ದೇಶಕಾಲ ಪತ್ರಿಕೆಗಾಗಿ ಮಾಡಿದ ಅವಲೋಕನ
ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ.
"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."
ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ.
ಗುರುವಿನ ಮೊದಲ ಪುಸ್ತಕ ನಿರ್ಗುಣವನ್ನ ಒಂದು ಮಹತ್ವದ ಡೆಬ್ಯು - ಅದ್ಭುತವಾದ ಮೊದಲ ಪುಸ್ತಕ - ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಬಹುಶಃ ಎಲ್ಲ ಹೊಸ ಲೇಖಕರಂತೆ ಗುರು ತಮ್ಮದೇ ಧ್ವನಿಯನ್ನೂ ವ್ಯಕ್ತಿತ್ವವನ್ನೂ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಸಂಕಲನದಲ್ಲಿ ಗುರು ತಮ್ಮ ಕಾಳಜಿಗಳನ್ನೂ ಕಥನ ಶೈಲಿಯನ್ನೂ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಿರ್ಗುಣದಲ್ಲಿರುವ ಕಥೆಗಳು ಒಳಗಿರುವ ತಹತಹವನ್ನೆಲ್ಲಾ ಕಕ್ಕಬೇಕೆನ್ನುವ ಅತೀ ಬರವಣಿಗೆಯ ಕಥೆಗಳೆನ್ನಿಸುತ್ತವೆ. ಈ ಅತೀ ಬರವಣಿಗೆ ಮತ್ತು ಕೆಲಮಟ್ಟಿಗೆ ’ಕಾಳಜಿ’ಗಳ ಕೃತಕತೆ ಓದುಗ ವಲಯವನ್ನು [ಕಥಾಸ್ಪರ್ಧೆಯ ತೀರ್ಪುಗಾರರು, ವಿಮರ್ಶಕರು, ಬರವಣಿಗೆಯನ್ನು ಗಮನಿಸಬೇಕಾದ ಸಂಪಾದಕರು, ಸಂಪಾದಕರಿಗೆ ಓಲೆಯನ್ನು ಬರೆಯಬಹುದಾದ ಎಕ್ಟಿವಿಸ್ಟ್ ಓದುಗರು, ಹೀಗೆ] ಮನಸ್ಸಿನಲ್ಲಿ ಇಟ್ಟು ಬರೆದಾಗ ಉಂಟಾಗುತ್ತದೆ. ಬಹುಶಃ ಲೇಖಕರಾಗಿ ನಾವೆಲ್ಲರೂ ಈ ಪ್ರಕ್ರಿಯೆಯ ಮೂಲಕವೇ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಅನ್ನಿಸುತ್ತದೆ. ಈ ವಿಕಸನದ ಪ್ರಕ್ರಿಯೆಯಲ್ಲಿ ಎಲ್ಲೋ ಬೇರೊಬ್ಬರ ಅಭಿಪ್ರಾಯ ಹೇಗೆ ಬರಬಹುದು ಅನ್ನುವುದಿಕ್ಕಿಂತ ತನಗೆ ಏನು ಹೇಳಬೇಕಾಗಿದೆ ಅನ್ನುವ ಘಟ್ಟಕ್ಕೆ ಬಂದಾಗಲೇ ಲೇಖಕನ ಮೂಲಭೂತ ಶೈಲಿ ಮತ್ತು ಕಾಳಜಿಗಳು ತೆರೆದುಕೊಳ್ಳುತ್ತವೆಯೇನೋ.
ಒಬ್ಬ ಲೇಖಕ ಆ ಮೊದಲ ಘಟ್ಟದಿಂದ ಎರಡನೆಯ ಘಟ್ಟಕ್ಕೆ ಎಷ್ಟು ಬೇಗ ಸೀಮೋಲ್ಲಂಘನ ಮಾಡಬಹುದೋ ಅಷ್ಟುಬೇಗ ಸಾರಸ್ವತ ಲೋಕ ಆತನನ್ನು ಗಮನಿಸುತ್ತದೆ. ಆದರೆ ಆ ಗಮನವನ್ನು ಸೆಳೆಯಲು ಇಂಥ ಸೀಮೋಲ್ಲಂಘನ ಮಾಡಿದ ಲೇಖಕನಲ್ಲಿ ಮೂಲಭೂತವಾದ ಸೃಜನಶೀಲತೆ ಮತ್ತು ನಿಜವಾದಂತಹ ನಂಬಿಕೆಗಳಿರಬೇಕು. ಎಷ್ಟೋ ಲೇಖಕರು ಈ ಸೀಮೋಲ್ಲಂಘನ ಮಾಡಲಾರದೆಯೇ ಮೊದಲ ಘಟ್ಟದಲ್ಲಿಯೇ ತಮ್ಮ ಮೆಚ್ಚುಗೆಯನ್ನು ಹೊರಪ್ರಪಂಚದಿಂದ ಬಯಸುತ್ತಲೇ ’ಜನಪ್ರಿಯ’ರಾಗುವ ನೆಲೆಯಲ್ಲಿ ನಿಂತುಬಿಡುತ್ತಾರೆ - ಈ ಸಾಲಿನಲ್ಲಿ ನನಗೆ ತಕ್ಷಣ ಮನಸ್ಸಿಗೆ ತಟ್ಟುವ ಲೇಖಕ ನಾಗತಿಹಳ್ಳಿ ಚಂದ್ರಶೇಖರ. ನಾಗತಿಹಳ್ಳಿಗೆ ಭಾಷೆಯ ಮೇಲಿನ ಪ್ರಭುತ್ವವೂ ಇತ್ತು, ಜೀವನಾನುಭವದ ಭಿನ್ನತೆಯ ದೊಡ್ಡ ಬುತ್ತಿಯೂ ಇತ್ತು, ಆದರೆ ನಾಗತಿಹಳ್ಳಿ ಈ ಸೀಮೋಲ್ಲಂಘನ ಮಾಡದೆಯೇ ಬೇರೊಂದು ದಾರಿಯನ್ನು ಹಿಡಿದರು. ಗುರು ತಮ್ಮ ಶಕುಂತಳಾ ಮತ್ತು ಬಿಳಿಯ ಚಾದರ ಪುಸ್ತಕಗಳ ಮೂಲಕ ಸಾಹಿತ್ಯಿಕವಾಗಿ ಆ ಸೀಮೋಲ್ಲಂಘನವನ್ನು ಮಾಡಿದ್ದಾರೆ.
ಹೀಗೆ ಅವರು ತಮ್ಮ ಸೃಜನಶೀಲಲೋಕದಲ್ಲಿ ಈ ಸೀಮೋಲ್ಲಂಘನವನ್ನು ಸಾಧಿಸಿದ್ದರೂ ಅವರ ’ವೈದ್ಯ ಮತ್ತೊಬ್ಬ’ ಒಬ್ಬ ಲೇಖಕನ ಮೊದಲ ಕೃತಿಯ ಎಲ್ಲ ಮಿತಿಗಳನ್ನೂ ಒಳಗೊಂಡಿದೆ. ಅವರ ಪ್ರಬಂಧಗಳಲ್ಲಿ ಅನೇಕ ಗಂಭೀರ ಕಾಳಜಿಗಳಿವೆಯಾದರೂ ಅವುಗಳ ಚರ್ಚೆಯನ್ನು ಗುರು ಏರಿಸಬೇಕಾದ ಎತ್ತರಕ್ಕೆ ಏರಿಸದೆಯೇ ಬಿಟ್ಟುಬಿಡುತ್ತಾರೆ. ಒಂದು ಥರದಲ್ಲಿ ಗುರುವಿನ ವೃತ್ತಿಯಾದ ವೈದ್ಯಕೀಯರಂಗ [ವೈದ್ಯ] - ಹಾಗೂ ಪ್ರವೃತ್ತಿಯ ಕಲೆ-ಸಾಹಿತ್ಯದ [ಇನ್ನೊಬ್ಬ] ಬಗ್ಗೆ ಬರೆಯುತ್ತಾ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲಾಗದ ದ್ವಂದ್ವದಲ್ಲಿ ಗುರು ಇದ್ದಾರಾದರೂ, ಒಂದೊಂದೇ ಬಿಡಿ ಲೇಖನವನ್ನು ಓದಿದಾಗ ಅವರು ಒಂದು ತಕ್ಷಣದ ನಿಲುವನ್ನು ತೆಗೆದುಕೊಂಡು ಒಂದು ತೀರ್ಮಾನವನ್ನೂ ಕೊಟ್ಟುಬಿಡುತ್ತಿರುವಂತೆ ನಮಗೆ ಕಾಣಿಸುತ್ತದೆ. ಒಟ್ಟಾರೆ ಅವರ ತಲ್ಲಣ ಮಾರುಕಟ್ಟೆಯ ನೀತಿ ಹೀನ ಲಾಭಕೇಂದ್ರಿತ [ಅ]ಸಿದ್ಧಾಂತದ ಬಗ್ಗೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅದಕ್ಕೆ ಸಮಾಧಾನವನ್ನು ಎಡಪಂಥೀಯರು ಮಾರುಕಟ್ಟೆಯಾಚೆಯ ಸರಕಾರೀ ರಂಗ ’ಸ್ಟೇಟ್’ನಲ್ಲಿ ಕಂಡುಕೊಂಡು ಮಾರುಕಟ್ಟೆಯನ್ನು ತಿರಸ್ಕರಿಸುವ ನಿಲುವನ್ನೂ ಗುರು ಒಪ್ಪುತ್ತಿರುವಂತೆ ಕಾಣುವುದಿಲ್ಲ. ಹೀಗಾಗಿ ಸಿದ್ಧಾಂತವೇ ಇಲ್ಲದ ಮಾರುಕಟ್ಟೆಯಲ್ಲಿಯೇ ಅವರು ಎಥಿಕಲ್ ಪ್ರವೃತ್ತಿಯನ್ನು ಕಂಡುಕೊಳ್ಳಬೇಕೆಂಬ ತೀರ್ಮಾನವನ್ನು ಮಾಡಿ ಅದಕ್ಕೆ ದಾರಿಯನ್ನು ಹುಡುಕುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಸಫಲರಾಗದೆಯೇ ಚಡಪಡಿಸುತ್ತಿರುವಂತೆ ಕಾಣುತ್ತಾರೆ.
ಒಂದು ಥರದಲ್ಲಿ, ಗುರುವಿಗೆ ಸಮಸ್ಯೆ ಏನೆಂಬುದು ಗೊತ್ತು, ಅದಕ್ಕೆ ಅವರದೇ ತಕ್ಷಣ ಉತ್ತರವನ್ನೂ ಅವರು ಕಂಡುಕೊಂಡಿದ್ದಾರೆ - ಆದರೆ ಆ ಉತ್ತರ ಸಮಸ್ಯೆಯ ಸಂದರ್ಭಕ್ಕೆ ಸಮಂಜಸವಾದದ್ದೇ ಅಲ್ಲವೇ ಅನ್ನುವ ದ್ವಂದ್ವವನ್ನು ಅವರು ಪರಿಷ್ಕರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅಷ್ಟೇ ಅಲ್ಲ ಅವರ ’ಪ್ರಿಸ್ಕ್ರಿಪ್ಷನ್’ಗಳು ಕನ್ವಿಂಸಿಂಗ್ ಆಗಿಲ್ಲ. ಅವರ ಪ್ರಬಂಧಗಳ ಪ್ರಯೋಗವನ್ನು ಮೇಲಿನ ಸೀಮೋಲ್ಲಂಘಾನವನ್ನು ಹುಡುಕುತ್ತಿರುವ ಪ್ರಯೋಗಗಳಾಗಿಯೇ ನಾವು ನೋಡಬೇಕಾಗಿದೆ. ಹೀಗಾಗಿಯೇ ಅವರು ದಂತವೈದ್ಯನ ಕ್ಲಿನಿಕ್ಕನ್ನೂ, ಅವನ ತಲ್ಲಣವನ್ನೂ, ವೈದ್ಯಕೀಯರಂಗದಲ್ಲೂ ಮೆಕ್‍ಡೊನಲ್ಡ್ ಥರದ ಸಮರೂಪತೆಯನ್ನೂ ತರಬಹುದಾದ ಆಶಯವನ್ನು ಅವರು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಸಮಸ್ಯೆಯ ಪದರಗಳು ಅತೀ ಜಟಿಲವಾಗಿರುವಾಗ ಅದನ್ನು ಚರ್ಚಿಸುವುದೇ, ಬಿಡಿಸಿನೋಡುವುದೇ ಅದರ ಸಮಾಧಾನದತ್ತ ಒಂದು ಹೆಜ್ಜೆ ಅನ್ನುವುದನ್ನು ಗುರು ಮನಗಂಡಾಗ, ಹಾಗೂ ಪ್ರತಿಯೊಂದಕ್ಕೂ ಈಗಿನಿಂದೀಗಲೇ ಸಮಾಧಾನ ನೀಡಬೇಕೆಂಬ ತುರ್ತನ್ನು ಗುರು ಮೀರಿದಾಗ ಅವರು ಅವರ ವೈದ್ಯ ಮತ್ತೊಬ್ಬನ - ಸೀಮೋಲ್ಲಂಘನ ಮಾಡುತ್ತಾರೆ.
ಗುರುವಿನ ಕೃತಿಗಳ ಹಿನ್ನೋಟವನ್ನು ನಾವಿಟ್ಟುಕೊಂಡರೆ ಅವರು ನಿರ್ಗುಣದಲ್ಲಿ ಈ ರೀತಿಯ ಸೀಮೋಲ್ಲಂಘನಕ್ಕೆ ತಯಾರಿ ಮಾಡುತ್ತಿರುವುದು ನಮಗೆ ಕಾಣುತ್ತದೆ. ಈ ಕಥೆಗಳ ಕಾಲಘಟ್ಟದಲ್ಲಿ ಎಷ್ಟು ಭಾರತದಲ್ಲಿ ಬರೆದವು, ಎಷ್ಟು ಕಥೆಗಳು ಅವರು ವಿದೇಶಕ್ಕೆ ಹೋಗಿ ಅಲ್ಲಿನ ಜೀವನವನ್ನು ನೋಡಿದ ನಂತರ ಬರೆದವು ಅನ್ನುವುದು ನನಗೆ ತಿಳಿಯದು. ಆದರೆ ಗುರು ಅವರ ಕಥೆಗಳ ಸಂದರ್ಭ ಭಾರತದಿಂದಾಚೆ ಹೋದ ಕೂಡಲೇ ಒಂದು ವಿಶಿಷ್ಟ ಪ್ರತಿಭೆಯನ್ನು ತೋರುವುದನ್ನು ನಾವು ನೋಡಬಹುದು. ಅವರ ಮಧ್ವ ವಿಜಯದಂತಹ ಕಥೆಗಳು ವಿಫಲಗೊಂಡಂತೆ ಅನ್ನಿಸುವುದು ಬಹುಶಃ ಅವು ಗುರುವಿನ ವೈಯಕ್ತಿಕ ಅನುಭವ ಕ್ಷೇತ್ರಕ್ಕಿಂತ ದೂರವಾಗಿರುವುದರಿಂದಲೇ ಇರಬಹುದು. ಉದಾಹರಣೆಗೆ ಅದ್ಭುತವಾದ ಕಥೆಯಾಗಬಹುದಾಗಿದ್ದ ’ಬರಿದೇ ಬಾರಿಸದಿರೋ ತಂಬೂರಿ’ ಒಂದು ವಾಚ್ಯ ಬಾಲಿಶ ಕಥೆಯಾಗುವುದು ಗುರು ಮೊದಲೇ ಒಂದು ’ಮೆಸೇಜ್’ ಕೊಡಬೇಕೆಂದು ನಿರ್ಧರಿಸಿ ಹೊರಟಿರುವ ಪ್ರವೃತ್ತಿಯನ್ನು ತೋರಿಸಿರುವುದರಿಂದ ಅನ್ನಿಸುತ್ತದೆ. ಹೀಗಾಗಿ ಗುರುವಿನ ಈ ಎರಡೂ ಕೃತಿಗಳನ್ನು ತಯಾರಿಯ ಕೃತಿಗಳೆಂದು ಪರಿಗಣಿಸಿ ಮಿಕ್ಕೆರಡು ಕೃತಿಗಳನ್ನು ಮಹತ್ವವನ್ನು ನಾವು ಚರ್ಚಿಸಬೇಕು.
’ವೈದ್ಯ ಮತ್ತೊಬ್ಬ’ದಲ್ಲಿರುವ ವೈದ್ಯಕೀಯ ತಲ್ಲಣಗಳನ್ನು ಅವರು ಶಕುಂತಳಾ ಮತ್ತು ಬಿಳಿಯ ಚಾದರದಲ್ಲಿ ಅಡಕಗೊಳಿಸಿದಾಗ ಆ ತಲ್ಲಣಗಳಿಗೆ ಒಂದು ಚೌಕಟ್ಟು ಸಿಗುತ್ತಿರುವುದು ಕಾಣಿಸುತ್ತದೆ. ಹೀಗಾಗಿ ಅವರ ಮೂಲ ತಲ್ಲಣಗಳಿಗೆ ಸರ್ವವ್ಯಾಪ್ತಿಯ ಸಮಾಧಾನವಿಲ್ಲ ಎನ್ನುವುದನ್ನು ನಾವು ಮನಗಾಣುತ್ತೇವೆ, [ಅದನ್ನು ಗುರು ಇನ್ನೂ ಮನಗಾಣಬೇಕಾಗಿದೆ]. ಎಲ್ಲ ತಲ್ಲಣಗಳಿಗೂ ಸಂದರ್ಭೋಚಿತವದ ಪರಿಹಾರಗಳೂ, ಹಾಗೂ ಅನೇಕ ಸಂದರ್ಭೋಚಿತ ಪರಿಹಾರಗಳು ಸರ್ವವ್ಯಾಪ್ತಿಯ ಪರಿಹಾರಗಳಿಗೆ ಆಂತರಿಕವಾಗಿ ವಿರುದ್ಧವಾಗಿರುವುದನ್ನೂ ನಾವು ಕಾಣಬಹುದು.
ಒಂದು ರೀತಿಯಿಂದ ಸರಳೀಕರಿಸಿ ಹೇಳಬೇಕೆಂದರೆ ಗುರುವಿನ ಮೂಲ ಕಾಳಜಿಗಳು ನಿರಂತರವಾಗಿ ಎದುರಾಗುವ ದ್ವಂದ್ವಗಳನ್ನು ಪರಿಹರಿಸಿಕೊಳ್ಳುವುದೂ, ಮತ್ತು ಆ ಪರಿಹಾರಗಳಲ್ಲಿ ಒಂದು ಪದ್ಧತಿಯಿದೆಯೇ ಎಂದು ಶೋಧಿಸುವುದೂ ಆಗಿದೆ. ಸಮಾಜದ ನಿಟ್ಟಿನಲ್ಲಿ, ದೇಶಾಂತರದ ಕ್ಯಾನ್ವಾಸಿನಲ್ಲಿ ಗುರು ತಮ್ಮ ಬರವಣಿಗೆಯ ಚೌಕಟ್ಟನ್ನು ಸೃಷ್ಟಿಸುತ್ತಾರಾದರೂ ಅವರ ಮೂಲಸೆಲೆಯಿರುವುದು ವೈಯಕ್ತಿಕವಾಗಿ. ಈ ಮೂಲಸೆಲೆಯನ್ನು ಅವರು ಶಕುಂತಳಾ ಸಂಗ್ರಹದಲ್ಲಿ ತೋರಿಸಿದ್ದರಾದರೂ ಅದು ಬಿಳಿಯ ಚಾದರದಲ್ಲಿ ಎದ್ದು ಕಾಣುತ್ತದೆ. ’ವೈದ್ಯ ಮತ್ತೊಬ್ಬ’ದಲ್ಲಿ ಗುರು ತೆಗೆದುಕೊಂಡಿರುವ ನಿಲುವುಗಳು ಒಮ್ಮೊಮ್ಮೆ ಬಾಲಿಶ ಎನ್ನಿಸಲು ಅವರ ಬಿಳಿಯ ಚಾದರದ ಪದರಗಳೇ ಸಾಕ್ಷಿ ಎನ್ನಿಸಿವೆ.
’ಬಿಳಿಯ ಚಾದರ’ದಲ್ಲಿ - ಶಕುಂತಳಾದಲ್ಲಿರುವಂತೆಯೇ ಒಂದು ರೀತಿಯ ಡಾರ್ಕ್ ಹ್ಯೂಮರ್ ಇದೆ. ಎಲ್ಲವನ್ನೂ ಒಂದು ಕಾನೂನಿನ ಚೌಕಟ್ಟಿನಲ್ಲಿಟ್ಟು ತಗಾದೆಗೆ ತರುವ ಲಿಟಿಗೆಂಟ್ ಸೊಸೈಟಿಯ ಕುಹಕ - ಗೋರಿಯಲ್ಲಿ ಒಂದು ಕಾಲಿಟ್ಟಿದ್ದರೂ ಕಥಾನಾಯಕ ಶ್ರೀಧರನ ಮೇಲೆ ಕೇಸು ಹಾಕಿ ಹಣ ಕೊಳ್ಳೆ ಹೊಡೆವ ಪಿತೂರಿಯ ನಡುವೆ [ಅಪಘಾತ ಎನ್ನುವ ಭಾಗ, ಪುಟ ೧೪೮] ಕಾಣಿಸುತ್ತದೆ. ಶಕುಂತಳಾದಲ್ಲಿ ಪ್ರಾರಂಭವಾದ - ಕುಟುಂಬ- ಅದರೊಳಗಿನ ಸಂಬಂಧಗಳು, ಸಮಾಜದಲ್ಲಿನ ಸಂಬಂಧಗಳ ಸೂಕ್ಷ್ಮ ಹಾಗೂ ತುಂಡಾಗುತ್ತಿರುವ ಎಳೆಗಳ ತಲ್ಲಣವನ್ನು ಗುರು ’ಬಿಳಿ ಚಾದರ’ದಲ್ಲಿ ಸಶಕ್ತವಾಗಿ ಮುಂದುವರೆಸುತ್ತಾರೆ.
’ಬಿಳಿಯ ಚಾದರ’ದಲ್ಲಿರುವ ಎಲ್ಲ ಪಾತ್ರಗಳೂ ಏಕಾಂಗಿಗಳು. ಯಾರಿಗೂ ಯಾವುದೇ ಸಂಬಂಧಗಳ ಬಗ್ಗೆ ಭಾವೋದ್ವೇಗವಿಲ್ಲ. ಎಲ್ಲವೂ ಲಾವಾದೇವಿಯ ಒಂದು ಹಂತದಲ್ಲೇ ಉಳಿದುಬಿಡುತ್ತದೆ. ಎಲ್ಲ ಪಾತ್ರಗಳಿಗೂ ಖಾಸಗೀ ನಿಟ್ಟಿನಲ್ಲಿ ಮೌಲ್ಯಗಳ ಎಥಿಕಲ್ ದ್ವಂದ್ವಗಳು. ಆದರೆ ಅದಕ್ಕೆ ಸಮಾಜದ ಒಂದು ಹಂದರ ಒಗ್ಗದೇ ಸಮಾಜದ ಸ್ಥರದಲ್ಲಿ ಸಾಮಾಜಿಕ ಮೌಲ್ಯಗಳ ಚೌಕಟ್ಟಿನಲ್ಲಿ ಪರಿಷ್ಕಾರ ಒಂದೂ ಪಾತ್ರಕ್ಕೆ ಸಿಗದಿರುವುದೂ, ಖಾಸಗೀ ನಿಟ್ಟಿನಲ್ಲಿಯೇ ಆ ತಲ್ಲಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬ ಒಂದು ಏಲಿಯನೇಟೆಡ್ ಧ್ವನಿಯನ್ನು ಗುರು ತೋರಿಸುತ್ತಾರೆ. ಸಾಮೂಹಿಕ ಸ್ಥರದಲ್ಲಿ ಸಂಬಂಧಗಳನ್ನು ಇರಿಸಿ ನೋಡುವ ಮೊದಲಿನ ಕಥೆಗಳಾದ ಮಧ್ವ ವಿಜಯ, ನಿರ್ಗುಣ, ವಿಚ್ಛಿನ್ನ, ಪ್ರವೇಶದಂತಹ ಕಥೆಗಳಲ್ಲಿ ಖಾಸಗೀ ನಿರ್ಧಾರಗಳನ್ನು ಪಾತ್ರಗಳು ತೆಗೆದುಕೊಂಡರೂ ಸಾಮಾಜಿಕ ನೀತಿ ನಿಯಮಗಳ ದೊಡ್ಡ ಕ್ಯಾನ್ವಾಸಿನಲ್ಲಿ ಅದನ್ನು ಪರೀಕ್ಷಿಸುವುದಲ್ಲದೇ ಅದನ್ನು ಆ ಮಟ್ಟದಲ್ಲಿ ಇತರ ಪಾತ್ರಗಳೊಂದಿಗೆ ಚರ್ಚಿಸುವ ವಾಚ್ಯವನ್ನು ಗುರು ತೋರಿಸುತ್ತಾರೆ. ಆದರೆ ಶಕುಂತಳಾಕ್ಕೆ ಬರುವ ವೇಳೆಗೆ ಇದು ಇನ್ನಷ್ಟು ಖಾಸಗಿಯಾಗುತ್ತಾ ಹೋಗುತ್ತದೆ. ಹೀಗಾಗಿ ಬೀಜ, ಅಲಬಾಮಾದ ಅಪನವಾಯು, ದೇಜಾವೂ, ಕಥೆಗಳನ್ನು ಅವರು ಹೆಚ್ಚು ಖಾಸಗಿಯಾಗಿಸುತ್ತಲೇ ದೊಡ್ಡ ಸಾಮಾಜಿಕ ಕಡಿವಾಣಗಳು - ನಿಯಮಗಳನ್ನು ಕುಹಕದ ದೃಷ್ಟಿಯಿಂದ ನೋಡಲು ಪ್ರಾರಂಭಿಸುತ್ತಾರೆ. ’ಬಿಳಿಯ ಚಾದರ’ದ ವೇಳೆಗೆ ಈ ಕೊಂಡಿಗಳೆಲ್ಲ ಕಳಚಿಬಿದ್ದು ಏಕಾಂಗಿತನದ ಏಲಿಯೇಷನ್ನಿನ ತಾರಕಕ್ಕೆ ಗುರು ತಮ್ಮ ಪಾತ್ರಗಳನ್ನು ತಂದುಬಿಟ್ಟಿದ್ದಾರೆ.
’ಬಿಳಿಯ ಚಾದರ’ದಲ್ಲಿನ ಮುಖ್ಯ ಪಾತ್ರಗಳಾದ ಶ್ರೀಧರ, ರಶ್ಮಿ, ಬೆಟ್ಟಿ, ಘೂಗೆ, ನಾಗೇಶ, ಮತ್ತು ತಾಯಿಯರ ಪಾತ್ರಗಳನ್ನು ಪ್ರಾತಿನಿಧಿಕವಾಗಿ ನಾವು ತೆಗೆದುಕೊಂಡರೆ ಎಲ್ಲರೂ ಒಂದು ನಿಟ್ಟಿನ ಎಥಿಕಲ್ ಡೈಲೆಮಾಗಳನ್ನು ಎದುರಿಸುತ್ತಲೇ, ತಮ್ಮ ಸುತ್ತು ಸಮಾಜವೇ ಇಲ್ಲವೇನೋ ಅನ್ನುವಂತೆ ಖಾಸಗಿಯಾಗಿ ನಿರ್ಧಾರಗಳನ್ನು ಒಂದು ಅವ್ಯಕ್ತ ಸ್ವಾರ್ಥಪರತೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಧರ ಬೆಟ್ಟಿಯ ಸಂಬಂಧದಲ್ಲಿನ್ನಿನ ವ್ಯಾವಹಾರಿಕತೆ ಮತ್ತು ಅವರುಗಳ ನಡುವೆ ಬರುವ ಬೆಟ್ಟಿಯ ಬಸಿರನ್ನು ಉಳಿಸಬೇಕೋ ಇಲ್ಲವೋ ಅನ್ನುವ ಚರ್ಚೆ ಖಾಸಗೀ ಅನುಕೂಲತೆ ಮತ್ತು ನಂಬಿಕೆಗಳ ಆಧಾರವಾಗಿಯೇ ಇದೆ. ಆ ಬಸಿರನ್ನು ಉಳಿಸಬೇಕೆನ್ನುವ ಬೆಟ್ಟಿಯ ನಿರ್ಧಾರ ಸಂಬಂಧಗಳ ತುರ್ತಿನಿಂದಾಗಲೀ, ತನಗೊಂದು ಮಗು ಬೇಕೆಂಬ ತೀವ್ರತೆಯಿಂದಾಗಲೀ ಕೂಡಿಯೇ ಇಲ್ಲ. ಹಾಗೆಯೇ ಶ್ರೀಧರನಿಗೂ ಆ ಬಗ್ಗೆ ಒಂದು ಸ್ಪಷ್ಟ ನಿಲುವಿಲ್ಲ. ಆ ಮಗುವಿಗೆ ತಾನು ತಂದೆಯಾಗಲು ಸಿದ್ಧ ಎಂದು ಅವನು ಬೆಟ್ಟಿಗೆ ಹೇಳುವಾಗಲೂ ಅವನಿಗೆ ಆಂತರ್ಯದ ನಂಬುಕೆಗಳಿಲ್ಲ. ಅವಳು ತನ್ನ ಈ ಪ್ರಸ್ತಾಪವನ್ನು ಬೇಡವೆಂದರೂ ಮನಸ್ಸಿಗೆ ಏನೂ ಆಗಲಾರದೆಂಬ ವ್ಯಾವಹಾರಿಕತೆ ಆ ಪಾತ್ರದಲ್ಲಿ ಕಾಣಿಸುತ್ತದೆ. ಬೆಟ್ಟಿಯ ಪಾತ್ರವೂ ಒಂದು ನಂಬಿಕೆಯ ತೀವ್ರತೆಯ ಆಧಾರದ ಮೇಲೆ ನಿಂತಿರುವಂತೆ ನಮಗನ್ನಿಸುವುದಿಲ್ಲ.
ಶ್ರೀಧರ-ರಶ್ಮಿಯರ ತಾಯಿಯ ಪಾತ್ರದ ಬಗ್ಗೆ ನಮಗೆ ನೇರ ಪರಿಚಯವಾಗಗಿದ್ದರೂ ಆಕೆಯೂ ಸಮಾಜದ ಕೊಂಡಿಗಳನ್ನು ತೊರೆದು ತಮ್ಮದೇ ಕಂಫರ್ಟ್ ಜೋನಿನಲ್ಲಿ ತಮ್ಮ ಪರಿಷ್ಕಾರವನ್ನು ಕಂಡುಕೊಳ್ಳುತ್ತಾರೆ. ರಶ್ಮಿಯೂ ತನ್ನ ಸಾಫ್ಟ್-ವೇರ್ ಕೆಲಸ, ನಾಗೇಶನ ಜೊತೆಗಿನ ಸಂಬಂಧದ ನಿರ್ಲಿಪ್ತತೆಯ ನಡುವೆ ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಒಂದು ನಿಲುವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಶ್ರೀಧರನ ಮೆಡಿಕಲ್ ಜೀವನಕ್ಕೂ ಅವನ ಅವಳಿಯಾದ ರಶ್ಮಿಯ ಸಾಫ್ಟ್-ವೇರ್ ಜೀವನಕ್ಕೂ ಗುರು ಹಾಕುವ ಈ ಕೊಂಡಿ ಅವರ ಮಿಕ್ಕೆಲ್ಲ ಸಂಬಂಧಗಳಿಗಿಂತ ಬಲವಾದ ಕೊಂಡಿಯಗುತ್ತದೆ. ಆದರೆ ಆ ಕೊಂಡಿಯಲ್ಲೂ ಕಡೆಗೆ ನಮಗೆ ಕಾಣುವುದು ನಿರರ್ಥಕತೆಯೇ.
ಮಿಂಚಿನಂತೆ ಬಂದು ’ಮೇರಾ ಭಾರತ್ ಮಹಾನ್’ ಅನ್ನುವ ಅಧ್ಯಾಯದಲ್ಲಿ ಮಾಯವಾಗುವ ನಾಗೇಶನ ಪಾತ್ರವೂ ಈ ಅರ್ಥಹೀನತೆಯನ್ನೇ ಪ್ರದರ್ಶಿಸುತ್ತದೆ. ಅವನು ಅಮೆರಿಕೆಗೆ ಯಾಕೆ ಬಂದ, ಹೇಗೆ ಕೆಲಸ ಮಾಡಿದ, ಯಾಕೆ ಕೆಲಸ ಕಳೆದುಕೊಂಡ, ಭಾರತಕ್ಕೆ ಯಾಕೆ ಮರುಳಿದ ಅನ್ನುವುದಕ್ಕೆಲ್ಲಕ್ಕೂ ಮೇಲಿಂದ ಮೇಲೆ ಕಾರಣಗಳು ಸಿಕ್ಕರೂ ಯಾವುದರಲ್ಲೂ ತೀವ್ರತೆ ನಮಗೆ ಕಾಣುವುದಿಲ್ಲ.
ನಮಗೆ ಸಹಜವಾದ, ವಯಸ್ಸಾದ ಮುದಿ ’ದಂಪತಿ’ಗಳನ್ನು ಕಾರಿನಲ್ಲಿ ಕೂಡಿಸಿ ಆಸ್ಪತ್ರೆಗೆ ಒಯ್ಯುವ ಮಾನವೀಯ ಕ್ರಿಯೆಯ ಧನ್ಯತಾಭವವೂ ಹೇಗೆ ದಕ್ಕಲಾರದೆಂಬ ಸಿನಿಕ ದೃಷ್ಟಿಯನ್ನು ನಾವು ನಂಬುವ ರೀತಿಯಲ್ಲಿ ಸಮರ್ಥವಾಗಿ ಚಿತ್ರಿಸುವಲ್ಲಿ ಗುರು ಯಶಸ್ವಿಯಾಗುತ್ತಾರೆ.
ಹೀಗೆ ಸಮಕಾಲೀನ ’ಡೆವಲಪ್ಡ್’ ಬದುಕಿನ ಅರ್ಥಹೀನತೆಯನ್ನು ಚಿತ್ರಿಸುತ್ತಲೇ ಸಮಕಾಲೀನ ಬದುಕಿನ ಕಠೋರ ಅಣಕವಾಡನ್ನು ಆತ ನಮ್ಮ ಮುಂದಿಡುತ್ತಾರೆ. ಇದು ಅಮೆರಿಕದ ಸಾಮಾಜಿಕ ಪರಿಸರದಲ್ಲೇ ಆಗಬಹುದಾದ ಕಾದಂಬರಿ. ಇಲ್ಲಿನ ಪಾತ್ರಗಳೆಲ್ಲವೂ ಹೆಚ್ಚಿನಂಶ ಭಾರತೀಯ ಪಾತ್ರಗಳೇ. ಹೀಗಾಗಿ ಆ ಪಾತ್ರಗಳಿಗೆ ಅಮೆರಿಕದ ಸಮಾಜದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಸಾಮಾಜಿಕ ತುರ್ತು ಇಲ್ಲ. ಆದರೂ ಅವರುಗಳು ಅಂಥದೇ ನಿರ್ಧಾರಗಳನ್ನು ಸಹಜವೆನ್ನಿಸುವಂತೆ ತೆಗೆದುಕೊಳ್ಳುತ್ತಾರೆ. ಇದು ಈಗಿನ ತಲೆಮಾರು ಎದುರಿಸುತ್ತಿರುವ ಒಂಟಿತನದ ತಲ್ಲಣದ ಒಂದು ಮಜಲೇ. ಈ ಕಥೆ ಭಾರತದಲ್ಲಿಯೇ ಆಗಬಹುದಿತ್ತು. ಇಲ್ಲಿಯ ಪರಿಸರದಲ್ಲೇ ಗುರು ಇದನ್ನು ಸಮರ್ಥವಾಗಿ ಬರೆಯಲೂ ಬಹುದಿತ್ತು. ಆದರೆ ಅದನ್ನು ನಾವು ಒಂದು ಸಮಸ್ಯೆ ಎಂದು ಇನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗೆ ತಲುಪಿಲ್ಲವೇನೋ. ಹೀಗಾಗಿಯೇ ಅಮೆರಿಕದ ಪರಿಸರ ಈ ಕಥೆಗೆ ಮುಖ್ಯವಾಗುತ್ತದೆ.,
ಶಕುಂತಳಾ ಬಗ್ಗೆ ಬರೆಯುತ್ತಾ ನಾನು ಈ ಮಾತುಗಳನ್ನು ಹೇಳಿದ್ದೆ:
ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ.
ಆದರೆ ಬಿಳಿಯ ಚಾದರದಲ್ಲಿ ಗುರು ನನ್ನ ಈ ಮಾತುಗಳ ಮೇಲೆ ಸೇಡು ತೀರಿಸಿಕೊಳ್ಳಲೋ ಏನೋ ಅನ್ನುವಂತೆ ಧನ್ವಂತರಿ, ಪ್ರಣಪಾಲಕ, ಪಾಳಯ, ಮೃದುಯಂತ್ರಿ, ತೊಡೆಮೇಲಿಗ [ಲ್ಯಾಪ್‍ಟಾಪ್], ಗೋಡೆ ಬೀದಿಯ ಸಾಪ್ತಾಹಿಕ [ವಾಲ್ ಸ್ಟ್ರೀಟ್ ಜರ್ನಲ್] ಇಂಥಹ ಪದಪ್ರಯೋಗಗಳನ್ನು ಮಾಡುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ನಾವು ಅದರ ಇಂಗ್ಲೀಶ್ ತರ್ಜುಮೆಯ ಶರಣು ಪಡೆಯಬೇಕಿರುವ ವ್ಯಂಗ್ಯವನ್ನು ಇಲ್ಲಿ ಗಮನಿಸಬೇಕಾಗಿದೆ. ಈ ಪದಪ್ರಯೋಗ ಯಾವುದೋ ಉದ್ದೇಶದಿಂದಲೇ ಗುರು ಮಾಡಿರಬೇಕು. ಆದರೆ ಅದೇನೆಂದು ನಮಗೆ ವೇದ್ಯವಾಗದೇ ಒಂದು ಗಿಮಿಕ್ಕಿನಂತೆಯೂ, ಕಾದಂಬರಿಯ ಗಂಭೀರತೆಗೆ ಧಕ್ಕೆಯಾಗುವಂತೆಯೂ ಇದೆ.
ಈ ಒಂದು ಆಕ್ಷೇಪಣೆಯನ್ನು ಹೊರತುಪಡಿಸಿದರೆ ಪುಸ್ತಕದಿಂದ ಪುಸ್ತಕಕ್ಕೆ ಗುರು ಅವರ ತೀವ್ರಗತಿಯ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ. ಏಲಿಯನೇಷನ್ ಅನ್ನು ಕನ್ನಡದ ಸಂದರ್ಭದಲ್ಲಿ ಅರ್ಥೈಸುವತ್ತ ಗುರುವಿನ ದೇಣಿಗೆ ಮಹತ್ವದ್ದು. ಇದೊಂದು ಇವರ ಬರವಣಿಗೆಗೇ ವಿಶಿಷ್ಟವಾದದ್ದೂ ಹೌದು. ಆದರೆ ಕನ್ನಡ ಸಾಹಿತ್ಯದ ದಿಕ್ಕನ್ನು ತಿರುಗಿಸುವ, ಒಂದಿಷ್ಟು ಗುದ್ದುವ ಶಕ್ತಿ ಇನ್ನೂ ಗುರು ಬರವಣಿಗೆಗೆ ಬಂದಿಲ್ಲ. ಆದರೆ ಮಧ್ಯಮವರ್ಗದ ತಲ್ಲಣಗಳು, ವಿದೇಶದಲ್ಲಿರುವ ತಲ್ಲಣಗಳು, ನಗರೀಕರಣದ, ಜಾಗತೀಕರಣದ ತಲ್ಲಣಗಳನ್ನು ಗುರು ಯಾವ ಪಾಪಪ್ರಜ್ಞೆಯೂ ಇಲ್ಲದೇ ಚಿತ್ರಿಸುತ್ತಾರೆ. ನವ್ಯದ ನಂತರ ಬಂದ ದಲಿತ, ಪ್ರಗತಿಪರ ಚಳುವಳಿಗಳು ಇಂಥ ತಲ್ಲಣಗಳಿಗೆ ಆಸ್ಪದವಿಲ್ಲದಂತೆ, ಈ ಪ್ರಯೋಗಗಳು ತುಚ್ಛ ಎನ್ನುವಂತೆ ನೋಡುತ್ತಿದ್ದ ಸಂದರ್ಭವನ್ನು ನಾವು ಈಗ ಮೀರಿದ್ದೇವೆ ಅನ್ನಿಸುತ್ತದೆ. ಒಟ್ಟಾರೆ ಗುರುವಿನ ಕೃತಿಗಳ ಗಂಭೀರ ಚರ್ಚೆಯಾಗುತ್ತಿದ್ದರೆ ಅದು ಇಂಥ ಒಂದು ಜಾಗತೀಕರಣದ ತಲ್ಲಣವನ್ನು ಕಡುಬಡವರಲ್ಲದವರು, ಗ್ರಾಮೀಣ ಪ್ರದೇಶದಲ್ಲಿ ಇಲ್ಲದವರು ಹೇಗೆ ಎದುರಿಸುತ್ತಾರೆ, ಅವರ ತಲ್ಲಣಗಳಿಗೂ ಹೇಗೆ ಮುಖ್ಯವಾದದ್ದು ಅನ್ನುವುದನ್ನ ನಿರೂಪಿಸುತ್ತದೆ. ಈ ನಿಟ್ಟಿನಲ್ಲಿ ಒಂದು ಸಾಚಾ ಧ್ವನಿಯನ್ನು ಗುರು ಒದಗಿಸಿಕೊಟ್ಟಿದ್ದಾರೆ. ಹೀಗಾಗಿ ಅವರು ಸಾಹಿತ್ಯದ ಪರಂಪರೆಯಲ್ಲಿ ಒಂದು ಮುಖ್ಯ ಕೊಂಡಿಯಾಗಿ ನಿಲ್ಲುತ್ತಾರೆ.
No comments:
Post a Comment