೇಳಿ, ಒಂದು ಸ್ಥಳೀಯ ಕಥೆಯೊಂದಿಗೇ ತಮ್ಮ ಸಂವಾದವನ್ನು ಪ್ರಾರಂಭಿಸಿದರು. 

ತಮ್ಮ ಪುಸ್ತಕದ ಪ್ರಾರಂಭದಲ್ಲಿ ವಿವರಿಸಿರುವ ಕರ್ನಾಟಕ ಮೊದಲಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದ ಚಾರಿತ್ರಿಕ ಕ್ಷಣವನ್ನು ಮೆಲುಕು ಹಾಕುತ್ತಾ ಆ ಸಂವಾದ ಪ್ರಾರಂಭವಾಯಿತು - ಜಿ.ಆರ್. ವಿಶ್ವನಾಥ್ ವಿಕೆಟ್ಟಿನ ಮುಂದೆ ಚೆಂಡಿನ ದಾರಿಯಲ್ಲಿ ಕಾಲೊಡ್ಡಿದ್ದರೂ ಅವರನ್ನು ನಾಟ್ ಔಟ್ ಕರಾರು ಮಾಡಿದ ಅಂಪೈರಿಂಗ್ ಬಗ್ಗೆ ಮತ್ತು ಅಜಿತ್ ವಡೇಕರ್ ಎರಡನೇ ರನ್ನನ್ನು ಪಡೆಯಲು ಓಡಿ ಜಾರಿಬಿದ್ದು ಔಟಾದ ಘಟನೆಯನ್ನು ವಿವರಿಸಲು ಪ್ರಾರಂಭಿಸುತ್ತಿದ್ದಂತೆಯೇ ಅರ್ಧ ಕೋಣೆ ಖಾಲಿಯಾಯಿತು. ಅಲ್ಲಿಂದ ಮುಂದಕ್ಕೆ ರಾಮ್ ಇಡೀ ಕೋಣೆ ಅಲುಗಾಡದಂತೆ ಒಂದೂವರೆ ಘಂಟೆಕಾಲ ಕ್ರಿಕೆಟ್ಟಿನ ಕಥವನ್ನು ಮುಂದುವರೆಸಿದರು. ಹೀಗೆ ಮಾತನಾಡುತ್ತಾ ತಾವು ಸಮಕಾಲೀನ ಭಾರತೀಯ ಚರಿತ್ರೆಯ ತಮ್ಮ ಪುಸ್ತಕಕ್ಕೆ ಸಂಶೋಧನೆ [ಇದು ಈಗ ಇಂಡಿಯಾ ಆಫ್ಟರ್ ಗಾಂಧಿ ಅನ್ನುವ ಪುಸ್ತಕವಾಗಿ ಪ್ರಕಟಗೊಂಡಿದೆ] ಮಾಡುತ್ತಿದ್ದಾಗ ಹಿಂದೂ ಜಿಮ್ಖಾನಾ ಟೀಮಿನ ಪರವಾಗಿ ಬಾಂಬೆ ಪೆಂಟಾಂಗ್ಯುಲರ್‌ನಲ್ಲಿ ಆಡುತ್ತಿದ್ದ ಬಾಲೂ ಪಾಲವಂಕರ್‌ನನ್ನು ಅಂಬೇಡ್ಕರ್ ಬಗ್ಗೆ ನಡೆಸುತ್ತಿದ್ದ ರಾಜಕೀಯ ಸಂಶೋಧನೆಯ ನಡುವೆ ಕಂಡುಕೊಂಡ ಕಥೆಯನ್ನು ವಿವರಿಸಿದರು. ಆ ಘಟನೆಯ ಫಲವಾಗಿ ಭಾರತದ ಸ್ವಾತಂತ್ರ ಚಳುವಳಿಯ ಕಾಲದಲ್ಲಿನ ಕ್ರಿಕೆಟ್ಟನ್ನು ವಿವರಿಸುವ ‘Corner of a Foreign Field’ ಪುಸ್ತಕ ಮೂಲಸೆಲೆಗಳನ್ನು ವಿವರಿಸಿದರು. 

ನಾನು ಈಗ ಚರ್ಚಿಸುತ್ತಿರುವ ಪುಸ್ತಕವೂ ಕ್ರಿಕೆಟ್ಟಿನ ಪ್ರಾಂತೀಯ ಬಳವಣಿಗೆಯಿಂದಲೇ ಪ್ರಾರಂಭವಾಗುತ್ತದೆ. ಅಂತ್ಯದಲ್ಲಿ - ಎಲ್ಲ ಕ್ರಿಕೆಟ್ ಬರಹಗಾರರೂ ಬರೆಯುವಂತೆ ಅವರು ತಮ್ಮದೇ ಆತ್ಮೀಯ ಟೀಮನ್ನೂ ಹೆಸರಿಸಿ ಪುಸ್ತಕವನ್ನು ಮುಗಿಸುತ್ತಾರೆ. ಐಐಎಂನಲ್ಲಿ ರಾಮ್ ಜೊತೆಗಿನ ಸಂವಾದದ ನಂತರವೇ ಕ್ರಿಕೆಟ್‌ನ ಪ್ರಾಂತೀಯ ಸೆಲೆಗಳು ಎಷ್ಟು ಗಹನ ಅನ್ನುವುದನ್ನು ನಾನು ಕಂಡುಕೊಂಡೆ. ರಾಮ್ ಹಾಗೆಯೇ ನನಗೂ ಅನೇಕಬಾರಿ ಯಾವ ರಣಜಿ ಟೀಮಿನ ಸಮರ್ಥನೆ ಮಾಡಬೇಕು ಅನ್ನುವುದನ್ನು ನಿರ್ಧರಿಸಬೇಕಾದ ಕಷ್ಟದ ಕ್ಷಣಗಳು ಎದುರಾಗಿವೆ. ನಾನು ಬೆಳೆದದ್ದು ಕರ್ನಾಟಕದಲ್ಲಿ, ಓದಿದ ಭಾಷೆ ಕನ್ನಡ, ಕೆಲಸದ ಸಾಕಷ್ಟು ಕಾಲ ಕಳೆದದ್ದು ಹೈದರಾಬಾದಿನಲ್ಲಿ - ಅಲ್ಲಿನ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ತುಂಬಾ ಆಸಕ್ತಿ ಬೆಳೆಸಿಕೊಂಡು ಅದರ ಅಧ್ಯಯನ ಮಾಡಿದವನು, ಹಾಗೂ ಜೀವನದಲ್ಲಿನ ಹೆಚ್ಚಿನ ಕಾಲವನ್ನು ಹೊಟ್ಟೆಪಾಡಿಗಾಗಿ ಗುಜರಾತ್‌ನಲ್ಲಿ ಕಳೆಯುತ್ತಿರುವವನು. ಎಷ್ಟಾದರೂ ನನ್ನ ಅನ್ನ [ಅಮುಲ್] ಬೆಣ್ಣೆ [ನರ್ಮದಾ-ಸಾಬರ್‌ಮತಿ] ನೀರು ಕುಡಿದು ಜೀವಿಸುತ್ತಿರುವವನು - ಹಾಗೂ ಬೆಂಗಳೂರಿಗೂ ಅಹಮದಾಬಾದಿಗೂ ನನ್ನನ್ನು ಬೆಸೆದು ನನ್ನ ಖಾಲೀ ಸಮಯವನ್ನು ಕಬಳಿಸಿದ ರೈಲ್ವೇ ಟೀಮನ್ನು ನಾನು ಹೇಗೆ ಮರೆಯಲಿ? ಅಥವಾ ನಮ್ಮ ಸಂಸ್ಥೆಯ ಅಡ್ಮಿಷನ್ ಟೆಸ್ಟಿಗಾಗಿ ಹೈದರಾಬಾದಿನ ಆಲ್ ಸೈಂಟ್ಸ್ ಸ್ಕೂಲಿನಲ್ಲಿ ಅಜರುದ್ದೀನ್, ವೆಂಕಟಪತಿ ರಾಜು, ಅರ್ಶದ್ ಅಯೂಬ್‌ ಇದ್ದ ಫೋಟೋವನ್ನು ದಿಟ್ಟಿಸುತ್ತಾ ನಿಂತದ್ದನ್ನು - ಈ ಶಾಲೆ ಹೈದರಾಬಾದಿನ ಶಾರದಾ ಮಂದಿರವೇ ಎಂದು ಯೋಚಿಸುತ್ತ ನಿಂತದ್ದನ್ನು ಹೇಗೆ ಮರೆಯಲಿ? 

ರಾಮ್ ಮತ್ತು ನನ್ನ ತಲೆಮಾರಿನವರಿಗೆ ಕ್ರಿಕೆಟ್ಟಿನ ಯಾನ ಬದಲಾವಣೆಯ ಯಾನವಾಗಿದೆ. ಕ್ರಿಕೆಟ್ ಆಡುವ ರೀತಿಯಲ್ಲೂ, ಅದನ್ನು ನೋಡುವ ರೀತಿಯಲ್ಲೂ ಈಗ ಮೂಲಭೂತ ಬದಲಾವಣೆಗಳಾಗಿವೆ. ಈಗಿರುವ ತಾಂತ್ರಿಕ ಪರಿಕರಗಳೂ ಅದ್ಭುತವಾದವು. (ಆಗ ಚಿನ್ನಸ್ವಾಮಿ ಕಾರ್ಯದರ್ಶಿಯಾಗಿದ್ದ) ಕೆ.ಎಸ್.ಸಿ.ಎ ಸ್ಟೇಡಿಯಂನಲ್ಲಿ ಆಡಿದ ಮೊದಲ ಟೆಸ್ಟ್ ಮ್ಯಾಚನ್ನು ನೋಡಲು ಹೋಗಿದ್ದದ್ದು ನನಗೆ ನೆನಪಿದೆ. ಗ್ಯಾಲರಿಯ ಸೀಜನ್ ಟಿಕೆಟ್ಟಿಗೆ ೨೫ ರೂಪಾಯಿಗಳು. ಮನೆಯಿಂದ ಸೈಕಲ್‌ನಲ್ಲಿ ಹೋಗಿ ಸ್ಟೇಡಿಯಂನಲ್ಲಿ ಪಾರ್ಕ್ ಮಾಡಿದರೆ ಹೊರಬರುವುದು ಕಷ್ಟವಾಗಬಹುದೆಂದು ಇನ್‌ಫೆಂಟ್ರಿ ರಸ್ತೆಯಲ್ಲಿದ್ದ ಯಾರದೋ ಗೆಳೆಯನ-ಗೆಳೆಯನ ಮನೆಯಲ್ಲಿ ಸೈಕಲ್ ನಿಲ್ಲಿಸಿ ಆರೂವರೆಗೇ ಒಳಕ್ಕೆ ಹೋಗವ ಲೈನಿನಲ್ಲಿ ನಿಂತು ಸ್ಕೋರ್ ಬೋರ್ಡಿನ ನೆರಳಿನಲ್ಲಿ ಕೂಡಲು ಜಾಗ ಸಿಗಲಿ ಎಂದು ಆಶಿಸುತ್ತ ಬೆವರಿದ್ದು ಇನ್ನೂ ಸ್ಪಷ್ಟವಾಗಿ ನೆನಪಿದೆ, ಈ ರೀತಿಯ ಪ್ರಯಾಸ ಕ್ರಿಕೆಟ್ ಬಿಟ್ಟರೆ, ರಾಜ್‍ಕುಮಾರ್ ಚಿತ್ರ ಬಿಡುಗಡೆಯಾದ ಶುಕ್ರವಾರಗಳಿಗೆ ಮಾತ್ರ ಸೀಮಿತವಾಗಿತ್ತೇನೋ. (ಗ್ಯಾಲರಿಯ ಸ್ಕೋರ್‍ ಬೋರ್ಡಿನ ಕೆಳಗಿನಿಂದ ಬಾಲ್ ಸ್ಪಿನ್ ಆಗುವುದು ಕಾಣಿಸುತ್ತದೆ ಅಂತ ಗೆಳೆಯನೊಬ್ಬ ಹೇಳಿದ್ದ!!) ಆದರೆ ಆದದ್ದೇ ಬೇರೆ. ಗುಂಪಿನ ನೂಕುನುಗ್ಗಲಲ್ಲಿ ಸಿಕ್ಕಿಬದ್ದೆ. ಚೆಪ್ಪಲಿಗಳು ಕಳೆದು ಹೋದುವು. ಒಳಕ್ಕೆ ಹೋಗಲು ಆಗಲಿಲ್ಲ. ಆದರೆ, ಲಂಚ್ ವೇಳೆಗೆ ಬ್ಲಾಕ್‌ನಲ್ಲಿ ಮಾರುತ್ತಿದ್ದ ಟಿಕೆಟ್ಟಿನ ದರಗಳು ವಿಪರೀತವಾಗಿ ಇಳಿದದ್ದರಿಂದ ನನ್ನ ಗ್ಯಾಲರಿಯ ಟಿಕೆಟ್ಟನ್ನು ಯಾರಿಗೋ ಮಾರಿ, ಸ್ಟಾಂಡಿನ ೮೦ ರೂಪಾಯಿಗಳ ಕುರ್ಚಿ ಟಿಕೆಟ್ಟನ್ನು ಕೊಂಡು ಲಂಚ್ ನಂತರದ ಮ್ಯಾಚನ್ನು ನೋಡಿದ್ದೆ. ಪಟೌಡಿ ಆ ಮ್ಯಾಚಿನ ನಾಯಕತ್ವ ವಹಿಸಿದ್ದರು, ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆ ಮ್ಯಾಚನ್ನು ಆಡಲಾಗಿತ್ತು ಅನ್ನುವುದನ್ನು ಬಿಟ್ಟರೆ ಆ ಬಗ್ಗೆ ನನಗೆ ಯಾವುದೇ ನೆನಪೂ ಇಲ್ಲ!

ರಾಮ್ ಅವರಂತೆ ನಾನು ಕ್ರಿಕೆಟ್ಟಿನ ಅಧ್ಯಯನ ಮಾಡಿದವನಲ್ಲ. ಆದರೆ ಆಟವನ್ನು ಆಸಕ್ತಿಯಿಂದ ಕಂಡವನು. ಹೀಗಾಗಿ ಮ್ಯಾಚುಗಳ ತಾರೀಖುಗಳು ವಿವರಗಳೂ ನನಗೆ ಹೆಚ್ಚು ನೆನಪಿರುವುದಿಲ್ಲ. ಆದರೆ ರಾಮ್ ಅವರ ಈ ಪುಸ್ತಕವನ್ನು ಓದಿದಾಗ ಈಗಿನ ಕ್ರಿಕೆಟ್ಟಿಗಿಂತ ಮುಂಚಿನ ಕಾಲದ ಆದರೆ ನಮ್ಮದೇ ಜೀವನಕಾಲದ ಒಂದು ಭಿನ್ನ ಯಾತ್ರೆಯನ್ನು ಮತ್ತೆ ಕೈಗೊಂಡಂತೆ ಅನ್ನಿಸಿತು. ಕೆ.ಸತ್ಯನಾರಾಯಣ ಅವರ "ನಮ್ಮ ಪ್ರೀತಿಯ ಕ್ರಿಕೆಟ್" ಪ್ರಬಂಧ ಕೂಡಾ ಇಂಥದೇ ನೆನೆಪುಗಳತ್ತ ನಮ್ಮನ್ನು ಒಯ್ಯುತ್ತದೆ. ಕರ್ನಾಟಕ ರಣಜಿಯ ಫೈನಲ್‍ಗೆ ಸೇರಿದ ಕಥೆ ನನಗೆ ಚೆನ್ನಾಗಿ ನೆನಪಿದೆ. ಮುಂಬೈ ಟೀಮನ್ನ ಸೆಮಿ ಫೈನಲ್‌ನಲ್ಲಿ ಕರ್ನಾಟಕ ಸೋಲಿಸಿತ್ತು. ರಣಜಿ ಪ್ರಶಸ್ತಿ ಬಂದಾಗ ಸುಧಾದಲ್ಲಿ ಕರ್ನಾಟಕದ ಸಾಧನೆಯ ಬಗ್ಗೆ ದೊಡ್ಡ ಮುಖಪುಟ ಲೇಖನ ಬಂದಿತ್ತು. ಕರ್ನಾಟಕಕ್ಕೆ ರಣಜಿ ಬಂದದ್ದು ಭಾರತಕ್ಕೆ ವರ್ಲ್ಡ್ ಕಪ್ ಬಂದಷ್ಟೇ ಮಹತ್ವದ [ಬೆಂಗಳೂರಿನ] ಸುದ್ದಿಯಾಗಿತ್ತು. ಆಗ ರಣಜಿ ಮ್ಯಾಚುಗಳು ಆಡುತ್ತಿದ್ದ ರೀತಿ, ಅಂತರ ರಾಷ್ಟ್ರೀಯ ಕ್ರಿಕೆಟ್ಟಿನ ಕೊರತೆ ಈ ಎರಡೂ ಕಾರಣಗಳಿಗಾಗಿ ದೇಶೀಯ ಕ್ರಿಕೆಟ್ಟೂ ಮಹತ್ವದ ಸುದ್ದಿಯನ್ನು ಮಾಡುತ್ತಿತ್ತು. ಕುಂದೆರನ್ ಅನ್ನುವ ಕರ್ನಾಟಕದ ಆಟಗಾರ ಜನ ಕೇಳಿದಾಗಲೆಲ್ಲಾ ಸಿಕ್ಸರ್ ಬಾರಿಸಬಲ್ಲವವಾಗಿದ್ದ ಅನ್ನುವ ಕಥೆಯನ್ನು ನಾನು ಕೇಳಿದ್ದೆ. ಒಂದು ಕಾಲದಲ್ಲಿ ಭಾರತದ ವಿಕೆಟ್ ಕೀಪರುಗಳೆಲ್ಲಾ ಕರ್ನಾಟಕದಿಂದಲೇ ಬರುವವರು ಎಂದು ನಾನು ಭಾವಿಸಲು ಕಾರಣವಿತ್ತು. ಮೊದಲಿಗೆ ಕಿರ್ಮಾನಿ ಮತ್ತು ಬೆನ್ಸನ್ ಅಂಡ್ ಹೆಡ್ಜಸ್ ವರ್ಲ್ಡ್ ಸೀರೀಸಿನ ಭಾಗವಾಗಿದ್ದ ಕರ್ನಾಟಕದ ಸದಾನಂದ್ ವಿಶ್ವನಾಥ್. ರಾಮ್ ಪುಸ್ತಕದಲ್ಲಿ ಆತನ ಪ್ರಸ್ತಾಪವಿಲ್ಲ. ಆತ ಬಂದಷ್ಟೇ ವೇಗವಾಗಿ ಕ್ರಿಕೆಟ್ಟಿನ ಲೋಕದಿಂದ ಮಾಯವಾಗಿಬಿಟ್ಟರು.

ರಾಮ್ ಅವರ ಈ ಪುಸ್ತಕ ಅವರ ಇತರ ಪುಸ್ತಕಗಳಷ್ಟೇ ಆಸಕ್ತಿಕರವಾಗಿದೆ. ಮೊದಲ ಭಾಗದಲ್ಲಿ ಅವರು ಕ್ರಿಕೆಟ್ಟಿನ ರಾಜ್ಯಗಳ ಬಗ್ಗೆ ಮಾತನಾಡುತ್ತಾರೆ. ಎರಡೆನೆಯ ಭಾಗದಲ್ಲಿ ಕ್ರಿಕೆಟ್ಟಿಗರ ಬಗ್ಗೆ. ಕ್ರಿಕೆಟ್ಟಿನ ಬಗ್ಗೆ ಬರೆಯುವುದು ಸುಲಭದ ಮಾತಲ್ಲ. ಆಡುವುದು ಅದಕ್ಕಿಂತಲೂ ಕಷ್ಟ. ಹೀಗಾಗಿ ಯಾವುದೇ ಪುಸ್ತಕ ಕ್ರಿಕೆಟ್ ಪ್ರಿಯರಿಗೆ ಪೂರ್ಣ ಸಮಾಧಾನ ಕೊಡುತ್ತದೆ ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ. ನಾವೆಲ್ಲರೂ ನಮ್ಮ ಕುರ್ಚಿಯಿಂದಲೇ ಭಾರತ ತಂಡದ ನಾಯಕತ್ವವನ್ನು ವಹಿಸುವ ನಮ್ಮದೇ ಥಿಯರಿಗಳನ್ನು ಹೇಳುವ, ಎಲ್ಲರಿಗೂ ಉಪದೇಶ ಕೊಡುವ (ಆದರೆ ಬಹುಶಃ ಬ್ಯಾಟು ಹಿಡಿಯಲು ಹಿಂಜರಿವ) ಎಕ್ಸ್ ಪರ್ಟುಗಳಾಗಿರುವುದರಿಂದ ನಮ್ಮನ್ನು ತೃಪ್ತಿ ಪಡಿಸುವುದು ಸರಳವಾದ ವಿಷಯವೇನೂ ಅಲ್ಲ. ಹೀಗಾಗಿ ರಾಮ್ ಗುಹಾರ ಈ ಪುಸ್ತಕ ನಾನು ಜೀವಿಸಿದ ಚರಿತ್ರೆಯ ತುಣುಕುಗಳನ್ನು ನನಗೇ ಹಿಂದಿರುಗಿ ಕೊಟ್ಟದ್ದರಿಂದ ಪ್ರಿಯವಾದ ಪುಸ್ತಕವಾಯಿತು. ನಾನು ಅನುಭವಿಸಿದ ಕೆಲ ಅದ್ಭುತ ಕ್ಷಣಗಳು, ಕೇಳಿ ಮಾತ್ರ ಗೊತ್ತಿದ್ದ ಹಲವು ಜನರ ಬಗೆಗಿನ ವಿಚಾರಗಳು ಒಟ್ಟಿಗೆ ಮೆಲುಕುಹಾಕಲು ಈ ಪುಸ್ತಕ ಸಹಾಯ ಮಾಡಿತು. ಚಿಕ್ಕಂದಿನಲ್ಲಿ ಬಂಧುಮಿತ್ರರ ಮನೆಯಲ್ಲಿ ಸಿಗುತ್ತಿದ್ದ ಸ್ಪೋರ್ಟ್ಸ್ ಸ್ಟಾರ್, ಸ್ಪೋರ್ಟ್ಸ್ ವೀಕ್ ಗಳನ್ನು ಗೆಂಜಿ ತಂದು ಅದರಲ್ಲಿನ ಫೋಟೋಗಳನ್ನು ಕತ್ತರಿಸಿ ಕ್ರಿಕೆಟ್ಟಿನ ಆಲ್ಬಂ ಮಾಡುವುದು ನನ್ನ ಪ್ರೀತಿಯ ಕಸುಬಾಗಿತ್ತು. 

ಸಾಲದ್ದಕ್ಕೆ ನಮ್ಮ ಸಂಬಂಧಿಕರಲ್ಲಿ ಕರ್ನಾಟಕದ ರಣಜಿ ಟೀಮನ್ನು ಪ್ರತಿನಿಧಿಸಿದ್ದ ಸದಾಶಿವನ್ ಸಹ ಒಬ್ಬರಾಗಿದ್ದರು. ಆತ ಬ್ಯಾಟಿಂಗ್ ಮಾಡುತ್ತಿದ್ದರೋ ಬೌಲರೋ ತಿಳಿಯದು. ನಮಗೆ ತಿಳಿದದ್ದು ಇಷ್ಟೇ.. ಆತನ ಮದುವೆಗೆ ಕ್ರಿಕೆಟ್ ಪಟುಗಳು ಬರುತ್ತಾರೆ ಅನ್ನುವ ಕಾರಣಕ್ಕಾಗಿಯೇ ನಾವೆಲ್ಲಾ ಹೋಗಿ ಅಲ್ಲಿಗೆ ಬಂದಿದ್ದ ಪ್ರಸನ್ನ, ಚಂದ್ರಶೇಖರ್ ಮತ್ತು ವಿಶ್ವನಾಥ್ ಅವರ ಆಟೋಗ್ರಾಫ್ ಪಡೆದದ್ದು ನೆನಪಿದೆ (ಈಗ ಆ ಅಟೋಗ್ರಾಫುಗಳು ಎಲ್ಲಿವೆಯೋ ತಿಳಿಯದು). ರಾಮ್ ತಮ್ಮ ಒಂದೊಂದು ರಾಜ್ಯದ ಅಧ್ಯಾಯವನ್ನು ಮುಗಿಸುತ್ತಾ, ತನ್ನ ಖಾಸಗೀ ಅಭಿಪ್ರಾಯದ ಸರ್ವಕಾಲದ ಹನ್ನೊಂದು (ಮತ್ತೊಂದು) ಟೀಮನ್ನೂ ಹೆಸರಿಸುತ್ತಾರೆ. ಆ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿರಬಹುದಾದರೂ ರಾಮ್ ಕೊಡುವ ಸಮಜಾಯಿಶಿಯನ್ನು ನಾವು ಹೆಚ್ಚಿನಂಶ ಒಪ್ಪಬೇಕಾಗುತ್ತದೆ. ಜೊತೆಗೆ ಭಾರತೀಯ ಬೌಲಿಂಗಿನ ಪ್ರಮುಖ ಅಸ್ತ್ರ ಸ್ಪಿನ್ ಅನ್ನುವ ರಾಮ್ ವಾದವನ್ನು ಒಪ್ಪದಿರುವವರೂ ಇರಬಹುದಾಗಲೀ ನಾನು ಅವರ ವಾದವನ್ನು ಒಪ್ಪಲು ತಯಾರಿದ್ದೇನೆ.

ರಾಮ್ ಗುಹಾರ ಅನೇಕ ಪುಸ್ತಕಗಳ ಹಾಗೆಯೇ ಈ ಪುಸ್ತಕವೂ ಓದಲು ನನಗೆ ಖುಷಿಯಾಯಿತು ಹಾಗೂ ಇತರನ್ನೂ ಈ ಪುಸಕವನ್ನು ಓದುವಂತೆ ಪ್ರೋತ್ವಾಹಿಸಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ಲೇಖನವನ್ನು ಮುಗಿಸುವ ಮುನ್ನ ಈ ಅದ್ಭುತ ಆಟದ ನನ್ನದೇ ಕೆಲವು ಖಾಸಗೀ ಭಿತ್ತಿಗಳನ್ನು ನಾನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ನನ್ನ ಮನಸ್ಸಿನಲ್ಲಿದ್ದ ಕೆಲ ಸುಳ್ಳು ನಂಬಿಕೆಗಳು: 


ಅಜಿತ್ ವಾಡೇಕರ್ ಹೆಚ್ಚಿನ ಬಾರಿ ನಲವತ್ತರ ಆಜುಬಾಜಿನ ಸ್ಕೋರಿನಲ್ಲಿ - ಮುಖ್ಯವಾಗಿ ೪೪ರಲ್ಲಿ ಔಟಾಗುತ್ತಿದ್ದರು - ಹಾಗೂ ಅದನ್ನು ದಾಟಿದರೆ ಅವರು ಚೆನ್ನಾಗಿ ಸ್ಕೋರ್ ಮಾಡುತ್ತಿದ್ದರು ಎಂದು ನಾನು ನಂಬಿದ್ದೆ. (ಆದರೆ ೪೦ರ ಆಜುಬಾಜಿನಲ್ಲಿ ಅವರು ೮ ಬಾರಿ ಔಟಾಗಿದ್ದರು, ೪೪ರ ಸ್ಕೋರಿನಲ್ಲಿ ಎರಡು ಬಾರಿ ಮಾತ್ರ ಔಟಾಗಿದ್ದರು, ೧೪ಬಾರಿ ೫೦ಕ್ಕಿಂತ ಹೆಚ್ಚು ರನ್ ಬಾರಿಸಿದ್ದರು. ಸೆಂಚುರಿ ಮಾತ್ರ ಕೇವಲ ಒಂದು)

ಚಂದ್ರಶೇಖರ್ ಅವರ ವ್ಯಕ್ತಿಗತ ಸ್ಕೋರು ೧, ನಾಟ್ ಔಟ್ ಅತ್ಯಧಿಕ ಬಾರಿ ಆಗಿತ್ತು ಎಂದು ನಂಬಿದ್ದೆ [ಇದೂ ನಿಜವಲ್ಲ. ೮ ಬಾರಿ ಅವರು ೧, ನಾಟೌಟಾಗಿದ್ದರು, ೭ ಬಾರಿ ೧ ರನ್ನಿಗೆ ಔಟಾಗಿದ್ದರು. ಹಾಗೂ ೩೮ ಬಾರಿ ಅವರು ಶೂನ್ಯ ಸಂಪಾದಿಸಿದ್ದರು - ಅದರಲ್ಲಿ ೧೬ಬಾರಿ ಅವರು ಅಜೇಯ ಶೂನ್ಯವನ್ನು ಸಂಪಾದಿಸಿದ್ದರು!!]

ಸಿನೆಮಾದಲ್ಲಿ ನಟಿಸಿದ್ದ ಕ್ರಿಕೆಟಿಗರು: ರಾಮ್ ಪ್ರಸ್ತಾಪ ಮಾಡುವ ಸಲೀಂ ದುರಾನಿ ಅಲ್ಲದೇ - ಗಾವಸ್ಕರ್, ಸಂದೀಪ್ ಪಾಟೀಲ್, (ಕಿರ್ಮಾನಿ ಎಂಬ ಖಳನಾಯಕನ ಪಾತ್ರದಲ್ಲಿ) ಕಿರ್ಮಾನಿ, ಅಜೆಯ್ ಜಡೇಜಾ, ಹಾಗೂ ಪಂಜರದ ಗಿಳಿಗಳು ಅನ್ನುವ ಕನ್ನಡದ ಸಿನೇಮಾದಲ್ಲಿ ವಿಶ್ವನಾಥ್. (ಈಚೆಗೆ ಮೀರಾಬಾಯಿ ನಾಟ್ ಔಟ್ ನಲ್ಲಿ ಕುಂಬ್ಳೆ, ಇಕ್ಬಾಲ್‍ನಲ್ಲಿ ಕಪಿಲ್ ದೇವ್).

ಸಲೀಲ್ ಅಂಕೋಲಾ ಅನ್ನುವ ಮುಂಬೈ ಆಟಗಾರ ಟಿವಿ ನಟನಾಗಿ ಬಹಳಷ್ಟು ಕಾಲ ಕೆಲಸ ಮಾಡಿದ. ನವಜ್ಯೋತ್ ಸಿದ್ಧು ಮನರಂಜನೆಯಲ್ಲಿ ತನ್ನ ವೃತ್ತಿಯನ್ನು (ಕಾಮೆಂಟರಿ ಅಲ್ಲದೇ) ಪುಟ್ಟತೆರೆಯಲ್ಲಿ ಕಾಣಿಸಿಕೊಂಡ.

ನನ್ನ ಖಾಸಗೀ ಹತ್ತು ಕ್ರಿಕೆಟ್ ಸಂದರ್ಭಗಳು (ಕೆಲವು ಹಿತಕರ, ಕೆಲವು ಕಹಿ, ಕೆಲವು ರಣಜಿ, ಕೆಲವು ಟೆಸ್ಟ್, ಕೆಲವು ಒಡಿಐಗಳವು)

. ೧೯೮೨ರಲ್ಲಿ ರಣಜಿಯ ಸೆಮಿ ಫೈನಲ್ ಮ್ಯಾಚಿನಲ್ಲಿ ಮುಂಬೈ ಸೋಲುತ್ತಿದ್ದಾಗ ಗವಾಸ್ಕರ್ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ್ದು. ಬೆಂಗಳೂರಿನ ಪ್ರೇಕ್ಷಕರು ‘ಸ್ನೇಹ’ಮಯಿಗಳಾಗಿರಲಿಲ್ಲ ಎನ್ನುವುದಕ್ಕೆ ವಿರುದ್ಧವಾಗಿ ಗವಾಸ್ಕರ್ ಬಳಸಿದ ತಂತ್ರ ಇದು! ಇನ್ನಿಂಗ್ಸ್ ಸೋಲು ತನ್ನೆದುರು ನಿಂತಾಗ ಆ ಅವಮಾನವನ್ನು ತಡೆಯಲು ಆತ ಬಲಗೈ ಆಟಕ್ಕೆ ಮರಳಿದರೂ ಇದು ಕೆಟ್ಟ ಆಟಗಾರಿಕೆಯಾಗಿತ್ತು. ಮ್ಯಾಚನ್ನು ಉಳಿಸುವ ರನ್ನುಗಳನ್ನು ಆತ ಪಡೆದದ್ದು ವಿಶ್ವನಾಥ್ ಬೌಲಿಂಗ್ ಮಾಡಿದ ಓವರಿನಿಂದ! ನಾನು ಖುದ್ದಾಗಿ ನೋಡಿದ ಅತೀ ಕಹಿ ವರ್ತನೆ ಇದೇ ಆಗಿತ್ತು.

. ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ರವಿ ಶಾಸ್ತ್ರಿಗೆ ಆಡಿ ಕಾರ್ ದೊರೆತು, ಇಡೀ ಭಾರತದ ಟೀಮು ಅದರ ಮೇಲೆ ಕುಳಿತು ಗ್ರೌಂಡಿನಲ್ಲಿ ಸುತ್ತಾಡಿದ್ದು. ಆ ನಂತರ ಜನರ ಕೋಪಕ್ಕೆ ತುತ್ತಾಗಿಯೂ ಆಟ ಮುಂದುವರೆಸಿ ಕಡೆಗೂ ನಿವೃತ್ತಿ ಘೋಷಿಸಿದ್ದು, ಎಲ್ಲರಿಗೂ ಪ್ರಿಯನಾದ ಕಾಮೆಂಟೇಟರ್ ಆಗಿ ಅವರು ಪಡೆದ ಅದ್ಭುತ ಮರುಹುಟ್ಟು.

. ಬೆಂಗಳೂರಿನಲ್ಲಿ ವರ್ಲ್ಡ್ ಕಪ್ ಸೆಮಿ ಫೈನಲ್‌ನಲ್ಲಿ ಆಮೀರ್ ಸೊಹೇಲ್ ವೆಂಕಟೇಶ್ ಪ್ರಸಾದ್ ಚೆಂಡನ್ನು ಬೌಂಡರಿಗೆ ಚಚ್ಚಿ ಪ್ರತೀ ಬಾಲಿಗೂ ಇದೇ ಗತಿ ಎನ್ನುವಂತೆ ಕೈ ಮಾಡಿದ್ದು. ಮುಂದಿನ ಚೆಂಡಲ್ಲಿ ಅವರ ವಿಕೆಟ್ಟನ್ನು ಕ್ಲೀನ್ ಬೌಲ್ಡ್ ಮಾಡಿದ ಪ್ರಸಾದ್ ಕೋಪ!

. ೧೯೯೬ರಲ್ಲಿ ಬೆಂಗಳೂರಿನಲ್ಲಿ ನಡೆದ ಟೈಟನ್ ಕಪ್ ಮ್ಯಾಚಿನಲ್ಲಿ ಸೋಲಿನ ಅಂಚಿನಿಂದ ಸ್ಥಳೀಯ ಆಟಗಾರರಾದ ಕುಂಬ್ಳೆ ಮತ್ತು ಶ್ರೀನಾಥ್ ಎಂಟನೇ ವಿಕೆಟ್ಟಿನ ನಿಲುವಿನಿಂದಾಗಿ ಗೆಲುವು ಸಂಪಾದಿಸಿದ್ದು. ಟಿವಿಯಲ್ಲಿ ಕುಂಬ್ಳೆ ಮತ್ತು ಶ್ರೀನಾಥರ ತಾಯಂದಿರು ಕೂತು ಉಗುರು ಕಚ್ಚುತ್ತಾ ರನ್ನೆಣಿಸುತ್ತಿದ್ದ ಚಿತ್ರ ಬಿತ್ತರಿಸುತ್ತಿದ್ದದ್ದು. ಆ ಮ್ಯಾಚಿನಲ್ಲಿ ಆಡುತ್ತಿದ್ದ ಹನ್ನೊಂದು ಜನರಲ್ಲಿ ಆರು ಆಟಗಾರರು ಕರ್ನಾಟಕದವರಾಗಿದ್ದರು - ಸೋಮಸುಂದರ್, ಸುನಿಲ್ ಜೋಷಿ, ದ್ರಾವಿಡ್, ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್.

. ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಬಾರದೆಂದು ಪ್ರತಿಭಟಿಸಿ ಶಿವಸೇನೆ ದೆಹಲಿಯ ಫಿರೋಜ್‍ಷಾ ಕೋಟ್ಲಾ ಪಿಚ್ಚನ್ನು ಅಗೆದಿಟ್ಟದ್ದು. ಅದಾದ ನಂತರ ಆದ ಸರಣಿಯಲ್ಲಿ, ಚೆನ್ನೈನಲ್ಲಿ ನಡೆದ ಟೆಸ್ಟ್ ಮ್ಯಾಚಿನಲ್ಲಿ ಕುರ್ಚಿಯಂಚಿನ ತೀವ್ರತೆಯ ನಡುವೆ ಮ್ಯಾಚನ್ನು ಗೆದ್ದ ಪಾಕಿಸ್ತಾನ, ಹಾಗೂ ಅವರನ್ನು ಅಭಿನಂದಿಸಲು ಇಡೀ ಸ್ಟೇಡಿಯಂ ಎದ್ದು ನಿಂತು ವಾಸಿಂ ಅಕ್ರಂ ಮತ್ತು ತಂಡ ವಿಕ್ಟರಿ ಲ್ಯಾಪ್ ತೆಗೆದುಕೊಳ್ಳುವಷ್ಟೂ ಕಾಲ ಚಪ್ಪಾಳೆ ತಟ್ಟಿದ್ದು. ಶಿವಸೇನೆಯ ಅತಿರೇಕಕ್ಕೆ ಕೊಟ್ಟ ಅತ್ಯುತ್ತಮ ಉತ್ತರ.

. ವರ್ಲ್ಡ್ ಕಪ್ ಸೆಮಿಫೈನಲ್‌ನಲ್ಲಿ ಕೊಲ್ಕತಾದಲ್ಲಿ ಜನ ಬಾಟಲಿಗಳನ್ನು ಎಸೆದು ಮ್ಯಾಚಿಗೆ ಭಂಗವುಂಟುಮಾಡಿದ್ದು. ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ಆ ಮ್ಯಾಚನ್ನು ಶ್ರೀ ಲಂಕಾಕ್ಕೆ ದೇಣಿಗೆ ನೀಡಿದ್ದು. ವಿನೋದ್ ಕಾಂಬ್ಳಿ ಕಣ್ಣೀರಿಡುತ್ತಾ - ಉಮ್ಮಳಿಸುತ್ತಾ ಪೆವಿಲಿಯನ್‌ಗೆ ಮರಳಿದ್ದು.

. ೧೯೮೬ರ ಆಸ್ಟ್ರೇಲಿಯಾ ವಿರುದ್ಧದ ಟೈ ಆದ ಟೆಸ್ಟ್. 

. ಭಾರತದ ವಿರುದ್ಧದ ೧೯೮೬ ಶಾರ್ಜಾ ಕಪ್ಪಿನಲ್ಲಿ ಜಾವೇದ ಮಿಯಾಂದಾದ್ ಹೊಡೆದ ಕೊನೆಯ ಬಾಲ್ ಸಿಕ್ಸರ್. ಅದರಿಂದ ಗೆದ್ದ ಪಾಕ್. ಬಾಲನ್ನು ಎಸೆದದ್ದು ಚೇತನ್ ಶರ್ಮಾ. ಫುಲ್ ಟಾಸ್. ಆಗ್ಗೆ ಒಡಿಐಗಳಲ್ಲಿ ಹ್ಯಾಟ್ರಿಕ್ ತೆಗೆದಿದ್ದ ಏಕೈಕ ಕ್ರಿಕೆಟರ್ ಆಗಿದ್ದ ಶರ್ಮಾರ ಎಲ್ಲ ಸಾಧನೆಗಳೂ ಈ ಒಂದು ಘಟನೆಯಿಂದಾಗಿ ಹಿನ್ನೆಲೆಗೆ ಸರಿದು ಬಿಟ್ಟಿತು.

. ಪಾರ್ಲ್ ನಲ್ಲಿ ಜಿಂಬಾಬ್ವೆಯ ವಿರುದ್ಧ ಟೈ ಆದ ಓಡಿಐ ಮ್ಯಾಚು. ರಾಬಿನ್ ಸಿಂಗ್ ಎಷ್ಟೋ ಪ್ರಯತ್ನಮಾಡಿದರೂ ಕಡೆಯ ಬಾಲಿನ ರನ್ ಔಟ್ ಮ್ಯಾಚಿನ ಗೆಲುವಿನಿಂದ ವಂಚಿಸಿತು.

೧೦. ೨೦೦೨ರಲ್ಲಿ ಭಾರತ-ಇಂಗ್ಲೆಂಡಿನ ನ್ಯಾಟ್‍ವೆಸ್ಟ್ ಟ್ರೋಫಿಯ ವಿಜಯ. ಗೆಲ್ಲಲು ಸಾಧ್ಯವಿಲ್ಲವೆನ್ನಿಸಿದ ಸ್ಕೋರನ್ನು ಯುವರಾಜ್ ಮತ್ತು ಕೈಫ್ ಅವರ ಅದ್ಭುತ ಬ್ಯಾಟಿಂಗು ಎಳೆದು ತಂದರೀತಿ.. ಮತ್ತು ಗಂಗೂಲಿ ತಮ್ಮ ಟೀಷರ್ಟನ್ನು ತೆಗೆದು ತಿರುಗಿಸಿದ್ದು.

ಮೇಲಿನ ಯಾದಿಯಲ್ಲಿ ಎಲ್ಲಕ್ಕಿಂತ ಮುಖ್ಯವಾದ ನೋಟ - ಕಪಿಲ್ ದೇವ್ ಪ್ರೂಡೆನ್ಷಿಯಲ್ ವರ್ಲ್ಡ್ ಕಪ್ ಎತ್ತಿದ್ದರ ಪ್ರಸ್ತಾಪವಿಲ್ಲ! 

ಈ ಎಲ್ಲವನ್ನೂ ಬರೆಯುತ್ತಿರುವಾಗ ನನ್ನ ಐಐಎಂ ಗೆಳೆಯರಾದ ಶ್ರೀನಿವಾಸನ್ ಬರೆದ "Cricket, Colonialism and the Capital Market: Winning Does Not Matter but Losing Hurts". ಎನ್ನುವ ಅದ್ಭುತ ಪೇಪರೂ ನೆನಪಾಗುತ್ತದೆ. ಆತ ಇದನ್ನು ನಿಜಕ್ಕೂ ಬರೆದರೋ ಅಥವಾ ಇದು ಒಂದು spoof ಆಗಿರಬಹುದೋ ಗೊತ್ತಿಲ್ಲ. ಆದರೂ ಇದು ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಸರಿಯಾದ ಪೇಪರು. ಅದರ ಸಾರಾಂಶ ಇಂತಿದೆ:

"ಆಸ್ತಿಯ ಬೆಲೆಕಟ್ಟುವಿಕೆಯಲ್ಲಿ ಅಚ್ಚುಕಟ್ಟಾದ ಹಾಗೂ ಎಲ್ಲರೂ ನಂಬುವಂತಹ ವಿವರಣೆಗಳ ಕೊರತೆ ಇದೆ ಅನ್ನುವುದಕ್ಕೆ ಸಾಕಷ್ಟು ಪುರಾವೆಗಳು ಕಾಣಸಿಗುತ್ತಿವೆ. ಆಸ್ತಿಯ ಬೆಲೆಯನ್ನು ರೂಪಿಸುವಲ್ಲಿ ಮನಸ್ಸಿನ ಸ್ಥಿತಿ [ಮೂಡ್], ಕೃಷ್ಣ-ಶುಕ್ಲ ಪಕ್ಷಗಳು, ಸೂರ್ಯ ಪ್ರಕಾಶ ಎಲ್ಲದರ ಕೈವಾಡವೂ ಇದೆ ಎನ್ನಲಾಗಿದೆ. ಈ ಪೇಪರಿನಲ್ಲಿ ಭಾರತ ಆಡಿರುವ ಓಡಿಐ ಮ್ಯಾಚುಗಳಿಗೂ ಶೇರು ಮಾರುಕಟ್ಟೆಗೂ ಇರುವ ಸಂಬಂಧವನ್ನು ಪರಿಶೀಲಿಸಿದ್ದೇವೆ. ಭಾರತದ ಟೀಮ್ ಸೋತಾಗಲೆಲ್ಲಾ ಮಾರುಕಟ್ಟೆ ಕುಸಿಯುತ್ತದೆ. ವಸ್ತುಸ್ಥಿತಿಯನ್ನು ಪರಿಶೀಲಿಸಿದಾಗ ಭಾರತದಲ್ಲಿ ಸೋಲುವುದರಿಂದ ಮಾರ್ಕೆಟ್ಟಿಗೆ ಆಗುವ ನಷ್ಟ ವಿದೇಶದಲ್ಲಿ ಸೋಲುವುದರಿಂದ ಆಗುವ ನಷ್ಟಕ್ಕಿಂತ ಹೆಚ್ಚು. ಇದಲ್ಲದೇ ಚಾರಿತ್ರಿಕ ಕಾರಣಗಳೂ ಇಲ್ಲಿ ನಮಗೆ ಕಾಣಸಿಗುತ್ತಿವೆ - ಭಾರತವನ್ನು ಆಳಿದ ‘ಕಾಲೋನೈಸರ್ಸ್’ ಕೈಯಲ್ಲಿ ಸೋಲುವುದು ಹೆಚ್ಚಿನ ನಷ್ಟವನ್ನುಂಟುಮಾಡುತ್ತದೆ. ಅದೇ ಅವರಿಂದ ಆಳಲ್ಪಟ್ಟ ಇತರೆ ದೇಶಗಳಿಗೆ ಸೋತಾಗ ಹೆಚ್ಚಿನ ನಷ್ವ ಮಾರುಕಟ್ಟೆಯಲ್ಲಿ ಆಗುತ್ತಿರುವಂತಿಲ್ಲ."

ಬಾದರಾಯಣ ಸಂಬಂಧ ಎನ್ನುವುದು ಇದಕ್ಕೇ ಏನೋ!!

No comments:

Post a Comment