ಅಹಮದಾಬಾದಿನಲ್ಲಿ ನನಗೆ ಸಿಗದಿರುವ ಹಾಗೂ ತಹತಹಿಸುವ ಅಂಶ ಒಂದು ಒಳ್ಳೆಯ ಪುಸ್ತಕದಂಗಡಿ ಇಲ್ಲದ್ದು. ಬೆಂಗಳೂರಿನಿಂದ ಬಂದಿರುವ ನನಗೆ ಎಂ.ಜಿ ರಸ್ತೆಯ ಆಸುಪಾಸಿನಲ್ಲಿರುವ ಹೊಸ-ಹಳೆಯ ಪುಸ್ತಕಗಳನ್ನು ಮಾರುವ ಅದ್ಭುತ ಪುಸ್ತಕದಂಗಡಿಗಳು, ಮೆಜೆಸ್ಟಿಕ್ಕಿನಲ್ಲಿ ಸಪ್ನಾ, ಕನ್ನಡಪುಸ್ತಕಗಳಿಗೆ ಸಾಹಿತ್ಯ ಭಂಡಾರ, ಗಾಂಧಿಬಜಾರಿನ ಅಂಕಿತಾ ಹಾಗೂ ರೆಸಿಡೆಂನ್ಷಿಯಲ್ ಪ್ರದೇಶಗಳಲ್ಲೂ ಇರುವ ಜಯನಗರದ ನಾಗಶ್ರೀ, ಪ್ರಿಸಂ ಎಲ್ಲವನ್ನೂ ಪರಿಗಣಿಸಿದಾಗ ಅಹಮದಾಬಾದಿನ ಬಗ್ಗೆ ಅಸಮಾಧಾನವಾಗುವುದು ಸಹಜವೇ. ಮೊದಲಬಾರಿಗೆ ನಾನು ವಿದ್ಯಾರ್ಥಿಯಾಗಿ ಗುಜರಾತ್ ಪ್ರವೇಶಮಾಡಿದಾಗ ಪುಟ್ಟ ನಗರವಾದ ಆಣಂದದ ಸ್ಟೇಷನ್ ರೋಡಿನಲ್ಲಿ ನಡೆದಾಡುತ್ತಾ "ಬುಕ್ಸ್" ಎಂದು ಸ್ವಾಗತಿಸುತ್ತಿದ್ದ ದೊಡ್ಡ ಫಲಕವನ್ನು ನೋಡಿ ವಿಚಿತ್ರ ಪುಳಕದಿಂದ ಅದರ ಸಮೀಪಕ್ಕೆ ಹೋದರೆ ನನಗೆ ಕಂಡದ್ದು ಕೆಂಪು ಬಣ್ಣದ "ಚೋಪಡಿ" ಎಂದು ಕರವ ಲೆಕ್ಕಪತ್ರದ ಲೆಡ್ಜರುಗಳು. ಈ ಚೋಪಡಿಗಳಲ್ಲಿ ಕಾಣುವುದು ಯಾವ ಆಯಕರ ಆಫೀಸರನೂ ಅರ್ಥೈಸಲು ಸಾಧ್ಯವಾಗದಂತಹ ಮೋಡಿ ಅಕ್ಷರಗಳ ಮಾಯಾಲೋಕ.
ಕೆಲವರ್ಷಗಳ ಕೆಳಗೆ ಅಹಮದಾಬಾದಿನಲ್ಲಿ ನ್ಯೂ ಆರ್ಡರ್ ಬುಕ್ ಕಂಪನಿ ಅನ್ನುವ ಹಳೆಯ ಪುಸ್ತಕಗಳನ್ನು ಮಾರಾಟ ಮಾಡುವ ಮಳಿಗೆಯಿತ್ತು. ಆದರೆ ನಮ್ಮ ಕೆ.ಕೆ.ಎಸ್.ಮೂರ್ತಿ ನಡೆಸುವ ಸೆಲೆಕ್ಟ್ ಬುಕ್ ಷಾಪಿನಷ್ಟು ಉತ್ತಮ ಎಂದು ನನಗನ್ನಿಸಿರಲಿಲ್ಲ. ಆ ಅಂಗಡಿ ತುಸು ಹೆಚ್ಚೇ ಒಪ್ಪ ಓರಣವಾಗಿತ್ತು ಹಾಗೂ ಅಲ್ಲಿನ ಬೆಲೆಗಳೂ ಹೆಚ್ಚಾಗಿದ್ದವು. ಪುಸ್ತಕಗಳನ್ನು ಮುಚ್ಚಿದ ಕಪಾಟಿನಲ್ಲಿ ಇಟ್ಟಿದ್ದರಿಂದ ತಿರುವಿಹಾಕಲೂ ಕಷ್ಟವಾಗುತ್ತಿತ್ತು. ಈ ಪ್ರವರ್ತನೆ ಗುಜರಾತಿನಲ್ಲಿ ಪುಸ್ತಕದಂಗಡಿಗೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ಮಳಿಗೆಗಳಿಗೆ ಹೋದಾಗಲೂ ಅಂಗಡಿಯ ಪರಿಚಾರಕರು ನಿಮ್ಮ ಬೆನ್ನ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡುತ್ತಾರೆ.
ಇರಲಿ. ಈಗ ಈ ನ್ಯೂ ಆರ್ಡರ್ ಬುಕ್ ಕಂಪನಿಯೂ ಮುಚ್ಚಿದೆ. ಹೊಸಪುಸ್ತಕಗಳಿಗೆ ನಮಗಿರುವುದು ಗ್ರಂಥಾಘರ್, ನಟರಾಜ್ [ಪಾನ್ ಅಂಗಡಿಯಂತೆ ಇದು ಪುಟ್ಟ ಪೆಟ್ಟಿಗೆಯಂಗಡಿಯಾದರೂ, ನಿಮ್ಮ ಮನಸ್ಸಿನಲ್ಲಿ ಒಂದು ಪುಸ್ತಕದ ಶಿರೋನಾಮೆಯಿದ್ದರೆ, ಆತ ಆ ಪುಸ್ತಕವನ್ನು ತರಿಸಿಕೊಡುತ್ತಾನೆ] ಕಿತಾಬ್ ಮಹಲ್ ಮತ್ತು ಎಲ್ಲಕ್ಕಿಂತ ಮಿಗಿಲಾದ ಕ್ರಾಸ್‍ವರ್ಡ್. ಅಹಮದಾಬಾದಿನ ಕ್ರಾಸ್‍ವರ್ಡ್ ಬೆಂಗಳೂರಿನ ಕ್ರಾಸ್‍ವರ್ಡ್‍ಗಿಂತ ತುಂಬಾ ಭಿನ್ನವೆನ್ನಬೇಕು. ಅಹಮದಾಬಾದಿನ ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳಿಗಿಂತ ಆಟಿಕೆಗಳು, ಡಿವಿಡಿ, ಸಂಗೀತ ಮತ್ತು ಕಾಗದ-ಪ್ಯಾಡು-ಪೆನ್ನುಗಳಂಥವು ಹೆಚ್ಚಾಗಿ ಸಿಗುತ್ತವೆ! ಇಲ್ಲೂ ಪರಿಚಾರಕರು ನಿಮ್ಮನ್ನು ಹಿಂಬಾಲಿಸುತ್ತಾರೆ - ಬಹಳ ದಿನಗಳ ವರೆಗೆ ಸಿ.ಡಿಗಳನ್ನು ನೀವು ಒಯ್ಯುವಂತಿರಲಿಲ್ಲ - ಅದನ್ನು ಪರಿಚಾರಿಕರಿಗೆ ಮುಟ್ಟಿಸಿದರೆ, ಹಣ ಕೊಡುವಾಗ ನೀವು ಅದನ್ನು ಪಡೆಯಬಹುದಿತ್ತು - ಈಗ ಈ ಪರಿಪಾಠ ಉತ್ತಮಗೊಂಡಿದೆ. ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳನ್ನು ತಿರುವಿಹಾಕುವ ಅವಕಾಶವಿದೆ, ಹೀಗಾಗಿ ಈ ಜಾಗದಲ್ಲಿ ಜನಜಂಗುಳಿ ಹೆಚ್ಚು. ಹಣ ಕಟ್ಟುವ ಜಾಗಕ್ಕೆ ಒಂದು ಪುಟ್ಟ ಕ್ಯೂ ಇರುವುದೂ ಸಾಮಾನ್ಯ. ಇಷ್ಟೆಲ್ಲಾ ಇದ್ದರೂ, ನಾನು ಎಂದಾದರೂ ಇಕ್ಕಟ್ಟಿನ ಪ್ರೀಮಿಯರ್ ಬುಕ್ ಷಾಪಿನಲ್ಲಿ ಅಹಮದಾಬಾದಿನ ಕ್ರಾಸ್‍ವರ್ಡ್‍ಗಿಂತ ಹೆಚ್ಚು ಸಮಯವನ್ನು ಕಳೆಯಲು ತಯಾರಿರುತ್ತೇನೆ. ಅಹಮದಾಬಾದಿನ ಏರ್ಪೋರ್ಟ್ ಪುಸ್ತಕದಂಗಡಿಯಲ್ಲಿ ಕ್ರಾಸ್‍ವರ್ಡ್‌ಗಿಂತ ಕಡಿಮೆ ಪುಸ್ತಕಗಳಿದ್ದಾಗ್ಯೂ ಅದೇ ವಾಸಿ ಅಂತ ನನಗೆ ಅನೇಕ ಬಾರಿ ಅನ್ನಿಸಿರುವುದುಂಟು. ಈಗ ಹೊಸ ಟರ್ಮಿನಲ್‍ನಲ್ಲಿ ಶಂಕರ್ಸ್ ಬಂದಿದೆ.
ಪರಿಸ್ಥಿತಿ ಹೀಗಿರುವಾಗ, ನಾನು ಅಹಮದಾಬಾದಿನಿಂದ ಹೊರಕ್ಕೆ ಹೊರಟಾಗಲೆಲ್ಲಾ, ಮುಖ್ಯವಾಗಿ ಬೆಂಗಳೂರಿಗೆ ಬಂದಾಗ
ಪುಸ್ತಕದಂಗಡಿಯನ್ನು ಹುಡುಕುವುದು ಸಹಜವೇ ಆಗಿತ್ತು. ಸೆಲೆಕ್ಟ್ ಮತ್ತು ಪ್ರೀಮಿಯರ್ ಬುಕ್ ಷಾಪಿನ ಜೊತೆಗಿನ ನನ್ನ ಸಖ್ಯ ನನ್ನ ಕಾಲೇಜಿನ ದಿನಗಳಿಂದಲೂ ಇದ್ದೇ ಇದೆ. ಒಂದಾನೊಂದು ಕಾಲದಲ್ಲಿ ಪ್ರತಿ ಶನಿವಾರ ನಾನು ಬ್ರಿಗೇಡ್ ರೋಡಿಗೆ ಹೋಗಿ ಪಕ್ಕದ ಓಕನ್ ಕ್ಯಾಸ್ಕ್ ಅನ್ನುವ ಪಬ್ಬಿನ ಹ್ಯಾಪಿ ಅವರಿನಲ್ಲಿ ಒಂದಿಷ್ಟು ಬಿಯರು ಹೀರಿ - ಅಲ್ಲಿಂದ ಸೆಲೆಕ್ಟ್ ಬುಕ್ ಷಾಪಿಗೆ ಹೋಗುತ್ತಿದ್ದ ಪರಿಪಾಠವಿತ್ತು. ಸ್ವಲ್ಪ ಹೊತ್ತು ಪುಸ್ತಕಗಳನ್ನು ಹುಡುಕುವುದು, ಹಾಗೂ ಬಿಯರಿನ ವಾಸನೆ ಕಡಿಮೆಯಾಗುವವರೆಗೂ ಮೂರ್ತಿಯ ಜೊತೆ ಹರಟೆ ಕೊಚ್ಚುವುದೂ - ಹಾಗೂ ಮನೆಗೆ ಹೋಗಲು ಧೈರ್ಯ ಬರುವವರೆಗೂ ಆ ಪ್ರಾಂತದಲ್ಲೇ ಅಡ್ಡಾಡುವುದೂ ವಾಡಿಕೆಯಾಗಿತ್ತು!! ಹೀಗೆ ಹಲವು ಶನಿವಾರಗಳನ್ನು ಸೆಲೆಕ್ಟ್ ನಲ್ಲಿ ಕಳೆದು ಅಲ್ಲಿನ ಮೂಲೆ ಮೂಲೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದು ಆ ದಿನಗಳು ನನಗೆ ಸಫಲತೆಯನ್ನು ತಂದ ದಿನಗಳಾಗಿದ್ದುವು. ಆಗಿನ ದಿನಗಳಲ್ಲಿ ಮಿಕ್ಕ ಪುಸ್ತಕದಂಗಡಿಗಳಲ್ಲೂ - ಹಿಗ್ಗಿನ್‍ಬಾಥಮ್ಸ್, ಎಲ್.ವಿ, ಪ್ಲಾಜಾ ಥಿಯೇಟರಿನ ಅಡಿಯಲ್ಲಿ ಅಡಗಿ ಕುಳಿತಿದ್ದ ಬುಕ್ ಸೆಲ್ಲರ್, ಮತ್ತು ಗಂಗಾರಾಮ್ಸ್ - ನಾನು ಹಾಜರಿ ಹಾಕುತ್ತಿದ್ದೆನಾದರೂ, ಈಚೀಚೆಗೆ ಮತ್ರ ನಾನು ಬೆಂಗಳೂರಿಗೆ ಬಂದಾಗ ಸಮಯದ ಅಭಾವದಿಂದಾಗಿ ನನ್ನ ಹಾಜರಿಯಲ್ಲಿ ತುಸು ಮತಲಬಿತನವೂ ಇರುತ್ತಿತ್ತು.
ನನಗಿದ್ದ ಮೂರು ನಾಲ್ಕು ಘಂಟೆಗಳ ಸಮಯದಲ್ಲಿ ನಾನು ಪ್ರೀಮಿಯರ್‌ನ ಒಂದು ಸುತ್ತು ಹಾಕಿ, ಸೆಲೆಕ್ಟಿಗೆ ಹೋಗಿ ಮೂರ್ತಿಯ ಜೊತೆ ತುಸು ಹರಟೆ, ಒಂದು ಕಾಫಿ ಆಗುವಷ್ಟರಲ್ಲಿ ನನ್ನ ಸಮಯ ಮುಗಿದಿರುತ್ತಿತ್ತು. ಹಿಂದಿನ ದಿನಗಳಲ್ಲಿ ಗಂಗಾರಾಮ್ಸ್ ಕೂಡ ಅದ್ಭುತ ಪುಸ್ತಕದಂಗಡಿಯಾಗಿತ್ತಾದರೂ, ಕಪಾಲೀ ಥಿಯೇಟರಿನ ಪಕ್ಕದ ಅವರ ಕಟ್ಟಡ ಕುಸಿದದ್ದೇ ಗಂಗಾರಾಮ್ಸ್ ಉತ್ತುಂಗವೂ ಕುಸಿಯಿತು ಅನ್ನಿಸುತ್ತದೆ. ಹಿಗ್ಗಿನ್‍ಬಾಥಮ್ಸ್ ಮತ್ತು ಎಲ್.ವಿ ಎಂದಿಗೂ ಅಷ್ಟಕಷ್ಟೇ.
ಪ್ರೀಮಿಯರ್ ಮತ್ತು ಸೆಲೆಕ್ಟನ್ನು ಮಾತ್ರ ಭೇಟಿಮಾಡುತ್ತಾ ನಾನು ಆ ಪ್ರಾಂತದಲ್ಲಿ ಹುಟ್ಟಿದ್ದ ಹೊಸ ಪುಸ್ತಕದಂಗಡಿಗಳನ್ನು ನೋಡಿಯೇ ಇರಲಿಲ್ಲ. ಚರ್ಚ್ ಸ್ಟ್ರೀಟ್‌ನಲ್ಲಿ ಹುಟ್ಟಿಕೊಂಡ ಇಂಗ್ಲೀಷ್ ಎಡಿಷನ್, ಮತ್ತು ಬ್ಲಾಸಮ್ಸ್, ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿ ಹುಟ್ಟಿದ್ದ ಬುಕ್‍ವರ್ಮ್ ರೆಸಿಡೆನ್ಸಿ ರಸ್ತೆಯಲ್ಲಿನ ಕ್ರಾಸ್‍ವರ್ಡ್ ಅಂಗಡಿಗಳನ್ನು ನಾನು ನೋಡಿಯೇ ಇರಲಿಲ್ಲ. ಈ ಬಾರಿ ನಾನು ಪ್ರೀಮಿಯರ್‌ಗೆ ಹೋದಾಗ ಏನೋ ಎಡವಟ್ಟಾದಂತೆ ಕಂಡಿತು. ಸಾಮಾನ್ಯವಾಗಿ ಪ್ರೀಮಿಯರ್ ಗೆ ಹೋಗುವುದೆಂದರೆ ನಾನು ದಪ್ಪವಾಗಿದ್ದೇನೋ ಇಲ್ಲವೋ ಎನ್ನುವುದರ ಚೆಕಿಂಗೂ ಆಗುತ್ತಿತ್ತು. ಪ್ರೀಮಿಯರ್ ನ ಸಂದಿಗಳಲ್ಲಿ ಯಾವ ಪುಸ್ತಕದ ರಾಶಿಯೂ ಬೀಳದಂತೆ ಅಡ್ಡಾಡಲು ಸಾಧ್ಯವಾದರೆ ನಾನು ಫಿಟ್ಟಾಗಿದ್ದೇನೆ ಅನ್ನುವುದು ಸಾಮಾನ್ಯವಾದ ನಂಬಿಕೆ. [ಒಂದೆರಡು ಮೊಟ್ಟೆಗಳನ್ನು ಮುರಿಯದೇ ಆಮ್ಲೆಟ್ಟನ್ನು ಮಾಡಲಾಗುವುದಿಲ್ಲ ಅನ್ನುವಂತೆಯೇ, ಒಂದೆರಡು ರಾಶಿ ಪುಸ್ತಕಗಳನ್ನು ಕೆಡವದೇ ಪ್ರೀಮಿಯರ್ ನಲ್ಲಿ ಒಂದು ಉತ್ತಮ ಪುಸ್ತಕವನ್ನು ಹೆಕ್ಕುವುದೂ ಸಾಧ್ಯವಿರಲಿಲ್ಲ]. ಆದರೆ ಇದ್ದಕ್ಕಿದ್ದ ಹಾಗೆ ಪ್ರೀಮಿಯರ್ ನನ್ನ ಬೊಜ್ಜಿಗೆ ಅವಕಾಶ ಮಾಡಿಕೊಟ್ಟು ತಾನೇ ಸೊರಗಿನಿಂತಂತಿತ್ತು.
ಹಿಂದೆ ಒಮ್ಮೆ ನಾನು ನಮ್ಮ ಪ್ರೀಮಿಯರ್ ಶಾನಭಾಗರನ್ನು ತಾವು ಮುಂಬಯಿನ ಸ್ಟ್ರಾಂಡ್ ಶಾನಭಾಗರ ಸಂಬಂಧದವರೇ ಎಂದು ಕೇಳಿದ್ದೆ. ಆಗ ಆತ, "ಹೌದು ಅವರು ನನ್ನ ಅಂಕಲ್, ನಾನು ಅವರಲ್ಲಿಯೇ ಪುಸ್ತಕ ವ್ಯಾಪಾರವನ್ನು ಕಲಿತೆ" ಎಂದಿದ್ದರು. ಆ ತರಬೇತಿ ಪೂರ್ಣವಾಗಿರಲಿಲ್ಲವೇನೋ. ಯಾಕೆಂದರೆ, ಪ್ರೀಮಿಯರ್ ಶಾನಭಾಗರು ಅಂಗಡಿಯಲ್ಲಿ ಪುಸ್ತಕಗಳನ್ನು ಜೋಡಿಸಿಡುವುದನ್ನು ತಮ್ಮ ಪ್ರಖ್ಯಾತ ಅಂಕಲ್‍ನಿಂದ ಕಲಿತಿರಲಿಲ್ಲ ಅನ್ನಿಸುತ್ತದೆ. ಈಗ ನಾನು ಪ್ರೀಮಿಯರ್ ನೋಡುತ್ತಿರುವಾಗ ಶಾನಭಾಗರು ಎಲ್ಲೋ ಪುಸ್ತಕ ಜೋಡಣೆಯ ತುರ್ತು ತರಬೇತಿ ಪಡೆದು ಬಂದಂತೆ ಅನ್ನಿಸುತ್ತಿತ್ತು!! ಹತ್ತು ವರ್ಷಗಳ ಕೆಳಗೆ - ಪ್ರತೀ ವರ್ಷವೂ ಎರಡುದಿನ ಕಾಲ ಸ್ಟಾಕ್ ಟೇಕಿಂಗ್ ಎಂದು ಪ್ರೀಮಿಯರ್ ಬುಕ್ ಷಾಪಿಗೆ ಶಾನಭಾಗರು ಬಾಗಿಲು ಜಡಿಯುತ್ತಿದ್ದರು. ಒಮ್ಮೆ ಇದು ಎಷ್ಟು ನಿರರ್ಥಕ ಕೆಲಸ ಎಂದು ಅವರೊಂದಿಗೆ ನಾನು ಮಸ್ಕರಿ ಮಾಡಿದ್ದೆ. ಆಗ ಆಡಿದ್ದ ತುಂಟತನದ ಮಾತು ನಿಜವಾಯಿತೇನೋ.. ಈಚೀಚೆಗೆ ಎರಡು ದಿನಗಳ ರಜೆ ಮತ್ತು ಪುಸ್ತಕಗಳನ್ನು ಎಣಿಸುವ ಕಾಯಕವನ್ನು ಶಾನಭಾಗ್ ಬಿಟ್ಟುಕೊಟ್ಟಿದ್ದರು.
ಮೂರ್ನಾಲ್ಕು ಪದರಗಳ ಪುಸ್ತಕ ಖಜಾನೆ ಪ್ರೀಮಿಯರ್ ನಲ್ಲಿತ್ತು. ಎದುರಿಗೆ ಕಾಣುವ ಪುಸ್ತಕಗಳ ಹಿಂದೆ ಅಡಗಿರುವ ಪುಸ್ತಕಗಳು ಬೆಳಕು ಕಾಣುವಂತೆ ಒಂದು ಸೇಲ್ ಏರ್ಪಾಟು ಮಾಡಬೇಕೆಂದು ರಾಮ್ ಗುಹಾ ಒಮ್ಮೆ ಶಾನಭಾಗರಿಗೆ ಹೇಳಿದ್ದು ನನಗೆ ನೆನಪಿದೆ. ಆಗ ಶಾನಭಾಗ್ ಕಿರುನಗೆ ಬೀರಿ ಏನೂ ಹೇಳದೇ ಇದ್ದರು. ಈಗ ಆ ಮಾತು ನಿಜವಾಗುವ ಕಾಲ ಬಂದಂತಿದೆ.
ಈ ಬಾರಿ ನಾನು ಪ್ರೀಮಿಯರ್‌ಗೆ ಭೇಟಿ ನೀಡಿದಾಗ ಒಂದು ನಿರ್ದಿಷ್ಟ - ನರೇಂದ್ರ ಲೂಥರ್ ಅವರ ಹೈದರಾಬಾದಿನ ಬಗೆಗಿನ - ಪುಸ್ತಕವನ್ನು ನಾನು ಹುಡುಕುತ್ತಿದ್ದೆ. ಅತ್ಯಾಶ್ಚರ್ಯವೆಂದರೆ ಪ್ರೀಮಿಯರ್ ನಲ್ಲಿ ಆ ಪುಸ್ತಕ ಇರಲಿಲ್ಲ! ಅದನ್ನು ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‍ನಿಂದ ತರಿಸುತ್ತೀರಾ ಎಂದು ಕೇಳಿದ್ದಕ್ಕೆ ಶಾನಭಾಗ್ ಖುಷಿಯಿಂದಲೇ ಸರಿ ಎಂದರು. ಎರಡು ದಿನಗಳ ನಂತರ ನನಗೆ ಫೋನ್ ಮಾಡಿ ಪುಸ್ತಕ ಬಂದಿದೆ ಎಂದೂ ಹೇಳಿ - ಆ ಪುಸ್ತಕ ಬೇಕೇ ಅಥವಾ ವಾಪಸ್ಸು ಕಳಿಸಲೇ ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ನನಗೆ ಕುತೂಹಲವನ್ನೂ ಅಶ್ಚರ್ಯವನ್ನೂ ಉಂಟುಮಾಡಿತ್ತು. ಯಾಕೆಂದರೆ, ಅಕಸ್ಮಾತ್ ನಾನು ಆ ಪುಸ್ತಕವನ್ನು ಕೊಳ್ಳದಿದ್ದರೂ ಶಾನಭಾಗ್ ಆ ಪುಸ್ತಕವನ್ನು ತಮ್ಮ ಅಂಗಡಿಯಲ್ಲಿ ಇಡುತ್ತಿದ್ದರು. ಆ ಮಾತುಕತೆಯಾದ ನಂತರ ಪ್ರೀಮಿಯರ್ ಮುಚ್ಚುತ್ತಿದೆ ಅನ್ನುವ ವಿಚಾರ ನನಗೆ ಗೆಳೆಯರು ತಿಳಿಸಿದರು. ಈ ಸುದ್ದಿ ಕೇಳಿದಾಗ ಪ್ರೀಮಿಯರ್ ಸೊರಗಿರುವುದರ ಹಿನ್ನೆಲೆಯ ಮಜಕೂರು ನನಗೆ ಅರ್ಥವಾಯಿತು. ನಂತರ ಶಾನಭಾಗರೂ ತಮ್ಮ ಅಂಗಡಿಯ ಗುತ್ತಿಗೆಯ ಕಾಲ ಮುಗಿದಿದ್ದು, ಕಟ್ಟಡದ ಮಾಲೀಕ ಅದನ್ನು ಖಾಲಿ ಮಾಡಲು ಹೇಳಿದ್ದಾನೆಂದು ಹೇಳಿ ಕಿರುನಕ್ಕರು. ತಾವು ವ್ಯಾಪಾರ ನಿಲ್ಲಸಿ ನಿವೃತ್ತಿ ಪಡೆಯುವುದಾಗಿಯೂ ಹೇಳಿದರು.
ಇದ್ದಕ್ಕಿದ್ದ ಹಾಗೆ ನನಗೆ ನನ್ನ ಬೆಂಗಳೂರಿನ ಯಾತ್ರೆಗಳಲ್ಲಿ ಉಂಟಾಗಲಿದ್ದ ಶೂನ್ಯದ ಭಾವದ ಅರಿವಾಯಿತು. ಶಾನಭಾಗರು ತಮ್ಮ ಜೀವನವನ್ನು ಮುಂದುವರೆಸಬೇಕಿತ್ತು. ನಾನೂ ಸಹ. ಆತ ತಮ್ಮ ಮೂಲೆಯಲ್ಲಿ ಕೂತು ಎಂದೆಂದಿಗೂ ವ್ಯಾಪಾರ ಮಾಡಬೇಕೆಂದು ಬಯಸುವುದರಲ್ಲಿ ನನ್ನ ತಪ್ಪೇನೂ ಇಲ್ಲವೇನೋ. ರಾಮ್ ಗುಹಾ ಹೇಳಿದಹಾಗೆ ಆ ಅಂಗಡಿಯಲ್ಲಿನ ಒನ್-ವೇ ನಿಯಮವನ್ನು ಪಾಲಿಸುತ್ತಾ ಎಡಬದಿಯಿಂದ ಆರಂಭಿಸಿ ಪೂರ್ಣ ವೃತ್ತವನ್ನು ಸುತ್ತುಹಾಕಿ ದಾರಿಯಲ್ಲಿ ಕೆಲ ಅದ್ಭುತ ಪುಸ್ತಕಗಳನ್ನು ಕಂಡುಹಿಡಿಯುವಕ್ಕಿಂತ ದೊಡ್ಡ ಖುಷಿ ಪುಸ್ತಕ ಪ್ರಿಯರಿಗಿರಲಿಲ್ಲ ಅನ್ನಿಸುತ್ತದೆ. ಮೊಟ್ಟ ಮೊದಲಬಾರಿಗೆ ಶಾನಭಾಗರ ಅಂಗಡಿಯಲ್ಲಿ ಮೈಕ್ರೋಕ್ರೆಡಿಟ್ ಬಗೆಗಿನ ನನ್ನದೇ ಪುಸ್ತಕವೂ ಕಾಣಿಸಿತು. ಬಹುಶಃ ಒಳಪದರದಲ್ಲಿ ಅಡಗಿದ್ದ ಈ ಪುಸ್ತಕ ಈ ಮುಹೂರ್ತಕ್ಕಾಗಿಯೇ ಕಾಯುತ್ತಿತ್ತೋ ಏನೋ. ಹೀಗೆ ಪ್ರೀಮಿಯರ್ ಮುಚ್ಚುತ್ತಿರುವ ದುಃಖದಲ್ಲೇ ನಾನು ಮಿಕ್ಕ ಪುಸ್ತಕದಂಗಡಿಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದೆಂದು ಎರಡು ಅಂಗಡಿಗಳ ಮೂರು ಜಾಗಗಳನ್ನು ಹುಡುಕಿ ಹೊರಟೆ.
ಬ್ಲಾಸಮ್ಸ್ ನನ್ನ ಮಟ್ಟಿಗೆ ಒಂದು ಉತ್ತಮ ಶೋಧವಾಯಿತು. ಅಲ್ಲಿ ಹೊಸ-ಹಳೆಯ ಪುಸ್ತಕಗಳ ಉತ್ತಮ ಸಂಗ್ರಹವಿದೆ. ಸೆಲೆಕ್ಟಿನ ಮೂರ್ತಿಯವರ ಹಳೆಯ ಗಿರಾಕಿಯಾಗಿರುವುದರಿಂದ ನಾನು ಹಳೆಯ ಪುಸ್ತಕಗಳನ್ನು ಮಾರುವ ಹೊಸ ಅಂಗಡಿಗಳನ್ನು ಒಂದು ರೀತಿಯ ಅನುಮಾನದಿಂದಲೇ ನೋಡುತ್ತೇನೆ. ಅಲ್ಲಿ ಫೋರ್ಸಿತ್, ಲುಡ್ಲುಮ್, ಸಿಡ್ನಿ ಷೆಲ್ಡನ್, ಆರ್ಚರ್ ಮತ್ತು ಜಾನ್ ಗ್ರಿಷಾಮುಗಳನ್ನು ಮೀರಿದ ಪುಸ್ತಕಗಳು ಇರುವುದಿಲ್ಲ ಅನ್ನುವುದು ನನ್ನ ಪೂರ್ವಾಗ್ರಹ. ಆದರೆ ಬ್ಲಾಸಮ್ಸ್ ನಿಜಕ್ಕೂ ಒಳ್ಳೆಯ ಪತ್ತೆಯಾಗಿತ್ತು, ಹಾಗೂ ಈ ಬಾರಿ ಅಲ್ಲಿಗೆ ಹೋದದ್ದಕ್ಕೆ ನನಗೆ ಖುಷಿಯೂ ಆಯಿತು. ಅದು ಪ್ರೀಮಿಯರ್‍ಗೆ ಸರಿಯಾದ ’ವಾರಸು’ ಅಲ್ಲದಿದ್ದರೂ [ಅಲ್ಲಿ ಪುಸ್ತಕಗಳನ್ನು ಉದ್ದುದ್ದಕ್ಕೆ, ಚೆನ್ನಾಗಿಯೇ ಜೋಡಿಸಿದ್ದಾರೆ!, ಹೀಗಾಗಿ ಅಡಗಿದ ಪುಸ್ತಕಗಳನ್ನು ಕಂಡುಹಿಡಿಯುವುದರ ಪುಳಕ ನನಗೆ ದಕ್ಕಲಾರದು] ಪ್ರೀಮಿಯರ್ ಇಲ್ಲದ ಪ್ರಪಂಚದಲ್ಲಿ ತುಸು ಹಿತವನ್ನು ಕೊಡುವ ಒಳ್ಳೆಯ ಮಲತಾಯಿಯಂತೆ ಕಾಣಿಸಿತು. ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿರುವ ಮತ್ತು ಮೂರ್ತಿಯ ಸೆಲೆಕ್ಟ್ ಬಳಿಯಿರುವ ಬುಕ್-ವರ್ಮಿಗೂ ನಾನು ಭೇಟಿಯಿತ್ತೆ. ಈ ಅಂಗಡಿಯಲ್ಲೂ ಒಳ್ಳೆಯ ಪುಸ್ತಕಗಳು ನನಗೆ ಕಂಡುಬಂದುವು. ಮೂರ್ತಿಯ ಅಂಗಡಿಯ ದಾರಿಯಲ್ಲಿ ಹಳೆಯ ಪುಸ್ತಕಗಳ ಅಂಗಡಿಯೊಂದನ್ನು ತೆಗೆವ ಮೂರ್ತಿಯ ಮನೆಗೇ ಪೈಪೋಟಿಯನ್ನು ಒಯ್ಯುವ ದಾರ್ಷ್ಟ್ಯ ತೋರಿದ ಬುಕ್-ವರ್ಮ್ ಕಂಡು ನಾನು ಒಳಗೊಳಗೇ ನಕ್ಕೆ.
ಸೆಲೆಕ್ಟಿನಲ್ಲಿ ಮೂರ್ತಿಯ ಮಗ ಸಂಜಯ್ ಸಹ ವ್ಯಾಪಾರಕ್ಕೆ ಸೇರಿದ್ದಾರೆ. ಸೆಲೆಕ್ಟ್ ಇದ್ದ ಕಟ್ಟಡದ ಭಾಗವನ್ನು ಮೂರ್ತಿ ಕೊಂಡುಕೊಂಡಿದ್ದಾರೆ. ಮೊದಲನೆಯ ಮಹಡಿಗೆ ಅಂಗಡಿಯನ್ನು ವಿಸ್ತರಿಸಿದ್ದಾರೆ. ಹೆಚ್ಚಿನ ಪುಸ್ತಕಗಳೂ, ಕಲಾಕೃತಿಗಳೂ ಈಗ ಮೂರ್ತಿಯ ಅಂಗಡಿಯಲ್ಲಿ ಇದೆ. ಆದರೆ ಕಳೆದೈದಾರು ವರ್ಷಗಳಲ್ಲಿ ಮೂರ್ತಿ ಮತ್ತು ಸಂಜಯ್ ತಮ್ಮ ಅಂಗಡಿಯನ್ನು ತುಸು ವೈಶಿಷ್ಟ್ಯದ - ಸ್ಪೆಷಲೈಜ್ಡ್ ಅಂಗಡಿಯಾಗಿ ಪರಿವರ್ತಿಸುತ್ತಿದ್ದಾರೋ ಅನ್ನುವ ಅನುಮಾನ ನನ್ನನ್ನು ಕಾಡುತ್ತಿದೆ. ಸೆಲೆಕ್ಟ್ ಅಂಗಡಿಯಲ್ಲಿ ಈ ರೀತಿಯ ವಿಶಿಷ್ಟ ಪುಸ್ತಕಗಳನ್ನು ಹೆಕ್ಕುತ್ತಲೇ ನಿಮಗೆ ಲುಡ್ಲುಮ್, ವುಡ್‍ಹೌಸ್, ಜಾಯ್ಸ್ ಮತ್ತು ಮಾರ್ಕೇಸರ ಪುಸ್ತಕಗಳೂ ಸಿಗುತ್ತಿದ್ದುವು. ಆದರೆ ಈಚೀಚೆಗೆ ಸೆಲೆಕ್ಟ್ ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಪುಸ್ತಕಗಳ ದಾಸ್ತಾನು ಕಡಿಮೆಯಾಗಿ ಬರೇ ವಿಶಿಷ್ಟ ಪುಸ್ತಕಗಳು ಮಾತ್ರ ಇವೆ ಅನ್ನುವ ಅನುಮಾನ ನನಗೆ. ಹೀಗಾಗಿ ಸೆಲೆಕ್ಟ್ ಖುಷಿಯಿಂದಲೇ ಆ ಸ್ಥಾನವನ್ನು ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ಗೆ ಬಿಟ್ಟುಕೊಡುತ್ತಿದೆಯೇ? ಈ ಅನುಮಾನ ನಿಜವಾಗದಿರಲಿ. ಯಾಕೆಂದರೆ ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ನಲ್ಲಿ ಪುಸ್ತಕಗಳನ್ನು ಕೊಳ್ಳುವುದು ಸಾಧ್ಯವಾದರೂ, ಸೆಲೆಕ್ಟ್ ನಲ್ಲಿ ಪುಸ್ತಕ ನೋಡುವುದಲ್ಲದೇ, ತಿರುವಿ ಹಾಕುವುದಲ್ಲದೇ ಮೂರ್ತಿಯೊಂದಿಗೆ ಗಮ್ಮತ್ತಿನ ಮಾತುಕತೆಯನ್ನೂ ಬೆಳೆಸಬಹುದು [ಹಾಗೂ ಅವರು ತಮ್ಮ ಗಿರಾಕಿಗಳಬಗ್ಗೆ ಹೇಳುವ ಗಮತ್ತಿನ ಕಥೆಗಳನ್ನೂ ಕೇಳಬಹುದು]. ಸಾಲದ್ದಕ್ಕೆ ಅಲ್ಲಿಯೇ ರಾಮ್ ಗುಹಾ, ಗಿರೀಶ್ ಕಾರ್ನಾಡ, ರಸ್ಕಿನ್ ಬಾಂಡ್, ದಿವಾಕರರಂತಹ ಮೂರ್ತಿಯ "ಸ್ಟಾರ್ ಗಿರಾಕಿ"ಗಳ ದರ್ಶನವೂ ಆಗುವ ಸಾಧ್ಯತೆಯಿದೆ! ಮೂರ್ತಿಯ ಜೊತೆ ವಿಚಿತ್ರ ಚೌಕಾಸಿಯನ್ನೂ ಮಾಡುವ ಸಾಧ್ಯತೆಯಿದೆ. ಎಷ್ಟೋ ಬಾರಿ ಮೂರ್ತಿ ಹೇಳಿದ ಬೆಲೆಗಿಂತ ೮೦% ಕಡಿಮೆ ಬೆಲೆಗೂ, ಕೆಲವೊಮ್ಮೆ ಮುಫತ್ತಾಗಿಯೂ ಮೂರ್ತಿ
ಪುಸ್ತಕಗಳನ್ನು ನೀಡಿದ್ದಾರೆ. ಮತ್ತೆ ಕೆಲವೊಮ್ಮೆ ಹೇಳಿದ ಬೆಲೆಗಿಂತ ಒಂದು ಪೈಕೂಡಾ ಕಡಿಮೆ ಮಾಡದೆ ಬೇಕಿದ್ದರೆ ತೆಗೋ ಇಲ್ಲವಾದರ ಬಿಡು ಅನ್ನುವಂಥಹ ಹಠವನ್ನೂ ಹಿಡಿದಿದ್ದಾರೆ. ಒಂದೊಮ್ಮೆ "ನಿಮಗೀ ಪುಸ್ತಕ ಬೇಕೂಂತ ನನಗೆ ಗೊತ್ತು. ಆದರೆ ಇದು ಪುಸ್ತಕದ ಮೊದಲ ಆವೃತ್ತಿ - ಹೀಗಾಗಿ ಇದಕ್ಕೆ ನಾನು ಹೆಚ್ಚಿನ ಬೆಲೆಯನ್ನು ಬೇರೆಯವರಿಂದ ಪಡೆಯಬಲ್ಲೆ. ಬೇಕಿದ್ದರೆ ಒಂದೆರಡು ದಿನದ ಮಟ್ಟಿಗೆ ಇದನ್ನು ತೆಗೆದುಕೊಂಡು ಹೋಗಿ ಫೋಟೋಕಾಪಿ ಮಾಡಿಸಿ ತನ್ನಿ" ಅನ್ನುವುದೂ ಉಂಟು. ಹೊಸದಾಗಿ ಬಂದಿರುವ ಈ ಥಳುಕಿನ ಅಂಗಡಿಗಳ ಜೊತೆ ಇಂಥಹ ಸಂಬಂಧವನ್ನು ಬೆಳೆಸುವುದು ನನಗೆ ಸಾಧ್ಯವಿಲ್ಲ. ಬಹುಶಃ ಐಸಿಐಸಿಐ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಸಿಂಡಿಕೇಟ್ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಇರುವ ವ್ಯತ್ಯಾಸ ಇದೇ ಏನೋ!!
ಶಾನಭಾಗರಿಗೆ ನಮ್ಮ ಪಬ್ ರಾಜಧಾನಿಯಲ್ಲಿ ಮತ್ತೊಂದು ಅಂಗಡಿ ದೊರೆಯಬಹುದೇ ಎಂದು ಆಶಿಸುತ್ತಿದ್ದೇನೆ. ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರೀಮಿಯರ್ ನಂತಹ ಅರಾಜಕ ಜಾಗದ ಅವಶ್ಯಕತೆ ನಮಗಿದೆ.
[ಈ ಲೇಖನವನ್ನು ಬರೆದದ್ದು ಮಾರ್ಚ್ ೨೦೦೬, ಆ ನಂತರ ಕಟ್ಟಡದ ಮಾಲೀಕ ಗುತ್ತಿಗೆಯನ್ನು ಎರಡು ವರ್ಷ ಬೆಳೆಸಿ ಪ್ರೀಮಿಯರ್ ಗೆ ಮರುಜನ್ಮ ನೀಡಿದ್ದ. ಆ ಗುತ್ತಿಗೆಯೂ ಮುಗಿದು, ಈಗ ಪ್ರೀಮಿಯರ್ ನಿಜಕ್ಕೂ ಮುಚ್ಚುತ್ತಿದೆ..]
No comments:
Post a Comment