Thursday, September 24, 2009

ತಿರುಮಲೇಶರ ಕಾವ್ಯ


ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.

"ಕನ್ನಡ ಕಾವ್ಯಕ್ಷೇತ್ರದಲ್ಲೀಗ ಹೊಸ ಸಾಧ್ಯತೆಗಳನ್ನು ಕಂಡುಹಿಡಿಯುವುದು ಅಡಿಗೋತ್ತರರ ಕರ್ತವ್ಯವೆಂದು ನನ್ನ ನಂಬಿಕೆ" ಎಂದು ಮಹಾಪ್ರಸ್ಥಾನದ ಪ್ರಸ್ತಾವನೆಯಲ್ಲಿ ತಿರುಮಲೇಶರು ಬರೆದಿದ್ದರು. ಆ ಕಳಕಳಿ ಅವರಲ್ಲಿ ತಮ್ಮ ಮೊದಲ ಸಂಕಲನದಿಂದಲೇ ಇದ್ದುದನ್ನು ಕಾಣಬಹುದಾಗಿದೆ. ಮುಖವಾಡಗಳು ಸಂಕಲನದ ಕವಿತೆಯ ಈ ಸಾಲುಗಳನ್ನು ಗಮನಿಸಿ:

ಕೇರಳ
........
ಛೀ ಸಾಕು
ಈ ಹುಚ್ಚು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆಯಿದು
ಪಂಪ ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ...
....

ತಿರುಮಲೇಶರ ಕಾವ್ಯವನ್ನು ಅಧ್ಯಯನ ಮಾಡಿದಾಗ ಅವರ ಬೆಳವಣಿಗೆಯನ್ನು ಸ್ಪಷ್ಟವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. ’ಮುಖವಾಡಗಳು’, ’ವಠಾರ’ ಹಾಗೂ ಒಂದಂಶದವರೆಗೂ ’ಮಹಾಪ್ರಸ್ಥಾನ’ ಅಡಿಗರ ಜಾಡಿನಲ್ಲೇ ಬರೆದ, ಬೇರೊಂದು ಮಾರ್ಗಕ್ಕಾಗಿ ಶೋಧನೆ ನಡೆಸುತ್ತಿರುವ ಘಟ್ಟವಾದರೆ, ’ಮುಖಾಮುಖಿ’ ಅವರ ಹೊಸಮಾರ್ಗದ ಹುಡುಕಾಟಕ್ಕೆ ಒಂದು ಸ್ಪಷ್ಟ ದಿಕ್ಕನ್ನು ಕಲ್ಪಿಸಿದ ಸಂಕಲನ. ’ಅವಧ’ ಖಂಡಿತವಾಗಿಯೂ ಸಂಪೂರ್ಣ ತಿರುಮಲೇಶರದೇ ಎಂಬಂಥ ಶೈಲಿಯನ್ನು ಮೈಗೂಡಿಸಿಕೊಂಡಿದೆ. ’ವಠಾರ’ ’ಮುಖವಾಡಗಳು’ ಸಂಕಲನಗಳಲ್ಲಿರುವ ಕವಿತೆಗಳು ಬಹಳ ಎಕ್ಸ್ ಪ್ಲಿಸಿಟ್ ಸಂಕೇತಗಳೂ, ನೇರ ನಿರೂಪಣೆಯನ್ನೂ ಹೊಂದಿದ್ದರೆ, ಆನಂತರದ ಕವಿತೆಗಳು ಸಂಕೀರ್ಣವಾಗುತ್ತಾ ಹೋಗುವುದನ್ನ ಕಾಣಬಹುದು. ಅವರ ಬರವಣಿಗೆ, ಅತೀ ಸಣ್ಣವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯಲ್ಲಿ ನಿರತವಾಗುತ್ತವೆ. ’ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದ[ವಾದುದರಿಂದ] ಕವನವನ್ನು ಹೇಗೇ ವ್ಯಾಖ್ಯಾನಿಸಲೂ ಅನುಕೂಲವಾದ [ವಾಗಿದೆ]’ [ವಿಜಯಶಂಕರ್, ರುಜುವಾತು, ಸಂಚಿಕೆ ೯] ಕವಿತೆಗಳನ್ನು ತಿರುಮಲೇಶ್ ಬರೆದಿರುವುದರಲ್ಲಿ ಅವರ ಸ್ಪಷ್ಟ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.

ತಿರುಮಲೇಶರ ಮೊದಲ ಸಂಕಲನಗಳ ಕವಿತೆಗಳು ’ನಿಯತ ಛಂದೋಗತಿಯಿಂದ ಮುಕ್ತವಾಗಿ, ಆದರೂ ಮುಕ್ತ ಪದ್ಯವಾಗದೆ, ಗದ್ಯದ ಗತಿಗೆ ಬಹು ಸಮೀಪ ಬಂದು ಆದರೂ ಗದ್ಯವಾಗದೆ ಸ್ವತಂತ್ರ ಕಾವ್ಯಕ್ಕೆ ತಕ್ಕ ಗತಿಯನ್ನು’ [ಗೋಪಾಲಕೃಷ್ಣ ಅಡಿಗ, ಮುಖವಾಡಗಳು ಮುನ್ನುಡಿ] ಒದಗಿಸಿದರೆ. ಈಚೀಚಿನ ಕವಿತೆಗಳು ಭಾವಗೀತಾತ್ಮಕ ಶೈಲಿಯಲ್ಲಿ ಬರೆದವುಗಳು ಎಂಬುದನ್ನು ಗಮನಿಸಬಹುದು.

’ಮುಖವಾಡಗಳು’ ಸಂಕಲನದಲ್ಲಿರುವ ಕವಿತೆಗಳು ಒಂದು ರೀತಿಯ ಹುಡುಕಾಟದಲ್ಲೇ ಓಡಾಡುತ್ತವೆ. ’ನನ್ನ ಕತೆ’ ಎಂಬ ಮೊದಲ ಕವಿತೆಯಲ್ಲಿ ಸೂಚ್ಯವಾಗಿ ತಿರುಮಲೇಶ್ ಅದನ್ನೇ ಹೇಳುತ್ತಾರೆ:

...
ಈ ಮನೀಷೆ
ಈ ಒಳತೋಟಿ
ಅನುಭವಿಸಿ, ಅನುಭವಿಸಿ ಸೋತು ಸುಸ್ತಾಗಿ
ಯಶೋಧರೆಯ ಮಗ್ಗುಲಲಿ
ಹೊರಳಿದ್ದು
ಎಲ್ಲೋ ಎನೋ ಕಳೆದುಹೋಗಿದೆಯೆಂದು
ಬೋಧಿವೃಕ್ಷದ ಕೆಳಗೆ
ಹುಡುಕಿದ್ದು
ಬುದ್ಧನಾದದ್ದು ಗೊಮ್ಮಟನಾದದ್ದು
ಕಲ್ಲಾಗಿ ಬಿದ್ದದ್ದು
ನನ್ನ ಕತೆ..
...

ಈ ಹುಡುಕಾಟದಲ್ಲಿ ಮುಖ್ಯವಾಗಿ ವಾಸ್ತವಿಕತೆ ಹಾಗೂ ಅನುಭವಕ್ಕೆ ವಿಪರೀತವಾದ ಒತ್ತು ಕೊಟ್ಟಿರುವುದನ್ನೂ ನೋಡಬಹುದು. ’ಸಮರ್ಥನೆ: ಸೈತಾನ’ ’ಸಮರ್ಥನೆ: ಗುಂಡಿಯಿಲ್ಲದ ಪ್ಯಾಂಟು ಧರಿಸಿದವ’ ಕವಿತೆಯ
...
ಹುಟ್ಟಿ ಬಂದಾಗ ಮಾತು ಕೊಟ್ಟಿದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲಾ?
ತಪ್ಪು ಮುತ್ತಜ್ಜ ಆದಮನದು
ಅಲ್ಲ ಮುತ್ತಜ್ಜಿಯದೋ
ಬಾ, ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನ ರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ ಬಯಸಿದ ಹಾಗೆ
..

ಎಂಬ ಸಾಲುಗಳು, ’ವಾಸ್ತವತೆ’ ಕವಿತೆಯ ಸಾಲುಗಳು, ಹಾಗೂ ’ಮುಖವಾಡಗಳು’, ’ಕೇರಳ’ ಈ ಎಲ್ಲ ಕವಿತೆಗಳದೂ ಒಂದೇ ಧ್ವನಿ. ಆಷಾಢಭೂತಿತನದ ಪೊರೆ ಕಳಚಿ ಸಹಜವಾಗಿ ವಾಸ್ತವದಲ್ಲಿ ಬಂದದ್ದು ಬಂದಂತೆ, ಇದ್ದದ್ದು ಇದ್ದಂತೆ, ಯಾವ ಒಪ್ಪಂದಗಳೂ ಇಲ್ಲದೇ ಇರುವಂತಹ ಬದುಕಿನ ಶೋಧನೆ.

’ವಠಾರ’ ಸಂಕಲನಕ್ಕೆ ಬರುವ ವೇಳೆಗೆ ತಿರುಮಲೇಶರು ಹುಡುಕಾಟದಿಂದ ಸ್ವಲ್ಪ ಹುಡುಗಾಟಿಕೆಯತ್ತ ವಾಲುತ್ತಾರೆ. ’ಮುಖವಾಡಗಳು’ವಿನಲ್ಲಿನ ಪೊರೆ ಕಳಚಿ ವಾಸ್ತವದ ಮುಖಾಮುಖಿಯಾಗಿ ನಿಲ್ಲುವ ಮೂಲತಂತುವನ್ನು ಈ ಸಂಕಲನದಲ್ಲೂ ಪೋಷಿಸಿಕೊಂಡು ಬಂದರೂ, ಕವಿತೆ ಬರೆಯುವ ಶೈಲಿ ಇಲ್ಲಿ ಬೇರೊಂದು ಮುಖವನ್ನೇ ಪಡೆಯುವುದನ್ನು ಗಮನಿಸಬಹುದು. ಇಲ್ಲಿ ಹೆಚ್ಚಿನ ಕವಿತೆಗಳು ಹುಡುಗಾಟದ ಕೂಗಾಟದ ಅಬ್ಬರದಿಂದ ತತ್ತರಿಸಿವೆ. ’ವಠಾರ’ದ ಪ್ರಸ್ತಾವನೆಯಲ್ಲಿಯೇ ತಿರುಮಲೇಶ್ ಹೇಳಿಬಿಡುತ್ತಾರೆ.. "’ಮುಖವಾಡಗಳು’ ಸ್ವಲ್ಪಮಟ್ಟಿಗೆ ಅನುಕರಣಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲೂ ನನ್ನದೇ ಲಯಗಳನ್ನು ಗುರುತಿಸುವ ಯತ್ನ ಮಾಡಿದ್ದೆ. ’ವಠಾರ’ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ, ಅಲ್ಲಿಗೆ ಅದು ಅರ್ಥಪೂರ್ಣ.’ ಇಷ್ಟೇ ಸೀಮಿತವಾದ ಘೋಷಿತ ಉದ್ದೇಶಗಳಿರುವ ಈ ಕವಿತೆಗಳು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರ ಪರಿಣಾಮ ಬೀರುತ್ತವೆ. ’ವಠಾರ’ದಲ್ಲಿರುವ ಕವಿತೆಗಳ ಶೈಲಿ ನೋಡಬೇಕೆಂದರೆ ಅದರ ಮೊದಲ ಕವಿತೆ ಕೀರ್ತನೆ ಪರಿಶೀಲಿಸಬಹುದು:


ಕೀರ್ತನೆ

ಯನ್ನ ತಲೆಯನ್ನ ಸೋರೆ ಮಾಡಿ
ಯನ್ನ ನರಗಳನ್ನ ತಂತಿ ಮಾಡಿ
ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ
ಗೊಂಬೆಯಾಟವಯ್ಯಾ ಎಂದು ಕುಣಿಸಿ
ಮಣಿಸಿ ದಣಿಸಿ
ದಾಸರ ದಾಸ ಚಪ್ರಾಸಿ ಮಾಡ್ಕೋ
ತಲೆಮೇಲೆ ಕೂತ್ಕೋ
ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ
ರೋಡಿಗೆ ಹಾಕ್ಕೋ
ಓಡ್ಸು ಅದರ ಮೇಲೆ ನಿನ್ನ ಇಂಪಾಲಾ
ಯನ್ನ ಚರ್ಮವ ಚಪ್ಪಲಿ ಮಾಡ್ಕೋ
ಹಾಕಿಕೋ ತುಳ್ಕೋ
ಖಂಡವಿದೆಕೋ ಮಾಂಸವಿದಿಕೋ
ಬೇಕಾದ್ರೆ ಬೇಯಿಸ್ಕೋ
ಉಂಡು ತೇಗು ಕ್ಕೊಕ್ಕೋ
ತಗೋ ಯನ್ನ ಮೂಳೆ
ನಿನ್ನ ತ್ರಾಣಕ್ಕೆ ಒಳ್ಳೇದು
ಸೂಪು ಮಾಡಿ ಕುಡೀ.

ಈ ಕವಿತೆಯಲ್ಲಿ ನಾವು ಕಾಣುವುದು ವಿಜಯಶಂಕರ್ ಹೇಳಿದಂತೆ "ವ್ಯಂಗ್ಯ ತಿರಸ್ಕಾರಗಳಲ್ಲಿ ಬೆಳೆಯುವ ಸಿಟ್ಟು". ಇಲ್ಲಿ ಉಪಯೋಗಿಸಿರುವ ಅಣಕಮಾಡುವ ಶೈಲಿ ಮೊನಚು ವ್ಯಂಗ್ಯದತ್ತ ಬೊಟ್ಟು ಮಾಡಿ ತೋರಿಸುತ್ತದೆ. ತಿಳಿದೂ ಶೋಷಣೆಗೆ ಒಳಪಡುತ್ತಿರುವ ಪ್ರಕ್ರಿಯೆಯನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸಲು ಯತ್ನಿಸಿದರೂ, ಕೂಗಾಟದ ರೀತಿಯ ಅಬ್ಬರವಿರುವುದರಿಂದ ಬೀರಬಹುದಾದ ಸೂಕ್ಷ್ಮ ಪರಿಣಾಮಕ್ಕೆ ಧಕ್ಕೆಯಾದಂತೆನ್ನಿಸುತ್ತದೆ. ವಿಜಯಶಂಕರ ಇದನ್ನು "ಖಾರವಾಗಿ ತನ್ನ ಹಿಂದಿನದನ್ನು ಚುಚ್ಚುವ ಮನೋಭಾವ [ದುಂಡುಚಿ] ಕೇವಲ ಗೇಲಿ ಮಾಡುವ ಹುಡುಗಾಟದ ಖುಷಿ [ಕೂ.ಮಂ.ಭಟ್ಟರ ಕಾವ್ಯವಿಳಾಸ]" ಎನ್ನುತ್ತಾರೆ. ಇಂಥವು ಹಲವು ’ವಠಾರ’ದಲ್ಲಿ ನಮಗೆ ಕಾಣುತ್ತವೆ. ’ಅಸ್ವಸ್ಥರು’ ಕವಿತೆಯಲ್ಲೂ ವಿಡಂಬನೆಯ ಧ್ವನಿಯನ್ನು ಕಾಣಬಹುದು. ಆಷಾಢಭೂತಿತನದ ಪೊರೆ ಕಳಚುವ ಮತ್ತೊಂದು ಪ್ರಯತ್ನವೂ [ಮುಖವಾಡಗಳ ಕವಿಗೆ] ಈ ಸಂಕಲನದಲ್ಲಿದೆ.

ಮೊದಲೇ ಹೇಳಿದಂತೆ, ’ವಠಾರ’ದಲ್ಲಿ ಎಕ್ಸ್ ಪ್ಲಿಸಿಟ್ ಸಂಕೇತಗಳು ಸಾಕಷ್ಟು ಬಳಸಲ್ಪಟ್ಟಿವೆ. ’ಶ್ವಾನ ಮೀಮಾಂಸೆ’ಯಲ್ಲಿ ಈ ರೀತಿಯ ಬಹಿರಂಗ ಸಂಕೇತವನ್ನು ಉಪಯೋಗಿಸಿರುವುದನ್ನು ನಾವು ಕಾಣಬಹುದು:

...
ಕಚ್ಚುವ ನಾಯಿ
ಬೊಗಳುವ ನಾಯಿ ಹೀಗೆ
ಕೋಮು ಕಟ್ಟಲಿಲ್ಲವೇ ನೀವು
...

ಆದರೆ ಅದೇ ಕವಿತೆಯಲ್ಲಿ ಚಿರವಾಸ್ತವದ ಅಂಶವನ್ನೂ ಸೂಕ್ಷ್ಮವಾಗಿ ಸೇರಿಸುವ ಕಲೆಗಾರಿಕೆಯನ್ನೂ ತಿರುಮಲೇಶ ತೋರುತ್ತಾರೆ:

..
ಬದಲಾಗುತ್ತಿರುವೀ ಮೌಲ್ಯಗಳಲ್ಲೂ
ಕಪ್ಪು ನಾಯಿ ಬಿಳಿಯಾಗುವುದಿಲ್ಲ
ಡೊಂಕು ಬಾಲ ನೆಟ್ಟಗೆ ನಿಲ್ಲುವುದಿಲ್ಲ
ಎಂಬುದು ನಿಜವೆಂದು ಒಪ್ಪುವುದಿಲ್ಲವೇ ನೀವು
...

ಗೀತೆಯ, ಪರಂಪರೆಯ ಮುಸುಕಿನಲ್ಲಿ ಅಡಗಿ ಪಲಾಯನವಾದವನ್ನು ಪೋಷಿಸುವ ಸಂಪ್ರದಾಯಸ್ಥರನ್ನು ಸ್ವಲ್ಪ ಕಟು ಎನ್ನಿಸುವ ಭಾಷೆಯಲ್ಲಿಯೇ ತಿರುಮಲೇಶ್ ಟೀಕಿಸುತ್ತಾರೆ:

..
ಹಿಟ್ಟಿಗಿಂತ ಹೊಟ್ಟೆ ದೊಡ್ಡದು
ಹೊಟ್ಟೆಗಿಂತ ಮನುಷ್ಯ ದೊಡ್ಡದು
ಮನುಷ್ಯನಿಗಿಂತ ಆತ್ಮ ದೊಡ್ಡದು
ಆತ್ಮಕ್ಕಿಂತ ಪರಮಾತ್ಮ ದೊಡ್ಡದು
ಎಂಬ ಲೆಕ್ಕಾಚಾರದ ಹಿಂದೆ
ದೊಂಬರಾಟ ಹಾಕಿ
ಫಿಲಾಸಫಿಯ ಕೆಳಗಡೆ ಅಡಗಿ
ಲಾಜಿಕ್ಕಿನ ಸುತ್ತ ಖೊಕ್ಕೋ ಆಡಿ
ಸಿನಿಕನ ಕೆಮ್ಮು ಬೀಡಿಯ ದಮ್ಮು
ಮಿಸ್ಟಿಸಿಸಮಿನ ಮಾರ್ಫಿಯಾ ಎಂದು ಮಲಗಿ
ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ
ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ
ಎದ್ದು ಹೋರಾಡುವ ಧರ್ಮ
ಗೀತೆಯ ಮರ್ಮ - ಕೇಳದೇ ಹುಟ್ಟಿಬಂದವರು
ಬದುಕಿಗೆ ಅರ್ಥ ಕಾಣದೇ ಹೋಗುವರು
ಕರ್ಮಣ್ಯೇವಾಧಿಕಾರಸ್ತೇ
ಇಂದಿಗೆ ಸಾಕು ಗುಡ್ ನೈಟ್ ನಮಸ್ತೇ
...


’ಮಹಾಪ್ರಸ್ಥಾನ’ ಸಂಕಲನ ಬರುವ ವೇಳೆಗೆ ಒಂದು ರೀತಿಯ ಪ್ರೌಢಿಮೆ ತಿರುಮಲೇಶರ ಕಾವ್ಯದಲ್ಲಿ ಮೂಡಿಬಂದದ್ದನ್ನು ನಾವು ಕಾಣಬಹುದು. ’ವಠಾರ’ದಲ್ಲಿ ಕಂಡ ಆಂಗ್ರಿ ಯಂಗ್ ಮ್ಯಾನ್ ಈಗ ಬಹಳ ಎಚ್ಚರದಿಂದ ಮಾತನಾಡುತ್ತಾರೆ. ಸೂಕ್ಷ್ಮವಾಗಿ ಚುಚ್ಚುತ್ತಾರೆ. ’ಮಹಾಪ್ರಸ್ಥಾನ’ದ ಕವಿ ಅನಂತಮೂರ್ತಿಯವರು ಹೇಳಿದಂತೆ "ನಾವೆಲ್ಲರೂ ಅತ್ಯಂತ ಎಚ್ಚರದಿಂದ ಓದಬೇಕಾದ ಇನ್ನೊಬ್ಬ ಲೇಖಕ.. ಕಾವ್ಯದಲ್ಲಿ ನಿಜವಾದ ಹೊಸಮಾತು ಸದ್ಯಕ್ಕೆ ಆಡುತ್ತಿರುವವರು ಇವರು."

’ತಿರುವನಂತಪುರ ೭೧’ ಕವಿತೆಯಲ್ಲಿ ತಿರುಮಲೇಶರು ಮೂಡಿಸುವ ನಗರೀಕರಣದ ಏಕತಾನತೆ ಅದ್ಭುತವಾಗಿದೆ. ಕವಿತೆಯ ಪ್ರಾರಂಭದಲ್ಲೇ ನಾಯಕ ಇಳಿದುಕೊಳ್ಳುವುದಕ್ಕೆ ಒಂದು ತಾಣವನ್ನು ಹುಡುಕುತ್ತಾ ಸಾಗುತ್ತಾನೆ. ’ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ’ ಎನ್ನುವಾಗ ಎಲ್ಲೋ ಜನಾರಣ್ಯದಲ್ಲಿ ಕಳೆದು ಹೋಗುತ್ತಿರುವ ಅಭಿಪ್ರಾಯ ಮೂಡುತ್ತದೆ. ಆದರೆ ಕವಿತೆಯ ಅಂತ್ಯ ಓದುತ್ತಿದ್ದಂತೆ.. ಇದೇ ಸಾಲು ಹೊಸ ಅರ್ಥವ್ಯಾಪ್ತಿಯನ್ನೂ ಪಡೆಯುತ್ತದೆ. ಆತ ಹೆಗಲಿಗೇರಿಸಿಕೊಂಡು ಹೋದದ್ದು ಆ ನಗರದ ನೆನಪುಗಳ ಲಗ್ಗೇಜನ್ನು ಎಂಬುದು ವೇದ್ಯವಾಗುತ್ತದೆ. ಅಲ್ಲೇ ನಾಯಕ ಈ ಹಿಂದೆ ಕಂಡಿದ್ದ ಅದೇ ನಗರದ ಪುನರಾನ್ವೇಷಣೆಯೂ ನಡೆಯುತ್ತದೆ:

...
ಇಳಿದುಕೊಳ್ಳುವುದಕ್ಕೆ ರೂಮು ಅನ್ವೇಷಿಸಿದೆ
ಅನ್ವೇಷಿಸುತ್ತಾ ನಡೆದೆ, ನಡೆಯುತ್ತಾ ಅನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ.
...

ಇಲ್ಲಿ ಹುಡುಕು ಎನ್ನುವ ಪದವನ್ನು ಅವರು ಉಪಯೋಗಿಸಿಲ್ಲವೆಂಬುದು ಬದಲಿಗೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯುಳ್ಳ ’ಅನ್ವೇಷಣೆ’ ಪದವನ್ನು ಉಪಯೋಗಿಸಿರುವುದನ್ನು ಗಮನಿಸಿ. ಈ ಅನ್ವೇಷಣೆ ನಡೆಯುವ ಸಮಯದಲ್ಲೇ ಹಲವು ವಾಸ್ತವಗಳೂ ತಿಳಿದು ಬರುತ್ತವೆ. ಮೊದಲನೆಯದೆಂದರೆ, ಹಳೆಯದೆಲ್ಲವನ್ನೂ ನಗರೀಕರಣ ನುಂಗಿ ಹಳೇ ನೆನಪುಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ನಗರ ಏಕತಾನತೆಯಿಂದ ಒಡಗೂಡಿದೆ. ಈ ಏಕತಾನತೆಯನ್ನೂ ಕವಿ ಸೂಕ್ಷ್ಮವಾಗಿ ಚಿತ್ರಿಸಿರುವ ರೀತಿ ನೋಡಿ:
..
ಈ ತಿರುವ
ನಂತಪುರ, ನಂತಪುರ ನಂತಪುರನಗರ ನಂತಪುರ ನಗರ
ಧೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತದೆ
..

ಇಲ್ಲಿ ಸಾಲುಗಳನ್ನು ಕತ್ತರಿಸಿರುವ ರೀತಿ ಅತ್ಯಂತ ಕಲಾತ್ಮಕವಾದದ್ದು. ನಂತರ ’ನಂತಪುರ’ ಎಂದು ಪದೇ ಪದೇ ಹೇಳುವುದು ಒಂದು ರೀತಿಯ ಏಕತಾನತೆಯನ್ನು ತೋರಿದರೆ ಪಕ್ಕದಲ್ಲಿಯೇ ’ನಗರ ನಗರ’ ಎಂದು ಅದರ ಕಾಣರವಾದ ನಗರೀಕರಣವನ್ನೂ ಮನಕ್ಕೆ ನಾಟುವಂತೆ ಹೇಳುತ್ತಾರೆ.

’ದ್ವಾರಕೆ ಮುಳುಗಿದಾಗ’ ’ಮಹಾಪ್ರಸ್ಥಾನ’ ’ತೀರ್ಪು’ ಇತ್ಯಾದಿ ಸಮರ್ಥ ಕವಿತೆಗಳು ಈ ಸಂಕಲನದಲ್ಲಿವೆ. ಹಾಗೇ ಈ ಸಂಕಲನದ ’ಕಿಟಕಿ’ ಕವಿತೆಯೂ ಬಂಧನದಿಂದ ಮುಕ್ತವಾಗಿ ಹೊರಹೋಗುವ ಪ್ರಯತ್ನ ಹೊಸತನದ ಅನ್ವೇಷಣೆಯ ಫ್ಯಾಂಟಸಿಯಲ್ಲಿ ಸಾಗಿ ಕಡೆಗೆ ಬಂಧನದ ಸರಳುಗಳಾಗಿ ನಿಲ್ಲುವ ಕಡುವಾಸ್ತವದ ಆಂಟಿಕ್ಲೈಮಾಕ್ಸ್ ನಲ್ಲಿ ಪರ್ಯಾವಸನವಾಗುವ ಕ್ರಿಯೆಯನ್ನು ಚಿತ್ರಿಸುತ್ತದೆ.

ತಿರುಮಲೇಶರ ಮುಂದಿನ ಸಂಕಲನ ’ಮುಖಾಮುಖಿ’ ಅತ್ಯಂತ ಗಮನಾರ್ಹವಾದ ಸಂಕಲನ. ಇದು ಎಲ್ಲ ಕಾವ್ಯಪ್ರೇಮಿಗಳೂ ಗಂಭೀರವಾಗಿ ಗಮನಿಸಲೇಬೇಕಾದ ಸಂಕಲನ ಎನ್ನಿಸುತ್ತದೆ. ’ಮಹಾಪ್ರಸ್ಥಾನ’ದ ಕವಿಗೂ, ’ಮುಖಾಮುಖಿ’ಯ ಕವಿಗೂ ನಾವು ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಯನ್ನು ವಿಜಯಶಂಕರ್ ಗುರುತಿಸಿದ್ದಾರೆ - "ಮಹಾಪ್ರಸ್ಥಾನದ ನಾಯಕ ’ಅನುಭವದ ಎಲ್ಲ ಅಂಶಗಳನ್ನೂ ಒಂದೇ ಫೋಕಸ್ಸಿಗೆ ತರುವ’ ಪ್ರಯತ್ನಮಾಡಿದರೆ ’ಮುಖಾಮುಖಿ’ಯಲ್ಲಿ ಒಂದು ಅನುಭವಕ್ಕೆ ಸ್ವತಂತ್ರವಸ್ತುವಿನಂತೆ ಕೊಡಲ್ಪಟ್ಟ ಅಸ್ತಿತ್ವದ ಅನುರಣನಗಳು ಕೇಂದಾಪಗಾಮಿಯಾಗಿ ಹರಡುತ್ತದೆ."

’ಮಹಾಪ್ರಸ್ಥಾನ’ದ ನಂತರದ ಕವಿತೆಗಳಲ್ಲಿ ಆಗುವ ಪರಿಸರದ ಬದಲಾವಣೆಯೂ ಒಂದು ಗಮನಾರ್ಹ ಅಂಶ. ತಿರುಮಲೇಶರು ಬದುಕುವ ಪರಿಸರದ ಸಾರವನ್ನು ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಅಳವಡಿಸುತ್ತಾರೆ ಅನ್ನುವುದಕ್ಕೆ ’ಮುಖಾಮುಖಿ’ ಒಂದು ಉತ್ತಮ ಉದಾಹರಣೆ. ಈ ಬದಲಾವಣೆಯನ್ನು transitive ಆಗಿ ಈ ಸಂಗ್ರಹದ ಕವಿತೆಗಳಲ್ಲಿ ಕಾಣಬಹುದು.

’ಮುಖಾಮುಖಿ’ಯಲ್ಲಿ ಹೈದರಾಬಾದಿ ಸಂಸ್ಕೃತಿಯನ್ನು ಕವಿತಗಳಲ್ಲಿ ಅಳವಡಿಸಿರುವುದು, ಅದೇ ಸಂಕೇತಗಳನ್ನು ಉಪಯೋಗಿಸಿಕೊಂಡಿರುವುದು ಅವರ ಕವಿತೆಗಳಿಗೆ ವಿಶೇಷ ವೈವಿಧ್ಯತೆಯನ್ನು ನೀಡಿದೆ. ಒಂದು ಬದಲಾವಣೆಯ ಅನುಭವವನ್ನು, ಅದಕ್ಕೆ ಹೊಂದಿಕೊಳ್ಳುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಅವರು ತಮ್ಮ ಕವಿತೆಗಳಲ್ಲಿ ಅಳವಡಿಸುತ್ತಾರೆ - ’ಹೊಸಬರು’ ಕವಿತೆಯ ಕೆಲ ಸಾಲುಗಳನ್ನು ಉದಾಹರಣೆಯಾಗಿ ನೋಡಬಹುದು:


...
ಆಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ
ಇವರ ಮಧ್ಯ
ಹೇಗೆ ಉಳಿಯುವುದು ಸಾಧ್ಯ?
ಈ ಊರ
ಅನ್ನ ತಿಳಿಸಾರು, ಕಬ್ಬಿನ ಹಾಲು ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ. ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತನಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು. ಈ ಆಶ್ಚರ್ಯವೂ
ಹೋಗುವುದು. ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ. ಅದಲ್ಲದೇ ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು -
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
...


’ವಠಾರ’ ’ಮುಖವಾಡಗಳು’ಗಳ ಕವಿಗೂ ’ಮುಖಾಮುಖಿ’ ಯ ಕವಿಗೂ ಮೂಲಭೂತ ವ್ಯತ್ಯಾಸ ಕಂಡುಕೊಳ್ಳಲು ಅಲ್ಲಿನ ಕಟು ವ್ಯಂಗ್ಯ [ಗೀತಾರಹಸ್ಯ, ದುಂಡುಚಿ, ಕೇಳು ಜನಮೇಜಯನೆ ಇತ್ಯಾದಿಗಳು] ಹಾಗೂ ’ಮುಖಾಮುಖಿ’ ಯ ಸೂಕ್ಷ್ಮ ವ್ಯಂಗ್ಯ ಬದಿಬದಿಯಲ್ಲಿಟ್ಟು ನೋಡಬಹುದು. ’ಮುಖಾಮುಖಿ’ಯ ’ಇಬ್ಬರು’ ಸೂಕ್ಷ್ಮ ವ್ಯಂಗ್ಯದ ಒಂದು ಉದಾಹರಣೆ:


ಇಬ್ಬರು

ಮೊದಲು ಒಬ್ಬನೇ ಇದ್ದ. ತನ್ನ ಅಡುಗೆಯನ್ನೂ
ನಿದ್ದೆಯನ್ನೂ ತಾನೇ ಮಾಡುತ್ತಿದ್ದ. ತನ್ನ ಶರ್ಟುಗಳನ್ನು
ವಿಚಾರಗಳನ್ನೂ ತಾನೇ ಒಗೆಯುತ್ತಿದ್ದ

ಒಂದು ದಿನ ಬೇಜಾರಲ್ಲಿ ಊಟಕ್ಕೆಂದು
ಸಮೀಪದ ಹೊಟೆಲ್ಲಿಗೆ ಹೋದ. ಅಲ್ಲಿ
ಆಕೆಯ ಭೇಟಿಯಾಯಿತು

ಅಂದಿನಿಂದ ಆಕೆ ಇವನ ಅಡುಗೆಯನ್ನೂ
ಈತ ಅವಳ ನಿದ್ದೆಯನ್ನೂ ಮಾಡುವುದಕ್ಕೆ
ಮತ್ತು ಆಕೆ ಇವನ ಶರ್ಟುಗಳನ್ನೂ
ಈತ ಅವಳ ವಿಚಾರಗಳನ್ನೂ ಒಗೆಯುವುದಕ್ಕೆ

ಸುರುವಾಯಿತು.

ಇದೇ ರೀತಿಯ ಸೂಕ್ಷ್ಮ ವಿಡಂಬನೆ ’ಈ ಪೇಟೆಗೊಂದು ಒಳಚರಂಡಿ’ ನಮ್ಮ ಮೂಲ ಪ್ರವೃತ್ತಿಯನ್ನು ಶೋಧಿಸುವಂತೆ ಮಾಡುವ.. ಎಲ್ಲವನ್ನೂ ಆಲೋಚನೆಯ ಸ್ಥರದಲ್ಲೇ ಕೈಬಿಡುವ ಸಾಂಕೇತಿಕತೆಯನ್ನು ವಿಡಂಬನಾತ್ಮಕ ಧ್ವನಿಯಲ್ಲಿ ಸಫಲವಾಗಿ ಹೇಳುವ ’ಇನ್ನೂ ಬರೆಯದ’ ಮತ್ತು ’ದೊಡ್ಡ ಜನರು’ ಕವಿತೆಗಳಲ್ಲಿವೆ.

’ಅಬೀಡ್ಸಿನಲ್ಲಿ ರಸ್ತೆ ದಾಟುವುದು’ ನಿರಂತರತೆಯ ಪ್ರತೀಕವಾಗಿ ನಿಲ್ಲುವ ಕವಿತೆ. ’ಅಬೀಡ್ಸಿನಿಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು ಜೇಬಿನಲ್ಲಿ ಹಾಕಿಕೊಂಡಿರಬೇಕು’ ಎನ್ನುವ ಕವಿ ಅದರ ಅಲ್ಪಪರಿಣಾಮ ನಿರಂತರತೆಯ ಮೇಲೆ ಆದದ್ದನು ಚಿತ್ರಿಸುತ್ತಾರೆ:

..
ಅಂತೂ ದಾಟಿದ ಮೇಲೆ ಹೇಗನ್ನಿಸುತ್ತದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೇ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ..
...

’ಆರ್ಟ್ಸ್ ಕಾಲೇಜಿನ ರಸ್ತೆಯಲ್ಲಿ’ ಕವಿತೆಯಲ್ಲಿ ನಗರೀಕರಣವನ್ನು ಚಿತ್ರಿಸುತ್ತಲೇ ಅದರಲ್ಲೇ ಸೌಂದರ್ಯವನ್ನರಸುವ ಕವಿ ಹೃದಯವನ್ನು ಕಾಣಬಹುದು.

ಪರಂಪರೆಯನ್ನು ಆಗಾಗ ನೆನಪಿಗೆ ತರುವ ’ಹಳೇ ಮಾರ್ಗಗಳು’ ’ಹಳೆಗನ್ನಡದ ಆಸೆ’ ಒಂದು ರೀತಿಯ obsession ಅನ್ನು ಚಿತ್ರಿಸುವ ’ಅವರವರ ಚಾಳಿ’ಯಂತಹ ಉತ್ತಮ ಕವಿತೆಗಳೂ ’ಮುಖಾಮುಖಿ’ ಸಂಕಲನದಲ್ಲಿವೆ. ಹಾಗೇ ವಿಶೇಷ ಅರ್ಥವಂತಿಕೆಗೆ ಅನೇಕ ರೀತಿಯ ಅರ್ಥೈಸುವಿಕೆಗೆ ಒಡ್ಡಿಕೊಂಡಿರುವ ಕವಿತೆಗಳನ್ನು ಈ ಸಂಕಲನದಿಂದೀಚೆಗೆ ಕಾಣಬಹುದು. ಇದು ತಿರುಮಲೇಶರ ನಿಜವಾದ ಬೆಳವಣಿಗೆ. ಇದಕ್ಕೆ ಉದಾಹರಣೆಯಾಗಿ ’ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ’ಒಂದು ಬೂದಗುಂಬಳಕಾಯಿಯ ಮೇಲೆ ನಿಂತು’ ’ಇಲಿಗಳನ್ನು ಕೊಲ್ಲುವುದು’ ’ಚಿಟ್ಟೆಗಳನ್ನು ಹಿಡಿಯುವುದು’ ಮುಂತಾದ ಕವಿತೆಗಳನ್ನು ಹೆಸರಿಸಬಹುದು. ವಿಜಯಶಂಕರ್ ಹೇಳಿದಂತೆ "ಯಾವುದೇ ಸಂದರ್ಭವಿಲ್ಲದೇ ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದುದರಿಂದ ಕವನವನ್ನು ಹೇಗೆ ವ್ಯಾಖ್ಯಾನಿಸಲೂ ಅನುಕೂಲವಿದೆ."

ತಿರುಮಲೇಶರ ಮತ್ತೊಂದು ವಿಶೇಷತೆಯೆಂದರೆ ಅವರು ಆಗಾಗ ಮಾಡುವ ಆತ್ಮಾವಲೋಕನ. ಈ ಅನುಭವವನ್ನೂ ಅವರು ಕವಿತೆಗಳಾಗಿ ಪರಿವರ್ತಿಸುತ್ತಾರೆ. ’ಮಹಾಪ್ರಸ್ಥಾನವನ್ನು ಇನ್ನೂಮ್ಮೆ ಓದಿದಾಗ’ ಅವರ ಬದಲಾದ ದೃಷ್ಟಿಕೋನವನ್ನು ದಾಖಲಿಸುತ್ತದೆ. ’ಅವಧ’ ಸಂಕಲನದಲ್ಲಿರುವ ’ಮತ್ತೊಂದು ಮುಖಾಮುಖಿ’ ಸಹ ಇಂಥದೇ ಒಂದು ಪ್ರಯತ್ನವಾಗಿದೆ.

ಈ ಎಲ್ಲವನೂ ಮೀರಿ ಬೆಳೆದು ನಿಂತ ಅವರ ಇತ್ತೀಚಿನ ಕವನ ಸಂಗ್ರಹ ’ಅವಧ’. ನೂರ ಅರವತ್ತೈದು ಕವಿತೆಗಳ ಈ ಸಂಕಲನ ಅತ್ಯಂತ ಗಮನಾರ್ಹವಾದ ಕೃತಿ [ಅದಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಪುರಸ್ಕಾರವೂ ಪ್ರಾಪ್ತವಾಯಿತು]. ಒಂದು ಸಣ್ಣ ಅನುಭವವನ್ನೂ ದಿನನಿತ್ಯದ ಸಣ್ಣ ವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯನ್ನು ಈ ಸಂಕಲನ ಬಿಂಬಿಸುತ್ತದೆ. ’ಅವಧ’ದಲ್ಲಿ ತಿರುಮಲೇಶರ ಕವಿತೆಗಳ ಶೈಲಿಯೂ ಗಮನಾರ್ಹವಾಗಿ ಬದಲಾಗಿದೆ. ಮೂರನೇ ವಿಭಾಗದಲ್ಲಿರುವ ಕವಿತೆಗಳಂತೂ ಸಂಪೂರ್ಣ ಭಾವಗೀತೆಗಳ ಶೈಲಿಯಲ್ಲಿವೆ. ಇಲ್ಲಿನ ಕವಿತೆಗಳ ಸ್ವರೂಪವೇ ಬೇರೆ. ’ಮಹಾಪ್ರಸ್ಥಾನ’ದ ಪ್ರಸ್ತಾವನೆಯಲ್ಲಿ ಹೇಳಿದ "ಬರೆಯುವ ರೀತಿಯಿಂದ ಹೇಳುವುದಿದ್ದರೆ, ಒಂದು ಪದ್ಯದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದ ವಿಷಯವೆಂದರೆ ಆ ಪದ್ಯವೇ ಆಗಿದೆ. ಆದ್ದರಿಂದ ಪದ್ಯದ ಸ್ವರೂಪದ ಬಗ್ಗೆ ನಾನು ಕಾಳಜಿವಹಿಸುತ್ತೇನೆ." ಎಂಬ ಮಾತನ್ನು ತಿರುಮಲೇಶರು ಇಂದಿಗೂ ಪಾಲಿಸುತ್ತಾ ಬಂದಿರುವುದು ನಮಗೆ ಕಾಣುತ್ತದೆ.

"ಬದ್ಧವಾಗಿ ಬರೆಯುವುದು ಸೃಜನಶೀಲತೆಗೆ ಧಕ್ಕೆ ತರುವಂಥದು" ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿರುಮಲೇಶ್ ಹೇಳಿದ್ದಾರೆ. ಬಹುಶಃ ಅವರ ಕವಿತೆಗಳಲ್ಲಿನ ವೈವಿಧ್ಯತೆಗೂ ಇದೇ ಕಾರಣವಿರಬಹುದು. ಆದರೆ ’ಅವಧ’ ಓದಿದಾಗ ಯಾರಿಗಾದರೂ ಮಿಶ್ರಭಾವನೆಗಳು ಹುಟ್ಟುತ್ತವೆ. ಇದರಲ್ಲಿ ತಿರುಮಲೇಶ್ ಸಾಧಿಸಿರುವ ’ಉನ್ನತಿ’ ಮತ್ತು ಅದೇ ಕ್ಷಣದಲ್ಲಿ ನೆಲಕಚ್ಚಿರುವ ರೀತಿ ಹಳೆಯ ಕವಿತೆಗಳಲ್ಲಿದ್ದ consistencyಗೆ ವಿರುದ್ಧವಾಗಿವೆ. ’ಸರಕಾರದ ವಿರುದ್ಧ ನಾಯಕ’ ’ಸರಕಾರದ ಪರವಾಗಿ ನಾಯಕ’ ’ವಿಮರ್ಶಕನಾಗಿ ನಾಯಕ’ ಈ ರೀತಿಯಾದ ಕವಿತೆಗಳು ಬರೇ ಪದಗಳೊಂದಿಗೆ ಆಟ ಹಾಗೂ ಪ್ರಾಸ-ಪ್ರಯಾಸವಾಗಿದೆ. ಬದ್ಧರಾಗಿ ಬರೆಯದಿರುವುದೂ ಸೃಜನಶೀಲತೆಗೆ ಧಕ್ಕೆ ತರಲಾರದೇ ಎಂದು ಈ ಕವಿತೆಗಳನ್ನು ನೋಡಿದಾಗ ಅನ್ನಿಸಬಹುದು. ಇದೇ ಸಂಕಲನದಲ್ಲಿರುವ ’ಅವಧ’ ’ಪರಕಾಯ ಪ್ರವೇಶ’ ’ವಿಧಿ’ ’ಅಖಿಟೊಪ’ ’ತುತಂಖಮನ್’ ’ಹೈಡ್‍ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ’ ’ಸೂರ್ಯನಿಗೆ’ ಥರದ ಕವಿತೆಗಳು ಉತ್ತಮವಾಗಿವೆ ಹಾಗೂ ತಿರುಮಲೇಶರು ಏರಬಲ್ಲ ಎತ್ತರದ ದ್ಯೋತಕವಾಗಿದೆ.

’ಅವಧ’ ನಿಸ್ಸಂದೇಹವಾಗಿ ಒಂದು ಉತ್ತಮ ಕವಿತೆ. ಈ ಕವಿತೆ ಹಿಂದಿನ ’ಔಧ್’ ರಾಜಮನೆತನಕ್ಕೆ ಸಂಬಂಧಿಸಿದ ಕವಿತೆಯೆಂದು ಈಚಿನ ಸಂದರ್ಶನದಲ್ಲಿ ಸ್ವತಃ ತಿರುಮಲೇಶರೇ ವಿವರಣೆ ಕೊಟ್ಟಿದ್ದಾರೆ. ಈ ಕವಿತೆಯಲ್ಲಿ, ಚರಿತ್ರೆ ವರ್ತಮಾನಗಳನ್ನು ಬೆಸೆದು ನೋಡುವ ಪ್ರಯತ್ನವಿದೆ. ಚರಿತ್ರೆಯ ಫ್ಯಾಂಟಸಿಯ ಲೋಕದಲ್ಲಿ ವಿಹರಿಸುತ್ತಿರುವಾಗಲೇ ವರ್ತಮಾನದ ಕಟುವಾಸ್ತವಕ್ಕೆ ಕರೆತರುವ ಸೂಕ್ಷ್ಮ ತಂತ್ರ ಪ್ರಿಯವೆನ್ನಿಸುತ್ತದೆ.


...
ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು
ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು
ಬಡಾ ಇಮಾಮನೊ ಅಥವಾ ಛೋಟಾ ಇಮಾಮನೊ
ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ
..

ಎನ್ನುವಲ್ಲಿ ಗಡ್ಡಕ್ಕೆ ಬಂಗಾರಬಣ್ಣ ಇತ್ಯಾದಿಗಳು ಚರಿತ್ರೆಯ ಪ್ರತೀಕವಾದಂತೆ, ಅರಬನಿಗೆ ಹೆಣ್ಣುಕೊಡುವ ಈಗಿನ ಕ್ಷೀಣಿಸಿದ ವಸ್ತು ಸ್ಥಿತಿಯನ್ನು ಚಿತ್ರಿಸಿದ ಸಾಫಲ್ಯತೆ ಈ ಕವಿತೆಗಿದೆ. ಹಾಗೇ

..
ಬಚ್ಚದಿರು ಮನವೆ ಕುದುರೆಗಳ ಖುರಪುಟವಕೇಳಿ
ಅದು ಕೇವಲ ಒಣಧೂಳೆಬ್ಬಿಸುವ ಬಿರುಗಾಳಿ
...

ಈ ಸಾಲುಗಳು ವಿಶೇಷ ಪರಿಣಾಮ ಬೀರುತ್ತವೆ.

’ಪರಕಾಯ ಪ್ರವೇಶ’ ಕವಿತೆಯಲ್ಲಿ ಸೂಕ್ಷ್ಮ ವಿಡಂಬನೆಯನ್ನು ಬಳಸಿ, ಬೇರೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ನಾವು ಗಮನಿಸಬಹುದು. ಅತೀ ನೈಜತೆಯ, ಅನಿವಾರ್ಯತೆಯ, ಸಂಕೋಚದ ಪ್ರವರ್ತನೆ ಸಹ ಪ್ರಶಂಸೆಗೆ ಒಳಗಾಗುವ ವಿರೋಧಾಭಾಸ. ಫ್ಯಾಂಟಸಿಯನ್ನೇ ಒಂದು ಘಟ್ಟದಲ್ಲಿ ನಿಜವೆಂದು ನಂಬುವ ಕ್ರಿಯೆ. ಮುಖವಾಡ, ವಾಸ್ತವಗಳ ನಡುವೆ ದೊಡ್ಡ ಸಮರ ನಡೆಯುತ್ತಿದೆಯೆಂದು ಭಾವಿಸಿ ಕುಳಿತಾಗ, ತಾನೇತಾನಾಗಿ, ಏನೂ ಆಗಿಲ್ಲವೆಂಬಂತೆ ಪ್ರವರ್ತಿಸಿವ ಮಿಕ್ಕ ಜನ. ಈ ಎಲ್ಲದರ ಚಿತ್ರಣವನ್ನೂ ಕವಿತೆ ಏಕಕಾಲಕ್ಕೆ ನೀಡುತ್ತದೆ.

’ಮಹಾಪ್ರಸ್ಥಾನ’ದಲ್ಲಿ ನೀಡಿದ ನಗರೀಕರಣದ ಕವಿತೆಗಳಿಂದ ತಿರುಮಲೇಶ್ ಸಂಪೂರ್ಣವಾಗಿ ಹೊರಬಂದಿಲ್ಲ ಎನ್ನುವುದಕ್ಕೆ ’ರಾಜಮಾರ್ಗ ಒಳಮಾರ್ಗ’ ’ತಾರನಾಕದ ಚೌಕ’ ’ಗೋಮತಿಯ ತೀರದಲ್ಲಿ’ ’ಒಂದು ಗ್ರಾಮದ ಮುಖಗಳು’ ಕವಿತೆಗಳೇ ಸಾಕ್ಷಿ.

’ಗೋಮತಿಯ ತೀರದಲ್ಲಿ’ ಕವಿತೆಯು ನಿಸರ್ಗವೆಂದು ಸಾಮಾನ್ಯವಾಗಿ ಚಿತ್ರಿಸುವ ಯಾವ ಅಂಶಗಳೂ ಗೊಮತಿಯ ಕಡಲಲ್ಲಿ ಇಲ್ಲ - ಅಲ್ಲಿರುವುದು ಕಹಿಸತ್ಯಗಳೇ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ. ಆದರೂ ಕವಿ ಆ ಸತ್ಯಗಳಿಂದ ಪಲಾಯನ ಮಾಡಲು ತಯಾರಿಲ್ಲ.
...
ಬಿಟ್ಟರೆ ಇದನ್ನೂ ಪಡೆಯಲಾರದವರಂತೆ
ಪಡೆದರೂ ಬಯಸದವರಂತೆ ಸಕಲ ಬಯಕೆಗಳನ್ನೂ
ಮೀರಿದ ಇಚ್ಛಾಮರಣಿಗಳಂತೆ ಇಲ್ಲಿ ಇಂದು
..

ಎಂಬ ಸಾಲುಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಚಿತ್ರಿತವಾಗಿದೆ ಎನ್ನಿಸುತ್ತದೆ. ಸಕಲ ಬಯಕೆಗಳನ್ನೂ ಮೀರಿ, ಇಚ್ಛಾಮರಣಿಯಾದರೂ ಸಾಯಲು [ಪಲಾಯನ ಮಾಡಲು] ತಯಾರಿಲ್ಲದ, ಅದಕ್ಕೂ ಒಂದು ಪಕ್ವಕಾಲ ಬರಬೇಕೆಂಬ ಪ್ರಜ್ಞೆ ಇಲ್ಲಿ ಕವಿಯನ್ನು ಕಾಡುತ್ತಿರುವಂತೆ ಅನ್ನಿಸುತ್ತದೆ.

’ತಾರನಾಕದ ಚೌಕದಲ್ಲಿ’ ಕವಿತೆಯಲ್ಲೂ ಇದೇ ರೀತಿಯ ನಗರೀಕರಣದ ಸೂಕ್ಷ್ಮ ಚಿತ್ರಣವಿದೆ.
..
ಇಲ್ಲಿ ಹಾಡು ಹಗಲೇ ಇರುಳು
ತಾರೆಗಳ ಬದಲು ಮಿಣುಕುವ
ಕ್ಷೀಣಕಾಂತಿಯ ಬಲ್ಬುಗಳು
ಎಣಿಸುವುದಕ್ಕೆ ಸುಲಭ
..

ಎಂಬಂಥ ಅರ್ಥಗರ್ಭಿತ ಸಾಲುಗಳಿವೆ.

ಇಕಾಲಜಿಯ ಬಗೆಗಿನ ಕಾಳಜಿಯೂ ತಿರುಮಲೇಶರ ಅನೇಕ ಕವಿತೆಗಳಲ್ಲಿ ಕಂಡುಬರುತ್ತದೆ. ’ಒಂದು ಗ್ರಾಮದ ಮುಖಗಳು’ ಕವಿತೆಯಲ್ಲಿ ನಾಶವಾಗುತ್ತಿರುವ ಇಕಾಲಜಿಯ ಸಮತೋಲನದ ಬಗ್ಗೆ ಕಾಳಜಿ ಇದೆ.
...
ಕಾರಡ್ಕ ಮುಳ್ಳೇರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ
...
ಎಂಬ ಕವಿತೆಯ ಪ್ರಾರಂಭದ ಸಾಲುಗಳು ಮನುಷ್ಯ ಈ ಭೂಮಿಯ ತರುಣಾವಸ್ಥೆಯಲ್ಲಿ ಕಾಲಿಟ್ಟವನು ಎಷ್ಟು ಅಲ್ಪಾವಧಿಯಲ್ಲಿ ಅದರ ಇಕಾಲಜಿಯ ಸಮತೋಲನದ ಅವನತಿಗೆ ಕಾರಣನಾದ ಎನ್ನುವುದು [ಒಂದು ವರುಷಕ್ಕಷ್ಟೇ ಒಂದು ಶೆಕೆ] ಮುಂದಿನ ಸಾಲುಗಳಲ್ಲಿ ವ್ಯಕ್ತವಾಗುವುದು. ಗ್ರಾಮದ ಕೆಲ ಚಿತ್ರಗಳನ್ನು ನೀಡಿ, ನಿರೀಕ್ಷೆ ಹುಟ್ಟಿಸಿ, ಕಡೆಗೆ ನಗರೀಕರಣದ ಆಗಮನದ ಚಿತ್ರಣ ಕೊಟ್ಟು ಸಂಪೂರ್ಣ ಅವನತಿಯನ್ನು ಸಂಕೇತಿಸುವ ಸಾಲುಗಳನ್ನು ಅವರು ಬರೆದುಬಿಡುತ್ತಾರೆ
...
ಬರಲಿಲ್ಲ ಗಾಡಿ, ಬಂತು ಕೊರೆಯುವ ಮಾಗಿ
ಕಾದಿದ್ದಂತೆ ಎಲ್ಲವೂ ಸಂದಿಯಲಡಗಿ
ಬಂತು ಮನೆ ಮನೆ ಸೂರುಗಳಿಂದ ಇಬ್ಬನಿ ತೂಗಿ
ಒಂದು ಮೈ ನಡುಕದಿಂದ ಇನ್ನೊಂದಕ್ಕೆ ಸಾಗಿ
ಮುಟ್ಟಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತ್ತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ
..

ಈ ನಗರೀಕರಣದ ಕಾಳಜಿಯನ್ನಿರಿಸಿ ಅದನ್ನೇ ಮುಂದುವರೆಸಿ ಬರೆಯುತ್ತಿರುವ ತಿರುಮಲೇಶ್ ಸಾಕಷ್ಟು ವಿಭಿನ್ನವಾಗಿಯೂ ಬರೆಯುತ್ತಾರೆ. ಹಲವಾರು ಕವಿತೆಗಳು ಬೇರೆ ರೀತಿಯ ಮಿಶ್ರಪರಿಣಾಮವನ್ನುಂಟು ಮಾಡುತ್ತವೆ. ’ಫಿಲ್‍ನ ವಿಧಾನ’ ಒಂದು ರೀತಿಯ ಬೆಳವಣಿಗೆಯನ್ನು ಸೂಚಿಸಿದರೆ ’ಪಿಶಾಚಿ ದೈವಕ್ಕೆ ಹೇಳಿದ್ದು’ ’ಪಿಶಾಚಿಗೆ ದೈವದ ಉತ್ತರ’ ’ಮರಿ ಪಿಶಾಚಿ ಪದ್ಯ’ ಬೇರೊಂದು ರೀತಿಯ ಬೆಳವಣಿಗೆಯನ್ನು ಸೂಚಿಸುತ್ತವೆ.

ತಿರುಮಲೇಶರ ಸಂಕಲನದ ಬಗ್ಗೆ ಸ್ಥೂಲವಾಗಿ ಹೇಳಲು ನನಗಿಂತ ಅವರೇ ಸಮರ್ಥರು. ಅವರ ’ನನ್ನ ಸಂಕಲನ’ ಕವಿತೆ ಇಂತಿದೆ:

ನನ್ನ ಸಂಕಲನವೆಂದರೆ ನದಿ
ಅದರ ಕವಿತೆಗಳೆಂದರೆ ಉಪನದಿಗಳು
ಅವು ಎಲ್ಲಿಂದಲೂ ಯಾವ ಮೂಲದಿಂದಲೂ
ಹುಟ್ಟಿ ಬಂದಿವೆ - ಎಷ್ಟೋ ನೆಲದಲ್ಲಿ
ಎಷ್ಟೋ ಹೊಲದಲ್ಲಿ ಹರಿದು ಬಂದಿವೆ

ನನ್ನ ಸಂಕಲನವೆಂದರೆ ವೃಕ್ಷ
ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು
ಅವು ವಿವಿಧ ದಿಕ್ಕಿನಲ್ಲಿ ಬೆಳೆದಿವೆ
ಎಷ್ಟೋ ಎಲೆಗಳನು ಹೂ ಹಣ್ಣುಗಳನು ಬಿಟ್ಟಿವೆ
ಅಲ್ಲಿ ಎಷ್ಟೋ ಹಕ್ಕಿಗಳು ಕುಳಿತಿವೆ

ನನ್ನ ಸಂಕಲನವೆಂದರೆ ಅರಣ್ಯ
ಅದರ ಕವಿತೆಗಳೆಂದರೆ ಮರಗಿಡ ಬಳ್ಳಿಗಳು
ಅವು ಬೇರೆ ಬೇರೆ ಜಾತಿಯವು
ಸಿಕ್ಕಂತೆ ಬೆಳೆದಿವೆ ಬೆಳಕಿನ ಕಡೆಗೆ
ಮೈ ಚಾಚಿವೆ ನೆರಳನ್ನು ಚೆಲ್ಲಿವೆ.

ನನ್ನ ಸಂಕಲನವೆಂದರೆ ಸಂತೆ
ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು
ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು
ಮಣಿಸರದ ಮಾಲಗಳು ಬಿದ್ದರೆ ಒಡೆಯುತ್ತವೆ.
ಅಲ್ಲಿಯ ತನಕ ಬದುಕಿಕೊಳ್ಳುತ್ತವೆ.

ಒಟ್ಟಿನಲ್ಲಿ ನೋಡುವುದಾದರೆ ಪರಿಸರಕ್ಕೆ ಪ್ರತಿಸ್ಪಂದಿಸುವುದು ತಿರುಮಲೇಶರ ವೈಶಿಷ್ಟ್ಯ. ಹೊಸ ಪರಿಸರವನ್ನು ನಿರಂತರವಾಗಿ ಅನ್ವೇಷಿಸುತ್ತಾ, ಅವುಗಳ ಬಗೆಗೆ ಬರೆಯುತ್ತಾ, ಮುಂದುವರೆದಿರುವ ತಿರುಮಲೇಶರ ಮೂಲ ಪರಿಸರದಲ್ಲೇ ಇದೆಯೆನ್ನಿಸುತ್ತದೆ. ಅವರು ಹೈದರಾಬಾದಿನಲ್ಲಿದ್ದರೆ ಅಲ್ಲಿಯ ಪರಿಸರದ ರೀತಿನೀತಿಗಳ ಸಾರವನ್ನು ಅಭ್ಯಾಸ ಮಾಡಿಬರೆದ ಕವಿತೆಗಳು ಮೂಡುತ್ತವೆ. ಇಂಗ್ಲೆಂಡಿಗೆ ಹೋದರೆ ’ಥೇಮ್ಸ್ ನದಿಯ ಮೇಲೆ’ ಬರೆಯುತ್ತಾರೆ. ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ಕವಿತೆಗಳ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ. ಈ ರೀತಿಯ ಪ್ರತಿಸ್ಪಂದನ ಇಲ್ಲದಿದ್ದಲ್ಲಿ ’ಜಾನ್ ಮೆಕೆನ್ರೋ’ ’ತುತಂಖಮನ್’ ’ಕಿಂಗ್‍ಸ್ಲಿಯ ಗಾಂಧಿ’ ’ಮೂನ್ ಮೂನ್ ಸೇನಳಿಗೆ’ ’ಅತುಲತ್ ಮುದಲಿ’ಯಂತಹ ಕವಿತೆಗಳನ್ನು ಅವರಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ರೀತಿಯ ವಿಷಯ ವೈವಿಧ್ಯಗಳ ಹಿನ್ನೆಲೆಯಲ್ಲಿ ಬಂದ ಕವಿತೆಗಳನ್ನು ಓದಿದರೆ ಒಮ್ಮೊಮ್ಮೆ ಅರ್ಥವಾಗದೇ ಉಳಿದೀತು. ಏಕೆಂದರೆ ಒಂದು ಪರಿಸರ, ಹಿನ್ನೆಲೆ, ಉಪಯೋಗಿಸಿಕೊಂಡಾಗ ತಿರುಮಲೇಶ್ ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿ, ಅಷ್ಟೇ ಜ್ಞಾನವ್ಯಾಪ್ತಿಯ ಓದುಗನನ್ನೂ ಕಲ್ಪಿಸಿಕೊಂಡು ಬರೆಯುತ್ತಾರೆ. ಈಚೆಗೆ ಬರೆದ ಅವರ ಕವಿತೆಗಳನ್ನು ಅರ್ಥೈಸಲು ಕಠಿಣವಾಗಿದೆ ಎನ್ನುವ ವಿಮರ್ಶೆಗೆ ಇದೂ ಕಾರಣವಾಗಿರಬಹುದು. ತಿರುಮಲೇಶರಿಗೂ ಅದರ ಅರಿವಿದೆ. ’ಕವಿತೆಗಳನ್ನು ತಿಳಿದುಕೊಳ್ಳುವುದಕ್ಕೆ ಓದುಗ ಬೇರೆ ಸಲಕರಣೆಗಳನ್ನು ಬಳಸಿಕೊಂಡರೆ ತಪ್ಪೇನೂ ಇಲ್ಲ’ ಎನ್ನುವ ಅವರು ಆ ವಿಷಯವ್ಯಾಪ್ತಿಯನ್ನು ಓದುಗರೂ ಅಷ್ಟೇ ಆಳವಾಗಿ ಗ್ರಹಿಸಬೇಕೆಂದು ನಿರೀಕ್ಷಿಸುತ್ತಾರೆ.

ಈ ರೀತಿಯ ಸಂಶೋಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂಬ ಮಾತು ನಿಜವೇ. ಆದರೆ ಕವಿತೆ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದಂತೆ ಅದು ದಕ್ಕುವುದು ಕೈಬೆರಳೆಣಿಕೆಯಷ್ಟೇ ಜನರಿಗೆ ಸೀಮಿತವಾದರೆ ಸ್ವಲ್ಪ ಚಡಪಡಿಕೆಯಾಗುತ್ತದೆ. ಇಲ್ಲಿ ಕವಿ ಸಂಕೀರ್ಣತೆಗೂ ವಿಷಯವ್ಯಾಪ್ತಿಗೂ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ. ಕವಿತೆಗೆ ಪ್ರತಿಸ್ಪಂದನ ಬರದಿದ್ದಾಗ ಅದು ಎಷ್ಟರ ಮಟ್ಟಿಗೆ ಸಫಲವಾಯಿತೆಂಬುದು ಒಂದು ಪ್ರಶ್ನಾರ್ಥಕ ಚಿನ್ಹೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅವನತಿ ಹೊಂದುತ್ತಿರುವ ನಮ್ಮ ಹಳೇ ನೆನಪುಗಳನ್ನು ರೋಚಕ ಅನುಭವಗಳಿಗೆ ಆಗುತ್ತಿರುವ ಯಾಂತ್ರಿಕತೆಯನ್ನು ಚಿತ್ರಿಸುವ ’ಎಲ್ಲಿ ಹೋದಳು ನಮ್ಮ ಅಡುಗೂಲಜ್ಜಿ’ಯಂತಹ ಕವಿತೆಗಳು ಬಾಲವಿಹಾದರಲ್ಲಿರಬೇಕಾದ ಕವಿಗೆಗಳೆನ್ನಿಸಿದರೂ ಅಶ್ಚರ್ಯವಿಲ್ಲ.

’ಅವಧ’ ಸಂಕಲನ ಓದಿದಾಗ ಒಮ್ಮೊಮ್ಮೆ ತಿರುಮಲೇಶರು ಎಟುಕದಷ್ಟು ಬೆಳೆದುಬಿಟ್ಟಿದ್ದಾರೆಯೆ ಎಂದು ಅನ್ನಿಸಬಹುದು. ಅವಧ, ಮುಖಾಮುಖಿಯ ಕೆಲವು ಕವಿತೆಗಳು ತುಂಬಾ ಪ್ರಿಯವಾಗಲು ನಾನು ಹೈದರಾಬಾದಿನಲ್ಲಿ ಕಳೆದ ಅನೇಕ ವರ್ಷಗಳು ಕಾರಣವಿರಬಹುದು. ಅವರ ’ಮಾಯಾವಿ’ ’ಹೈದರ್‌ಗೂಡಾದಲ್ಲೊಬ್ಬ ಹೈದ’ ’ಜಲಾಲುದ್ದೀನ್ ಜಲಾಲಿ’ ’ಅಖ್ತರ್ ಹುಸೇನ್’ ಕವಿತೆಗಳು ಈ ಕಾರಣವಾಗಿ ಪ್ರಿಯವಾಗುತ್ತವೆ. ಸೃಜನಶೀಲತೆಗೆ ಹೊಸತನ ಬೇಕೆಂಬ ಮಾತು ನಿಜ. ಆದರೆ ಎಷ್ಟರ ಮಟ್ಟಿಗೆ ನಾವು ಹೊಸಪರಿಸರವನ್ನು ಕವಿತೆಗೆ ಅಳವಡಿಸುತ್ತೇವೆ, ಎಲ್ಲಿಯವರೆಗೆ ಓದುಗರನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ.

ಆದರೆ ಎಂದಿಗೂ ಜಡವಾಗದ, ನಿರಂತರವಾಗಿ ಬರೆಯುವ, ಸದಾ ಹೊಸತನದ ಶೋಧದಲ್ಲಿರುವ ತಿರುಮಲೇಶರ ಬಗ್ಗೆ ಯಾರೂ ಎಂದೂ ನಿರಾಶರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಈ ನಿರಂತರ ಕೃಷಿ, ಆತ್ಮಾವಲೋಕನ ಹಾಗೂ ಭಾಷಾಸಾಧ್ಯತೆಗಳ ಬಗೆಗಿನ ಪ್ರಯೋಗ ಏನಾದರೊಂದು ಹೊಸತನ್ನು ಅವರಿಂದ ಹೊಮ್ಮಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ.

ಡಿಸೆಂಬರ್ ೧೯೮೭


ಶ್ರೀರಾಮ್ ಎಂ.ಎಸ್ (1988). ತಿರುಮಲೇಶರ ಸೃಷ್ಟಿ, ಹೊಸತನದ ದೃಷ್ಟಿ. ಬುದ್ದಣ್ಣ ಹಿಂಗಮಿರೆ (ಸಂ.) ಸಾಹಿತ್ಯ ವಿಮರ್ಶೆ 1987. ಬೆಂಗಳೂರು. ಕರ್ನಾಟಕ ಸಾಹಿತ್ಯ ಅಕಾಡೆಮಿ. ಪುಟ-171-187.



No comments:

Post a Comment